1975ರಲ್ಲಿ ಇಂದಿರಾ ಗಾಂಧಿ ಅವರು ಹೇರಿದ್ದ ತುರ್ತು ಪರಿಸ್ಥಿತಿ ದೇಶದ ಇತಿಹಾಸದಲ್ಲಿ ಕಪ್ಪು ಚುಕ್ಕೆ. ಸ್ವಾತಂತ್ರ್ಯದ ನಂತರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮುಕ್ತವಾಗಿ ಬದುಕುತ್ತಿದ್ದ ಜನರು ಒಮ್ಮೆಗೇ ಸರ್ವಾಧಿಕಾರಿ ಆಡಳಿತದ ಕರಾಳ ರೂಪ ಕಂಡು ಬೆಚ್ಚಿಬಿದ್ದಿದ್ದರು. ಅವರ ಹಕ್ಕುಗಳು, ಅಭಿವ್ಯಕ್ತಿ, ಮಾಧ್ಯಮಗಳು ಎಲ್ಲವೂ ದಮನಕ್ಕೊಳಗಾಗಿದ್ದವು. ತುರ್ತು ಪರಿಸ್ಥಿತಿಯು ಒಂದು ರಾಜಕೀಯ ವಿದ್ಯಮಾನವಾಗಿ, ನಿರಂಕುಶ ಪ್ರಭುತ್ವದ ನೆನಪಾಗಿ, ಒಂದು ಎಚ್ಚರವಾಗಿ ಜನರ ಸ್ಮೃತಿಯಲ್ಲಿ ದಾಖಲಾಗಿದೆ. 21 ತಿಂಗಳು ಜಾರಿಯಲ್ಲಿದ್ದ ತುರ್ತು ಪರಿಸ್ಥಿತಿ ನಡೆದು ಬಂದ ಹಾದಿ ಇಲ್ಲಿದೆ
1971 ಮಾರ್ಚ್: ಮೂರನೇ ಎರಡು ಪ್ರಚಂಡ ಬಹುಮತದೊಂದಿಗೆ ಮತ್ತೆ ಪ್ರಧಾನಿಯಾಗಿ ಅಧಿಕಾರಕ್ಕೆ ಏರಿದ ಇಂದಿರಾ ಗಾಂಧಿ
1971 ಮಾರ್ಚ್: ಉತ್ತರ ಪ್ರದೇಶದ ರಾಯ್ ಬರೇಲಿ ಲೋಕಸಭಾ ಕ್ಷೇತ್ರದಲ್ಲಿ ಇಂದಿರಾ ಗಾಂಧಿ ಅವರ ವಿರುದ್ಧ ಸೋತಿದ್ದ ರಾಜ್ ನಾರಾಯಣ್ ಅವರಿಂದ ನ್ಯಾಯಾಲಯಲ್ಲಿ ದಾವೆ. ಇಂದಿರಾ ಅವರು ಚುನಾವಣೆಯಲ್ಲಿ ಅವ್ಯವಹಾರ ಎಸಗಿ ಗೆದ್ದಿದ್ದಾರೆ, 1951ರ ಜನಪ್ರಾತಿನಿಧ್ಯ ಕಾಯ್ದೆ ಉಲ್ಲಂಘಿಸಿದ್ದಾರೆ ಎಂದು ಆರೋಪ
1973 ಏಪ್ರಿಲ್: ಸುಪ್ರೀಂ ಕೋರ್ಟ್‌ನ ಮೂವರು ಅತ್ಯಂತ ಹಿರಿಯ ನ್ಯಾಯಮೂರ್ತಿಗಳ ಹೆಸರನ್ನು ಕೈಬಿಟ್ಟು, ಎ.ಎನ್.ರಾಯ್ ಅವರನ್ನು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಿದ ಇಂದಿರಾ
1974 ಜನವರಿ: ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದ ಗುಜರಾತ್ ಮುಖ್ಯಮಂತ್ರಿ ಚಿಮನ್ ಭಾಯಿ ಪಟೇಲ್ ಅವರ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ. ಚಿಮನ್ ಅವರ ಪದಚ್ಯುತಿಗೆ ಆಗ್ರಹಿಸಿ ನಡೆದ ನವನಿರ್ಮಾಣ ಆಂದೋಲನದ ಸಂದರ್ಭದಲ್ಲಿ ಸರ್ಕಾರಿ ಬಸ್, ಕಚೇರಿಗಳಿಗೆ ಬೆಂಕಿ
