ADVERTISEMENT

ವಾರದ ವಿಶೇಷ: ಸಾಮಾಜಿಕ – ಶೈಕ್ಷಣಿಕ ಸಮೀಕ್ಷೆಗೆ ‘ಆಧಾರ್’ ಆಧಾರ

ಜಯಸಿಂಹ ಆರ್.
Published 19 ಸೆಪ್ಟೆಂಬರ್ 2025, 22:30 IST
Last Updated 19 ಸೆಪ್ಟೆಂಬರ್ 2025, 22:30 IST

ರಾಜ್ಯದಲ್ಲಿ 2015ರಲ್ಲಿ ನಡೆಸಲಾದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಸಮೀಕ್ಷೆದಾರರು ಜನರಿಂದ ಮಾಹಿತಿ ಪಡೆದ ಸಂಗ್ರಹ ಚಿತ್ರ

ರಾಜ್ಯದಲ್ಲಿ 2015ರಲ್ಲಿ ನಡೆಸಲಾದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಸಮೀಕ್ಷೆದಾರರು ಜನರಿಂದ ಮಾಹಿತಿ ಪಡೆದ ಸಂಗ್ರಹ ಚಿತ್ರ

• ADVERTISEMENT

ಸಮೀಕ್ಷೆಗಾಗಿ ರೂಪಿಸಿರುವ ಆ್ಯಪ್‌ನಲ್ಲಿ ಕುಟುಂಬದ ಮುಖ್ಯಸ್ಥನ ಆಧಾರ್ ಕಾರ್ಡ್‌ ವಿವರವನ್ನು ನಮೂದಿಸಿದ ಕೂಡಲೇ, ಅದಕ್ಕೆ ಜೋಡಣೆಯಾಗಿರುವ ಪಡಿತರ ಚೀಟಿಯ ವಿವರ ಸ್ವಯಂಚಾಲಿತವಾಗಿ ಗೋಚರವಾಗುತ್ತದೆ. ಆ ಕುಟುಂಬದ ಸಂಪೂರ್ಣ ವಿವರವೂ ಭರ್ತಿಯಾಗುತ್ತದೆ. ಒಂದೊಮ್ಮೆ ಕುಟುಂಬದ ಮುಖ್ಯಸ್ಥ ಪಡಿತರ ಚೀಟಿಯ ವಿವರ ನೀಡಿದರೆ, ಅದರಲ್ಲಿ ನಮೂದಾಗಿರುವ ಕುಟುಂಬದ ಸದಸ್ಯರ ಎಲ್ಲ ವಿವರಗಳೂ ಭರ್ತಿಯಾಗುತ್ತವೆ. ಪಡಿತರ ಚೀಟಿ ವಿವರ ನೀಡಿದ್ದರೂ ಅದರ ವಿವರಗಳು ಭರ್ತಿಯಾಗದಿದ್ದರೆ, ಅಂತಹವರು ಆಧಾರ್ ವಿವರವನ್ನು ಕಡ್ಡಾಯವಾಗಿ ನೀಡಬೇಕು.

ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ನಡೆಸಲಿರುವ ‘ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆ’ಗೆ ಆಧಾರ್ ಸಂಖ್ಯೆಯೇ ಆಧಾರ. ಸಮೀಕ್ಷೆಗೆ ಒಳಪಡುವವರು ತಮ್ಮ ಪಡಿತರ ಚೀಟಿ ವಿವರ ಅಥವಾ ಜಾತಿ ಪ್ರಮಾಣ ಪತ್ರವನ್ನು ನೀಡಬೇಕು. ಇವೆರಡೂ ಲಭ್ಯವಿಲ್ಲದೇ ಇದ್ದರೆ, ಆಧಾರ್ ನೀಡಬಹುದು.

ಪಡಿತರ ಚೀಟಿ ಇದ್ದೂ ಅದರಲ್ಲಿ ಕುಟುಂಬದ ಸದಸ್ಯರ ಹೆಸರು ನಮೂದಾಗದ ಸಂದರ್ಭದಲ್ಲಿ, ಅವರ ಆಧಾರ್ ಸಂಖ್ಯೆ ನೀಡಲೇಬೇಕಾಗುತ್ತದೆ. ಹೀಗೆ ಆಧಾರ್ ಸಂಖ್ಯೆಯನ್ನು ಬಳಸಿಕೊಂಡು, ನಿವಾಸಿಯೊಬ್ಬರ ವಿವರ ಹಲವು ಬಾರಿ ನಮೂದಾಗುವುದನ್ನು ತಡೆಯುವ ರೀತಿಯಲ್ಲಿ ಸಮೀಕ್ಷಾ ವ್ಯವಸ್ಥೆಯನ್ನು ರೂಪಿಸಲಾಗಿದೆ.

