ADVERTISEMENT

ಆಳ-ಅಗಲ | ಕ್ರಿಕೆಟ್ ಲೈವ್‌: ಹೇಗೆ?

ಮೈದಾನದಿಂದ ಮನದಂಗಳಕ್ಕೆಆಟದ ಸೊಬಗು

ಗಿರೀಶ ದೊಡ್ಡಮನಿ
Published 1 ಜೂನ್ 2025, 23:30 IST
Last Updated 1 ಜೂನ್ 2025, 23:30 IST
   
ಐಪಿಎಲ್‌ ಕ್ರಿಕೆಟ್ ಟೂರ್ನಿಯ 18ನೇ ಆವೃತ್ತಿ ಇನ್ನೆರಡು ದಿನಗಳಲ್ಲಿ ಮುಕ್ತಾಯಗೊಳ್ಳಲಿದೆ. ಈ ಟೂರ್ನಿಯ ಪಂದ್ಯಗಳನ್ನು ಕೋಟಿ ಕೋಟಿ ಅಭಿಮಾನಿಗಳು ಟಿ.ವಿ ಮತ್ತು ಮೊಬೈಲ್‌ಗಳ ಮೂಲಕ ಕಣ್ತುಂಬಿಕೊಂಡಿದ್ದಾರೆ. ಪ್ರತಿಯೊಂದು ಪಂದ್ಯದ ಎಲ್ಲ ಆಯಾಮಗಳ ನೇರಪ್ರಸಾರವನ್ನು ಆನಂದಿಸಿದ್ದಾರೆ. ತಮ್ಮ ನೆಚ್ಚಿನ ಕ್ರಿಕೆಟಿಗರ ಆಟದ ಸೊಬಗನ್ನು ಆಸ್ವಾದಿಸಿದ್ದಾರೆ. ಆದರೆ ಮೈದಾನದಲ್ಲಿ ನಡೆಯುವ ಪಂದ್ಯವನ್ನು ಟಿ.ವಿ ಅಥವಾ ಮೊಬೈಲ್‌ ಪರದೆಗೆ ತರುವ ಪ್ರಕ್ರಿಯೆ ಮಾತ್ರ ಅನೂಹ್ಯವಾದದ್ದು. ಮುಂಬೈನಲ್ಲಿರುವ ಜಿಯೊಸ್ಟಾರ್‌ ಸ್ಪೋರ್ಟ್ಸ್‌ ಸ್ಟುಡಿಯೊಗಳಲ್ಲಿ ಒಂದು ಸುತ್ತು ಹಾಕಿ ಬಂದಾಗ ವಿಭಿನ್ನ ಲೋಕವೇ ತೆರೆದುಕೊಂಡಿತು. ಆಹ್ವಾನದ ಮೇರೆಗೆ ಈ ಸ್ಟುಡಿಯೋಗಳಿಗೆ ‘ಪ್ರಜಾವಾಣಿ’ ಭೇಟಿ ನೀಡಿದಾಗ ಕಂಡ ನೋಟ ಇಲ್ಲಿದೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜಿತೇಶ್ ಶರ್ಮಾ ಲಖನೌ ಸೂಪರ್‌ಜೈಂಟ್ಸ್ ಎದುರಿನ ಪಂದ್ಯದಲ್ಲಿ ವಿಜಯದ ಸಿಕ್ಸರ್‌ ಹೊಡೆಯುತ್ತಿದ್ದಂತೆಯೇ ಟೆಲಿವಿಷನ್ ಮತ್ತು ಸ್ಮಾರ್ಟ್‌ಫೋನ್ ಪರದೆಗಳ ಮೇಲೆ ಹಲವು ಭಾವ, ಭಂಗಿ, ವಿಜಯೋತ್ಸವಗಳು ಪಟಪಟನೆ ಮೂಡಿಬಂದವು. ಒಂದೆಡೆ ಜಿತೇಶ್ ತಮ್ಮ ಹೆಲ್ಮೆಟ್ ತೆಗೆದು ಗಾಳಿಯಲ್ಲಿ ಒಂದು ಸುತ್ತು ತಿರುಗಿಸಿದರು. ಇನ್ನೊಂದಡೆ ಆರ್‌ಸಿಬಿ ಡಗ್‌ಔಟ್‌ನಲ್ಲಿ ವಿರಾಟ್ ಕೊಹ್ಲಿ ಮತ್ತು ಕೃಣಾಲ್ ಪಾಂಡ್ಯ ಅಪ್ಪಿಕೊಂಡು ನರ್ತಿಸಿದ ದೃಶ್ಯ. ರಜತ್ ಪಾಟೀದಾರ್ ಸಹ ಆಟಗಾರರ ಕೈಕುಲುಕುತ್ತ ಸಂಭ್ರಮಿಸಿದ್ದೂ ಕಂಡಿತು. ಇನ್ನೊಂದೆಡೆ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಯುವತಿಯೊಬ್ಬರ ಸಡಗರದ ದೃಶ್ಯ, ಮತ್ತೊಂದೆಡೆ ವಿರಾಟ್ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರ ಖುಷಿ, ಸೋತ ಲಖನೌ ತಂಡದ ಆಟಗಾರರ ಬೇಸರ, ಅಭಿಮಾನಿಗಳ ಹತಾಶೆ...

