
ಪೆಡ್ಲರ್‌ಗಳಿಂದ ಜಪ್ತಿ ಮಾಡಲಾಗಿದ್ದ ವಿವಿಧ ಮಾದರಿಯ ಡ್ರಗ್ಸ್ ಅನ್ನು ದಾಬಸ್‌ಪೇಟೆಯ ಕೈಗಾರಿಕಾ ಪ್ರದೇಶದ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ನಾಶ ಪಡಿಸಲಾಗಿತ್ತು
ದೇಶದ ಈಶಾನ್ಯ ರಾಜ್ಯಗಳು ಮತ್ತು ಉತ್ತರದ ಕೆಲವು ರಾಜ್ಯಗಳಂತೆ ಕರ್ನಾಟಕದಲ್ಲಿಯೂ ಮಾದಕ ವಸ್ತುಗಳ ಬಳಕೆ, ಸಂಗ್ರಹ ಮತ್ತು ಕಳ್ಳಸಾಗಣೆ ವ್ಯಾಪಕವಾಗಿದೆ. ರಾಜ್ಯದಲ್ಲಿ ಮಾದಕ ದ್ರವ್ಯಗಳ ತಯಾರಿಕೆ, ಕೃಷಿ, ಸಂಗ್ರಹ, ಮಾರಾಟ, ವ್ಯಾಪಾರ, ಸಾಗಣೆ, ರಫ್ತು, ಆಮದು ಮತ್ತು ಬಳಕೆ ಸಂಬಂಧದ ‘ಮಾದಕ ವಸ್ತುಗಳು ಮತ್ತು ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ’ (ಎನ್‌ಡಿಪಿಎಸ್) ಅಡಿ ದಾಖಲಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಇವುಗಳಲ್ಲಿ ಡ್ರಗ್ಸ್ ಸೇವನೆ ಮತ್ತು ಸಂಗ್ರಹಕ್ಕೆ ಸಂಬಂಧಿಸಿದ ಪ್ರಕರಣಗಳೇ ಅಧಿಕವಾಗಿವೆ.
ಮಾದಕ ವಸ್ತುಗಳ ಬಳಕೆಯು ಯುವಕ, ಯುವತಿಯರಲ್ಲಿ ಹೆಚ್ಚಾಗುತ್ತಿದೆ. ‘ಥ್ರಿಲ್’ನ ಬಯಕೆ, ಮೋಜು ಮಾಡುವ ಸಂಸ್ಕೃತಿ, ಒತ್ತಡ ಮುಂತಾದ ಕಾರಣಗಳಿಂದ ಮಾದಕ ವಸ್ತುಗಳನ್ನು ಬಳಸುವವರು ಹೆಚ್ಚಾಗುತ್ತಿದ್ದಾರೆ. ಶ್ರೀಮಂತರ ಮಕ್ಕಳು, ಸಿನಿಮಾ ಮಂದಿ, ಸೆಲಬ್ರಿಟಿಗಳು ಮಾದಕ ಪದಾರ್ಥ ಬಳಕೆದಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಗಾಂಜಾ ಸೇದುವ ಪ್ರವೃತ್ತಿಯು ಯುವಕರಲ್ಲಿ ಕಂಡುಬಂದಿದೆ. ವ್ಯಸನಕ್ಕೆ ಸಿಲುಕಿ ಕೆಲವು ಯುವಕ, ಯುವತಿಯರ ಭವಿಷ್ಯವೇ ಮುರುಟಿಹೋಗಿದೆ. ಡ್ರಗ್ಸ್ ದಂಧೆಯಲ್ಲಿ ಕೋಟ್ಯಂತರ ರೂಪಾಯಿ ಹಣದ ವಹಿವಾಟು ನಡೆಯುತ್ತಿದೆ. ಅನಕ್ಷರಸ್ಥರು, ಬಡ ಯುವಕರಿಗೆ ಹಣದ ಆಮಿಷ ಒಡ್ಡಿ ಡ್ರಗ್ಸ್ ದಂಧೆಗೆ ಎಳೆಯಲಾಗುತ್ತಿದೆ.
ರಾಜ್ಯದಲ್ಲಿ ಬೆಂಗಳೂರು ಮಾದಕ ವಸ್ತುಗಳ ಬಳಕೆಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಮಂಗಳೂರು ಎರಡನೇ ಸ್ಥಾನದಲ್ಲಿದೆ. ಮೈಸೂರು ಮತ್ತಿತರ ನಗರಗಳಲ್ಲಿಯೂ ಡ್ರಗ್ಸ್ ಸಂಸ್ಕೃತಿ ಗಮನಾರ್ಹ ಪ್ರಮಾಣದಲ್ಲಿದೆ.
