ADVERTISEMENT

ಆಳ–ಅಗಲ: ಒಂದು ರಾಷ್ಟ್ರ, ಒಂದು ಚುನಾವಣೆ: ಮಸೂದೆಯಲ್ಲೇನಿದೆ?

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2024, 21:12 IST
Last Updated 17 ಡಿಸೆಂಬರ್ 2024, 21:12 IST
ಲೋಕಸಭೆಯ ನೋಟ
ಲೋಕಸಭೆಯ ನೋಟ   
‘ಒಂದು ರಾಷ್ಟ್ರ, ಒಂದು ಚುನಾವಣೆ’ ಎನ್ನುವುದು ಬಿಜೆಪಿಯ ಪ್ರಮುಖ ಕಾರ್ಯಸೂಚಿ. ನರೇಂದ್ರ ಮೋದಿ ಅವರು 2014ರಲ್ಲಿ ಮೊದಲ ಬಾರಿಗೆ ಪ್ರಧಾನಿ ಆದಾಗಿನಿಂದಲೂ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಒಟ್ಟಿಗೆ ಚುನಾವಣೆ ನಡೆಸುವುದನ್ನು ಪ್ರತಿಪಾದಿಸುತ್ತಲೇ ಬಂದಿದ್ದರು. ಕೊನೆಗೂ, ಈ ಸಂಬಂಧದ ಮಸೂದೆ ಲೋಕಸಭೆಯಲ್ಲಿ ಮಂಡನೆಯಾಗಿದೆ. ಈ ಮಸೂದೆಯ ಮೂಲಕ ಕೇಂದ್ರ ಸರ್ಕಾರವು ಸಂವಿಧಾನಕ್ಕೆ ತಿದ್ದುಪಡಿ ಮಾಡಲು ಮುಂದಡಿ ಇಟ್ಟಿದೆ. ಲೋಕಸಭೆಯಲ್ಲಿ ಮಂಡಿಸಲಾಗಿರುವ ಮಸೂದೆಯಲ್ಲಿರುವ ಅಂಶಗಳನ್ನು ಇಲ್ಲಿ ನೀಡಲಾಗಿದೆ.

ದೇಶದಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವುದಕ್ಕಾಗಿ ಕೇಂದ್ರ ಸರ್ಕಾರವು ಭಾರತದ ಸಂವಿಧಾನಕ್ಕೆ ತಿದ್ದುಪಡಿ ತರುವ, ‘ಸಂವಿಧಾನ (129ನೇ ತಿದ್ದುಪಡಿ) ಮಸೂದೆ–2024’ ಅನ್ನು ಲೊಕಸಭೆಯಲ್ಲಿ ಮಂಗಳವಾರ ಮಂಡಿಸಿದೆ.

ಮಸೂದೆಯು ಸಂವಿಧಾನದ 82ನೇ ವಿಧಿಯ ನಂತರ ‘82ಎ’ ಎಂಬ ಹೊಸ ವಿಧಿಯನ್ನು ಸೇರ್ಪಡೆಗೊಳಿಸುವ ಬಗ್ಗೆ ಪ್ರಸ್ತಾಪಿಸುತ್ತದೆ. ಇದರ ಜೊತೆಗೆ, ಸಂವಿಧಾನದ 83ನೇ ವಿಧಿಯ ಪರಿಚ್ಛೇದ (2)ರ ನಂತರ ಹೊಸದಾಗಿ ಐದು ಪರಿಚ್ಛೇದಗಳನ್ನು (ಪರಿಚ್ಛೇದ (3), (4), (5) (6) ಮತ್ತು (7)) ಸೇರಿಸಲು ಮತ್ತು 172ನೇ ವಿಧಿಯ ಪರಿಚ್ಛೇದ (1)ರ ನಂತರ  ಉಪ ಪರಿಚ್ಛೇದ (1ಎ), ಪರಿಚ್ಛೇದ (2)ರ ನಂತರ ಹೊಸದಾಗಿ ಮೂರು ಪರಿಚ್ಛೇದಗಳನ್ನು ((ಪರಿಚ್ಛೇದ (3), (4) ಮತ್ತು (5)) ಸೇರ್ಪಡೆಗೊಳಿಸಲು ಮತ್ತು 327ನೇ ವಿಧಿಗೆ ಸಣ್ಣ ತಿದ್ದುಪಡಿ (‘ಕ್ಷೇತ್ರಗಳ ಪುನರ್‌ ವಿಂಗಡಣೆ’ ಎಂಬ ಪದಗಳ ನಂತರ ‘ಏಕಕಾಲಕ್ಕೆ ಚುನಾವಣೆ ನಡೆಸುವುದು’ ಎಂಬ ಪದಗಳನ್ನು ಸೇರಿಸಲು) ತರುವ ಬಗ್ಗೆ ಪ್ರಸ್ತಾಪಿಸುತ್ತದೆ. 