ಈ ಸಮೀಕ್ಷೆಗಾಗಿ ರೂಪಿಸಿರುವ ಆ್ಯಪ್‌ನಲ್ಲಿ ಕುಟುಂಬದ ಮುಖ್ಯಸ್ಥನ ಆಧಾರ್ ಕಾರ್ಡ್‌ ವಿವರವನ್ನು ನಮೂದಿಸಿದ ಕೂಡಲೇ, ಅದಕ್ಕೆ ಜೋಡಣೆಯಾಗಿರುವ ಪಡಿತರ ಚೀಟಿಯ ವಿವರ ಸ್ವಯಂಚಾಲಿತವಾಗಿ ಗೋಚರವಾಗುತ್ತದೆ. ಆ ಕುಟುಂಬದ ಸಂಪೂರ್ಣ ವಿವರವೂ ಭರ್ತಿಯಾಗುತ್ತದೆ. ಒಂದೊಮ್ಮೆ ಕುಟುಂಬದ ಮುಖ್ಯಸ್ಥ ಪಡಿತರ ಚೀಟಿಯ ವಿವರ ನೀಡಿದರೆ, ಅದರಲ್ಲಿ ನಮೂದಾಗಿರುವ ಕುಟುಂಬದ ಸದಸ್ಯರ ಎಲ್ಲ ವಿವರಗಳೂ ಭರ್ತಿಯಾಗುತ್ತವೆ. ಪಡಿತರ ಚೀಟಿ ವಿವರ ನೀಡಿದ್ದರೂ ಅದರ ವಿವರಗಳು ಭರ್ತಿಯಾಗದಿದ್ದರೆ, ಅಂತಹವರು ಆಧಾರ್ ವಿವರವನ್ನು ಕಡ್ಡಾಯವಾಗಿ ನೀಡಬೇಕು.

ಅಲೆಮಾರಿ ಸಮುದಾಯಗಳ ಜನರೂ ಆಧಾರ್‌/ಪಡಿತರ ಚೀಟಿ/ಜಾತಿ ಪ್ರಮಾಣ ಪತ್ರ ಹೊಂದಿದ್ದರಷ್ಟೇ ಅವರನ್ನು ಸಮೀಕ್ಷೆಗೆ ಒಳಪಡಿಸಲಾಗುತ್ತದೆ. ಸಮೀಕ್ಷೆ ಪೂರ್ಣಗೊಳಿಸಲು ಕುಟುಂಬದ ಮುಖ್ಯಸ್ಥನ ಫೋಟೊ ತೆಗೆಯಬೇಕು. ಆದರೆ ಫೋಟೊ ತೆಗೆಸಿಕೊಳ್ಳಲು ಆತ ನಿರಾಕರಿಸಲು ಅವಕಾಶವಿದೆ. ಹಾಗೆ ನಿರಾಕರಿಸುವು ದಾದರೆ, ಆ ವ್ಯಕ್ತಿಯು ತನ್ನ ಆಧಾರ್/ಪಡಿತರ ಚೀಟಿ/ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಒದಗಿಸಲೇ ಬೇಕಾಗುತ್ತದೆ.

ಈ ಸಮೀಕ್ಷೆಯನ್ನು ರಾಜ್ಯದ ನಿವಾಸಿಗಳಿಗಷ್ಟೇ ಸೀಮಿತವಾಗಿ ನಡೆಸಲಾಗುತ್ತಿದೆ. ಹೀಗಾಗಿ ಹೊರರಾಜ್ಯದ ನಿವಾಸಿಗಳನ್ನು ಸಮೀಕ್ಷೆಗೆ ಒಳಪಡಿಸುವುದಿಲ್ಲ. ಸಮೀಕ್ಷೆಗೆ ವಿವರ ಸಂಗ್ರಹಿಸುವಾಗ ಆಧಾರ್ ಮತ್ತು ಪಡಿತರ ಚೀಟಿಯಲ್ಲಿ ಇರುವ ವಿಳಾಸಗಳನ್ನು ಪರಿಶೀಲಿಸಲಾಗುತ್ತದೆ. ಅದರಲ್ಲಿನ ವಿಳಾಸವು ಹೊರರಾಜ್ಯದ್ದಾಗಿದ್ದರೆ, ಅವರ ವಿವರಗಳನ್ನು ಸಂಗ್ರಹಿಸಲಾಗುತ್ತದೆ.

ಇನ್ನು ಪಡಿತರ ಚೀಟಿ ಮತ್ತು ಜಾತಿ ಪ್ರಮಾಣ ಪತ್ರ ಎರಡನ್ನೂ ಹೊಂದಿಲ್ಲದವರು ಆಧಾರ್ ವಿವರವನ್ನು ಕಡ್ಡಾಯವಾಗಿ ನೀಡಲೇಬೇಕು. ಇದರ ಬದಲಿಗೆ ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್‌ ವಿವರ, ಪ್ಯಾನ್‌ ವಿವರಗಳನ್ನು ಬಳಸಲು ಅವಕಾಶವಿಲ್ಲ. ಆಧಾರ್ ಸಂಖ್ಯೆ ಇಲ್ಲದಿದ್ದರೂ ಆಧಾರ್ ನೋಂದಣಿ ಸಂಖ್ಯೆಯನ್ನಾದರೂ ನೀಡಲೇಬೇಕು. ಹೀಗಾಗಿ, ಸಮೀಕ್ಷೆ ಎದುರು ನೋಡುತ್ತಿರುವ ನಾಗರಿಕರು ತಮ್ಮ ಆಧಾರ್ ವಿವರಗಳನ್ನು ಸಿದ್ಧವಾಗಿ ಇರಿಸಿಕೊಳ್ಳುವುದು, ಸಮೀಕ್ಷೆಯನ್ನು ಸುಲಭವಾಗಿಸಲಿದೆ. ಪಡಿತರ ಚೀಟಿ ಅಥವಾ ಜಾತಿ ಪ್ರಮಾಣ ಪತ್ರ ನೀಡಿದರೂ, ಅದಕ್ಕೆ ಜೋಡಣೆಯಾಗಿರುವ ಕಾರಣಕ್ಕೆ ಆಧಾರ್‌ನ ವಿವರಗಳು ಆ್ಯಪ್‌ಗೆ ದತ್ತವಾಗುತ್ತದೆ. ಈ ಮೂರೂ ದಾಖಲೆ ಪತ್ರಗಳ ವಿವರಗಳು ಪರಸ್ಪರ ದೃಢೀಕರಣಕ್ಕೆ ಬಳಕೆಯಾಗುತ್ತವೆ. ಹೀಗಾಗಿಯೇ ಈ ಸಮೀಕ್ಷೆಗೆ ಆಧಾರ್‌ ಸಂಖ್ಯೆಯೇ ಆಧಾರವಾಗಿದೆ.

