ADVERTISEMENT

ನಟ ಉಪೇಂದ್ರ ದಂಪತಿ ಮೊಬೈಲ್‌ ಹ್ಯಾಕ್‌: ಎಚ್ಚರಿಕೆ ಸಂದೇಶದಲ್ಲಿ ಏನಿದೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಸೆಪ್ಟೆಂಬರ್ 2025, 6:46 IST
Last Updated 15 ಸೆಪ್ಟೆಂಬರ್ 2025, 6:46 IST
<div class="paragraphs"><p>ಚಿತ್ರ ಕೃಪೆ:&nbsp;<strong><a href="https://www.instagram.com/nimmaupendra/">nimmaupendra</a></strong></p></div>

ಚಿತ್ರ ಕೃಪೆ: nimmaupendra

   

ಬೆಂಗಳೂರು: ನಟ, ನಿರ್ದೇಶಕ ಉಪೇಂದ್ರ ಹಾಗೂ ಅವರ ಪತ್ನಿ ಪ್ರಿಯಾಂಕಾ ಉಪೇಂದ್ರ ಅವರ ಮೊಬೈಲ್‌ ಅನ್ನು ವಂಚಕರು ಹ್ಯಾಕ್ ಮಾಡಿದ್ದು, ಈ ಸಂಬಂಧ ಕೇಂದ್ರ ವಿಭಾಗದ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಸೋಮವಾರ ಎಫ್‌ಐಆರ್ ದಾಖಲಾಗಿದೆ. 

ದೂರು ಆಧರಿಸಿ ಎಫ್‌ಐಆರ್‌ ದಾಖಸಿಕೊಂಡಿದ್ದು, ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಸೈಬರ್ ವಿಭಾಗದ ಪೊಲೀಸರು ಹೇಳಿದರು.

ADVERTISEMENT

‘ಹಣದ ತುರ್ತು ಅಗತ್ಯವಿರಬಹುದು ಎಂದು ಭಾವಿಸಿ, ನಮಗೆ ಪರಿಚಯಸ್ಥ ನಾಲ್ವರು ಸುಮಾರು ₹50 ಸಾವಿರದಷ್ಟು ವರ್ಗಾಯಿಸಿದ್ದಾರೆ. ನನ್ನ ಮಗ ಸಹ ಹಣ ವರ್ಗಾಯಿಸಿದ್ದ. ನಮ್ಮ ಹೆಸರಿನಲ್ಲಿ ಹಣ ಕೇಳಿ ಯಾರಾದರೂ ಸಂದೇಶ ಕಳುಹಿಸಿದರೆ ದಯವಿಟ್ಟು ಯಾರೂ ನಂಬಬೇಡಿ. ಹಣವನ್ನೂ ಕಳುಹಿಸಬೇಡಿ’ ಎಂದು ಉಪೇಂದ್ರ ಅವರು ಮನವಿ ಮಾಡಿದ್ದಾರೆ.

‘ಸೋಮವಾರ ಬೆಳಿಗ್ಗೆ 8 ಗಂಟೆಯ ಸುಮಾರಿಗೆ ಕರೆ ಮಾಡಿದ್ದ ವಂಚಕ, ‘ನಿಮ್ಮ ಆರ್ಡರ್ ಡೆಲಿವರಿ ಮಾಡಲು ವಿಳಾಸ ಸಿಗುತ್ತಿಲ್ಲ. ಈ ಮೊಬೈಲ್‌ ಸಂಖ್ಯೆಗೆ ಡಯಲ್‌ ಮಾಡಿ ಖಚಿತಪಡಿಸಿದರೆ ಡೆಲಿವರಿ ಮಾಡುತ್ತೇವೆ’ ಎಂದು ಹ್ಯಾಶ್ ಟ್ಯಾಗ್ ಸಹಿತ ನಂಬರ್‌ ಹೇಳಿದ್ದ. ಆ ಮೊಬೈಲ್‌ ಸಂಖ್ಯೆಗೆ ಡಯಲ್ ಮಾಡುವಷ್ಟರಲ್ಲಿ ಪ್ರಿಯಾಂಕಾ ಅವರ ಫೋನ್ ಹ್ಯಾಕ್ ಆಗಿತ್ತು. ಮೊಬೈಲ್‌ ಫೋನ್‌ನಲ್ಲಿ ಸಮಸ್ಯೆ ಇರಬಹುದು ಎಂದು ಭಾವಿಸಿದ್ದರು. ಅಷ್ಟರಲ್ಲಿ ಉಪೇಂದ್ರ ಹಾಗೂ ಅವರ ಪರಿಚಯವಿದ್ದ ಮಹಾದೇವ್ ಅವರ ಮೊಬೈಲ್‌ ಫೋನ್‌ ಸಹ ಹ್ಯಾಕ್‌ ಆಗಿತ್ತು’ ಎಂದು ದೂರು ನೀಡಲಾಗಿದೆ.

‘ಮನೆಗೆ ಕೆಲವು ವಸ್ತುಗಳನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದೆ. ಇನ್ನೂ ಕೆಲವು ವಸ್ತುಗಳು ಬರಬೇಕಿತ್ತು. ಆ ವಸ್ತುಗಳನ್ನು ಡೆಲಿವರಿ ಮಾಡುವವರೇ ಕರೆ ಮಾಡಿರಬಹುದು ಎಂದು ಭಾವಿಸಿದ್ದೆ. ವಂಚಕ ನೀಡಿದ್ದ ಸಂಖ್ಯೆಗೆ ಕರೆ ಮಾಡಲು ಮುಂದಾದ ವೇಳೆ ಈ ರೀತಿ ಸಮಸ್ಯೆ ಆಗಿದೆ’ ಎಂದು ಪ್ರಿಯಾಂಕಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.