ಸಂವಿಧಾನದ 83ನೇ ವಿಧಿಯು ಸಂಸತ್ತಿನ ಸದನಗಳ ಅವಧಿಯ ಬಗ್ಗೆ ಹೇಳಿದರೆ, 172ನೇ ವಿಧಿಯು ರಾಜ್ಯ ವಿಧಾನಸಭೆಗಳ ಅವಧಿಯ ಕುರಿತಾಗಿ ವಿವರಿಸುತ್ತದೆ. 327ನೇ ವಿಧಿಯು ಶಾಸಕಾಂಗಗಳಿಗೆ ಚುನಾವಣೆ ನಡೆಸುವ ಸಂಬಂಧ ಸಂಸತ್ತಿಗೆ ಇರುವ ಅಧಿಕಾರದ ಬಗ್ಗೆ ತಿಳಿಸುತ್ತದೆ.

ADVERTISEMENT
ಪ್ರಸ್ತಾವಿತ ವಿಧಿ ‘82ಎ’ ಏನು ಹೇಳುತ್ತದೆ?
ಈ ವಿಧಿಯು ಲೋಕಸಭೆ ಮತ್ತು ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸುವ ಬಗ್ಗೆ ವಿವರಿಸುತ್ತದೆ. ಇದು ಏಳು ಪರಿಚ್ಛೇದಗಳನ್ನು ಒಳಗೊಂಡಿದೆ. ಮಸೂದೆ ಸಂಸತ್ತಿನಲ್ಲಿ ಅಂಗೀಕಾರಗೊಂಡು, ರಾಷ್ಟ್ರಪತಿ ಅವರ ಸಹಿ ಬಿದ್ದ ನಂತರ ಸಂವಿಧಾನದ 82ನೇ ವಿಧಿಯ ನಂತರ ಹೊಸ ‘82ಎ’ ವಿಧಿ ಸೇರ್ಪಡೆಗೊಳ್ಳಲಿದೆ.

ವಿಧಿ 82ಎ: ಲೋಕಸಭೆ ಮತ್ತು ಎಲ್ಲಾ ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ

ಪರಿಚ್ಛೇದ (1): ಸಾರ್ವತ್ರಿಕ ಚುನಾವಣೆಯ ನಂತರ ಲೋಕಸಭೆಯ ಮೊದಲ ಅಧಿವೇಶನದ ಆರಂಭದ ದಿನ ರಾಷ್ಟ್ರಪತಿ ಅವರು ಸಾರ್ವಜನಿಕ ಅಧಿಸೂಚನೆ ಹೊರಡಿಸುತ್ತಾರೆ. ಅಂದಿನಿಂದ ಈ ವಿಧಿಯ ನಿಯಮಗಳು ಜಾರಿಗೆ ಬರುತ್ತವೆ. ಅಧಿಸೂಚನೆ ಹೊರಡಿಸಿದ ದಿನವನ್ನು ಅನುಷ್ಠಾನ ದಿನ ಎಂದು ಕರೆಯಬೇಕು.

