
ಯುವಕರೊಂದಿಗೆ ಸುಂದರ್ ಲಾಲ್ ಬಹುಗುಣ
ಅದಾಗಿ ಐವತ್ತೆರಡು ವರ್ಷಗಳಾದವು. ಬಹುಶಃ ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಇಂಥದ್ದೊಂದು ಚಳವಳಿ ನಡೆದದ್ದು ಪ್ರಪಂಚದ ಇತಿಹಾಸದಲ್ಲಿಯೇ ಮೊದಲೇನೊ. ಹಿಮಾಲಯದ ತಪ್ಪಲಿನಲ್ಲಿ ಹುಟ್ಟಿಕೊಂಡ ಈ ಚಳವಳಿ ‘ಎಕಾಲಜಿ ಈಸ್ ಪರ್ಮನೆಂಟ್ ಎಕಾನಮಿ’ ಎಂಬ ಘೋಷ ವಾಕ್ಯದೊಂದಿಗೆ ಇಡೀ ವಿಶ್ವವನ್ನೇ ವ್ಯಾಪಿಸಿ ಬಿಟ್ಟಿತು. ಸ್ವೀಡನ್, ಜರ್ಮನಿ, ನೆದರ್‌ಲೆಂಡ್, ಸ್ವಿಟ್ಜರ್‌ಲೆಂಡ್, ಫ್ರಾನ್ಸ್, ಇಂಗ್ಲೆಂಡ್ ಅಷ್ಟೇಕೆ ಸ್ವತಃ ಅಮೆರಿಕನ್ನರು ಸಹ ಈ ಚಳವಳಿುಮದ ಪ್ರಭಾವಿತರಾದರು. ಆ ದೇಶಗಳ ಪ್ರತಿನಿಧಿಗಳು ಭಾರತಕ್ಕೆ ಬಂದು ಚಳವಳಿಯ ಪ್ರದೇಶವನ್ನು ಸಂದರ್ಶಿಸಿ ಹೋದರು. ಅದಾಗಲೇ ಪರಿಸರಕ್ಕಾಗಿ ನೂರಾರು ಮಂದಿ ಈ ನೆಲದಲ್ಲಿ ಪ್ರಾಣ ತೆತ್ತಿದ್ದರು. ಅದೇ ಪ್ರೇರಣೆಯೊಂದಿಗೆ ದೇಶ ವಿದೇಶಗಳಲ್ಲಿ ಚಳವಳಿ ಕಾವು ಪಡಕೊಂಡು ವಿಶ್ವಸಂಸ್ಥೆಯ ಮಟ್ಟಕ್ಕೆ ಮಾತು ಬೆಳೆಯಿತು.
ಅದು ಚಿಪ್ಕೊ, ಸುಂದರಲಾಲ ಬಹುಗುಣ ಎಂಬ ಚೇತೋಹಾರಿ ಶಕ್ತಿ ಆರಂಭಿಸಿದ್ದ ವಿನೂತನ ಚಳವಳಿ. ಐದು ದಶಕಗಳ ಹಿಂದಿನ ಮಾತು. 1973 ಮಾರ್ಚ್ 27ರ ದಿನ. ಹಿಮಾಲಯ ಕಣಿವೆಯ ಹಳ್ಳಿಯೊಂದರಲ್ಲಿ ಮುಗ್ಧ ಮಂದಿಗಳಷ್ಟು ಮರಗಳನ್ನು ಉರುಳಿಸಗೊಡದೇ ಹಠಕ್ಕೆ ಬಿದ್ದು ಕುಳಿತುಬಿಟ್ಟಿದ್ದರು. ಆಧುನಿಕ ಭಾರತದ ಇತಿಹಾಸದಲ್ಲಿ ಚಳವಳಿ ಎಂಬುದಕ್ಕೆ ಹೊಸತೊಂದು ವ್ಯಾಖ್ಯಾನ ಹುಟ್ಟಿಕೊಂಡದ್ದೇ ಚಿಪ್ಕೊದಿಂದ ಎಂದರೆ ತಪ್ಪಿಲ್ಲ.
