ADVERTISEMENT

ಆಳ–ಅಗಲ| ಸಕ್ಕರೆ ಕಾರ್ಖಾನೆಗೆ ರಾಜಕೀಯ ನಂಟು

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2025, 0:49 IST
Last Updated 7 ನವೆಂಬರ್ 2025, 0:49 IST
<div class="paragraphs"><p>ಸಕ್ಕರೆ ಕಾರ್ಖಾನೆ</p></div>

ಸಕ್ಕರೆ ಕಾರ್ಖಾನೆ

   

ರಾಜ್ಯದಲ್ಲಿ 81 ಸಕ್ಕರೆ ಕಾರ್ಖಾನೆಗಳಿದ್ದು, ಈ ಪೈಕಿ ಬೆಳಗಾವಿ, ವಿಜಯಪುರ ಮತ್ತು ಕಲಬುರಗಿ ಜಿಲ್ಲೆಯಲ್ಲಿಯೇ 53 ಇವೆ. ಹಲವು ಕಾರ್ಖಾನೆಗಳು ಸಚಿವರು, ಶಾಸಕರು, ರಾಜಕಾರಣಿಗಳು ಹಾಗೂ ಅವರ ಸಂಬಂಧಿಕರ ನೇರ ಮಾಲೀಕತ್ವದಲ್ಲಿವೆ. ಸಹಕಾರಿ ವ್ಯವಸ್ಥೆಯಡಿ ಹಲವು ಕಾರ್ಯನಿರ್ವಹಿಸುತ್ತಿದ್ದು, ಪರೋಕ್ಷವಾಗಿ ಪ್ರಭಾವಿ ರಾಜಕಾರಣಿಗಳ ಹಿಡಿತದಲ್ಲಿವೆ. ನಷ್ಟದ ಸುಳಿಗೆ ಸಿಲುಕಿರುವ ಕೆಲವು ಸಹಕಾರಿ ಕಾರ್ಖಾನೆಗಳನ್ನು ರಾಜಕಾರಣಿಗಳೇ ಗುತ್ತಿಗೆಗೆ ಪಡೆದು ನಿರ್ವಹಿಸುತ್ತಿದ್ದಾರೆ. ಉದ್ಯಮಿಗಳೇ ನೇರವಾಗಿ ನಡೆಸುತ್ತಿರುವ ಕಾರ್ಖಾನೆಗಳ ಸಂಖ್ಯೆ ಕೆಲವೇ ಕೆಲವು. ರಾಜ್ಯದ ಪ್ರಮುಖ ಮೂರು ಪಕ್ಷಗಳ (ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌) ಮುಖಂಡರೂ ಸಕ್ಕರೆ ಕಾರ್ಖಾನೆಗಳನ್ನು ಹೊಂದಿದ್ದಾರೆ.

ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್‌ ಕಬ್ಬಿಗೆ ಕೇಂದ್ರ ಸರ್ಕಾರ ನಿಗದಿ ಪಡಿಸಿದಷ್ಟು ಎಫ್‌ಆರ್‌ಪಿ (₹3,550) ನೀಡಬೇಕು ಎಂದು ಆಗ್ರಹಿಸಿ ರಾಜ್ಯದ ಕಬ್ಬು ಬೆಳೆಗಾರರು ಪ್ರತಿಭಟನೆ ತೀವ್ರಗೊಳಿಸಿರುವುದರ ನಡುವೆಯೇ ರಾಜ್ಯದಲ್ಲಿರುವ ಕಾರ್ಖಾನೆಗಳ ಮಾಲೀಕತ್ವದ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

