ಮಲೆ ಮಹದೇಶ್ವರ, ಮಂಟೇಸ್ವಾಮಿ, ಜುಂಜಪ್ಪ ಸಹಿತ ಹಲವು ಸಾಂಸ್ಕೃತಿಕ ನಾಯಕರನ್ನು ಆರಾಧಿಸುವ ಪವಿತ್ರ ನೆಲವಾದ ಚಾಮರಾಜನಗರ ಜಿಲ್ಲೆಯಲ್ಲಿ ‘ಹುಲಿ’ಗಳಿಗೂ ಪೂಜ್ಯನೀಯ ಸ್ಥಾನವಿದೆ. ಮಲೆ ಮಾದಪ್ಪನ ವಾಹನವಾಗಿ, ಬುಡಕಟ್ಟು ಸಮುದಾಯಗಳ ಆರಾಧ್ಯದೈವವಾಗಿ ಶತಮಾನಗಳಿಂದಲೂ ‘ಹುಲಿ’ಯು ಪೂಜಿಸಲ್ಪಡುತ್ತಿದೆ.
ಯಳಂದೂರು, ಕೊಳ್ಳೇಗಾಲ, ಹನೂರು ತಾಲ್ಲೂಕಿನ ಹಾಡಿ–ಪೋಡುಗಳಲ್ಲಿ ನೆಲೆಸಿರುವ ಆದಿವಾಸಿಗಳು ತಮ್ಮ ಬುಡಕಟ್ಟು ಸಂಸ್ಕೃತಿಯ ಭಾಗವಾಗಿ ಇಂದಿಗೂ ಹುಲಿಯನ್ನು ಆರಾಧಿಸುತ್ತಾರೆ. ಹಾಡಿಗಳ ಸುತ್ತಮುತ್ತ ಕಾಣಸಿಗುವ ಹುಲಿಯ ವಾಹನಗಳು, ವ್ಯಾಘ್ರನ ಮೂರ್ತಿಗಳು ಹುಲಿ ಹಾಗೂ ಆದಿವಾಸಿಗಳ ನಡುವಿನ ಸಂಬಂಧಗಳ ಪ್ರತೀಕವಾಗಿ ನಿಂತಿವೆ.
ಇಂತಿಪ್ಪ ಹುಲಿರಾಯ ರಾಷ್ಟ್ರೀಯ ಪ್ರಾಣಿಯೂ ಹೌದು, ಕಾನನದ ಸರ್ವಾಂಗ ಸುಂದರ ಜೀವಿಯೂ ಹೌದು. ಕರ್ನಾಟಕದಲ್ಲಿರುವ ಐದು ಹುಲಿ ಸಂರಕ್ಷಿತ ಪ್ರದೇಶಗಳ ಪೈಕಿ ಬಂಡೀಪುರ ಹಾಗೂ ಬಿಳಿರಿಗಿ ರಂಗನಾಥಸ್ವಾಮಿ ಹುಲಿ ಸಂರಕ್ಷಿತ ಪ್ರದೇಶಗಳು ಚಾಮರಾಜನಗರ ಜಿಲ್ಲೆಯಲ್ಲಿರುವುದು ವಿಶೇಷ. ಕಾಳಿ, ಭದ್ರಾ, ನಾಗರಹೊಳೆ ಉಳಿದ ಮೂರು ಹುಲಿ ಸಂರಕ್ಷಿತ ಪ್ರದೇಶಗಳು. ರಾಜ್ಯದಲ್ಲೇ ಗರಿಷ್ಠ ಹುಲಿಗಳ ಆವಾಸಸ್ಥಾನ ಎಂಬ ಹೆಗ್ಗಳಿಕೆಯೂ ಜಿಲ್ಲೆಗಿದೆ.
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು 1973ರಲ್ಲಿ ಬಂಡೀಪುರ ಅರಣ್ಯವನ್ನು ಹಾಗೂ 2007ರಲ್ಲಿ ಬಿಳಿಗಿರಿ ರಂಗನಾಥ ಸ್ವಾಮಿ ಅರಣ್ಯವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡಿದ್ದು ನಂತರದ ದಿನಮಾನಗಳಲ್ಲಿ ಹುಲಿಗಳ ಸಂತತಿ ಗಣನೀಯವಾಗಿ ಹೆಚ್ಚುತ್ತಾ ಬಂದಿರುವುದನ್ನು ಕಾಣಬಹುದು.