ಪರಿಚ್ಛೇದ (2): ಅನುಷ್ಠಾನ ದಿನದ ನಂತರ ಮತ್ತು ಲೋಕಸಭೆಯ ಅವಧಿ ಪೂರ್ಣಗೊಳ್ಳುವುದಕ್ಕೂ ಮೊದಲು ನಡೆದ ಚುನಾವಣೆಯ ಮೂಲಕ ಅಸ್ತಿತ್ವಕ್ಕೆ ಬಂದ ಎಲ್ಲಾ ವಿಧಾನಸಭೆಗಳ ಅವಧಿಯು ಲೋಕಸಭೆ ಅವಧಿ ಪೂರ್ಣಗೊಳ್ಳುವಾಗ ಕೊನೆಯಾಗಲಿದೆ.

ಪರಿಚ್ಛೇದ (3): ಲೋಕಸಭೆಯ ಅವಧಿ ಮುಕ್ತಾಯಗೊಳ್ಳುವುದಕ್ಕೂ ಮೊದಲು ಭಾರತೀಯ ಚುನಾವಣಾ ಆಯೋಗವು ಲೋಕಸಭೆ ಮತ್ತು ಎಲ್ಲ ರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸಬೇಕು. ಚುನಾವಣೆಗೆ ಸಂಬಂಧಿಸಿದ ಸಂವಿಧಾನದ 15ನೇ (XV) ಅಧ್ಯಾಯವನ್ನು ಈ ಚುನಾವಣೆಗೆ ಅನ್ವಯಿಸಬೇಕು. ಏನಾದರೂ ಬದಲಾವಣೆಗಳು ಅಗತ್ಯವಿದ್ದರೆ ಆಯೋಗವು ನಿರ್ದಿಷ್ಟ ಆದೇಶವನ್ನು ಹೊರಡಿಸಬೇಕು.

ಪರಿಚ್ಛೇದ (4): ವಿಧಿಯಲ್ಲಿ ಬರುವ ‘ಏಕಕಾಲಕ್ಕೆ ಚುನಾವಣೆ’ ಎಂದರೆ ಲೋಕಸಭೆ ಮತ್ತು ಎಲ್ಲಾ ವಿಧಾನಸಭೆಗಳ ರಚನೆಗಾಗಿ ನಡೆಯುವ ಸಾರ್ವತ್ರಿಕ ಚುನಾವಣೆ ಎಂದರ್ಥ.  

ಪರಿಚ್ಛೇದ (5): ಲೋಕಸಭೆಗೆ ನಡೆಯುವ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ಯಾವುದೇ ನಿರ್ದಿಷ್ಟ ವಿಧಾನಸಭೆಗೆ ಚುನಾವಣೆ ನಡೆಸಲು ಸಾಧ್ಯವಿಲ್ಲ ಎಂಬ ಅಭಿಪ್ರಾಯಕ್ಕೆ ಭಾರತೀಯ ಚುನಾವಣಾ ಆಯೋಗ ಬಂದಿದ್ದೇ ಆದಲ್ಲಿ, ಬೇರೊಂದು ದಿನ ಆ ವಿಧಾನಸಭೆಗೆ ಚುನಾವಣೆ ನಡೆಸುವ ಸಂಬಂಧ ಆದೇಶವೊಂದನ್ನು ಹೊರಡಿಸುವಂತೆ ರಾಷ್ಟ್ರಪತಿ ಅವರಿಗೆ ಶಿಫಾರಸು ಮಾಡಬಹುದು.

ಪರಿಚ್ಛೇದ (6): ಪರಿಚ್ಛೇದ (5)ರ ಅಡಿಯಲ್ಲಿ ವಿಧಾನಸಭೆಯ ಚುನಾವಣೆ ಮುಂದೂಡಿಕೆಯಾಗಿ, ನಂತರ ಅಲ್ಲಿ ಅಸ್ತಿತ್ವಕ್ಕೆ ಬಂದ ಹೊಸ ವಿಧಾನಸಭೆಯ ಅವಧಿಯು ಸಾರ್ವತ್ರಿಕ ಚುನಾವಣೆಯ ನಂತರ ರಚನೆಯಾದ ಲೋಕಸಭೆಯ ಅವಧಿ ಪೂರ್ಣಗೊಂಡ ದಿನದಂದೇ ಕೊನೆಗೊಳ್ಳುತ್ತದೆ. 