ADVERTISEMENT

ರಾಜ್ಯದಲ್ಲಿ 81 ಸಕ್ಕರೆ ಕಾರ್ಖಾನೆಗಳಿದ್ದು, ಈ ಪೈಕಿ ಬೆಳಗಾವಿ, ವಿಜಯಪುರ ಮತ್ತು ಕಲಬುರಗಿ ಜಿಲ್ಲೆಯಲ್ಲಿಯೇ 53 ಇವೆ. ಹಲವು ಕಾರ್ಖಾನೆಗಳು ಸಚಿವರು, ಶಾಸಕರು, ರಾಜಕಾರಣಿಗಳು ಹಾಗೂ ಅವರ ಸಂಬಂಧಿಕರ ನೇರ ಮಾಲೀಕತ್ವದಲ್ಲಿವೆ. ಸಹಕಾರಿ ವ್ಯವಸ್ಥೆಯಡಿ ಹಲವು ಕಾರ್ಯನಿರ್ವಹಿಸುತ್ತಿದ್ದು, ಪರೋಕ್ಷವಾಗಿ ಪ್ರಭಾವಿ ರಾಜಕಾರಣಿಗಳ ಹಿಡಿತದಲ್ಲಿವೆ. ನಷ್ಟದ ಸುಳಿಗೆ ಸಿಲುಕಿರುವ ಕೆಲವು ಸಹಕಾರಿ ಕಾರ್ಖಾನೆಗಳನ್ನು ರಾಜಕಾರಣಿಗಳೇ ಗುತ್ತಿಗೆಗೆ ಪಡೆದು ನಿರ್ವಹಿಸುತ್ತಿದ್ದಾರೆ. ಉದ್ಯಮಿಗಳೇ ನೇರವಾಗಿ ನಡೆಸುತ್ತಿರುವ ಕಾರ್ಖಾನೆಗಳ ಸಂಖ್ಯೆ ಕೆಲವೇ ಕೆಲವು. ರಾಜ್ಯದ ಪ್ರಮುಖ ಮೂರು ಪಕ್ಷಗಳ (ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌) ಮುಖಂಡರೂ ಸಕ್ಕರೆ ಕಾರ್ಖಾನೆಗಳನ್ನು ಹೊಂದಿದ್ದಾರೆ.

‘ಸಚಿವರು, ಶಾಸಕರು, ರಾಜಕಾರಣಿಗಳ ಹಿಡಿತದಲ್ಲಿ ಕಾರ್ಖಾನೆಗಳು ಇರುವುದರಿಂದ ದರ ನಿಗದಿ ವಿಚಾರದಲ್ಲಿ ಸರ್ಕಾರದ ಮೇಲೆ ಅವರು ಪ್ರಭಾವ ಬೀರುತ್ತಿದ್ದಾರೆ. ಸರ್ಕಾರ ಕೂಡ ಅವರಿಗೆ ಬೇಕಾದಂತೆ ನಡೆದುಕೊಳ್ಳುತ್ತಿದೆ. ಹೀಗಾಗಿಯೇ ಕಾರ್ಖಾನೆಗಳು ನಿಯಮಗಳನ್ನು ಉಲ್ಲಂಘನೆ ಮಾಡಿ, ರೈತರನ್ನು ಶೋಷಣೆ ಮಾಡುತ್ತಾ, ಹೆಚ್ಚು ಲಾಭ ಮಾಡುತ್ತಿವೆ’ ಎನ್ನುವುದು ಕಬ್ಬು ಬೆಳೆಗಾರರ ಆರೋಪ.

ರಾಜ್ಯದಲ್ಲಿ ರಾಜಕಾರಣಿಗಳು ಮತ್ತು ಅವರ ಸಂಬಂಧಿಕರ ನಂಟಿರುವ ಕಾರ್ಖಾನೆಗಳ ವಿವರ ಇಲ್ಲಿದೆ

ಬೆಳಗಾವಿ

* ಚಿಕ್ಕೋಡಿಯ ಚಿದಾನಂದ ಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಕೋರೆ ಅವರು ಮುಂದುವರಿದಿದ್ದಾರೆ. ಇವರು ಬಿಜೆಪಿ ಮುಖಂಡ ಪ್ರಭಾಕರ ಕೋರೆ ಅವರ ಸಹೋದರ ಸಂಬಂಧಿ

* ಬೆಳಗಾವಿ ತಾಲ್ಲೂಕಿನ ಹುದಲಿ ಗ್ರಾಮದ ಬೆಳಗಾಂ ಶುಗರ್ಸ್‌, ಮೂಡಲಗಿ ತಾಲ್ಲೂಕು ಹುಣಶ್ಯಾಳದ ಸತೀಶ್ ಶುಗರ್ಸ್‌ ಕಾರ್ಖಾನೆಗಳು ಸಚಿವ ಸತೀಶ ಜಾರಕಿಹೊಳಿ ಅವರ ಒಡೆತನದಲ್ಲಿವೆ