ರಾಜ್ಯದಲ್ಲೇ ಡ್ರಗ್ಸ್ ಫ್ಯಾಕ್ಟರಿ: ರಾಜ್ಯಕ್ಕೆ ದೇಶ–ವಿದೇಶಗಳಿಂದ ಮಾದಕ ವಸ್ತುಗಳು ಕಳ್ಳಸಾಗಣೆ ಆಗುತ್ತಿವೆ. ಇದರ ಜತೆಗೆ, ರಾಜ್ಯದಲ್ಲಿಯೂ ಡ್ರಗ್ಸ್ ತಯಾರಿಕೆ ಮಾಡುತ್ತಿದ್ದ ಪ್ರಕರಣಗಳು ಪತ್ತೆಯಾಗಿವೆ. ಮೆಫಡ್ರೊನ್ ತಯಾರಿಕಾ ಜಾಲವು ಮೈಸೂರಿನಲ್ಲಿ ಕಳೆದ ಜುಲೈನಲ್ಲಿ ಪತ್ತೆಯಾಗಿತ್ತು. ಜಾಲವನ್ನು ಭೇದಿಸಿದ್ದ ಮಹಾರಾಷ್ಟ್ರದ ಮಾದಕವಸ್ತು ನಿಗ್ರಹ ಪಡೆಯು (ಎಎನ್‌ಸಿ) ₹382 ಕೋಟಿ ಮೌಲ್ಯದ ನಿಷೇಧಿತ ಪದಾರ್ಥಗಳನ್ನು ವಶಪಡಿಸಿಕೊಂಡಿತ್ತು. ಎಎನ್‌ಸಿಯು ಇತ್ತೀಚೆಗೆ ಬೆಂಗಳೂರಿನಲ್ಲಿ ಮಾದಕ ವಸ್ತುಗಳನ್ನು ತಯಾರಿಸುವ ಎರಡು ಫ್ಯಾಕ್ಟರಿಗಳನ್ನು ಪತ್ತೆ ಹಚ್ಚಿ, 55.58 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿತ್ತು.
ಯುವಜನರೇ ಗ್ರಾಹಕರು
ಯುವಸಮುದಾಯ ಅದರಲ್ಲೂ ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡು ದಂಧೆ ನಡೆಯುತ್ತಿದೆ. ಪೆಡ್ಲರ್‌ಗಳು ವಿದ್ಯಾರ್ಥಿಗಳನ್ನೇ ಮಧ್ಯವರ್ತಿಗಳನ್ನಾಗಿ ಮಾಡಿಕೊಂಡು ತಮ್ಮ ಜಾಲವನ್ನು ವಿಸ್ತರಿಸಿಕೊಳ್ಳುತ್ತಿದ್ದಾರೆ. ಹುಬ್ಬಳ್ಳಿ–ಧಾರವಾಡದ ಪೊಲೀಸರು 2025ರಲ್ಲಿ 3,800ಕ್ಕೂ ಹೆಚ್ಚು ಶಂಕಿತರನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು. ಈ ಪೈಕಿ 1,419 ಮಂದಿ ಡ್ರಗ್ಸ್ ಸೇವನೆ ಮಾಡಿದ್ದು ದೃಢಪಟ್ಟಿತ್ತು. ಇವರಲ್ಲಿ ಶೇ 80ರಷ್ಟು ಮಂದಿ ಯುವಜನರೇ ಆಗಿದ್ದರು. ಮೈಸೂರಿನಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಸುಲಭವಾಗಿ ಗಾಂಜಾ ಸೇರಿದಂತೆ ಇನ್ನಿತರ ಡ್ರಗ್ಸ್ ಸಿಗುತ್ತಿವೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಉಡುಪಿ ಜಿಲ್ಲೆಯ ವಿವಿಧ ಉನ್ನತ ಹಾಗೂ ವೃತ್ತಿ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳು ಬಹಳ ಸುಲಭವಾಗಿ ಸಿಗುತ್ತಿವೆ. ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಡ್ರಗ್ಸ್ ವಿರೋಧಿ ಆಂದೋಲನದಲ್ಲಿ ಮಾತನಾಡಿದ್ದ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್‌ಕುಮಾರ್ ರೆಡ್ಡಿ, ನಾವು ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ವಿವಿಧ ಕೋರ್ಸ್‌ಗಳ ಹಲವು ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಿದಾಗ, ಅವರು ಡ್ರಗ್ಸ್ ತೆಗೆದುಕೊಂಡಿದ್ದು ದೃಢಪಟ್ಟಿತ್ತು ಎಂದು ಹೇಳಿದ್ದರು.
