
ಕಲೆ: ಸಂತೋಷ್ ಸಸಿಹಿತ್ಲು
ಅಮೆರಿಕ–ಇಸ್ರೇಲ್ ಜಂಟಿ ಸೇನಾ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯಾತೊಲ್ಲಾ ಇಮಾಮ್ ಖಮೇನಿ ಅವರು ಹತ್ಯೆಯಾಗಿದ್ದಾರೆ. ಇರಾನ್‌ನಲ್ಲಿ ಸರ್ಕಾರವನ್ನು ಬದಲಾಯಿಸುವುದು ತಮ್ಮ ಗುರಿ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಇದೇ ಪ್ರತಿಪಾದನೆಯೊಂದಿಗೆ ಕೆಲವೇ ತಿಂಗಳ ಹಿಂದೆ ಟ್ರಂಪ್ ಅವರು ವೆನೆಜುವೆಲಾ ಮೇಲೂ ದಾಳಿ ನಡೆಸಿ, ಅಲ್ಲಿನ ಅಧ್ಯಕ್ಷನನ್ನು ಹೊತ್ತೊಯ್ದು ತಮ್ಮ ದೇಶದಲ್ಲಿ ಬಂದಿಯಾಗಿ ಜೈಲಿನಲ್ಲಿಟ್ಟರು. ಅಮೆರಿಕವು ತನ್ನ ರಾಜಕೀಯ ಮತ್ತು ಆರ್ಥಿಕ ಹಿತಾಸಕ್ತಿ ಕಾಪಾಡಿಕೊಳ್ಳಲು ಆಯ್ದ ದೇಶಗಳ ಮೇಲೆ ದಾಳಿ ನಡೆಸುವ ಮೂಲಕ ಅಂತರರಾಷ್ಟ್ರೀಯ ರಾಜತಾಂತ್ರಿಕ ನಿಯಮಾವಳಿಗಳ ಉಲ್ಲಂಘನೆ ಮಾಡುತ್ತಿದೆ ಎನ್ನುವ ಆರೋಪ ಮೊದಲಿನಿಂದಲೂ ಇದೆ.
2025ರ ಜೂನ್‌ನಲ್ಲಿ ಇಸ್ರೇಲ್ ಮತ್ತು ಇರಾನ್ ನಡುವೆ 12 ದಿನಗಳ ಯುದ್ಧ ನಡೆದಿತ್ತು. ಇರಾನ್ ಸರ್ವೋಚ್ಚ ನಾಯಕರಾಗಿದ್ದ ಅಯಾತೊಲ್ಲಾ ಇಮಾಮ್ ಖಮೇನಿಯ ಆಪ್ತ ವಲಯದ ಹಲವರನ್ನು ಇಸ್ರೇಲ್ ಕೊಂದು ಹಾಕಿತ್ತು. ಆಗಲೇ ಇಸ್ರೇಲ್ ಜತೆಗೆ ಅಮೆರಿಕ ಕೈಜೋಡಿಸಬಹುದು ಎನ್ನುವ ಅನುಮಾನವಿತ್ತು. ಆ ಅನುಮಾನ ಈಗ ನಿಜವಾಗಿದೆ. ಈಗ ಅಮೆರಿಕ– ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ಯುದ್ಧ ಸಾರಿವೆ. ಇರಾನ್‌ಗೆ ಅಣ್ವಸ್ತ್ರ ಪರೀಕ್ಷೆ ವಿರುದ್ಧ ಎಚ್ಚರಿಕೆ ನೀಡುತ್ತಾ, ಸೇನಾ ಕಾರ್ಯಾಚರಣೆಗೆ ಭೂಮಿ ಹದಗೊಳಿಸಿಕೊಂಡು ಬಂದಿದ್ದ ಅಮೆರಿಕವು ಇಸ್ರೇಲ್ ಜತೆಗೂಡಿ ಇರಾನ್ ಮೇಲೆ ಭಾರಿ ದಾಳಿ ನಡೆಸಿದೆ. ದಾಳಿಯಲ್ಲಿ ಇರಾನ್‌ನ ಖಮೇನಿ ಅಸುನೀಗಿದ್ದಾರೆ.