ಹೀಗೆ ಅದೆಷ್ಟೋ ದೃಶ್ಯ ತುಣುಕುಗಳು ಕ್ಷಣಮಾತ್ರದಲ್ಲಿ ನೋಡುಗರ ಮನಃಪಟಲಕ್ಕೆ ದಾಂಗುಡಿ ಇಟ್ಟುಬಿಟ್ಟವು. ಕ್ರೀಡಾಂಗಣದ ಆಯಕಟ್ಟಿನ ಜಾಗಗಳಲ್ಲಿರುವ ಕ್ಯಾಮೆರಾಗಳು ಏಕಕಾಲಕ್ಕೆ ಸೆರೆಹಿಡಿಯುವ ಈ ದೃಶ್ಯಗಳ ವಿವಿಧ ಕೋನಗಳನ್ನು ಕತ್ತರಿಸಿ, ಜೋಡಿಸಿ ಟಿ.ವಿ ಪರದೆಯ ಮೇಲೆ ಪ್ರದರ್ಶಿಸುವ ಕೆಲಸ ಕ್ಷಣಗಳಲ್ಲಿ ನಡೆದುಹೋಗುತ್ತದೆ. 

ಇವೆಲ್ಲವೂ ನವೀನ ತಂತ್ರಜ್ಞಾನದಿಂದ ಸಾಧ್ಯವಾಗಿರುವುದು ಸತ್ಯ. ಆದರೆ ಪಂದ್ಯ ನಡೆಯುವ ‘ಮೈದಾನದಿಂದ ನೋಡುಗರ ಮನದಂಗಳ’ದವರೆಗೂ ಇಂತಹದೊಂದು ತಂತ್ರಜ್ಞಾನ ನಿರ್ವಹಿಸುವ ನೂರಾರು ಕೈಗಳು ಇವೆ. ಟಿ.ವಿಯಲ್ಲಿ ನೋಡುವವರಿಗೆ ಆಟ ಮತ್ತು ವೀಕ್ಷಕ ವಿವರಣೆ ನೀಡುವ ‘ತಾರಾಮಣಿ’ಗಳಷ್ಟೇ ಕಾಣುತ್ತಾರೆ. ಆದರೆ ಅವರನ್ನು ಮನೆಯಂಗಳಕ್ಕೆ ತಂದು ನಿಲ್ಲಿಸುವ ದೊಡ್ಡ ಸೈನ್ಯವೇ ಪರದೆಯ ಹಿಂದೆ ಕಾರ್ಯೋನ್ಮುಖವಾಗಿರುತ್ತದೆ.  

