ADVERTISEMENT

ಆಳ–ಅಗಲ | ಮೆಣಸಿನಕಾಯಿ ದರ ಕುಸಿತ: ರಾಜ್ಯದ ರೈತರಿಗೆ ಸಿಕ್ಕಿಲ್ಲ ನೆರವು

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2025, 22:26 IST
Last Updated 25 ಫೆಬ್ರುವರಿ 2025, 22:26 IST
ಹಾವೇರಿ ಜಿಲ್ಲೆಯ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಆವರಣ
ಹಾವೇರಿ ಜಿಲ್ಲೆಯ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಆವರಣ   
ಕರ್ನಾಟಕದಲ್ಲಿ ಮೆಣಸಿನಕಾಯಿ ಬೆಲೆಯು ಕುಸಿದಿರುವುದರಿಂದ ಹಲವು ಜಿಲ್ಲೆಗಳ ಲಕ್ಷಾಂತರ ರೈತರು ನಷ್ಟ ಅನುಭವಿಸುತ್ತಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮಧ್ಯಪ್ರವೇಶಿಸಿ, ಮೆಣಸಿನಕಾಯಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಿ ನಷ್ಟವಾಗುವುದನ್ನು ತಪ್ಪಿಸಬೇಕು ಎಂದು ಬೆಳೆಗಾರರು ರೈತ ಸಂಘಟನೆಗಳ ಮುಖಂಡರು, ಆಗ್ರಹಿಸುತ್ತಲೇ ಇದ್ದಾರೆ.

ರಾಜ್ಯದಲ್ಲಿ ಮೆಣಸಿನಕಾಯಿ ಬೆಳೆದ‌ ರೈತರು‌ ಈ ಬಾರಿ ಕೈ ಸುಟ್ಟುಕೊಂಡಿದ್ದಾರೆ. ಮಳೆ ಹೆಚ್ಚಾಗಿದ್ದರಿಂದ ಕಾಡಿದ ಕೊಳೆರೋಗ ಹಾಗೂ ಇತರ ಕಾರಣಗಳಿಂದ ಇಳುವರಿ ಕುಸಿತವಾಗಿ ಆದ ನಷ್ಟ ಒಂದೆಡೆಯಾದರೆ ಕಟಾವಿನ ಬಳಿಕ ಮಾರುಕಟ್ಟೆಯಲ್ಲಿ ಸಮರ್ಪಕ ದರ ಸಿಗದೆ ಬೆಳೆ ಬೆಳೆಯಲು ಮಾಡಿದ ವೆಚ್ಚವೂ ಕೈಗೆ ಸಿಗದಂತಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮೆಣಸಿನಕಾಯಿ ದರ ಶೇ 35ರಿಂದಶೇ 50ರವರೆಗೆ ಕುಸಿತಕಂಡಿದೆ.

ಅತ್ತ, ನೆರೆಯ ಆಂಧ್ರಪ್ರದೇಶದಲ್ಲೂ ಜಗದ್ವಿಖ್ಯಾತ ‌ಗುಂಟೂರು ಮೆಣಸಿನ ಧಾರಣೆ ಪಾತಾಳಕ್ಕೆ ಕುಸಿದಿದೆ. 2022–23ರಲ್ಲಿ ಕ್ವಿಂಟಲ್‌ಗೆ ₹20,500, 2023–24ರಲ್ಲಿ ಕ್ವಿಂಟಲ್‌ಗೆ ₹20 ಸಾವಿರ ಸಿಕ್ಕಿದ್ದರೆ ಈ ಬಾರಿ ₹11 ಸಾವಿರಕ್ಕೆ ಕುಸಿದಿದೆ. ‌ಬೆಳೆಗಾರರ ಸಂಕಷ್ಟಕ್ಕೆ ಧಾವಿಸುವಂತೆ ರಾಜ್ಯ ಸರ್ಕಾರವನ್ನು ರೈತರು ಒತ್ತಾಯಿಸಿದ್ದರು. ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಪಾಲುದಾರ ಪಕ್ಷ ತೆಲುಗುದೇಶಂ ನೇತೃತ್ವದ ಸರ್ಕಾರವು ಕೇಂದ್ರದ ಮೇಲೆ ಒತ್ತಡ ಹೇರಿದ ಕಾರಣಕ್ಕೆ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯ ಅಡಿಯಲ್ಲಿ ಗುಂಟೂರು ಮೆಣಸಿನಕಾಯಿಯನ್ನು ಕ್ವಿಂಟಲ್‌ಗೆ ₹11,781ರಂತೆ ಖರೀದಿಸಲು ಕೇಂದ್ರ ಒಪ್ಪಿಕೊಂಡಿದೆ. ಹೀಗಾಗಿ ಅಲ್ಲಿನ ರೈತರು ಹೆಚ್ಚು ನಷ್ಟ ಅನುಭವಿಸುವುದು ತಪ್ಪಿದಂತಾಗಿದೆ. 

