ADVERTISEMENT

ರಂಗಭೂಮಿ: ರಂಗದಲ್ಲಿ ಎದೆಗೆ ಬಿದ್ದ ಅಕ್ಷರ

ಡಾ.ರಾಜಪ್ಪ ದಳವಾಯಿ
Published 17 ಮೇ 2025, 23:30 IST
Last Updated 17 ಮೇ 2025, 23:30 IST
<div class="paragraphs"><p>ನಾಟಕದ ದೃಶ್ಯ &nbsp;</p></div>

ನಾಟಕದ ದೃಶ್ಯ  

   

ಚಿತ್ರಗಳು: ತಾಯಿ ಲೋಕೇಶ್‌

ದೇವನೂರ ಮಹಾದೇವ ಅವರು ಆಗಾಗ ಪ್ರತಿಕ್ರಿಯಿಸಿದ ವಿಚಾರ, ವಿಮರ್ಶೆ, ಕತೆಗಳ ಮುಖೇನ ಸಮಕಾಲೀನ ಭಾರತಕ್ಕೆ ಸ್ಪಂದಿಸಿದ ಚಿಂತನೆಯ ಸಾರ ‘ಎದೆಗೆ ಬಿದ್ದ ಅಕ್ಷರ’. ಇದೊಂದು ಬಿಡಿ ಲೇಖನ ಸಂಕಲನ. ಅದರೊಳಗೆ ಮಾನವೀಯ ಮಿಡಿತದ ವಿಚಾರ, ಹಲವು ಕತೆಗಳೊಂದಿಗೆ ಸೃಜನಗೊಂಡಿವೆ. ಅಂಥ ಕಥನಗಳನ್ನು ಪ್ರಸಿದ್ಧ ರಂಗಕರ್ಮಿ ಸಿ.ಬಸವಲಿಂಗಯ್ಯ ರಂಗಕ್ಕೆ ತಂದಿದ್ದಾರೆ. ಬಸವಲಿಂಗಯ್ಯ ಸದಾ ಹೊಸ ಹೊಸ ರಂಗಕೃತಿಗಳನ್ನು ಶೋಧಿಸುತ್ತಿರುತ್ತಾರೆ. ಅವರ ಒಂದೊಂದು ನಾಟಕವೂ ಒಂದೊಂದು ಹೊಸ ರಂಗಕಥನವಾಗಿರುತ್ತವೆ. ‘ಎದೆಗೆ ಬಿದ್ದ ಅಕ್ಷರ’ ಅಂಥ ಮತ್ತೊಂದು ಪ್ರಧಾನ ರಂಗಪಠ್ಯ. ಶೋಧನಾತ್ಮಕ ನಿರ್ದೇಶಕ ಹೇಗೆ ಹೊಸ ಪಠ್ಯಗಳನ್ನು ಕಟ್ಟಬಲ್ಲ ಎಂಬುದಕ್ಕೆ ಈ ನಾಟಕ ಅತ್ಯುತ್ತಮ ಉದಾಹರಣೆಯಾಗಿದೆ.

ADVERTISEMENT

ಮಹಾದೇವ ಅವರ ಚಿಂತನೆ ಕಳೆದ ಅರ್ಧ ಶತಮಾನ ಕಾಲದ್ದು. ತಮ್ಮ ಅಶೋಕಪುರಂ ಜೀವನದಿಂದ ಇಲ್ಲಿವರೆಗೆ ಕಂಡುಂಡ ಅವಮಾನ, ನೋವು, ನಲಿವು, ಪ್ರೀತಿ ಎಲ್ಲವೂ ಒಂದು ಮಹಾ ಜೀವನದಂತೆ ಸಾಗಿ ಕ್ರೂರವಾದ ವ್ಯವಸ್ಥೆಗೆ ವ್ಯಂಗ್ಯ, ಮೌನ, ಸಂಕಟಗಳ ಮೂಲಕ ಕೊಟ್ಟ ಉತ್ತರದಂತಿದೆ. ಮನೆಮಂಚಮ್ಮನಂಥ ಊರ ದೇವತೆಯಿಂದಿಡಿದು ಎಲ್ಲವೂ ಸಮಾನತೆಯ ಆಶಯದತ್ತ ಚಲಿಸುವ ದಲಿತ ಜಗತ್ತು ಪ್ರತ್ಯೇಕಗೊಳ್ಳದೆ ಊರು-ಕೇರಿ ಒಂದಾಗಬೇಕಾದ ಒಂದು ಹೊಸ ಸಮೀಕರಣದ ವ್ಯಾಕರಣವನ್ನು ನಾಟಕ ಮಂಡಿಸುತ್ತದೆ. ಕತೆಯಯೊಳಗೆ ಮಹಾದೇವ ನಾಟಕವನ್ನು ಸೃಜಿಸಿರುತ್ತಾರೆ ಎಂಬುದಕ್ಕೆ ಈ ರಂಗ ಪ್ರಯೋಗ ಅತ್ಯುತ್ತಮ ನಿದರ್ಶನ.

