ಕಳೆದ ೫೭ ವರ್ಷಗಳಿಂದ ತೆಲುಗು ನೆಲದಲ್ಲಿ ಕನ್ನಡಿಗರ ಅಸ್ಮಿತೆಗೆ ಕುರುಹಾಗಿ ನೆಲೆ ನಿಂತಿರುವ ಸಂಸ್ಥೆ ಕನ್ನಡ ನಾಟ್ಯ ರಂಗ, ಹೈದರಾಬಾದ್. ಸ್ಥಾಪಕರಾದ ಕೆರೋಡಿ ಗುಂಡೂರಾವ್ ಸ್ವತಃ ನಾಟಕಕಾರರು, ಸಂಗೀತಜ್ಞರು, ನಿರ್ದೇಶಕರೂ ಆಗಿದ್ದವರು. ಸ್ಥಳೀಯ ಕನ್ನಡ ನಟ, ನಟಿಯರನ್ನು ಒಗ್ಗೂಡಿಸಿ ಐವತ್ತಕ್ಕೂ ಮೀರಿ ನಾಟಕಗಳನ್ನು ಆಡಿಸಿ ಕನ್ನಡ ಸಾಹಿತ್ಯ, ರಂಗಭೂಮಿಯ ಅಭಿರುಚಿಯನ್ನು ಬೆಳೆಸಿದವರು. ಇವಲ್ಲದೆ, ಕರ್ನಾಟಕದಿಂದ ಸಂಗೀತ, ನೃತ್ಯ, ನಾಟಕ, ಯಕ್ಷಗಾನಗಳ ನಾಲ್ಕು ನೂರಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಿದ ಹೆಗ್ಗಳಿಕೆ ಈ ಸಂಸ್ಥೆಯದು.
ದಾಂಪತ್ಯವೆಂಬ ಕಟ್ಟಳೆಯ 'ಕಟು ಮಧುರ ಆಖ್ಯಾನ' ದ ಮೇಲೊಂದು ವಿಡಂಬನಾತ್ಮಕ ವ್ಯಾಖ್ಯಾನವಾಗಿತ್ತು ವಿಶ್ವಾಮಿತ್ರ ಮೇನಕೆ ಡಾನ್ಸ್ ಮಾಡೋದು ಏನಕೆ ನಾಟಕ. ಕಳೆದ ಸೆಪ್ಟೆಂಬರ್ 24ರಂದು ಹೈದರಾಬಾದಿನ ಕನ್ನಡ ನಾಟ್ಯ ರಂಗದಿಂದ ಆಯೋಜಿಸಲ್ಪಟ್ಟ ಈ ರಂಗ ಪ್ರಯೋಗ ಇಲ್ಲಿಯ ಕನ್ನಡ ಸಾಹಿತ್ಯ ಮತ್ತು ರಂಗರಸಿಕರ ಮನ ಗೆದ್ದಿತು. ಶೀರ್ಷಿಕೆಯಿಂದಲೇ ಕುತೂಹಲದ ಅಲೆಗಳನ್ನು ಎಬ್ಬಿಸಿದ ಜೋಗಿ ರಚನೆಯ ಈ ನಾಟಕ ಧಾರವಾಡದ ಪಪೆಟ್ ಹೌಸ್(ಗೊಂಬೆ ಮನೆ) ತಂಡದವರಿಂದ ಡಾ.ಪ್ರಕಾಶ್ ಗರುಡ ಅವರ ನಿರ್ದೇಶನದಲ್ಲಿ ಅದ್ಭುತ, ವೃತ್ತಿ ಪರ ಪ್ರದರ್ಶನವನ್ನು ನೀಡಿತು. ತಮ್ಮದೇ ಕತೆಯೇನೋ ಎನ್ನುವ ತಾದಾತ್ಮ್ಯವನ್ನು ತುಂಬಿದ ಸಭಾಂಗಣದಲ್ಲಿ ನೆರೆದ ಕನ್ನಡಿಗರಲ್ಲಿ ಮೂಡಿಸಿತು.