ಪರಿಚ್ಛೇದ (7): ಈ ವಿಧಿಯ ಪ್ರಕಾರ, ಚುನಾವಣಾ ಆಯೋಗವು ವಿಧಾನಸಭೆಗೆ ಚುನಾವಣೆ ಅಧಿಸೂಚನೆ ಹೊರಡಿಸುವಾಗಲೇ ಅದರ ಅವಧಿ ಯಾವಾಗ ಮುಕ್ತಾಯವಾಗುತ್ತದೆ ಎಂಬುದನ್ನೂ ಘೋಷಿಸಬೇಕು.

83ನೇ ವಿಧಿಗೆ ತಿದ್ದುಪಡಿ 
ವಿಧಿಯ 2ನೇ ಪರಿಚ್ಛೇದದ ನಂತರ ನಾಲ್ಕು ಹೊಸ ಪರಿಚ್ಛೇದಗಳ ಸೇರ್ಪಡೆ ಬಗ್ಗೆ ತಿದ್ದುಪಡಿ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.

ಪರಿಚ್ಛೇದ (3): ಸಾರ್ವತ್ರಿಕ ಚುನಾವಣೆಯ ನಂತರ ಅಸ್ತಿತ್ವಕ್ಕೆ ಬಂದ ಲೋಕಸಭೆಯ ಮೊದಲ ಅಧಿವೇಶನದ ಮೊದಲ ದಿನದಿಂದ ಮುಂದಿನ ಐದು ವರ್ಷಗಳವರೆಗಿನ ಅವಧಿಯನ್ನು ಲೋಕಸಭೆಯ ಪೂರ್ಣ ಅವಧಿ ಎಂದು ಪರಿಗಣಿಸಬೇಕು.

ಪರಿಚ್ಛೇದ (4): ಪೂರ್ಣಾವಧಿಗೂ ಮೊದಲೇ ಲೋಕಸಭೆ ವಿಸರ್ಜನೆಯಾದರೆ, ವಿಸರ್ಜನೆಯಾದ ದಿನದಿಂದ ಲೋಕಸಭೆಯ ಕೊನೆಯ ದಿನದವರೆಗಿನ ಅವಧಿಯನ್ನು ಆ ಲೋಕಸಭೆಯ ‘ಮುಗಿಯದ ಅವಧಿ’ (ಅಥವಾ ಬಾಕಿ ಉಳಿದಿರುವ ಅವಧಿ) ಎಂದು ಕರೆಯಬೇಕು.

ಪರಿಚ್ಛೇದ (5): ಲೋಕಸಭೆಯನ್ನು ಅವಧಿಗೂ ಮುನ್ನ ವಿಸರ್ಜನೆ ಮಾಡಿದ ಸಂದರ್ಭದಲ್ಲಿ, ಚುನಾವಣೆಯ ಮೂಲಕ ಅಸ್ತಿತ್ವಕ್ಕೆ ಬರಲಿರುವ ಹೊಸ ಲೋಕಸಭೆಯು ಹಿಂದಿನ ಲೋಕಸಭೆಯ ಮುಗಿಯದ ಅವಧಿಗೆ ಕಾರ್ಯನಿರ್ವಹಿಸುತ್ತದೆ. ಈ ಅವಧಿ ಮುಕ್ತಾಯವಾದರೆ ಸದನವು ವಿಸರ್ಜನೆಯಾದಂತೆ.

ಪರಿಚ್ಛೇದ (6): ಪರಿಚ್ಛೇದ (5)ರ ಅಡಿ ರಚನೆಯಾದ ಲೋಕಸಭೆಯು ಹಿಂದಿನ ಲೋಕಸಭೆಯ ಮುಂದುವರಿಕೆಯಲ್ಲ. ಪರಿಚ್ಛೇದ (4)ರಲ್ಲಿ ವಿವರಿಸಲಾದ ಸದನ ವಿಸರ್ಜನೆಗೆ ಸಂಬಂಧಿಸಿದ ಎಲ್ಲ ಸಾಧಕ ಬಾಧಕಗಳು ಈ ಲೋಕಸಭೆಗೂ ಅನ್ವಯವಾಗುತ್ತವೆ.