ಅಮೆರಿಕದ ‘ಆಪರೇಷನ್ ಎಪಿಕ್ ಫ್ಯೂರಿ’ಯ ಭಾಗವಾಗಿ ಇರಾನ್‌ನ 31 ಪ್ರಾಂತ್ಯಗಳ ಪೈಕಿ 24ರ ಮೇಲೆ ದಾಳಿ ನಡೆದಿದೆ. ಸುಮಾರು 200 ಯುದ್ಧ ವಿಮಾನಗಳು ಇಸ್ಲಾಮಿಕ್ ರೆವಲ್ಯೂಷನ್ ಗಾರ್ಡ್ ಕೋರ್, ವಾಯುನೆಲೆಗಳು, ಡ್ರೋನ್ ಮತ್ತು ಕ್ಷಿಪಣಿ ಉಡಾವಣಾ ನೆಲೆಗಳು, ಸೇನಾ ನೆಲೆಗಳು ಸೇರಿದಂತೆ 500 ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿವೆ. 200ಕ್ಕೂ ಹೆಚ್ಚು ಮಂದಿ ಸತ್ತಿದ್ದು, 700ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಇಸ್ರೇಲ್, ಅಮೆರಿಕವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ.
ಅಮೆರಿಕ, ಬ್ರಿಟನ್, ಸ್ಪೇನ್ ಮುಂತಾದೆಡೆ ಸಂಭ್ರಮಾಚರಣೆಗಳು ನಡೆದಿವೆ. ಭಾರತ, ಪಾಕ್ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಪ್ರತಿಭಟನೆಗಳು ನಡೆದಿವೆ. ಪಶ್ಚಿಮ ಏಷ್ಯಾದಲ್ಲಿ ಬಿಕ್ಕಟ್ಟಿನ ಪರಿಸ್ಥಿತಿ ತಲೆದೋರಿದೆ. ‘ಚರಿತ್ರೆಯ ಅತ್ಯಂತ ದುಷ್ಟ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದ ಖಮೇನಿ ಕಥೆ ಮುಗಿದಿದೆ. ನಮ್ಮ ಕೆಲಸ ಮುಗಿದ ಮೇಲೆ ಆಡಳಿತವನ್ನು ಕೈಗೆತ್ತಿಕೊಳ್ಳಿ. ಪ್ರಾಯಶಃ ತಲೆಮಾರುಗಳ ಕಾಲದಲ್ಲಿ ಇದು ನಿಮಗೆ ಸಿಕ್ಕಿರುವ ಏಕೈಕ ಅವಕಾಶ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ನ ಜನರನ್ನು ಉದ್ದೇಶಿಸಿ ಹೇಳಿದ್ದಾರೆ.
ಅಯಾತೊಲ್ಲಾ ಇಮಾಮ್ ಖಮೇನಿ
ಯಾವುದೇ ಒಂದು ದೇಶದ ಸರ್ಕಾರ ಬದಲಾಯಿಸುವುದು, ದುರಾಡಳಿತ ಕೊನೆಗೊಳಿಸುವುದು ಆ ದೇಶದ ಆಂತರಿಕ ವಿಚಾರ. ಬೇರೊಂದು ದೇಶ ಅದನ್ನು ಮಾಡಬೇಕೆಂದರೆ, ವಿಶ್ವಸಂಸ್ಥೆಯಂಥ ಜಾಗತಿಕ ಸಂಸ್ಥೆಗಳ ಮೂಲಕ ಮಾಡಬಹುದು. ಅಂತರರಾಷ್ಟ್ರೀಯ ಮಟ್ಟದಲ್ಲಿ ಇಂಥ ಹಲವು ದಾರಿಗಳಿವೆ. ಅಮೆರಿಕದಂಥ ಬಲಿಷ್ಠ ದೇಶಕ್ಕೆ ಅವು ಅಸಾಧ್ಯವೂ ಅಲ್ಲ. ಆದರೆ, ಅಮೆರಿಕವು ಇರಾನ್‌ನ ಪರಿಸ್ಥಿತಿಯನ್ನು ತನ್ನ ನೆಲೆಯಿಂದ ವಿಶ್ಲೇಷಿಸಿ, ಎಲ್ಲ ನಿಯಮಗಳನ್ನೂ ಗಾಳಿಗೆ ತೂರಿ ಏಕಾಏಕಿ ದಾಳಿ ಮಾಡಿರುವುದನ್ನು ‘ದೊಡ್ಡಣ್ಣ’ನ ದರ್ಪ, ದೌರ್ಜನ್ಯ ಎಂದು ವಿಶ್ಲೇಷಿಸಲಾಗುತ್ತಿದೆ.