ಕರ್ನಾಟಕದಲ್ಲಿ ಮೆಣಸಿನಕಾಯಿ ಬೆಲೆಯು ಕುಸಿದಿರುವುದರಿಂದ ಹಲವು ಜಿಲ್ಲೆಗಳ ಲಕ್ಷಾಂತರ ರೈತರು ನಷ್ಟ ಅನುಭವಿಸುತ್ತಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮಧ್ಯಪ್ರವೇಶಿಸಿ, ಮೆಣಸಿನಕಾಯಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಿ ನಷ್ಟವಾಗುವುದನ್ನು ತಪ್ಪಿಸಬೇಕು ಎಂದು ಬೆಳೆಗಾರರು ರೈತ ಸಂಘಟನೆಗಳ ಮುಖಂಡರು, ಆಗ್ರಹಿಸುತ್ತಲೇ ಇದ್ದಾರೆ.

ADVERTISEMENT

‘ಆದರೆ, ರಾಜ್ಯ ಸರ್ಕಾರವಾಗಲೀ, ಕೇಂದ್ರ ಸರ್ಕಾರವಾಗಲಿ ಈ ಬಗ್ಗೆ ಗಮನಹರಿಸಿಲ್ಲ. ಆಂಧ್ರಪ್ರದೇಶ ರೈತರ ಸಂಕಷ್ಟಕ್ಕೆ ಅಲ್ಲಿನ ರಾಜ್ಯ ಸರ್ಕಾರ ಮಾತ್ರವಲ್ಲ, ಕೇಂದ್ರ ಸರ್ಕಾರವೂ ಸ್ಪಂದಿಸಿದೆ. ನಮ್ಮ ಕಷ್ಟಕ್ಕೆ ಎರಡೂ ಸರ್ಕಾರಗಳು ಯಾಕೆ ಕಿವಿಗೊಡುತ್ತಿಲ್ಲ’ ಎಂದು ಅವರು ಪ್ರಶ್ನಿಸಿದ್ದಾರೆ. 

ಶೇ 50ರಷ್ಟು ಕುಸಿತ

ಧಾರವಾಡ, ಗದಗ, ಹಾವೇರಿ, ಬಳ್ಳಾರಿ, ರಾಯಚೂರು, ಕಲಬುರಗಿ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೆಣಸಿನಕಾಯಿ ಬೆಳೆಯಲಾಗುತ್ತದೆ. ಬ್ಯಾಡಗಿ ಮೆಣಸಿನಕಾಯಿಯಲ್ಲಿ ಬ್ಯಾಡಗಿ ಡಬ್ಬಿ, ಬ್ಯಾಡಗಿ ಕಡ್ಡಿ ಎಂಬ ಎರಡು ಪ್ರಮುಖ ತಳಿಗಳಿವೆ. ಮೆಣಸಿನಕಾಯಿಯ ಗುಣಮಟ್ಟದ ಆಧಾರದಲ್ಲಿ ಧಾರಣೆ ನಿಗದಿ ಮಾಡಲಾಗುತ್ತದೆ. ಜಿಲ್ಲಾವಾರು ಧಾರಣೆಯಲ್ಲಿ ವ್ಯತ್ಯಾಸವಿದೆ. 