1974 ಮಾರ್ಚ್: ಮುಖ್ಯಮಂತ್ರಿ ಸ್ಥಾನ ತ್ಯಜಿಸುವಂತೆ ಚಿಮನ್ ಭಾಯಿ ಪಟೇಲ್ ಅವರಿಗೆ ಇಂದಿರಾ ಗಾಂಧಿ ಸೂಚನೆ
1974 ಏಪ್ರಿಲ್: ಬಿಹಾರ ರಾಜ್ಯ ಸರ್ಕಾರದ ಭ್ರಷ್ಟಾಚಾರ, ದುರಾಡಳಿತದ ವಿರುದ್ಧ ನಡೆಸಲಾಗುತ್ತಿದ್ದ ಹೋರಾಟದ ನಾಯಕತ್ವ ವಹಿಸುವಂತೆ ಛಾತ್ರ ಸಂಘರ್ಷ ಸಮಿತಿಯ ವಿದ್ಯಾರ್ಥಿ ನಾಯಕರಿಂದ ಜಯಪ್ರಕಾಶ್ ನಾರಾಯಣ್ (ಜೆ.ಪಿ) ಅವರಿಗೆ ಮನವಿ
ತುರ್ತು ಪರಿಸ್ಥಿತಿ ಹೇರಿಕೆಯನ್ನು ಖಂಡಿಸಿ ಸಾಹಿತಿಗಳು ಕಲಾವಿದರು ಮತ್ತು ಜನತಾ ಪಕ್ಷದ ಬೆಂಬಲಿಗರು ಬೆಂಗಳೂರಿನಲ್ಲಿ 1977ರ ಮಾರ್ಚ್ 14ರಂದು ಪ್ರತಿಭಟನಾ ಮೆರವಣಿಗೆ ನಡೆಸಿದ್ದರು ಚಿತ್ರ:ಪ್ರಜಾವಾಣಿ ಆರ್ಕೈವ್ಸ್
1974 ಮೇ 8: ವೇತನ ಹೆಚ್ಚಳಕ್ಕೆ ಆಗ್ರಹಿಸಿ ದೇಶದಾದ್ಯಂತ ರೈಲ್ವೆ ಮುಷ್ಕರಕ್ಕೆ ಕರೆ ನೀಡಿದ ಜಾರ್ಜ್ ಫರ್ನಾಂಡಿಸ್. ಮೂರು ವಾರ ನಡೆದ ಮುಷ್ಕರ. ಹೋರಾಟವನ್ನು ಬಲವಂತವಾಗಿ ಹತ್ತಿಕ್ಕಿದ ಕೇಂದ್ರ ಸರ್ಕಾರ
1975 ಜನವರಿ 8: ಸರ್ಕಾರವನ್ನು ವಿರೋಧಿಸುತ್ತಿರುವವರನ್ನು ಬಂಧಿಸುವಂತೆ ಮತ್ತು ದೇಶದಲ್ಲಿ ಆಂತರಿಕ ತುರ್ತು ಪರಿಸ್ಥಿತಿ ಹೇರುವಂತೆ ಇಂದಿರಾ ಗಾಂಧಿ ಅವರಿಗೆ ಪತ್ರ ಬರೆದ ಕಾಂಗ್ರೆಸ್ ನಾಯಕ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸಿದ್ಧಾರ್ಥ ಶಂಕರ್ ರಾಯ್
1975 ಜೂನ್ 12: 1971ರ ಚುನಾವಣೆಯಲ್ಲಿ ರಾಯ್‌ಬರೇಲಿಯಲ್ಲಿ ಇಂದಿರಾ ವಿರುದ್ಧ ಸೋತಿದ್ದ ರಾಜ್ ನಾರಾಯಣ್ ಅವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ತೀರ್ಪು. ಇಂದಿರಾ ಅವರನ್ನು ಲೋಕಸಭಾ ಸದಸ್ಯತ್ವದಿಂದ ವಜಾಗೊಳಿಸಿದ
ನ್ಯಾ. ಜಗಮೋಹನ್‌ಲಾಲ್ ಸಿನ್ಹಾ
1975 ಜೂನ್ 12: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಜೆ.ಪಿ ಬೆಂಬಲಿತ, ಮೊರಾರ್ಜಿ ದೇಸಾಯಿ ನೇತೃತ್ವದ ಜನತಾ ಪರಿವಾರಕ್ಕೆ ಗೆಲುವು
1975 ಜೂನ್ 23: ವಿರೋಧ ಪಕ್ಷಗಳ ನಾಯಕರ ಬಂಧನಕ್ಕೆ ಸಿದ್ಧತೆ ಆರಂಭ