ಸ್ವಾತಂತ್ರ ನಂತರದ ದಿನಗಳಲ್ಲಿ ಆರಂಭಗೊಂಡ ಕೈಗಾರಿಕೆಗಳ ಸ್ಥಾಪನೆಯ ಸರಣಿ, ಅಭಿವೃದ್ಧಿಯ ಹೆಸರಿನಲ್ಲಿ ಶುರುವಿಟ್ಟುಕೊಂಡ ಕಾಡುಗಳ ನಾಶಕ್ಕೆ ತೆರಬೇಕಾಗಿ ಬಂದ ಬೆಲೆಯ ಅರಿವು ಆಳುವವರಿಗೆ ಆಗಲೇ ಇಲ್ಲ. ಹಿಂದಿನ ತಲೆಮಾರಿನಿಂದ ಭಾರತಕ್ಕೆ ಬಳುವಳಿಯಾಗಿ ಬಂದ ಮೂಲ ಬಂಡವಾಳವೆಂದರೇ ಪ್ರಾಕೃತಿಕ ಸಂಪತ್ತು ಅದನ್ನೇ ಗುರಿಯಾಗಿಸಿಕೊಂಡು ಅಭಿವೃದ್ಧಿಯ ಭ್ರಮೆಯನ್ನು ಬಿತ್ತಿದ್ದರು ಬ್ರಿಟಿಷರು. ಈ ನೆಲದಲ್ಲಿ ನಿಜವಾದ ಅಭಿವೃದ್ಧಿ ಎಂದರೆ ಸುತ್ತಲಿನ ಎಲ್ಲ ಜೀವ ಸಂಕುಲಗಳ ಹಿತರಕ್ಷಣೆಯಾಗಿತ್ತು. ಅವುಗಳ ಒಳಿತಿಗಾಗಿ ಹಮ್ಮಿಕೊಳ್ಳುವ ಕಾರ್ಯಕ್ರಮ ಅಭಿವೃದ್ಧಿ ಎನಿಸಬೇಕಾಗಿತ್ತು. ಆದರೆ ಸ್ವಾತಂತ್ರ್ಯಾ ನಂತರದಲ್ಲೂ ಹಾಗಾಗದೇ ಕೆಲವೇ ಬಂಡವಾಳಶಾಹಿಗಳ ಹಿತಾಸಕ್ತಿ, ಸ್ವಾರ್ಥಕ್ಕಾಗಿ ಅಭಿವೃದ್ಧಿ ಹೆಸರಿನಲ್ಲಿ ನಿಸರ್ಗ ಸಂಪತ್ತಿನ ಲೂಟಿ ಆರಂಭವಾಯಿತು.
ಅರಣ್ಯ ನಾಶದ ಜತೆ ಜತೆಗೇ ನಡೆದದ್ದು ನಗರಗಳ ಬೆಳವಣಿಗೆ. ಕೇಗಾರಿಕೆಗಳ ಹೆಚ್ಚಳ. ವಾತಾವರಣದ ಬಿಸಿಯನ್ನು ಏರಿಸಿ ನಿಂತ ಇಂಥ ಆಧುನಿಕ ಅಪಸವ್ಯ ಹಿಮಾಲಯ ತಪ್ಪಲನ್ನೂ ನೇರವಾಗಿ ತಟ್ಟಿತ್ತು. ಅಲ್ಲಿಯ ಹಳ್ಳಿಯೊಂದರಲ್ಲಿಯೇ ಹುಟ್ಟಿ ಬೆಳೆದ(ಜನವರಿ 9, 1927) ಸುಂದರ್‌ಲಾಲ್ ಬಹುಗುಣ ಅವರು ಗಾಂಧಿ ತತ್ವದೊಂದಿಗೇ ಜೀವನ ರೂಪಿಸಿಕೊಂಡವರು. ವಿದ್ಯಾಭ್ಯಾಸದ ನಂತರ ನಡುವೆ ರಾಜಕೀಯ ಪ್ರವೇಶಿಸಿದ್ದವರು. 