ಹಾವೇರಿ ಜಿಲ್ಲೆಯ ಬ್ಯಾಡಗಿ ಮಾರುಕಟ್ಟೆಯಲ್ಲಿ ಈ ವರ್ಷ ಆವಕ ಕಡಿಮೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬೆಲೆಯೂ ಶೇ 50ರಷ್ಟು ಕುಸಿದಿದೆ.  ಕಳೆದ‌ ವರ್ಷ ಜನವರಿಯಲ್ಲಿ ಬ್ಯಾಡಗಿ ಕಡ್ಡಿ ಮೆಣಸಿನಕಾಯಿ ಪ್ರತಿ ಕ್ವಿಂಟಲ್‌ಗೆ ಕನಿಷ್ಠ ₹3,009 ಹಾಗೂ ಗರಿಷ್ಠ ₹61,111 ಇತ್ತು. ಡಬ್ಬಿ ಮೆಣಸಿನಕಾಯಿ ಪ್ರತಿ ಕ್ವಿಂಟಲ್‌ಗೆ ಕನಿಷ್ಠ ₹3,109ದಿಂದ ಗರಿಷ್ಠ ₹62,269 ಸಾವಿರದವರೆಗೆ ಮಾರಾಟವಾಗಿತ್ತು. ಗುಂಟೂರು ಮೆಣಸಿನಕಾಯಿ ಕಳೆದ ವರ್ಷ ಕನಿಷ್ಠ ₹1,509 ಹಾಗೂ ಗರಿಷ್ಠ ₹19,429 ಇತ್ತು.

ಮಂಗಳವಾರ (ಫೆ. 25) ಕಡ್ಡಿ ಒಣ ಮೆಣಸಿನಕಾಯಿ ಕ್ವಿಂಟಲ್‌ಗೆ ಕನಿಷ್ಠ ₹1,600 ಹಾಗೂ ಗರಿಷ್ಠ ₹ 33,399 ಇದ್ದರೆ, ಡಬ್ಬಿ ಮೆಣಸಿನಕಾಯಿಗೆ ₹ 2,809 ರಿಂದ ₹ 37,999 ಇತ್ತು. ಗುಂಟೂರು ಮೆಣಸಿನಕಾಯಿ ಕ್ವಿಂಟಲ್‌ಗೆ ಕನಿಷ್ಠ ₹969 ಹಾಗೂ ಗರಿಷ್ಠ ₹16,409ಕ್ಕೆ ಮಾರಾಟವಾಗಿದೆ.

  • 25%: ದೇಶದಲ್ಲಿ ಉತ್ಪಾದನೆಯಾಗುವ ಒಟ್ಟು ಒಣಮೆಣಸಿನಕಾಯಿಯಲ್ಲಿ ಕರ್ನಾಟಕದ ಪಾಲು

  • 3.25 ಲಕ್ಷ ಎಕರೆ: ವಿವಿಧ ಜಿಲ್ಲೆಗಳಲ್ಲಿ ಮೆಣಸಿನಕಾಯಿ ಬೆಳೆಯುವ ಅಂದಾಜು ವಿಸ್ತೀರ್ಣ

  • 0.5ರಿಂದ 1.25 ‌ಟನ್‌ಗಳು: ಧಾರವಾಡ, ಗದಗ, ಹಾವೇರಿ ಜಿಲ್ಲೆಗಳಲ್ಲಿ ಪ್ರತಿ ಹೆಕ್ಟೇರ್‌ಗೆ ಬರುವ ಮೆಣಸಿನಕಾಯಿ ಇಳುವರಿ

  • 3.75ರಿಂದ 5 ಟನ್‌: ಬಳ್ಳಾರಿ, ರಾಯಚೂರು, ಕಲಬುರಗಿ ಜಿಲ್ಲೆಗಳಲ್ಲಿ ಪ್ರತಿ ಹೆಕ್ಟೇರ್‌ಗೆ ಸಿಗುವ ಇಳುವರಿ

  • ₹1.50 ಲಕ್ಷ: ಮೆಣಸಿನಕಾಯಿ ಬೆಳೆಯಲು ಪ್ರತಿ ಎಕರೆಗೆ ಆಗುವ ವೆಚ್ಚ

ದರ ಕುಸಿತ ಏಕೆ?

