
ಹುಲಿ ಗಣತಿಯ ಪ್ರಾತಿನಿಧಿಕ ಚಿತ್ರ
ಕೃಪೆ: Gemini AI
ನಾಡಿನಲ್ಲಿ (ದೇಶದಲ್ಲಿ) ಮುಂದಿನ ವರ್ಷ ನಡೆಯುವ ಜನಗಣತಿಗೆ ತಯಾರಿ ಆರಂಭವಾಗಿರುವ ಹೊತ್ತಿನಲ್ಲಿ, ಕಾಡಿನಲ್ಲಿರುವ ಹುಲಿಗಳ ಗಣತಿಯೂ ಇಂದಿನಿಂದ (ಜನವರಿ 5) ಆರಂಭವಾಗಿದೆ. ಇದರೊಂದಿಗೆ, ವ್ಯಾಘ್ರನ ಎಣಿಕೆ ನೆಪದಲ್ಲಿ ಅರಣ್ಯ ಸಮೃದ್ಧಿಯ ಲೆಕ್ಕಾಚಾರ ಶುರುವಾಗಿದೆ.
ಪರಿಸರ ವ್ಯವಸ್ಥೆಯ ಸಮತೋಲನ ಕಾಪಾಡುವ ತಕ್ಕಡಿ ಹಿಡಿದಿರುವ ಹುಲಿರಾಯನ ಸಂಖ್ಯೆ ಎಷ್ಟಿದೆ?, ಅವುಗಳ ರಕ್ಷಣೆಗೆ ಇನ್ನೂ ಏನೇನೆಲ್ಲ ಮಾಡಬೇಕಿದೆ?, ಆವಾಸಸ್ಥಾನಗಳನ್ನು ಕಾಪಾಡುವುದು ಹೇಗೆ?, ಹುಲಿಯ ಹೊಟ್ಟೆ ಸೇರುವ ಪ್ರಾಣಿಗಳು ಸಾಕಷ್ಟು ಸಂಖ್ಯೆಯಲ್ಲಿ ಕಾನನದಲ್ಲಿವೆಯೇ?, ಅವುಗಳಿಗೆ ಪೂರಕವಾದ ಪರಿಸರ ಅಸ್ತಿತ್ವದಲ್ಲಿದೆಯೇ? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ʼರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರʼದ (ಎನ್‌ಟಿಸಿಎ) ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಈ ಗಣತಿಯ ಉದ್ದೇಶ ಎಂದು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಟಿ.ಎಂ. ರವಿಕುಮಾರ್ ತಿಳಿಸಿದ್ದಾರೆ.
ದೇಶದಲ್ಲಿ ಮೊದಲ ಬಾರಿ ಎಂಬಂತೆ 1972ರಲ್ಲಿ ಗಣತಿ ನಡೆದಾಗ ಇದ್ದದ್ದು 1,828 ಹುಲಿಗಳಷ್ಟೇ. ಸಂಖ್ಯೆಯಲ್ಲಿ ಭಾರಿ ಕುಸಿತವಾಗಿರುವುದನ್ನು ಗಂಭೀರವಾಗಿ ಪರಿಗಣಿಸಿದ ಆಗಿನ ಕೇಂದ್ರ ಸರ್ಕಾರ, ಮರುವರ್ಷವೇ ʼಹುಲಿ ಯೋಜನೆʼ ಆರಂಭಿಸಿತ್ತು. ಆದರೆ, 2006ರ ನಂತರ ವೈಜ್ಞಾನಿಕವಾಗಿ ಗಣತಿ ನಡೆಸಲಾಗುತ್ತಿದೆ.
ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಈ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಳ್ಳುವ ಸಲುವಾಗಿ ಹಾಗೂ ಅರಣ್ಯದ ಕುರಿತ ಅರಿವನ್ನು ಪಸರಿಸುವ ಸಲುವಾಗಿ ಅರಣ್ಯದ ಅಂಚಿನ ಗ್ರಾಮಗಳ ಜನರು, ಸ್ವಯಂಸೇವಕರು, ವನ್ಯಜೀವಿ ಆಸಕ್ತರನ್ನೂ ತೊಡಗಿಸಿಕೊಳ್ಳಲಾಗುತ್ತದೆ. ಆದರೆ, ಅವರ ಸುರಕ್ಷತೆಯೂ ಅರಣ್ಯ ಸಿಬ್ಬಂದಿಯದ್ದೇ ಆಗಿರುವುದರಿಂದ, ಸೂಕ್ಷ್ಮ ಪ್ರದೇಶಗಳಲ್ಲಿ, ಅಪಾಯಗಳು ಎದುರಾಗಬಹುದಾದ ಪ್ರದೇಶಗಳಲ್ಲಿ ಹೊರಗಿಡಲಾಗುತ್ತದೆ.