1956ರಲ್ಲಿ ರಾಜಕೀಯ ಬಿಟ್ಟು ಪತ್ನಿ ವಿಮಲರೊಂದಿಗೆ ತಮ್ಮದೇ ಆಶ್ರಮ ಸ್ಥಾಪಿಸಿಕೊಂಡಿದ್ದವರು. ಆಶ್ರಮದಲ್ಲಿ ಬಡವರೊಟ್ಟಿಗೆ ಬದುಕುತ್ತ ಈ ದೇಶದ ‘ಬಡತನ’ಕ್ಕೆ ಕಾರಣ ಹುಡುಕುತ್ತ ಹೊರಟಿದ್ದವರು. ಅದೇ ಆಶ್ರಮದಲ್ಲೇ ಜ್ಞಾನೋದಯ ಹೊಂದಿದ್ದವರು. ಅರಣ್ಯ ನಾಶ, ಮಣ್ಣಿನ ಸವಕಳಿ, ನೀರಿನ ಕೊರತೆ ಇವೇ ಈ ದೇಶದ ಬಡತನಕ್ಕೆ ಕಾರಣ ಎಂಬುದು ಅರಿವಾಗುತ್ತಿದ್ದಂತೆಯೇ ‘ಪರಿಸರ ಸಂರಕ್ಷಣೆ’ ಹೋರಾಟ ಆರಂಭಿಸಿದ್ದವರು. ನಮ್ಮ ನೆಲ, ಜಲ, ಕಾಡಿನ ಸಂರಕ್ಷಣೆಯಾಗದಿದ್ದರೆ ಮುಂದೊಂದು ದಿನ ಇಡೀ ಭೂಮಿಯೇ ಮರುಭೂಮಿಯ ಗೋಲ ಆದೀತು ಎಂಬ ಅರಿವಿನೊಂದಿಗೆ ಮರಗಳ ನಡುವೆ ಚಳವಳಿಯನ್ನು ಸಂಘಟಿಸಿದವರು.
ವಿಶೇಷ ಏನು ಗೊತ್ತಾ, ಇಂಥದ್ದೊಂದು ಬೃಹತ್ ಆಂದೋಲನಕ್ಕೆ ಅವರಿಗೆ ಪ್ರೇರಣೆಯೊದಗಿಸಿದ್ದು ಬ್ರಿಟಿಷ್ ಕಾನೂನು. 1930ರಲ್ಲಿ ಅರಣ್ಯವನ್ನು ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಲು ಅನುಮತಿಯಿತ್ತು ಆದೇಶ ಹೊರಡಿಸಲಾಯಿತು. ದುರಂತವೆಂದರೆ ಅದರ ವಿರುದ್ಧ ತಿರುಗಿ ಬಿದ್ದವರನ್ನು ನಿರ್ದಾಕ್ಷಿಣ್ಯವಾಗಿ ಹತ್ಯೆ ಮಾಡಲಾಯಿತು. 17 ಮಂದಿ ಈ ಹೋರಾಟದಲ್ಲಿ ಪ್ರಾಣತ್ಯಾಗ ಮಾಡಿದರು. ಇದೇ ಮುಂದೆ ಚಿಪ್ಕೊಕ್ಕೆ ಪ್ರೇರಣೆಯಿತು.
ಬಹುಗುಣರು ನಂಬಿದ್ದ ‘ಗಾಂಧಿ ತತ್ವ’ದ ಪ್ರಕಾರ ಶಾಂತಿಯುತವಾಗಿ ಹೋರಾಟ ನಡೆಯಬೇಕು. ಅದಕ್ಕಾಗಿ ಬಹುಗುಣ ಅವರು ‘ಪಾದಯಾತ್ರೆ’ಯನ್ನೇ ಹೋರಾಟದ ಅಸ್ತ್ರವಾಗಿಸಿಕೊಳ್ಳುತ್ತ್ದಿದರು. ಪಾದಯಾತ್ರೆಯಲ್ಲಿ ಆಯಾ ಪ್ರದೇಶದ ಜನರನ್ನು ನೇರ ಸಂಪರ್ಕಿಸಬಹುದು. ಭಾವನೆಗಳ ಮೂಲಕ ಅವರ ಮನಸ್ಸು ತಟ್ಟಿ, ಹೃದಯ ಸ್ಪರ್ಶಿಸಬಹುದು. ಜನರ ನಾಡಿ ಮಿಡಿತ ಅರಿತು, ಪರಿಸರ ಶಿಕ್ಷಣ ನೀಡಿ, ಮುಂದಿನ ಹೋರಾಟಕ್ಕೆ ಸ್ಥಳೀಯರನ್ನೇ ಸ್ವಯಂ ಸೇವಕರನ್ನಾಗಿಬಹುದು’ ಎನ್ನುವುದು ಅವರ ಅಭಿಪ್ರಾಯವಾಗಿತ್ತು.