  • ಮೆಣಸಿನಕಾಯಿಗೆ ಬೇಡಿಕೆ ಕಡಿಮೆಯಾಗಿದೆ

  • ಕಳೆದ ವರ್ಷದ ದಾಸ್ತಾನು ಹೆಚ್ಚಿನ ಪ್ರಮಾಣದಲ್ಲಿದೆ

  • ಆಂಧ್ರಪ್ರದೇಶದಿಂದಲೂ ಪೂರೈಕೆಯಾಗುತ್ತಿದೆ

  • ಮೆಣಸಿನಕಾಯಿ ಖರೀದಿಗೆ ಮಸಾಲೆ ತಯಾರಿಕಾ ಕಂಪನಿಗಳು ಮುಂದಾಗುತ್ತಿಲ್ಲ

ಕೇಂದ್ರದ ಮೇಲೆ ಚಂದ್ರಬಾಬು ನಾಯ್ಡು ಒತ್ತಡ

ಭಾರತದಲ್ಲಿ ಬೆಳೆಯುವ ಮೆಣಸಿನಕಾಯಿಯ ಪೈಕಿ ಶೇ 40ರಷ್ಟು ಆಂಧ್ರದಲ್ಲೇ ಬೆಳೆದರೆ, ಅದರಲ್ಲಿ ಶೇ 15ರಷ್ಟು ಪಾಲು ಗುಂಟೂರು ಜಿಲ್ಲೆಯಲ್ಲೇ ಬೆಳೆಯುತ್ತಾರೆ. ಗುಂಟೂರಿನ ಮಿರ್ಚಿ ಯಾರ್ಡ್‌ ಏಷ್ಯಾದಲ್ಲಿಯೇ ಅತಿ ದೊಡ್ಡ ಮೆಣಸಿನಕಾಯಿ ಮಾರುಕಟ್ಟೆಯಾಗಿದೆ. ಈ ವರ್ಷ ಬೆಲೆ ಕುಸಿಯುತ್ತಿದ್ದಂತೆಯೇ  ವೈಎಸ್‌ಆರ್‌ಸಿಪಿ ಈ ವಿಚಾರವನ್ನು ಕೈಗೆತ್ತಿಕೊಂಡಿತು. ಅದರ ಮುಖಂಡ ವೈ.ಎಸ್‌.ಜಗನ್‌ಮೋಹನ್ ರೆಡ್ಡಿ ಗುಂಟೂರಿನ ಮಿರ್ಚಿ ಯಾರ್ಡ್‌ಗೆ ಭೇಟಿ ನೀಡಿ ರೈತರ ಅಹವಾಲು ಆಲಿಸಿದರು. ರಾಜ್ಯದಲ್ಲಿ ಬೆಳೆಯುವ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ದೊರಕುತ್ತಿಲ್ಲ ಎಂದು ಟಿಡಿಪಿ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. 

