
ಸಾಮಾನ್ಯವಾಗಿ ಚಳಿಗಾಲ ಅಂತ್ಯವಾಗಿ, ಬಿಸಿಲು ಹೆಚ್ಚಾಗುವುದರೊಂದಿಗೆ ಮಲೆನಾಡಿನಲ್ಲಿ ಮಂಗನ ಕಾಯಿಲೆ ವ್ಯಾಪಕವಾಗುತ್ತದೆ. ಆದರೆ, ಈ ಬಾರಿ ಚಳಿಗಾಲದಲ್ಲೇ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಾಯಿಲೆ ಹಲವರನ್ನು ಬಾಧಿಸುತ್ತಿದೆ. ರಾಜ್ಯದಲ್ಲಿ ಕೆಎಫ್‌ಡಿ ಪತ್ತೆಯಾಗಿ 68 ವರ್ಷ ಕಳೆದರೂ ಅದಕ್ಕೆ ಸರಿಯಾದ ಚಿಕಿತ್ಸೆ ಇಲ್ಲ. ಪ್ರಸ್ತುತ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಮಾತ್ರವೇ ಈ ಕಾಯಿಲೆ ಕಾಣಿಸಿಕೊಳ್ಳುತ್ತಿದೆ. ಇಲ್ಲಿಯವರೆಗೂ ಈ ಕಾಯಿಲೆ ತಡೆಗೆ ಬಳಕೆಯಲ್ಲಿದ್ದ ಲಸಿಕೆಯು ಇತ್ತೀಚಿನ ವರ್ಷಗಳಲ್ಲಿ ಕೆಲಸ ಮಾಡುತ್ತಿಲ್ಲ. ಹೊಸ ಲಸಿಕೆಯ ಪ್ರಯೋಗಗಳು ಇನ್ನೂ ನಡೆಯುತ್ತಿದ್ದು, ಮಲೆನಾಡಿಗರು ಆತಂಕಗೊಂಡಿದ್ದಾರೆ
ಮಲೆನಾಡಿನಲ್ಲಿ ಈ ಬಾರಿ ಬೇಸಿಗೆ ಆರಂಭವಾಗುವ ಮುನ್ನವೇ ಕೆಎಫ್‌ಡಿ (ಕ್ಯಾಸನೂರು ಫಾರೆಸ್ಟ್ ಡಿಸೀಸ್- ಮಂಗನ ಕಾಯಿಲೆ) ಕಾಣಿಸಿಕೊಂಡಿದೆ. ಡಿ.1ರಿಂದ 17ರವರೆಗೆ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ 10 ಮಂದಿಗೆ ಕೆಎಫ್‌ಡಿ ಬಾಧಿಸಿದೆ. 36 ಮಂಗಗಳು ಸತ್ತಿವೆ. ಚಳಿ ಕರಗಿ ಬಿಸಿಲು ಹೆಚ್ಚುತ್ತಿದ್ದಂತೆಯೇ ಕಾಯಿಲೆ ವ್ಯಾಪಕಗೊಳ್ಳುತ್ತದೆ. ಹೀಗಾಗಿ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಅರಣ್ಯದಂಚಿನ ಗ್ರಾಮಗಳಲ್ಲಿ ಆತಂಕದ ಛಾಯೆ ಆವರಿಸಿದೆ.
ಆರೋಗ್ಯ ಇಲಾಖೆಯೂ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಜನಜಾಗೃತಿ ಆರಂಭಿಸಿದ್ದು, ಡೆಪಾ (DEPA) ತೈಲ ವಿತರಣೆ ಮಾಡುತ್ತಿದೆ. ರೋಗ ಬಾಧಿತರಿಗೆ ವೈದ್ಯಕೀಯ ನೆರವಿಗೆ ಸಿದ್ಧತೆ ಆರಂಭಿಸಿದೆ.