ನಾಟಕ ಎಲ್ಲಿದೆ? ಬಹುಶಃ ಮನಸ್ಸನ್ನು ಆರ್ದ್ರಗೊಳಿಸುವಲ್ಲಿ ಮಾತ್ರ ನಾಟಕವಿರುತ್ತದೆ. ಜಗತ್ತಿಗೆ ಸೃಜನಶೀಲ ಬರಹಗಾರ ಪ್ರತಿಕ್ರಿಯಿಸಬೇಕಾದ ರೀತಿಯೇ ಹೀಗೆ ಎಂಬ ಮಾದರಿಯನ್ನು ಈ ನಾಟಕ ತೋರುತ್ತದೆ. ತುಂಬಾ ಕಾಠಿಣ್ಯ ಎನಿಸುವುದು ಅಸಮಾನತೆ. ಭಾರತವೆಂಬ ಒಡೆದ ಮನೆಯ ಸಾಂಸ್ಕೃತಿಕ ನಾಯಕರು ಯಾರು? ಯಾರು? ಎಲ್ಲಿದ್ದಾರೆ? ಎಂಬ ಪೊಲಿಟಿಕಲ್‌ ಫಿಲಾಸಫಿಯನ್ನು ಅಂತಿಮವಾಗಿ ಮಂಡಿಸಿದರೂ ಸುತ್ತಮುತ್ತ ಇರುವ ದೌರ್ಜನ್ಯ, ಶೋಷಣೆ, ಅಸಮಾನತೆಗಳಿಗೆ ಮನಮಿಡಿಯುವುದು–ಇತಿಯೋಪಿಯಾದ ಹಸಿವು, ಕೈಲ್ವಿನ್‌ನಂಥ ಪೋಟೊಗ್ರಾಫರ್‌ನ ಯಶಸ್ಸು ಮತ್ತು ದುರಂತ ನೆನಪಿಸಿ ಆ ನೊಣ ಮುತ್ತಿದ ಮಕ್ಕಳು ಕಾಡುವ ಬಗೆ, ಕ್ಷಾಮ ಹಸಿವಿಗಿಂತ ಯುದ್ಧದಲ್ಲಿ ಮಡಿವ ಜನರ ಸಂಖ್ಯೆ, ಯುದ್ಧೋನ್ಮಾದದ ಬಗೆಗಿನ ವ್ಯಾಖ್ಯಾನ-ಈ ನಾಟಕದೊಳಗೆ ನೂರಾರು ಕತೆಗಳಿವೆ. ಗಂಡಭೇರುಂಡ ಪಕ್ಷಿಯ ಕತೆ, ಹುಲಿ, ಮಂಗ, ಮನುಷ್ಯರಲ್ಲಿ ಅಪಾಯಕಾರಿ ಯಾರು? ದೇವರು, ದೇವಾಲಯ, ಸಂವಿಧಾನ–ಗಾಂಧಿ, ಅಂಬೇಡ್ಕರ್‌, ಲೋಹಿಯಾರಂತೆಯೇ ಶ್ರೀಕೃಷ್ಣ ಆಲನಹಳ್ಳಿ, ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಪ್ರೊ.ಎಂ.ಡಿ. ನಂಜುಂಡಸ್ವಾಮಿ, ಪಿ. ಲಂಕೇಶ್‌, ಯು.ಆರ್‌. ಅನಂತಮೂರ್ತಿ, ಎಲ್‌.ಬಸವರಾಜು ಅವರನ್ನು ಗ್ರಹಿಸಿಕೊಂಡ ಬಗ್ಗೆ ಮುಂತಾಗಿ ಮುಂತಾಗಿ. ‘ಎದೆಗೆ ಬಿದ್ದ ಅಕ್ಷರ’ ಇಂಥ ಇನ್ನೂ ಹತ್ತು ನಾಟಕಗಳಾಗುವ ಸಾಮಗ್ರಿಯ ಕೃತಿ.

