
ಎಐ ಚಿತ್ರ: ಈಶ್ವರ ಬಡಿಗೇರ
ಕರ್ನಾಟಕದ ಪೊಲೀಸರು ತಮ್ಮ ದಕ್ಷತೆ ಮತ್ತು ವೃತ್ತಿಪರತೆಗೆ ದೇಶದಲ್ಲಿಯೇ ಹೆಸರಾಗಿದ್ದರು. ಕಾನೂನು ಮೀರಿದವರನ್ನು ಅತ್ಯಂತ ಕ್ಷಿಪ್ರವಾಗಿ ಬಂಧಿಸಿ ಕಟಕಟೆಯಲ್ಲಿ ನಿಲ್ಲಿಸುತ್ತಿದ್ದರು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಪೊಲೀಸರೇ ಕಟಕಟೆಯಲ್ಲಿ ನಿಲ್ಲುತ್ತಿದ್ದಾರೆ; ಅತ್ಯಾಚಾರ, ಸುಲಿಗೆ, ದರೋಡೆ, ಬೆದರಿಕೆ ಮುಂತಾದ ಆರೋಪಗಳಿಂದ ಪೊಲೀಸರು ಅಮಾನತುಗೊಳ್ಳುತ್ತಿರುವ ಪ್ರಕರಣಗಳು ವರದಿಯಾಗುತ್ತಲೇ ಇವೆ. ಅನ್ಯಾಯಕ್ಕೆ ಒಳಗಾದವರು ರಕ್ಷಣೆಗಾಗಿ ಪೊಲೀಸರ ಬಳಿಗೆ ಬರುತ್ತಿದ್ದರು. ಅಂಥ ಪೊಲೀಸರೇ ಈಗ ಆರೋಪಿಗಳ ಸ್ಥಾನದಲ್ಲಿ ನಿಲ್ಲುತ್ತಿರುವ ಪ್ರವೃತ್ತಿ ಕಂಡು ಬರುತ್ತಿದೆ
ರಸ್ತೆಯಲ್ಲಿ ಒಂಟಿಯಾಗಿ ಸಾಗುವಾಗ, ಪರಿಚಯಸ್ಥರಿಲ್ಲದ ಊರಿನಲ್ಲಿ ಮಧ್ಯರಾತ್ರಿ ಬಸ್ ಇಳಿದಾಗ, ಚಿನ್ನ ಧರಿಸಿಕೊಂಡು ರಸ್ತೆಯಲ್ಲಿ ನಡೆದು ತೆರಳುವಾಗ, ವ್ಯಾಪಾರಕ್ಕಾಗಿ ಉದ್ಯಮಿಗಳು ಚಿನ್ನವನ್ನು ಕೊಂಡೊಯ್ಯುವಾಗ ಆ ಮಾರ್ಗದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರು ರಕ್ಷಕರಂತೆ ಕಾಣಿಸುತ್ತಿದ್ದರು. ಅವರು ನಮ್ಮ ರಕ್ಷಣೆಗಿದ್ದಾರೆ ಎನ್ನುವ ನಂಬಿಕೆ, ಆತ್ಮವಿಶ್ವಾಸದಿಂದಲೇ ಮಹಿಳೆಯರು ಹಾಗೂ ಮಕ್ಕಳು ಹೆಜ್ಜೆ ಹಾಕುತ್ತಿದ್ದರು. ಆದರೆ, ಇತ್ತೀಚಿನ ಬೆಳವಣಿಗೆಗಳಿಂದ ರಾಜ್ಯದ ಪೊಲೀಸರ ಮೇಲಿದ್ದ ನಂಬಿಕೆ, ವಿಶ್ವಾಸ ನಿಧಾನವಾಗಿ ಮಾಸುತ್ತಿದೆ. ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ ಪೊಲೀಸರ ಕಥೆ.
ಸಾಲು ಸಾಲು ಅಪರಾಧ ಪ್ರಕರಣಗಳಲ್ಲಿ ಪೊಲೀಸರು ಸಿಕ್ಕಿಹಾಕಿಕೊಳ್ಳುತ್ತಿದ್ದಾರೆ. ಆರೋಪಿಗಳನ್ನು ಬಂಧಿಸಬೇಕಾದ ಪೊಲೀಸರೇ ಕಾನೂನು ವಿರೋಧಿ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದು ಅವರ ಮೇಲಿದ್ದ ನಂಬಿಕೆ ಕ್ಷೀಣಿಸುವಂತೆ ಮಾಡಿದೆ. ಕಳ್ಳರ ಸ್ಥಾನದಲ್ಲಿ ಪೊಲೀಸರು ನಿಂತಿದ್ದಾರೆ. ದರೋಡೆ ನಡೆಸಲು ಸಂಚು ರೂಪಿಸಿದ್ದ, ಆರೋಪಿಯ ಕಾರಿನಲ್ಲಿದ್ದ ನಗದು ಕದ್ದ, ಚಿನ್ನಾಭರಣ ವ್ಯಾಪಾರಿಯಿಂದ ಸುಲಿಗೆ ನಡೆಸಿದ, ದೂರು ನೀಡಲು ಬಂದ ಯುವತಿಯನ್ನು ನಂಬಿಸಿ ಅತ್ಯಾಚಾರ ಎಸಗಿದ, ಉದ್ಯಮಿಗಳನ್ನು ಸುಲಿಗೆ ಮಾಡಿದ ಹಾಗೂ ಡ್ರಗ್ಸ್ ಪೆಡ್ಲರ್‌ಗಳ ಜತೆಗೆ ಶಾಮೀಲಾದ ಪ್ರಕರಣಗಳಲ್ಲಿ ಪೊಲೀಸರು ಅಮಾನತುಗೊಂಡಿದ್ದಾರೆ.
