2024ಕ್ಕೆ ವಿದಾಯ ಹೇಳಲು ಇನ್ನು ಕೆಲವು ಗಂಟೆಗಳಷ್ಟೇ ಇದೆ. ಹುರುಪು, ವಿಶ್ವಾಸದಿಂದ ಹೊಸ ವರ್ಷ 2025 ಸ್ವಾಗತಿಸಲು ಜಗತ್ತು ಸಜ್ಜಾಗಿದೆ. ಜಾಗತಿಕ ಮಟ್ಟದಲ್ಲಿ ಯುದ್ಧ, ಸಂಘರ್ಷ, ಸಾವು–ನೋವುಗಳಿಗೆ ಸಾಕ್ಷಿಯಾಗಿದ್ದ ಈ ವರ್ಷ ಸಿಹಿಗಿಂತ ಕಹಿಯೇ ನೀಡಿದೆ. ಅಮೆರಿಕ, ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಚುನಾವಣೆಗಳು ನಡೆದ ವರ್ಷ ಇದು. ಕೆಲವು ಕಡೆ ಹೊಸ ಆಡಳಿತ ಅಸ್ತಿತ್ವಕ್ಕೆ ಬಂದಿದ್ದರೆ, ಇನ್ನೂ ಕೆಲವೆಡೆ ಬರಬೇಕಿದೆ. ರಾಷ್ಟ್ರಗಳ ನಡುವೆ ಗಡಿ ಬಿಕ್ಕಟ್ಟು, ಸಂಘರ್ಷ, ವೈಮನಸ್ಸು, ರಾಜಕೀಯ ಮೇಲಾಟಗಳೇ ಮೇಳೈಸಿರುವ ಹೊತ್ತಿನಲ್ಲಿ ಹೊಸ ವರ್ಷ ಜಾಗತಿಕವಾಗಿ ಹಲವು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.
ಹೊಸ ದಿಕ್ಕು ತೋರುವ ಚುನಾವಣೆಗಳು
2024 ಚುನಾವಣಾ ವರ್ಷ ಎಂದೇ ಕರೆಯಬೇಕಾಗುತ್ತದೆ. ಯುರೋಪಿಯನ್ ಯೂನಿಯನ್ ಸೇರಿದಂತೆ ಜಗತ್ತಿನ 64 ದೇಶಗಳಲ್ಲಿ ಈ ವರ್ಷ ಚುನಾವಣೆಗಳು ನಡೆದಿವೆ. ಭಾರತ, ಯುರೋಪಿಯನ್ ಯೂನಿಯನ್, ಇಂಗ್ಲೆಂಡ್, ಇಂಡೊನೇಷ್ಯಾ, ಪಾಕಿಸ್ತಾನ, ಬಾಂಗ್ಲಾದೇಶ, ಉಕ್ರೇನ್, ದಕ್ಷಿಣ ಕೊರಿಯಾ, ದಕ್ಷಿಣ ಆಫ್ರಿಕಾ, ಅಲ್ಜೀರಿಯಾ, ಮಡಗಾಸ್ಕರ್, ವೆನಿಜುವೆಲಾ, ತೈವಾನ್, ಮಾಲಿ, ಶ್ರೀಲಂಕಾ, ರೊಮೇನಿಯಾ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ಈ ವರ್ಷ ಚುನಾವಣೆ ನಡೆದಿವೆ. ಅಮೆರಿಕದಲ್ಲಿ ಟ್ರಂಪ್ ಎರಡನೆಯ ಬಾರಿಗೆ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ವಿಶ್ವದ ಶೇ 49ರಷ್ಟು ಜನರು ಚುನಾವಣೆಗಳಲ್ಲಿ ಮತ ಚಲಾವಣೆ ಮಾಡಿದ್ದಾರೆ. ಹಲವು ದೇಶಗಳಲ್ಲಿ ಅಚ್ಚರಿಯ ಫಲಿತಾಂಶ ಬಂದಿದೆ. ಈ ಚುನಾವಣೆಗಳಲ್ಲಿ ಆಯ್ಕೆಯಾದ ನಾಯಕರು 2025 ಸೇರಿದಂತೆ ಮುಂದಿನ ದಿನಗಳಲ್ಲಿ ಜಾಗತಿಕ ಬೆಳವಣಿಗೆಗಳನ್ನು ದೊಡ್ಡ ಮಟ್ಟದಲ್ಲಿ ನಿಯಂತ್ರಿಸಲಿದ್ದಾರೆ ಎನ್ನಲಾಗುತ್ತಿದೆ.
