ADVERTISEMENT

ಹ್ಯಾಟ್ರಿಕ್‌ ಗೆದ್ದ ಸಂಸದರ ಆಸ್ತಿ ಶೇ 110 ಏರಿಕೆ: ಯಾರ್ಯಾರದ್ದು ಎಷ್ಟಿದೆ ನೋಡಿ

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 5:40 IST
Last Updated 9 ಜನವರಿ 2026, 5:40 IST
<div class="paragraphs"><p>ಸಂಸತ್ ಭವನ</p></div>

ಸಂಸತ್ ಭವನ

   

2014, 2019 ಮತ್ತು 2024ರ ಲೋಕಸಭಾ ಚುನಾವಣೆಗಳಲ್ಲಿ 103 ಸಂಸದರು ಸತತವಾಗಿ ಆಯ್ಕೆಯಾಗಿದ್ದಾರೆ. ಇವರ ಪೈಕಿ 102 ಸಂಸದರ ಆಸ್ತಿ ಮೌಲ್ಯವು ಈ ಹತ್ತು ವರ್ಷಗಳಲ್ಲಿ ಎಷ್ಟು ಏರಿಕೆಯಾಗಿದೆ ಎನ್ನುವುದರ ಬಗ್ಗೆ ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ (ಎಡಿಆರ್‌) ಮತ್ತು ನ್ಯಾಷನಲ್‌ ಎಲೆಕ್ಷನ್‌ ವಾಚ್‌ ವರದಿ ಪ್ರಕಟಿಸಿವೆ. ಸಂಸದರು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಪ್ರಮಾಣ ಪತ್ರಗಳ ದತ್ತಾಂಶವನ್ನೇ ಮಾಹಿತಿ ಮೂಲವನ್ನಾಗಿ ಪರಿಗಣಿಸಿ ವಿಶ್ಲೇಷಣೆ ಮಾಡಲಾಗಿದೆ. ಉತ್ತರ ಪ್ರದೇಶದ ಅಕ್ಬರಪುರ ಕ್ಷೇತ್ರದ ಸಂಸದ ದೇವೇಂದ್ರ ಸಿಂಗ್ ಅಲಿಯಾಸ್ ಭೋಲಾ ಸಿಂಗ್ ಅವರ 2019ರ ಪ್ರಮಾಣ ಪತ್ರದ ದತ್ತಾಂಶ ಲಭ್ಯವಾಗದೇ ಇದ್ದುದರಿಂದ ಅವರನ್ನು ಈ ವರದಿಯಲ್ಲಿ ಒಳಗೊಂಡಿಲ್ಲ. 

ಸತತ ಮೂರು ಚುನಾವಣೆಗಳಲ್ಲಿ ಗೆಲ್ಲುವ ಹೊತ್ತಿಗೆ 102 ಸಂಸದರ ಆಸ್ತಿ ಮೌಲ್ಯ ಸರಾಸರಿ ₹33.13 ಕೋಟಿಯಷ್ಟಾಗಿದೆ. ಸರಾಸರಿ ಆಸ್ತಿ ₹17.36 ಕೋಟಿಯಷ್ಟು ಹೆಚ್ಚಾಗಿದೆ. ಶೇಕಡವಾರು ಲೆಕ್ಕಾಚಾರದಲ್ಲಿ ಆಸ್ತಿ ಪ್ರಮಾಣ ಶೇ 110ರಷ್ಟು ಏರಿಕೆ ಕಂಡಿದೆ. ಈ ಸಂಸದರ ಪೈಕಿ ರಾಜ್ಯದ ಆರು ಮಂದಿ ಇದ್ದಾರೆ. 

ADVERTISEMENT

ಉತ್ತರ ಪ್ರದೇಶದ ಫರೂಕಾಬಾದ್‌ನ ಸಂಸದ ಮುಕೇಶ್ ರಜಪೂತ್ ಅವರ ಆಸ್ತಿ ಮೌಲ್ಯದಲ್ಲಿ ಅತಿ ಹೆಚ್ಚು (ಶೇ 12,821) ಏರಿಕೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆಸ್ತಿ ಪ್ರಮಾಣ ಶೇ 82ರಷ್ಟು ಹೆಚ್ಚಾಗಿದ್ದರೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರ ಆಸ್ತಿ ಪ್ರಮಾಣ ಶೇ 117ರಷ್ಟು ಏರಿಕೆ ಕಂಡಿದೆ. 102 ಸಂಸದರ ಪೈಕಿ ಕೇಂದ್ರ ಸಚಿವ ಸಿ.ಆರ್.ಪಾಟೀಲ್‌ ಅವರೊಬ್ಬರ ಆಸ್ತಿ ಮೌಲ್ಯ ಶೇ 47ರಷ್ಟು ಇಳಿಕೆಯಾಗಿದೆ ಎಂದು ವರದಿ ತಿಳಿಸಿದೆ.

ರಾಜ್ಯದ ಆರು ಸಂಸದರ ಆಸ್ತಿಯೂ ಹೆಚ್ಚಳ

ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಶೋಭಾ ಕರಂದ್ಲಾಜೆ ಸೇರಿದಂತೆ ಕರ್ನಾಟಕದ ಆರು ಸಂಸದರು 2014ರಿಂದ ಸತತ ಮೂರು ಲೋಕಸಭಾ ಚುನಾವಣೆಗಳಲ್ಲೂ ಗೆಲುವು ಸಾಧಿಸಿದ್ದಾರೆ. ಅವರ ಆಸ್ತಿಯಲ್ಲೂ ಹೆಚ್ಚಳವಾಗಿದೆ. ಇವರೆಲ್ಲರೂ ಬಿಜೆಪಿಯವರೇ. ವಿಜಯಪುರ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ರಮೇಶ್‌ ಜಿಗಜಿಣಗಿ ಅವರ ಆಸ್ತಿ ₹42.68 ಕೋಟಿಯಷ್ಷು ಹೆಚ್ಚಾಗಿದೆ. ಬೆಂಗಳೂರು ಸೆಂಟ್ರಲ್‌ ಕ್ಷೇತ್ರದ ಪಿ.ಸಿ.ಮೋಹನ್‌ ಆಸ್ತಿ ₹33.72 ಕೋಟಿ ಜಾಸ್ತಿಯಾಗಿದೆ.  ಪ್ರಲ್ಹಾದ ಜೋಶಿ ಅವರದ್ದು ₹16.89 ಕೋಟಿ ಜಾಸ್ತಿಯಾಗಿದೆ. ಶಿವಮೊಗ್ಗದ ಬಿ.ವೈ.ರಾಘವೇಂದ್ರ ಅವರ ಆಸ್ತಿ ₹14.82 ಕೋಟಿಯಷ್ಟು ಏರಿಕೆ ಕಂಡಿದೆ. ಉಡುಪಿ–ಚಿಕ್ಕಮಗಳೂರು ಕ್ಷೇತ್ರದ ಶೋಭಾ ಕರಂದ್ಲಾಜೆ ಅವರ ಆಸ್ತಿ ₹6.67 ಮತ್ತು ಬಾಗಲಕೋಟೆಯ ಪಿ.ಸಿ.ಗದ್ದಿಗೌಡರ ಅವರ ಆಸ್ತಿ ₹3.94 ಕೋಟಿಯಷ್ಟು ಜಾಸ್ತಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.