ಅಪರಾಧ ಪ್ರಕರಣಗಳನ್ನು ಭೇದಿಸುವುದರಲ್ಲಿ, ಬಂದೋಬಸ್ತ್, ಅನ್ಯಾಯಕ್ಕೆ ಒಳಗಾದ ಮಹಿಳೆಯರು ಹಾಗೂ ಮಕ್ಕಳಿಗೆ ನ್ಯಾಯ ಕೊಡಿಸುವುದರಲ್ಲಿ ರಾಜ್ಯದ ಪೊಲೀಸರು ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದ್ದರು. ಕಾರ್ಯದಕ್ಷತೆ ಹಾಗೂ ವೃತಿಪರತೆಗೆ ರಾಜ್ಯದ ಪೊಲೀಸರು ಹೆಸರಾಗಿದ್ದರು. ಈಗ ಖಾಕಿಗೆ ಕಳಂಕ ಅಂಟಿದೆ. ‘ಕೆಲವರಿಂದಾಗಿ ನಮ್ಮ ಇಲಾಖೆಗಿದ್ದ ಮರ್ಯಾದೆಯೇ ಮಣ್ಣು ಪಾಲಾಗುತ್ತಿದೆ’ ಎಂದು ಸಿಬ್ಬಂದಿ ಅಲವತ್ತುಕೊಳ್ಳುತ್ತಾರೆ.
ಬೆಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯ 11 ವಿಭಾಗಗಳಲ್ಲಿ 11 ತಿಂಗಳಲ್ಲಿ 130 ಪೊಲೀಸರು ದರೋಡೆ, ಸುಲಿಗೆ, ಕರ್ತವ್ಯ ಲೋಪ, ಮಾದಕ ವಸ್ತುಗಳ ಮಾರಾಟಗಾರರ ಜತೆಗೆ ಶಾಮೀಲು, ಕಳ್ಳರಿಗೆ ಸಹಾಯ ಮಾಡಿದ್ದ ಪ್ರಕರಣದಲ್ಲಿ ಅಮಾನತುಗೊಂಡಿದ್ದಾರೆ. ಮೂರು ತಿಂಗಳಲ್ಲಿಯೇ ಐವರು ಇನ್‌ಸ್ಟೆಕ್ಟರ್‌ಗಳು ಸೇರಿದಂತೆ 32 ಮಂದಿಯ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗಿದೆ. ಶಿಸ್ತು ಕ್ರಮಕ್ಕೆ ಒಳಗಾದವರ ಪೈಕಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಹಿರಿಯ ಅಧಿಕಾರಿಗಳವರೆಗೂ ಇದ್ದಾರೆ. ಒಂದೇ ತಿಂಗಳಲ್ಲಿ ಇಬ್ಬರು ಕಾನ್‌ಸ್ಟೆಬಲ್‌ಗಳ ಬಂಧನವಾಗಿದೆ. ದಾವಣಗೆರೆಯಲ್ಲಿ ಇಬ್ಬರು ಪಿಎಸ್‌ಐಗಳ ಸೆರೆಯಾಗಿದೆ.
ಅಮಾನತುಗೊಂಡವರು ಎರಡು ತಿಂಗಳಲ್ಲಿ ಬೇರೊಂದು ಠಾಣೆಯಲ್ಲಿ ಕರ್ತವ್ಯಕ್ಕೆ ಮರಳುತ್ತಿದ್ದಾರೆ. ಕೃತ್ಯ ಮುಂದುವರಿಸುತ್ತಿದ್ದಾರೆ.