ಪರಿಚ್ಛೇದ (7): ಬಾಕಿ ಉಳಿದಿರುವ ಅವಧಿಗಾಗಿ ಲೋಕಸಭೆ ರಚಿಸಲು ನಡೆಸಲಾಗುವ ಚುನಾವಣೆಯನ್ನು ‘ಮಧ್ಯಂತರ ಚುನಾವಣೆ’ ಎಂದು ಕರೆಯಬೇಕು. ಪೂರ್ಣಾವಧಿ ಕೊನೆಗೊಂಡ ನಂತರ ನಡೆಯುವ ಚುನಾವಣೆಯನ್ನು ಸಾರ್ವತ್ರಿಕ ಚುನಾವಣೆ ಎಂದು ಕರೆಯಬೇಕು.

172ನೇ ವಿಧಿಗೆ ತಿದ್ದುಪಡಿ 
ವಿಧಿಯ (1)ನೇ ಪರಿಚ್ಛೇದದ ನಂತರ ಉಪ ಪರಿಚ್ಛೇದ (1ಎ) ಸೇರ್ಪಡೆ ಬಗ್ಗೆ ಮಸೂದೆ ಪ್ರಸ್ತಾಪಿಸುತ್ತದೆ.  

ಪರಿಚ್ಛೇದ (1ಎ): ರಾಜ್ಯ ವಿಧಾನಸಭೆಯ ಮೊದಲ ಅಧಿವೇಶನದ ಮೊದಲ ದಿನದಿಂದ ಮುಂದಿನ ಐದು ವರ್ಷಗಳನ್ನು ರಾಜ್ಯ ವಿಧಾನಸಭೆಯ ಪೂರ್ಣಾವಧಿ ಎಂದು ಕರೆಯಲಾಗುತ್ತದೆ. 

(2)ನೇ ಪರಿಚ್ಛೇದದ ನಂತರ ಮೂರು ಹೊಸ ಪರಿಚ್ಛೇದಗಳ ಸೇರ್ಪಡೆಯ ಬಗ್ಗೆಯೂ ಮಸೂದೆ ಪ್ರಸ್ತಾಪಿಸುತ್ತದೆ.

ಪರಿಚ್ಛೇದ (3): ಪೂರ್ಣಾವಧಿಗೂ ಮುನ್ನ ರಾಜ್ಯ ವಿಧಾನಸಭೆ ವಿಸರ್ಜನೆಯಾದರೆ, ವಿಸರ್ಜನೆಯಾದ ದಿನದಿಂದ ಆ ವಿಧಾನಸಭೆಯ ಕೊನೆಯ ದಿನದವರೆಗಿನ ಅವಧಿಯನ್ನು ‘ಮುಗಿಯದ ಅವಧಿ’ ಎಂದು ಕರೆಯಬೇಕು.

ಪರಿಚ್ಛೇದ (4): ವಿಧಾನಸಭೆಯನ್ನು ಅವಧಿಗೂ ಮುನ್ನ ವಿಸರ್ಜನೆ ಮಾಡಿದ ಸಂದರ್ಭದಲ್ಲಿ, ಚುನಾವಣೆಯ ಮೂಲಕ ಅಸ್ತಿತ್ವಕ್ಕೆ ಬರಲಿರುವ ಹೊಸ ವಿಧಾನಸಭೆಯು ಹಿಂದಿನ ವಿಧಾನಸಭೆಯ ಮುಗಿಯದ ಅವಧಿಗೆ ಕಾರ್ಯನಿರ್ವಹಿಸುತ್ತದೆ. ಈ ಅವಧಿ ಮುಕ್ತಾಯವಾದಾಗ ಹೊಸ ವಿಧಾನಸಭೆಯು ವಿಧಾನಸಭೆ ವಿಸರ್ಜನೆಯಾಯಿತು ಎಂದೇ ಪರಿಗಣಿಸಬೇಕು. 