ರಾಜ್ಯದಲ್ಲಿ 2015ರಲ್ಲಿ ನಡೆಸಲಾದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಸಮೀಕ್ಷೆದಾರರು ಜನರಿಂದ ಮಾಹಿತಿ ಪಡೆದ ಸಂಗ್ರಹ ಚಿತ್ರ

ಪುರುಷನಷ್ಟೇ ಕುಟುಂಬದ ಮುಖ್ಯಸ್ಥ

ಈ ಸಮೀಕ್ಷೆಯಲ್ಲಿ ಕುಟುಂಬದ ಮುಖ್ಯಸ್ಥನ ವಿವರ ಸಲ್ಲಿಸಿದ ನಂತರವೇ ಇತರರ ವಿವರ ಸಲ್ಲಿಸಲು ಸಾಧ್ಯ. ಪುರುಷನನ್ನು ಮಾತ್ರ ಕುಟುಂಬದ ಮುಖ್ಯಸ್ಥರನ್ನಾಗಿ ನಮೂದಿಸುವ ರೀತಿಯಲ್ಲಿ ಸಮೀಕ್ಷಾ ಆ್ಯಪ್‌ ಅನ್ನು ರೂಪಿಸಲಾಗಿದೆ. ಮಹಿಳೆಯೊಬ್ಬರು ತಾನು ಕುಟುಂಬದ ಮುಖ್ಯಸ್ಥೆ ಎಂದು ನಮೂದಿಸಲು ಅವಕಾಶವಿಲ್ಲ.

ಒಂದು ಕುಟುಂಬದಲ್ಲಿ ಅತ್ಯಂತ ಹಿರಿಯ ಪುರುಷ ಮೃತಪಟ್ಟಿದ್ದರಷ್ಟೇ, ಆತನ ಪತ್ನಿಯನ್ನು ಕುಟುಂಬದ ಮುಖ್ಯಸ್ಥೆ ಎಂದು ಪರಿಗಣಿಸಲು ಅವಕಾಶ ಮಾಡಿಕೊಡಲಾಗಿದೆ. ಮತ್ತು ಈ ನಿಯಮವನ್ನೇ ಪಾಲಿಸುವಂತೆ ಸಮೀಕ್ಷಾದಾರರಿಗೆ ತರಬೇತಿ ವೇಳೆ ತಿಳಿಸಲಾಗಿದೆ. ಮಾತೃ ಪ್ರಧಾನ ಕುಟುಂಬದಲ್ಲಿ ಯಾರನ್ನು ಕುಟುಂಬದ ಮುಖ್ಯಸ್ಥರನ್ನಾಗಿ ಪರಿಗಣಿಸಬೇಕು ಎಂಬುದರ ವಿವರ ಸಮೀಕ್ಷಾ ಕೈಪಿಡಿಯಲ್ಲಿ ಇಲ್ಲ.

111 ಸ್ವರೂಪದ ಸ್ವಯಂ ಉದ್ಯೋಗ, 80 ಕುಲ ಕಸುಬು

ರಾಜ್ಯದ ನಾಗರಿಕರ ಆರ್ಥಿಕ ಸ್ಥಿತಿಯ ವಿವರವನ್ನು ಕರಾರುವಾಕ್ಕಾಗಿ ಸಂಗ್ರಹಿಸುವ ಉದ್ದೇಶದಿಂದ ಉದ್ಯೋಗಕ್ಕೆ ಸಂಬಂಧಿಸಿದ ಅತ್ಯಂತ ಸೂಕ್ಷ್ಮ ಮಾಹಿತಿಯನ್ನೂ ಸಮೀಕ್ಷೆಯಲ್ಲಿ ದಾಖಲಿಸಲಾಗುತ್ತದೆ. ಕೇಂದ್ರ, ರಾಜ್ಯ ಸರ್ಕಾರದ ಉದ್ಯೋಗಗಳು, ಖಾಸಗಿ ಕಂಪನಿಗಳ ಉದ್ಯೋಗಗಳು ಒಂದೆಡೆಯಾದರೆ, 111 ಸ್ವರೂಪದ ಸ್ವಯಂ ಉದ್ಯೋಗ ಗಳನ್ನು ಸಮೀಕ್ಷಾ ಕೈಪಿಡಿಯಲ್ಲಿ ಉಲ್ಲೇಖಿಸಲಾಗಿದೆ. ಇದರ ಹೊರತಾಗಿಯೂ ಬೇರೆ ಸ್ವರೂಪದ ಸ್ವಯಂ ಉದ್ಯೋಗಗಳು ಇದ್ದರೆ, ಅವುಗಳ ವಿವರ ನಮೂದಿಸಲು ಅವಕಾಶವಿದೆ.