ಅಮೆರಿಕವು ಅಂತರರಾಷ್ಟ್ರೀಯ ರಾಜತಾಂತ್ರಿಕ ನಿಯಮಗಳನ್ನು ಮೀರಿ ವಿದೇಶಗಳ ಮೇಲೆ ದಾಳಿ ಮಾಡುವುದಾಗಲಿ, ಬಿಕ್ಕಟ್ಟಿನ ಪರಿಸ್ಥಿತಿ ಸೃಷ್ಟಿಸುವುದಾಗಲಿ ಹೊಸದೇನಲ್ಲ. ಅದಕ್ಕೆ ಒಂದು ಚರಿತ್ರೆಯೇ ಇದೆ. ಸರ್ವಾಧಿಕಾರವನ್ನು ಕಿತ್ತೊಗೆಯುವುದು, ಪ್ರಜಾಪ್ರಭುತ್ವ ಸ್ಥಾಪನೆ ಮಾಡುವುದು, ಉಗ್ರವಾದಿಗಳನ್ನು ನಿಗ್ರಹಿಸುವುದು, ಜಗತ್ತಿನ ಶಾಂತಿಗೆ ಧಕ್ಕೆ ತರುವವರನ್ನು ನಿಯಂತ್ರಿಸುವುದು, ಅಮೆರಿಕದ ರಕ್ಷಣೆಗೆ ಭಂಗ ಉಂಟುಮಾಡುವವರನ್ನು ತಡೆಯುವುದು, ಡ್ರಗ್ಸ್ ದಂಧೆಗೆ ಅಂಕುಶ ಹಾಕುವುದು– ಇಂಥ ಹಲವು ನೆಪಗಳನ್ನು ಹೇಳುತ್ತಲೇ ದಶಕಗಳಿಂದಲೂ ಅಮೆರಿಕ ಹಲವು ದೇಶಗಳ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿದೆ. ಹಲವು ಸರ್ಕಾರಗಳನ್ನು ಉರುಳಿಸಿದೆ. ಹಲವು ಅಧಿಕಾರಸ್ಥರನ್ನು ಕೊಂದಿದೆ. ಹೀಗೆ ಅಮೆರಿಕವು ತನ್ನ ಮೂಗಿನ ನೇರಕ್ಕೆ ಇವೆಲ್ಲವನ್ನೂ ಮಾಡಿದೆ ಮತ್ತು ಇವೆಲ್ಲದರ ಹಿಂದಿರುವುದು ಅದರ ರಾಜಕೀಯ, ಆರ್ಥಿಕ ಹಿತಾಸಕ್ತಿಗಳು ಎನ್ನುವುದನ್ನು ಹಲವರು ದಾಖಲಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ಪ್ರಭಾವ ಹೆಚ್ಚಿಸಿಕೊಳ್ಳುವುದೂ ಅದರ ಮತ್ತೊಂದು ಉದ್ದೇಶವಾಗಿದೆ.
