ADVERTISEMENT

ಆಳ ಅಗಲ| ಒಳಮೀಸಲು: ತೆಲುಗು ರಾಜ್ಯಗಳ ಮುನ್ನುಡಿ

ತೆಲಂಗಾಣದಲ್ಲಿ ಎಸ್‌ಸಿ ಒಳಮೀಸಲಾತಿ ಮಸೂದೆ ಅಂಗೀಕಾರ; ಆಂಧ್ರದಲ್ಲಿಯೂ ಜಾರಿಗೆ ಒಪ್ಪಿಗೆ

ಬಿ.ವಿ. ಶ್ರೀನಾಥ್
Published 24 ಮಾರ್ಚ್ 2025, 0:30 IST
Last Updated 24 ಮಾರ್ಚ್ 2025, 0:30 IST
   
ದೇಶದಲ್ಲಿ ಪರಿಶಿಷ್ಟ ಜಾತಿಗಳ (ಎಸ್‌ಸಿ) ಒಳಮೀಸಲಾತಿ ಹೋರಾಟಕ್ಕೆ ಹೊಸ ದಿಕ್ಕು ನೀಡಿದ್ದೇ ಅವಿಭಜಿತ ಆಂಧ್ರ ಪ್ರದೇಶದ ಮಾದಿಗ ಸಮುದಾಯ. ಮೂರು ದಶಕಗಳ ಅವರ ಹೋರಾಟಕ್ಕೆ ಇದೀಗ ಫಲ ಸಿಕ್ಕಿದೆ. ತೆಲಂಗಾಣ ಮತ್ತು ಆಂಧ್ರ ಪ್ರದೇಶ ರಾಜ್ಯಗಳು ಹೆಚ್ಚು ಕಡಿಮೆ ಒಂದೇ ಸಮಯದಲ್ಲಿ ಎಸ್‌ಸಿ ಒಳಮೀಸಲಾತಿ ನೀಡುವ ದಿಸೆಯಲ್ಲಿ ನಿರ್ಣಾಯಕ ಹೆಜ್ಜೆ ಇಟ್ಟಿವೆ. ಇದೇ ವೇಳೆ, ಕಾನೂನು ತೊಡಕು, ನಿಖರ ದತ್ತಾಂಶದ ವಿಚಾರಗಳು ಮತ್ತೆ ಮುನ್ನೆಲೆಗೆ ಬಂದಿದ್ದು, ಒಳಮೀಸಲಾತಿ ಪ್ರಕ್ರಿಯೆ ತಾರ್ಕಿಕ ಅಂತ್ಯ ಕಾಣುವುದೇ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.