ಇಲಾಖೆಗೆ ನೇಮಕವಾದ ಬಳಿಕ ಕೆಲವು ತಿಂಗಳು ಕಠಿಣ ತರಬೇತಿಗೆ ಪೊಲೀಸರು ಒಡ್ಡಿಕೊಳ್ಳುತ್ತಾರೆ. ತರಬೇತಿ ಅವಧಿಯಲ್ಲಿ ದೈಹಿಕ ಕಸರತ್ತಿಗಷ್ಟೇ ಹೆಚ್ಚಿನ ಪ್ರಾಶಸ್ತ್ಯ ಕೊಡಲಾಗುತ್ತಿದೆ. ಕೆಲಸದ ವೇಳೆ ನಡವಳಿಕೆ ಹೇಗಿರಬೇಕು ಎಂಬುದನ್ನು ಕಲಿಸುತ್ತಿಲ್ಲ.
ಆಯಕಟ್ಟಿನ ಸ್ಥಳ, ಚಿನ್ನಾಭರಣ ಮಾರಾಟ ಅಂಗಡಿಗಳಿರುವ ವ್ಯಾಪ್ತಿ, ರಿಯಲ್ ಎಸ್ಟೇಟ್ ವ್ಯವಹಾರ ಹೆಚ್ಚಿರುವ, ಬಾರ್ ಅಂಡ್ ರೆಸ್ಟೊರೆಂಟ್‌ಗಳು ಅಧಿಕ ಸಂಖ್ಯೆಯಲ್ಲಿರುವ ವ್ಯಾಪ್ತಿಯ ಠಾಣೆಗಳಿಗೆ ವರ್ಗಾವಣೆ ಆಗುವುದಕ್ಕೆ ಬೇಡಿಕೆಯಿದೆ. ಪೈಪೋಟಿಯೇ ನಡೆಯುತ್ತಿದೆ. ಇಂತಹ ಠಾಣೆಗಳಿಗೆ ವರ್ಗವಾಗಲು ಸಚಿವರು, ಶಾಸಕರು, ಹಿರಿಯ ಅಧಿಕಾರಿಗಳಿಗೆ ಹಣ ನೀಡಬೇಕು. ಹೂಡಿಕೆ ಮಾಡಿ ವರ್ಗಾವಣೆಯಾದ ಅಧಿಕಾರಿ ‘ಅಕ್ರಮ’ ವ್ಯವಹಾರಕ್ಕೆ ಇಳಿಯುತ್ತಿದ್ದಾರೆ ಎಂದೂ ಅವರು ತಿಳಿಸುತ್ತಾರೆ.
‘ಬೆಂಗಳೂರು ಸಮೀಪವೇ ಎಸಿಪಿ ಹುದ್ದೆ ಖಾಲಿಯಿತ್ತು. ಅಲ್ಲಿಗೆ ವರ್ಗಾವಣೆ ಮಾಡಿಸಿಕೊಡುವಂತೆ ಶಾಸಕರೊಬ್ಬರ ಬಳಿ ಮನವಿ ಮಾಡಿದ್ದೆ. ಅವರು ₹75 ಲಕ್ಷ ಕೇಳಿದ್ದರು. ನನ್ನ ಬಳಿ ಅಷ್ಟು ಹಣವಿಲ್ಲ. ‘ನಾನ್ ಎಕ್ಸಿಕ್ಯೂಟಿವ್’ ಹುದ್ದೆಯಲ್ಲೇ ಇರುತ್ತೇನೆ ಎಂಬುದಾಗಿ ಹೇಳಿದ್ದೆ’ ಎಂದು ಹೆಸರು ಬಹಿರಂಗಪಡಿಸದ ಅಧಿಕಾರಿಯೊಬ್ಬರು ಹೇಳಿದರು.
ಅಪರಾಧ ಕೃತ್ಯಗಳಲ್ಲಿ ಪೊಲೀಸರು ಭಾಗಿಯಾದರೆ ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಎಫ್‌ಐಆರ್ ಆದ ತಕ್ಷಣವೇ ಸೇವೆಯಿಂದ ವಜಾ ಮಾಡುತ್ತಿದ್ದೇವೆ. ಇಬ್ಬರನ್ನು ಈಗಾಗಲೇ ವಜಾ ಮಾಡಿದ್ದೇವೆಜಿ.ಪರಮೇಶ್ವರ, ಗೃಹ ಸಚಿವ
ಕಾರು ಹತ್ತಿಸಲು ಯತ್ನಿಸಿದ್ದ ಡಿವೈಎಸ್‌ಪಿ
ಬಿಟ್‌ಕಾಯಿನ್ ಹಗರಣದಲ್ಲಿ ಆಂತರಿಕ ಭದ್ರತಾ ವಿಭಾಗದ ಡಿವೈಎಸ್‌ಪಿಯಾಗಿದ್ದ ಶ್ರೀಧರ್ ಅವರನ್ನು ಬಂಧಿಸಲು 2024ರ ಫೆಬ್ರುವರಿ ಎಸ್‌ಐಟಿಯ ಇಬ್ಬರು ಅಧಿಕಾರಿಗಳು ತೆರಳಿದ್ದರು. ಆಗ ಸೆಂಟ್ರಲ್ ಕಾಲೇಜು ಬಳಿಯ ಮೆಟ್ರೊ ನಿಲ್ದಾಣದ ಸಮೀಪ ವಕೀಲರ ಜೊತೆಗೆ ಕಾರಿನಲ್ಲಿದ್ದ ಶ್ರೀಧರ್ ಅವರು ತನಿಖಾಧಿಕಾರಿಗಳನ್ನು ಕಂಡು ಪರಾರಿಯಾಗಲು ಮುಂದಾಗಿದ್ದರು. ತನಿಖಾಧಿಕಾರಿಗಳು ಅವರನ್ನು ಬೆನ್ನಟ್ಟಿದರು. ಕಾಫಿ ಬೋರ್ಡ್ ಸಿಗ್ನಲ್ ಬಳಿ, ಎಸ್‌ಐಟಿ ಅಧಿಕಾರಿಗಳ ಮೇಲೆ ಕಾರು ಹತ್ತಿಸಲು ಯತ್ನಿಸಿ ಪರಾರಿ ಆಗಿದ್ದರು.
