ADVERTISEMENT

ಆಳ–ಅಗಲ: ಕ್ರಿಕೆಟ್ ಪ್ರೇಮದ ಕಾಶ್ಮೀರ

ರಣಜಿ ಫೈನಲ್‌ ಪ್ರವೇಶ: ಕಣಿವೆ ರಾಜ್ಯದ ಚಾರಿತ್ರಿಕ ಸಾಧನೆ

ಗಿರೀಶ ದೊಡ್ಡಮನಿ
Published 23 ಫೆಬ್ರುವರಿ 2026, 23:30 IST
Last Updated 23 ಫೆಬ್ರುವರಿ 2026, 23:30 IST
<div class="paragraphs"><p>ರಣಜಿ ಕ್ರಿಕೆಟ್‌ ಟೂರ್ನಿಯ ಫೈನಲ್‌ ಪ್ರವೇಶಿಸಿದ ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್‌ ತಂಡದ ಸಂಭ್ರಮ</p></div>

ರಣಜಿ ಕ್ರಿಕೆಟ್‌ ಟೂರ್ನಿಯ ಫೈನಲ್‌ ಪ್ರವೇಶಿಸಿದ ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್‌ ತಂಡದ ಸಂಭ್ರಮ

   

–ಪಿಟಿಐ ಚಿತ್ರ

ಜಮ್ಮು ಮತ್ತು ಕಾಶ್ಮೀರದ ಕ್ರಿಕೆಟ್‌ ತಂಡ ಈ ಬಾರಿಯ ರಣಜಿ ಟ್ರೋಫಿ ಫೈನಲ್‌ಗೆ ಲಗ್ಗೆ ಇಡುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. 67 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ದೇಶೀಯ ಕ್ರಿಕೆಟ್‌ನ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಪ್ರಶಸ್ತಿ ಹಂತಕ್ಕೆ ತಲುಪಿದೆ. ಮಂಗಳವಾರದಿಂದ ಆರಂಭವಾಗಲಿರುವ ಫೈನಲ್‌ನಲ್ಲಿ ಅದು ಕರ್ನಾಟಕ ತಂಡವನ್ನು ಎದುರಿಸಲಿದೆ. ಭಯೋತ್ಪಾದನೆ, ನಿರಂತರವಾಗಿ ನಡೆಯುತ್ತಿದ್ದ ಹಿಂಸಾಚಾರಗಳು ಜಮ್ಮು ಕಾಶ್ಮೀರದಲ್ಲಿ ಕ್ರಿಕೆಟ್‌ ಸೇರಿದಂತೆ ಎಲ್ಲ ಕ್ರೀಡೆಗಳೂ ಹಿನ್ನಡೆ ಅನುಭವಿಸುವಂತೆ ಮಾಡಿದ್ದವು. ಒಂದೂವರೆ ದಶಕದಿಂದ ಅಲ್ಲಿನ ಕ್ರಿಕೆಟ್‌ ಚಿತ್ರಣ ಬದಲಾಗುತ್ತಾ ಬಂದಿದ್ದು, ಈ ವರ್ಷದ ರಣಜಿ ಟೂರ್ನಿಯಲ್ಲಿ ಅಲ್ಲಿನ ಕ್ರಿಕೆಟಿಗರ ಪ್ರದರ್ಶನ ಈ ಆಟಕ್ಕೆ ಹೊಸ ದಿಕ್ಕು ತೋರಿದೆ

ಜಮ್ಮು–ಕಾಶ್ಮೀರದ ಮಣ್ಣಿಗೂ, ಕ್ರಿಕೆಟ್ ಆಟಕ್ಕೂ ಸರಿಸುಮಾರು ಮೂರು ಶತಮಾನಗಳಷ್ಟು ಹಳೆಯ ನಂಟಿದೆ. ಅಗಾಧವಾಗಿ ಬೆಳೆದಿರುವ ಕ್ರಿಕೆಟ್‌ ಆಟದಲ್ಲಿ ಬ್ಯಾಟರ್‌ಗಳು ಇಲ್ಲಿಯವರೆಗೆ ಲಕ್ಷಾಂತರ ರನ್‌ಗಳನ್ನು ಹರಿಸಿದ್ದಾರೆ. ಅದರಲ್ಲಿ ಕಾಶ್ಮೀರ ಕಣಿವೆಯಲ್ಲಿ ಸಿದ್ಧವಾದ ಬ್ಯಾಟ್‌ಗಳಿಂದ ಹರಿದ ರನ್‌ಗಳದ್ದು ಸಿಂಹಪಾಲಿದೆ.

