
ಚಿತ್ರ: ಗೆಟ್ಟಿ
ಹಾವುಗಳು ಆಹಾರ ಸರಪಳಿಯ ಮುಖ್ಯ ಭಾಗವಾಗಿವೆ. ಪರಿಸರ ಸಮತೋಲನೆಯಲ್ಲಿ ಹಾವುಗಳ ಪಾತ್ರ ಬಹಳ ದೊಡ್ಡದು. ಪ್ರಪಂಚದಲ್ಲಿ ಅತ್ಯಂತ ವಿಷಕಾರಿ ಹಾವುಗಳು ಹಾಗೂ ವಿಷ ರಹಿತ ಹಾವುಗಳು ಸಾಕಷ್ಟಿವೆ. ಪ್ರತಿ ವರ್ಷ ಸಾವಿರಾರು ಜನರು ಹಾವು ಕಡಿತದಿಂದ ಸಾವಿಗೀಡಾಗುತ್ತಿದ್ದಾರೆ ಎಂದು ವರದಿಗಳು ಹೇಳುತ್ತವೆ.
ಭಾರತದಲ್ಲಿ 300 ಹಾಗೂ ರಾಜ್ಯದಲ್ಲಿ 90 ಪ್ರಭೇದದ ಹಾವುಗಳು ಇರುವುದನ್ನು ಗುರುತಿಸಲಾಗಿದೆ. ಅವುಗಳಲ್ಲಿ 20 ಪ್ರಭೇದದ ಹಾವುಗಳು ಮಾತ್ರ ವಿಷಪೂರಿತ ಹಾವುಗಳಾಗಿವೆ ಎಂದು ತಜ್ಞರು ಹೇಳುತ್ತಾರೆ.
ಕರ್ನಾಟಕದಲ್ಲಿರುವ 4 ಪ್ರಮುಖ ವಿಷಕಾರಿ ಹಾವುಗಳು ಯಾವುವು ಎಂಬುದನ್ನು ಅರಣ್ಯ ಇಲಾಖೆ ತಿಳಿಸಿದೆ. ಆ ಹಾವುಗಳ ಬಗ್ಗೆ ಮಾಹಿತಿ ಇಲ್ಲಿದೆ.
ನಾಗರಹಾವು:
ಇದು ಭಾರತ, ದಕ್ಷಿಣ ಚೀನಾ ಹಾಗೂ ಫಿಲಿಪೀನ್ಸ್ ದ್ವೀಪಗಳಲ್ಲಿ ಕಂಡುಬರುತ್ತದೆ. ನಾಗರಹಾವಿನಲ್ಲಿ ಸುಮಾರು 10 ಪ್ರಭೇದದ ಹಾವುಗಳಿವೆ.
ಈ ಹಾವುಗಳು ‘ನ್ಯೂರೋಟಾಕ್ಸಿಕ್’ ಎಂಬ ವಿಷವನ್ನು ಹೊಂದಿರುತ್ತದೆ. ಈ ವಿಷ ಸ್ನಾಯು ಸೆಳೆತ, ಉಸಿರಾಟ ನಿಲ್ಲಿಸುವಿಕೆ ಮತ್ತು ಹೃದಯಾಘಾತಕ್ಕೆ ಕಾರಣವಾಗುತ್ತದೆ. ನಾಗರಹಾವು ಸುಮಾರು 30 ವರ್ಷಗಳವರೆಗೆ ಬದುಕಬಲ್ಲದು.
ಕಟ್ಟು ಹಾವು (ಕಾಮನ್ ಕ್ರೈಟ್ ):
ಕಟ್ಟು ಹಾವಿನಲ್ಲಿ12 ಜಾತಿಗಳಿವೆ. ಈ ಹಾವು ಸುಮಾರು 2 ಮೀ ಉದ್ದ ಬೆಳೆಯುತ್ತವೆ. ನೀಲಿ ಮಿಶ್ರಿತ ಕಪ್ಪು ಬಣ್ಣ, ಹೊಟ್ಟೆಯ ಭಾಗ ಬಿಳುಪು ಹಾಗೂ ಬೆನ್ನ ಮೇಲೆ ಅಡ್ಡ ಬಿಳಿ ಪಟ್ಟೆಗಳಿರುತ್ತವೆ. ಈ ಹಾವಿನ ವಿಷ ನರಮಂಡಲವನ್ನು ನಿಶ್ಚೇತನಗೊಳಿಸಿ ಸಾವಿಗೆ ಕಾರಣವಾಗುತ್ತದೆ.
ಕೊಳಕು ಮಂಡಲ ಹಾವು (ರಸ್ಸೆಲ್ಸ್ ವೈಪರ್):
ಕೊಳಕು ಮಂಡಲವನ್ನು ‘ರಸ್ಸೆಲ್ ವೈಪರ್’ ಎಂದೂ ಕರೆಯುತ್ತಾರೆ. ಈ ಹಾವು ದಕ್ಷಿಣ ಏಷ್ಯಾದ ಸ್ಥಳೀಯ ಪ್ರಭೇದವಾಗಿದೆ. ಉದ್ದವಾದ ಕೋರೆಹಲ್ಲುಗಳಿರುವ ಈ ಹಾವಿನ ಮೈ ಮೇಲೆ ಸರಪಳಿಯಂತಹ ಕಪ್ಪು ಅಥವಾ ಕಂದು ಬಣ್ಣದ ಮಚ್ಚೆಗಳಿರುತ್ತವೆ.
ಈ ಹಾವು ‘ಹೆಮೋಟಾಕ್ಸಿಕ್’ ವಿಷವನ್ನು ಹೊಂದಿದೆ. ಇದರ ವಿಷ ರಕ್ತ ಹೆಪ್ಪುಗಟ್ಟುವಿಕೆ ಹಾಗೂ ಮೂತ್ರಪಿಂಡಗಳ ವೈಫಲ್ಯಕ್ಕೆ ಕಾರಣವಾಗಬಹುದು.
ಗರಗಸ ಮಂಡಲ ಹಾವು (ಎಚಿಸ್ ಕ್ಯಾರಿನಾಟಸ್):
ಭಾರತದ ಪ್ರಮುಖ ವಿಷಕಾರಿ ಹಾವುಗಳಲ್ಲಿ ಗರಗಸ ಮಂಡಲವೂ ಒಂದು. ಇದು ಭಾರತ ಹಾಗೂ ಮಧ್ಯ ಏಷ್ಯಾದಲ್ಲಿ ಕಂಡುಬರುವ ಹಾವಿನ ಪ್ರಭೇದವಾಗಿದೆ.
ಈ ಹಾವಿನ ವಿಶೇಷತೆ ಎಂದರೆ ತನ್ನ ದೇಹವನ್ನು ‘ಸಿ’ ಆಕಾರದಲ್ಲಿ ಸುತ್ತಿಕೊಂಡು ತಲೆಯನ್ನು ಮಧ್ಯದಲ್ಲಿ ಇರಿಸಿಕೊಳ್ಳುತ್ತದೆ. ತನ್ನ ಚರ್ಮವನ್ನು ಉಜ್ಜಿಕೊಳ್ಳುವ ಮೂಲಕ ಗರಗರ ಶಬ್ದ ಮಾಡುತ್ತದೆ. ಈ ಕಾರಣದಿಂದ ಗರಗಸ ಮಂಡಲ ಎಂದು ಕರೆಯಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.