ಮೊಬೈಲ್ ಆ್ಯಪ್
M-STrIPES ಅಂದರೆ Monitoring System for Tigers: Intensive Protection and Ecological Status. ಇದು ಎನ್‌ಟಿಸಿಎ ಸಹಯೋಗದಲ್ಲಿ ಭಾರತದ ವನ್ಯಜೀವಿ ಸಂಸ್ಥೆ (ಐಡಬ್ಲ್ಯುಐ) ಅಭಿವೃದ್ಧಿಪಡಿಸಿರುವ ಆಂಡ್ರಾಯ್ಡ್ ಆಧಾರಿತ ಮೊಬೈಲ್ ಆ್ಯಪ್. ಗಣತಿ ವೇಳೆ ಲಭ್ಯವಾಗುವ ಪ್ರತಿಯೊಂದು ಮಾಹಿತಿಯನ್ನು ಈ ಆ್ಯಪ್‌ಗೆ ಸೇರಿಸಲಾಗುತ್ತದೆ. ಇದರಿಂದ ದತ್ತಾಂಶ ಸಂಗ್ರಹ, ಡಿಜಿಟಲೀಕರಣವಷ್ಟೇ ಅಲ್ಲದೆ ನಿಖರತೆ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂಬುದಾಗಿ ಕೋಡಿಹಳ್ಳಿ ವನ್ಯಜೀವಿ ವಲಯದ ಉಪ ವಲಯ ಅರಣ್ಯಾಧಿಕಾರಿ ನಾಗರಾಜು ಜಿ.ಎಂ ಮಾಹಿತಿ ನೀಡಿದ್ದಾರೆ.
ಎರಡು ಹಂತಗಳಲ್ಲಿ ಸಮೀಕ್ಷೆ
ಹುಲಿ ಗಣತಿಯು ಎರಡು ಹಂತಗಳಲ್ಲಿ ಮೂರು ವಿಧಾನಗಳ ಮೂಲಕ ನಡೆಯುತ್ತದೆ. ಮೊದಲ ಹಂತದಲ್ಲಿ ಸೈನ್ ಸರ್ವೆ, ಲೈನ್ ಟ್ರಾನ್ಸೆಕ್ಟ್ ಕ್ರಮಗಳನ್ನು ಅನುಸರಿಸಲಾಗುತ್ತದೆ. ಎರಡನೇ ಹಂತದಲ್ಲಿ ಕ್ಯಾಮೆರಾ ಟ್ರ್ಯಾಪಿಂಗ್ ವಿಧಾನವನ್ನು ಬಳಸಲಾಗುತ್ತದೆ.
ಸೈನ್ ಸರ್ವೆ
ಈ ವಿಧಾನದಲ್ಲಿ ಜನವರಿ 5, 6, 7ರಂದು ಸಮೀಕ್ಷೆ ನಡೆಯುತ್ತದೆ. ಸಂಬಂಧಪಟ್ಟ ಅರಣ್ಯದ ಎಲ್ಲ ವಲಯಗಳಲ್ಲಿಯೂ ಏಕಕಾಲಕ್ಕೆ ಬೆಳಿಗ್ಗೆ 6ರಿಂದಲೇ ಗಣತಿ ಆರಂಭವಾಗುತ್ತದೆ. ನಿರ್ದಿಷ್ಟ ಅರಣ್ಯ ವಲಯದಲ್ಲಿ ಹುಲಿ ಓಡಾಡಬಹುದಾದ ಹಾಗೂ ಎಲ್ಲ ಪ್ರದೇಶಗಳನ್ನೂ ಒಳಗೊಳ್ಳುವಂತೆ ಸಿಬ್ಬಂದಿಯು ಮೂರು ದಿನ ತಲಾ ಐದು ಕಿ.ಮೀ. ವರೆಗೆ ಕಾಲ್ನಡಿಗೆಯಲ್ಲಿ ಸಾಗುತ್ತಾರೆ.