ಪರಿಚ್ಛೇದ (5): ಪರಿಚ್ಛೇದ (4)ರ ಅಡಿ ರಚನೆಯಾದ ರಾಜ್ಯ ವಿಧಾನಸಭೆಯು ಹಿಂದಿನ ರಾಜ್ಯ ವಿಧಾನಸಭೆಯ ಮುಂದುವರಿಕೆಯಲ್ಲ. ಪರಿಚ್ಛೇದ (3)ರಲ್ಲಿ ಉಲ್ಲೇಖಿಸಲಾಗಿರುವ ಸದನದ ವಿಸರ್ಜನೆಗೆ ಸಂಬಂಧಿಸಿದ ಎಲ್ಲ ವಿವರಗಳು ಈ ವಿಧಾನಸಭೆ ಅನ್ವಯವಾಗುತ್ತವೆ.

ಮಸೂದೆಯ ಉದ್ದೇಶ ಮತ್ತು ಕಾರಣಗಳು

1. ಭಾರತದಲ್ಲಿ 1951–52, 1957, 1962, ಮತ್ತು 1967ರಲ್ಲಿ ಲೋಕಸಭೆಯ ಸಾರ್ವತ್ರಿಕ ಚುನಾವಣೆಗಳು ಮತ್ತು ಎಲ್ಲ ರಾಜ್ಯಗಳ ವಿಧಾನಸಭಾ ಚುನಾವಣೆಗಳು ಒಟ್ಟಿಗೇ ನಡೆದಿದ್ದವು. 1968 ಮತ್ತು 1969ರಲ್ಲಿ ಕೆಲವು ವಿಧಾನಸಭೆಗಳು ಅವಧಿಪೂರ್ವದಲ್ಲಿಯೇ ವಿಸರ್ಜನೆಗೊಂಡ ಕಾರಣದಿಂದ ಲೋಕಸಭೆ ಮತ್ತು ವಿಧಾನಸಭೆಗಳಿಗೆ ಒಟ್ಟಿಗೆ ಚುನಾವಣೆ ನಡೆಸುವ ಸಂಪ್ರದಾಯಕ್ಕೆ ತಡೆ ಬಿತ್ತು.  

ಭಾರತದ ಕಾನೂನು ಆಯೋಗವು ‘ಚುನಾವಣಾ ಕಾನೂನುಗಳ ಸುಧಾರಣೆ’ಗೆ ಸಂಬಂಧಿಸಿದ ತನ್ನ 170ನೇ ವರದಿಯಲ್ಲಿ ರಾಜ್ಯ ವಿಧಾನಸಭೆಗಳಿಗೆ ಪ್ರತ್ಯೇಕವಾಗಿ ಚುನಾವಣೆ ನಡೆಸುವುದು ಒಂದು ಅಪವಾದವಾಗಿರಬೇಕೇ ವಿನಾ ಅದೇ ನಿಯಮ ಆಗಬಾರದು ಎಂದಿತ್ತು. ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಕಾನೂನು ಹಾಗೂ ನ್ಯಾಯ ಇಲಾಖೆಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿಯು ತನ್ನ 79ನೇ ವರದಿಯಲ್ಲಿ ಆಗಾಗ್ಗೆ ಚುನಾವಣೆಗಳು ನಡೆಯುವುದನ್ನು ತಪ್ಪಿಸುವುದಕ್ಕಾಗಿ ಒಟ್ಟಿಗೆ ಚುನಾವಣೆ ನಡೆಸುವ ಅಗತ್ಯವಿದೆ ಎಂದಿತ್ತು. ಈ ದಿಸೆಯಲ್ಲಿ ಕೇಂದ್ರವು ಹಲವು ಕ್ರಮಗಳನ್ನು ಕೈಗೊಂಡಿತ್ತು.