* ಗೋಕಾಕ ನಗರ ಬಳಿಯ ಗೋಕಾಕ್‌ ಸಕ್ಕರೆ ಮೊದಲು ಸಹಕಾರ ಸಕ್ಕರೆ ಕಾರ್ಖಾನೆ ಆಗಿತ್ತು. ಶಾಸಕ ರಮೇಶ ಜಾರಕಿಹೊಳಿ ಇದರ ನಿಯಂತ್ರಣ ಹೊಂದಿದ್ದರು. ಇದನ್ನು ಕೂಡ ಉದ್ಯಮಿಗಳಿಗೆ ಗುತ್ತಿಗೆಗೆ ನೀಡಲಾಗಿದೆ

* ಗೋಕಾಕ ತಾಲ್ಲೂಕು ಹಿರೇನಂದಿಯ ಸೌಭಾಗ್ಯಲಕ್ಷ್ಮೀ ಸಕ್ಕರೆ ಕಾರ್ಖಾನೆಯನ್ನು ಶಾಸಕ ರಮೇಶ ಜಾರಕಿಹೊಳಿ ಅವರ ಮಗ ಅಮರನಾಥ ಜಾರಕಿಹೊಳಿ ನಡೆಸುತ್ತಿದ್ದಾರೆ

* ಸವದತ್ತಿಯ ಹರ್ಷ ಶುಗರ್ಸ್‌ ಇದನ್ನು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಸ್ಥಾಪಿಸಿದ್ದಾರೆ. ಇವರು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ಸಹೋದರ

* ಬಾವನ ಸವದತ್ತಿಯ ಶಿವಶಕ್ತಿ ಶುಗರ್ಸ್‌, ಸವದತ್ತಿ ತಾಲ್ಲೂಕು ಮರಕುಂಬಿಯ ಇನಾಮದಾರ್‌ ಸಕ್ಕರೆ ಕಾರ್ಖಾನೆಗಳಿಗೆ ಪ್ರಭಾಕರ ಕೋರೆ ಮಾಲೀಕರು

* ಕಾಗವಾಡದ ಶಿರಗುಪ್ಪಿ ಶುಗರ್ಸ್‌ ಮಾಜಿ ಶಾಸಕ ಕಲ್ಲಪ್ಪನ್ನ ಮಗೆಣ್ಣವರ ಅವರ ಮಾಲೀಕತ್ವದಲ್ಲಿದೆ

* ರಾಯಬಾಗ ತಾಲ್ಲೂಕು ಅಳಗವಾಡಿ ಬೀರೇಶ್ವರ ಸಕ್ಕರೆ ಕಾರ್ಖಾನೆಯು ದಾವಣಗೆರೆಯವರಾದ ಶಾಸಕ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರ ಮಾಲೀಕತ್ವದ್ದು

* ಕಾಗವಾಡ ತಾಲ್ಲೂಕಿನ ಕೆಂಪವಾಡದ ಅಥಣಿ ಫಾರ್ಮರ್ಸ್‌ ಶುಗರ್ಸ್‌ನ ಮಾಲೀಕರು ಮಾಜಿ ಸಚಿವ ಶ್ರೀಮಂತ ಪಾಟೀಲ

* ಅಥಣಿ ತಾಲ್ಲೂಕು ಬಾಳಿಗೇರಿಯ ಬಸವೇಶ್ವರ ಸಕ್ಕರೆ ಕಾರ್ಖಾನೆ ಇದ್ದು ಮಹಾರಾಷ್ಟ್ರ ಮೂಲದ ರಾಜಕಾರಣಿಯೊಬ್ಬರು ನಡೆಸುತ್ತಿದ್ದಾರೆ‌

* ಹುಕ್ಕೇರಿ ತಾಲ್ಲೂಕು ಬೆಲ್ಲದ ಬಾಗೇವಾಡಿಯ ವಿಶ್ವರಾಜ್‌ ಶುಗರ್‌ ಕಾರ್ಖಾನೆಗೆ ಶಾಸಕ ನಿಖಿಲ್‌ ಕತ್ತಿ ಮಾಲೀಕರಾಗಿದ್ದಾರೆ