ಅಮೆರಿಕದತ್ತ ಭಾರತದ ಚಿತ್ತ: ಜಗತ್ತಿನ ಅತಿ ದೊಡ್ಡ ಪ್ರಜಾತಾಂತ್ರಿಕ ರಾಷ್ಟ್ರವಾದ ಭಾರತದಲ್ಲಿ ನರೇಂದ್ರ ಮೋದಿ ಮೂರನೆಯ ಬಾರಿಗೆ ಪ್ರಧಾನಿಯಾದರು. ಬಿಜೆಪಿ ನೇತೃತ್ವದ ಎನ್‌ಡಿಎ ಕೂಟವು ಚುನಾವಣೆಯಲ್ಲಿ ಅತ್ಯಧಿಕ ಸ್ಥಾನಗಳನ್ನು ಗೆದ್ದಿದೆ. ‘ಇಂಡಿಯಾ’ ಕೂಟದ ಹೆಸರಿನಲ್ಲಿ ಸಂಘಟಿತವಾಗಿ ಎನ್‌ಡಿಎ ವಿರುದ್ಧ ಹೋರಾಡಿದ್ದ ವಿರೋಧ ಪಕ್ಷಗಳಲ್ಲಿ ವರ್ಷಾಂತ್ಯದ ಹೊತ್ತಿಗೆ ವಿಘಟನೆಯ ಮಾತುಗಳು ಕೇಳಿಬರುತ್ತಿವೆ.
ಇನ್ನೊಂದೆಡೆ, ಟ್ರಂಪ್ ಅವರ ಆಯ್ಕೆಯು ಜಾಗತಿಕ ಬೆಳವಣಿಗೆಗಳ ಮೇಲೆ ಪರಿಣಾಮ ಬೀರಲಿದೆ ಎನ್ನುವ ವಿಶ್ಲೇಷಣೆಗಳು ಕೇಳಿಬಂದಿವೆ. ‘ದೊಡ್ಡಣ್ಣ’ನ ಕೃಪಾಕಟಾಕ್ಷಕ್ಕೆ ಮತ್ತು ಅವಕೃಪೆಗೆ ಯಾರೆಲ್ಲಾ ಗುರಿಯಾಗಲಿದ್ದಾರೆ ಎನ್ನುವ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ. ಮುಖ್ಯವಾಗಿ, ಭಾರತದ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳ ಪಾಲಿಗೆ ಅಮೆರಿಕ ನೆಚ್ಚಿನ ತಾಣವಾಗಿದ್ದು, ಟ್ರಂಪ್ ಅವರ (ವೀಸಾ ನಿರ್ಬಂಧ ಇತ್ಯಾದಿ) ನೀತಿಯಿಂದ ಭಾರತಕ್ಕೆ ಕೊಂಚ ಹಿನ್ನಡೆಯಾಗುವ ಸಾಧ್ಯತೆ ಇದೆ.
ವ್ಯಾಪಾರ ಕ್ಷೇತ್ರದಲ್ಲೂ ಟ್ರಂಪ್ ಆಯ್ಕೆ ಗಮನಾರ್ಹ ಬದಲಾವಣೆಗಳಿಗೆ ಕಾರಣವಾಗಬಹುದು. ‘ಭಾರತವು ಅಮೆರಿಕದ ಉತ್ಪನ್ನಗಳ ಮೇಲೆ ಅತ್ಯಂತ ಹೆಚ್ಚಿನ ತೆರಿಗೆ ವಿಧಿಸುತ್ತಿದ್ದು, ಅದಕ್ಕೆ ಅನುಗುಣವಾಗಿ ನಾವೂ ತೆರಿಗೆ ವಿಧಿಸುತ್ತೇವೆ’ ಎಂದು ಇತ್ತೀಚೆಗಷ್ಟೇ ಟ್ರಂಪ್ ಬೆದರಿಕೆ ಒಡ್ಡಿದ್ದಾರೆ.
ಟ್ರಂಪ್ ಅಬ್ಬರ.. ಯಾರಿಗೆಲ್ಲ ವರ?
ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಎರಡನೆಯ ಬಾರಿಗೆ ಆಯ್ಕೆ ಆಗಿರುವುದರಿಂದ ವಿಶ್ವದ ರಾಜಕೀಯ ಮತ್ತು ಆರ್ಥಿಕ ರಂಗಗಳಲ್ಲಿ ಮಹತ್ವದ ಬದಲಾವಣೆಗಳು ಘಟಿಸುವ ಸಾಧ್ಯತೆ ದಟ್ಟವಾಗಿದೆ. ಅಮೆರಿಕದ ಒಳಗೂ ಹೊರಗೂ ಭಾರಿ ಬದಲಾವಣೆ ತರುವುದಾಗಿ ಟ್ರಂಪ್ ಹೇಳಿದ್ದಾರೆ.