ಬೆಂಗಳೂರಿನಲ್ಲಿ ಎಟಿಎಂ ಕೇಂದ್ರಕ್ಕೆ ಹಣ ತುಂಬಿಸಲು ತೆರಳುತ್ತಿದ್ದ ಸಿಎಂಎಸ್ ಏಜೆನ್ಸಿ ವಾಹನವನ್ನು ಅಡ್ಡಗಟ್ಟಿ ₹7.11 ಕೋಟಿ ದರೋಡೆ ಮಾಡಿದ್ದ ಪ್ರಕರಣದ ಸಂಚುಕೋರ ಗೋವಿಂದಪುರ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ಅಣ್ಣಪ್ಪ ನಾಯ್ಕ ಎಂಬುದು ತನಿಖೆಯಿಂದ ಬಯಲಾಗಿತ್ತು. ಬಳಿಕ ಅವರನ್ನು ಬಂಧಿಸಲಾಗಿದೆ.
ಕುಖ್ಯಾತ ಕಳ್ಳ ಬಾಂಬೆ ಸಲೀಂಗೆ ತನ್ನ ಮನೆಯಲ್ಲಿ ಆಶ್ರಯ ನೀಡಿದ್ದ ಗೋವಿಂದಪುರ ಠಾಣೆ ಕಾನ್‌ಸ್ಟೆಬಲ್ ಸೋನಾರ ಅವರನ್ನು ಅಮಾನತು ಮಾಡಲಾಗಿತ್ತು.
ಅಮಾನತು, ಬಂಧನಕ್ಕೆ ಒಳಗಾದವರು
ಡ್ರಗ್ಸ್ ಪೆಡ್ಲರ್‌ಗಳ ಜತೆಗೆ ಶಾಮೀಲು: ಚಾಮರಾಜಪೇಟೆ ಠಾಣೆಯ ಇನ್‌ಸ್ಪೆಕ್ಟರ್ ಟಿ.ಮಂಜಣ್ಣ, ಹೆಡ್‌ಕಾನ್‌ಸ್ಟೆಬಲ್‌ಗಳಾದ ರಮೇಶ್, ಶಿವರಾಜ್, ಕಾನ್‌ಸ್ಟೆಬಲ್‌ಗಳಾದ ಮಧುಸೂದನ್, ಪ್ರಸನ್ನ, ಶಂಕರ್ ಬೆಳಗಲಿ, ಆನಂದ್, ಜೆ.ಜೆ.ನಗರ ಠಾಣೆಯ ಎಎಸ್‌ಐ ಕುಮಾರ್, ಹೆಡ್‌ಕಾನ್‌ಸ್ಟೆಬಲ್ ಆನಂದ್, ಸಿಬ್ಬಂದಿ ಬಸವನಗೌಡ ಅಮಾನತು
ಆಭರಣ ಮಾರಾಟಗಾರರಿಂದ ಲಂಚ: ಹಲಸೂರು ಗೇಟ್ ಠಾಣೆಯ ಇನ್‌ಸ್ಪೆಕ್ಟರ್ ಹನುಮಂತ ಭಜಂತ್ರಿ, ಎಎಸ್‌ಐ ಹಾಗೂ ಕಾನ್‌ಸ್ಟೆಬಲ್ ವಿರುದ್ಧ ಶಿಸ್ತು ಕ್ರಮ
ಅತ್ಯಾಚಾರ, ಲೈಂಗಿಕ ದೌರ್ಜನ್ಯ: ದೇವರಜೀವನಹಳ್ಳಿ (ಡಿಜೆ ಹಳ್ಳಿ) ಠಾಣೆಯ ಇನ್‌ಸ್ಪೆಕ್ಟರ್ ಸುನಿಲ್, ಎಎಸ್‌ಐ ಪ್ರಕಾಶ್ ವಿರುದ್ಧ ಎಫ್‌ಐಆರ್
ಕಳ್ಳತನ ಪ್ರಕರಣದಲ್ಲಿ ಠಾಣೆಗೆ ಮಹಿಳೆ ಕರೆದೊಯ್ದು ಹಲ್ಲೆ: ವರ್ತೂರು ಠಾಣೆಯ ಅಪರಾಧ ವಿಭಾಗದ ಸಂಜಯ್ ರಾಥೋಡ್, ಸಂತೋಷ್ ಕುದ್ರಿ, ಅರ್ಚನಾ ವಿರುದ್ಧ ಕ್ರಮ
ಅಂಗವಿಕಲ ವ್ಯಕ್ತಿಯಿಂದ ಸುಲಿಗೆ: ಇಂದಿರಾನಗರ ಠಾಣೆಯ ಹೆಡ್‌ಕಾನ್‌ಸ್ಟೆಬಲ್ ಶರಣ ಬಸಪ್ಪ ಪೂಜಾರಿ, ಕಾನ್‌ಸ್ಟೆಬಲ್ ಪರಮೇಶ್ವರ ನಾಯಕ್ ಅಮಾನತು