* ಬೈಲಹೊಂಗಲದ ಸೋಮೇಶ್ವರ ಸಹಕಾರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾಗಿ ಬಸವರಾಜ ಬಾಳೇಕುಂದ್ರಿ ಇದ್ದಾರೆ. ಇವರು ಮಾಜಿ ಶಾಸಕ ರಮೇಶ ಬಾಳೇಕುಂದ್ರಿ ಅವರ ಪುತ್ರ

* ನಿಪ್ಪಾಣಿಯ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾಗಿ ರಾಜಕಾರಣಿ ಎಂ.ಪಿ.ಪಾಟೀಲ ಮುಂದುವರಿದಿದ್ದಾರೆ. ಮಾಜಿ ಸಂಸದ, ಬಿಜೆಪಿಯ ಅಣ್ಣಾ ಸಾಹೇಬ್‌ ಜೊಲ್ಲೆ ಅವರು ನಿರ್ದೇಶಕರಾಗಿದ್ದಾರೆ

* ಅಥಣಿ ತಾಲ್ಲೂಕು ಹಳ್ಯಾಳದ ಕೃಷ್ಣಾ ಸಹಕಾರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಪರಪ್ಪ ಸವದಿ. ಇವರು ಶಾಸಕ ಲಕ್ಷ್ಮಣ ಸವದಿ ಅವರ ಸಹೋದರ

* ದಿ.ಫಟಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆಗೆ ಪ್ರಭಾ ಶುಗರ್ಸ್‌ ಎನ್ನುತ್ತಾರೆ. ಇದು ಶಾಸಕ, ಬಿಜೆಪಿಯ ಬಾಲಚಂದ್ರ ಜಾರಕಿಹೊಳಿ ಅವರ ಸುಪರ್ದಿಯಲ್ಲಿದೆ

* ಎಂ.ಕೆ.ಹುಬ್ಬಳ್ಳಿಯ ಮಲ್ಲಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾಗಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಆಯ್ಕೆಯಾಗಿದ್ದಾರೆ. ಇವರು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ಸಹೋದರ

* ಸಂಕೇಶ್ವರದ ಹಿರಣ್ಯಕೇಶಿ ಸಹಕಾರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾಗಿ ರಾಜು ಕಲ್ಲಟ್ಟಿ ಈಚೆಗೆ ಆಯ್ಕೆಯಾಗಿದ್ದಾರೆ. ಇವರು ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಆಪ್ತ. ಮಾಜಿ ಸಂಸದ ರಮೇಶ ಕತ್ತಿ ದಶಕಗಳ ಕಾಲ ಅಧ್ಯಕ್ಷರಾಗಿದ್ದರು

* ಹುಕ್ಕೇರಿಯ ಸಂಗಮ ಸಹಕಾರ ಸಕ್ಕರೆ ಕಾರ್ಖಾನೆಗೆ ರಾಜೇಂದ್ರ ಪಾಟೀಲ ಅಧ್ಯಕ್ಷರಾಗಿದ್ದಾರೆ. ಇವರು ಮಾಜಿ ಸಚಿವ ಮಲ್ಲಾರಿಗೌಡ ಪಾಟೀಲ ಅಳಿಯ

* ರಾಯಬಾಗ ತಲ್ಲೂಕಿನ ಬಾವನ ಸೌದತ್ತಿಯ ಕಾರ್ಖಾನೆಯು ರಾಜ್ಯಸಭಾ ಮಾಜಿ ಸದಸ್ಯ ಪ್ರಭಾಕರ ಕೋರೆ ಅವರ ಒಡೆತನದಲ್ಲಿದೆ