ಅಪ್ಪಿಕೋ ಚಳವಳಿಗೆ 25 ವರ್ಷ ತುಂಬಿದ ವರ್ಷವಾದ 2008ರ ಸೆ.8ಅನ್ನು ಸಹ್ಯಾದ್ರಿ ದಿನವನ್ನಾಗಿ ಆಚರಿಸಿದ ಸಂದರ್ಭದಲ್ಲಿ ಶಿರಸಿ ತಾಲ್ಲೂಕಿನ ಸಾಲ್ಕಣಿ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಚಿಪ್ಕೊ ಚಳವಳಿ ನೇತಾರ ಸುಂದರಲಾಲ ಬಹುಗುಣ ಅವರು ಮಕ್ಕಳಿಗೆ ಪರಿಸರ ಪಾಠ ಮಾಡಿದ್ದರು
ಅರಣ್ಯದಲ್ಲಿ ಮರ ಕಡಿಯುವುದಕ್ಕೆ ನಿರ್ಬಂಧ ಹೇರುವುದಕ್ಕೆ ಒತ್ತಾಯಿಸಿ 1981ರಿಂದ 83ರವರೆಗೆ ಹಿಮಾಲಯ ವ್ಯಾಪ್ತಿಯ ಏಳು ರಾಜ್ಯಗಳಲ್ಲಿ ಐದು ಸಾವಿರ ಕಿಲೋ ಮೀಟರ್ ಪಾದಯಾತ್ರೆ ಮಾಡಿದರು. ಹಳ್ಳಿ-ಹಳ್ಳಿ ಸುತ್ತುತ್ತಾ ಜನರ ಸಹಕಾರ ಅರಸುತ್ತಾ, ಚಳವಳಿ ಗಟ್ಟಿಗೊಳಿಸಿದ ಅವರು, ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರಿಗೆ ಮನವರಿಕೆ ಮಾಡಿಕೊಟ್ಟರು. 1980ರಲ್ಲಿ ‘ಮರ ಕತ್ತರಿಸುವುದಕ್ಕೆ’ 15 ವರ್ಷಗಳ ಕಾಲ ನಿಷೇಧ ಹೇರಲಾಯಿತು. ಕೊನೆಗೂ ಹೋರಾಟಕ್ಕೆ ಜಯ ಸಿಕ್ಕಿತ್ತು.
ಈ ಪಾದಯಾತ್ರೆ, ಚಳವಳಿ, ಅಲ್ಲಿನ ಚಿಪ್ಕೋ ಚಳವಳಿಗಳೇ 1982ರಲ್ಲಿ ಕರ್ನಾಟಕದಲ್ಲಿ ‘ಅಪ್ಪಿಕೊ’ ಹೆಸರಿನ ಚಳವಳಿ ಆರಂಭಕ್ಕೆ ಸ್ಫೂರ್ತಿಯಾಯಿತು. ಶಿರಸಿಯ ಪಾಂಡುರಂಗ ಹೆಗಡೆ ಮತ್ತಿತರ ಪರಿಸರಾಸಕ್ತರ ನೇತೃತ್ವದಲ್ಲಿ ಉತ್ತರ ಕನ್ನಡದ ಪಶ್ಚಿಮ ಘಟ್ಟದಲ್ಲಿ ಆರಂಭವಾದ ಈ ಚಳವಳಿಯಲ್ಲಿ ಸುಂದರ್‌ಲಾಲ್ ಬಹುಗುಣ ಖುದ್ಧಾಗಿ ಪಾಲ್ಗೊಂಡ್ದಿದರು. ಅಂದಿನಿಂದ ಆರಂಭವಾದ ಕರ್ನಾಟಕದ ನಂಟು ಅವರ ಕೊನೆಯುಸಿರಿನವರೆಗೂ ನಿರಂತರವಾಗಿತ್ತು. ಕನ್ನಡದ ನೆಲದಲ್ಲಿ ಅವರು ಬಿತ್ತಿ ಹೋದ ಆದರ್ಶ ಇಂದಿಗೂ ಅಲ್ಲಲ್ಲಿ ಜೀವಂತವಾಗಿದೆ.