ಆಯ್ದ ಕೆಲವು ಘಟನೆ ಮತ್ತು ವಿಚಾರಗಳನ್ನು ನಾಟಕ ಮಾಡಲಾಗಿದೆ. ನಟರಾಜ ಬೂದಾಳು ಮತ್ತು ಸಂತೋಷ ನಾಯಕ್‌ ಆರ್‌. ಅವರು ಈ ರಂಗಪಠ್ಯವನ್ನು ತಯಾರಿಸಿದ್ದಾರೆ. ಬಸವಲಿಂಗಯ್ಯ ಈಗಾಗಲೆ ಮಹಾದೇವ ಅವರ ‘ಕುಸುಮಬಾಲೆ’, ‘ದ್ಯಾವನೂರು’ ನಾಟಕಗಳನ್ನು ನಿರ್ದೇಶಿಸಿದ್ದಾರೆ.

‘ಕುಸುಮಬಾಲೆ’ ಒಂದು ಲೆಜೆಂಡರಿ ನಾಟಕ. ಸಿಜಿಕೆ ‘ಒಡಲಾಳ’ವನ್ನು ಲೆಜೆಂಡರಿ ಮಾಡಿದಂತೆ, ಆ ಮೂಲಕ ಮೇರು ನಟಿ ಉಮಾಶ್ರೀಯನ್ನು ರೂಪಿಸಿದ ಸಾಕವ್ವ. ‘ಕುಸುಮಬಾಲೆ’ ರಂಗಾಯಣ ಮೈಸೂರಿನ ಪ್ರತಿಷ್ಠಿತ ನಾಟಕ. ‘ದ್ಯಾವನೂರು’ ನೀನಾಸಂಗೆ ಬಸವಲಿಂಗಯ್ಯ ನಿರ್ದೇಶಿಸಿದ ನಾಟಕ ಎಚ್‌.ಜನಾರ್ದನ (ಜನ್ನಿ) ದೇವನೂರರ ಕತೆಗಳ ಗುಚ್ಚ ‘ಸಂಬಂಜ ಅನ್ನದು ದೊಡ್ದುಕನ’ ಎಂಬ ನಾಟಕ ನಿರ್ದೇಶಿಸಿದಿದ್ದರು. ಬಹಳ ಹಿಂದೆ ‘ಮಾರಿಕೊಂಡವರು’, ‘ಡಾಂಬರು ಬಂದುದು’ ಮುಂತಾದ ಕತೆಗಳು ನಾಟಕಗಳಾಗಿದ್ದವು. ಕನ್ನಡ ರಂಗಭೂಮಿ ಮಹಾದೇವ ಅವರನ್ನು ಮುಖ್ಯ ನಾಟಕಕಾರನೆಂದೇ ಗ್ರಹಿಸಿದಂತಿದೆ. ಅವರ ಕತೆಗಳೂ, ಕಾದಂಬರಿಗಳೂ ಈ ಹಿಂದೆ ನಾಟಕ ಆಗಿವೆ ಅಥವಾ ರಂಗಕೃತಿಗಳಾಗಿವೆ. ಈಗ ಅವರ ವಿಚಾರ ಕೃತಿ ಕೂಡ ರಂಗಕೃತಿಯಾಗಿದೆ. ಇದು ಕನ್ನಡ ರಂಗಭೂಮಿಯ ಪ್ರಯೋಗಶೀಲತೆಗೆ ಸಾಕ್ಷಿ. ಹಾಗೆಯೇ ದೇವನೂರರ ಬರಹಕ್ಕಿರುವ ಶಕ್ತಿ ಕೂಡ.

‘ಎದೆಗೆ ಬಿದ್ದ ಅಕ್ಷರ’ ಕೇವಲ ಶಿಕ್ಷಣದ ಸಾಧ್ಯತೆಯಲ್ಲ. ಅದು ಚಿಂತನೆಯ ದಾರಿ. ನಾವು ಯಾವ ದಾರಿಯಲ್ಲಿ ನಡೆಯಬೇಕು? ಜೀವನ ಸರಿಯಾಗುವ ಬಗೆ ಯಾವುದು? ಮುಂತಾದ ವಿಚಾರಗಳೂ ಇಲ್ಲಿ ಅನಾವರಣಗೊಂಡಿವೆ. ಶೋಷಿಸುವನನ್ನು ಎಚ್ಚರಿಸುವ, ಶೋಷಣೆಗೆ ತುತ್ತಾದವರಿಗೆ ಮರುಗುವ ಕೇಡನ್ನು ಸೃಜಿಸಿದ ಕೇಡಿಗ ಮನಸ್ಸುಗಳನ್ನು ಪ್ರಶ್ನಿಸುವ, ಮೂಲಭೂತವಾದವೆಂಬುದು ತನ್ನ ಹತಾರಗಳನ್ನು ಹೇಗೆ ಸೃಷ್ಟಿಸಿಕೊಳ್ಳುತ್ತದೆಂಬ ಆವರಣವನ್ನು ಅರ್ಥೈಸುವ ನೆಲೆಗಳು ಇಲ್ಲಿ ಮುಖ್ಯವೆನಿಸುತ್ತವೆ. ಸಂವಿಧಾನ-ದಲಿತರ ಕೇರಿ-ಶಿಕ್ಷಣ-ಅಸಮಾನತೆ-ಸಮಾನತೆಯತ್ತ ನಡೆವ ನಡಿಗೆ, ನಮ್ಮ ನಡುವಿನ ಲೆಜೆಂಡರಿ ವ್ಯಕ್ತಿತ್ವಗಳು ಸಾಮಾಜಿಕ ರಾಜಕೀಯವಾಗಿ ವಿಶಿಷ್ಟ ಎನ್ನುವ ರೀತಿ ರಂಗದಲ್ಲಿ ಅನಾವರಣಗೊಂಡಿವೆ.