ಬಂಡೀಪುರ ಅರಣ್ಯವು ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಯೊಳಗೆ ಹರಡಿಕೊಂಡಿದ್ದು 1,456 ಚ.ಕಿ.ಮೀ ವಿಸ್ತೀರ್ಣ ಹೊಂದಿದೆ. ಇಲ್ಲಿ 190ಕ್ಕೂ ಹೆಚ್ಚು ಹುಲಿಗಳು ವಾಸವಾಗಿವೆ. ಸಹಸ್ರಾರು ಸಸ್ಯಹಾರಿ, ಮಾಂಸಹಾರಿ, ಸಸ್ತನಿ, ಪಕ್ಷಿಗಳು ಸಹಿತ ಅಪಾರ ಜೀವವೈವಿಧ್ಯಗಳ ಆವಾಸಸ್ಥಾನವಾಗಿದೆ.
574 ಚ.ಕಿ.ಮೀ ವಿಸ್ತೀರ್ಣದಲ್ಲಿರುವ ಬಿಳಿಗಿರಿ ರಂಗನಾಥಸ್ವಾಮಿ ಅರಣ್ಯದೊಳಗೆ 45ಕ್ಕೂ ಹೆಚ್ಚು ಹುಲಿಗಳಿವೆ. ಬಿಳಿಗಿರಿ ಬನದ ನಿಸರ್ಗ ಹುಲಿಗಳ ವಂಶಾಭಿವೃದ್ಧಿಗೆ ಪೂರಕವಾಗಿದ್ದು ಹುಲಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಹುಲಿಗಳ ಆವಾಸ ಹೆಚ್ಚಾಗುತ್ತಿರುವುದರಿಂದ ಮಾನವ–ವನ್ಯಜೀವಿ ಸಂಘರ್ಷ, ಕಳ್ಳಬೇಟೆ ಪ್ರಕರಣಗಳು ಸಹಿತ ವನ್ಯಜೀವಿ ಅಪರಾಧ ಪ್ರಕರಣಗಳು ಗಣನೀಯವಾಗಿ ತಗ್ಗಿದೆ.
ರಕ್ಷಿತಾರಣ್ಯದಲ್ಲಿ ತೆಗೆದುಕೊಂಡಿರುವ ಕಠಿಣ ಕ್ರಮಗಳು, ಕಾಡಂಚಿನ ಜನರ ಸುಸ್ಥಿರ ಜೀವನೋಪಾಯಕ್ಕೆ ಒತ್ತು ನೀಡಿರುವುದು ಹುಲಿಗಳ ಜೀವಾವರ ಉಳಿಸುವ ದೆಸೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ ಎನ್ನುತ್ತಾರೆ ಅಧಿಕಾರಿಗಳು.
ಹನೂರು ಹಾಗೂ ಕೊಳ್ಳೆಗಾಲ ತಾಲ್ಲೂಕು ವ್ಯಾಪ್ತಿಗೊಳಪಡುವ ಮಹದೇಶ್ವರಬೆಟ್ಟ ಹಾಗೂ ಕಾವೇರಿ ವನ್ಯಜೀವಿ ಧಾಮಗಳಿಗೂ ಹುಲಿಗಳ ನೆಲೆ ವಿಸ್ತರಿಸಲಾಗಿದೆ. ಎರಡೂ ವನ್ಯಜೀವಿ ಧಾಮಗಳ ಅಲ್ಲಲ್ಲಿ ಹುಲಿಗಳ ಚಲನವಲನ ಕಂಡುಬಂದಿದ್ದು ಮುಂದಿನ ದಿನಗಳಲ್ಲಿ ಹುಲಿಗಳ ಪ್ರಮುಖ ಆವಾಸಸ್ಥಾನವಾಗುವುದರಲ್ಲಿ ಸಂಶಯಗಳಿಲ್ಲ ಎನ್ನುತ್ತಾರೆ ಅಧಿಕಾರಿಗಳು.