ಅಗರಬತ್ತಿ ಹೊಸೆಯುವವರು, ಬೀಡಿ ಕಟ್ಟುವವರು, ಇಸ್ತ್ರಿ ಮಾಡುವವರು, ಹಿಟ್ಟಿನ ಗಿರಣಿ ನಡೆಸುವವರು, ಸೂಲಗಿತ್ತಿಯರು, ಹಣ್ಣು ವ್ಯಾಪಾರ, ಬೀದಿಬದಿ ವ್ಯಾಪಾರ, ಹೂಕಟ್ಟುವವರು ಹೀಗೆ ವೈವಿಧ್ಯಮಯ ಸ್ವಯಂ ಉದ್ಯೋಗಗಳನ್ನು ಕೈಪಿಡಿಯಲ್ಲಿ ತೋರಿಸಲಾಗಿದೆ. ಈ ಎಲ್ಲ ಉದ್ಯೋಗಗಳಿಗೂ ಪ್ರತ್ಯೇಕ ಕೋಡ್‌ ಸಂಖ್ಯೆ ನೀಡಲಾಗಿದೆ. ಸಮೀಕ್ಷೆಗೆ ಒಳಪಡುವವರು ಸ್ವಯಂ ಉದ್ಯೋಗದ ವಿವರ ಮತ್ತು ಕೋಡ್‌ಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಆಯ್ಕೆ ಮಾಡಿಕೊಳ್ಳಬೇಕಿದೆ.

ಕುಲ ಕಸುಬುಗಳಿಗೆ ಸಂಬಂಧಿಸಿದ ವಿವರಗಳನ್ನು ಅತ್ಯಂತ ಜಾಗರೂಕತೆಯಿಂದ ಸಂಗ್ರಹಿಸಬೇಕು. ಕುಟುಂಬಗಳ ಸಾಂಪ್ರದಾಯಿಕ ವೃತ್ತಿಗಳು ಅವರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ಆರೋಗ್ಯದ ಸ್ಥಿತಿಯನ್ನು ಅಳೆಯುವಲ್ಲಿ ಕುಲ ಕಸುಬಿನ ವಿವರ ಮಹತ್ವದ ಪಾತ್ರ ವಹಿಸುತ್ತದೆ. ಹೀಗಾಗಿ ನಾಗರಿಕರಿಗೆ ಈ ಬಗ್ಗೆ ವಿವರಿಸಿ, ಮಾಹಿತಿ ಸಂಗ್ರಹಿಸಬೇಕು ಎಂದು ಸಮೀಕ್ಷಾದಾರರಿಗೆ ಸೂಚಿಸಲಾಗಿದೆ.

ಸಫಾಯಿ ಕರ್ಮಚಾರಿಗಳು, ಸುಣ್ಣಗಾರರು, ಜಾತಗಾರರು (ಎಮ್ಮೆ ಕೂದಲು ಕತ್ತರಿಸುವವರು), ದೆವ್ವ ಭೂತ ಬಿಡಿಸುವವರು, ಸ್ಮಶಾನದಲ್ಲಿ ಗುಂಡಿ ತೆಗೆಯುವವರು, ಅರಗು ಕೆಲಸಗಾರರು, ಕಲ್ಲು ಕುಟಿಗರು, ಚರ್ಮ ಹದಗೊಳಿಸುವವರು ಹೀಗೆ ಒಟ್ಟು 80 ಸ್ವರೂಪದ ಕುಲ ಕಸುಬುಗಳನ್ನು ಕೈಪಿಡಿಯಲ್ಲಿ ನಮೂದಿಸಲಾಗಿದೆ. ಈ ಪಟ್ಟಿಯಲ್ಲಿ ಇಲ್ಲದ ಕುಲ ಕಸುಬು ಇದ್ದರೆ, ಅದನ್ನು ನಮೂದಿಸಲೂ ಅವಕಾಶವಿದೆ. ಇದರ ಜತೆಯಲ್ಲಿಯೇ ಕುಲ ಕಸುಬಿನ ಕಾರಣಕ್ಕೆ ಬಂದಿರುವ ಚರ್ಮರೋಗ, ಕರುಳು ಸಂಬಂಧಿ ಕಾಯಿಲೆ, ಮೂಳೆ ಸಂಬಂಧಿ ರೋಗ, ಕ್ಷಯ, ಅಸ್ತಮಾ, ಅಂಧತ್ವ ಸೇರಿ ಒಟ್ಟು 10 ಸ್ವರೂಪದ ಕಾಯಿಲೆಗಳ ವಿವರ ಸಂಗ್ರಹಿಸಲು ಆ್ಯಪ್‌ನಲ್ಲಿ ಅವಕಾಶ ಮಾಡಲಾಗಿದೆ.