ಟ್ರಂಪ್ ಅವರ ಮೊದಲ ಅವಧಿಯಲ್ಲಿ ವಲಸೆ ನಿಯಂತ್ರಣದ ಸಂಬಂಧ ಹಲವು ಬಿಗಿ ನಿಯಮಗಳನ್ನು ರೂಪಿಸಿದ್ದರು. ಜತೆಗೆ, ಅಕ್ರಮವಾಗಿ ಅಮೆರಿಕ ಪ್ರವೇಶಿಸುವವರನ್ನು ತಡೆಯಲು ಕಠಿಣ ಕ್ರಮಗಳನ್ನು ಕೈಗೊಂಡಿದ್ದರು. ವಲಸೆ ದಾಖಲೆಗಳ ಕಾರಣಕ್ಕೆ ಪೋಷಕರು ಮತ್ತು ಮಕ್ಕಳನ್ನು ಕೂಡ ಬೇರ್ಪಡಿಸಿದ ಹಿನ್ನೆಲೆ ಇರುವ ಸ್ಟೀಫನ್ ಮಿಲ್ಲರ್ ಅವರನ್ನು ಟ್ರಂಪ್ ಶ್ವೇತಭವನಕ್ಕೆ ನೇಮಿಸಿರುವುದು ಈ ಬಾರಿಯೂ ಇಂಥವೇ ಕ್ರಮಗಳು ಪುನರಾವರ್ತನೆ ಆಗಲಿವೆ ಎನ್ನುವುದನ್ನು ಸೂಚಿಸುತ್ತವೆ.
ರಷ್ಯಾ ಜತೆ ಸ್ನೇಹವೋ ವೈರವೋ?
ರಷ್ಯಾ, ಜಗತ್ತಿನ ಮತ್ತೊಂದು ದೊಡ್ಡ ‘ಸೂಪರ್ ಪವರ್’. ಟ್ರಂಪ್ ಅವರು ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ರಷ್ಯಾದ ಮೇಲೆ ಯಾವ ರೀತಿಯ ಪರಿಣಾಮಗಳನ್ನು ಬೀರಬಹುದು ಎನ್ನುವುದನ್ನು ಈಗಲೇ ಹೇಳಲಾಗದು. ಈ ಬಾರಿ ಟ್ರಂಪ್ ಅವರಿಂದ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ಹೆಚ್ಚಿನ ನಿರೀಕ್ಷೆ ಇರುವಂತಿಲ್ಲ.
2016ರಲ್ಲಿ ಅಧ್ಯಕ್ಷರಾಗಿದ್ದ ಟ್ರಂಪ್ ಅವರಿಂದ ರಷ್ಯಾ ಹೆಚ್ಚು ನಿರೀಕ್ಷೆ ಹೊಂದಿತ್ತು. ಆದರೆ, ವಾಸ್ತವ ಅವರು ಊಹಿಸಿದ್ದಕ್ಕಿಂತ ಭಿನ್ನವಾಗಿತ್ತು. ಟ್ರಂಪ್ ವರ್ತನೆ ಬಿಗುವಿನಿಂದ ಕೂಡಿತ್ತು. ರಷ್ಯಾ ಮೇಲೆ ಅವರು ಹಲವು ನಿರ್ಬಂಧ ಹೇರಿದ್ದರು. ರಷ್ಯಾ–ಅಮೆರಿಕ ಸಂಬಂಧ ಮತ್ತಷ್ಟು ಹದಗೆಟ್ಟಿತ್ತು. ಹೀಗಾಗಿ ಈ ಬಾರಿ ರಷ್ಯಾ ಅಮೆರಿಕ ಬಗ್ಗೆ ಭಾರಿ ನಿರೀಕ್ಷೆಗಳನ್ನೇನೂ ಹೊಂದಿಲ್ಲವಾದರೂ ಹೆಚ್ಚಿನ ನಿರ್ಬಂಧಗಳನ್ನು ವಿಧಿಸದಿದ್ದರೆ ಅಷ್ಟೇ ಸಾಕು ಎನ್ನುವ ಭಾವನೆ ಹೊಂದಿದೆ. ಜತೆಗೆ, ಉಕ್ರೇನ್ ಯುದ್ಧ ಮತ್ತಿತರ ಕಾರಣಕ್ಕೆ ಪಶ್ಚಿಮವು ತನ್ನ ಮೇಲೆ ಹೇರಿರುವ ನಿರ್ಬಂಧಗಳನ್ನು ತೆಗೆದುಹಾಕಬೇಕು ಎಂದು ರಷ್ಯಾ ಪ್ರತಿಪಾದಿಸುತ್ತಿದೆ.