ಕೆಲವೇ ವಾರಗಳ ಹಿಂದೆ ಅಮೆರಿಕವು ಎಲ್ಲ ನಿಯಮಗಳನ್ನೂ ಮೀರಿ ವೆನೆಜುವೆಲಾ ದೇಶದ ಒಳಗೆ ನುಗ್ಗಿ ಅಧ್ಯಕ್ಷ ನಿಕೊಲಸ್ ಮಡೂರೊ ಮತ್ತು ಅವರ ಪತ್ನಿಯನ್ನು ಹೊತ್ತೊಯ್ದು ತನ್ನ ದೇಶದ ಜೈಲಿನಲ್ಲಿ ಇಟ್ಟಿತು. ಆಗಲೂ ಟ್ರಂಪ್ ಜಪಿಸಿದ್ದು ಪ್ರಜಾಪ್ರಭುತ್ವ ಸ್ಥಾಪನೆಯ ಜಪ. ಇಂದಿಗೂ ಮಡೂರೊ ಅಮೆರಿಕದ ಜೈಲಿನಲ್ಲಿದ್ದಾರೆ. ನಂತರ ತಾನೇ ಅಲ್ಲಿ ಸರ್ಕಾರ ನಡೆಸುವುದಾಗಿ ಅಮೆರಿಕ ಹೇಳಿತು. ವೆನೆಜುವೆಲಾದ ಹೊಸ ಅಧ್ಯಕ್ಷೆಯಾಗಿರುವ ಡೆಲ್ಸಿ ರಾಡ್ರಿಗಸ್ ಅವರನ್ನು ಕೈಗೊಂಬೆ ಮಾಡಿಕೊಂಡಿರುವ ಟ್ರಂಪ್ ಅವರು, ಈ ಮೂಲಕ ಅಲ್ಲಿನ ತೈಲ ನಿಕ್ಷೇಪಗಳ ಮೇಲೆ ಹಿಡಿತ ಸಾಧಿಸಿದ್ದಾರೆ ಎನ್ನಲಾಗುತ್ತಿದೆ. ಭಾರತವು ರಷ್ಯಾ ಬದಲಿಗೆ ವೆನೆಜುವೆಲಾದಿಂದ ತೈಲ ಖರೀದಿ ಮಾಡಬೇಕು ಎಂದು ಟ್ರಂಪ್ ಅವರು ಇತ್ತೀಚೆಗೆ ಒತ್ತಾಯಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಟ್ರಂಪ್ ಅವರು ಅಧ್ಯಕ್ಷರಾದ ನಂತರ ಅಮೆರಿಕ ಇತರೆ ದೇಶಗಳ ವಿಚಾರದಲ್ಲಿ ಮೂಗು ತೂರಿಸುವ ಪ್ರವೃತ್ತಿ ಹೆಚ್ಚಾಗಿದ್ದು, ಇಲ್ಲಿ ಯಾವ ದೇಶವೂ ಸುರಕ್ಷಿತವಲ್ಲ ಎನ್ನುವ ವಿಶ್ಲೇಷಣೆ ಇದೆ.
ಇರಾನ್ ನಕ್ಷೆ
ಅಮೆರಿಕದ ಚಾಳಿಗೆ ದೊಡ್ಡ ಚರಿತ್ರೆ
ಅಮೆರಿಕದಲ್ಲಿ ರಿಪಬ್ಲಿಕನ್ ಪಕ್ಷವೇ ಅಧಿಕಾರದಲ್ಲಿರಲಿ ಅಥವಾ ಡೆಮಾಕ್ರಟಿಕ್ ಪಕ್ಷದ ಸರ್ಕಾರವೇ ಇರಲಿ, ಬೇರೆ ದೇಶದ ಆಡಳಿತದಲ್ಲಿ ಮೂಗು ತೂರಿಸುವುದು, ಅಲ್ಲಿ ಸೇನೆ ಕಾರ್ಯಾಚರಣೆ ನಡೆಸುವುದು, ಅಲ್ಲಿನ ಸರ್ಕಾರವನ್ನು ಉರುಳಿಸಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುವಂತೆ ಮಾಡುವುದು ಅದರ ಹಳೆಯ ಚಾಳಿ. 18ನೇ ಶತಮಾನದ (1790ರ ದಶಕ) ಅಂತ್ಯದಿಂದ ಇಲ್ಲಿಯವರೆಗೆ ಅದು ನಡೆದುಕೊಂಡು ಬಂದ ಹಾದಿಯನ್ನು ನೋಡಿದರೆ ಇದು ಸ್ಪಷ್ಟವಾಗುತ್ತದೆ.