* ರಾಮದುರ್ಗ ತಾಲ್ಲೂಕಿನ ಉದುಪುಡಿ ಬಳಿ ಇರುವ ಶಿವಸಾಗರ ಶುಗರ್ಸ್‌ ಕಾರ್ಖಾನೆಯನ್ನು ಜಮಖಂಡಿ ಶಾಸಕ ಜಗದೀಶ ಗುಡಗುಂಟಿ ಇವರು ಖದೀದಿ ಮಾಡಿದ್ದಾರೆ. ಮೊದಲು ಇದು ಶಾಸಕ ರಮೇಶ ಕತ್ತಿ ಅವರ ಪುತ್ರ ಲವ ಅವರ ಮಾಲೀಕತ್ವದಲ್ಲಿ ಇತ್ತು

ಬಾಗಲಕೋಟೆ

* ಜಮಖಂಡಿಯ ಪ್ರಭುಲಿಂಗೇಶ್ವರ ಕಾರ್ಖಾನೆ ಶಾಸಕ ಜಗದೀಶ ಗುಡಗುಂಟಿ ಮಾಲೀಕತ್ವದಲ್ಲಿದೆ

* ಮುಧೋಳ ತಾಲ್ಲೂಕಿನ ಇಂಡಿಯನ್‌ ಕೇನ್‌ ಪವರ್‌ ಲಿಮಿಟೆಡ್‌ಗೆ (ಐಸಿಪಿಎಲ್‌) ಗಣಿ ಸಚಿವ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಮಾಲೀಕ

* ಮುಧೋಳ ತಾಲ್ಲೂಕಿನ ರನ್ನಾನಗರದ ಸಹಕಾರಿ ಕಾರ್ಖಾನೆಯು ಸಾಲದಿಂದಾಗಿ ಬಂದ್ ಆಗಿತ್ತು. ಈ ಕಾರ್ಖಾನೆಯನ್ನು ಈಗ ಕಾಂಗ್ರೆಸ್‌ ಮುಖಂಡ, ಮಾಜಿ ಸಚಿವ ಎಸ್‌.ಆರ್.ಪಾಟೀಲ ವಹಿಸಿಕೊಂಡಿದ್ದಾರೆ. ಬೀಳಗಿ ಶುಗರ್‌ ಮಿಲ್‌ ಲಿಮಿಟೆಡ್‌ ಹೆಸರಿನಲ್ಲಿ ಕಾರ್ಯಾಚರಿಸುತ್ತಿದೆ

* ಬಿಜೆಪಿ ಮುಖಂಡ, ಮಾಜಿ ಸಚಿವ ಮುರುಗೇಶ ನಿರಾಣಿ ಕುಟುಂಬದ ಮಾಲೀಕತ್ವದ ಐದು ಕಾರ್ಖಾನೆಗಳು (ನಿರಾಣಿ ಶುಗರ್ಸ್, ಬಾದಾಮಿ ಶುಗರ್ಸ್, ಕೇದರನಾಥ ಶುಗರ್ಸ್, ಸಾಯಿಪ್ರಿಯಾ ಶುಗರ್ಸ್, ಎಂಆರ್‌ಎನ್‌ ಕೇನ್‌ ಪವರ್) ಜಿಲ್ಲೆಯಲ್ಲಿವೆ

* ಹಿರೇಪಡಸಲಗಿಯಲ್ಲಿರುವ ಜಮಖಂಡಿ ಶುಗರ್ಸ್ ಕಾರ್ಖಾನೆಯ ಮಾಲೀಕತ್ವವನ್ನು ಮಾಜಿ ಶಾಸಕ, ಕಾಂಗ್ರೆಸ್‌ ಮುಖಂಡ ಆನಂದ ನ್ಯಾಮಗೌಡ ಹೊಂದಿದ್ದಾರೆ

* ಬೀಳಗಿಯಲ್ಲಿರುವ ಬೀಳಗಿ ಶುಗರ್ಸ್‌ಗೆ ಕಾಂಗ್ರೆಸ್‌ ಮುಖಂಡ, ಮಾಜಿ ಸಚಿವ ಎಸ್‌.ಆರ್.ಪಾಟೀಲ ಮಾಲೀಕ

