
ವಿನೋದ್ ಪ್ರಭಾಕರ್ ನಾಯಕನಾಗಿ ನಟಿಸಿರುವ ‘ಬಲರಾಮನ ದಿನಗಳು’ ಚಿತ್ರದ ‘ಶುರು ಶುರು’ ಹಾಡು ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಕೆ.ಎಂ. ಚೈತನ್ಯ ನಿರ್ದೇಶನದ ಚಿತ್ರ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.
ಹಾಡಿಗೆ ಜಯಂತ್ ಕಾಯ್ಕಿಣಿ ಸಾಹಿತ್ಯವಿದ್ದು, ಸಂಜಿತ್ ಹೆಗಡೆ, ಪುಣ್ಯ ಧ್ವನಿಯಾಗಿದ್ದಾರೆ. ಸಂತೋಷ್ ನಾರಾಯಣ್ ಸಂಗೀತವಿದೆ. 80ರ ದಶಕದ ಗ್ಯಾಂಗ್‌ಸ್ಟರ್ ಕಥೆಯಲ್ಲಿ ವಿನೋದ್ ಪ್ರಭಾಕರ್‌ಗೆ ಪ್ರಿಯಾ ಆನಂದ್ ಜೋಡಿಯಾಗಿದ್ದಾರೆ. ಇಬ್ಬರಿಬ್ಬರ ನಡುವಿನ ಪ್ರೇಮ ಪಯಣ ಈ ಹಾಡಿನಲ್ಲಿದೆ.
‘ಆ ದಿನಗಳು’ ಚಿತ್ರದ ಎರಡನೇ ಭಾಗವಲ್ಲ. ಅದರ ಇನ್ನೊಂದು ಕಥೆ. ಇದೊಂದು ಕಾಲ್ಪನಿಕ ಕಥೆ. ಸಂತೋಷ್ ಅವರ ‘ಜಿಗರ್ ಥಂಡ’ ಚಿತ್ರ ನೋಡಿದ್ದೆ. ಅದರಲ್ಲಿ ಅವರ ಸಂಗೀತ ತುಂಬ ಭಿನ್ನವಾಗಿತ್ತು. ಹೀಗಾಗಿ ಅವರನ್ನು ನಮ್ಮ ಸಿನಿಮಾಗೆ ಕರೆತಂದ್ವಿ. ಹಾಡನ್ನು ಪ್ರತ್ಯೇಕವಾಗಿ ಚಿತ್ರೀಕರಿಸಿಲ್ಲ. ಚಿತ್ರೀಕರಣದ ನಡುವೆ ಅವಕಾಶ ಸಿಕ್ಕಾಗೆಲ್ಲ ಈ ಹಾಡಿನ ದೃಶ್ಯಗಳನ್ನು ಚಿತ್ರೀಕರಿಸಿದ್ದೇವೆ. ನಿರ್ಮಾಪಕರು ‘ಆ ದಿನಗಳು’ ರೀತಿಯದ್ದೇ ಸಿನಿಮಾ ಮಾಡಬೇಕೆಂದು ಕೇಳಿದರು. ಹಾಗಾಗಿ ಆ ಸಿನಿಮಾದ್ದೇ ಪಾತ್ರಗಳು ಇಲ್ಲೂ ಮುಂದುವರೆದಿದ್ದು, ಅತುಲ್ ಕುಲಕರ್ಣಿ, ಶರತ್ ಲೋಹಿತಾಶ್ವ, ಆಶೀಶ್ ವಿದ್ಯಾರ್ಥಿ ಹಾಗೂ ಬಿಗ್‌ಬಾಸ್ ಖ್ಯಾತಿಯ ವಿನಯ್ ಗೌಡ ಸೇರಿ ಹಲವು ಪ್ರತಿಭಾನ್ವಿತ ಕಲಾವಿದರು ಚಿತ್ರದಲ್ಲಿದ್ದಾರೆ. ಒಳ್ಳೆಯ ಸಿನಿಮಾಗಳು ಗೆಲ್ಲಬೇಕು. ಆಗ ನಿರ್ಮಾಪಕರು ಇನ್ನಷ್ಟು ಉತ್ತಮ ಸಿನಿಮಾಗಳನ್ನು ಮಾಡಬಹುದು’ ಎಂದರು ನಿರ್ದೇಶಕ.
‘ಈ ಚಿತ್ರದ ಆಡಿಯೊ ನನ್ನ ವೃತ್ತಿ ಜೀವನದಲ್ಲಿಯೇ ದೊಡ್ಡ ಮೊತ್ತಕ್ಕೆ ಖರೀದಿಯಾಗಿದೆ. ನಾವು ಸಿನಿಮಾ ಬಗ್ಗೆ ಬಿಲ್ಡಪ್ ಕೊಡುವುದಿಲ್ಲ. ಸಿನಿಮಾ ಬಗ್ಗೆ ಜನ ಮಾತನಾಡುತ್ತಾರೆ. ‘ಮಾದೇವ’ ಒಂದು ರೀತಿಯ ಸಿನಿಮಾವಾಗಿತ್ತು. ‘ಬಲರಾಮನ ದಿನಗಳು’ ಕ್ಲಾಸ್ ಕಲ್ಟ್ ಸಿನಿಮಾ. ನಿರ್ದೇಶಕರು ಈ ಸಿನಿಮಾವನ್ನು ವಿಭಿನ್ನವಾಗಿ ಕಟ್ಟಿಕೊಟ್ಟಿದ್ದಾರೆ. ಸಂಗೀತ ನಿರ್ದೇಶಕ ಈ ಚಿತ್ರದ ಮುಖ್ಯ ಪಿಲ್ಲರ್. ಹಾಡುಗಳು ಸೊಗಸಾಗಿವೆ’ ಎಂದು ವಿನೋದ್ ಪ್ರಭಾಕರ್ ಹೇಳಿದರು.
ಪದ್ಮಾವತಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಪದ್ಮಾವತಿ ಜಯರಾಂ ಹಾಗೂ ಶ್ರೇಯಸ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ವೇಣು ಛಾಯಾಚಿತ್ರಗ್ರಹಣವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.