ADVERTISEMENT

ಈ ಕಣಿವೆಯಲ್ಲಿ ಬೆಳೆಯುವ ವಿಶೇಷ ಮರಗಳ ಕಟ್ಟಿಗೆ ಮತ್ತು ನಾರುಗಳಲ್ಲಿ ಬ್ಯಾಟ್‌ಗಳನ್ನು ತಯಾರಿಸಲಾಗುತ್ತಿದೆ. ಇವತ್ತು ಬಹುಕೋಟಿ ಉದ್ಯಮವಾಗಿಯೂ ಇದು ಬೆಳೆದಿದೆ. ಜಗತ್ತಿನಾದ್ಯಂತ ಇಂಗ್ಲೆಂಡ್ ಮತ್ತು ಕಾಶ್ಮೀರ ವಿಲೋಗಳು (ಬ್ಯಾಟ್‌) ಸುಪ್ರಸಿದ್ಧ. ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್, ಮಹೇಂದ್ರಸಿಂಗ್ ಧೋನಿ ಸೇರಿದಂತೆ ಹಲವು ಬ್ಯಾಟರ್‌ಗಳು ಇಲ್ಲಿಯ ಬ್ಯಾಟ್‌ಗಳನ್ನು ತಮ್ಮ ವೃತ್ತಿಜೀವನದಲ್ಲಿ ಬಳಸಿದ್ದಾರೆ.

ಇಂತಹ ರಾಜ್ಯದ ಕ್ರಿಕೆಟ್ ತಂಡ ಇದೇ ಮೊದಲ ಸಲ ‘ದೇಶಿ ಕ್ರಿಕೆಟ್‌ ರಾಜ’ನೆಂದೇ ಕರೆಸಿಕೊಳ್ಳುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪ್ರವೇಶಿಸಿದೆ. ಹುಬ್ಬಳ್ಳಿಯಲ್ಲಿ ಮಂಗಳವಾರದಿಂದ ಕರ್ನಾಟಕ ತಂಡದ ಎದುರು ಕಣಕ್ಕಿಳಿಯಲಿದೆ. ಕ್ರಿಕೆಟ್ ಇತಿಹಾಸ, ಪ್ರತಿಭೆಗಳು ಇದ್ದರೂ ಕಣಿವೆ ರಾಜ್ಯವು ಈ ಹಂತಕ್ಕೆ ಬರಲು ಏಳು ದಶಕ ಕಾಯಬೇಕಾಯಿತು. ಭಯೋತ್ಪಾದನೆ, ಹಿಂಸಾಚಾರಗಳಿಂದ ನಲುಗಿದ ರಾಜ್ಯದಲ್ಲಿ ಎಲ್ಲ ಕ್ಷೇತ್ರಗಳೂ ತೊಂದರೆ ಅನುಭವಿಸಿವೆ. ಅದರಲ್ಲಿ ಕ್ರೀಡಾ ಕ್ಷೇತ್ರವೂ ಸೇರಿದ್ದು, ಅದನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನಳು ನಡೆದಿವೆ. ಅದರ ಫಲವಾಗಿಯೇ ಇವತ್ತು ಕ್ರಿಕೆಟ್ ರಾಜ್ಯ ತಂಡವು ಈ ಮಟ್ಟಕ್ಕೆ ಬಂದು ನಿಂತಿದೆ.