ADVERTISEMENT

ಇಂಡಿಯನ್ ಪ್ರೀಮಿಯರ್‌ ಲೀಗ್ ಕ್ರಿಕೆಟ್ ಟೂರ್ನಿಯ ಪಂದ್ಯಗಳ ನೇರಪ್ರಸಾರವಂತೂ ಯಾವುದೇ ಯುದ್ಧಕ್ಕಿಂತ ಕಮ್ಮಿಯಲ್ಲ. ಮುಂಬೈನ ಲೋಯರ್ ಪರೇಲ್‌ನಲ್ಲಿರುವ ಜಿಯೊಸ್ಟಾರ್ ಸ್ಟುಡಿಯೊಗಳಲ್ಲಿ ಇರುವವರೆಲ್ಲರೂ ಕಾಲದೊಂದಿಗೆ ಪೈಪೋಟಿ ನಡೆಸುತ್ತಾರೆ. ಅದೊಂದು ವಿಭಿನ್ನ ಲೋಕವೇ ಸರಿ. ಅಲ್ಲಿ ಕಂಪ್ಯೂಟರ್, ಮಾನಿಟರ್‌ ಮತ್ತು ಮೈಕ್‌ಗಳ ಮುಂದೆ ಕುಳಿತವರೆಲ್ಲರೂ ಮೈಯೆಲ್ಲಾ ಕಣ್ಣಾಗಿ, ಕಿವಿಯಾಗಿ ಕಾರ್ಯನಿರ್ವಹಿಸುತ್ತಾರೆ. ಒಂದು ಸೂಜಿಮೊನೆಯಷ್ಟು ವ್ಯತ್ಯಾಸವಾದರೂ ಕ್ರಿಕೆಟ್ ನೇರಪ್ರಸಾರ ತುಂಡಾಗಿಹೋಗುವಂತಹ ಸೂಕ್ಷ್ಮ ಕಸುಬುದಾರಿಕೆ ಕೆಲಸ.  

ನೇರಪ್ರಸಾರದ ಹಾದಿ ಹೇಗೆ?: ಐಪಿಎಲ್ ಪಂದ್ಯ ನಡೆಯುವ ಕ್ರೀಡಾಂಗಣದಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) 30ಕ್ಕೂ ಹೆಚ್ಚು ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತವೆ. ಅದರೊಂದಿಗೆ ಅಧಿಕೃತ ಪ್ರಸಾರಕರಾದ ಸ್ಟಾರ್ ಸಂಸ್ಥೆಯ 4 ಕ್ಯಾಮೆರಾಗಳೂ ಇರುತ್ತವೆ. ಈ ಎಲ್ಲ ಕ್ಯಾಮೆರಾಗಳಲ್ಲಿ ಸೆರೆಯಾಗುವ ವಿವಿಧ ಆಯಾಮಗಳ ಪ್ರತಿಯೊಂದು ದೃಶ್ಯವೂ ಸ್ಟುಡಿಯೊದಲ್ಲಿರುವ ಬೃಹತ್ ಪರದೆಯ ಮೇಲೆ ಏಕಕಾಲಕ್ಕೆ ಮೂಡಿಬರುತ್ತವೆ. ಅಲ್ಲಿರುವ ಡೈರೆಕ್ಟರ್ ಮತ್ತು ಪ್ರೊಡ್ಯೂಸರ್ ಕ್ಷಣಮಾತ್ರದಲ್ಲಿ ದೃಶ್ಯಗಳನ್ನು ಆಯ್ಕೆ ಮಾಡಿಕೊಂಡು ತಮ್ಮ ಸಹೋದ್ಯೋಗಿಗಳಿಗೆ ಎಡಿಟ್ ಮತ್ತು ಪ್ರಸಾರಕ್ಕೆ ಸೂಚಿಸುತ್ತಾರೆ. 