ತೆಲಂಗಾಣದ ಎ.ರೇವಂತ್ ರೆಡ್ಡಿ ನೇತೃತ್ವದ ಕಾಂಗ್ರೆಸ್ ಸರ್ಕಾರವು ಎಸ್‌ಸಿ ಒಳಮೀಸಲಾತಿ ಜಾರಿಗೆ ಮುಂದಡಿ ಇಟ್ಟಿದೆ. ಪರಿಶಿಷ್ಟ ಜಾತಿಯ ಮಾದಿಗರು ಸೇರಿದಂತೆ ಇತರ ಅತಿ ಹಿಂದುಳಿದ ಉಪಜಾತಿಗಳಿಗೆ ಪ್ರಾತಿನಿಧ್ಯ ಕಲ್ಪಿಸಲು ‘ತೆಲಂಗಾಣ ಪರಿಶಿಷ್ಟ ಜಾತಿಗಳ (ಮೀಸಲಾತಿ ತರ್ಕಬದ್ಧಗೊಳಿಸುವಿಕೆ) ಮಸೂದೆ– 2025’ ಅನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ. ತೆಲಂಗಾಣದಲ್ಲಿ ಎಸ್‌ಸಿ ಪಟ್ಟಿಯಲ್ಲಿ 59 ಉಪಜಾತಿಗಳಿದ್ದು, ಜನಸಂಖ್ಯೆ, ಹಿಂದುಳಿದಿರುವಿಕೆ ಆಧಾರದಲ್ಲಿ ಅವನ್ನು ಮೂರು ಗುಂಪುಗಳನ್ನಾಗಿ ಮಾಡಿ ಮೀಸಲಾತಿ ಹಂಚಿಕೆ ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಎಸ್‌ಸಿ ಒಳಮೀಸಲಾತಿಗೆ ಸಂಬಂಧಿಸಿದಂತೆ ಇ.ವಿ.ಚಿನ್ನಯ್ಯ ಮತ್ತು ಆಂಧ್ರ ಪ್ರದೇಶ ಸರ್ಕಾರದ ನಡುವಿನ ಪ್ರಕರಣದಲ್ಲಿ ತೀರ್ಪು ನೀಡಿದ್ದ (2024ರ ಆಗಸ್ಟ್‌ 1) ಸುಪ್ರೀಂ ಕೋರ್ಟ್‌, ಒಳಮೀಸಲಾತಿ ನೀಡುವ ಸಾಂವಿಧಾನಿಕ ಅಧಿಕಾರ ರಾಜ್ಯಗಳಿಗೆ ಇದೆ ಎಂದಿತ್ತು. ಈ ತೀರ್ಪಿನ ನಂತರ ಶಾಸನಬದ್ಧವಾಗಿ ಎಸ್‌ಸಿ ಒಳಮೀಸಲಾತಿ ಕಲ್ಪಿಸಿದ ಮೊದಲ ರಾಜ್ಯ ಎಂದು ತೆಲಂಗಾಣ ಹೆಸರಾಗಿದೆ.

ಸುಪ್ರೀಂ ಕೋರ್ಟ್‌ನ ತೀರ್ಪಿಗೆ ಅನುಗುಣವಾಗಿ ತೆಲಂಗಾಣ ಸರ್ಕಾರವು ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಶಮೀಮ್ ಅಖ್ತರ್ ಅವರ ನೇತೃತ್ವದಲ್ಲಿ ನ್ಯಾಯಾಂಗ ಆಯೋಗವನ್ನು ರಚಿಸಿತ್ತು. ಆಯೋಗವು ಎಸ್‌ಸಿ ಪಟ್ಟಿಯಲ್ಲಿ ಬರುವ 59 ಉಪಜಾತಿಗಳ ಜನಸಂಖ್ಯೆ, ಸಾಕ್ಷರತೆ, ಉದ್ಯೋಗ, ಶಿಕ್ಷಣ, ನೇಮಕಾತಿ, ಆರ್ಥಿಕ ಸೌಲಭ್ಯ ಮತ್ತು ರಾಜಕೀಯ ಪ್ರಾತಿನಿಧ್ಯ ಮುಂತಾದ ಅಂಶಗಳನ್ನು ಒಳಗೊಂಡ ದತ್ತಾಂಶವನ್ನು ಸಂಗ್ರಹಿಸಿತು. ಅದನ್ನು ಆಧರಿಸಿ ಎಸ್‌ಸಿಗಳನ್ನು ಮೂರು ಗುಂಪುಗಳನ್ನಾಗಿ ವಿಂಗಡಿಸಿ, ಒಳಮೀಸಲಾತಿ ಕಲ್ಪಿಸಬೇಕೆಂದು ತೆಲಂಗಾಣ ಸರ್ಕಾರದ ನೀರಾವರಿ ಸಚಿವ ಉತ್ತಮ್ ಕುಮಾರ್ ರೆಡ್ಡಿ ನೇತೃತ್ವದ ಸಂಪುಟ ಉಪಸಮಿತಿಗೆ ಫೆಬ್ರುವರಿಯಲ್ಲಿ ವರದಿ ಸಲ್ಲಿಸಿತು. ಅದರ ಆಧಾರದಲ್ಲಿ ಸಚಿವ ಸಂಪುಟದಲ್ಲಿ ಮಸೂದೆಯನ್ನು ಮಂಡಿಸಿ, ಅಂಗೀಕರಿಸಲಾಗಿದೆ. 2011ರ ಜನಗಣತಿಯ ಆಧಾರದಲ್ಲಿ ಎಸ್‌ಸಿ ಮೀಸಲಾತಿ ಪ್ರಮಾಣವು ಶೇ 15ರಷ್ಟಿದ್ದು, ಅದರ ಪ್ರಕಾರ ಸದ್ಯ ಹಂಚಿಕೆ ಮಾಡಲಾಗಿದೆ. 