ಪ್ರೀತಿಸಿ ಮದುವೆಯಾದ ಆಧುನಿಕ ವಿಶ್ವಾಮಿತ್ರ (ನಿರಂಜನ ಬೆಂಗಳೂರು) ಮತ್ತು ಮೇನಕೆ (ಶಿಲ್ಪಾ ಪಾಂಡೆ) ಇಪ್ಪತ್ತು ದಶಕಗಳ ನಂತರ ಈಗ ವಿಚ್ಛೇದನದ ಅಂಚಿನಲ್ಲಿ. ಉತ್ತರ ಧ್ರುವದಿಂದ ದಕ್ಷಿಣ ಧ್ರುವಕ್ಕೆ ಬೀಸಿದ್ದ ಚುಂಬಕ ಗಾಳಿಯೀಗ ಉಸಿರು ಕಟ್ಟಿಸುತ್ತಿದೆ. ದಾಂಪತ್ಯದ ಬದ್ಧತೆಯಿಂದ ಬಿಡುಗಡೆ ಬೇಡುತ್ತಿದೆ. ಪುರಾಣದ ವಿಶ್ವಾಮಿತ್ರ, ಮೇನಕೆಯರಂತೆ ಇವರಿಗೆ ಶಕುಂತಲೆಯೆಂಬ ಮಗಳು, ಇವರೊಂದಿಗೇ ಇದ್ದಾಳೆ. ಆದರೆ ಪುರಾಣದ ವಿಶ್ವಾಮಿತ್ರ ಮೇನಕೆಯರಂತೆ ಇವರು ತಮ್ಮ ಕರ್ತವ್ಯವನ್ನು ತೊರೆದು ಹೋದವರಲ್ಲ. ಆದರೆ ಅತಿ ಸಾಮೀಪ್ಯದಿಂದ ಹುಟ್ಟುವ ಏಕತಾನತೆ, ಅಸಡ್ಡೆ, ಯಾಂತ್ರಿಕ ದಿನಚರಿ, ಭ್ರಮನಿರಸನಗಳಿಂದ ಹೊರಬರಲು ಇಬ್ಬರೂ ತವಕಿಸುತ್ತಿದ್ದಾರೆ. ಅವರ ಈ ಅರಸುವಿಕೆಯ ಮೂರ್ತರೂಪವಾಗಿ ಬರುವ ವ್ಯಕ್ತಿಯೇ "ಸಂಸಾರ ಒಡೆಯರ್" ಎಂಬ ಕಾಲ್ಪನಿಕ ಪಾತ್ರ. ವಿಚ್ಛೇದನಾ ಪ್ರಕ್ರಿಯೆಗೆ ಈ ಏಜೆಂಟನ ವಿಧಾನ- ಯಾರಿಗೂ ಸಂಶಯ ಬಾರದಂತೆ ಒಬ್ಬರನ್ನೊಬ್ಬರು ಶಾಶ್ವತವಾಗಿ ಇಲ್ಲವಾಗಿಸುವ ಪರಿಹಾರ - ಈ ಗಂಡ ಹೆಂಡಿರನ್ನು ಆತ್ಮಾವಲೋಕನಕ್ಕೆ ಹಚ್ಚುತ್ತದೆ. ತಮ್ಮದೇ ಅಹಂಕಾರ, ಭಿನ್ನಾಭಿಪ್ರಾಯ, ತಪ್ಪು ಕಲ್ಪನೆಗಳಿಂದ ಅವರ ನಡುವೆ ಬೆಳೆದ ಗೋಡೆ ಈಗ ಕುಸಿದು ಬೀಳುತ್ತದೆ. ವಿವಾಹ ಬಂಧನದ ಇನ್ನೊಂದು ಮುಖದ ದರ್ಶನವೂ ಆಗಿ ಆ ಕಟು-ಮಧುರ ಆಖ್ಯಾನದ ಸಕಾರಾತ್ಮಕ ಸ್ವೀಕೃತಿಯೊಂದಿಗೆ ನಾಟಕ ಮುಗಿಯುತ್ತದೆ. ಕೊನೆಗೆ ಗೆಲ್ಲುವುದು "ಸಮರಸವೇ ಜೀವನ" ಎಂಬ ಸಾರ್ವತ್ರಿಕ ದರ್ಶನ.
ಜೋಗಿಯವರ ಈ ನಾಟಕ ವೈಎನ್ಕೆ ಅವರ ಚುಟುಕು ಮತ್ತು ಲೇಖನ ಸಾಹಿತ್ಯದಿಂದ ಆಯ್ದ ಸಾಲುಗಳನ್ನು ಆಧರಿಸಿ ಹೆಣೆದ ಸಂಭಾಷಣಾ ಹಂದರ. ದಾಂಪತ್ಯದ ಏರು ಪೇರು, ಸಾಧಕ ಬಾಧಕಗಳ ಈ ಹಾಸುಹೊಕ್ಕಿನಲ್ಲಿ ಚಿತ್ತಾರವಾಗಿ ಮೂಡುವುದು ಬೇಂದ್ರೆ, ಕೀಟ್ಸ್, ಟಾಲ್ ಸ್ಟಾಯ್, ಡಿವಿಜಿ ಅವರುಗಳ ಕಾಣ್ಕೆಗೆ ಕನ್ನಡಿಯಾಗುವ ಅಮರ ಕವಿನುಡಿಗಳು. ನಿರ್ದೇಶಕ ಹಾಗೂ ಪ್ರೇಕ್ಷಕರಿಬ್ಬರಿಗೂ ತಮ್ಮದೇ ಓದಿನ ಹಲವು ನೆನಹುಗಳನ್ನು ಹೊಳೆಯಿಸುವ ಈ ನಾಟಕ ಒಂದೊಳ್ಳೆ ಸಾಹಿತ್ಯಿಕ ನೆನಪಿನ ಪಯಣವೂ ಹೌದು.