ಏನಿದು ಕೆಎಫ್‌ಡಿ?:
ಕೆಎಫ್‌ಡಿ ಮೊದಲ ಬಾರಿಗೆ 1957ರಲ್ಲಿ ಸೊರಬ ತಾಲ್ಲೂಕಿನ ಕ್ಯಾಸನೂರಿನಲ್ಲಿ ಪತ್ತೆಯಾಗಿತ್ತು. ಹೀಗಾಗಿ ವೈದ್ಯಕೀಯ ಪರಿಭಾಷೆಯಲ್ಲಿ ಇದು ಕ್ಯಾಸನೂರು ಕಾಡಿನ ಕಾಯಿಲೆ. ಆದರೆ ಆಡುಭಾಷೆಯಲ್ಲಿ ಇದು ಮಂಗನ ಕಾಯಿಲೆ. ‘ರಷ್ಯನ್ ಎನ್‌ಸಫಲೈಟಿಸ್’ ಹೆಸರಿನ ವೈರಸ್‌ನಿಂದ ಈ ಕಾಯಿಲೆ ಬರುತ್ತದೆ. ಮಲೆನಾಡಿನ ಕಾಡಿಗೆ ಸೈಬೀರಿಯಾ ಭಾಗದಿಂದ ಬಂದ ಯಾವುದೋ ವಲಸೆ ಹಕ್ಕಿಯ ಮೈಯಲ್ಲಿ ಈ ವೈರಸ್ ಹೊತ್ತ ಉಣ್ಣಿ (ಉಣುಗು) ಮಲೆನಾಡಿಗೆ ಬಂದಿರಬಹುದು ಎಂಬುದು ವಿಜ್ಞಾನಿಗಳ ಊಹೆ.
ರೋಗದ ಲಕ್ಷಣಗಳೇನು?:
ಮೊದಲ ಹಂತದಲ್ಲಿ ಮೂರರಿಂದ ಎಂಟು ದಿನ ಜ್ವರ, ಕತ್ತಿನ ಹಿಂಭಾಗ, ಸ್ನಾಯುಗಳಲ್ಲಿ ನೋವು ಜೊತೆಗೆ ತಲೆನೋವು ಕಾಣಿಸಿಕೊಳ್ಳುತ್ತದೆ. ರೋಗಲಕ್ಷಣ ಆಧರಿಸಿ ವೈದ್ಯರು ಔಷಧಿ ಕೊಟ್ಟು ರೋಗಿ ಗುಣಮುಖರಾದರೂ ವಾರದ ಅಂತರದಲ್ಲಿಯೇ ಎರಡನೇ ಹಂತದ ಲಕ್ಷಣಗಳು ಬಾಧಿಸುತ್ತವೆ. ಎರಡನೇ ಹಂತದಲ್ಲಿ ವಿಪರೀತ ಜ್ವರ, ತಲೆನೋವು, ಕಣ್ಣು ಕೆಂಪಾಗುವುದು, ನಿಶ್ಶಕ್ತಿ, ಕ್ಷೋಭೆ, ರಕ್ತಸ್ರಾವ, ಪ್ರಜ್ಞಾಹೀನತೆ ಉಂಟಾಗುತ್ತದೆ. ಈ ಹಂತದಲ್ಲಿ ಸೂಕ್ತ ಚಿಕಿತ್ಸೆ ದೊರೆಯದಿದ್ದಲ್ಲಿ ಸಾವು ಬರಬಹುದು.