ಪರಿಸರ ಉಳಿಸುವಲ್ಲಿ ಪ್ರಮುಖ ಪಾತ್ರ: ಗಾಂಭೀರ್ಯದ ನಡಿಗೆ ಹಾಗೂ ರೋಮಾಂಚನಗೊಳಿಸುವ ನೋಟದಿಂದಲೇ ಗಮನ ಸೆಳೆಯುವ ಹುಲಿಯು ಪರಿಸರ ವ್ಯವಸ್ಥೆಯಲ್ಲಿ ಮಹತ್ವದ ಸ್ಥಾನ ಪಡೆದುಕೊಂಡಿದೆ. ಮನುಷ್ಯನ ಅಳಿವು ಮತ್ತು ಉಳಿವಿನ ದೃಷ್ಟಿಯಿಂದಲೂ ಹುಲಿಗಳು ಹೆಚ್ಚು ಮುಖ್ಯವಾಗುತ್ತವೆ. ಕಾಡಿನೊಳಗೆ ಅಗ್ರ ಪರಭಕ್ಷಕ ಪ್ರಾಣಿಯಾಗಿರುವ ಹುಲಿಯು ಆಹಾರ ಸರಪಳಿಯನ್ನು ಸಮತೋಲನವಾಗಿರಿಸಲು ಪ್ರಮುಖ ಪಾತ್ರ ವಹಿಸುತ್ತವೆ.
ಕಾಡಿನಲ್ಲಿ ಸಸ್ಯಹಾರಿ ಪ್ರಾಣಿಗಳ ಸಂಖ್ಯೆ ಮಿತಿಮೀರಿ ಮೇವಿನ ಕೊರತೆಯಾಗಿ ಆಹಾರ ಸರಪಳಿಯ ಮೇಲೆ ಗಂಭೀರ ಪರಿಣಾಮ ಬೀರುವ ಆತಂಕ ಹೆಚ್ಚಾಗಿರುತ್ತದೆ. ಹುಲಿಗಳ ಆವಾಸವಿದ್ದರೆ ಕಾಡಿನೊಳಗೆ ಆಹಾರ ಸರಪಳಿ ಏರುಪೇರಾಗುವ ಸಾಧ್ಯತೆಗಳು ಕಡಿಮೆ. ಜಿಂಕೆ, ಕಡವೆ, ಕಾಡೆಮ್ಮೆಗಳನ್ನು ಬೇಟೆಯಾಡುವ ಮೂಲಕ ಕಾಡಿನೊಳಗೆ ಸಸ್ಯಹಾರಿ ಪ್ರಾಣಿಗಳ ಸಂತತಿ ಮಿತಿ ಮೀರದಂತೆ, ಆಹಾರ ಸಮಸ್ಯೆ ಉಲ್ಬಣಿಸದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಹುಲಿಗಳು ನಿಭಾಯಿಸುತ್ತದೆ.
ಸಸ್ಯಹಾರಿ ಪ್ರಾಣಿಗಳ ಸಂಖ್ಯೆಗೆ ಕಡಿವಾಣ ಹಾಕಿ ಮಣ್ಣಿನ ಸವಕಳಿ ಹೆಚ್ಚಾಗದಂತೆ, ಮಾನವ–ಪ್ರಾಣಿ ಸಂಘರ್ಷವೂ ಮಿತಿಮೀರದಂತೆ ನೋಡಿಕೊಳ್ಳುತ್ತವೆ ಎನ್ನುತ್ತಾರೆ ವನ್ಯಜೀವಿ ತಜ್ಞರು.
ಅಂತರರಾಷ್ಟ್ರೀಯ ಹುಲಿ ದಿನವನ್ನು 2010 ಜುಲೈ 29ರಿಂದ ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಜಾಗತಿಕವಾಗಿ ಅಳಿವಿನಂಚಿನಲ್ಲಿರುವ ಹುಲಿ ಸಂತತಿಯನ್ನು ಉಳಿಸುವುದು ಹುಲಿದಿನದ ಉದ್ದೇಶ. ಮೊದಲು ರಷ್ಯಾದ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ಹುಲಿ ಶೃಂಗ ಸಭೆ ನಡೆಯಿತು. 13 ದೇಶಗಳು ಹುಲಿಗಳ ರಕ್ಷಣೆಯ ಅಗತ್ಯದ ಬಗ್ಗೆ ಉಪಕ್ರಮಗಳನ್ನು ಆರಂಭಿಸಿದವು. ಅದರ ಫಲವಾಗಿ ಇಂದು ವನ್ಯಜೀವಿ ಕಾಯ್ದೆಗಳು ರೂಪುಗೊಂಡಿದ್ದು ಹುಲಿ ಬೇಟೆ ಕಳ್ಳ ಸಾಗಣೆ ಮೂಳೆ ಕೂದಲು ಚರ್ಮ ಮತ್ತಿತರ ಭಾಗಗಳನ್ನು ಹೊಂದುವುದು ಅಪರಾಧವಾಗಿ ಪರಿಗಣಿಸಲಾಗಿದೆ.