ನಾಸ್ತಿಕರಿಗೂ ಉಂಟು ಜಾಗ

ಸಮೀಕ್ಷೆಗೆ ಒಳಪಡುವವರು ಧರ್ಮದ ಕಾಲಂನಲ್ಲಿ ಹಿಂದೂ ಅಥವಾ ಇಸ್ಲಾಂ ಅಥವಾ ಕ್ರೈಸ್ತ ಅಥವಾ ಜೈನ ಅಥವಾ ಬೌದ್ಧ ಅಥವಾ ಪಾರ್ಸಿ ಅಥವಾ ಸಿಖ್‌ ಧರ್ಮೀಯರು ಎಂದು ಆಯ್ಕೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ನಾಗರಿಕರು ತಾವು ನಾಸ್ತಿಕರೆಂದೂ ಅಥವಾ ಧರ್ಮ ಗೊತ್ತಿಲ್ಲವೆಂದೂ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಧರ್ಮದ ಹೆಸರು ಹೇಳದೇ ಇರಲೂ ಅವಕಾಶವಿದೆ.

ಇದರ ಜತೆಯಲ್ಲಿ ‘ಇತರೆ’ ಎಂದು ಆಯ್ಕೆ ಮಾಡಿ, ಆ ಇತರೆ ಧರ್ಮ ಯಾವುದು ಎಂಬುದನ್ನು ನಮೂದಿಸಲೂ ಅವಕಾಶವಿದೆ. ಇದು ರಾಜ್ಯದ ಕೆಲವು ಜಾತಿ ಸಮುದಾಯಗಳಲ್ಲಿ ಗೊಂದಲಕ್ಕೆ ಕಾರಣವಾಗಿದೆ.

ಎಲ್ಲ ಜಾತಿ ಸಮುದಾಯಗಳು ತಮ್ಮ ಸಂಖ್ಯೆ ಕಡಿಮೆಯಾಗಬಾರದು ಎಂದು, ಜಾತಿಯ ಕಾಲಂನಲ್ಲಿ ಉಪಜಾತಿಯ ಹೆಸರನ್ನು ಬರೆಯಿಸಬಾರದು ಎಂದು ಕರೆ ನೀಡುತ್ತಿವೆ.

ಸಹಾಯವಾಣಿ

ಸಮೀಕ್ಷೆಗೆ ಸಂಬಂಧಿಸಿದಂತೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ರಾಜ್ಯಮಟ್ಟದ ಸಹಾಯವಾಣಿಯನ್ನು ತೆರೆದಿದೆ. ಸಂಖ್ಯೆ: 8050770004

ಸಮೀಕ್ಷೆ ಸಂದರ್ಭದಲ್ಲಿ ಎದುರಾಗುವ ಸಮಸ್ಯೆಗಳ ಕುರಿತು ಸಮೀಕ್ಷಕರು/ ಮೇಲ್ವಿಚಾರಕರು/ ಸಾರ್ವಜನಿಕರು ಸಹಾಯವಾಣಿಯನ್ನು ಸಂಪರ್ಕಿಸಿ ಸ್ಪಷ್ಟಿಕರಣ/ಸಹಾಯ ಪಡೆದುಕೊಳ್ಳಬಹುದಾಗಿದೆ. ತಾಂತ್ರಿಕ (ಮೊಬೈಲ್ ಆ್ಯಪ್) ವಿಷಯಗಳಿಗಾಗಿ ಕೂಡ ಇದೇ ಸಹಾಯವಾಣಿಯನ್ನು ಸಂಪರ್ಕಿಸಬಹುದು.

ರಾಜ್ಯದಲ್ಲಿ 2015ರಲ್ಲಿ ನಡೆಸಲಾದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಸಮೀಕ್ಷೆದಾರರು ಜನರಿಂದ ಮಾಹಿತಿ ಪಡೆದ ಸಂಗ್ರಹ ಚಿತ್ರ

ಆಸಕ್ತಿಕರ ಅಂಶಗಳು

• ಯಾವುದೇ ಕುಟುಂಬದ ಸದಸ್ಯ ವಿದೇಶದಲ್ಲಿ ವಾಸವಿದ್ದರೆ, ಅವರ ವಿವರಗಳನ್ನು ಸಂಗ್ರಹಿಸಲೂ ಅವಕಾಶವಿದೆ. ಅಂತಹವರು ಯಾವ ಕಾರಣದಿಂದ ವಿದೇಶದಲ್ಲಿದ್ದಾರೆ, ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆಯೇ ಅಥವಾ ವಿದ್ಯಾಭ್ಯಾಸ ಮಾಡುತ್ತಿದ್ದಾರೆಯೇ ಮೊದಲಾದ ವಿವರಗಳನ್ನು ಸಂಗ್ರಹಿಸಲಾಗುತ್ತದೆ

• ಸಮೀಕ್ಷೆಗೆ ಒಳಪಡುವವರು ಒಟ್ಟು 24 ಸ್ವರೂಪದ ಚರಾಸ್ತಿಗಳ ವಿವರ ಒದಗಿಸಲು ಅವಕಾಶವಿದೆ. ಸೈಕಲ್‌, ದ್ವಿಚಕ್ರ ವಾಹನ, ಕಾರುಗಳು, ರೆಫ್ರಿಜರೇಟರ್‌, ವಾಷಿಂಗ್‌ ಮಷೀನ್‌, ಅಡಿಕೆ–ತೆಂಗು ಸುಲಿಯುವ ಯಂತ್ರಗಳ ವಿವರ ನೀಡುವುದಲ್ಲದೆ, ತಮ್ಮಲ್ಲಿರುವ ಚಿನ್ನ–ಬೆಳ್ಳಿಯ ಆಭರಣಗಳ ವಿವರವನ್ನೂ ಒದಗಿಸಬೇಕು