‘ಚೀನಾ ನಿರ್ಮಾತೃ’ ಟ್ರಂಪ್
ಜಗತ್ತಿನ ಆರ್ಥಿಕ ವ್ಯವಸ್ಥೆಯ ಮೇಲೆ ಅಮೆರಿಕ ಬಲವಾದ ಹಿಡಿತ ಹೊಂದಿದೆ. ‘ಅಮೆರಿಕ ಮೊದಲು’ ನೀತಿಯ ಪ್ರತಿಪಾದಕರಾದ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದರಿಂದ ಜಾಗತಿಕ ವ್ಯಾಪಾರ ಸಮರ ಉಂಟಾಗಲಿದ್ದು, ಹಲವು ರಾಷ್ಟ್ರಗಳ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗುತ್ತಿದೆ. ವ್ಯಾಪಾರ, ವಹಿವಾಟಿಗೆ ಸಂಬಂಧಿಸಿದ ನಿಯಮಗಳನ್ನು ಬಿಗಿಗೊಳಿಸುವ, ಅಮೆರಿಕದ ಉದ್ಯಮಗಳನ್ನು ರಕ್ಷಿಸಲು ಆಮದಿನ ಮೇಲೆ ಹೆಚ್ಚಿನ ಸುಂಕ ಹೇರುವ ಸೂಚನೆ ನೀಡಿದ್ದಾರೆ.
ಇನ್ನೊಂದೆಡೆ, ಹಲವು ಕ್ಷೇತ್ರಗಳಲ್ಲಿ ಅಮೆರಿಕದ ಪ್ರತಿಸ್ಪರ್ಧಿಯಾಗಿರುವ ಚೀನಾ ವಿಚಾರದಲ್ಲಿಯೂ ಟ್ರಂಪ್ ಇಂಥದ್ದೇ ನಿಲುವು ಪ್ರಕಟಿಸಿದ್ದಾರೆ. ದೇಶದ ವ್ಯಾಪಾರ ಕೊರತೆಯನ್ನು ಕಡಿಮೆ ಮಾಡಲು ಟ್ರಂಪ್ ತಮ್ಮ ಮೊದಲ ಅವಧಿಯಲ್ಲಿಯೇ ಚೀನಾದಿಂದ ಆಮದಾಗುತ್ತಿದ್ದ ವಸ್ತುಗಳ ಮೇಲೆ ಹೆಚ್ಚಿನ ಸುಂಕ ಹೇರಿದ್ದರು.
ಪ್ರಸ್ತುತ ಚೀನಾದ ಆರ್ಥಿಕ ಪರಿಸ್ಥಿತಿ ಕೂಡ ಉತ್ತಮವಾಗಿಲ್ಲ. ಅಲ್ಲಿನ ಯುವಜನರಲ್ಲಿ ನಿರುದ್ಯೋಗ ದರ ಅತಿ ಹೆಚ್ಚಾಗಿದೆ. ಇಂಥ ಸ್ಥಿತಿಯಲ್ಲಿ ಟ್ರಂಪ್ ಅವರ ಆಯ್ಕೆ ಚೀನಾದ ಪರಿಸ್ಥಿತಿ ಬಾಣಲೆಯಿಂದ ಬೆಂಕಿಗೆ ಹಾರಿದಂತಾಗಿದೆ. ಆದರೆ, ಇದರ ಮುನ್ಸೂಚನೆ ಇದ್ದ ಚೀನಾ, ಈ ದಿಸೆಯಲ್ಲಿ ಒಂದಷ್ಟು ಸಿದ್ಧತೆ ನಡೆಸಿದೆ. ಅಮೆರಿಕದಿಂದ ಆಗುವ ವ್ಯಾಪಾರದ ನಷ್ಟವನ್ನು ತುಂಬಿಸಿಕೊಳ್ಳಲು ವಿಶ್ವದ ಇತರ ರಾಷ್ಟ್ರಗಳ ಜತೆ ಸ್ನೇಹ ಸಂಬಂಧ ಉತ್ತಮಪಡಿಸಿಕೊಳ್ಳಲು ಚೀನಾ ಪ್ರಯತ್ನಿಸುತ್ತಿದೆ. ಭಾರತವೂ ಸೇರಿದಂತೆ ಆಸ್ಟ್ರೇಲಿಯಾ, ಆಗ್ನೇಯ ಏಷ್ಯಾ, ಕೊರಿಯಾ, ಜಪಾನ್ ಮುಂತಾದ ರಾಷ್ಟ್ರಗಳ ಜತೆಗೆ ಸ್ನೇಹ ಹಸ್ತ ಚಾಚಿದೆ. ಇದರ ಮೂಲಕ ವ್ಯಾಪಾರದ ಇತರ ವಿಧಗಳನ್ನು ಶೋಧಿಸುವ, ಹೊಸ ಮಾರುಕಟ್ಟೆ ಕಂಡುಕೊಳ್ಳುವ ಪ್ರಯತ್ನ ನಡೆಸಿದೆ. ತಮ್ಮ ಉತ್ಪನ್ನಗಳ ಮೇಲೆ ಟ್ರಂಪ್ ಅವರು ಹೆಚ್ಚಿನ ನಿರ್ಬಂಧ, ತೆರಿಗೆ ವಿಧಿಸಿದ್ದರಿಂದಾಗಿಯೇ ತಾವು ವ್ಯಾಪಾರದ ಹೊಸ ಮಾರ್ಗಗಳನ್ನು, ಹೊಸ ಮಾರುಕಟ್ಟೆಗಳನ್ನು ಹುಡುಕಿಕೊಳ್ಳಲು ಸಾಧ್ಯವಾಗಿದ್ದು ಎನ್ನುವುದು ಚೀನಾದ ಜನರ ಭಾವನೆ. ಹೀಗಾಗಿಯೇ ಚೀನಾದ ಜನರು ಟ್ರಂಪ್ ಅವರನ್ನು ‘ಚೀನಾ ನಿರ್ಮಾತೃ’ ಎಂದು ಕರೆಯುತ್ತಾರೆ ಎಂದು ಬಿಬಿಸಿ ವರದಿ ಮಾಡಿದೆ.