ರಾಜ್ಯದಲ್ಲಿ ಪರಿಸರ ಸಮಸ್ಯೆಗಳ ವಿರುದ್ಧ ಹೋರಾಟ ನಡೆದಾಗಲೆಲ್ಲ ಬಹುಗುಣ ಪ್ರತ್ಯಕ್ಷರಾಗಿದ್ದರು. 1982ರಲ್ಲಿ ನಡೆದ ಅಪ್ಪಿಕೊ ಚಳವಳಿ, 1983ರ ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರ ನೇತೃತ್ವದ ರೈತ ಸಂಘ ನಡೆಸಿದ ‘ನೀಲಿಗಿರಿ ನಾಟಿ’ ವಿರುದ್ಧದ ಹೋರಾಟ, ದಕ್ಷಿಣ ಕನ್ನಡದ್ಲಲಿ ಉದ್ದವಿಸಿದ್ದ ಮಂಗನ ಕಾುಲೆ ವಿರುದ್ಧ ಜಾಗೃತಿ, 1992ಲ್ಲಿ ಕೊಡಗಿನ ಶೋಲಾ ಅರಣ್ಯದಲ್ಲಿ ‘ಟೀ ಪ್ಲಾಂಟೇಷನ್ ನಾಟಿ’ ವಿರುದ್ಧ ಆಂದೋಲನ, 2003ರಲ್ಲಿ ಕಾರವಾರದಲ್ಲಿ ನಡೆದ ಕಾಳಿ ಪಾದಯಾತ್ರೆಗೆ ಚಾಲನೆ, 2005ರಲ್ಲಿ ಶರಾವತಿ ಅವಲೋಕನ ಪಾದಯಾತ್ರೆ... ಹೀಗೆ ಪ್ರತಿ ಪರಿಸರ ಪರ ಹೋರಾಟದಲ್ಲೂ ಅವರು ಪಾಲ್ಗೊಂಡ್ದಿದರು. ತೀರಾ ಇತ್ತೀಚೆಗೆ ಹಾಸನ ಜಿಲ್ಲೆಯಲ್ಲಿ ಗುಂಡ್ಯಾ ಜಲ ವಿದ್ಯುತ್ ಯೋಜನೆ ವಿರೋಧದ ಹೋರಾಟಕ್ಕೂ ಕೈ ಜೋಡಿದ ಬಹುಗುಣ ಅವರು ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ‘ಅರಣ್ಯ ನಾಶ, ನೀಲಿಗಿರಿ ನಾಟಿ’ ವಿರುದ್ಧ ಧ್ವನಿ ಎತ್ತಿ, ರಾಜ್ಯದ ಅರಣ್ಯ ನೀತಿ ಪರಿಷ್ಕರಣೆಗೆ ಕಾರಣರಾದವರು.