ADVERTISEMENT

2026ರ ಜನಗಣತಿಯ ವರದಿ ಬಂದ ನಂತರ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವುದಾಗಿ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹೇಳಿದ್ದಾರೆ. 

ಎ.ರೇವಂತ್ ರೆಡ್ಡಿ

ಮಿತಿ ಹೆಚ್ಚಳಕ್ಕೆ ಸಿಗುವುದೇ ಸಮ್ಮತಿ? 

ಎಸ್‌ಸಿ ಒಳ ಮೀಸಲಾತಿ ಮಸೂದೆ ಅಂಗೀಕರಿಸಿದ್ದರ ಜತೆಗೆ ತೆಲಂಗಾಣ ಸರ್ಕಾರವು ‘ತೆಲಂಗಾಣ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು (ಶಿಕ್ಷಣ ಮತ್ತು ಸರ್ಕಾರಿ ಸೇವೆಗಳಲ್ಲಿ ಮೀಸಲಾತಿ) 2025’ ಮಸೂದೆಯನ್ನು ಅಂಗೀಕರಿಸಿದೆ. ಇದರ ಮೂಲಕ ಹಿಂದುಳಿದ ವರ್ಗಗಳ (ಬಿಸಿ) ಮೀಸಲಾತಿಯನ್ನು ಶೇ 42ಕ್ಕೆ, ಎಸ್‌ಸಿ ಮೀಸಲಾತಿಯನ್ನು ಶೇ 18ಕ್ಕೆ ಮತ್ತು ಎಸ್‌ಟಿ ಮೀಸಲಾತಿಯನ್ನು ಶೇ 10ಕ್ಕೆ ಹೆಚ್ಚಳ ಮಾಡಿದೆ. ಸದ್ಯ ಬಿಸಿಗಳಿಗೆ ಶೇ 29, ಎಸ್‌ಸಿಗಳಿಗೆ
ಶೇ 15 ಮತ್ತು ಎಸ್‌ಟಿಗಳಿಗೆ ಶೇ 6ರಷ್ಟು ಮೀಸಲಾತಿ ಇದೆ. 

ಈ ಮಸೂದೆಯಿಂದ ತೆಲಂಗಾಣದಲ್ಲಿ ಮೀಸಲಾತಿ ಪ್ರಮಾಣವು ಶೇ 70ಕ್ಕೆ ಏರಲಿದೆ. ಆದರೆ, ಮೀಸಲಾತಿಯ ಮಿತಿ ಶೇ 50 ಅನ್ನು ಮೀರಬಾರದು ಎಂದು 1992ರಲ್ಲಿ ಇಂದಿರಾ ಸಹಾನಿ ಮತ್ತು ಕೇಂದ್ರ ಸರ್ಕಾರದ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ. ಹೀಗಾಗಿ, ತೆಲಂಗಾಣ ಸರ್ಕಾರದ ಈ ಮಸೂದೆಗೆ ಕಾನೂನಿನ ತೊಡಕು ಎದುರಾಗುವ ಸಂಭವ ಇದೆ. ಬಿಹಾರದ ನಿತೀಶ್ ಕುಮಾರ್ ಸರ್ಕಾರವು ಎಸ್‌ಸಿ, ಎಸ್‌ಟಿ, ಒಬಿಸಿ ಮೀಸಲಾತಿಯನ್ನು ಶೇ 65ಕ್ಕೆ ಏರಿಸಿದಾಗ ಅದನ್ನು ಪಟ್ನಾ ಹೈಕೋರ್ಟ್ ಅಸಾಂವಿಧಾನಿಕ ಎಂದು ರದ್ದುಪಡಿಸಿತ್ತು. ಇದೇ ರೀತಿ ಮರಾಠಾ ಮೀಸಲಾತಿ ಮಸೂದೆ, ಛತ್ತೀಸಗಢದ ಮೀಸಲಾತಿ ಮಸೂದೆಗಳು ರದ್ದಾಗಿದ್ದವು.