ಕೊಡಗು ಜಿಲ್ಲೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಮಾತ್ರವಲ್ಲ; ಶಾಲಾ ವಿದ್ಯಾರ್ಥಿಗಳು ಸಹ ಈಗ ಈ ಚಟಕ್ಕೆ ಒಳಗಾಗಿದ್ದಾರೆ ಎಂಬ ಆತಂಕವನ್ನು ಜನಸಾಮಾನ್ಯರು ವ್ಯಕ್ತಪಡಿಸುತ್ತಿದ್ದಾರೆ. ಇವುಗಳಿಗೆ ‘ನಶೆಪುಡಿ’ ಎಂಬ ಕೋಡ್ ವರ್ಡ್ ವಿದ್ಯಾರ್ಥಿಗಳೇ ಸೃಷ್ಟಿಸಿಕೊಂಡಿದ್ದು ವರದಿಯಾಗಿದೆ.
ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕಾಲೇಜುಗಳು ಹೆಚ್ಚಿರುವ ತುಮಕೂರಿನಲ್ಲಿ ಡ್ರಗ್ಸ್ ಪೆಡ್ಲರ್‌ಗಳು ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಕೊಂಡು ಮಾದಕ ವಸ್ತು ಮಾರಾಟದಲ್ಲಿ ತೊಡಗಿಸಿಕೊಂಡಿ ದ್ದಾರೆ.
ಪ್ರವಾಸಿಗರಿಗೂ ಪೂರೈಕೆ
ಕೊಪ್ಪಳ ಜಿಲ್ಲೆಯ ತುಂಗಭದ್ರಾ ನದಿಯ ಅಂಚಿನಲ್ಲಿರುವ ರೆಸಾರ್ಟ್ ಹಾಗೂ ಹೋಂ ಸ್ಟೇಗಳಲ್ಲಿ ಮಾದಕ ದ್ರವ್ಯಗಳ ಪೂರೈಕೆ, ಸೇವನೆ ನಡೆಯುತ್ತಿದೆ. 2025ರಲ್ಲಿ ಮೇನಲ್ಲಿ ಥಾಯ್ಲೆಂಡ್‌ನಿಂದ ತರಿಸಿ ಹೈದರಾಬಾದ್ ಮಾರ್ಗದ ಮೂಲಕ ಹೈಡ್ರೊ ಗಾಂಜಾ ಮಾರಾಟ ಮಾಡಲು ಕಾರಿನಲ್ಲಿ ತೆಗೆದುಕೊಂಡು ಹೋಗುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಬಿಇ ಪದವೀಧರ, ಬಿಕಾಂ ಹೀಗೆ ಉತ್ತಮ ಓದಿನ ಹಿನ್ನೆಲೆ ಹೊಂದಿರುವ ಕೇರಳದ ಕಣ್ಣೂರಿನ ಮೂವರು ಮತ್ತು ಬಳ್ಳಾರಿಯ ಐದು ಜನರನ್ನು ಬಂಧಿಸಿ ₹18.06 ಲಕ್ಷ ಮೌಲ್ಯದ 1,806 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿತ್ತು.
ವಿದೇಶಿ ಪೆಡ್ಲರ್‌ಗಳು ಸಕ್ರಿಯ
ರಾಜಧಾನಿ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಸ್ಥಳೀಯರೊಂದಿಗೆ ವಿದೇಶಿಯರು ಕೂಡ ಡ್ರಗ್ಸ್ ಮಾರಾಟ ದಂಧೆಯಲ್ಲಿ ತೊಡಗಿದ್ದಾರೆ.