ಅಬ್ದುಲ್ ಸಮದ್

1959–60ರ ರಣಜಿ ಋತುವಿನಲ್ಲಿ ಮೊದಲ ಸಲ ಜಮ್ಮು–ಕಾಶ್ಮೀರ ತಂಡವು ಆಡಿತು. ಆದರೆ, ಮೊದಲ ಗೆಲುವು ಸವಿಯಲು 23 ವರ್ಷ ಕಾಯಬೇಕಾಯಿತು. 1982–83ರ ಋತುವಿನಲ್ಲಿ ಸರ್ವಿಸಸ್ ತಂಡದ ಎದುರಿನ ಪಂದ್ಯದಲ್ಲಿ ಜಯಿಸಿತು. ಅದರ ನಂತರ ಈ ತಂಡ ಅಷ್ಟೇನೂ ಬಲಿಷ್ಠವಾಗಿರಲಿಲ್ಲ. 

ರಾಜ್ಯದ ಶ್ರೀನಗರ ಹಾಗೂ ಜಮ್ಮು ನಗರಗಳಲ್ಲಿ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ ಪಂದ್ಯಗಳು ನಡೆದಂತಹ ಕ್ರೀಡಾಂಗಣಗಳು 90ರ ದಶಕದಲ್ಲಿಯೇ ಇದ್ದವು. ಆದರೆ ರಾಜ್ಯದ ಕಾನೂನು, ಸುವ್ಯವಸ್ಥೆ ಸರಿಯಿರದ ಕಾರಣ ಆಟಕ್ಕೆ ಹಿನ್ನಡೆಯಾಯಿತು. ಈ ನಡುವೆಯೂ ಇಲ್ಲಿಯ ಕ್ರಿಕೆಟಿಗರು ತಮ್ಮ ಪ್ರಯತ್ನವನ್ನು ಬಿಡಲಿಲ್ಲ. 15 ವರ್ಷಗಳ ಹಿಂದೆ ಕಾಶ್ಮೀರ ಕಣಿವೆಯ ಕ್ರಿಕೆಟ್‌ ಮಗ್ಗಲು ಬದಲಿಸಿತು.

ಬೇಡಿ ಪರ್ವ:
2011ರಲ್ಲಿ ಸ್ಪಿನ್ ದಿಗ್ಗಜ ಮತ್ತು ಭಾರತ ತಂಡದ ಮಾಜಿ ನಾಯಕ ಬಿಷನ್ ಸಿಂಗ್ ಬೇಡಿ ಅವರು ಜಮ್ಮು–ಕಾಶ್ಮೀರ ತಂಡಕ್ಕೆ ಮುಖ್ಯ ಕೋಚ್ ಆಗಿ ನೇಮಕವಾದರು. ಅವರ ಕಟ್ಟುನಿಟ್ಟಾದ ಕೋಚಿಂಗ್‌ನಲ್ಲಿ ಕಣಿವೆ ರಾಜ್ಯದ ಪ್ರತಿಭೆಗಳ ಆತ್ಮವಿಶ್ವಾಸ ಇಮ್ಮಡಿಯಾಯಿತು. ದೇಶಿ ಕ್ರಿಕೆಟ್‌ನ ದೊಡ್ಡ ತಂಡಗಳಿಗೂ ಸವಾಲೊಡ್ಡುವ ಸಾಮರ್ಥ್ಯ ಬೆಳೆಯಿತು.

ಬಿಷನ್ ಸಿಂಗ್ ಬೇಡಿ

‘ನಮಗೆ ಟೂರ್ನಿಗಳಲ್ಲಿ ಭಾಗವಹಿಸುವುದೇ ದೊಡ್ಡದು ಎಂಬ ಮನೋಭಾವ ಇತ್ತು. ಆದರೆ ಕೋಚ್ ಆಗಿ ಬಂದ ಬೇಡಿ ಸರ್ ಅದನ್ನು ಬದಲಿಸಿದರು. ನಿಮಗೆ ಕೌಶಲ, ಪ್ರತಿಭೆಗಳಿವೆ. ಗೆಲ್ಲಲು ಪ್ರಯತ್ನಿಸಿ. ಎಲ್ಲವೂ ಸಾಧ್ಯವಿದೆಯೆಂದು ಬೆನ್ನು ತಟ್ಟಿದರು. ಆ ಮಾತುಗಳು ನಮ್ಮನ್ನು ಬದಲಿಸಿದವು’ ಎಂದು ಕಾಶ್ಮೀರ ತಂಡದ ಬ್ಯಾಟರ್ ಇಯಾನ್ ದೇವ್ ಸಿಂಗ್ ಹಾಗೂ ಭಾರತ ತಂಡವನ್ನು ಏಕದಿನ ಕ್ರಿಕೆಟ್‌ನಲ್ಲಿ ಪ್ರತಿನಿಧಿಸಿದ್ದ ಪರ್ವೇಜ್ ರಸೂಲ್ ಅವರು ತಮ್ಮ ಸಂದರ್ಶನಗಳಲ್ಲಿ ಹೇಳಿದ್ದರು.