ಫ್ರಾನ್ಸ್, ಜರ್ಮನಿ ರಾಜಕೀಯ ಬಿಕ್ಕಟ್ಟು
ವಿಶ್ವದ ಎರಡು ದೊಡ್ಡ ಆರ್ಥಿಕತೆಗಳಾದ ಫ್ರಾನ್ಸ್, ಜರ್ಮನಿ ರಾಜಕೀಯ ಬಿಕ್ಕಟ್ಟಿನ ಸ್ಥಿತಿ ಎದುರಿಸುತ್ತಿವೆ. ಫ್ರಾನ್ಸ್‌ನಲ್ಲಿ ಈ ವರ್ಷದ ಜುಲೈನಲ್ಲಿ ನಡೆದಿದ್ದ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಬಂದಿರಲಿಲ್ಲ. ಅಲ್ಲಿಂದ ಇಲ್ಲಿಯವರೆಗೆ ಇಬ್ಬರು ಪ್ರಧಾನಿಗಳನ್ನು ಕಂಡಿದೆ. ಯೂರೊ ಕರೆನ್ಸಿ ವಲಯದ ಎರಡನೇ ಅತಿ ದೊಡ್ಡ ಆರ್ಥಿಕತೆಯಾದ ಫ್ರಾನ್ಸ್, ಆರ್ಥಿಕವಾಗಿಯೂ ಸಮಸ್ಯೆಗಳನ್ನು ಎದುರಿಸುತ್ತಿದೆ.
ಜರ್ಮನಿಯಲ್ಲೂ ಇದೇ ಕಥೆ. ಟ್ರಂಪ್ ಎರಡನೇ ಬಾರಿಗೆ ಆಯ್ಕೆ ಆದ ಸಂದರ್ಭದಲ್ಲೇ ಜರ್ಮನಿಯಲ್ಲಿ ಸರ್ಕಾರ ಪತನಗೊಂಡಿತ್ತು. ಅಲ್ಲಿ ಫೆಬ್ರುವರಿಯಲ್ಲಿ ಚುನಾವಣೆ ನಡೆಯಲಿದೆ. ಜರ್ಮನಿಯ ಆರ್ಥಿಕತೆ ಕೂಡ ಸಮಸ್ಯೆಗಳನ್ನು ಎದುರಿಸುತ್ತಿದೆ. ಯೂರೋಪ್‌ನ ಹೃದಯ ಭಾಗವಾದ ಈ ದೇಶಗಳಲ್ಲಿ ಅಸ್ಥಿರತೆ ಮನೆ ಮಾಡಿದೆ. ಟ್ರಂಪ್ ಈ ದೇಶಗಳ ವಸ್ತುಗಳ ಮೇಲೆ ಹೆಚ್ಚು ಸುಂಕ ವಿಧಿಸುವ ಸೂಚನೆ ಇದ್ದು, ಅದು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುವ ಸಂಭವ ಇದೆ.
ಹವಾಮಾನ ಬದಲಾವಣೆ ತಡೆ ಕನಸೇ?