2. ಚುನಾವಣೆಗಳನ್ನು ನಡೆಸುವುದು ದುಬಾರಿಯಾಗಿದ್ದು, ಬಹಳ ಸಮಯವನ್ನೂ ಬೇಡುತ್ತದೆ. ಚುನಾವಣೆ ನಡೆಯುವ ಪ್ರದೇಶಗಳಲ್ಲಿ ನೀತಿಸಂಹಿತೆ ಜಾರಿಗೊಳಿಸುವುದರಿಂದ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯುಂಟಾಗುತ್ತಿದೆ. ಜನಜೀವನಕ್ಕೆ ಅಡ್ಡಿಯುಂಟಾಗುವುದಲ್ಲದೇ, ಅವರನ್ನು ಜೀವನದ ಮುಖ್ಯ ಚಟುವಟಿಕೆಗಳಿಂದ ವಿಮುಖರನ್ನಾಗುವಂತೆ ಮಾಡುತ್ತದೆ.

3. ಒಟ್ಟಿಗೆ ಚುನಾವಣೆ ನಡೆಸುವ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲು ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ನೇತೃತ್ವದ ಉನ್ನತ ಮಟ್ಟದ ಸಮಿತಿಯನ್ನು 2023ರ ಸೆಪ್ಟೆಂಬರ್ 2ರಂದು ನೇಮಿಸಲಾಗಿತ್ತು. ಲಭ್ಯವಿದ್ದ ದಾಖಲೆಗಳನ್ನು ಪರಿಶೀಲಿಸಿ, ತಜ್ಞರೊಂದಿಗೆ ಸಮಾಲೋಚಿಸಿ ತಯಾರಿಸಿದ ವರದಿಯನ್ನು ಸಮಿತಿಯು 2024ರ ಮಾರ್ಚ್ 14ರಂದು ಸಲ್ಲಿಸಿತು.  ಕೋವಿಂದ್ ನೇತೃತ್ವದ ಉನ್ನತ ಸಮಿತಿಯು ತನ್ನ ವರದಿಯಲ್ಲಿ ಮೊದಲ ಹಂತವಾಗಿ ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಿಗೆ ಒಟ್ಟಿಗೆ ಚುನಾವಣೆ ನಡೆಸುವಂತೆ ಶಿಫಾರಸು ಮಾಡಿದೆ. ಆ ಶಿಫಾರಸು ಜಾರಿಗಾಗಿ ‘ಸಂವಿಧಾನ (129ನೇ ತಿದ್ದುಪಡಿ) ಮಸೂದೆ–2024’ ಮಂಡಿಸಬೇಕು ಎಂದು ಪ್ರತಿಪಾದಿಸಿತ್ತು.

ಮತ್ತೊಂದು ಮಸೂದೆ
ಸಂವಿಧಾನ ತಿದ್ದುಪಡಿ ಮಸೂದೆಗೆ ಪೂರಕವಾಗಿ ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದಂತೆ  ಕೇಂದ್ರಾಡಳಿತ ಪ್ರದೇಶಗಳ ಕಾಯ್ದೆಗಳ (ತಿದ್ದುಪಡಿ) ಮಸೂದೆ– 2024 ಅನ್ನೂ ಕೇಂದ್ರ ಸರ್ಕಾರ ಮಂಡಿಸಿದೆ. ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭೆಗಳಿಗೂ ಚುನಾವಣೆ ನಡೆಸಲು ಅನುವು ಮಾಡುವುದಕ್ಕಾಗಿ ಈ ಮಸೂದೆಯು 1963ರ ಕೇಂದ್ರಾಡಳಿತ ಪ್ರದೇಶಗಳ ಸರ್ಕಾರ ಕಾಯ್ದೆ, ದೆಹಲಿಯ ರಾಷ್ಟ್ರ ರಾಜಧಾನಿ ಪ್ರದೇಶದ ಸರ್ಕಾರ ಕಾಯ್ದೆ– 1991 ಮತ್ತು ಜಮ್ಮು ಮತ್ತು ಕಾಶ್ಮೀರ ಪುನರ್‌ರಚನೆ ಕಾಯ್ದೆ– 2019ಕ್ಕೆ ತಿದ್ದುಪಡಿ ಮಾಡಲು ಪ್ರಸ್ತಾಪಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.