ರಾಜ್ಯದಲ್ಲೇ ಅತಿ ಹೆಚ್ಚು ವಿಸ್ತೀರ್ಣ ಹೊಂದಿರುವ ವನ್ಯಧಾಮ ಎಂಬ ಹೆಗ್ಗಳಿಕೆಗೆ ಭಾಜನವಾಗಿರುವ ಕಾವೇರಿ ಮತ್ತು ಮಲೆ ಮಹದೇಶ್ವರ ವನ್ಯಜೀವಿ ಧಾಮಗಳು ಪ್ರಕೃತಿ ಪ್ರಿಯರ ಕಣ್ಮನ ಸೆಳೆಯುತ್ತಿವೆ. ಕಾವೇರಿ ವನ್ಯಧಾಮ ವ್ಯಾಪ್ತಿಯ ಹನೂರು ಕೌದಳ್ಳಿ ಕೊತ್ತನೂರು ವನ್ಯಜೀವಿ ವಲಯ ಹಾಗೂ ಮಲೆಮಹದೇಶ್ವರ ವನ್ಯಧಾಮದ ಕೊಳ್ಳೇಗಾಲ ಹನೂರು ರಾಮಾಪುರ ಹೂಗ್ಯಂ ಹಾಗೂ ಪಿ.ಜಿ ಪಾಳ್ಯ ವನ್ಯಜೀವಿ ವಲಯಗಳು ಹಸಿರುಹೊದ್ದು ಕಂಗೊಳಿಸುತ್ತಿವೆ. ಈ ಭಾಗಗಳಲ್ಲಿ ಸಫಾರಿ ಆರಂಭವಾಗಿದ್ದು ಪ್ರವಾಸಿಗರಿಗೆ ಹುಲಿ ಸಹಿತ ಇತರೆ ಪ್ರಾಣಿಗಳ ದರ್ಶನವಾಗುತ್ತಿದ್ದು ಪುಳಕಿತರಾಗುತ್ತಿದ್ದಾರೆ.
ಜಿಲ್ಲೆಯ ಅರಣ್ಯದೊಳಗೆ ಹೊನ್ನೆ ಬೀಟೆ ತಾರೆ ಅಳಲೆ ಮತ್ರಿ ಹುನಾಲು ಯತ್ಯಾಗ ಹತ್ತಿ ಬಸರಿ ಹೆಬ್ಬಲಸು ಹಾಲವಾಣ ಕೆಂಪು ಬೂರುಗ ಕಂಚುವಾಳ ಮರಳಗನ್ನು ಕಾಣಬಹುದು. ಹುಲಿ ಚಿರತೆ ಕಾಟಿ ಆನೆ ಬರ್ಕ ಕಾಡುಹಂದಿ ಜಿಂಕೆ ಕಡವೆ ಕರಡಿ ಕಾಡುನಾಯಿ ಕಾಡು ಬೆಕ್ಕು ತಾಳೆ ಪುನುಗು ಬೆಕ್ಕು ಕೋತಿ ಮುಸುವಗಳು ವಾಸವಾಗಿವೆ. ಮಾಲೆಗಿಳಿ ಪಂಚವರ್ಣದ ಗಿಳಿ ನೀಲಿ ರೆಕ್ಕೆಯ ಗಿಳಿ ಬಾರ್ಬೆಟ್ ಹಸಿರು ಪಾರಿವಾಳ ಕಳ್ಳಹಕ್ಕಿ ಕತ್ತರಿಬಾಲದ ಹಕ್ಕಿ ಕಾಜಾಣ ಮೈನಾ ಮರಕುಟಿಗ ಗಿಡುಗ ಸರ್ಪಹದ್ದು ರಣಹದ್ದು ಸೇರಿದಂತೆ 200ಕ್ಕೂ ಹೆಚ್ಚು ಪ್ರಬೇಧಗಳ ಪಕ್ಷಿಗಳು ನೆಲೆಸಿವೆ. ಹೆಬ್ಬಾವು ಕೇರೆ ಹಾವು ನಾಗರಹಾವು ಸಹಿತ ಹಲವು ಜಾತಿಯ ಸರಿಸೃಪಗಳನ್ನು ಕಾಣಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.