ಅದಾದ ಎರಡೇ ದಿನಗಳಲ್ಲಿ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಮೆಣಸಿನಕಾಯಿ ಬೆಳೆಗಾರರು, ಮಾರಾಟಗಾರರು, ರಫ್ತುದಾರರು, ಕಮಿಷನ್ ಏಜೆಂಟ್‌ಗಳ ಜತೆ ಸಭೆ ನಡೆಸಿದರಲ್ಲದೆ, ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯ (ಎಂಐಎಸ್‌) ಮೂಲಕ ರೈತರ ನೆರವಿಗೆ ನಿಲ್ಲುವಂತೆ ಕೇಂದ್ರಕ್ಕೆ ಮೂರು ಪತ್ರ ಬರೆದರು. ಕೇಂದ್ರ ಕೃಷಿ ಮಂತ್ರಿ ಶಿವರಾಜ್‌ಸಿಂಗ್ ಚೌಹಾಣ್ ಜತೆಗೆ ಮಾತನಾಡಿದರು. ಎಂಐಎಸ್‌ ಅಡಿ ರಾಜ್ಯವೂ ಶೇ 50ರಷ್ಟು ಪಾಲು ಹಂಚಿಕೊಳ್ಳಬೇಕಿದ್ದು, ಸದ್ಯ ಕೇಂದ್ರವೇ ಶೇ 100ರಷ್ಟು ವೆಚ್ಚ ಭರಿಸಬೇಕು ಮತ್ತು ಯೋಜನೆಯ ಅಡಿ ಒಟ್ಟು ಉತ್ಪನ್ನದ ಶೇ 25ರಷ್ಟು ಬೆಳೆಯನ್ನು ಮಾತ್ರವೇ ಕೊಳ್ಳಲು ಅವಕಾಶವಿದ್ದು, ಅದನ್ನು ಶೇ 75ಕ್ಕೆ ಹೆಚ್ಚಿಸಬೇಕು ಎಂದೂ ನಾಯ್ಡು ಕೇಂದ್ರವನ್ನು ಕೋರಿದ್ದರು. ನಾಯ್ಡು ಅವರ ಪ್ರಯತ್ನಕ್ಕೆ ಕೇಂದ್ರ ಸರ್ಕಾರವು ತಕ್ಷಣವೇ ಸ್ಪಂದಿಸಿದೆ.  ಎಂಐಎಸ್‌ ಅಡಿ ಮೆಣಸಿನಕಾಯಿಯನ್ನು ಖರೀದಿಸಲು ಕೇಂದ್ರ ಸರ್ಕಾರ ಮುಂದೆ ಬಂದಿದೆ. ಕ್ವಿಂಟಲ್‌ಗೆ ₹11,781ರಂತೆ 2.58 ಲಕ್ಷ ಟನ್ ಮೆಣಸಿನಕಾಯಿ ಖರೀದಿಸಲು ಕೇಂದ್ರವು ಆದೇಶ ನೀಡಿದೆ.

ಏನಿದು ಮಾರುಕಟ್ಟೆ ಮಧ್ಯಪ್ರವೇಶ ಯೋಜನೆ?

ಸುಗ್ಗಿ ಕಾಲದಲ್ಲಿ ರೈತರ ಉತ್ಪನ್ನಗಳ ಬೆಲೆಯು ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ದರಕ್ಕೆ ಕುಸಿದಾಗ, ತಮ್ಮ ಉತ್ಪನ್ನವನ್ನು ಕಡಿಮೆ ಬೆಲೆಗೆ ಮಾರುವ ಅನಿವಾರ್ಯದಿಂದ ರೈತರನ್ನು ರಕ್ಷಿಸಲು ಮಾರುಕಟ್ಟೆಯಲ್ಲಿ ಕೇಂದ್ರ ಸರ್ಕಾರವು ಮಧ್ಯಪ್ರವೇಶ ಮಾಡುವ ಯೋಜನೆ ಇದು. ಯೋಜನೆಯ ಮೊತ್ತವನ್ನು ಕೇಂದ್ರ ಮತ್ತು ರಾಜ್ಯ/ಕೇಂದ್ರಾಡಳಿತ ಪ್ರದೇಶವು 50:50ರ ಅನುಪಾತದಲ್ಲಿ ಹಂಚಿಕೊಳ್ಳಬೇಕು. ಈಶಾನ್ಯ ರಾಜ್ಯಗಳ ವಿಚಾರದಲ್ಲಿ ಈ ಅನುಪಾತವು 75:25 ಇರುತ್ತದೆ. ಒಟ್ಟು ಉತ್ಪನ್ನದ ಪೈಕಿ ಶೇ 25ರಷ್ಟನ್ನು ಮಾತ್ರ ಕೊಳ್ಳಲು ಈ ಯೋಜನೆಯಲ್ಲಿ ಅವಕಾಶವಿದೆ. ಈ ಯೋಜನೆಯ ಲಾಭ ಪಡೆಯಲು ರಾಜ್ಯ/ಕೇಂದ್ರಾಡಳಿತ ಪ್ರದೇಶವು ನಿಗದಿತ ಬೆಳೆಯ ಬಗ್ಗೆ ಸಂಪೂರ್ಣ ವಿವರಗಳುಳ್ಳ ಪ್ರಸ್ತಾವವನ್ನು ಕೇಂದ್ರಕ್ಕೆ ಸಲ್ಲಿಸಬೇಕು.