ಈ ವರ್ಷದಂತೆ 2025ರಲ್ಲೂ ವಾತಾವರಣದ ಉಷ್ಣತೆ ದಾಖಲೆ ಮಟ್ಟದಲ್ಲಿ ಹೆಚ್ಚೇ ಇರಲಿದೆ ಎಂದು ವಿಶ್ವ ಹವಾಮಾನ ಸಂಸ್ಥೆ ಎಚ್ಚರಿಸಿದೆ. ಜಾಗತಿಕ ಮಟ್ಟದಲ್ಲಿ ವಾತಾವರಣದ ಸರಾಸರಿ ಉಷ್ಣತೆಯು ಕೈಗಾರಿಕಾ ಪೂರ್ವ ಅವಧಿಯಲ್ಲಿದ್ದ ಉಷ್ಣಾಂಶದ ಮಟ್ಟಕ್ಕಿಂತ 1.5 ಡಿಗ್ರಿ ಸೆಲ್ಸಿಗಿಂತ ಹೆಚ್ಚು ಆಗಬಾರದು. ಆ ಮಿತಿಯ ಒಳಗೆಯೇ ಇರುವಂತೆ ನೋಡಿಕೊಳ್ಳಬೇಕು ಎಂಬ ಗುರಿಯನ್ನು ವಿಶ್ವಸಂಸ್ಥೆ ಹಾಕಿಕೊಂಡಿದೆ. 2015ರ ಪ್ಯಾರಿಸ್ ಒಪ್ಪಂದವೂ ಇದನ್ನೇ ಹೇಳುತ್ತದೆ. ಭಾರತ ಹಾಗೂ ಅಭಿವೃದ್ಧಿ ಶೀಲ ರಾಷ್ಟ್ರಗಳು ಈ ದಿಸೆಯಲ್ಲಿ ಕ್ರಮಗಳನ್ನು ಕೈಗೊಳ್ಳಲು ಸಿದ್ಧವಿದೆಯಾದರೂ, ಅಮೆರಿಕ, ಪಶ್ಚಿಮದ ರಾಷ್ಟ್ರಗಳು ಹಿಂದೇಟು ಹಾಕುತ್ತಿವೆ. ಟ್ರಂಪ್ ಅವರು ಹವಾಮಾನ ಬದಲಾವಣೆ ಪರಿಕಲ್ಪನೆಯ ವಿರುದ್ಧವಾಗಿ ಮಾತನಾಡಿದ್ದಾರೆ. ಹೀಗಿರುವಾಗ ಈ ಗುರಿಯನ್ನು ತಲುಪಲು ಸಾಧ್ಯವೇ ಎಂಬ ಪ್ರಶ್ನೆ ಉದ್ಭವವಾಗಿದೆ.
ರಷ್ಯಾ–ಉಕ್ರೇನ್: ರಷ್ಯಾವು ಉಕ್ರೇನ್ ಮೇಲೆ 2022ರ ಫೆಬ್ರುವರಿ 24ರಂದು ಯುದ್ಧ ಸಾರಿದ ನಂತರ ಎರಡೂ ರಾಷ್ಟ್ರಗಳ ನಡುವೆ ನಡೆಯುತ್ತಿರುವ ಕದನ ನಿಂತಿಲ್ಲ. ಎರಡೂ ಕಡೆಗಳಲ್ಲಿ ಅಪಾರ ಪ್ರಮಾಣದಲ್ಲಿ ಸಾವು ನೋವು, ಆಸ್ತಿ ಹಾನಿ ಸಂಭವಿಸಿದೆ. ಎರಡು ಲಕ್ಷಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಯುದ್ಧ ನಿಲ್ಲಿಸಲು ವಿಶ್ವಸಂಸ್ಥೆ ನಡೆಸುತ್ತಿರುವ ಯತ್ನಗಳು ಫಲಪ್ರದವಾಗಿಲ್ಲ. ಜೋ ಬೈಡನ್ ನೇತೃತ್ವದ ಅಮೆರಿಕ ಆಡಳಿತ ಈವರೆಗೂ ಉಕ್ರೇನ್‌ಗೆ ಬೆಂಬಲ ನೀಡುತ್ತಾ ಬಂದಿದೆ.
ಹೊಸ ಅಧ್ಯಕ್ಷ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ವೈಯಕ್ತಿಕ ಬಾಂಧವ್ಯ ಚೆನ್ನಾಗಿದೆ. ಟ್ರಂಪ್ ಚುನಾವಣೆ ಗೆಲುವಿನ ನಂತರ ಮಾಡಿದ ಭಾಷಣದಲ್ಲೂ ‘ನಾನು ಯುದ್ಧ ಮಾಡುವುದಿಲ್ಲ.. ಯುದ್ಧ ನಿಲ್ಲಿಸುತ್ತೇನೆ...’ ಎಂದು ಹೇಳಿದ್ದರು. ಇದಲ್ಲದೇ, ಟ್ರಂಪ್ ಸಹೋದ್ಯೋಗಿಗಳು ಉಕ್ರೇನ್ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟ್ರಂಪ್ ಆಡಳಿತ ಈ ನಿಲುವಿಗೆ ಅಂಟಿಕೊಂಡರೆ, ಉಕ್ರೇನ್‌ಗೆ ಇದುವರೆಗೂ ಸಿಗುತ್ತಿದ್ದ ಅಮೆರಿಕದ ಬೆಂಬಲ ಕೈತಪ್ಪಿ, ಅದು ಶಾಂತಿ ಮಾತುಕತೆ ಒಪ್ಪುವುದು ಅನಿವಾರ್ಯವಾಗುತ್ತದೆ.