ಬೇಡಿ ಕೋಚ್ ಆಗಿದ್ದಾಗ ತಂಡದಲ್ಲಿ ಇಯಾನ್ ದೇವ್ ಸಿಂಗ್ ಆಡಿದ್ದರು. ಶತಕ ಕೂಡ ಗಳಿಸಿದ್ದರು. ಸಿಂಗ್ ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 93 ಪಂದ್ಯಗಳಿಂದ 5,558 ರನ್ ಗಳಿಸಿದ್ದರು. ರಣಜಿ, ದುಲೀಪ್ ಟ್ರೋಫಿ ಟೂರ್ನಿಗಳಲ್ಲಿ ಆಡಿದ್ದರು. ನಂತರ ಅವರು ಅಮೆರಿಕದಲ್ಲಿ ನೆಲಸಿದರು. ಅಲ್ಲಿಯೂ ಅವರು ಕೆಲವು ತಂಡಗಳಿಗೆ ಕ್ರಿಕೆಟ್ ಆಡಿದರು. ಪರ್ವೇಜ್ ಅವರು ಕಾಶ್ಮೀರದಿಂದ ಭಾರತ ತಂಡದಲ್ಲಿ ಆಡಿದ ಮೊದಲ ಆಟಗಾರ. ಏಕದಿನ ಮತ್ತು ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ್ದಾರೆ.

ಇಯಾನ್‌ ದೇವ್‌ ಸಿಂಗ್‌

ಪ್ರಸ್ತುತ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿರುವ ಮಿಥುನ್ ಮನ್ಹಾಸ್ ಕೂಡ ಕಾಶ್ಮೀರ ತಂಡದಲ್ಲಿ ಆಡಿದ್ದರು. ಅಲ್ಲದೇ ಅವರು ಜಮ್ಮು–ಕಾಶ್ಮೀರ ರಾಜ್ಯ ಕ್ರಿಕೆಟ್ ಸಂಸ್ಥೆ (ಜೆಕೆಸಿಎ) ಆಡಳಿತ ಸುಧಾರಣೆಗಾಗಿ ನೇಮಕ ಮಾಡಲಾಗಿದ್ದ ಅಡ್‌ಹಾಕ್ ಸಮಿತಿಯ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ಅವರಲ್ಲದೇ ಇತ್ತೀಚಿನ ವರ್ಷಗಳಲ್ಲಿ ಅಬೀದ್ ನಬಿ, ರಸಿಕ್ ದಾರ್, ಅಬ್ದುಲ್ ಸಮದ್, ವೇಗದ ಬೌಲರ್ ಉಮ್ರಾನ್ ಮಲಿಕ್, ಅಕೀಬ್ ನಬಿ ದಾರ್ ಮಿಂಚುತ್ತಿದ್ದಾರೆ.

ಅಕೀಬ್ ಆಟದ ಬಲ:
ಈ ಸಲ ತಂಡವು ಫೈನಲ್ ತಲುಪಲು ಅಕೀಬ್ ನಬಿ ದಾರ್ ಅವರ ಪಾತ್ರ ದೊಡ್ಡದು. 29 ವರ್ಷದ ಈ ಬಲಗೈ ಮಧ್ಯಮವೇಗಿ ಈ ಋತುವಿನಲ್ಲಿ 59 ವಿಕೆಟ್‌ಗಳನ್ನು ಗಳಿಸಿದ್ದಾರೆ.