ಅಷ್ಟೇ ಚಾಕಚಕ್ಯತೆಯಿಂದ ತಂತ್ರಜ್ಞರು ಆ ದೃಶ್ಯಗಳನ್ನು ಆಯ್ಕೆ ಮಾಡಿಕೊಂಡು ಪ್ಯಾಕೇಜ್ ಮಾಡಿಕೊಡುತ್ತಾರೆ. ಇಷ್ಟೆಲ್ಲವೂ ಕಣ್ಣೆವೆ ಇಕ್ಕುವುದರಲ್ಲಿ ಆಗಿಹೋಗುತ್ತವೆ. ಬೌಂಡರಿ, ಸಿಕ್ಸರ್, ವಿಕೆಟ್, ಕ್ಯಾಚ್‌, ಸೆಲಬ್ರೇಷನ್, ಪ್ರೇಕ್ಷಕರ ಗ್ಯಾಲರಿಯ ವಿಶೇಷಗಳ ಗುಚ್ಛಗಳನ್ನು ಸಿದ್ಧಪಡಿಸಲೆಂದೇ ಪ್ರತ್ಯೇಕವಾದ ಸಿಬ್ಬಂದಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಾರೆ. ಇವೆಲ್ಲದರ ಜೊತೆಗೆ ಪಂದ್ಯದ ಸ್ಕೋರ್‌ಕಾರ್ಡ್‌, ಅಂಕಿ ಸಂಖ್ಯೆಗಳ ಗ್ರಾಫಿಕ್ಸ್‌, ಚಾರ್ಟ್‌, ಆ್ಯನಿಮೇಷನ್ ಇತ್ಯಾದಿಗಳನ್ನು ಸಿದ್ಧಪಡಿಸುವ ಕಾರ್ಯ ಕೂಡ ಭರದಿಂದಲೇ ಸಾಗುತ್ತಿರುತ್ತದೆ. ಹಳೆ ದಾಖಲೆಗಳ ವಿಡಿಯೊ ತುಣುಕುಗಳು, ಅಂಕಿಸಂಖ್ಯೆಗಳನ್ನು ಒದಗಿಸುವ ಸಿಬ್ಬಂದಿಯೂ ಇಲ್ಲಿ ಪ್ರಸ್ತುತ. ಟೆಲಿವಿಷನ್ ಮತ್ತು ಆ್ಯಪ್ ಮೂಲಕ ಏಕಕಾಲದಲ್ಲಿ ಕ್ರಿಕೆಟ್‌ ನೇರಪ್ರಸಾರವಾಗುತ್ತದೆ. ಅಷ್ಟೇ ಅಲ್ಲ; ವೀಕ್ಷಕ ವಿವರಣೆಗಾರರು ಪಂದ್ಯಪೂರ್ವ, ಪಂದ್ಯ ನಡೆಯುವಾಗ ಮತ್ತು ನಂತರ ನೀಡಬೇಕಾದ ವಿವರಗಳು, ಕಾಮನ್‌ ಸ್ಕ್ರಿಪ್ಟ್‌ಗಳನ್ನೂ ಪ್ರೊಡಕ್ಷನ್ ಸಿಬ್ಬಂದಿಯು ಸಿದ್ಧಗೊಳಿಸುತ್ತದೆ. 

ಮತ್ತೊಂದು ಹಂತದಲ್ಲಿ ಪಂದ್ಯದ ಪ್ರತಿಯೊಂದು ಎಸೆತ, ಆಯಾಮಗಳ ದೃಶ್ಯಾವಳಿಗಳು, ಆಡಿಯೊ ಮತ್ತು ದಾಖಲೆಗಳನ್ನು ಸಂಗ್ರಹಿಸಿಡುವ ಪ್ರಕ್ರಿಯೆ ನಡೆಯುತ್ತದೆ. ಅಧಿಕೃತ ಪ್ರಸಾರಕರಿಗೆ ಈ ಕಾಪಿಟ್ಟ ದಾಖಲೆಗಳು ಸ್ಥಿರಾಸ್ತಿಗಳಿದ್ದಂತೆ. 