‘ಕ್ಯಾಥೋಲಿಕ್ ಯೂನಿವರ್ಸಿಟಿ ಆಫ್ ಅಮೆರಿಕ’ದ ಸೆಂಟರ್ ಫಾರ್ ಸ್ಟಡಿ ಆಫ್ ಸ್ಟೇಟ್‌ಮನ್‌ಶಿಪ್ ನಡೆಸಿರುವ ಅಧ್ಯಯನದ ಪ್ರಕಾರ, 1800ರಿಂದ 2017ರವರೆಗೆ ಅಮೆರಿಕದ ಆಡಳಿತವು ವಿದೇಶಿ ನೆಲದಲ್ಲಿ 392 ಬಾರಿ ಸೇನಾ ಕಾರ್ಯಾಚರಣೆ ನಡೆಸಿ, ಆ ದೇಶಗಳ ಆಂತರಿಕ ವಿಚಾರದಲ್ಲಿ ಮಧ್ಯಪ್ರವೇಶಿಸಿದೆ. 2026ರವರೆಗಿನ ಅಂಕಿ ಅಂಶಗಳನ್ನು ಪರಿಗಣಿಸಿದರೆ, ಈ ಸಂಖ್ಯೆ 400 ದಾಟುತ್ತದೆ. ವಿಶ್ವ ಮಹಾಯುದ್ಧಗಳು, ಶೀತಲ ಸಮರದ ಅವಧಿಯಲ್ಲಿ ಅಮೆರಿಕದ ಸೇನಾ ಮಧ್ಯಪ್ರವೇಶ ಹೆಚ್ಚಾಗಿತ್ತು.
2000ದಿಂದೀಚೆಗೆ ಬೇರೆ ದೇಶಗಳಲ್ಲಿ ಅಮೆರಿಕದ ಸೇನಾ ಕಾರ್ಯಾಚರಣೆ ಗಣನೀಯವಾಗಿ ಹೆಚ್ಚಿದೆ. 2017ರವರೆಗಿನ 17 ವರ್ಷಗಳಲ್ಲಿ 126 ಬಾರಿ ಅಮೆರಿಕದ ಸೇನೆ ಹೊರದೇಶಗಳ ಆಡಳಿತದಲ್ಲಿ ಮೂಗು ತೂರಿಸಿದೆ ಎಂದು ಹೇಳುತ್ತದೆ ವಿ.ವಿಯ ವರದಿ.