ಬೆಂಗಳೂರಿನಲ್ಲಿ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ 62 ವಿದೇಶಿ ಪ್ರಜೆಗಳನ್ನು 2025ರಲ್ಲಿ ಬಂಧಿಸಲಾಗಿದೆ. 2023ರಲ್ಲಿ 101 ಹಾಗೂ 2024ರಲ್ಲಿ 61 ವಿದೇಶಿ ಪ್ರಜೆಗಳನ್ನು ಬಂಧಿಸಲಾಗಿತ್ತು. ಶಿಕ್ಷಣ ಹಾಗೂ ಪ್ರವಾಸಿ ವೀಸಾದ ಮೇಲೆ ನಗರಕ್ಕೆ ಬಂದು, ಅವಧಿ ಮುಕ್ತಾಯವಾದ ಮೇಲೂ ನಗರದಲ್ಲಿಯೇ ನೆಲಸಿ ಅಕ್ರಮ ಚಟುವಟಿಕೆಯಲ್ಲಿ ತೊಡಗುತ್ತಿದ್ದಾರೆ ಎಂದು ಹೇಳುತ್ತವೆ ಎಂದು ಸಿಸಿಬಿ ಮೂಲಗಳು. ಪೆಡ್ಲರ್‌ಗಳಲ್ಲಿ ದಕ್ಷಿಣ ಆಫ್ರಿಕಾ, ನೈಜೀರಿಯಾ ಸೇರಿದಂತೆ ಆಫ್ರಿಕಾ ಖಂಡಕ್ಕೆ ಸೇರಿದ ದೇಶದವರೇ ಹೆಚ್ಚಿಸಿದ್ದಾರೆ.
ಡ್ರಗ್ಸ್ ದಂಧೆ ಹರಡಲು ಕಾರಣ
* ನಶೆಯ ಮೇಲೆ ಹೆಚ್ಚಿದ ಯುವಜನರ ಆಸಕ್ತಿ
* ಡ್ರಗ್ಸ್ ವ್ಯವಹಾರದಲ್ಲಿ ದೊಡ್ಡ ಮಟ್ಟದಲ್ಲಿ ಹಣದ ಹರಿವು ಇರುವುದು
* ನಿರುದ್ಯೋಗ, ಬಡತನ, ಮೋಜು–ಮಸ್ತಿಯ ಗೀಳು ಇರುವ ಯುವಕರು ಹಣಕ್ಕಾಗಿ ಸುಲಭವಾಗಿ ಈ ದಂಧೆಗೆ ಬೇರೆಯವರನ್ನು ಸೆಳೆಯುತ್ತಿರುವುದು
ಗ್ರಾಮೀಣ ಭಾಗಗಳಲ್ಲಿ ಗಾಂಜಾ ‘ಘಾಟು’
ನಗರಗಳಿಗೆ ಹೋಲಿಸಿದರೆ ನೈಸರ್ಗಿಕವಾಗಿ ದೊರೆಯುವ ಗಾಂಜಾದ ಬಳಕೆ ಪಟ್ಟಣ, ತಾಲ್ಲೂಕು ಕೇಂದ್ರ ಹಾಗೂ ಗ್ರಾಮೀಣ ಭಾಗಗಳಲ್ಲಿ ಹೆಚ್ಚಿದೆ. ರಾಜ್ಯದ ಉತ್ತರ ಕನ್ನಡ, ಚಾಮರಾಜನಗರ, ದಕ್ಷಿಣ ಕನ್ನಡ ಜಿಲ್ಲೆಗಳ ದಟ್ಟ ಅರಣ್ಯ ಪ್ರದೇಶಗಳಲ್ಲಿ ಅರಣ್ಯ ಇಲಾಖೆಯ ಕಣ್ಣುತಪ್ಪಿಸಿ ಗಾಂಜಾ ಬೆಳೆಯಲಾಗುತ್ತಿದೆ. ಸ್ಥಳೀಯರೇ ಇವುಗಳನ್ನು ಬೆಳೆದು ಏಜೆಂಟರ ಮೂಲಕ ಹೊರಗಡೆಗೆ ಪೂರೈಸುತ್ತಾರೆ. ಹೊರ ರಾಜ್ಯಗಳಿಂದಲೂ ಗಾಂಜಾ ದೊಡ್ಡ ಪ್ರಮಾಣದಲ್ಲಿ ರಾಜ್ಯಕ್ಕೆ ಬರುತ್ತಿದೆ. ಮಹಾನಗರಗಳು ಹಾಗೂ ವಾಣಿಜ್ಯ ಚಟುವಟಿಕೆ ಜಾಸ್ತಿ ನಡೆಯುವ, ಸಿರಿತನ ಹೆಚ್ಚಿರುವ ನಗರ, ಪಟ್ಟಣಗಳಲ್ಲಿ ಗಾಂಜಾದ ಹಾವಳಿ ಸ್ವಲ್ಪ ಕಡಿಮೆ ಇದ್ದು, ಸಿಂಥೆಟಿಕ್, ಅರೆಸಿಂಥೆಟಿಕ್ ಡ್ರಗ್ಸ್‌ಗಳ ಬಳಕೆ ವ್ಯಾಪಕವಾಗಿದೆ.