ಕರ್ತವ್ಯ ಲೋಪ: ಕೋರಮಂಗಲ ಠಾಣೆಯ ಇನ್‌ಸ್ಪೆಕ್ಟರ್ ಲೂಯಿರಾಮ ರೆಡ್ಡಿ ಅಮಾನತು
ಆರೋಪಿಯ ಕಾರಿನಲ್ಲಿದ್ದ ₹11 ಲಕ್ಷ ಹಣ ಕಳ್ಳತನ: ಸೈಬರ್ ಅಪರಾಧ ಠಾಣೆ ಹೆಡ್ ಕಾನ್‌ಸ್ಟೆಬಲ್ ಜಬೀವುಲ್ಲಾ ವಿರುದ್ಧ ಕ್ರಮ
ಬಿಟ್ ಕಾಯಿನ್ ಪ್ರಕರಣ (2024): ಇನ್‌ಸ್ಪೆಕ್ಟರ್‌ಗಳಾದ ಲಕ್ಷ್ಮೀಕಾಂತಯ್ಯ, ಚಂದ್ರಾಧರ್, ಡಿವೈಎಸ್‌ಪಿ ಶ್ರೀಧರ್ ಕೆ.ಪೂಜಾರ್, ಆಡುಗೋಡಿ
ಟೆಕ್ನಿಕಲ್ ಸಪೋರ್ಟ್ ಸೆಂಟರ್‌ನ ಇನ್‌ಸ್ಪೆಕ್ಟರ್ ಡಿ.ಎಂ.ಪ್ರಶಾಂತ್ ಬಾಬು ಬಂಧನ
ನಟಿ ರನ್ಯಾ ರಾವ್ ಪ್ರಕರಣ: ಶಿಷ್ಟಾಚಾರ ಉಲ್ಲಂಘನೆಯ ವಿಚಾರದಲ್ಲಿ ಹಿರಿಯ ಐಪಿಎಸ್ ಅಧಿಕಾರಿ, ಮಲತಂದೆ ಕೆ.ರಾಮಚಂದ್ರ ರಾವ್ ಅವರ ಹೆಸರು ಕೇಳಿಬಂದಿತ್ತು. ರಾಮಚಂದ್ರರಾವ್ ಅವರನ್ನು ಸರ್ಕಾರ ಕಡ್ಡಾಯ ರಜೆಯ ಮೇಲೆ ಕಳುಹಿಸಿತ್ತು
ದಾವಣಗೆರೆಯಲ್ಲಿ ಆಭರಣ ತಯಾರಕರೊಬ್ಬರಿಂದ ₹7.5 ಲಕ್ಷ ಮೌಲ್ಯದ ಚಿನ್ನಾಭರಣ ದರೋಡೆ: ಪ್ರೊಬೆಷನರಿ ಪಿಎಸ್‌ಐ ಮಾಳಪ್ಪ ಚಿಪ್ಪಲಕಟ್ಟಿ ವಜಾ; ಮತ್ತೊಬ್ಬ ಪಿಎಸ್‌ಐ ಪ್ರವೀಣ್‌ಕುಮಾರ್ ಅಮಾನತು
ಚಾಮರಾಜನಗರ: ಲಾಡ್ಜ್‌ವೊಂದರಲ್ಲಿ ಕೇರಳದ ವ್ಯಕ್ತಿಯನ್ನು ಬೆದರಿಸಿ ಹಣ ಸುಲಿಗೆ (ಜುಲೈ 29) ಮಾಡಿದ ಆರೋಪ; ಚಾಮರಾಜನಗರ ಠಾಣೆಯ ಪಿಎಸ್‌ಐ ಅಯ್ಯನಗೌಡ, ಹೆಡ್‌ಕಾನ್‌ಸ್ಟೆಬಲ್ ಬಸವಣ್ಣ, ಕಾನ್‌ಸ್ಟೆಬಲ್‌ಗಳಾದ ಮಹೇಶ್ ಹಾಗೂ ಯೋಗೇಶ್ ಅಮಾನತು, ಪ್ರಕರಣ ದಾಖಲು
ಚಿಕ್ಕಬಳ್ಳಾಪುರ: ಕಪ್ಪು ಹಣ ವರ್ಗಾವಣೆ ಜಾಲದಿಂದ ವಶಕ್ಕೆ ಪಡೆದ ಹಣ ದುರ್ಬಳಕೆ (2023ರ ಆಗಸ್ಟ್) ಆರೋಪ; ಬಾಗೇಪಲ್ಲಿ ಪೊಲೀಸ್ ಠಾಣೆಯ ಪಿಎಸ್‌ಐ ರವಿಕುಮಾರ್, ಕಾನ್‌ಸ್ಟೆಬಲ್‌ಗಳಾದ ನರಸಿಂಹಮೂರ್ತಿ, ಅಶೋಕ್ ಅಮಾನತು