ಪಶ್ಚಿಮ ಏಷ್ಯಾ ಬಿಕ್ಕಟ್ಟು: 2023ರ ಅಕ್ಟೋಬರ್ 7ರಂದು ಹಮಾಸ್ ಬಂಡುಕೋರರು ಇಸ್ರೇಲ್ ಮೇಲೆ ದಾಳಿ ನಡೆಸಿದ ಕಾರಣಕ್ಕೆ ಆರಂಭವಾದ ಯುದ್ಧ ಒಂದೂಕಾಲು ವರ್ಷವಾದರೂ ನಿಂತಿಲ್ಲ. ಈ ಅವಧಿಯಲ್ಲಿ ಈ ಸಂಘರ್ಷವು ಹಮಾಸ್–ಲೆಬನಾನಿನ ಹಿಜ್ಬುಲ್ಲಾ ಸಂಘಟನೆ ನಡುವಿನ ಕಲಹ, ಇಸ್ರೇಲ್–ಇರಾನ್ ಮಧ್ಯದ ಘರ್ಷಣೆಗೂ ಕಾರಣವಾಗಿ ಬಿಕ್ಕಟ್ಟು ಪೂರ್ವ ಏಷ್ಯಾದ ವಿವಿಧ ರಾಷ್ಟ್ರಗಳಿಗೆ ಹರಡುವಂತೆ ಆಗಿದೆ. 43 ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟು 25 ಲಕ್ಷಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ. ವಿಶ್ವಸಂಸ್ಥೆಯು ಇಸ್ರೇಲ್ ನಡೆಸುತ್ತಿರುವ ಯುದ್ಧಾಪರಾಧದ ಬಗ್ಗೆ ನಿರಂತರವಾಗಿ ಎಚ್ಚರಿಸುತ್ತಿದ್ದರೂ ಜಗತ್ತು ಮೌನವಾಗಿದೆ. ಟ್ರಂಪ್ ಅವರು ಎಲ್ಲ ಯುದ್ಧ ನಿಲ್ಲಿಸುತ್ತೇನೆ ಎಂದು ಹೇಳಿರುವುದು, ಪೂರ್ವ ಏಷ್ಯಾದಲ್ಲಿ ಕದನಕ್ಕೆ ವಿರಾಮ ಸಿಗುವ ನಿರೀಕ್ಷೆಯನ್ನು ಹುಟ್ಟಿಸಿದೆ.
ಭಾರತ–ಚೀನಾ: ಹೊಸ ಮಜಲಿಗೆ ಬಾಂಧವ್ಯ?
ಗಾಲ್ವನ್ ಕಣಿವೆಯಲ್ಲಿ 2020ರ ಜೂನ್‌ನಲ್ಲಿ ನಡೆದ ಸೇನಾ ಘರ್ಷಣೆಯ ನಂತರ ಹದಗೆಟ್ಟಿದ್ದ ಭಾರತ ಮತ್ತು ಚೀನಾ ಸಂಬಂಧವು, ಪೂರ್ವ ಲಡಾಖ್‌ನ ವಾಸ್ತವ ನಿಯಂತ್ರಣ ರೇಖೆಯಲ್ಲಿ (ದೆಪ್ಸಾಂಗ್ ಮತ್ತು ಡೆಮ್‌ಚೋಕ್ ಪ್ರದೇಶಗಳಲ್ಲಿ) ಹಿಂದಿನಂತೆಯೇ ಗಸ್ತು ತಿರುಗುವ ಸಂಬಂಧ ಈ ವರ್ಷ ಏರ್ಪಟ್ಟ ನಂತರ ಸುಧಾರಿಸಿದಂತೆ ಕಾಣುತ್ತಿದೆ. ಏಷ್ಯಾದ ಆಗ್ನೇಯ ಭಾಗದಲ್ಲಿ ಸ್ಥಿರತೆ ಕಾಣಿಸಿಕೊಳ್ಳಬೇಕಾದರೆ ಏಷ್ಯಾ ಖಂಡದ ಈ ಎರಡೂ ರಾಷ್ಟ್ರಗಳ ಉತ್ತಮ ಬಾಂಧವ್ಯ ಹೊಂದುವುದು ಅತ್ಯಂತ ಅವಶ್ಯಕ. ದಶಕಗಳಿಂದ ಎರಡೂ ರಾಷ್ಟ್ರಗಳ ನಡುವೆ ಸ್ಪಷ್ಟವಾಗಿ ಗಡಿ ಗುರುತಿಸದೇ ಇರುವುದರಿಂದ ಗಡಿ ವಿವಾದ ಆಗಾಗ ಭುಗಿಲೇಳುತ್ತಿರುತ್ತದೆ. ಇದು ಉಭಯ ರಾಷ್ಟ್ರಗಳ ನಡುವೆ ಅಪನಂಬಿಕೆಗೆ ಕಾರಣವಾಗಿದೆ.