1992ರ ಸುಪ್ರೀಂ ಕೋರ್ಟ್‌ ಆದೇಶದ ಹೊರತಾಗಿಯೂ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿ, ಅದನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು ತಮಿಳುನಾಡು. ಜಯಲಲಿತಾ ನೇತೃತ್ವದ ಎಐಎಡಿಎಂಕೆ ಸರ್ಕಾರವು ಮೀಸಲಾತಿ ಪ್ರಮಾಣವನ್ನು ಶೇ 69ಕ್ಕೆ ಹೆಚ್ಚಿಸಿ, ಅದನ್ನು ಸಂವಿಧಾನದ 9ನೇ ಶೆಡ್ಯೂಲ್‌ನಲ್ಲಿ ಸೇರಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಿ, ಅದರಲ್ಲಿ ಯಶಸ್ವಿಯಾಗಿತ್ತು. ಈ ಮಾರ್ಗವೂ ತೆಲಂಗಾಣದ ಮುಂದಿದೆ. 

ರೇವಂತ್ ರೆಡ್ಡಿ ಸರ್ಕಾರವು ಮತ್ತೊಂದು ಮಸೂದೆಯನ್ನೂ‌ ಮಂಡಿಸಿ ಅಂ‌ಗೀಕಾರ ಪಡೆದುಕೊಂಡಿದೆ. ‘ತೆಲಂಗಾಣ ಹಿಂದುಳಿದ ವರ್ಗಗಳು (ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ) ಮಸೂದೆ 2025’ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಶೇ 42ರಷ್ಟು ಮೀಸಲಾತಿ ಕಲ್ಪಿಸುತ್ತದೆ. 

‘ನಿಖರ ದತ್ತಾಂಶ’ ತೊಡಕಾಗುವುದೇ?

ಎಸ್‌ಸಿ ಒಳಮೀಸಲಾತಿ ಕಲ್ಪಿಸುವಾಗ ಉಪಜಾತಿಗಳ ನಿಖರ, ವೈಜ್ಞಾನಿಕ ದತ್ತಾಂಶ ಆಧರಿಸಿ ಹಂಚಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ತೆಲಂಗಾಣದಲ್ಲಿ ಇತ್ತೀಚೆಗೆ ಜಾತಿಗಣತಿ ಮಾಡಿದ್ದರೂ ಅಲ್ಲಿ ಒಳಮೀಸಲಾತಿ ಕಲ್ಪಿಸಿರುವುದು 2011ರ ಜನಗಣತಿಯ ಆಧಾರದಲ್ಲಿ. ಆಂಧ್ರ ಪ್ರದೇಶದಲ್ಲಿಯೂ ಒಳಮೀಸಲಾತಿ ಪ್ರಮಾಣವನ್ನು 2011ರ ಜನಗಣತಿ ಆಧರಿಸಿಯೇ ಲೆಕ್ಕಹಾಕಲಾಗಿದೆ.  

