ಜೆ.ಜೆ.ಪೆರ‍್ರಿ ಹಂಚಿಕೊಂಡಿರುವ ಫೋಟೊ
ಚಿತ್ರ ಕೃಪೆ: ಇನ್‌ಸ್ಟಾಗ್ರಾಂ
ಬೆಂಗಳೂರು: ಹಾಲಿವುಡ್‌ನ ಸಾಹಸ ನಿರ್ದೇಶಕ ಜೆ.ಜೆ.ಪೆರ‍್ರಿ ಕನ್ನಡದ ನಟ ಯಶ್ ಜತೆಗಿನ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಟಾಕ್ಸಿಕ್ ಚಿತ್ರದ ಶೂಟಿಂಗ್ ಸಮಯದ ಚಿತ್ರ ಇದಾಗಿದೆ.
ಗೀತು ಮೋಹನದಾಸ್ ಅವರ ನಿರ್ದೇಶನದಲ್ಲಿ ನಿರ್ಮಾಣವಾಗುತ್ತಿರುವ ಬಹು ನಿರೀಕ್ಷೆಯ ಟಾಕ್ಸಿಕ್ ಚಿತ್ರ ತಂಡಕ್ಕೆ ಕಳೆದ ತಿಂಗಳು ಪೆರ‍್ರಿ ಸೇರಿಕೊಂಡಿದ್ದರು. ಯಶ್ ನಾಯಕನಾಗಿರುವ ಈ ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ ಸೇರಿ ಹಲವು ಕಲಾವಿದರಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ, ಸಿನಿಮಾ ಚಿತ್ರೀಕರಣದ ತೆರೆ ಮರೆಯ ಫೋಟೊವನ್ನು ಹಂಚಿಕೊಂಡು ‘ಟಾಕ್ಸಿಕ್ ಚಿತ್ರದಲ್ಲಿ ನನ್ನ ಸ್ನೇಹಿತ ಯಶ್ ಜತೆ ಕೆಲಸ ಮಾಡುವುದು ತುಂಬಾ ಖುಷಿ ಕೊಟ್ಟಿತು. ಯುರೋಪ್‌ನಾದ್ಯಂತ ಇರುವ ನನ್ನ ಅನೇಕ ಆತ್ಮೀಯ ಸ್ನೇಹಿತರೊಂದಿಗೆ ಕೆಲಸ ಮಾಡಲು ಅವಕಾಶ ಸಿಕ್ಕಿತು. ಈ ಚಿತ್ರವನ್ನು ನೋಡಲು ಇನ್ನು ಕಾಯಲು ಸಾಧ್ಯವಿಲ್ಲ. ಇದು ಅದ್ಭುತವಾಗಿದೆ. ನಾವು ನಿರ್ಮಾಣ ಮಾಡಿದ್ದಕ್ಕೆ ತುಂಬಾ ಹೆಮ್ಮೆ ಇದೆ’ ಎಂದು ಬರೆದುಕೊಂಡಿದ್ದಾರೆ.
ಇದಕ್ಕೆ ಕಮೆಂಟ್ ಬಾಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಯಶ್, ‘ಗೆಳೆಯಾ, ನಿಮ್ಮೊಂದಿಗೆ ಕೆಲಸ ಮಾಡುವುದು ಶಕ್ತಿಯಾಗಿದೆ’ ಎಂದಿದ್ದಾರೆ.
ಈ ಪೋಸ್ಟ್‌ಗೆ ಉಕ್ರೇನ್ ಮೂಲದ ಅಮೆರಿಕ ನಟ ನಟಾಲಿಯಾ ಬರ್ನ್ ಪ್ರತಿಕ್ರಿಯಿಸಿ, ‘ಯಶ್ ಮತ್ತು ಪೆರ‍್ರಿ ಅವರನ್ನು ಟ್ಯಾಗ್ ಮಾಡಿ ನಿಮ್ಮೊಂದಿಗೆ ಕೆಲಸ ಮಾಡಿರುವ ಅನುಭವ ಅದ್ಭುತವಾಗಿತ್ತು. ಟಾಕ್ಸಿಕ್ ಚಿತ್ರತಂಡದೊಂದಿಗೆ ಕೆಲಸ ಮಾಡಲು ಭಾರತಕ್ಕೆ ಬರುವಂತಾಗಿದ್ದು ಮತ್ತು ಭಾರತದ ಸಮುದಾಯದವರೊಂದಿಗೆ ಭಾಗವಾಗಲು ಅವಕಾಶ ದೊರಕಿಸಿದ್ದಕ್ಕೆ ಧನ್ಯವಾದಗಳು. ಜಗತ್ತು ಈ ಸಿನಿಮಾವನ್ನು ತೆರೆಯ ಮೇಲೆ ನೋಡುವುದನ್ನು ಕಣ್ತುಂಬಿಕೊಳ್ಳಲು ಕಾತುರನಾಗಿದ್ದೇನೆ’ ಎಂದಿದ್ದಾರೆ.
‘A fairy tale for grown-ups’ ಎಂಬ ಅಡಿಬರಹವಿರುವ ಟಾಕ್ಸಿಕ್ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ನಿರ್ಮಾಣ ಮಾಡುತ್ತಿದೆ. 2025ರ ಏಪ್ರಿಲ್ 10ರಂದು ಸಿನಿಮಾ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.