ADVERTISEMENT

‘ತೀರ್ಥರೂಪ ತಂದೆಯವರಿಗೆ’ ಸಿನಿಮಾ ವಿಮರ್ಶೆ: ತಾಳ್ಮೆ ಪರೀಕ್ಷಿಸುವ ಕಥೆ

ವಿನಾಯಕ ಕೆ.ಎಸ್.
Published 1 ಜನವರಿ 2026, 9:10 IST
Last Updated 1 ಜನವರಿ 2026, 9:10 IST
ನಿಹಾರ್‌, ರಚನಾ ಇಂದರ್‌
ನಿಹಾರ್‌, ರಚನಾ ಇಂದರ್‌   

ಭಾವನಾತ್ಮಕ ಸಿನಿಮಾದಲ್ಲಿ ಭಾವನೆಯನ್ನು ತಟ್ಟುವಂಥ ಸನ್ನಿವೇಶಗಳು ಹೆಚ್ಚಿರದಿದ್ದರೆ, ಭಾವನೆಗಳನ್ನು ದಾಟಿಸುವ ಸಮರ್ಥ ಕಲಾವಿದರು ಇಲ್ಲದಿದ್ದರೆ ತಾಳ್ಮೆ ಕೆಡಲು ಪ್ರಾರಂಭತ್ತದೆ. ಅದೇ ರೀತಿ ಭಾವನಾತ್ಮಕ ಕಥೆಯನ್ನು ಕೈಗೆತ್ತಿಕೊಂಡ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್‌ ಚಿತ್ರಕಥೆ ಬರವಣಿಗೆಯಲ್ಲಿ ಎಡವಿದ್ದಾರೆ. ಹೀಗಾಗಿ ‘ತೀರ್ಥರೂಪ ತಂದೆಯವರಿಗೆ’ ಪ್ರಾರಂಭದಿಂದಲೇ ತಾಳ್ಮೆ ಪರೀಕ್ಷಿಸಲು ಶುರು ಮಾಡುತ್ತದೆ. 

ಕಳೆದ ವರ್ಷ ‘ಎಲ್ಲೋ ಜೋಗಪ್ಪ ನಿನ್ನರಮನೆ’ ಸಿನಿಮಾ ಬಿಡುಗಡೆಗೊಂಡಿತ್ತು. ಅದೇ ರೀತಿಯ ಕಥಾಹಂದರ ಹೊಂದಿರುವ ಚಿತ್ರ ‘ತೀರ್ಥರೂಪ‍’. ಯಾವುದೋ ಕಾರಣದಿಂದ ತಂದೆಯಿಂದ ದೂರವಾದ ಮಗನೊಬ್ಬ ಮತ್ತೆ ತಂದೆಯನ್ನು ಹುಡುಕಿಕೊಂಡು ಹೋಗುವುದೇ ಚಿತ್ರದ ಕಥೆ. ಯೂಟ್ಯೂಬರ್‌ ಆಗಿರುವ ಕಥಾನಾಯಕ ಪೃಥ್ವಿಯ ಬದುಕಿನ ಪಯಣದಿಂದಲೇ ಕಥೆ ಪ್ರಾರಂಭವಾಗುತ್ತದೆ. ಆತನ ತಾಯಿ ಜಾನಕಿ. ಆಕೆಗೊಬ್ಬ ಗೆಳೆಯ ವಿಶ್ವನಾಥ. ಈ ವಿಶ್ವನಾಥನಿಂದಲೇ ಪೃಥ್ವಿ ಸಮಾಜದಲ್ಲಿ ಸಾಕಷ್ಟು ಅವಮಾನಗಳನ್ನು ಅನುಭವಿಸುತ್ತ ಇರುತ್ತಾನೆ. ಹೀಗಾಗಿಯೇ ಆತ ತಾಯಿಯಿಂದಲೂ ಅಂತರ ಕಾಯ್ದುಕೊಂಡಿರುತ್ತಾನೆ. ಈತನ ಬದುಕಿನಲ್ಲಿ ಬರುವವಳು ಅಕ್ಷರ. ಇವರಿಬ್ಬರ ಭೇಟಿ, ಪೃಥ್ವಿಯ ಹಿನ್ನೆಲೆ ಕಥೆ ಮುಗಿಯುವ ಹೊತ್ತಿಗೆ ಚಿತ್ರದ ಮೊದಲಾರ್ಧ ಸಮೀಪಿಸಿರುತ್ತದೆ. 