ಕೆಎಫ್‌ಡಿಗೆ ಕಾಡಂಚಿನ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರೇ ಶೇ 50ರಿಂದ 60ರಷ್ಟು ತುತ್ತಾಗುತ್ತಿದ್ದಾರೆ. ಇವರಲ್ಲಿ ಅತಿಯಾಗಿ ಮದ್ಯಪಾನ–ತಂಬಾಕು ಸೇವನೆ ಚಟ, ಪೌಷ್ಟಿಕಾಂಶದ ಕೊರತೆ ಇದ್ದವರಲ್ಲಿ ರೋಗ ನಿರೋಧಕ ಶಕ್ತಿ ಕುಂಠಿತವಾಗಿ ಸಾವಿಗೀಡಾಗುತ್ತಿದ್ದಾರೆ. ಅವರಲ್ಲಿ ಮಹಿಳೆಯರ ಸಾವಿನ ಪ್ರಮಾಣ ಹೆಚ್ಚಿದೆ. ಮುಟ್ಟಿನ ದಿನಗಳಲ್ಲಿ ಕಾಯಿಲೆ ಬಾಧಿಸಿದರೆ ಅತಿಹೆಚ್ಚು ರಕ್ತಸ್ರಾವ ಆಗುತ್ತದೆ. ಋತುಚಕ್ರದ ಸ್ರಾವ ನಿಲ್ಲಿಸುವುದು ಕಷ್ಟ. ಕೊನೆಗೆ ರಕ್ತಹೀನತೆಯಿಂದ ಸಾವಿಗೀಡಾಗುತ್ತಾರೆ.
ಮಂಗನಿಂದ ಬರುವ ಕಾಯಿಲೆ ಅಲ್ಲ:
ಮಂಗನಿಗೂ ಕೆಎಫ್‌ಡಿಗೂ ಸಂಬಂಧವಿಲ್ಲ. ಆದರೆ ಜನರ ಬಾಯಲ್ಲಿ ಮಂಗನ ಕಾಯಿಲೆ ಆಗಿದೆ. ವಾಸ್ತವವಾಗಿ ಮಂಗ ಕೂಡ ಮನುಷ್ಯನಿಗಿಂತ ಹೆಚ್ಚು ಸಂತ್ರಸ್ತ. ಉಣುಗು ಕಡಿತದಿಂದ ರಷ್ಯನ್ ಎನ್‌ಸಫಲೈಟಿಸ್ ವೈರಸ್ ಮನುಷ್ಯನ ರೀತಿಯಲ್ಲೇ ಮಂಗನ ದೇಹಕ್ಕೂ ಸೇರುತ್ತದೆ. ಕೆಎಫ್‌ಡಿ ಬಾಧಿತರು ಬಹುತೇಕ ಸಂದರ್ಭಗಳಲ್ಲಿ ಚಿಕಿತ್ಸೆ ಪಡೆದು ಬದುಕುತ್ತಾರೆ. ಆದರೆ ಸೋಂಕು ಬಾಧಿತ ಮಂಗಗಳು ಸಾಯುತ್ತವೆ.
ಕಾಡಿನಲ್ಲಿ ಮಂಗಗಳ ಕಳೇಬರ ದೊರೆತರೆ ಅಲ್ಲಿ ವೈರಸ್‌ನ ಸುಳಿವು ಇರುತ್ತದೆ. ಮಂಗನ ಹೆಸರಲ್ಲಿ ಕಾಯಿಲೆಯ ಗುರುತಿಸುವುದರಿಂದ ಬಾಧಿತರಲ್ಲಿ ಒಂದು ಬಗೆಯ ಸಾಮಾಜಿಕ ಕಳಂಕದ ಭಾವನೆ ಮೂಡುತ್ತಿದ್ದು, ಅವರು ತಕ್ಷಣ ವೈದ್ಯರ ಬಳಿಗೆ ತೆರಳದೇ ಮನೆ ಮದ್ದಿಗೆ ಸೀಮಿತರಾಗುತ್ತಾರೆ. ರೋಗ ಉಲ್ಬಣಿಸಿದಾಗ ವೈದ್ಯರ ಬಳಿ ತೆರಳುತ್ತಿದ್ದು, ಇದು ಜೀವ ಹಾನಿಗೂ ಕಾರಣವಾಗುತ್ತಿದೆ.