1975 ಜೂನ್ 24: ಇಂದಿರಾ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿರುವುದಕ್ಕೆ ಭಾಗಶಃ ತಡೆಯಾಜ್ಞೆ ನೀಡಿದ ಸುಪ್ರೀಂ ಕೋರ್ಟ್. ಪ್ರಧಾನಿಯಾಗಿ ಮುಂದುವರಿಯಲು ಅವಕಾಶ
1975 ಜೂನ್ 25: ದೇಶದಲ್ಲಿ ಆಂತರಿಕ ತುರ್ತು ಪರಿಸ್ಥಿತಿ ಹೇರುವ ಸಂಬಂಧದ ಘೋಷಣೆಗೆ ಸಹಿ ಹಾಕಿದ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದ್
1975 ಜೂನ್ 26: ಜಯಪ್ರಕಾಶ್ ನಾರಾಯಣ್, ಮೊರಾರ್ಜಿ ದೇಸಾಯಿ, ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ. ಅಡ್ವಾಣಿ ಸೇರಿದಂತೆ ವಿರೋಧ ಪಕ್ಷಗಳ ಹಲವು ನಾಯಕರ ಬಂಧನ. ತುರ್ತು ಪರಿಸ್ಥಿತಿ ಹೇರಿಕೆ ಸುಗ್ರೀವಾಜ್ಞೆಯನ್ನು ಅನುಮೋದಿಸುವುದಕ್ಕಾಗಿ ಜೂನ್ 26ರ ಬೆಳಿಗ್ಗೆ 6 ಗಂಟೆಗೆ ಸಚಿವ ಸಂಪುಟ ಸಭೆ. ಮಾಧ್ಯಮಗಳ ಮೇಲೆ ನಿಯಂತ್ರಣ ಹೇರಿಕೆ
1975 ಜೂನ್ 28: ಎರಡು ದಿನಗಳ ನಂತರ ದೆಹಲಿಯಲ್ಲಿ ಮುದ್ರಣ ಕಂಡ ದಿನಪತ್ರಿಕೆಗಳು. ಸೆನ್ಸಾರ್‌ಗೆ ಪತ್ರಕರ್ತರ ಖಂಡನೆ
1975 ಜೂನ್ 30: ಆಂತರಿಕ ಭದ್ರತಾ ನಿರ್ವಹಣೆ ಕಾಯ್ದೆಗೆ (ಮಿಸಾ) ತಿದ್ದುಪಡಿ ಮಾಡಿ ಸುಗ್ರೀವಾಜ್ಞೆ ಜಾರಿ (ಇದರ ಅಡಿಯಲ್ಲಿ ವಶಕ್ಕೆ ಪಡೆದ ವ್ಯಕ್ತಿಗಳನ್ನು ಬಂಧಿಸಲು ಕಾರಣವನ್ನು ಬಹಿರಂಗಪಡಿಸಬೇಕಿಲ್ಲ)
1975 ಜುಲೈ 4: ಆರ್‌ಎಸ್‌ಎಸ್, ಆನಂದ ಮಾರ್ಗ, ಜಮಾತ್ ಎ–ಇಸ್ಲಾಮಿ, ನಕ್ಸಲರ ಮೇಲೆ ನಿಷೇಧ ಹೇರಿಕೆ
ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲಾದ ಸುದ್ದಿಯು 1975ರ ಜೂನ್ 27ರ ‘ಪ್ರಜಾವಾಣಿ’ ಸಂಚಿಕೆಯ ಮುಖಪುಟದಲ್ಲಿ ಪ್ರಕಟವಾಗಿತ್ತು
1975 ಜುಲೈ 21: ಸಂಸತ್ತಿನ ತುರ್ತು ಅಧಿವೇಶನ ಕರೆದು ತುರ್ತು ಪರಿಸ್ಥಿತಿ ಘೋಷಣೆಗೆ ಅನುಮೋದನೆ