ಗುಂಡ್ಯಾ ಹೋರಾಟದ ಸಂದರ್ಭದಲ್ಲಿ ಖುದ್ದು ಮಾತಿಗೆ ಸಿಕ್ಕಿದ್ದ ಬಹುಗುಣರು ಪರಿಸರದ ಆದರ್ಶವನ್ನು ನಾಲ್ಕೇ ಸಾಲಿನಲ್ಲಿ ಹಂಚಿಕೊಂಡಿದ್ದು ಇಂದಿಗೂ ಮನದಲ್ಲಿ ಹಸಿಯಾಗಿದೆ. ’ಮುನ್ನೂರು ದಿನ. ನಾಲ್ಕೂವರೆ ಸಾವಿರ ಕಿಲೋ ಮೀಟರ್. ಏಳು ರಾಜ್ಯಗಳಲ್ಲಿ ಪರಿಸರ ಸಂರಕ್ಷಣಾ ಪಾದಯಾತ್ರೆ ಮಾಡಿ ಜನರನ್ನು ಸಂಘಟಿಸ್ದಿದೇನೆ. ಅಂಥ ಚಳವಳಿ ಮತ್ತೆ ಎಲ್ಲೆಡೆ ಆರಂಭವಾಗಬೇಕು. ಅದು ಜನರಲ್ಲಿ ಪರಿಸರದ ಅರಿವು ಮೂಡಿಸುವ ಜನಾಂದೋಲನವಾಗಬೇಕು. ಅದು ನಿರಂತರವಾಗಬೇಕು. ಈ ಹೋರಾಟಕ್ಕೆ ಯುವಕರೇ ನಾಯಕತ್ವ ವಹಿಸಿಕೊಳ್ಳಬೇಕು.’ ಬಹುಶಃ, ಇವತ್ತಿನ ಅರಾವಳಿ ಬೆಟ್ಟ ಸಾಲಿಗೆ ಮಾರಕವಾಗುವಂಥ ಕೇಂದ್ರ ಸರ್ಕಾರದ ವ್ಯಾಖ್ಯಾನ, ನಮ್ಮದೇ ಶರಾವತಿ ಕೊಳ್ಳದ ಯೋಜನೆಗಳ ಪಸವ್ಯಗಳ ಸನ್ನಿವೇಶದಲ್ಲಿ ಬಹುಗುಣರ ಈ ಮಾತುಗಳು ಹೆಚ್ಚು ಪ್ರಸ್ತತ ಎನಿಸುತ್ತವೆ.
ಆಗ ಅವರು ಹಂಚಿಕೊಂಡಿದ್ದ ಕೆಲ ನುಡಿಮುತ್ತುಗಳನ್ನು ನೆನೆಯುವುದಾದರೆ...
ಚಿಪ್ಕೋ ಚಳವಳಿಯಲ್ಲಿದ್ದವರಲ್ಲಿ ಬಹುತೇಕರು ರೈತರು. ರಾಜ್ಯದ ‘ಅಪ್ಪಿಕೋ’ ಚಳವಳಿಯಲ್ಲೂ ರೈತರಿದ್ದರು. ಇವರೂ ರೈತರಲ್ಲವೇ(ಪಾಂಡುರಂಗ ಹೆಗಡೆಯವರನ್ನು ತೋರಿಸುತ್ತಾ)? ಎಲ್ಲರೂ ಜತೆಯಾದರೆ ಹೋರಾಟ ಬಲಗೊಳ್ಳುತ್ತದೆ. ಹಾಗೆ ಬಲಗೊಳ್ಳಬೇಕಾದರೆ ಕೃಷಿಕರಲ್ಲೂ ಪರಿಸರ ಪ್ರಜ್ಞೆ ಮೂಡಬೇಕು. ಆ ಕೆಲಸವನ್ನು ಪರಿಸರ ಹೋರಾಟಗಾರರೇ ಮಾಡಬೇಕು. ಪರಿಸರ – ಕೃಷಿ, ತಾಯಿ-ಮಕ್ಕಳ್ದಿದಂತೆ.
ಇತ್ತೀಚೆಗೆ ಹಳ್ಳಿಗಳಲ್ಲಿ ಪರಿಸರ ಕಾಳಜಿ ಕುಂಠಿತವಾಗಿದೆ. ಗಣಿಗಾರಿಕೆ, ರಿಯಲ್ ಎಸ್ಟೇಟ್, ಭೂಮಾಫಿಯಾಗಳಿಂದಾಗಿ ಹಳ್ಳಿ ಬರಿದಾಗುತ್ತಿದೆ. ಹಳ್ಳಿಗಳಲ್ಲಿ ಪರಿಸರ ಜಾಗೃತಿ ಮೂಡಿಸುವ ಬಗೆ ಹೇಗೆ?