ಎಂಎಸ್‌ಪಿಗೆ ಕೇಂದ್ರಕ್ಕೆ ಮನವಿ

ಮಾರುಕಟ್ಟೆಯಲ್ಲಿ ಯಾವುದೇ ಉತ್ಪನ್ನದ ದರ ಏರಿಳಿತ ಸಾಮಾನ್ಯ. ಇಳುವರಿ ಪ್ರಮಾಣ ಈ ಏರಿಳಿತಕ್ಕೆ ಕಾರಣವಾಗುತ್ತಿದೆ. ಹಿಂದಿನ ವರ್ಷಗಳಲ್ಲಿ ಮೆಣಸಿನಕಾಯಿ ಧಾರಣೆ ಭಾರಿ ಏರಿಕೆ ಆಗಿರುವುದನ್ನು ನೋಡಿದ್ದೇವೆ. ಆದರೆ, ಈ ಬಾರಿ ಮೆಣಸಿನಕಾಯಿ ಆವಕ ಮತ್ತು ದರ ಕುಸಿದಿದೆ. ಈ ವಿಚಾರವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಕೇಂದ್ರ ಸರ್ಕಾರದ ಗಮನಕ್ಕೆ ತಂದು, ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಘೋಷಿಸುವಂತೆ ಮನವಿ ಮಾಡುತ್ತೇವೆ. ಕೇಂದ್ರ ಸರ್ಕಾರ ಮಂಜೂರಾತಿ ನೀಡಿದರೆ ಖರೀದಿ ಕೇಂದ್ರಗಳ ಮೂಲಕ ಎಂಎಸ್‌ಪಿ ಅಡಿ ಮೆಣಸಿನಕಾಯಿ ಖರೀದಿಸಲು ಸರ್ಕಾರ ಸಿದ್ಧವಾಗಿದೆ.
–ಶಿವಾನಂದ ಎಸ್‌. ಪಾಟೀಲ, ಕೃಷಿ ಮಾರುಕಟ್ಟೆ ಸಚಿವ

ಸರ್ಕಾರ ನೆರವಿಗೆ ಬರಬೇಕು

ಆಂಧ್ರಪ್ರದೇಶದ ಬೆಳೆಗಾರರ ಸಂಕಷ್ಟಕ್ಕೆ ಅಲ್ಲಿನ ಸರ್ಕಾರ ಸ್ಪಂದಿಸಿದೆ. ಕೇಂದ್ರದ ಮೇಲೆ ಒತ್ತಡ ತಂದು ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಮೆಣಸಿನಕಾಯಿ ಖರೀದಿಸುವಂತೆ ಮಾಡಲು ಯಶಸ್ವಿಯಾಗುದೆ. ಅಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳೆರಡೂ ರೈತರ ಪರ ಕೆಲಸ ಮಾಡಿವೆ. ನಮ್ಮಲ್ಲಿ ಎರಡೂ ಪಕ್ಷಗಳೂ ರೈತರ ಕಾಳಜಿ ವಹಿಸುತ್ತಿಲ್ಲ. ಕರ್ನಾಟಕದಲ್ಲೂ ರೈತರಿಗೆ ಬೆಂಬಲ ಬೆಲೆ ನೀಡದಿದ್ದರೆ ಅಥವಾ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ನೆರವಿಗೆ ಬಾರದಿದ್ದರೆ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ
–ಕರೂರು ಮಾಧವ ರೆಡ್ಡಿ, ಅಧ್ಯಕ್ಷ, ರಾಜ್ಯ ರೈತ ಸಂಘ