• ಸಾಮಾಜಿಕ ಜಾಲತಾಣ ಇನ್‌ಫ್ಲುಯೆನ್ಸರ್‌ಗಳ ವಿವರಗಳನ್ನು ಸಂಗ್ರಹಿಸಲೂ ಸಮೀಕ್ಷೆಯ ಆ್ಯಪ್‌ನಲ್ಲಿ ಅವಕಾಶವಿದೆ. ಇವರನ್ನು ಅಸಂಘಟಿತ ವಲಯದ ಉದ್ಯೋಗಿಗಳು ಎಂದು ವರ್ಗೀಕರಿಸಲಾಗಿದೆ

• ಸ್ವಿಗ್ಗಿ, ಝೊಮ್ಯಾಟೊ, ಬ್ಲಿಂಕ್‌ಇಟ್‌ನಂತಹ ಡೆಲಿವರಿ ಸೇವೆಗಳಲ್ಲಿ ಇರುವವರು, ಓಲಾ–ಉಬರ್‌ನಂತಹ ಆ್ಯಪ್‌ ಆಧಾರಿತ ಚಾಲಕ ವೃತ್ತಿಯಲ್ಲಿ ಇರುವವರನ್ನು ಗಿಗ್‌ ವರ್ಕರ್‌ಗಳು ಎಂದು ವರ್ಗೀಕರಿಸಲಾಗಿದೆ

• ಸಮೀಕ್ಷೆಗೆ ಒಳಪಡುವವರು ಅಂಗವಿಕಲರಾಗಿದ್ದಲ್ಲಿ, ಅಂಗ ವೈಕಲ್ಯದ ಸ್ವರೂಪ, ದೈನಂದಿನ ಚಟುವಟಿಕೆಗಳಿಗಾಗಿ ಅವರು ಬಳಸುವ ವಸ್ತುಗಳು, ಚಿಕಿತ್ಸೆ ವಿವರಗಳನ್ನೂ ಸಂಗ್ರಹಿಸಲಾಗುತ್ತದೆ. ಸರ್ಕಾರವು ನೀಡಿರುವ ಯುಡಿಐಡಿ ಸಂಖ್ಯೆ ಮತ್ತು ವಿವರಗಳನ್ನು ಪಡೆಯಲಾಗುತ್ತದೆ

• ನಾಗರಿಕರ ಮತದಾರರ ಗುರುತಿನ ಚೀಟಿ (ಎಪಿಕ್‌) ವಿವರಗಳನ್ನೂ ಪಡೆಯಲಾಗುತ್ತದೆ. ಎಪಿಕ್‌ ಚೀಟಿ ಇಲ್ಲದಿದ್ದರೆ, ನೋಂದಣಿ ಏಕೆ ಮಾಡಿಸಿಲ್ಲ ಅಥವಾ ಮುಂದೆ ಮಾಡಿಸುತ್ತಾರಾ ಎಂಬ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ

• ಗ್ಯಾರಂಟಿ ಯೋಜನೆಗಳ ಫಲಾನುಭವಿ ಆಗಿದ್ದರೆ, ಅದನ್ನು ಸಮೀಕ್ಷೆಯಲ್ಲಿ ಉಲ್ಲೇಖಿಸಬೇಕಿದೆ. ಗೃಹ ಲಕ್ಷ್ಮೀ ಯೋಜನೆ ಅಡಿ ಕುಟುಂಬದ ಯಜಮಾನಿ ಪಡೆಯುತ್ತಿರುವ ಮಾಸಿಕ ₹2,000ವನ್ನು, ಕುಟುಂಬದ ವಾರ್ಷಿಕ ಆದಾಯಕ್ಕೆ ಸೇರಿಸಬಾರದು ಎಂದು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ

• ಆ್ಯಂಡ್ರಾಯ್ಡ್‌ ಫೋನ್‌ಗಳಲ್ಲಿ ಕಾರ್ಯನಿರ್ವಹಿಸುವ ಅಪ್ಲಿಕೇಷನ್‌ ಮೂಲಕ ದತ್ತಾಂಶ ಸಂಗ್ರಹ. ನೆಟ್‌ವರ್ಕ್‌ ಇಲ್ಲದಿದ್ದರೂ ಕಾರ್ಯನಿರ್ವಹಿಸುವ ರೀತಿಯಲ್ಲಿ ಅಪ್ಲಿಕೇಷನ್‌ ಅಭಿವೃದ್ಧಿ. ದತ್ತಾಂಶ ಮೊಬೈಲ್‌ನಲ್ಲಿ ಸಂಗ್ರಹವಾಗಿ, ನೆಟ್‌ವರ್ಕ್‌ ಲಭ್ಯವಾಗುತ್ತಿದ್ದಂತೆಯೇ ಅಪ್‌ಲೋಡ್‌ ಆಗುತ್ತದೆ