2020ರ ಸೆಪ್ಟೆಂಬರ್‌ನಲ್ಲಿ ಕಲಬುರಗಿ ಜಿಲ್ಲೆಯ ಕಾಳಗಿ ತಾಲ್ಲೂಕಿನ ಲಕ್ಷ್ಮಣ ನಾಯಕ ತಾಂಡಾದಲ್ಲಿ 1,352 ಕಿಲೋ ಗಾಂಜಾವನ್ನು ಕುರಿ ಶೆಡ್‌ನ ಆಳದ ಬಂಕರ್‌ನಲ್ಲಿ ಬೆಂಗಳೂರು ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಳ್ಳುವ ಮೂಲಕ ಭಾರಿ ಪ್ರಮಾಣದ ಜಾಲವನ್ನು ಬಯಲಿಗೆಳೆದಿದ್ದರು. ಬೀದರ್ ಮೂಲಕ ಕಲಬುರಗಿ, ಯಾದಗಿರಿ ಸೇರಿದಂತೆ ಇತರೆ ಜಿಲ್ಲೆಗಳಿಗೆ ಗಾಂಜಾ ಪೂರೈಕೆ ಆಗುತ್ತಲೇ ಇದೆ. ಬೀದರ್ ಜಿಲ್ಲೆಯ ಗಡಿ ಹೊಂದಿಕೊಂಡಂತಿರುವ ಮಹಾರಾಷ್ಟ್ರ ಗಡಿಯಲ್ಲಿ ಯಥೇಚ್ಛವಾಗಿ ಗಾಂಜಾ ಬೆಳೆಯುತ್ತಾರೆ. ಇದನ್ನು ತಡೆಯಲೆಂದು ಹೋಗಿದ್ದ ಕಲಬುರಗಿ ಗ್ರಾಮೀಣ ಠಾಣೆಯ ಸರ್ಕಲ್ ಪೊಲೀಸ್ ಇನ್‌ಸ್ಪೆಕ್ಟರ್ ಮೇಲೆ ದಂಧೆಕೋರರು ಭಾರಿ ಹಲ್ಲೆ ನಡೆಸಿದ್ದರು.
ರೈಲುಗಳಲ್ಲೂ ಸಾಗಾಟ
ರೈಕುಗಳಲ್ಲೂ ಮಾದಕ ವಸ್ತುಗಳ ಕಳ್ಳ ಸಾಗಣೆ ಅವ್ಯಾಹತವಾಗಿ ನಡೆಯುತ್ತಿದೆ. ನೈರುತ್ಯ ರೈಲ್ವೆ ವಲಯದ ವ್ಯಾಪ್ತಿಗೆ ಬರುವ ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿ ವಿಭಾಗದ ಅಧಿಕಾರಿಗಳು 2025ರಲ್ಲಿ ನವೆಂಬರ್ ಅಂತ್ಯದವರೆಗೆ ₹6.70 ಕೋಟಿ ಮೌಲ್ಯದ 914 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದಾರೆ. ಇದರಲ್ಲಿ ₹4.88 ಕೋಟಿ ಮೌಲ್ಯದ ಗಾಂಜಾವನ್ನು ರಾಜಧಾನಿ ಬೆಂಗಳೂರು ಹಾಗೂ ಸುತ್ತಮುತ್ತ ಜಪ್ತಿ ಮಾಡಲಾಗಿದೆ.