ಬಹುಕೋಟಿ ಮೌಲ್ಯದ ವ್ಯವಹಾರ

ಬಿಸಿಸಿಐ ಇವತ್ತು ಶ್ರೀಮಂತ ಕ್ರೀಡಾ ಸಂಸ್ಥೆಗಳ ಸಾಲಿನಲ್ಲಿ ನಿಂತಿದೆ. ಅದಕ್ಕೆ ಪ್ರಮುಖ ಕಾರಣ ಕ್ರಿಕೆಟ್‌ ಮತ್ತು ಮಾಧ್ಯಮದ ಜೊತೆಯಾಟ. ಅದರಲ್ಲೂ ಐಪಿಎಲ್‌ ಶುರುವಾದ ಮೇಲೆ ಮಂಡಳಿಗೆ ಹಣದ ಪ್ರವಾಹವೇ ಹರಿದುಬರುತ್ತಿದೆ.  2022ರಲ್ಲಿ ಐದು ವರ್ಷಗಳಿಗೆ ಐಪಿಎಲ್ ಪ್ರಸಾರ ಹಕ್ಕನ್ನು ಬಿಸಿಸಿಐ ₹48,390 ಕೋಟಿ ಮೌಲ್ಯಕ್ಕೆ ನೀಡಿತ್ತು. ಅದರಲ್ಲಿ ಟೆಲಿವಿಷನ್  ಹಕ್ಕು ಸ್ಟಾರ್‌ ಇಂಡಿಯಾ  ಹಾಗೂ ಡಿಜಿಟಲ್ ಪ್ರಸಾರದ ಹಕ್ಕುಗಳನ್ನು ವಯಕಾಮ್ 18 (ಜಿಯೋ) ಸಂಸ್ಥೆಗಳು ಬಿಡ್‌ನಲ್ಲಿ ಖರೀದಿಸಿದ್ದವು. ಹೋದ ವರ್ಷ ಉಭಯ ಸಂಸ್ಥೆಗಳು ವಿಲೀನಗೊಂಡಿವೆ.

ವೀಕ್ಷಕ ವಿವರಣೆಗಾರರಾದ ವಿಜಯ್ ಭಾರದ್ವಾಜ್ ಮತ್ತು ಅಖಿಲ್

ಕನ್ನಡ ಕಾಮೆಂಟ್ರಿಯತ್ತ ಒಲವು

ದಶಕಗಳಿಂದಲೂ ಕ್ರಿಕೆಟ್‌ ಬೆಳೆಯುತ್ತಿರುವುದರ ಹಿಂದೆ ವೀಕ್ಷಕ ವಿವರಣೆಯ ಪಾತ್ರ ದೊಡ್ಡದು. ಇಂಗ್ಲಿಷರು ಶುರು ಮಾಡಿದ ಕ್ರಿಕೆಟ್ ವೀಕ್ಷಕ ವಿವರಣೆ ಪರಂಪರೆ ಈಗ ವೃತ್ತಿಯಾಗಿ ಬೆಳೆದುನಿಂತಿದೆ. ದಶಕಗಳ ಹಿಂದೆ ಬಾನುಲಿಯ ಮೂಲಕ ಪಂದ್ಯಗಳ ಕಾಮೆಂಟ್ರಿ ಕೇಳುವುದು ಒಂದು ಹವ್ಯಾಸವೇ ಆಗಿತ್ತು. ಆಕಾಶವಾಣಿ ವೀಕ್ಷಕ ವಿವರಣೆಯಲ್ಲಿ ನೆಚ್ಚಿನ ಆಟಗಾರರ ಸಾಧನೆಯನ್ನು ಆಸ್ವಾದಿಸಿ, ಮರುದಿನದ ಪತ್ರಿಕೆಗಳಲ್ಲಿ ಆ ಕ್ರಿಕೆಟಿಗರ ಚಿತ್ರಗಳನ್ನು ನೋಡಿ ಕತ್ತರಿಸಿ ತಮ್ಮ ಪುಸ್ತಕ, ಕೋಣೆಯ ಗೋಡೆಗಳಿಗೆ ಅಂಟಿಸಿಕೊಳ್ಳುತ್ತಿದ್ದ ಹಲವಾರು ಜನರಿದ್ದರು. 