ವೈಎನ್ಕೆ ಅವರ ಸಾಹಿತ್ಯ ಸೃಷ್ಟಿ- ಮಿಸ್ಟರ್.ಘಾ- GHA- ಗುಂಡು ಹಾಕೋ ಆಸಾಮಿ- ಇಲ್ಲಿಯ ಪಾತ್ರ ವರ್ಗಕ್ಕೆ ಒಂದು ವಿಶಿಷ್ಟ ಸೇರಿಕೆ. ಉಮರ್ ಖಯ್ಯಾಮನಂತೆ ಜೀವನಾನುಭವದ ಸಾರ ಹೀರಿದ ಈ ಮದ್ಯಪ್ರಿಯ ತನ್ನ ಚಾಟೋಕ್ತಿಗಳಿಂದ ಇಡೀ ನಾಟಕಕ್ಕೆ ಜೀವ ತುಂಬುತ್ತಾನೆ. ಯಾವುದೇ ಸಮಸ್ಯೆಯ ಪರಿಹಾರಕ್ಕೆ ಬೇಕಾದ "ದೂರ" ವನ್ನು ಪ್ರತಿನಿಧಿಸುತ್ತ ನವಿರಾದ ಹಾಸ್ಯದಲ್ಲಿ ತತ್ತ್ವಜ್ಞಾನವನ್ನು ಸುತ್ತಿ ನಮ್ಮ ಮುಂದಿಡುವ ಮಿ. ಘಾ (ಸುನಿಲ್ ಗಿರಡ್ಡಿ) ಪ್ರಸ್ತುತ ಸಮಸ್ಯೆಗೆ ಬೇರೆಯೇ ದೃಷ್ಟಿ ಕೋನದ ಸಾಕಾರ ರೂಪ.
ಮೇಲ್ಮಟ್ಟದ ಹಾಸ್ಯದ ಮುಸುಕಿನೊಳಗೆ ಜೀವನಸತ್ಯವನ್ನು ಪ್ರಸ್ತುತ ಪಡಿಸುವ ಈ ನಾಟಕ ಸಭಿಕವರ್ಗವನ್ನು ಒಳಗೊಂಡ ಪರಿ ಅನನ್ಯ. ನಾಟಕದ ನಂತರ ಬಂದ ಸ್ಪಂದನೆಗಳ ಮಹಾಪೂರವೇ ಇದಕ್ಕೆ ಸಾಕ್ಷಿ.
ಆಧುನಿಕ ವಿಶ್ವಾಮಿತ್ರನಾಗಿ ನಿರಂಜನ ಬೆಂಗಳೂರು, ಘಾ- ಪಾತ್ರಧಾರಿ ಸುನೀಲ್ ಗಿರಡ್ಡಿ, ಮೇನಕೆಯಾಗಿ ಶಿಲ್ಪಾ ಪಾಂಡೆ, ಸಂಸಾರ ಒಡೆಯರ್ ಆಗಿ ವೀರಣ್ಣ ಹೊಸಮನಿ ಅತ್ಯಂತ ಸಹಜ ಅಭಿನಯ ನೀಡಿದರು. ಕಾರ್ ಏಜೆಂಟನ ಅತಿ ಚಿಕ್ಕ ಪಾತ್ರದಲ್ಲೂ ಮಿಂಚಿದ್ದು ಗಿರೀಶ್ ದೊಡ್ಡ ಮನಿ.
ರಾಘವ ಕಮ್ಮಾರರ ಸಂಗೀತ ಸಮಾಧಾನಕರವಾಗಿತ್ತು. ವೇಷ ಭೂಷಣ, ಬೆಳಕು- ಯೋಗೇಶ್ ಬಗಲಿ.ರಜನಿ ಗರುಡರ ಸಮರ್ಪಕ ಪ್ರಸಾದನ ಮತ್ತು ಡಾ.ಪ್ರಕಾಶ ಗರುಡರ ಸಮರ್ಥ ನಿರ್ದೇಶನದಲ್ಲಿ ಜೋಗಿಯವರ ಈ ವಿಶಿಷ್ಟ ನಾಟಕ ಹೈದರಾಬಾದಿಗರ ಮನದಲ್ಲಿ ಒಂದು ಅಪೂರ್ವ ನೆನಪಾಗಿ ಉಳಿಯುವುದರಲ್ಲಿ ಸಂದೇಹವಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.