2023, 2024 ಮತ್ತು 2025ರ ನವೆಂಬರ್ ಅಂತ್ಯದವರೆಗೆ ನೈರುತ್ಯ ರೈಲ್ವೆ ಇಲಾಖೆ ಒಟ್ಟು ₹34 ಕೋಟಿ ಮೌಲ್ಯದ 3.82 ಟನ್ ಗಾಂಜಾ ವಶಪಡಿಸಿಕೊಂಡಿದೆ. ಮೂರು ವರ್ಷಗಳಲ್ಲಿ 136 ಮಂದಿಯನ್ನು ಬಂಧಿಸಿರುವ ರೈಲ್ವೆ ಪೊಲೀಸರು, 212 ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಉತ್ತರ ಕರ್ನಾಟಕ ಭಾಗಕ್ಕೆ ಹುಬ್ಬಳ್ಳಿ ಕೇಂದ್ರ ಸ್ಥಾನವಾಗಿರುವುದರಿಂದ, ಸಾರಿಗೆ ಮತ್ತು ರೈಲು ಸಂಪರ್ಕ ಸುಲಭವಾಗಿದೆ. ಹೀಗಾಗಿ ಒಡಿಶಾ, ಉತ್ತರ ಪ್ರದೇಶ, ಅಸ್ಸಾಂ, ಮಹಾರಾಷ್ಟ್ರ, ರಾಜಸ್ಥಾನ ಭಾಗದಿಂದ ಹುಬ್ಬಳ್ಳಿಗೆ ಮಾದಕ ವಸ್ತುಗಳು ಎಕ್ಸ್‌ಪ್ರೆಸ್ ರೈಲು, ಪ್ಯಾಸೆಂಜರ್ ರೈಲುಗಳಲ್ಲಿ ಒಂದು ಸ್ಟೇಷನ್‌ನಿಂದ ಮತ್ತೊಂದು ಸ್ಟೇಷನ್‌ಗೆ ಸುಲಭವಾಗಿ ಸಾಗಾಟವಾಗುತ್ತವೆ. ರೈಲು ಮಾರ್ಗದ ಕೆಲವು ಕಡೆ ರಸ್ತೆಗಳ ಸಂಪರ್ಕವಿದ್ದು, ಕ್ರಾಸಿಂಗ್ ಸಂದರ್ಭ ರೈಲು ನಿಂತಾಗ ಮಾದಕ ವಸ್ತುಗಳ ಸಾಗಾಟ ನಡೆಯುತ್ತದೆ. ಇಲ್ಲಿಂದ ಮಧ್ಯವರ್ತಿಗಳ ಮೂಲಕ ನಗರ, ಜಿಲ್ಲಾ ಕೇಂದ್ರ, ವಿದೇಶಿಗರು ಹೆಚ್ಚಿರುವ ಗೋಕರ್ಣ ಹಾಗೂ ಕರಾವಳಿ ಭಾಗಕ್ಕೆ ಸಾಗಾಟವಾಗುತ್ತದೆ.
ಹೊರರಾಜ್ಯಗಳಿಂದ ಪೂರೈಕೆ
ರಾಜ್ಯದ ಹಲವು ಕಡೆಗಳಿಗೆ ಮಾದಕ ವಸ್ತುಗಳು ಹೊರ ರಾಜ್ಯಗಳಿಂದ ಪೂರೈಕೆಯಾಗುತ್ತಿವೆ. ರಾಜ್ಯದ ಗಡಿ ಭಾಗಗಳಲ್ಲಿ ಕಳ್ಳ ದಾರಿಯ ಮೂಲಕ, ರೈಲುಗಳ ಮೂಲಕ ಪೊಲೀಸರ ಕಣ್ಣು ತಪ್ಪಿಸಿ ವಿವಿಧ ಡ್ರಗ್ಸ್‌ಗಳು ರಾಜ್ಯವನ್ನು ಸೇರುತ್ತಿದೆ. ಗೋವಾ, ಮಹಾರಾಷ್ಟ್ರ, ರಾಜಸ್ಥಾನ, ಗುಜರಾತ್, ಕೇರಳ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಒಡಿಶಾ, ಛತ್ತೀಸಗಢ, ಅಸ್ಸಾಂ ಸೇರಿದಂತೆ ವಿವಿಧ ರಾಜ್ಯಗಳಿಂದ ಬರುವ ಕಾರ್ಮಿಕರು, ಪೆಡ್ಲರ್‌ಗಳು ರಾಜ್ಯದಲ್ಲಿ ಡ್ರಗ್ಸ್ ಮಾರಾಟದಲ್ಲಿ ತೊಡಗಿರುವುದು ಹಲವು ಪ್ರಕರಣಗಳಲ್ಲಿ ತನಿಖೆಯಿಂದ ದೃಢಪಟ್ಟಿದೆ.