ಚಿತ್ರದ ನಿಜವಾದ ಕಥೆ ಪ್ರಾರಂಭವಾಗುವುದು ಮೊದಲಾರ್ಧದ ಅಂತ್ಯದಲ್ಲಿ. ದ್ವಿತೀಯಾರ್ಧದಿಂದ ಕಥೆ ವೇಗ ಪಡೆಯುತ್ತದೆಯಾದರೂ, ಅಲ್ಲಿಯೂ ಒಂದಷ್ಟು ಅನವಶ್ಯ ದೃಶ್ಯಗಳು ಮತ್ತೆ ಕಥೆಯ ಸೊಗಡನ್ನು ಕೆಡಿಸುತ್ತವೆ. ಉದಾಹರಣೆಗೆ ನಾಯಕ ಅಪ್ಪನನ್ನು ಹುಡುಕಿಕೊಂಡು ಕೊಚ್ಚಿನ್‌ಗೆ ಹೋಗುವ ದೃಶ್ಯದಲ್ಲಿ ಕಾಲೇಜಿನಲ್ಲಿ ನಡೆಯುವ ಘಟನೆಯೊಂದನ್ನು ಬಿಟ್ಟು ಬೇರೆ ಯಾವ ಅಂಶಗಳು ಮುಖ್ಯ ಕಥೆಗೆ ಹೆಚ್ಚು ಪೂರಕವಾಗಿಲ್ಲ. ಭಾವ ಪಯಣದಲ್ಲಿ ನಾಯಕನ ಬಿಲ್ಡಪ್‌, ಆತನನ್ನು ವೈಭವೀಕರಿಸುವ ದೃಶ್ಯಗಳು, ಅದಕ್ಕಾಗಿಯೇ ಖಳನಾಯಕನ ಸೃಷ್ಟಿಯಂಥ ಸನ್ನಿವೇಶಗಳು ಅನಗತ್ಯ. ಎರಡು ಫೈಟ್‌ಗಳು, ನಾಯಕನಿಗೊಬ್ಬ ಎದುರಾಳಿ, ಆತನ ಒಂದಷ್ಟು ದೃಶ್ಯಗಳನ್ನು ಅಪ್ಪ–ಮಗನ ಸಂಬಂಧದ ಕಥೆಯನ್ನು ಹೇಳುವ, ಕುಟುಂಬದ ಸಂಬಂಧಗಳ ಮಹತ್ವ ತಿಳಿಸುವ ಸನ್ನಿವೇಶಗಳನ್ನಾಗಿ ಪರಿವರ್ತಿಸುವ ಅವಕಾಶ ನಿರ್ದೇಶಕರಿಗಿತ್ತು. 