1975 ಆಗಸ್ಟ್ 5: 1951ರ ಜನಪ್ರಾತಿನಿಧ್ಯ ಕಾಯ್ದೆಗೆ ಮಾಡಲಾದ ತಿದ್ದುಪಡಿಗಳನ್ನು ಪೂರ್ವಾನ್ವಯವಾಗುವಂತೆ ಅಂಗೀಕರಿಸಿದ ಸಂಸತ್ (ಕಾನೂನನ್ನು ಬದಲಿಸುವ ಮೂಲಕ ಇಂದಿರಾ ಗಾಂಧಿ ಅವರನ್ನು ಅನರ್ಹಗೊಳಿಸಿ ಅಲಹಾಬಾದ್ ಹೈಕೋರ್ಟ್ ಹೊರಡಿಸಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸುವುದನ್ನು ಕಾಂಗ್ರೆಸ್ ಬಯಸಿತ್ತು)
1975 ನವೆಂಬರ್ 7: ರಾಯ್‌ಬರೇಲಿ ಕ್ಷೇತ್ರದಲ್ಲಿ ಇಂದಿರಾ ಆಯ್ಕೆಯನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್
1975 ನವೆಂಬರ್ 12: ಪೆರೋಲ್ ಮೇಲೆ ಜೆಪಿ ಬಿಡುಗಡೆ; ಆಸ್ಪತ್ರೆಗೆ ದಾಖಲು
1976 ಜನವರಿ: ಲೋಕಸಭಾ ಚುನಾವಣೆಯನ್ನು ಒಂದು ವರ್ಷ ಮುಂದೂಡಲು ಸಂಸತ್ತಿನಲ್ಲಿ ನಿರ್ಣಯ
1976 ಜನವರಿ 19: ಸರ್ಕಾರದ ‘20 ಅಂಶಗಳ ಕಾರ್ಯಕ್ರಮ’ ಘೋಷಣೆ
1976 ಜನವರಿ 31: ತಮಿಳುನಾಡಿನಲ್ಲಿದ್ದ ಕರುಣಾನಿಧಿ ನೇತೃತ್ವದ ಡಿಎಂಕೆ ಸರ್ಕಾರವನ್ನು ವಜಾಗೊಳಿಸಿದ ರಾಷ್ಟ್ರಪತಿ
1976 ಮಾರ್ಚ್: ಗುಜರಾತ್‌ನ ಬಾಬು ಭಾಯಿ ಪಟೇಲ್ ನೇತೃತ್ವದ ಜನತಾ ಸರ್ಕಾರ ಪತನ
1976 ಅಕ್ಟೋಬರ್–ನವೆಂಬರ್: ಸಂವಿಧಾನಕ್ಕೆ 42ನೇ ತಿದ್ದುಪಡಿಯನ್ನು ಅಂಗೀಕರಿಸಿದ ಸಂಸತ್. ಇದು ಸಂವಿಧಾನವನ್ನು ತಿದ್ದುಪಡಿ ಮಾಡಲು ಸಂಪೂರ್ಣ ಅಧಿಕಾರ ನೀಡಿತಲ್ಲದೆ, ಸಂವಿಧಾನಕ್ಕೆ ಮಾಡಲಾದ ತಿದ್ದಪಡಿಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದಕ್ಕೂ ಅವಕಾಶ ಇಲ್ಲದಂತೆ ಮಾಡಿತು
1976 ನವೆಂಬರ್ 5: ಲೋಕಸಭೆಯ ಅವಧಿಯನ್ನು ಮತ್ತೆ ಒಂದು ವರ್ಷ ವಿಸ್ತರಿಸುವುದಕ್ಕೆ ನಿರ್ಣಯ ಅಂಗೀಕಾರ
ಇಂದಿರಾ ಗಾಂಧಿ ಅವರ ನಿರ್ಧಾರದ ಪರವಾಗಿ ಅವರ ಬೆಂಬಲಿಗರು 1975ರ ಜುಲೈ 24ರಂದು ಬೆಂಗಳೂರಿನಲ್ಲಿ ಬೃಹತ್ ರ‍್ಯಾಲಿ ನಡೆಸಿದ್ದರು ಚಿತ್ರ:ಪ್ರಜಾವಾಣಿ ಆರ್ಕೈವ್ಸ್
1976 ನವೆಂಬರ್: ಗುವಾಹಟಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಸಂಜಯ್ ಗಾಂಧಿ ಅವರು ಇಂದಿರಾ ಗಾಂಧಿ ಅವರ ಉತ್ತರಾಧಿಕಾರಿಯಾಗಿ ಘೋಷಣೆ