ಲಸಿಕೆ ಅಭಿವೃದ್ಧಿ ಟ್ರಯಲ್ಸ್ ಹಂತದಲ್ಲಿ:
ಕೆಎಫ್‌ಡಿಗೆ ಈಗ ನಿರ್ದಿಷ್ಟ ಔಷಧಿ ಇಲ್ಲ. ಆರೋಗ್ಯ ಇಲಾಖೆ ಸದ್ಯ ರೋಗದ ಲಕ್ಷಣ ಆಧರಿಸಿ ಚಿಕಿತ್ಸೆ ನೀಡುತ್ತಿದೆ. 1992ರಲ್ಲಿ ಮಹಾರಾಷ್ಟ್ರದ ವಿಜ್ಞಾನಿ ಡಾ.ದಂಡಾವತೆ ಅಭಿವೃದ್ಧಿಪಡಿಸಿದ್ದ ಲಸಿಕೆ ಇಲ್ಲಿಯವರೆಗೂ ಬಳಕೆಯಲ್ಲಿತ್ತು. ಆದರೆ ಅದು ವೈರಸ್‌ನ ರೂಪಾಂತರದಿಂದ (ಮ್ಯುಟೇಶನ್) ತನ್ನ ಪರಿಣಾಮ ಕಳೆದುಕೊಂಡಿದೆ. ಹೀಗಾಗಿ ಆ ಲಸಿಕೆ ಬಳಕೆಯನ್ನು ಆರೋಗ್ಯ ಇಲಾಖೆ ಮೂರು ವರ್ಷಗಳಿಂದ ನಿಲ್ಲಿಸಿದೆ.
‘ಹೊಸದಾಗಿ ಲಸಿಕೆ ಅಭಿವೃದ್ಧಿಗೆ ಈಗಾಗಲೇ ಪ್ರಕ್ರಿಯೆ ಆರಂಭವಾಗಿದ್ದು, ಈಗ ಅದು ಕ್ಲಿನಿಕಲ್ ಟ್ರಯಲ್ಸ್ ಹಂತದಲ್ಲಿದೆ. ಮುಂದಿನ ವರ್ಷದ ವೇಳೆಗೆ ಲಸಿಕೆ ಸಿದ್ಧವಾಗಬಹುದು’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶಿವಮೊಗ್ಗ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಲ್.ನಾಗರಾಜ ನಾಯ್ಕ ಹೇಳುತ್ತಾರೆ.
‘ತಕ್ಷಣ ಪರೀಕ್ಷೆ ಮಾಡಿಸಿ’
ಕೆಎಫ್‌ಡಿ ಬಾಧಿತರಿಗೆ ಚಿಕಿತ್ಸೆ ನೀಡಲು ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಮಲೆನಾಡು ಭಾಗದ ತಾಲ್ಲೂಕು ಆಸ್ಪತ್ರೆಗಳಲ್ಲಿ ತಲಾ 10 ಹಾಸಿಗೆಯ ಪ್ರತ್ಯೇಕ ವೈರಲ್ ವಾರ್ಡ್ ರೂಪಿಸಲಾಗಿದೆ. ತೀವ್ರ ರೋಗ ಬಾಧಿತರ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್, ಸುಬ್ಬಯ್ಯ ಹಾಗೂ ಮಣಿಪಾಲ್‌ನ ಕಸ್ತೂರಬಾ ಆಸ್ಪತ್ರೆಗಳನ್ನು ಗುರುತಿಸಿದ್ದು, ಅಲ್ಲಿ ಎಲ್ಲ ರೋಗಿಗಳಿಗೂ ಸಂಪೂರ್ಣ ಉಚಿತ ಚಿಕಿತ್ಸೆಗೆ ಅವಕಾಶ ಕಲ್ಪಿಸಲಾಗಿದೆ.