ಹಳ್ಳಿಗಳಲ್ಲಿರುವ ಹಿರಿಯರಿಂದಲೇ ಜನರಿಗೆ ಪರಿಸರ ಪಾಠ ಹೇಳಿಸಿ. ಇಲಿ ಸೇರಿರುವ ನಿಮ್ಮಂಥ (ನಮ್ಮೆಡೆಗೆ ತೋರಿಸುತ್ತ) ಪರಿಸರ ಆಸಕ್ತರು, ಪತ್ರಕರ್ತರೂ ಹಳ್ಳಿಗಳಲ್ಲಿ ವಾಸಿಸಲು ನಿರ್ಧರಿಸಿ. ಸಮುದಾಯ ಸಂಘಟನೆ ಮಾಡಿ. ಆಯಾ ಊರಿನ ಪರಿಸರ ಸಂರಕ್ಷಣೆಗೆ ಅಲ್ಲಿಯವರೇ ಕಾವಲುಗಾರರಾಗಲಿ.
ಯೋಜನೆ ಮತ್ತು ಅಭಿವೃದ್ಧಿ ವ್ಯವಸ್ಥೆಯಲ್ಲಿ ವಿಕೇಂದ್ರೀಕರಣವಾಗಬೇಕು. ಅದು ಹಳ್ಳಿಗಳಿಗೆ, ಬ್ಲಾಕ್ ಮಟ್ಟಕ್ಕೆ ವರ್ಗಾವಣೆಯಾಗಬೇಕು. ಪರಿಸರಕ್ಕೆ ಹಾನಿಯಾಗದಂತಹ ‘ಪರಿಸರಪೂರಕ, ಸುಸ್ಥಿರ ಅಭಿವೃದ್ಧಿ’ ಜಾರಿಗೆ ಬರಬೇಕು. ಶಾಂತಿ, ಸಂತೋಷ ಹಾಗೂ ಸಂತುಷ್ಟಿ ನೆಲಸುವಂತೆ ಮಾಡುವುದೇ ‘ಸುಸ್ಥಿರ ಅಭಿವೃದ್ಧಿ’.
ಎಲ್ಲದಕ್ಕೂ ಸರ್ಕಾರವನ್ನು ಆಶ್ರಯಿಸಬೇಡಿ. ಅದೊಂದು ಹೃದಯವಿಲ್ಲದ ಯಂತ್ರದಂತೆ. ಸರ್ಕಾರ ಎಂದೂ ಜನರ ಸಮಸ್ಯೆಗಳನ್ನು ಪರಿಹರಿಸುವುದಿಲ್ಲ. ಹಾಗಾಗಿ ಸರ್ಕಾರವನ್ನು ಮರೆತುಬಿಡಿ. ಅಭಿವೃದ್ಧಿ ವಿಷಯದಲ್ಲಿ ಪಾಶ್ಚಿಮಾತ್ಯರ ವಿಧಾನಗಳು ನಮಗೆ ಮಾದರಿಯಲ್ಲ. ಅವರು ಅಭಿವೃದ್ಧಿ ಹೆಸರಲ್ಲಿ ಬಡವರನ್ನು ಸುಲಿಗೆ ಮಾಡುತ್ತಾರೆ. ನಾವು ಅದನ್ನು ಅನುಸರಿಸಿದರೆ ನಮ್ಮ ದೇಶದ ಬಡವರನ್ನೂ ಸುಲಿಗೆ ಮಾಡಬೇಕಾಗುತ್ತದೆ. ನಮ್ಮದು ವನಸಂಸ್ಕೃತಿ. ಟಿಂಬರ್, ಮೈನಿಂಗ್ ಸಂಸ್ಕೃತಿಯಲ್ಲ. ಅದೆಲ್ಲ ನಮ್ಮನ್ನು ಆಳಿದ ಬ್ರಿಟಿಷರ ಕೊಡುಗೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.