ಇಂದೋರ್‌ನಲ್ಲಿ ನಡೆದಿದ್ದ ಕ್ವಾರ್ಟರ್‌ಫೈನಲ್‌ನಲ್ಲಿ ಬಲಿಷ್ಠ ಮಧ್ಯಪ್ರದೇಶ ತಂಡದ ಎದುರು ಎರಡೂ ಇನಿಂಗ್ಸ್‌ಗಳಲ್ಲಿ ಐದು ವಿಕೆಟ್ ಗೊಂಚಲು (ಒಟ್ಟು 12 ವಿಕೆಟ್) ಗಳಿಸಿದ್ದರು. ಕಲ್ಯಾಣಿಯಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಬಂಗಾಳದ ಎದುರು (87ಕ್ಕೆ5 ಮತ್ತು 36ಕ್ಕೆ4) ಒಟ್ಟು 9 ವಿಕೆಟ್ ಗಳಿಸಿದ್ದರು. ಈ ಟೂರ್ನಿಯಲ್ಲಿ ಅವರು ಒಟ್ಟು ಅರ್ಧಡಜನ್‌ ‘ಪಂಚಗುಚ್ಛ’ ಗಳಿಸಿದ್ದಾರೆ.

ಅಕೀಬ್ ನಬಿ ದಾರ್

ಪಾರಸ್ ಡೋಗ್ರಾ ನಾಯಕತ್ವದ ತಂಡವು ‘ಡಿ’ ಗುಂಪಿನಲ್ಲಿ ರಾಜಸ್ಥಾನ, ದೆಹಲಿ, ಹೈದರಾಬಾದ್ ತಂಡಗಳನ್ನು ಸೋಲಿಸಿತ್ತು. ಸೆಮಿಫೈನಲ್‌ನಲ್ಲಿ ಅಬ್ದುಲ್ ಸಮದ್ ಮತ್ತು ವಂಶಜ್ ಶರ್ಮಾ ಅವರು ಮಿಂಚಿದ್ದರು. ಪಾರಸ್ ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 10 ಸಾವಿರಕ್ಕೂ ಹೆಚ್ಚು ರನ್ ಗಳಿಸಿರುವ ಅನುಭವಿ. ಈ ಋತುವಿನಲ್ಲಿ ಅವರ ನಾಯಕತ್ವವೂ ಹುರಿಗೊಂಡಿದೆ. ಎಂಟು ಬಾರಿಯ ಚಾಂಪಿಯನ್ ಕರ್ನಾಟಕ ತಂಡವನ್ನು ಎದುರಿಸಲು ಅವರ ತಂಡ ಸರ್ವಸನ್ನದ್ಧವಾಗಿದೆ.

2014ರಲ್ಲಿ ಮೊದಲ ಬಾರಿಗೆ ತಂಡವು ರಣಜಿ ನಾಕೌಟ್ ಪ್ರವೇಶಿಸಿತ್ತು. ಹೋದ ವರ್ಷವೂ ತಂಡ ಸೆಮಿಫೈನಲ್‌ ಪ್ರವೇಶಿಸಿತ್ತು.  ಟ್ರೋಫಿಯ ಸೋಲು–ಗೆಲುವಿನಾಚೆ ನೋಡುವುದಾದರೆ ಜಮ್ಮು–ಕಾಶ್ಮೀರ ತಂಡವು ಸುದೀರ್ಘವಾದ ಮತ್ತು ಕಠಿಣವಾದ ಹಾದಿಯಲ್ಲಿ ಪಯಣಿಸಿ ಈ ಹಂತಕ್ಕೆ ಬಂದಿರುವುದೇ ಚಾರಿತ್ರಿಕ ಸಾಧನೆ. ಇದರಿಂದಾಗಿ ಕಣವೆ ರಾಜ್ಯದಲ್ಲಿ ಕ್ರಿಕೆಟ್ ಮತ್ತಷ್ಟು ಬೆಳೆಯುವ ಅವಕಾಶಗಳ ಬಾಗಿಲು ತೆರೆದಂತಾಗಿದೆ.

ವಂಶಜ್ ಶರ್ಮಾ

ಕನ್ನಡಿಗ ಜೋಶಿ ಕಾಣಿಕೆ...

