
ನಾಟಕದ ದೃಶ್ಯ
ಹಟ್ಟಿಯಲ್ಲಿ ಕೋಳಿ ಕಳುವಾದ ಬಗ್ಗೆ ಲಕುಮಿ ಚಿಂತಾಕ್ರಾಂತಳಾಗಿರುತ್ತಾಳೆ. ಕೋಳಿ ಕದ್ದಿರುವ ಬೆಕುವ ಹಟ್ಟಿಯಲ್ಲಿ ಪ್ರತ್ಯಕ್ಷನಾಗಿ ಲಕುಮಿಗೆ ಸಂತೈಸುವ ನಾಟಕವಾಡುತ್ತಾನೆ. ಪೇದೆ ಗಂಗಣ್ಣನ ಮನೆಯಲ್ಲಿ ಕೋಳಿ ಸಾರು ಮಾಡಿದರೆ ಅಲ್ಲಿ ಕಾಣಿಸಿಕೊಂಡು ಪೇದೆಯೇ ಕೋಳಿ ಕದ್ದಿದ್ದಾನೆಂದು ಹಟ್ಟಿಯ ಜನರನ್ನು ಎತ್ತಿಕಟ್ಟುತ್ತಾನೆ. ಹಟ್ಟಿಯ ಜನರನ್ನು ಇನ್‌ಸ್ಪೆಕ್ಟರ್ ಒದ್ದು ಲಾಕಪ್ಪಿಗೆ ಹಾಕುತ್ತಾನೆ. ಊರಿನ ರೌಡಿ ಮಹಾಬಲಿಯನ್ನು ಪ್ರಚೋದಿಸಿ ಸ್ಟೇಷನ್ ಮೆಟ್ಟಿಲು ಹತ್ತಿಸುತ್ತಾನೆ. ಲಕುಮಿಯ ಮೇಲೆ ಕಣ್ಣು ಹಾಕುವ ಬೆಕುವ, ಅವಳಿಗೆ ಕಾಲು ಚೈನು ಕೊಡಿಸುವ ಆಸೆ ಹುಟ್ಟಿಸಿ ಅವಳ ಗಂಡ ಕೊಂಡಯ್ಯ ಗುಂಪು ಘರ್ಷಣೆಯಲ್ಲಿ ಘಾಸಿಯಾಗುವಂತೆ ಮಾಡುತ್ತಾನೆ. ರಾಜಕಾರಣಿಯ ಪ್ರವೇಶವಾಗಿ ಕೋಮುಗಲಭೆಯಲ್ಲಿ ಮುಗ್ಧ ಜನರು ಬಲಿಯಾಗುತ್ತಾರೆ. ಕೋಳಿ ಕಳೆದುಕೊಂಡ ಲಕುಮಿಯನ್ನು ಮೋಸದ ಬಲೆಗೆ ಬೀಳಿಸಿಕೊಂಡು ಪರಾರಿಯಾಗುತ್ತಾನೆ. ಬೆಕುವನ ಹುನ್ನಾರವನ್ನು ಅರಿತ ಲಕುಮಿ ಅವನನ್ನು ಕೊಚ್ಚಿಕೊಂದು, ಕೊಂಡಯ್ಯನನ್ನು ಮರಳಿ ಸೇರುತ್ತಾಳೆ.
ಇದು ಹೂಲಿ ಶೇಖರ್ ಬರೆದಿರುವ ನಾಟಕ ‘ಬೆಕುವ’ದ ಹೂರಣ. ಸಿಜಿಕೆ ಮಾಸದ ನೆನಪಿಗಾಗಿ ಬೆಂಗಳೂರು ಏಷಿಯನ್ ಥಿಯೇಟರ್ ತಂಡದವರು ಈ ನಾಟಕವನ್ನು ಅಭಿನಯಿಸಿದರು.
ನಾಟಕಕಾರ ಉತ್ತರ ಕರ್ನಾಟಕ ಆಡುಭಾಷೆಯನ್ನು ಸಂಭಾಷಣೆಯಲ್ಲಿ ಸಶಕ್ತವಾಗಿ ಕಟ್ಟಿಕೊಟ್ಟಿದ್ದಾರೆ. ನಿರ್ದೇಶಕ ಸಿದ್ಧರಾಮ ಕೊಪ್ಪರ್ ಈ ಕಥೆಯನ್ನು ಸಮಕಾಲೀನಗೊಳಿಸುವ ಪ್ರಯತ್ನ ಮಾಡಿದ್ದಾರೆ. ವಸ್ತುವನ್ನು ವಾಸ್ತವದ ನೆಲೆಯಲ್ಲಿ ನೋಡಿದ್ದಾರೆ. ಕೊಂಡಯ್ಯನ ಹಟ್ಟಿ, ಮಹಾಬಲಿಯ ಮನೆ, ಪೋಲೀಸ್ ಠಾಣೆ, ರಾಜಕಾರಣಿಯ ಬಿಡಾರದ ದೃಶ್ಯಗಳನ್ನು ಒಂದೇ ವೇದಿಕೆಗೆ ತರುವ ಪ್ರಯತ್ನ ಮಾಡಿರುವುದು ದೃಶ್ಯ ಬದಲಾವಣೆಗೆ ಪ್ರಯೋಜನವಾಗಬಹುದು. ಆದರೆ ದೃಶ್ಯ ಸಂಯೋಜನೆಯಲ್ಲಿ ಸ್ಪಷ್ಟತೆ ಇಲ್ಲದ ಕಾರಣದಿಂದಾಗಿ ಪ್ರೇಕ್ಷಕರಿಗೆ ಗೊಂದಲವನ್ನುಂಟು ಮಾಡುತ್ತದೆ.