• ಕುಟುಂಬಗಳ ಸಾಲದ ವಿವರವನ್ನು ಸಮೀಕ್ಷೆ ವೇಳೆ ಕಲೆಹಾಕಲಾಗುತ್ತದೆ. ಸಾಲದ ಮೂಲ, ಯಾವ ಕಾರಣಕ್ಕಾಗಿ ಸಾಲ ಪಡೆಯಲಾಗಿದೆ, ಸಾಲದ ಸ್ವರೂಪದ ವಿವರ ಕೇಳಲಾಗುತ್ತದೆ. ಬ್ಯಾಂಕ್‌ಗಳಿಂದ ಸಾಲ ಪಡೆಯಲಾಗಿದೆಯೇ, ಕೈಸಾಲವೇ, ಮೈಕ್ರೊ ಫೈನಾನ್ಸ್‌ನಿಂದ ಪಡೆದ ಸಾಲವೇ ಅಥವಾ ಸಹಕಾರ ಸಂಘದ ಸಾಲವೇ ಎಂಬ ವಿವರಗಳನ್ನು ನೀಡಬೇಕಾಗುತ್ತದೆ

• ಸಮೀಕ್ಷೆಗೆ ಒಳಪಡುವವರು ತಮ್ಮ ಮತ್ತು ಕುಟುಂಬದ ವಾರ್ಷಿಕ ಆದಾಯದ ವಿವರವನ್ನು ನೀಡಬೇಕಾಗುತ್ತದೆ. ಆದಾಯ ತೆರಿಗೆ ಪಾವತಿದಾರರೇ ಎಂಬುದನ್ನೂ ತಿಳಿಸಬೇಕಾಗುತ್ತದೆ. ಆದರೆ ಆದಾಯಕ್ಕಾಗಲೀ, ಆದಾಯ ತೆರಿಗೆ ಪಾವತಿ ಸಂಬಂಧವಾಗಲೀ ಯಾವುದೇ ದಾಖಲೆ ನೀಡಬೇಕಿಲ್ಲ

ವೀರಶೈವರೋ, ಲಿಂಗಾಯತರೋ ಅಥವಾ ಹಿಂದೂಗಳೋ?

‘ವೀರಶೈವ ಲಿಂಗಾಯತರು ಹಿಂದೂಗಳಲ್ಲ. ಹಿಂದೂ ಧರ್ಮಕ್ಕೂ ನಮಗೂ ಸಂಬಂಧವಿಲ್ಲ. ಹೀಗಾಗಿ ನಮ್ಮ ಸಮುದಾಯದ ಜನರು ಧರ್ಮದ ಕಾಲಂನಲ್ಲಿ ‘ಇತರೆ’ ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು. ಜತೆಗೆ ‘ವೀರಶೈವ ಲಿಂಗಾಯತ ಧರ್ಮ’ ಎಂದು ನಮೂದಿಸಬೇಕು. ಜಾತಿಯ ಕಾಲಂನಲ್ಲಿ ‘ವೀರಶೈವ’ ಅಥವಾ ‘ಲಿಂಗಾಯತ’ ಅಥವಾ ‘ವೀರಶೈವ ಲಿಂಗಾಯತ’ ಎಂದು ಬರೆಯಿಸಬೇಕು. ಉಪಜಾತಿಗಳಲ್ಲಿ, ಉಪಜಾತಿಗಳ ಹೆಸರನ್ನು ಬರೆಯಿಸಬೇಕು’ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕರೆ ನೀಡಿದೆ.

ಜಾಗತಿಕ ಲಿಂಗಾಯತ ಮಹಾಸಭಾವು, ‘ಲಿಂಗಾಯತರು ಹಿಂದೂಗಳಲ್ಲ, ಜತೆಗೆ ವೀರಶೈವರೂ ಅಲ್ಲ. ವೀರಶೈವರು ಮತ್ತು ಪಂಚಾಚಾರ್ಯರು ಬಸವಣ್ಣನನ್ನು ಅನುಸರಿಸುವುದಿಲ್ಲ. ಹೀಗಾಗಿ ಲಿಂಗಾಯತರಿಗೂ ವೀರಶೈವರಿಗೂ ಸಂಬಂಧವಿಲ್ಲ. ಲಿಂಗಾಯತರು ಧರ್ಮದ ಕಾಲಂನಲ್ಲಿ ‘ಇತರೆ’ ಎಂಬುದನ್ನು ಆಯ್ಕೆ ಮಾಡಿ, ‘ಲಿಂಗಾಯತ ಧರ್ಮ’ ಎಂದು ಬರೆಯಿಸಬೇಕು. ಜಾತಿಯ ಕಾಲಂನಲ್ಲಿ ಲಿಂಗಾಯತ ಎಂದು ಬರೆಯಿಸಬೇಕು. ಉಪಜಾತಿಯ ಕಾಲಂನಲ್ಲಿ ಉಪಜಾತಿಗಳ ಹೆಸರನ್ನು ಬರೆಯಿಸಬೇಕು’ ಎಂದು ಕರೆ ನೀಡಿದೆ.