ಜಮ್ಮು–ಕಾಶ್ಮೀರ ತಂಡದ ಈ ಸಾಧನೆಯ ಓಟದಲ್ಲಿ ಕನ್ನಡಿಗ ಸುನೀಲ್ ಜೋಶಿ ಅವರ ಕಾಣಿಕೆಯೂ ಇದೆ. 

ಬಿಷನ್ ಸಿಂಗ್ ಬೇಡಿ ಅವರ ನಂತರ ಈ ತಂಡಕ್ಕೆ 2014-15ರಲ್ಲಿ ಕೋಚ್ ಆಗಿ ನೇಮಕವಾಗಿದ್ದರು ಜೋಶಿ. ಅವರ ಮಾರ್ಗದರ್ಶನದಲ್ಲಿ ತಂಡವು ವಿಜಯ್ ಹಜಾರೆ ಟ್ರೋಫಿ, ರಣಜಿ ಟ್ರೋಫಿ ಟೂರ್ನಿಗಳಲ್ಲಿ ಉತ್ತಮ ಸಾಧನೆ ಮಾಡಿತು. 

ಇದೀಗ ಅದೇ ಜಮ್ಮು–ಕಾಶ್ಮೀರ ಮತ್ತು ಕರ್ನಾಟಕ ನಡುವಣ ಫೈನಲ್ ಪಂದ್ಯದ ಸಂದರ್ಭದಲ್ಲಿ ಹುಬ್ಬಳ್ಳಿಯ ಮೈದಾನದ ಪೆವಿಲಿಯನ್‌ ಬ್ಲಾಕ್‌ಗೆ ಸುನೀಲ್ ಜೋಶಿ ಹೆಸರನ್ನು ಇಡಲಾಗುತ್ತಿದೆ.  

ಗದುಗಿನ ಜೋಶಿಯವರು ಧಾರವಾಡ ವಲಯದಿಂದ ಭಾರತ ಟೆಸ್ಟ್ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ ಮೊದಲ ಆಟಗಾರರಾಗಿದ್ದಾರೆ. ಸದ್ಯ ಬಿಸಿಸಿಐ ಶ್ರೇಷ್ಠತಾ ಕೇಂದ್ರದಲ್ಲಿ ಕೋಚ್ ಆಗಿದ್ದಾರೆ. 

ಸುನೀಲ್‌ ಜೋಶಿ

ಈಶಾನ್ಯದಲ್ಲೂ ಕ್ರಿಕೆಟ್‌ಗೆ ಪ್ರೋತ್ಸಾಹ

ಕ್ರಿಕೆಟ್‌ ಮುಖ್ಯವಾಹಿನಿಯಿಂದ ದೂರವೇ ಉಳಿದಿದ್ದ ಈಶಾನ್ಯದ ರಾಜ್ಯಗಳಿಗೂ ಈ ಆಟವನ್ನು ವಿಸ್ತರಿಸಲು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯೋನ್ಮುಖವಾಗಿದೆ. ಈ ಭಾಗದ ಆರು ರಾಜ್ಯಗಳಾದ ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್‌ ಮತ್ತು ಸಿಕ್ಕಿಂ ತಂಡಗಳು 2018ರಿಂದ ರಣಜಿ ಟ್ರೋಫಿಯಲ್ಲಿ ಆಡುವ ಅವಕಾಶ ಪಡೆದಿವೆ. ಈ ತಂಡಗಳು ಪ್ಲೇಟ್‌ ಗುಂಪಿನಲ್ಲಿ ಆಡುತ್ತಿವೆ. ಅಸ್ಸಾಂ ಮತ್ತು ತ್ರಿಪುರಾ ತಂಡಗಳು ಅದಕ್ಕೆ ಮೊದಲೇ ಅವಕಾಶ ಪಡೆದಿವೆ.  