ವಿಜಯಪುರ

* ಸಿಂದಗಿ ತಾಲ್ಲೂಕು ಮಲಘಾಣದಲ್ಲಿರುವ ಶ್ರೀ ಸಾಯಿ ಬಸವ ಶುಗರ್ಸ್‌ ಕಾರ್ಖಾನೆಯು ಬೀಳಗಿ ಶಾಸಕ ಜೆ.ಟಿ.ಪಾಟೀಲ ಅವರ ಸಂಬಂಧಿ ಈರನಗೌಡ ಪಾಟೀಲ ಮತ್ತು ದೇವರಹಿಪ್ಪರಗಿ ಕ್ಷೇತ್ರದ ಮಾಜಿ ಶಾಸಕ ಸೋಮನಗೌಡ ಪಾಟೀಲರ ಸಹೋದರ ಸುರೇಶಗೌಡ ಪಾಟೀಲ ಸಾಸನೂರ ಜಂಟಿ ಒಡತನದಲ್ಲಿದೆ

* ಆಲಮೇಲದ ಕೆಪಿಆರ್‌ ಶುಗರ್ಸ್‌ ಮಿಲ್ಸ್‌ ಪ್ರೈ.ಲಿ, ಕಾಂಗ್ರೆಸ್‌ ಮುಖಂಡ, ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಸಂಬಂಧಿ ತಮಿಳುನಾಡು ಮೂಲದ ಕೆ.ರಾಮಸ್ವಾಮಿ ಅವರಿಗೆ ಸೇರಿದ್ದಾಗಿದೆ

* ಇಂಡಿ ತಾಲ್ಲೂಕಿನಲ್ಲಿರುವ ಜಮಖಂಡಿ ಶುಗರ್ಸ್‌ ಲಿ.ಯುನಿಟ್‌ 2 ಕಾರ್ಖಾನೆಯು ಕಾಂಗ್ರೆಸ್‌ ಮುಖಂಡ ಜಮಖಂಡಿ ಮಾಜಿ ಶಾಸಕ ಆನಂದ ನ್ಯಾಮಗೌಡ ಮಾಲೀಕತ್ವದಲ್ಲಿದೆ

* ಚಡಚಣ ತಾಲ್ಲೂಕು ಮರಗೂರ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಗೆ ಶಾಸಕ ಯಶವಂತರಾಯಗೌಡ ಪಾಟೀಲ ಅಧ್ಯಕ್ಷ

* ಬಬಲೇಶ್ವರ ತಾಲ್ಲೂಕು ಕಾರಜೋಳದಲ್ಲಿರುವ ಬಸವೇಶ್ವರ ಶುಗರ್ಸ್‌ ಲಿ.ಗೆ ತಮಿಳುನಾಡು ಮೂಲದ ರಾಜಕಾರಣಿ ಡಿ. ಶ್ರೀನಿವಾಸನ್‌ ಮಾಲೀಕರಾಗಿದ್ದಾರೆ

* ಇಂಡಿ ತಾಲ್ಲೂಕು ಹಿರೇಬೇವನೂರದಲ್ಲಿರುವ ಐಸಿಪಿಎಲ್‌ನ ಒಡೆತನ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಅವರದ್ದು

ಬೀದರ್‌

* ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ (ಎನ್‌ಎಸ್‌ಎಸ್‌ಕೆ), ಮಹಾತ್ಮ ಗಾಂಧಿ ಸಹಕಾರ ಸಕ್ಕರೆ ಕಾರ್ಖಾನೆ (ಎಮ್‌ಜಿಎಸ್‌ಎಸ್‌ಕೆ) ಸಹಕಾರ ಕ್ಷೇತ್ರದ್ದು. ನಾರಂಜಾ ಕಾರ್ಖಾನೆಗೆ ಮಾಜಿ ಸಚಿವ ದಿವಂಗತ ಗುರುಪಾದಪ್ಪ ನಾಗಮಾರಪಳ್ಳಿ ಅವರ ಕಿರಿಯ ಮಗ, ಜೆಡಿಎಸ್‌ ಮುಖಂಡ ಸೂರ್ಯಕಾಂತ ನಾಗಮಾರಪಳ್ಳಿ ಅಧ್ಯಕ್ಷ. ಎಂಜಿಎಸ್‌ಎಸ್‌ಕೆಗೆ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆಯವರ ಸಹೋದರ ಅಮರ್‌ ಕುಮಾರ ಖಂಡ್ರೆ ಅಧ್ಯಕ್ಷ. ಈ ಎರಡೂ ಕಾರ್ಖಾನೆಗಳು ಸಾಲದ ಸುಳಿಗೆ ಸಿಲುಕಿವೆ