ಅಂತಹ ಸಂದರ್ಭದಲ್ಲಿ ನೇರವಾಗಿ ಕಾಣಿಸಿಕೊಂಡ ಹುಲಿ ಅಥವಾ ಕಂಡ ಹೆಜ್ಜೆ ಗುರುತುಗಳನ್ನು ಪರಿಗಣಿಸಲಾಗುತ್ತದೆ. ಅಕ್ಕ-ಪಕ್ಕದ ವಲಯಗಳಲ್ಲಿ ಏಕಕಾಲಕ್ಕೆ ಹುಲಿ ಕಾಣಿಸಿಕೊಂಡರೆ, ಎರಡನ್ನೂ ಲೆಕ್ಕಕ್ಕೆ ಸೇರಿಸಿಕೊಳ್ಳಲಾಗುತ್ತದೆ. ಆದರೆ, ಕೆಲಹೊತ್ತಿನ ಅಂತರದಲ್ಲಿ ಅಕ್ಕಪಕ್ಕದ ವಲಯಗಳಲ್ಲಿ ಹುಲಿ ಕಂಡರೆ, ಅದು ಒಂದೆಯೇ.. ಅಥವಾ ಬೇರೆಯವೇ ಎಂಬುದನ್ನು ಪತ್ತೆ ಮಾಡಲು, ಅದರ ಮೈ ಮೇಲಿನ ಪಟ್ಟೆಯ ಸ್ವರೂಪ, ಲಿಂಗ, ಅಂದಾಜು ವಯಸ್ಸು ಇವೆಲ್ಲವನ್ನೂ ತಾಳೆ ಮಾಡಲಾಗುತ್ತದೆ.
ಹೆಜ್ಜೆ ಗುರುತು, ಆಗಷ್ಟೇ ವಿಸರ್ಜಿಸಿದ ಮಲ, ಮರಗಳ ಮೇಲೆ ಹುಲಿ ಮಾಡಿರಬಹುದಾದ ಗುರುತುಗಳನ್ನು ಪರಿಶೀಲಿಸಲಾಗುತ್ತದೆ. ಇವೆಲ್ಲವನ್ನೂ ಪರಿಶೀಲಿಸಿ ಅಂತಿಮ ಸಂಖ್ಯೆಯನ್ನು ನಿಖರವಾಗಿ ಕಂಡುಕೊಳ್ಳಲಾಗುತ್ತದೆ.
ಈ ವಿಧಾನದಲ್ಲಿ ಹುಲಿಗಳಷ್ಟೇ ಅಲ್ಲದೆ, ಪ್ರಮುಖ ಮಾಂಸಹಾರಿಗಳಾದ ಚಿರತೆ, ಸಿಂಹ, ಕಾಡುನಾಯಿಗಳನ್ನೂ ಲೆಕ್ಕ ಹಾಕಲಾಗುತ್ತದೆ.
ಲೈನ್ ಟ್ರಾನ್ಸೆಕ್ಟ್ (ಜನವರಿ 9, 10, 11, 12ರಂದು)
ಹುಲಿಗಳು ಓಡಾಡಬಹುದಾದ ನಿರ್ದಿಷ್ಟ ಪ್ರದೇಶದಲ್ಲಿ ಸಮೀಕ್ಷೆ ಆರಂಭಿಸುವುದಕ್ಕೂ 15-20 ದಿನಗಳ ಮೊದಲೇ, 2 ಕಿ.ಮೀ ವರೆಗೆ ಕಾಲ್ನಡಿಗೆಯಲ್ಲಿ ಸಾಗಿ, ಆರಂಭದ ಸ್ಥಳದಿಂದ ಕೊನೆವರೆಗೂ ಕಾಣುವಂತೆ ಮಾರ್ಗದುದ್ದಕ್ಕೂ ಗಿಡ-ಗಂಟಿ ಕಡಿದು ಹಾದಿ ಸುಗಮ ಮಾಡಿಕೊಳ್ಳಲಾಗುತ್ತದೆ. ಅಲ್ಲಿ ಓಡಾಡುವ ಸಿಬ್ಬಂದಿಗೆ ಅಕ್ಕಪಕ್ಕದಲ್ಲಿ ಹಾದುಹೋಗುವ ಪ್ರಾಣಿ–ಪಕ್ಷಗಳು ಸ್ಪಷ್ಟವಾಗಿ ಗೋಚರಿಸಬೇಕೆಂಬುದು ಇದರ ಉದ್ದೇಶ. ಎನ್‌ಟಿಸಿಎ ಹಾಗೂ ಕರ್ನಾಟಕದಲ್ಲಿರುವ ಟೈಗರ್ ಸೆಲ್‌ಗೆ (ಹುಲಿ ಗಣತಿ ಕೋಶ) ಈ ಹಾದಿಯ ಜಿಪಿಎಸ್ ರೀಡಿಂಗ್ ವಿವರ ಕಳುಹಿಸಿ ಅನುಮೋದನೆ ಪಡೆದು, ಟ್ರಾನ್ಸೆಕ್ಟ್ ಲೈನ್ ನಿಗದಿ ಮಾಡಿಕೊಳ್ಳಲಾಗುತ್ತದೆ.