ಯಾದಗಿರಿ: ಹಲ್ಲೆ, ಜೀವ ಬೆದರಿಕೆ ಪ್ರಕರಣದ ಆರೋಪಿಗಳನ್ನು ಬಂಧಿಸಲು ದೂರುದಾರರಿಂದ ಹಣ ಪಡೆದ ಆರೋಪ; ಗುರುಮಠಕಲ್ ಠಾಣೆಯ ಎಎಸ್‌ಐ ಗೋಪಾಲರೆಡ್ಡಿ ಹಾಗೂ ಹೆಡ್‌ಕಾನ್‌ಸ್ಟೆಬಲ್ ವಿಶ್ವನಾಥರೆಡ್ಡಿ ಅಮಾನತು, ಜೀವ ಬೆದರಿಕೆ ಹಾಕಿ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದ ಆರೋಪದಡಿ ಗುರುಮಠಕಲ್ ಠಾಣೆಯ ಕಾನ್‌ಸ್ಟೆಬಲ್ ರಮೇಶ ಮಲ್ಲಪ್ಪ ಸೇರಿ ಇಬ್ಬರ ವಿರುದ್ಧ ಪ್ರಕರಣ ದಾಖಲು
ಮೈಸೂರು: ಸುಳ್ಳು ಪ್ರಕರಣ ದಾಖಲಿಸಿ ಹಣ ವಸೂಲಿಗೆ ಯತ್ನಿಸಿದ ಪ್ರಕರಣದಲ್ಲಿ (2021ರ ಡಿಸೆಂಬರ್) ನಜರ್‌ಬಾದ್ ಠಾಣೆಯ ಎಎಸ್‌ಐ ಗೋವಿಂದನಾಯಕ ಹಾಗೂ ಹೆಡ್‌ಕಾನ್‌ಸ್ಟೆಬಲ್ ಚೆನ್ನಬಸಪ್ಪ ಅವರನ್ನು ಅಮಾನತು ಮಾಡಲಾಗಿತ್ತು
ಕೋಲಾರ: ಆಂಧ್ರ ಪ್ರದೇಶದಲ್ಲಿ ಟಿಡಿಪಿ ಶಾಸಕರೊಬ್ಬರ ಬೆಂಬಲಿಗನ ಕೊಲೆ ಯತ್ನ ಪ್ರಕರಣದಲ್ಲಿ (2024ರ ಆಗಸ್ಟ್) ಸಂಚು ರೂಪಿಸಿದ ಆರೋಪದ ಮೇಲೆ ಚಿತ್ತೂರು ಜಿಲ್ಲೆಯ ಪೊಲೀಸರಿಂದ ಬಂಧಿತರಾಗಿದ್ದ ಕೋಲಾರ ಗ್ರಾಮಾಂತರ ಠಾಣೆಯ ಕಾನ್‌ಸ್ಟೆಬಲ್ ವಿನಾಯಕ ಅಮಾನತು; ಇದೇ ಪ್ರಕರಣದಲ್ಲಿ ವಿನಾಯಕ್ ಅವರಿಗೆ ನೆರವಾಗಿದ್ದಾರೆ ಎಂದು ಎಸ್‌ಪಿ ಕಚೇರಿಯಲ್ಲಿರುವ ಸಿಡಿಆರ್ ತೆಗೆಯುವ ಪೊಲೀಸ್ ಕಾನ್‌ಸ್ಟೆಬಲ್ ನಾಗರಾಜ್ ಕೂಡ ಅಮಾನತು
ಪಾನಮತ್ತರಾಗಿ ಬಾರ್ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದ್ದ (2023ರ ನವೆಂಬರ್) ಕೋಲಾರ ಗ್ರಾಮಾಂತರ ಠಾಣೆಯ ಎಎಸ್‍ಐ ಕೆ.ಸಿ.ನಾರಾಯಣಸ್ವಾಮಿ ಅಮಾನತು