ಟೆಲಿವಿಷನ್ ಕ್ರಾಂತಿಯಾದಾಗ ಪಂದ್ಯಗಳ ನೇರಪ್ರಸಾರ ನೋಡುವ ಅವಕಾಶ ದೊರೆಯಿತು. ಆದರೆ ಟಿ‌.ವಿ ಮತ್ತು ಈಗ ಡಿಜಿಟಲ್ ಯುಗದಲ್ಲಿ ಕ್ರಿಕೆಟ್ ಕಾಮೆಂಟ್ರಿಯ ಮಹತ್ವ ಮಾತ್ರ ಮಾಸಿಲ್ಲ. ಬದಲಿಗೆ ಮತ್ತಷ್ಟು ಹೆಚ್ಚಾಗಿದೆ. ಮಾಜಿ ಕ್ರಿಕೆಟಿಗರಿಗೆ ಉದ್ಯೋಗ ನೀಡುವ ಕ್ಷೇತ್ರವೂ ಆಗಿದೆ.

ಐಪಿಎಲ್‌ ಕಾಮೆಂಟ್ರಿಯಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ಐಪಿಎಲ್‌ ಟೂರ್ನಿ 12 ಭಾಷೆಗಳಲ್ಲಿ ಪ್ರಸಾರವಾಗುತ್ತಿದೆ. ಅಷ್ಟೂ ಭಾಷೆಗಳಲ್ಲಿ ವೀಕ್ಷಕ ವಿವರಣೆ ನಡೆಯುತ್ತಿದೆ. ಟಿವಿಯಲ್ಲಿ ಇಂಗ್ಲಿಷ್, ಹಿಂದಿ ಜೊತೆಗೆ ಕನ್ನಡ, ತಮಿಳು, ತೆಲುಗು, ಮಲಯಾಳ, ಬಂಗಾಳಿ, ಮರಾಠಿ, ಗುಜರಾತಿ, ಹರ್ಯಾಣ್ವಿ, ಪಂಜಾಬಿ ಮತ್ತು ಭೋಜಪುರಿ ಭಾಷೆಗಳ ವೀಕ್ಷಕ ವಿವರಣೆ ಜನಪ್ರಿಯವಾಗಿವೆ.

150ಕ್ಕೂ ಹೆಚ್ಚು ವೀಕ್ಷಕ ವಿವರಣೆಗಾರರು ಕಾರ್ಯನಿರ್ವಹಿಸುತ್ತಿದ್ದಾರೆ. ಅದರಲ್ಲಿ ಬಹುತೇಕರು ಮಾಜಿ ಕ್ರಿಕೆಟಿಗರು. ವೀಕ್ಷಕ ವಿವರಣೆಗಾರ ಒಂದು ತಂಡವು ಪಂದ್ಯ ನಡೆಯುವ ಕ್ರೀಡಾಂಗಣದ ಮೂಲಕ ಕಾರ್ಯನಿರ್ವಹಿಸುತ್ತದೆ. ಉಳಿದವರು ಸ್ಟುಡಿಯೊದಿಂದ ಕೆಲಸ ಮಾಡುತ್ತಾರೆ. ಕೆಲವು ಕ್ರಿಕೆಟಿಗರಂತೂ ತಮ್ಮ ಆಡುವ ದಿನಗಳಿಗಿಂತಲೂ ವೀಕ್ಷಕ ವಿವರಣೆ ಮೂಲಕ ಅಭಿಮಾನಿಗಳಿಗೆ ಹೆಚ್ಚು ಹತ್ತಿರವಾಗಿದ್ದಾರೆ.

ಸ್ಟಾರ್ ಸ್ಟುಡಿಯೊ ಪ್ರವಾಸದ ಸಂದರ್ಭದಲ್ಲಿ ಭೇಟಿಯಾದ ಕನ್ನಡದ ವೀಕ್ಷಕ ವಿವರಣೆಗಾರರಾದ ಜಿ.ಕೆ.ಅನಿಲ್ ಕುಮಾರ್, ಶ್ರೀನಿವಾಸಮೂರ್ತಿ, ಭರತ್ ಚಿಪ್ಲಿ ಮತ್ತು ವೇದಾ ಕೃಷ್ಣಮೂರ್ತಿ ತಮ್ಮ ಸಿದ್ಧತೆ ಮತ್ತು ಕೆಲಸದ ಕುರಿತು ಮಾಹಿತಿ ನೀಡಿದರು.