‘ಕೆಎಫ್‌ಡಿ ಮೊದಲ ಹಂತದಲ್ಲಿಯೇ ಚಿಕಿತ್ಸೆ ಪಡೆಯುವುದು ಸೂಕ್ತ. ಮಲೆನಾಡಿನಲ್ಲಿ ಜ್ವರ ಬಾಧಿತರು ಆರ್‌ಎಂಪಿ, ನಾಟಿ ವೈದ್ಯರ ಬಳಿ ತೆರಳದೇ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಬೇಕು. ಅಲ್ಲಿ ರಕ್ತ ಪರೀಕ್ಷೆ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಕಾಯಿಲೆಯನ್ನು ಪ್ರಾಥಮಿಕ ಹಂತದಲ್ಲಿಯೇ ಪತ್ತೆ ಮಾಡಬಹುದು’ ಎಂದು ಡಾ.ನಾಗರಾಜ ನಾಯ್ಕ ಮನವಿ ಮಾಡುತ್ತಾರೆ.
ಉಣುಗು ಕಡಿತದಿಂದ ರಕ್ಷಣೆಗೆ ಸಲಹೆ
ಕೆಎಫ್‌ಡಿ ಹರಡುವ ಉಣುಗುಗಳು ಕಾಡಿನಲ್ಲಿರುತ್ತವೆ. ಇವು ಜೀವಿತಾವಧಿಯಲ್ಲಿ ತಾವಾಗಿಯೇ 100 ಮೀ. ಮಾತ್ರ ಕ್ರಮಿಸಬಹುದು. ಆದರೆ ಇಲಿ, ಹೆಗ್ಗಣ, ಬೆಕ್ಕು, ನಾಯಿ, ಮಂಗ, ಕಾಡಿಗೆ ಮೇಯಲು ಹೋಗುವ ದನಗಳ ಮೂಲಕ ಮನುಷ್ಯರ ಸಂಪರ್ಕಕ್ಕೆ ಬರುತ್ತವೆ. ಕಾಡಿಗೆ ಹೋದವರಿಗೆ ಉಣುಗು ಕಚ್ಚಿದರೂ ರೋಗ ಹರಡುತ್ತದೆ. ಕಾಡಿಗೆ ಹೋಗುವಾಗ ಡೆಪಾ ಎಣ್ಣೆ ಕೈ ಕಾಲಿಗೆ ಹಚ್ಚಿಕೊಳ್ಳಬೇಕು, ಪೂರ್ಣ ತೋಳಿನ ಶರ್ಟು, ಪ್ಯಾಂಟ್, ಶೂ ಧರಿಸಬೇಕು. ವಾಪಸ್ ಮರಳಿದಾಗ ಬಿಸಿ ನೀರಿನಲ್ಲಿ ಸ್ನಾನ ಮಾಡಿ, ಬಟ್ಟೆಗಳನ್ನೂ ಬಿಸಿ ನೀರಿನಲ್ಲಿ ಒಗೆದು ಹಾಕಬೇಕು. ದನ–ಕರುಗಳ ಮೈ ತೊಳೆಯಬೇಕು ಎಂದು ಎಂಬುದು ವೈದ್ಯರ ಸಲಹೆ.
ನಾಲ್ಕು ಜಿಲ್ಲೆಗಳಿಗೆ ಮಾತ್ರ ಸೀಮಿತ
1957ರಿಂದ 2024ರವರೆಗೆ ಕೆಎಫ್‌ಡಿಗೆ ತುತ್ತಾಗಿ ರಾಜ್ಯದಲ್ಲಿ 597 ಜನರು ಸಾವಿಗೀಡಾಗಿದ್ದಾರೆ. ಸಾಗರ ತಾಲ್ಲೂಕಿನ ಅರಳಗೋಡು ಗ್ರಾಮದಲ್ಲಿ 2019ರ ಮಾರ್ಚ್‌ನಲ್ಲಿ ಈ ಸೋಂಕು ಬಾಧಿತರಾಗಿದ್ದ 23 ಜನರು ಸಾವಿಗೀಡಾಗಿದ್ದರು. ಆ ದುರಂತದ ಕಹಿ ಇನ್ನೂ ಈ ಭಾಗದ ಜನಮಾನಸದಲ್ಲಿ ಮಾಸಿಲ್ಲ. ರಾಜ್ಯದಲ್ಲಿ ಈ ಮೊದಲು ಪಶ್ಚಿಮ ಘಟ್ಟ ಶ್ರೇಣಿಯ 10 ಜಿಲ್ಲೆಗಳಲ್ಲೂ ಈ ಕಾಯಿಲೆ ಕಾಣಿಸಿಕೊಂಡಿದೆ. ಆದರೆ ಈಚೆಗೆ ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೆ ಮಾತ್ರ ಸೀಮಿತಗೊಂಡಿದೆ. ಕ್ಯಾಸನೂರಿನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡರೂ ಮತ್ತೆ ಅಲ್ಲಿ ಕಂಡುಬಂದಿಲ್ಲ. ಮಹಾರಾಷ್ಟ್ರದ ಸಿಂಧುದುರ್ಗ, ಕೇರಳದ ಮಲಪ್ಪುರ, ತಮಿಳುನಾಡಿನ ನೀಲಗಿರಿ ಹಾಗೂ ಈರೋಡ್ ಭಾಗದಲ್ಲೂ ಕೆಎಫ್‌ಡಿ ಕಾಣಿಸಿಕೊಂಡಿದೆ.