ತೆಲಂಗಾಣ ಸರ್ಕಾರದ ಮಸೂದೆಗೆ ರಾಜ್ಯಪಾಲರ ಅಂಕಿತ ಬಿದ್ದ ಮೇಲೆ ಅದು ಕಾಯ್ದೆಯಾಗಿ ಜಾರಿಗೆ ಬರಲಿದೆ. ತೆಲಂಗಾಣದಲ್ಲಿ ಈ ಹಿಂದೆ ರಾಜ್ಯಪಾಲರು ಮತ್ತು ಸರ್ಕಾರ ನಡುವೆ ಸಂಘರ್ಷ ನಡೆದಿತ್ತು. ಅದು ಈ ಬಾರಿಯೂ ಮುಂದುವರಿದರೆ, ಒಳಮೀಸಲಾತಿ ಮಸೂದೆ, ಹಿಂದುಳಿದ ವರ್ಗಗಳ ಮೀಸಲಾತಿ ಮಿತಿ ಹೆಚ್ಚಳದ ಮಸೂದೆಗಳ ಜಾರಿಗೆ ಅಡ್ಡಿಯಾಗಬಹುದು. ಜತೆಗೆ, ನಿಖರ ದತ್ತಾಂಶದ ಪ್ರಶ್ನೆಯ ಆಧಾರದಲ್ಲಿ ತೆಲಂಗಾಣ ಮತ್ತು ಆಂಧ್ರ ಪ್ರದೇಶ ಎರಡೂ ರಾಜ್ಯಗಳ ನಿರ್ಧಾರದ ಬಗ್ಗೆ ಯಾರಾದರೂ ನ್ಯಾಯಾಲಯದಲ್ಲಿ ಪ್ರಶ್ನಿಸಿದರೆ, ಅದನ್ನು ಸರ್ಕಾರಗಳು ಹೇಗೆ ಸಮರ್ಥಿಸಿಕೊಳ್ಳುತ್ತವೆ ಎನ್ನುವುದರ ಮೇಲೆ ಒಳಮೀಸಲಾತಿ ಜಾರಿಯಾಗಲಿದೆಯೇ ಇಲ್ಲವೇ ಎನ್ನುವುದು ನಿಂತಿದೆ.

ಹರಿಯಾಣ ಮೊದಲು 

1994ರಲ್ಲಿ ಮೊದಲ ಬಾರಿಗೆ ಪರಿಶಿಷ್ಟ ಜಾತಿಯ ಉಪಪಂಗಡಗಳಲ್ಲಿ ಒಳಮೀಸಲಾತಿ ಜಾರಿ ಮಾಡಿದ ರಾಜ್ಯ ಹರಿಯಾಣ. 2006ರಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಅದನ್ನು ರದ್ದು‍ಪಡಿಸಿತ್ತು. ನಂತರ ಈ ವಿಚಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ, ಒಳಮೀಸಲಾತಿ ಪರವಾದ ತೀರ್ಪು ಬಂತು. ಸುಪ್ರೀಂ ಕೋರ್ಟ್‌ ತೀರ್ಪಿನ ನಂತರವೂ ಎಸ್‌ಸಿ ಒಳಮೀಸಲಾತಿ ನೀಡಿದ ಮಾಡಿದ ಮೊದಲ ರಾಜ್ಯ ಹರಿಯಾಣ.

2024ರ ವಿಧಾನಸಭಾ ಚುನಾವಣೆಯಲ್ಲಿ ವಾಲ್ಮೀಕಿ ಮತ್ತು ಇತರ ಪ್ರಬಲ ಎಸ್‌ಸಿ ಉಪಜಾತಿಗಳು ಕಾಂಗ್ರೆಸ್ ಅನ್ನು ಬೆಂಬಲಿಸಿದ್ದರೆ, ಉಳಿದ, ಅಷ್ಟೇನೂ ಪ್ರಬಲವಲ್ಲದ ಎಸ್‌ಸಿ ಉಪಜಾತಿಗಳ ಹೆಚ್ಚು ಮಂದಿ ಬಿಜೆಪಿಯನ್ನು ಬೆಂಬಲಿಸಿದ್ದರು. ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿದ ಬಿಜೆಪಿ, ತನ್ನ ಮೊದಲ ಸಂಪುಟ ಸಭೆಯಲ್ಲೇ ಒಳಮೀಸಲಾತಿ ಜಾರಿ ಮಾಡಿತು. ಎಸ್‌ಸಿ ಉಪಜಾತಿಗಳನ್ನು ‘ವಂಚಿತ ಎಸ್‌ಸಿ ಉಪಜಾತಿಗಳು’ (ಡಿಎಸ್‌ಸಿ), ‘ಇತರೆ ಎಸ್‌ಸಿ ಉಪಜಾತಿಗಳು’ (ಒಎಸ್‌ಸಿ) ಎಂದು ವರ್ಗೀಕರಿಸಿ, ಶೇ 20ರ ಮೀಸಲಾತಿಯನ್ನು ಎರಡೂ ಗುಂಪುಗಳಿಗೆ ಸಮನಾಗಿ ಹಂಚಿತು. ರಾಜ್ಯ ಪರಿಶಿಷ್ಟ ಜಾತಿ ಆಯೋಗದ ವರದಿಯ ಅನ್ವಯ ಡಿಎಸ್‌ಸಿ ಗುಂಪಿಗೆ
ಶೇ 10ರ ಮೀಸಲಾತಿ ಕಲ್ಪಿಸಿತು.