ಗಡಿ ಜಿಲ್ಲೆ ಕೋಲಾರದ ಕೈಗಾರಿಕಾ ಪ್ರದೇಶಗಳಿಗೆ ಉತ್ತರ ಭಾರತದ ವಿವಿಧ ರಾಜ್ಯಗಳಿಂದ ಡ್ರಗ್ಸ್ ಪೂರೈಕೆಯಾಗುತ್ತಿದೆ. ಅಲ್ಲಿಂದ ಬಂದು ಇಲ್ಲಿನ ಕಾರ್ಖಾನೆ, ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಕೆಲ ಕಾರ್ಮಿಕರು ಡ್ರಗ್ಸ್ ಮಾರಾಟ ಮಾಡುತ್ತಿದ್ದಾರೆ. ಹೊರರಾಜ್ಯದ ಕಾರ್ಮಿಕರು ತಮ್ಮ ಊರುಗಳಿಂದ ಖಾಸಗಿ ಟ್ರಾವೆಲ್ಸ್‌ಗಳ ಮೂಲಕ ಗಾಂಜಾ ಪಾರ್ಸೆಲ್ ತರಿಸಿಕೊಳ್ಳುತ್ತಾರೆ. ಫೋನ್ ಪೇ ಮೂಲಕ ಹಣ ಪಾವತಿಸುತ್ತಾರೆ. ಫ್ಲಿಪ್‌ಕಾರ್ಟ್, ಅಮೆಜಾನ್‌ನಲ್ಲಿ ಬರುವ ಪೊಟ್ಟಣಗಳ ಮಾದರಿಯಲ್ಲಿ ಆ ಪೊಟ್ಟಣ ಇರುತ್ತದೆ. ಹೀಗಾಗಿ, ಯಾರಿಗೂ ಅನುಮಾನ ಬರುವುದಿಲ್ಲ
ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡ ಬೆಳಗಾವಿ ಜಿಲ್ಲೆಗೆ ಈ ಎರಡೂ ರಾಜ್ಯಗಳಿಂದ ಮಾದಕ ವಸ್ತುಗಳು ಪೂರೈಕೆಯಾಗುತ್ತವೆ. ಈ ಎರಡೂ ರಾಜ್ಯಗಳು ಪ್ರವಾಸೋದ್ಯಮಕ್ಕೆ ಹೆಸರಾಗಿವೆ. ದೇಶದ ಬೇರೆಬೇರೆ ಭಾಗಗಳಿಂದ ಪ್ರವಾಸಿಗರ ನೆಪದಲ್ಲಿ ಬರುವ ಕೆಲವರು ಈ ಡ್ರಗ್ಸ್ ದಂಧೆ ನಡೆಸುತ್ತಿದ್ದಾರೆ. ಚರಸ್, ಕೊಕೇನ್, ಅಫೀಮ್‌ನಂಥ ಮಾದಕ ವಸ್ತುಗಳ ಮೂಲ ಮುಂಬೈ. ಅಲ್ಲಿ ಖರೀದಿಸುವ ಡ್ರಗ್ಸ್ ಗೋವಾಗೆ ರವಾನೆಯಾಗುತ್ತದೆ. ಗೋವಾದ ಬೀಚ್‌ಗಳಿಗೆ ಬರುವ ಪ್ರವಾಸಿಗರೇ ಗ್ರಾಹಕರು. ಹೀಗೆ ಅಂತರರಾಜ್ಯಗಳಿಗೆ ಸರಬರಾಜು ಮಾಡುವವರೇ ಬೆಳಗಾವಿಯಲ್ಲಿಯೂ ಏಜೆಂಟರ ಮೂಲಕ ವ್ಯಾಪಾರ ಮಾಡುತ್ತಾರೆ. ಕಾಲೇಜು ಕ್ಯಾಂಪಸ್‌ಗಳು, ದಾಬಾಗಳು, ಪಬ್‌ಗಳಲ್ಲಿ ಇದರ ಬಳಕೆ ನಡೆದಿದೆ. ನಗರದಲ್ಲಿ ಚಿಲ್ಲರೆ ಡ್ರಗ್ಸ್ ಮಾರಾಟವಾಗುತ್ತದೆ.
––––––––––––
ಪೊಲೀಸ್ ಅಧಿಕಾರಿಗಳು ಹೇಳುವುದೇನು?