ಬಳ್ಳಾರಿ: ಕೌಟುಂಬಿಕ ಸಮಸ್ಯೆ ಹೇಳಿಕೊಂಡು ಬಂದ ಮಹಿಳೆಯೊಬ್ಬರನ್ನು ಲೈಂಗಿಕವಾಗಿ ಬಳಸಿಕೊಂಡ ಆರೋಪದ ಮೇಲೆ 2024ರ ಡಿಸೆಂಬರ್‌ನಲ್ಲಿ ಬಳ್ಳಾರಿಯ ಕೌಲ್ ಬಜಾರ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಸೈಯದ್ ಇಮ್ರಾನ್ ಮತ್ತು ಆತನ ಅಕ್ಕನ ಮಗನಾದ, ಬಳ್ಳಾರಿ ಸಂಚಾರ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಆಜಾದ್ ವಿರುದ್ಧ ಬಳ್ಳಾರಿಯ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲು; ಇಬ್ಬರ ಬಂಧನ, ಅಮಾನತು
ದರೋಡೆ: ಬಳ್ಳಾರಿಯಲ್ಲಿ 2024ರ ಸೆಪ್ಟೆಂಬರ್ 12ರಂದು ನಡೆದಿದ್ದ ₹38.89 ಲಕ್ಷ ಹಣ, ಆಭರಣ ದರೋಡೆ ಪ್ರಕರಣದಲ್ಲಿ ಬ್ರೂಸ್‌ಪೇಟೆ ಹೆಡ್‌ಕಾನ್‌ಸ್ಟೆಬಲ್ ಮಹಬೂಬ್, ಗೃಹರಕ್ಷಕ ದಳದ ಮಾಜಿ ಸಿಬ್ಬಂದಿ ಆರೀಫ್ ಸೇರಿ 7 ಆರೋಪಿಗಳ ಬಂಧನ; ಮಹಬೂಬ್ ಅಮಾನತು, ಇಲಾಖಾ ತನಿಖೆ
ಬೆಳಗಾವಿ: ಸವದತ್ತಿ ತಾಲ್ಲೂಕಿನ ರಾಮಾಪುರ ಸೈಟ್ ಬಡಾವಣೆಯಲ್ಲಿ ಅ.13ರಂದು ನಿಪ್ಪಾಣಿ ಶಹರ ಠಾಣೆಯ ಕಾನ್‌ಸ್ಟೆಬಲ್ ಸಂತೋಷ ಕಾಂಬಳೆಯಿಂದ ಆತನ ವಿಚ್ಛೇದಿತ ಪತ್ನಿಯ ಬರ್ಬರ ಕೊಲೆ; ಸಂತೋಷ ಸೇವೆಯಿಂದ ಅಮಾನತು
ಮಹಿಳೆಗೆ ಅಶ್ಲೀಲ ಕರೆ: ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಠಾಣೆಗೆ 2025ರ ಆ.25ರಂದು ದೂರು ನೀಡಲು ಬಂದ ಮಹಿಳೆಯ ಮೊಬೈಲ್‌ಗೆ ಪದೇ ಪದೇ ಕರೆ ಮಾಡಿ ಅಶ್ಲೀಲವಾಗಿ ಮಾತನಾಡಿದ ಆರೋಪದ ಮೇಲೆ ಠಾಣೆಯ ಕಾನ್‌ಸ್ಟೆಬಲ್ ಶಾಂತಪ್ಪ ಅಮಾನತು; ಬಂಧನ
ಮನೆಯೊಂದಕ್ಕೆ (2025ರ ಡಿ.3) ಅಕ್ರಮವಾಗಿ ಪ್ರವೇಶಿಸಿ, ಗಲಾಟೆ ಮಾಡಿ ಹಲ್ಲೆ ನಡೆಸಿದ ಆರೋಪದ ಮೇಲೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಠಾಣೆಯ ಹೆಡ್ ಕಾನ್‌ಸ್ಟೆಬಲ್ ರಾಜು ನಾಯ್ಕ ಅಮಾನತು; ಆರೋಪಿಯ ಬಂಧನ
‘ನಾನು ಯಾರಿಂದಲೂ ಲಂಚ ಪಡೆದಿಲ್ಲ. ಹಣ ಪಡೆದು ಯಾವುದೇ ಪೊಲೀಸರಿಗೆ ಪೋಸ್ಟಿಂಗ್ ಮಾಡಿಲ್ಲ’ ಎಂದು ಜಿ. ಪರಮೇಶ್ವರ ಹೇಳಿದರು.