ಅಗತ್ಯವಿದ್ದರೆ, ಸುರಕ್ಷತೆಯ ದೃಷ್ಟಿಯಿಂದ ಈ ಹಾದಿಯಲ್ಲಿ ಶಸ್ತ್ರಗಳನ್ನೂ ಕೊಂಡೊಯ್ಯಬಹುದು.
ಅಲ್ಲಿ ಯಾವುದೇ ಸಸ್ಯಹಾರಿ ಪ್ರಾಣಿ ಕಂಡರೂ, ಅದು ಮಾರ್ಗದ ಯಾವ ದಿಕ್ಕಿನಲ್ಲಿ, ಎಷ್ಟು ಅಂತರದಲ್ಲಿದೆ ಎಂಬುದನ್ನು ಮಾರ್ಗದುದ್ದಕ್ಕೂ ಆ ಕ್ಷಣವೇ ಆ್ಯಪ್‌ನಲ್ಲಿ ಅಪ್‌ಡೇಟ್ ಮಾಡಬೇಕು. ಒಮ್ಮೆ ಗಮ್ಯ ತಲುಪಿ ವಾಪಸ್ ಆಗುವಾಗ ಅದೇ ಮಾರ್ಗದಲ್ಲಿ ಹಿಂತಿರುಗಬೇಕು. ಜೊತೆಗೆ, ಪ್ರತಿ 400 ಮೀ. ಅಂತರದ, ಆಸುಪಾಸಿನಲ್ಲಿ ಯಾವೆಲ್ಲ ಸಸ್ಯಗಳು, ಕಳೆಗಿಡಗಳಿವೆ, ಯಾವ ಜಾತಿಯ ಮರಗಳಿವೆ ಹಾಗೂ ಮರಗಳ ಗುಂಪು ಹೇಗಿದೆ? ಎಂಬುದನ್ನು ಪರಿಶೀಲಿಸಿ ಗುರುತು ಮಾಡಿಕೊಳ್ಳಲಾಗುತ್ತದೆ. ಅಲ್ಲಿ ಸಿಗುವ ಬೇರೆ ಜೀವಿಗಳ ಹಿಕ್ಕೆಗಳ ಮಾಹಿತಿಯನ್ನೂ ಸಂಗ್ರಹಿಸಲಾಗುತ್ತದೆ.
ಈ ಪ್ರಕ್ರಿಯೆ ಪ್ರತಿದಿನ ಎರಡು ಬಾರಿ (ಬೆಳಿಗ್ಗೆ ಹಾಗೂ ಸಂಜೆ) ನಡೆಯುತ್ತದೆ.
ಟ್ರಾನ್ಸೆಕ್ಟ್ ಲೈನ್‌ನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು
ಕ್ಯಾಮೆರಾ ಟ್ರ್ಯಾಪಿಂಗ್
ಒಂದೇ ಹುಲಿ ಅರಣ್ಯ ಪ್ರದೇಶದ ಬೇರೆ ಬೇರೆ ವಲಯಗಳಲ್ಲಿ ಬೇರೆ ಬೇರೆ ಸಮಯದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಹಾಗಾಗಿ, ಅವನ್ನು ಖಚಿತವಾಗಿ ಲೆಕ್ಕಹಾಕಲು ಈ ಪ್ರಕ್ರಿಯೆ ನೆರವಾಗಲಿದೆ.