* ಭಾಲ್ಕೇಶ್ವರ ಸಕ್ಕರೆ ಕಾರ್ಖಾನೆಯನ್ನು ಬಿಜೆಪಿಯ ಮಾಜಿ ಶಾಸಕ ಪ್ರಕಾಶ್‌ ಖಂಡ್ರೆ ಆರಂಭಿಸಿದ್ದರು. ಬಳಿಕ ಓಂಕಾರ ಸಮೂಹಕ್ಕೆ ಮಾರಾಟ ಮಾಡಿದ್ದಾರೆ

* ಬೀದರ್‌ ಕಿಸಾನ್‌ ಸಕ್ಕರೆ ಕಾರ್ಖಾನೆ ಮಾಜಿ ಸಚಿವ ಮಿರಾಜುದ್ದೀನ್‌ ಪಟೇಲ್‌ ಅವರ ಸಹೋದರ ನಸೀಮ್‌ ಪಟೇಲ್‌ ಒಡೆತನದಲ್ಲಿದೆ

ಕಲಬುರಗಿ

* ಚಿಂಚೋಳಿಯಲ್ಲಿ ಸಿದ್ಧಸಿರಿ ಎಥೆನಾಲ್ ಆ್ಯಂಡ್ ಪವರ್ ಕಾರ್ಖಾನೆ ಇದೆ. ಇದರ ಒಡೆತನ ಸಿದ್ಧಸಿರಿ ಸೌಹಾರ್ದ ಸಹಕಾರಿ ನಿಯಮಿತ ಹೊಂದಿದ್ದು, ಈ ಸಹಕಾರಿ ಸಂಸ್ಥೆಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಧ್ಯಕ್ಷ (ಕಳೆದ ವರ್ಷ ಈ ಕಾರ್ಖಾನೆ ಕಾರ್ಯನಿರ್ವಹಿಸಿರಲಿಲ್ಲ)

* ಅಫಜಲಪುರ ತಾಲ್ಲೂಕಿನಲ್ಲಿ ಕೆಪಿಆರ್‌ ಶುಗರ್ಸ್ ಹಾಗೂ ರೇಣುಕಾ ಶುಗರ್ಸ್ ಕಾರ್ಖಾನೆಗಳಿವೆ. ಕೆಪಿಆರ್‌ ಶುಗರ್ಸ್‌ ಕೆಪಿಆರ್‌ ಸಂಸ್ಥೆಯ ಮಾಲೀಕತ್ವದಲ್ಲಿದೆ. ಆ ಸಂಸ್ಥೆಗೆ ತಮಿಳುನಾಡಿನ ಕೆ.‍ಪಿ.ರಾಮಸ್ವಾಮಿ ಅಧ್ಯಕ್ಷರು. ರಾಮಸ್ವಾಮಿ ಅವರು ಕಾಂಗ್ರೆಸ್‌ ಪಕ್ಷದ ಪಿ.ಚಿದಂಬರಂ ಅವರ ಸಂಬಂಧಿ. ರೇಣುಕಾ ಶುಗರ್ಸ್‌, ವಿದ್ಯಾ ಮರಕುಂಬಿ ಅವರ ಮಾಲೀಕತ್ವದಲ್ಲಿದೆ

ಹಾವೇರಿ

* ಸಂಗೂರಿನಲ್ಲಿ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಮಾಲೀಕರು ಜಿ.ಎಂ.ಶುಗರ್ ಆ್ಯಂಡ್ ಎನರ್ಜಿ ಕಂಪನಿ ಕಾರ್ಯನಿರ್ವಹಿಸುತ್ತಿದೆ. ಇದು ಸಹಕಾರಿ ಕ್ಷೇತ್ರದ ಕಾರ್ಖಾನೆ. ಕಂಪನಿಯು 30 ವರ್ಷಗಳ ಗುತ್ತಿಗೆಗೆ ಇದನ್ನು ಪಡೆದಿದೆ. ರಟ್ಟಿಹಳ್ಳಿ ತಾಲ್ಲೂಕಿನ ಭೈರನಪಾದ ಬಳಿಯಲ್ಲಿರುವ ಜಿ.ಎಂ.ಶುಗರ್ಸ್ ಕಾರ್ಖಾನೆಗೂ ಸಿದ್ದೇಶ್ವರ ಅವರೇ ಮಾಲೀಕರು