2024ರ ಮೇ ತಿಂಗಳಲ್ಲಿ ಆಗಿನ ಬಿಸಿಸಿಐ ಕಾರ್ಯದರ್ಶಿಯಾಗಿದ್ದ ಜಯ್ ಶಾ (ಈಗ ಐಸಿಸಿ ಅಧ್ಯಕ್ಷ) ಅವರು ಆರು ರಾಜ್ಯಗಳಲ್ಲಿ ಅತ್ಯಾಧುನಿಕ ಕ್ರಿಕೆಟ್ ತರಬೇತಿ ವ್ಯವಸ್ಥೆಗೆ ಅಡಿಗಲ್ಲು ಹಾಕಿದ್ದರು. ಶಿಲ್ಲಾಂಗ್, ಇಟಾನಗರ, ಕೊಹಿಮಾ, ಐಜ್ವಾಲ್, ಇಂಫಾಲ್ ಮತ್ತು ಗ್ಯಾಂಗ್ಟಕ್‌ನಲ್ಲಿ ಈ ವ್ಯವಸ್ಥೆ ಕೆಲವೇ ತಿಂಗಳಲ್ಲಿ ಬಳಕೆಗೆ ಲಭ್ಯವಾಗುವ ನಿರೀಕ್ಷೆಯಿದೆ. ಒಳಾಂಗಣ ನೆಟ್ಸ್‌ ವ್ಯವಸ್ಥೆ, ಈಜುಕೊಳ, ಫಿಟ್ನೆಸ್‌ ಸೆಂಟರ್‌ ಇವುಗಳಲ್ಲಿ ಇರಲಿವೆ. ವರ್ಷಪೂರ್ತಿ ತರಬೇತಿಗೆ ಅನುಕೂಲ ಮಾಡಿಕೊಡುವ ಉದ್ದೇಶ ಇದರ ಹಿಂದಿದೆ.

2022–23ರಿಂದ ದೇಶದ ಐದು (ಕೇಂದ್ರ, ದಕ್ಷಿಣ, ಪಶ್ಚಿಮ, ಉತ್ತರ, ದಕ್ಷಿಣ ವಲಯಗಳ ಜೊತೆ) ವಲಯಗಳ ಜೊತೆ ಈಶಾನ್ಯ ವಲಯವನ್ನೂ ಸ್ಥಾಪಿಸಲಾಗಿದೆ. ದುಲೀಪ್ ಟ್ರೋಫಿ ಏಕದಿನ ಟೂರ್ನಿಯಲ್ಲಿ ಆಡುವ ಮೂಲಕ ಇದಕ್ಕೆ ಚಾಲನೆಯೂ ದೊರೆತಿದೆ.

ಅಸ್ಸಾಂನ ಬ್ಯಾಟರ್ ರಿಯಾನ್ ಪರಾಗ್ ಐಪಿಎಲ್‌ನಲ್ಲಿ ಉತ್ತಮ ಆಟದಿಂದ ಗಮನ ಸೆಳೆದಿದ್ದಾರೆ. ರಾಜಸ್ಥಾನ ರಾಯಲ್ಸ್ ತಂಡಕ್ಕೆ ಅವರು ನಾಯಕರೂ ಆಗಿದ್ದಾರೆ. ಈ ತಂಡ ಕೆಲವು ವರ್ಷಗಳಿಂದ ಗುವಾಹಟಿಯ ಬರ್ಸಪಾರಾ ಕ್ರೀಡಾಂಗಣವನ್ನು ಜೈಪುರದ ಜೊತೆಗೆ ತವರು ಕ್ರೀಡಾಂಗಣವನ್ನಾಗಿ ಆಯ್ಕೆ ಮಾಡಿಕೊಂಡಿದೆ. 2018ರಲ್ಲಿ ಗುವಾಹಟಿಯಲ್ಲಿ ಮೊದಲ ಏಕದಿನ (ಭಾರತ– ವೆಸ್ಟ್‌ ಇಂಡೀಸ್) ಅಂತರರಾಷ್ಟ್ರೀಯ ಪಂದ್ಯ ನಡೆದಿತ್ತು. 2025ರ ನವೆಂಬರ್‌ನಲ್ಲಿ ಗುವಾಹಟಿಯಲ್ಲಿ ಮೊದಲ ಬಾರಿ ಟೆಸ್ಟ್‌ ಪಂದ್ಯವೂ (ಭಾರತ– ದಕ್ಷಿಣ ಆಫ್ರಿಕಾ) ನಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.