ವ್ಯಾಘ್ರ ಓಡಾಡುವಂತಹ ಸ್ಥಳಗಳಲ್ಲಿ ಜಿಪಿಎಸ್ ಅಳವಡಿಸಲಾದ ಕ್ಯಾಮೆರಾಗಳನ್ನು ಕಟ್ಟಲಾಗುತ್ತದೆ. ಹುಲಿಯ ದೇಹದ ಎರಡೂ (ಎಡ, ಬಲ) ಭಾಗವನ್ನು ಸ್ಪಷ್ಟವಾಗಿ ಸೆರೆಹಿಡಿಯಲು ಅನುಕೂಲವಾಗುವಂತೆ ಕಟ್ಟಲಾಗುತ್ತದೆ. ಪ್ರತಿ ಕ್ಯಾಮೆರಾಗೂ ವಿಶಿಷ್ಟ ಸಂಖ್ಯೆಯನ್ನು ನಮೂದಿಸಲಾಗಿರುತ್ತದೆ. ಇಡೀ ಅರಣ್ಯ ಪ್ರದೇಶದಲ್ಲಿ ಹಲವೆಡೆ ಅಳವಡಿಸಲಾದ ಕ್ಯಾಮೆರಾಗಳಲ್ಲಿ ಒಂದೇ ಹುಲಿ ಹಲವು ಬಾರಿ ಸೆರೆಯಾದರೂ, ಅದರ ಮೈಮೇಲಿನ ಪಟ್ಟೆಯ ಗುರುತಿನ ಆಧಾರದಲ್ಲಿ ತಂತ್ರಜ್ಞಾನದ ನೆರವಿನಿಂದ ಕಂಡುಹಿಡಿಯಲಾಗುತ್ತದೆ. ಇದೇ ರೀತಿ ದೇಶದಾದ್ಯಂತ ಮಾಡಲಾಗುತ್ತದೆ.
ಈ ವಿಧಾನವು ಹುಲಿಗಳ ಸಂಖ್ಯೆಯನ್ನು ಖಚಿತವಾಗಿ ಕಂಡುಕೊಳ್ಳಲು ಸಹಕಾರಿ.
ಈ ಮೂರೂ ವಿಧಾನಗಳಿಂದ ಕಲೆಹಾಕಿದ ಮಾಹಿತಿಗಳನ್ನು ಆಧರಿಸಿ ಹುಲಿಗಳ ಒಟ್ಟು ಸಂಖ್ಯೆಯನ್ನು ಗುರುತಿಸಲಾಗುತ್ತದೆ. ನಂತರ, ಅಷ್ಟು ಸಂಖ್ಯೆಗೆ ಪೂರಕವಾದ ವಾತಾವರಣವಿದೆಯೇ? ಹುಲಿಗಳ ಸಂಖ್ಯೆ ಕುಸಿದಿದ್ದರೆ ಮುಂದೆ ವಹಿಸಬೇಕಾದ ಎಚ್ಚರಿಕೆಗಳನ್ನು ವಿಶ್ಲೇಷಿಸಲಾಗುತ್ತದೆ.
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಹುಲಿ ಗಣತಿಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹುಲಿ ಹಾಗೂ ಇತರ ಪ್ರಾಣಿಗಳ ಚಲನವಲನದ ಮೇಲೆ ದಾಖಲಿಸುವ ನಿಟ್ಟಿನಲ್ಲಿ, ಟ್ರಾನ್ಸೆಕ್ಟ್ ಲೈನ್‌ನಲ್ಲಿ ಸಸಿಗಳು, ಕಳೆ ಗಿಡಗಳನ್ನು ಕಡಿದು ಮಾರ್ಗ ಮಾಡಿಕೊಂಡಿದ್ದೇವೆ. ಇನ್ನಷ್ಟೇ ಕ್ಯಾಮೆರಾಗಳನ್ನು ಅಳವಡಿಸಬೇಕಿದೆ.– ಟಿ.ಎಂ. ರವಿಕುಮಾರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ
ಟಿ.ಎಂ. ರವಿಕುಮಾರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ
ನಾಗರಾಜು ಜಿ.ಎಂ, ಕೋಡಿಹಳ್ಳಿ ವನ್ಯಜೀವಿ ವಲಯದ ಉಪ ವಲಯ ಅರಣ್ಯಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.