ಬೆಂಬಲ ಬೆಲೆ ಘೋಷಿಸಬೇಕು

ರೈತರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಮೆಣಸಿನಕಾಯಿ ಬೆಳೆದಿದ್ದಾರೆ. ಆದರೆ, ಫಸಲು ಬರುವ ಸಂದರ್ಭದಲ್ಲಿ ಬೆಲೆ ಕುಸಿದಿದೆ. ಬೆಳೆಗಾರರು ಸಂಕಷ್ಟದಲ್ಲಿ ಸಿಲುಕಿರುವ ಈ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೆಂಬಲ ಬೆಲೆ ಘೋಷಿಸಬೇಕು. ಖರೀದಿ ಕೇಂದ್ರ ಆರಂಭಿಸಬೇಕು.
 –ಬೆಳಗಲ್ ಮಲ್ಲಿಕಾರ್ಜುನ, ರೈತ ಮುಖಂಡ, ತೆಕ್ಕಲಕೋಟೆ, ಬಳ್ಳಾರಿ ಜಿಲ್ಲೆ

ಆಗ ಕೊಳೆ ರೋಗ, ಈಗ ಬೆಲೆ ಕುಸಿತ

ಬೆಲೆ ಕುಸಿತದಿಂದ ರೈತರು ತೀವ್ರ ಆತಂಕ ಪಡುವಂತಾಗಿದೆ. ಕಳೆದ ವರ್ಷ ₹38 ಸಾವಿರಕ್ಕೆ ಮಾರಾಟವಾಗಿದ್ದ ಬ್ಯಾಡಗಿ ಮೆಣಸಿನಕಾಯಿ ಈ ವರ್ಷ ₹13,200ಕ್ಕೆ ಮಾರಾಟವಾಗಿದೆ. ಎರಡು ಎಕರೆ ಪ್ರದೇಶದಲ್ಲಿ ಬೆಳೆದಿದ್ದೇನೆ. ಪ್ರತಿ ಎಕರೆಗೆ ಅಂದಾಜು ₹1 ಲಕ್ಷ ಖರ್ಚು ಮಾಡಿದ್ದೇನೆ. ಈ ವರ್ಷ ಕೊಳೆರೋಗದಿಂದ ಬೆಳೆ ರಕ್ಷಣೆ ಸವಾಲಾಗಿ ಪರಿಣಮಿಸಿತ್ತು. ಇದೀಗ ಧಾರಣೆ ಕುಸಿತ ಮತ್ತೊಂದು ಹೊಡೆತ ನೀಡಿದೆ..
–ಮುಕ್ತಾರ್‌ಪಾಶಾ ಗುಡಗಿ, ಕವಿತಾಳ, ರಾಯಚೂರು ಜಿಲ್ಲೆ

ಮಾಡಿದ ಖರ್ಚೂ ಬಂದಿಲ್ಲ

ಎರಡು ಎಕರೆಯಲ್ಲಿ ಮೆಣಸಿನಕಾಯಿ ಬೆಳೆದಿದ್ದು, ಇದಕ್ಕಾಗಿ ₹ 1 ಲಕ್ಷ ಸಾಲ ಮಾಡಿದ್ದೇನೆ. ಬೆಳೆಗೆ ರೋಗ ವಿಪರೀತವಾಗಿ ಇಳುವರಿ ಕಡಿಮೆಯಾಗಿತ್ತು. ಈಗ ಪ್ರತಿ ಕ್ವಿಂಟಲ್‌ ಮೆಣಸಿನಕಾಯಿಗೆ ₹ 8,000ದಿಂದ ₹ 10 ಸಾವಿರ ಸಿಗುತ್ತಿದೆ. ‌ಬರೀ ₹80 ಸಾವಿರ ಹಣ ಬಂದಿದ್ದು, ಹಾಕಿದ ಬಂಡವಾಳವೂ ವಾಪಸ್‌ ಬಂದಿಲ್ಲ. 
–ಲಕ್ಷಪ್ಪ ದತ್ತಪ್ಪ ಎಲ್ಲಗೋಳ‌, ಬಳೂರ್ಗಿ, ಅಫಜಲಪುರ ತಾಲ್ಲೂಕು, ಕಲಬುರಗಿ ಜಿಲ್ಲೆ
ಪೂರಕ ಮಾಹಿತಿ: ಹುಬ್ಬಳ್ಳಿ ಮತ್ತು ಕಲಬುರಗಿ ಬ್ಯೂರೊ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.