ಹರಿಯಾಣದಲ್ಲಿ ಶೇ 20.2ರಷ್ಟು ದಲಿತರಿದ್ದಾರೆ. ಈ ಪೈಕಿ ಜಾಟವರು (ಚಮ್ಮಾರರು ಕೂಡ ಇದೇ ಗುಂಪಿಗೆ ಸೇರಿದವರು) ಪ್ರಬಲರಾಗಿದ್ದು, ಒಟ್ಟು ಎಸ್‌ಸಿ ಜನಸಂಖ್ಯೆಯಲ್ಲಿ ಅವರ ಪ್ರಮಾಣ ಶೇ 50 ಆಗಿದೆ. ಅದರ ಜತೆಗೆ, ವಾಲ್ಮೀಕಿ ಶೇ 25–ಶೇ 30 ಇದ್ದರೆ, ಧಾನಕ್‌ಗಳು ಶೇ 10ರಷ್ಟು ಇದ್ದಾರೆ. ಉಳಿದ ಎಸ್‌ಸಿ ಜನಸಂಖ್ಯೆಯಲ್ಲಿ 34 ಸಣ್ಣ ಉಪಜಾತಿಗಳು ಸೇರಿವೆ. 

ಯಾವುದೇ ನಿಖರ, ವೈಜ್ಞಾನಿಕ ದತ್ತಾಂಶ ಇಲ್ಲದೇ ಹರಿಯಾಣ ಸರ್ಕಾರವು ಎಸ್‌ಸಿ ಒಳಮೀಸಲಾತಿ ನೀಡಿದೆ ಎಂದು ‘ಹರಿಯಾಣ ಪ್ರದೇಶ ಚಮ್ಮಾರ್ ಮಹಾಸಭಾ’ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಅದು ವಿಚಾರಣೆಯ ಹಂತದಲ್ಲಿದೆ.

ಕರ್ನಾಟಕದಲ್ಲಿಯೂ ಹೋರಾಟ

ಸುಪ್ರೀಂ ಕೋರ್ಟ್‌ ತೀರ್ಪಿನ ನಂತರ ಪರಿಶಿಷ್ಟ ಜಾತಿಯ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಕರ್ನಾಟಕದಲ್ಲಿಯೂ ಹಲವು ಸಂಘಟನೆಗಳು ಹಕ್ಕೊತ್ತಾಯ ಮಂಡಿಸುತ್ತಲೇ ಇವೆ. ಅದಕ್ಕಾಗಿ ಮತ್ತೆ ಪ್ರತಿಭಟನೆ, ಪಾದಯಾತ್ರೆ ನಡೆಸಲಾಗುತ್ತಿದೆ. ಒಳಮೀಸಲಾತಿ ಜಾರಿ ಆಗುವವರೆಗೆ ಸರ್ಕಾರವು ಯಾವುದೇ ನೇಮಕಾತಿ ಮಾಡಿಕೊಳ್ಳಬಾರದು ಎಂದು ಸಂಘಟನೆಗಳು ಆಗ್ರಹಿಸುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.