ಕಾವಲುಮನೆ ಎಂಬ ಸಂಸ್ಥೆ ಈ ನಾಟಕವನ್ನು ಪ್ರಾಯೋಜನೆ ಮಾಡಿದೆ. ವಿಚಾರಗಳು ಗಹನವಾದವು; ಕತೆಗಳು ಮನಕರಗಿಸುತ್ತವೆ ಆ ಮೂಲಕ ಎಚ್ಚರಿಸುತ್ತವೆ. ಕತೆ ಮತ್ತು ನಾಟಕದ ಮೀಮಾಂಸೆಯೂ ಈ ನಾಟಕದಲ್ಲಿ ಚೆನ್ನಾಗಿ ಚರ್ಚಿತವಾಗಿದೆ. ಮಧ್ಯವಯಸ್ಸಿನ, ಬೇರೆ ಬೇರೆ ಕ್ಷೇತ್ರದ ನಟ ನಟಿಯರಿಗೆ ಈ ನಾಟಕ ಕಲಿಸಿರುವುದು ಬಸವಲಿಂಗಯ್ಯನವರ ಹೊಸ ಸವಾಲೇ ಆಗಿದೆ. ನುರಿತ ನಟ ನಟಿಯರಲ್ಲದಿದ್ದರೂ ಹೊಸಬರೇ ಹೊಸ ನಾಟಕವನ್ನು ಮಂಡಿಸುತ್ತಿರುವುದು ವಿಶೇಷ. ನಾಟಕಕ್ಕಿರುವ ಶಕ್ತಿಯನ್ನು ಅದು ಅರ್ಥಪೂರ್ಣವಾಗಿ ನಮಗೆ ತೋರುತ್ತದೆ.

ವಿಚಾರಶೀಲತೆಯೇ ನಾಟಕವಾಗಿರುವ ಒಂದು ಅಚ್ಚರಿಯನ್ನು ಪ್ರೇಕ್ಷಕನ ದೃಷ್ಟಿಯಿಂದ ಗಮನಿಸಿದಾಗ ಪ್ರೇಕ್ಷಕ ಇದುವರೆಗೂ ಚರ್ವಿತ ಚರ್ವಣ ನಾಟಕ ನೋಡಿದಂತೆ ಇದನ್ನು ನೋಡಲಾಗದು. ಶೋಷಕ-ಶೋಷಿತರ ನಡುವೆ ನಾವೆಲ್ಲಿದ್ದೇವೆ? ಎಂಬ ಪ್ರಮುಖ ಪ್ರಶ್ನೆಯನ್ನು ನಾವೆಲ್ಲ ಎದುರಿಸಲೇಬೇಕಾಗುತ್ತದೆ. ಬಹುಶಃ ರಂಗಭೂಮಿ ಮಾಡಬೇಕಾದುದೇ ಈ ಕೆಲಸವನ್ನು. ಕೆಲವು ವಿಷಯಗಳನ್ನು ಅರ್ಥೈಸದಿದ್ದರೂ ಅರ್ಥವಾಗಿರುತ್ತದೆ. ಮುಂದಿನ ಪ್ರಯೋಗಗಳಲ್ಲಿ ಬಂಧ ಇನ್ನಷ್ಟು ಬಿಗಿಯಾಗಬಲ್ಲದು. ಇದೊಂದು ಮುಖ್ಯವಾದ ರಂಗ ಪ್ರಯೋಗ. ಸಮಕಾಲೀನ ಕನ್ನಡ ರಂಗಭೂಮಿಯ ಸತ್ವಯುತವಾದ ಪ್ರಯೋಗವಾಗಿದೆ.v

ನಾಟಕದ ದೃಶ್ಯ  

ನಾಟಕದ ದೃಶ್ಯ  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.