ಮಾದಕ ದ್ರವ್ಯ ವಿರೋಧಿ ಕಾರ್ಯಪಡೆಗೆ (ಎಎನ್‌ಟಿಎಫ್) ಮುಖ್ಯಸ್ಥರ ನೇಮಕ ಆಗಿರಲಿಲ್ಲ. ಡಿ.31ರಂದು ಮುಖ್ಯಸ್ಥರನ್ನು ನೇಮಿಸಲಾಗಿದೆ. ಈ ವರ್ಷ ಡ್ರಗ್ಸ್ ವಿರುದ್ಧ ಸಮರ ಸಾರಿದ್ದೇವೆ. ಡ್ರಗ್ಸ್ ಪೆಡ್ಲರ್‌ಗಳ ವಿರುದ್ಧ ತ್ವರಿತವಾಗಿ ಕ್ರಮ ತೆಗೆದುಕೊಳ್ಳವಂತೆಯೂ ಎಲ್ಲ ಪೊಲೀಸ್ ಅಧಿಕಾರಿಗಳಿಗೂ ಸೂಚಿಸಲಾಗಿದೆ–ಡಾ.ಎಂ.ಎ.ಸಲೀಂ, ರಾಜ್ಯ ಪೊಲೀಸ್ ಮಹಾನಿರ್ದೇಶಕ
ಇತ್ತೀಚೆಗೆ ಎಂಡಿಎಂಎನಂತಹ ಕೃತಕ ಡ್ರಗ್ ಹಾವಳಿ ಜಾಸ್ತಿ ಆಗುತ್ತಿದೆ. ಕರಾವಳಿಯಲ್ಲಿ ಇದುವರೆಗೆ ಕೃತಕ ಡ್ರಗ್ ತಯಾರಿಸಿದ ಪ್ರಕರಣ ವರದಿಯಾಗಿಲ್ಲ. ಇಂತಹ ಡ್ರಗ್ ಹೆಚ್ಚಾಗಿ ಮುಂಬೈ ಹಾಗೂ ಬೆಂಗಳೂರಿನಿಂದ ಇಲ್ಲಿಗೆ ಪೂರೈಕೆ ಆಗುತ್ತಿದೆ. ಕೇರಳದ ಗಡಿ ಭಾಗದ ಮೂಲಕವೂ ಮಾದಕ ಪದಾರ್ಥ ಕಳ್ಳಸಾಗಣೆಯಾಗುತ್ತಿದೆ. ಡ್ರಗ್ ಕಳ್ಳಸಾಗಣೆ ಮತ್ತು ಮಾರಾಟಕ್ಕೆ ಸಂಬಂಧಿಸಿ ಎರಡು ದಿನಕ್ಕೆ ಒಂದು ಪ್ರಕರಣವನ್ನಾದರೂ ಭೇದಿಸುತ್ತಿದ್ದೇವೆ.–ಸುಧೀರ್ ಕುಮಾರ್ ರೆಡ್ಡಿ ಸಿ.ಎಚ್.,ಮಂಗಳೂರು ಪೊಲೀಸ್ ಕಮಿಷನರ್
ರಾಜ್ಯದ ಬಟ್ಟೆ ಅಂಗಡಿಗಳಲ್ಲಿ ಕೆಲಸ ಮಾಡುವ ಹೊರ ರಾಜ್ಯದ ಆರೋಪಿಗಳು, ಸ್ಥಳೀಯರಿಗೆ ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಾರೆ. ಬೇರೆ ರಾಜ್ಯಗಳಿಗೆ ವ್ಯಾಪಾರಕ್ಕೆ ತೆರಳುವವರು ಬರುವಾಗ ಮಾದಕ ವಸ್ತು ತಂದು, ಒಂದೆಡೆ ಸಂಗ್ರಹಿಸುತ್ತಾರೆ. ಹುಬ್ಬಳ್ಳಿಯಿಂದ ಕರಾವಳಿ, ಶಿವಮೊಗ್ಗ ಭಾಗಕ್ಕೆ ಬಸ್‌ಗಳಲ್ಲಿ ಔಷಧ ಹಾಗೂ ಇತರ ವಸ್ತುಗಳ ಪಾರ್ಸೆಲ್ ನೆಪದಲ್ಲಿ ಸಾಗಾಟ ಮಾಡುತ್ತಾರೆ. ವಿದ್ಯಾರ್ಥಿಗಳೇ ಇವರ ಗುರಿ–ಎನ್.ಶಶಿಕುಮಾರ್, ಹುಬ್ಬಳ್ಳಿ–ಧಾರವಾಡ ಪೊಲೀಸ್ ಕಮಿಷನರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.