‘ಪ್ರತಿ ಪಂದ್ಯಕ್ಕೂ ಮುನ್ನ ಬಹಳಷ್ಟು ಪೂರ್ವಸಿದ್ಧತೆ ಇರುತ್ತದೆ. ಸಂಸ್ಥೆಯವರು ಒದಗಿಸುವ ಮಾಹಿತಿಯ ಜತೆ ನಮ್ಮ ಶೈಲಿಯನ್ನೂ ಸೇರಿಸಿ  ಸಿದ್ಧತೆ ನಡೆಸುತ್ತೇವೆ. ಈ ವೇಳೆ ಬೇರೆ ಬೇರೆ ರಾಜ್ಯಗಳ ತಂಡಗಳೊಂದಿಗೆ ಕೆಲಸ ಮಾಡುವುದರಿಂದ ಅಲ್ಲಿಯ ಆಟಗಾರರ ಬಗ್ಗೆ ಸ್ವಾರಸ್ಯಕರ ಮಾಹಿತಿಗಳು ಲಭಿಸುತ್ತವೆ. ಉದಯೋನ್ಮುಖ ಆಟಗಾರರ ಕುರಿತು ಮಾತನಾಡುವಾಗ ಈ ಮಾಹಿತಿಗಳು ಉಪಯುಕ್ತವಾಗುತ್ತದೆ. ಕೇಳುಗರ ಜ್ಞಾನಾರ್ಜನೆಯ ಹಸಿವು ಎಂದೂ ಮುಗಿಯುವುದಿಲ್ಲ. ಆದ್ದರಿಂದ ಕೇಳುಗರ ಹಸಿವನ್ನು ನೀಗಿಸಲು ನಾವು ಕೂಡ ಹೊಸದನ್ನು ಪ್ರಯತ್ನಿಸುತ್ತೇವೆ. ಮಾಹಿತಿ, ಮಾತಿನ ಶೈಲಿ, ಸೊಗಡು ಮತ್ತು ಹಾಸ್ಯಭರಿತ ಸಂಭಾಷಣೆಗಳಿಗೆ ಒತ್ತು ಕೊಡುತ್ತೇವೆ. ಧ್ವನಿಯ ಏರಿಳಿತಗಳು ಪಂದ್ಯದ ಸ್ಥಿತಿ–ಗತಿಗೆ ತಕ್ಕಂತೆ ಇರುವುದು ಮುಖ್ಯ. ನಮ್ಮ ಕಾಮೆಂಟ್ರಿಯನ್ನು ಕನ್ನಡದ ಕೇಳುಗರು ಸ್ವೀಕರಿಸಿದ್ದಾರೆ ಎಂಬುದೇ ಹೆಮ್ಮೆಯ ಸಂಗತಿ’ ಎಂದರು.

ಮುಂಬೈನಲ್ಲಿರುವ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯ ಸ್ಟುಡಿಯೊ

‘10 ತಿಂಗಳ ಪೂರ್ವಸಿದ್ಧತೆ’

‘ಐಪಿಎಲ್ ಪ್ರಸಾರದ ಕಾರ್ಯ ಬಹಳ ಸೂಕ್ಷ್ಮವಾದ ಮತ್ತು ಕ್ಲಿಷ್ಟಕರ ಕಾರ್ಯ. ಅದಕ್ಕಾಗಿ ಹಲವಾರು ಪರಿಣತರು ಕಾರ್ಯನಿರ್ವಹಿಸುತ್ತಾರೆ. ಟೂರ್ನಿ ನಡೆಯುವುದು ಎರಡೇ ತಿಂಗಳಿರಬಹುದು. ಆದರೆ ಅದರ ಹಿನ್ನೆಲೆಯಲ್ಲಿ ನಾವು ಹತ್ತು ತಿಂಗಳು ಕಾರ್ಯನಿರ್ವಹಿಸುತ್ತೇವೆ’’ ಎಂದು ಜಿಯೊಸ್ಟಾರ್‌ ಸ್ಪೋರ್ಟ್ಸ್‌ ಕಂಟೆಂಟ್ ಹೆಡ್ ಸಿದ್ದಾರ್ಥ್ ಶರ್ಮಾ ವಿವರಿಸುತ್ತಾರೆ.