* ಶಿಗ್ಗಾವಿ ತಾಲ್ಲೂಕಿನ ಶಿವಪುರ- ಕೋಣನಕೇರಿ ರಸ್ತೆಯಲ್ಲಿ ವಿ.ಐ.ಎನ್.ಪಿ ಡಿಸ್ಟಿಲರೀಸ್ ಮತ್ತು ಶುಗರ್ಸ್‌ ಕಂಪನಿಯು ಮಾಜಿ ಸಚಿವ ಶಿವರಾಮ ಹೆಬ್ಬಾರ ಅವರ ಮಗ ವಿವೇಕ ಹೆಬ್ಬಾರ ಒಡೆತನದಲ್ಲಿದೆ

ಮಂಡ್ಯ

* ಮಂಡ್ಯ ಮೈಸೂರು ಸಕ್ಕರೆ ಕಾರ್ಖಾನೆ (ಮೈಷುಗರ್‌) ಸರ್ಕಾರಿ ಸ್ವಾಮ್ಯದಲ್ಲಿರುವ ರಾಜ್ಯದ ಏಕೈಕ ಸಕ್ಕರೆ ಕಾರ್ಖಾನೆ

* ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಇತ್ತೀಚೆಗೆ ಬಿಜೆಪಿ ಮುಖಂಡ, ಮಾಜಿ ಶಾಸಕ ಮುರುಗೇಶ್‌ ನಿರಾಣಿ ಅವರ ಒಡೆತನದ ‘ಎಂ.ಆರ್‌.ಎನ್‌. ಕೇನ್‌’ ಸಂಸ್ಥೆಗೆ 40 ವರ್ಷಗಳ ಗುತ್ತಿಗೆ ನೀಡಲಾಗಿದೆ

ದಾವಣಗೆರೆ

* ದಾವಣಗೆರೆ ಶುಗರ್ಸ್ ಲಿ. ಕುಕ್ಕುವಾಡದಲ್ಲಿದ್ದು ಗಣಿ ಮತ್ತು ಭೂ ವಿ‌‌ಜ್ಞಾನ ಖಾತೆ ಸಚಿವ ಎಸ್‌.ಎಸ್.ಮಲ್ಲಿಕಾರ್ಜುನ ಅವರ ಸಹೋದರ ಎಸ್.ಎಸ್.ಗಣೇಶ್ ಇದರ ಮಾಲೀಕ

ವಿಜಯನಗರ

ಹರಪನಹಳ್ಳಿ ತಾಲ್ಲೂಕಿನ ದುಗ್ಗಾವತಿಯಲ್ಲಿರುವ ಶಾಮನೂರು ಶುಗರ್ಸ್‌ ಮಾಲೀಕತ್ವ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಅವರದ್ದು

ಗದಗ

* ಮುಂಡರಗಿ ತಾಲ್ಲೂಕಿನಲ್ಲಿರುವ ವಿಜಯನಗರ ಶುಗರ್ಸ್‌ ಕಾರ್ಖಾನೆಯು ಆಂಧ್ರಪ್ರದೇಶದ ಮೂಲದ್ದು. ಈ ಕಾರ್ಖಾನೆಯು ಶ್ರೀಮೃಡಗಿರಿ ಸಹಕಾರಿ ಸಂಘದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಅದನ್ನು 30 ವರ್ಷಗಳ ಗುತ್ತಿಗೆಗೆ ವಿಜಯನಗರ ಶುಗರ್ಸ್‌ಗೆ ನೀಡಲಾಗಿತ್ತು. ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್‌ ಮುಖಂಡ ಜೈಪಾಲ ರೆಡ್ಡಿ ಅವರ ಮಗ ಆನಂದ ರೆಡ್ಡಿ ಇದರ ಮಾಲೀಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.