ಕಥನಕ್ಕೆ ಆದ್ಯತೆ ಕೊಟ್ಟಿರುವುದರಿಂದ ವಸ್ತುವಿನ ಧ್ವನಿ ಮತ್ತು ನಿರೂಪಣೆ ಪೇಲವಗೊಂಡಿದೆ. ಸಂಘಟನೆ ಹಾಗೂ ಚಳವಳಿಯ ಬಾವುಟಗಳನ್ನು ತೀರ ವಾಚ್ಯಗೊಳಿಸಲಾಗಿದೆ. ಎಲ್ಲೆಲ್ಲೂ ಇರುವ, ನಮ್ಮ ನಡುವೆಯೂ ಇರುವ ಬೆಕುವನಂಥ ಪಾತ್ರಗಳೇ ಸಮಸ್ಯೆಗೆ ಕಾರಣವೆಂಬುದು ನಾಟಕದಲ್ಲಿ ಮತ್ತಷ್ಟು ಧ್ವನಿಪೂರ್ಣಗೊಳಿಸಬಹುದು. ಉತ್ತರ ಕರ್ನಾಟಕದ ಸಂಭಾಷಣೆಯಿದ್ದು, ಕಲಾವಿದರು ಭಾಷೆಯ ಕಸುವು ಮೈಗೂಡಿದರೆ ನಾಟಕ ಮತ್ತಷ್ಟು ಸಹನೀಯವಾಗುತ್ತದೆ.
ಲಕುಮಿ (ಸಾಹಿತ್ಯ) ಅಭಿನಯದಿಂದ ಮೆಚ್ಚುಗೆಗೆ ಪಾತ್ರರಾಗುತ್ತಾರೆ. ಕೋಳಿಯನ್ನು ಕಳೆದುಕೊಂಡಾಗಿನ ದುಃಖ, ಮುಂದಿನ ಅವಘಡಗಳಿಗೆಲ್ಲ ತಾನೇ ಕಾರಣಳೆಂಬ ಅಸಹಾಯಕತೆ, ಬೆಕುವನ ಕೈಗೊಂಬೆಯಾದ ಬಗೆಗಿನ ಅಸಹನೀಯತೆ ಮತ್ತು ಕೋಪವನ್ನು ಆಂಗಿಕ ಅಭಿನಯದಿಂದ ಸಂವಹನಗೊಳಿಸುತ್ತಾರೆ. ಲಕುಮಿಯ ಗಂಡ ಕೊಂಡಯ್ಯನಾಗಿ ಮಾದೇವ್, ಇನ್‌ಸ್ಪೆಕ್ಟರ್ ಆಗಿ ರಾಘವೇಂದ್ರ, ಪೇದೆಯಾಗಿ ಗಂಗಣ್ಣ ಪಾತ್ರಕ್ಕೆ ನ್ಯಾಯವೊದಗಿಸಿದ್ದಾರೆ. ನಾಟಕದ ಪ್ರಧಾನ ಪಾತ್ರವಾದ ಬೆಕುವ ಪಾತ್ರಧಾರಿ ಪ್ರದೀಪ್ ಹಾಸ್ಯಗಾರನಂತಾಗಿದ್ದಾರೆ. ಅಲ್ಲದೇ ಸಂಭಾಷಣೆ ಮತ್ತು ಅಭಿನಯಕ್ಕೂ ಸಂಬಂಧವೇ ಇಲ್ಲ ಎನ್ನುವಂತಾಗಿದೆ. ಸಂಗೀತದಲ್ಲಿ ದೇವರಾಜ್ ತಾಳಮೇಳವಿಲ್ಲದಂತಾಗಿದೆ. ಕೋಳಿಯನ್ನು ಕಳೆದುಕೊಂಡು ಲಕುಮಿ ದುಃಖಿತಳಾಗಿದ್ದಾಗ ಹಾಸ್ಯದ ಲಹರಿ ಹಾಡಿರುವುದೇ ಇದಕ್ಕೆ ಉದಾಹರಣೆ. ಮದನ್ ಶೆಟ್ಟಿಯವರ ಬೆಳಕು ಮತ್ತಷ್ಟು ಪ್ರಕಾಶಮಾನವಾಗಬೇಕು. ನಾಟಕಕ್ಕೆ ರಂಗಸ್ವಾಮಿಯವರದು ವಸ್ತ್ರವಿನ್ಯಾಸ, ಮಹೇಂದ್ರಕುಮಾರ್ ಅವರ ರಂಗ ಸಜ್ಜಿಕೆ ಇದೆ.
ನಾಟಕದ ದೃಶ್ಯ