‘ವರ್ಷದಿಂದ ವರ್ಷಕ್ಕೆ ನೋಡುಗರ ಸಂಖ್ಯೆ ಅಪಾರ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಅದರೊಂದಿಗೆ ಅವರ ನಿರೀಕ್ಷೆಗಳಿಗೆ ತಕ್ಕಂತೆ ಹೊಸತನ್ನು ನೀಡುವ ಪ್ರಯತ್ನ ನಮ್ಮದಾಗಿರುತ್ತದೆ. ಅದಕ್ಕಾಗಿ ಹೊಸ ಕಾನ್ಸೆಪ್ಟ್, ನವೀನ ತಂತ್ರಜ್ಞಾನ, ವೀಕ್ಷಕ ವಿವರಣೆಗಾರರ ಸಮೂಹ ಸಿದ್ಧಪಡಿಸುವುದು, ಪ್ರಾಯೋಜಕರು ಮತ್ತು ತಂತ್ರಜ್ಞರನ್ನು ಒಳಗೊಳ್ಳುವಿಕೆಯ ಪ್ರಕ್ರಿಯೆ ನಡೆಯುತ್ತದೆ. ಹರಾಜು ಪ್ರಕ್ರಿಯೆಯಲ್ಲಿ ಆಯ್ಕೆಯಾಗುವ ಹೊಸ ಪ್ರತಿಭೆಗಳನ್ನು ಪರಿಚಯಿಸುವ ಒಳನೋಟಗಳು ಇತ್ಯಾದಿ ಇರುತ್ತವೆ. ಕ್ರಿಕೆಟ್‌, ಐಪಿಎಲ್ ಮತ್ತು ಆಟಗಾರರ ವೃತ್ತಿ–ಜೀವನದ ಕತೆಗಳನ್ನು ಮನೆ, ಮನಗಳಿಗೆ ಮುಟ್ಟಿಸುವ ಕೆಲಸ ರೋಚಕವೂ ಹೌದು. ಕ್ಲಿಷ್ಟವೂ ಹೌದು’ ಎಂದು ಸಿದ್ಧಾರ್ಥ್ ಹೇಳುತ್ತಾರೆ.

‘ಪ್ರತಿ ವರ್ಷವೂ ಟೂರ್ನಿಯಲ್ಲಿ ಹೊಸ ತಾರೆಗಳು ಉದಯಿಸುತ್ತಾರೆ. ಉದಾಹರಣೆಗೆ ಈ ಬಾರಿ 14 ವರ್ಷದ ವೈಭವ್ ಸೂರ್ಯವಂಶಿ. ಅವರ ಸುತ್ತ ಅದೆಷ್ಟು ಕುತೂಹಲದ ನೋಟಗಳಿದ್ದವು. ಆ ಎಲ್ಲ ಕುತೂಹಲಭರಿತ ಪ್ರಶ್ನೆಗಳಿಗೆ ಉತ್ತರ ಕೊಡುವುದೇ ನಮ್ಮ ಕೆಲಸ. ಜನರ ಮನಸ್ಸಿನಲ್ಲಿ ವೈಭವ್ ಕುರಿತ ಪ್ರತಿಯೊಂದು ಭಾವನೆ, ಪ್ರಶ್ನೆಗಳಿಗೆ ತಕ್ಕಂತೆ ಮಾಹಿತಿಗಳನ್ನು ನೀಡುವುದು ದೊಡ್ಡ ಕೆಲಸ. ನಮಗೆ ಪ್ರೇಕ್ಷಕರೇ ಆಸ್ತಿ. ಅವರಿಲ್ಲದಿದ್ದರೆ ಆಟವಿಲ್ಲ. ಹಾಗಾಗಿ ಅವರಿಗೆ ನಮ್ಮ ಸಂಪೂರ್ಣ ಬದ್ಧತೆ’ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.