ಪರಸ್ಪರ ವಿಶ್ವಾಸ ಮೂಡದೇ ಸಂಬಂಧ ಸುಧಾರಣೆ ಸಾಧ್ಯವಿಲ್ಲ ಎಂಬುದನ್ನು ಅರಿತಿರುವ ಎರಡೂ ರಾಷ್ಟ್ರಗಳು ಕೆಲವು ತಿಂಗಳುಗಳಿಂದ ಬಾಂಧವ್ಯ ಸುಧಾರಿಸುವತ್ತ ಮುನ್ನಡೆಯುತ್ತಿವೆ. ಈ ಹೊತ್ತಿನಲ್ಲೇ ಚೀನಾವು ಬ್ರಹ್ಮಪುತ್ರ ನದಿಗೆ ಜಗತ್ತಿನಲ್ಲೇ ಅತ್ಯಂತ ದೊಡ್ಡ ಅಣೆಕಟ್ಟು ನಿರ್ಮಿಸುವುದಾಗಿ ಘೋಷಿಸಿದೆ. ಜಮ್ಮು ಮತ್ತು ಕಾಶ್ಮೀರ ಭಾಗದಲ್ಲಿ ಚೀನಾ ಅತಿಕ್ರಮಿಸಿಕೊಂಡಿರುವ ಭಾರತದ ಭೂಭಾಗವಾದ ಅಕ್ಸಯ್ ಚಿನ್‌ನ ದೊಡ್ಡ ಭಾಗದ ಆಡಳಿತ ನಿರ್ವಹಣೆಗೆ ಕೌಂಟಿಯನ್ನು ರಚಿಸಿದೆ. ಆದರೆ, ಐದು ವರ್ಷಗಳಿಂದ ನಿಂತಿದ್ದ ಗಡಿ ವಿವಾದಕ್ಕೆ ಸಂಬಂಧಿಸಿದ ಮಾತುಕತೆ ಪುನರಾರಂಭವಾಗಿರುವುದು ಮತ್ತು ಪೂರ್ವ ಲಡಾಖ್‌ನಲ್ಲಿ ಗಸ್ತು ತಿರುಗುವ ಒಪ್ಪಂದ ಅನುಷ್ಠಾನಕ್ಕೆ ಬಂದಿರುವುದು ಹೊಸ ವರ್ಷದಲ್ಲಿ ಎರಡೂ ರಾಷ್ಟ್ರಗಳ ನಡುವಿನ ಬಾಂಧವ್ಯ ಇನ್ನೊಂದು ಮಜಲಿಗೆ ಏರುವ ನಿರೀಕ್ಷೆಯನ್ನು ಹುಟ್ಟುಹಾಕಿದೆ.
ಸಿರಿಯಾಕ್ಕೆ ಹೊಸ ಬೆಳಕು?
ಪಶ್ಚಿಮ ಏಷ್ಯಾ ರಾಷ್ಟ್ರವಾಗಿರುವ ಸಿರಿಯಾದಲ್ಲಿ 13 ವರ್ಷಗಳ ನಾಗರಿಕ ಯುದ್ಧ ಅಲ್ ಬಷರ್ ಅವರ ಆಡಳಿತ ಕೊನೆಗೊಳ್ಳುವುದರೊಂದಿಗೆ ಅಂತ್ಯಕಂಡಿದೆ. ಮಧ್ಯಂತರ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಅಲ್ಲೀಗ ಪರಿಸ್ಥಿತಿ ಸುಧಾರಿಸುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ತರುವ, ಹೊಸ ಸಂವಿಧಾನ ರಚಿಸುವ ಪ್ರಯತ್ನ ಆರಂಭವಾಗಿದೆ. ಮೂರು ವರ್ಷಗಳಲ್ಲಿ ದೇಶಕ್ಕೆ ಹೊಸ ಸಂವಿಧಾನ ರೂಪಿಸಲಾಗುವುದು, ಚುನಾವಣೆ ನಡೆಸಲು ನಾಲ್ಕು ವರ್ಷಗಳು ಬೇಕಾಗಬಹುದು ಎಂದು ಮಧ್ಯಂತರ ಸರ್ಕಾರದ ನೇತೃತ್ವ ವಹಿಸಿರುವ ಅಹ್ಮದ್ ಅಲ್–ಷರಾ ಹೇಳಿದ್ದಾರೆ. ನಾಗರಿಕ ಯುದ್ಧದಿಂದ ತತ್ತರಿಸಿದ್ದ ಸಿರಿಯಾಕ್ಕೆ 2024ರ ವರ್ಷಾಂತ್ಯದಲ್ಲಿ ನಡೆದ ಬೆಳವಣಿಗೆ ಹೊಸ ಬೆಳಕು ತೋರಿಸಿದ್ದು, 2025ರಲ್ಲಿ ಆ ಬೆಳಕು ಇನ್ನಷ್ಟು ಪ್ರಕಾಶಿಸುವ ಸಾಧ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.