‘ವರ್ಗಾವಣೆಗೆ ಲಂಚ ಪಡೆದಿರುವುದನ್ನು ಸಾಬೀತುಪಡಿಸಿದರೆ ಒಂದು ಕ್ಷಣವೂ ಸಚಿವ ಸ್ಥಾನದಲ್ಲಿ ಇರುವುದಿಲ್ಲ. ವರ್ಗಾವಣೆ ದಂಧೆಯಲ್ಲಿ ತೊಡಗುವ ಏಜೆಂಟ್‍ಗಳ ವಿರುದ್ಧವೂ ಕ್ರಮ ಜರುಗಿಸುತ್ತೇವೆ’ ಎಂದು ಹೇಳಿದರು.
‘ಪೊಲೀಸ್ ಸಿಬ್ಬಂದಿ ಭ್ರಷ್ಟಾಚಾರ, ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವುದು ಕಂಡುಬಂದರೆ ಅಮಾನತು ಅಥವಾ ಸೇವೆಯಿಂದ ವಜಾ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ನಡೆದ ₹7.11 ಕೋಟಿ ದರೋಡೆ ಪ್ರಕರಣದಲ್ಲಿ ಭಾಗಿಯಾಗಿರುವ ಪೊಲೀಸ್ ಕಾನ್‍ಸ್ಟೆಬಲ್‍ನನ್ನು ಸೇವೆಯಿಂದ ವಜಾಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ’ ಎಂದರು.
ಅಪರಾಧ ಕೃತ್ಯಗಳಲ್ಲಿ ಪೊಲೀಸರು ಭಾಗಿಯಾದರೆ ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಎಫ್‌ಐಆರ್ ಆದ ತಕ್ಷಣವೇ ಸೇವೆಯಿಂದ ವಜಾ ಮಾಡುತ್ತಿದ್ದೇವೆ. ಇಬ್ಬರನ್ನು ಈಗಾಗಲೇ ವಜಾ ಮಾಡಿದ್ದೇವೆ–ಜಿ.ಪರಮೇಶ್ವರ, ಗೃಹ ಸಚಿವ
ಜಿ.ಪರಮೇಶ್ವರ
ಅಪರಾಧ ಕೃತ್ಯಗಳಲ್ಲಿ ಕೆಲವು ಪೊಲೀಸರ ಹೆಸರು ತಳಕು ಹಾಕಿಕೊಂಡಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ಹೆಚ್ಚಾದ ಬೆನ್ನಲ್ಲೇ ರಾಜ್ಯ ಪೊಲೀಸ್ ನಿರ್ದೇಶಕ ಡಾ.ಎಂ.ಎ.ಸಲೀಂ ಅವರು ಎಲ್ಲ ಘಟಕದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಶುಕ್ರವಾರ ಪತ್ರ ಬರೆದು ಸೂಚನೆ ನೀಡಿದ್ದಾರೆ.
‘ಇಂತಹ ಪ್ರವೃತ್ತಿಗಳು ಪೊಲೀಸ್ ಇಲಾಖೆಯ ಮೇಲಿನ ವಿಶ್ವಾಸಾರ್ಹತೆಗೆ ಧಕ್ಕೆ ತರುತ್ತವೆ. ಇಲಾಖೆಯನ್ನು ಅಪಕೀರ್ತಿಗೆ ಗುರಿ ಮಾಡುತ್ತವೆ. ಈ ರೀತಿಯ ಕೃತ್ಯಗಳು ಸಾರ್ವಜನಿಕರಿಗೆ ಪೊಲೀಸರ ಮೇಲಿನ ನಂಬಿಕೆ ಕುಂದಿಸುತ್ತದೆ. ಕಾನೂನು ಜಾರಿಯ ಸಂಪೂರ್ಣ ವ್ಯವಸ್ಥೆಯ ಮೂಲ ಸಿದ್ಧಾಂತವನ್ನೇ ಸಂಶಯದಿಂದ ನೋಡುವ ಸನ್ನಿವೇಶ ಸೃಷ್ಟಿ ಆಗುತ್ತದೆ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
‘ಅಪರಾಧ ಕೃತ್ಯಗಳಲ್ಲಿ ತೊಡಗಿಕೊಳ್ಳುವ ಪೊಲೀಸ್ ಇಲಾಖೆಯ ಪ್ರತಿಯೊಬ್ಬ ಅಧಿಕಾರಿ, ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು’ ಎಂದೂ ಎಚ್ಚರಿಸಿದ್ದಾರೆ.
‘ಸಿಬ್ಬಂದಿಯ ಪೂರ್ವಾಪರವನ್ನು ಪರಿಶೀಲನೆ ನಡೆಸಬೇಕು. ಮೌಲ್ಯಮಾಪನ ಮಾಡಬೇಕು. ಜತೆಗೆ, ತರಬೇತಿಯನ್ನೂ ನೀಡಬೇಕು’ ಎಂದು ಘಟಕಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.