1976 ಡಿಸೆಂಬರ್ 4: ವಿರೋಧ ಪಕ್ಷ ನಾಯಕರಾದ ಚರಣ್ ಸಿಂಗ್ ಮತ್ತು ಬಿಜು ಪಟ್ನಾಯಕ್ ಅವರು ಗೃಹ ವ್ಯವಹಾರಗಳ ರಾಜ್ಯ ಖಾತೆ ಸಚಿವ ಓಂ ಮೆಹ್ತಾ ಅವರನ್ನು ಭೇಟಿ ಮಾಡಿ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಳ್ಳುವ ಬಗ್ಗೆ ಚರ್ಚೆ
1977 ಜನವರಿ 1: ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿರುವ ಅಂಶಗಳನ್ನು ಉಲ್ಲೇಖಿಸಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಪತ್ರ ಬರೆದ ಬಿಜು ಪಟ್ನಾಯಕ್
1977 ಜನವರಿ: ವಿರೋಧ ಪಕ್ಷದ ನಾಯಕ ಅಶೋಕ ಮೆಹ್ತಾ ಅವರ ಪತ್ರಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಇಂದಿರಾ. ವಿರೋಧ ಪಕ್ಷಗಳು ಕೆಲವು ಷರತ್ತುಗಳನ್ನು ಒಪ್ಪಿಕೊಂಡರೆ ಸಂಸದೀಯ ಪ್ರಜಾಪ್ರಭುತ್ವವನ್ನು ಪುನರ್ ಸ್ಥಾಪಿಸಬಹುದು ಎಂದು ಪ್ರತಿಪಾದನೆ
1977 ಜನವರಿ 18: 1977ರ ಮಾರ್ಚ್‌ನಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ ಎಂದು ಘೋಷಿಸಿದ ಇಂದಿರಾ
1977 ಜನವರಿ 18: ಮೊರಾರ್ಜಿ ದೇಸಾಯಿ, ಅಡ್ವಾಣಿ ಜೈಲಿನಿಂದ ಬಿಡುಗಡೆ
1977 ಜನವರಿ 20: ಜನತಾ ಪಕ್ಷ ಸ್ಥಾಪನೆ
1977 ಮಾರ್ಚ್ 16–20: ಸಾರ್ವತ್ರಿಕ ಚುನಾವಣೆ
1977 ಮಾರ್ಚ್ 20: ರಾಯ್‌ಬರೇಲಿಯಲ್ಲಿ ಇಂದಿರಾ ಗಾಂಧಿಗೆ, ಅಮೇಠಿಯಲ್ಲಿ ಸಂಜಯ್ ಗಾಂಧಿಗೆ ಸೋಲು. ಜನತಾ ಪಕ್ಷ ನೇತೃತ್ವದ ಮೈತ್ರಿಕೂಟಕ್ಕೆ ಬಹುಮತ
1977 ಮಾರ್ಚ್ 21: ತುರ್ತು ಪರಿಸ್ಥಿತಿ ವಾಪಸ್
1977 ಮಾರ್ಚ್ 24: ದೇಶದ ಐದನೇ ಪ್ರಧಾನಿಯಾಗಿ ಮೊರಾರ್ಜಿ ದೇಸಾಯಿ ಪ್ರಮಾಣ ವಚನ ಸ್ವೀಕಾರ
ತುರ್ತು ಪರಿಸ್ಥಿತಿ ಖಂಡಿಸಿ 'ಪ್ರಜಾವಾಣಿ'ಯು ಸಂಪಾದಕೀಯಕ್ಕೆ ಮೀಸಲಾಗಿದ್ದ ಜಾಗವನ್ನು ಖಾಲಿ ಬಿಟ್ಟು ಪ್ರತಿಭಟಿಸಿತ್ತು.
ಆಧಾರ: ಕೂಮಿ ಕಪೂರ್ ಅವರ ‘ದಿ ಎಮೆರ್ಜೆನ್ಸಿ ಎ ಪರ್ಸನಲ್ ಹಿಸ್ಟರಿ’ ಕೃತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.