ವೀರಶೈವ, ಲಿಂಗಾಯತ ಸಮುದಾಯದ ಕೆಲ ಸ್ವಾಮೀಜಿಗಳು ಮತ್ತು ರಾಜಕೀಯ ನಾಯಕರ ಮತ್ತೊಂದು ಗುಂಪು ಈಚೆಗೆ ಸಭೆ ನಡೆಸಿ, ‘ನಾವು ಹಿಂದೂಗಳು. ಹೀಗಾಗಿ ಧರ್ಮದ ಕಾಲಂನಲ್ಲಿ ಹಿಂದೂ ಎಂದೇ ಬರೆಯಿಸಬೇಕು’ ಎಂದು ಕರೆ ನೀಡಿದ್ದಾರೆ.

ಕ್ರೈಸ್ತರಲ್ಲೂ ಹಿಂದೂ ಜಾತಿ

ಕ್ರೈಸ್ತ ಧರ್ಮಕ್ಕೆ ಮತಾಂತರವಾದ ಜಾತಿ ಸಮುದಾಯಗಳಿಗೆ, ಕೈಪಿಡಿಯಲ್ಲಿ ಪ್ರತ್ಯೇಕ ಹೆಸರು ನೀಡಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಬೆಸ್ತರು ಕ್ರಿಶ್ಚಿಯನ್‌, ಬ್ರಾಹ್ಮಣ ಕ್ರಿಶ್ಚಿಯನ್‌, ದೇವಾಂಗ ಕ್ರಿಶ್ಚಿಯನ್‌, ಈಡಿಗ ಕ್ರಿಶ್ಚಿಯನ್‌... ಹೀಗೆ ಮತಾಂತರವಾದ ಸಮುದಾಯಗಳನ್ನು ಗುರುತಿಸಲು ಪ್ರತ್ಯೇಕ ಹೆಸರು ಮತ್ತು ಕೋಡ್‌ಗಳನ್ನು ಸಮೀಕ್ಷೆಯ ಕೈಪಿಡಿಯಲ್ಲಿ ನೀಡಲಾಗಿದೆ.

ವಿರೋಧ ಪಕ್ಷ ಬಿಜೆಪಿಯು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಹಿಂದೂ ಧರ್ಮವನ್ನು ಒಡೆಯುವ ಹುನ್ನಾರವಿದು ಎಂದು ಆರೋಪಿಸಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲೂ, ಕೆಲ ಸಚಿವರಿಂದ ಇದಕ್ಕೆ ಆಕ್ಷೇಪ ವ್ಯಕ್ತವಾಗಿದೆ ಎನ್ನಲಾಗಿದೆ. ಹೀಗಾಗಿ ಇದನ್ನು ಕೈಬಿಡಲು ಮುಖ್ಯಮಂತ್ರಿ ಸೂಚಿಸಿದ್ದಾರೆ. ಮುಸ್ಲಿಮರ 100ಕ್ಕೂ ಹೆಚ್ಚು ಜಾತಿಗಳನ್ನು ಈ ಕೈಪಿಡಿಯಲ್ಲಿ ಪಟ್ಟಿ ಮಾಡಲಾಗಿದೆ. ಇದಕ್ಕೂ ಆಕ್ಷೇಪ ವ್ಯಕ್ತವಾಗಿದೆ.

ಒಕ್ಕಲಿಗರು, ಕುರುಬರ ವಾದ

ಒಕ್ಕಲಿಗ ಸಮುದಾಯದ ನಾಯಕರು ಸಭೆ ನಡೆಸಿ, ಜಾತಿಯ ಕಾಲಂನಲ್ಲಿ ಯಾರೂ ಉಪಜಾತಿಯ ಹೆಸರನ್ನು ಬರೆಯಿಸಬಾರದು. ಒಕ್ಕಲಿಗ ಎಂದೇ ಬರೆಯಿಸಿ, ಉಪಜಾತಿಯ ಕಾಲಂನಲ್ಲಿ ಮಾತ್ರವೇ ಉಪಜಾತಿಯ ಹೆಸರನ್ನು ಬರೆಯಿಸಬೇಕು ಎಂದು ತಮ್ಮ ಸಮುದಾಯದ ಜನರಿಗೆ ಸಂದೇಶ ರವಾನಿಸಿದ್ದಾರೆ. ಕುರುಬ ಸಮುದಾಯದ ಸ್ವಾಮೀಜಿ ಮತ್ತು ನಾಯಕರೂ ತಮ್ಮ ಸಮುದಾಯದ ಎಲ್ಲ ಉಪಜಾತಿ ಸಮುದಾಯಗಳಿಗೆ ಇದೇ ರೀತಿಯ ಕರೆ ನೀಡಿದ್ದಾರೆ.

ಈಡಿಗರ ವಾದವೇನು?

ಈಡಿಗ ಸಮುದಾಯದ ನಾಯಕರೂ, ‘ಈಡಿಗರು, ಬಿಲ್ಲವರು, ದೀವರು, ಹಳೆಪೈಕದವರು ಜಾತಿಯ ಕಾಲಂನಲ್ಲಿ ‘ಈಡಿಗ’ ಎಂದೇ ಬರೆಯಿಸಬೇಕು. ದೀವರು ಉಪಜಾತಿಯ ಕಾಲಂನಲ್ಲಿ ಮಾತ್ರ ‘ದೀವರು’ ಎಂದು ಬರೆಯಿಸಬೇಕು’ ಎಂದು ಕರೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.