2 ವರ್ಷದಲ್ಲಿ 22 ಸಾವು
ಕಳೆದ ವರ್ಷ (2024) ಶಿವಮೊಗ್ಗ ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ 303 ಕೆಎಫ್‌ಡಿ ಪ್ರಕರಣಗಳು ವರದಿಯಾಗಿದ್ದವು. ಈ ವರ್ಷ 186 ಪ್ರಕರಣಗಳು ದೃಢಪಟ್ಟಿದ್ದವು. ಈ ಎರಡು ವರ್ಷಗಳಲ್ಲಿ 22 ಜನರು ಕಾಯಿಲೆಯಿಂದ ಸಾವಿಗೀಡಾಗಿದ್ದಾರೆ. ಇದು ಕಾಯಿಲೆಯ ಗಂಭೀರತೆಯನ್ನು ಬಿಂಬಿಸುತ್ತಿದೆ. ರಾಜ್ಯದಲ್ಲಿ ಕೆಎಫ್‌ಡಿ ಪತ್ತೆಯಾಗಿ 68 ವರ್ಷ ಕಳೆದರೂ ಅದಕ್ಕೆ ಸರಿಯಾದ ಚಿಕಿತ್ಸೆ ಇಲ್ಲ. ಈ ಮಧ್ಯೆ ಇಲ್ಲಿಯವರೆಗೂ ಬಳಕೆಯಲ್ಲಿದ್ದ ಲಸಿಕೆ ಕೆಲಸ ಮಾಡುತ್ತಿಲ್ಲ ಎಂಬುದು ಮಲೆನಾಡಿನ ಜನರ ನಿದ್ರೆಗೆಡಿಸಿದೆ.
ಕೆಎಫ್‌ಡಿ ನಿಯಂತ್ರಣಕ್ಕೆ ಮಲೆನಾಡಿನಲ್ಲಿ ಅಕ್ಟೋಬರ್ ತಿಂಗಳಿಂದಲೇ ಜಾಗೃತಿ ಕಾರ್ಯಕ್ರಮ ನಡೆಸಿದ್ದೇವೆ. ಮನೆ ಮನೆಗೆ ತೆರಳಿ ಕಾಯಿಲೆ ಬಗ್ಗೆ ತಿಳಿವಳಿಕೆ ನೀಡುತ್ತಿದ್ದೇವೆ. ಪ್ರತಿ ಮನೆಗೆ ಎರಡು ಬಾಟಲಿ ಡೆಪಾ ಎಣ್ಣೆ ವಿತರಣೆ ಮಾಡಲಾಗುತ್ತಿದೆಡಾ.ಎಲ್.ನಾಗರಾಜ ನಾಯ್ಕ ಸರ್ವೇಕ್ಷಣಾ ಅಧಿಕಾರಿ, ಆರೋಗ್ಯ ಇಲಾಖೆ ಶಿವಮೊಗ್ಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.