ನಾಯಕನ ಬಾಲ್ಯದಲ್ಲಿ ಆತನ ಕುಟುಂಬದಲ್ಲಿ ಒಂದು ಘಟನೆ ನಡೆದಿರುತ್ತದೆ. ಆ ಘಟನೆ ಏನು, ಅದರಿಂದಾದ ಪರಿಣಾಮಗಳೇನು ಎಂಬುದೇ ಒಟ್ಟಾರೆ ಚಿತ್ರ. ಆದರೆ ವಾರಪತ್ರಿಕೆಯಲ್ಲಿ ಬಂದು ಜಗಜ್ಜಾಹಿರಾದ ಆ ಸನ್ನಿವೇಶದ ಸತ್ಯಕಥೆ 20 ವರ್ಷಗಳು ಕಳೆದರೂ ನಾಯಕನಿಗೆ ಗೊತ್ತೇ ಆಗಿರುವುದಿಲ್ಲ. ಆ ವಿಷಯ ತಿಳಿಯಲು ನಾಯಕಿಯ ಮನೆ ಬಾಗಿಲಿನವರೆಗೆ ಪಯಣ ಸಾಗಬೇಕು ಎಂಬ ಅಂಶವೇ ಲಾಜಿಕ್‌ ಇಲ್ಲದ್ದು ಎನ್ನಿಸಿ, ಒಟ್ಟಾರೆ ಕಥೆಯಲ್ಲಿನ ಕುತೂಹಲವನ್ನೇ ಕಳೆದುಬಿಡುತ್ತದೆ. ‌

ಚಿತ್ರದಲ್ಲಿ ಇಷ್ಟವಾಗುವುದು ನಾಯಕನ ತಂದೆ ಪಾತ್ರದಲ್ಲಿ ನಟಿಸಿರುವ ರವೀಂದ್ರ ವಿಜಯ್. ತಾಯಿಯಾಗಿ ಸಿತಾರ ನಟನೆ ಕೂಡ ಚೆನ್ನಾಗಿದೆ. ಆದರೆ ಪಾತ್ರಪೋಷಣೆ ಇನ್ನಷ್ಟು ಗಟ್ಟಿಯಾಗಬಹುದಿತ್ತು. ವಿಶ್ವನಾಥನಾಗಿ ರಾಜೇಶ್‌ ನಟರಂಗ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಪೃಥ್ವಿಯಾಗಿ ಅರ್ಧ ಸಿನಿಮಾ ಆವರಿಸಿರುವ ನಿಹಾರ್‌ ಮುಖೇಶ್‌ಗಿದು ಮೊದಲ ಸಿನಿಮಾ ಎಂಬುದು ನಟನೆಯಿಂದಲೇ ಗೊತ್ತಾಗುತ್ತದೆ. ಅಕ್ಷರಳಾಗಿ ರಚನಾ ಇಂದರ್‌ ಭಾವನಾತ್ಮಕ ದೃಶ್ಯಗಳಲ್ಲಿ ಇನ್ನಷ್ಟು ಉತ್ತಮವಾಗಿ ನಟಿಸುವ ಅವಕಾಶವಿತ್ತು. ಚಿತ್ರದ ಅತಿದೊಡ್ಡ ಶಕ್ತಿ ಜೋ ಕೋಸ್ಟಾ ಅವರ ಹಿನ್ನೆಲೆ ಸಂಗೀತ. ಹಲವು ದೃಶ್ಯಗಳಲ್ಲಿ ಕಣ್ಣುಮುಚ್ಚಿ ಹಿನ್ನೆಲೆ ಸಂಗೀತವನ್ನೇ ಕೇಳುತ್ತಿರಬಹುದು! ಆದರೆ ಹಾಡುಗಳು ನೆನಪಿನಲ್ಲಿ ಉಳಿಯುವುದಿಲ್ಲ. ದೀಪಕ್‌ ಅವರ ಛಾಯಾಚಿತ್ರಗ್ರಹಣ ಚಿತ್ರದ ಅಂದವನ್ನು ಹೆಚ್ಚಿಸಿದೆ. ಮುಖ್ಯಕಥೆಗೆ ಕೊಡುಗೆ ನೀಡದ ಹಲವು ದೃಶ್ಯಗಳನ್ನು ಬದಿಗಿಟ್ಟು ಅವಧಿಯನ್ನು 30 ನಿಮಿಷಗಳಷ್ಟು ತಗ್ಗಿಸಿದ್ದರೆ ಚಿತ್ರದ ವೇಗವೂ ತುಸು ಹೆಚ್ಚಾಗುತ್ತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.