ಹೆಚ್ಚಿನ ಸಂದರ್ಭಗಳಲ್ಲಿ ಈ ಮಧ್ಯಪ್ರವೇಶ ಸೇನಾ ತುಕಡಿಗಳ ನಿಯೋಜನೆಗೆ ಸೀಮಿತವಾಗಿದ್ದರೆ, ಇನ್ನೂ ಕೆಲವೆಡೆ ವಾಯು ದಾಳಿಗೆ ಸೀಮಿತಗೊಂಡಿದೆ. ಮತ್ತೂ ಕೆಲವು ರಾಷ್ಟ್ರಗಳಲ್ಲಿ ಅಮೆರಿಕದ ಸೇನೆ ಯುದ್ಧ (ಕೊರಿಯಾ, ವಿಯೆಟ್ನಾಂ, ಇರಾಕ್, ಅಫ್ಗಾನಿಸ್ತಾನ ಇತ್ಯಾದಿ) ನಡೆಸಿದೆ. ಎರಡನೇ ವಿಶ್ವ ಯುದ್ಧ ಮುಗಿದ ನಂತರ ಅಮೆರಿಕವು 50ಕ್ಕೂ ಹೆಚ್ಚು ರಾಷ್ಟ್ರಗಳ ಆಂತರಿಕ, ರಾಜಕೀಯ ವಿಚಾರಗಳಲ್ಲಿ ಮಧ್ಯಪ್ರವೇಶಿಸಿ, ಅಲ್ಲಿನ ಆಡಳಿತ ಮೇಲೆ ಪ್ರಭಾವ ಬೀರಲು ಯತ್ನಿಸಿದೆ. ಕಳೆದ 25 ವರ್ಷಗಳಿಂದ ಅಮೆರಿಕದ ಈ ಪ್ರವೃತ್ತಿ ಸ್ವಲ್ಪ ಜಾಸ್ತಿಯೇ ಆಗಿದೆ. ಅದಕ್ಕೆ ಹಲವು ಉದಾಹರಣೆಗಳೂ ಸಿಗುತ್ತವೆ.
ಈಡೇರದ ಉದ್ದೇಶ
ಹೊರದೇಶದ ಮೇಲೆ ದಾಳಿ ನಡೆಸುವುದಕ್ಕೂ ಮುನ್ನ ಅಮೆರಿಕ ನೀಡುವ ಪ್ರಮುಖ ಕಾರಣಗಳು ಇವು:
ಭಯೋತ್ಪಾದನೆಯ ವಿರುದ್ಧ ಹೋರಾಟ, ಜಾಗತಿಕ ಮಟ್ಟದಲ್ಲಿ ಶಾಂತಿ ಕಾಪಾಡುವುದು, ಅಮೆರಿಕದ ಪ್ರಜೆಗಳ ರಕ್ಷಣೆ, ಅಮೆರಿಕದ ಹಿತಾಸಕ್ತಿಗಳ ರಕ್ಷಣೆ, ದೇಶದ ಭದ್ರತೆಗೆ ಆತಂಕ, ಮಾನವ ಹಕ್ಕುಗಳ ರಕ್ಷಣೆ, ಹಿಂಸಾಚಾರ ತಡೆಯುವುದು, ಸರ್ವಾಧಿಕಾರಿ ಆಡಳಿತವನ್ನು ಬದಲಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೊಸ ಸರ್ಕಾರ ಸ್ಥಾಪಿಸುವುದು...
ಇರಾನ್ ಮೇಲೆ ದಾಳಿ ಆರಂಭಕ್ಕೂ ಮೊದಲು ಟ್ರಂಪ್ ನೀಡಿದ್ದು ಕೂಡ ಬಹುತೇಕ ಇವೇ ಕಾರಣಗಳು.
ಆದರೆ, ಎರಡೂವರೆ ದಶಕಗಳಲ್ಲಿ ಇದೇ ಉದ್ದೇಶಗಳನ್ನು ಇಟ್ಟುಕೊಂಡು ಅಮೆರಿಕವು ಅಫ್ಗಾನಿಸ್ತಾನ ಹಾಗೂ ಪಶ್ಚಿಮ ಏಷ್ಯಾದ ಕೆಲವು ರಾಷ್ಟ್ರಗಳ ಮೇಲೆ ಯುದ್ಧ, ಸೇನಾ ದಾಳಿ ನಡೆಸಿದೆ. ಆದರೆ, ಉದ್ದೇಶ ಈಡೇರಿಲ್ಲ. ಈ ರಾಷ್ಟ್ರಗಳಲ್ಲಿ ಮೇಲ್ನೋಟಕ್ಕೆ ಸರ್ಕಾರ ಬದಲಾದರೂ ಶಾಂತಿ ನೆಲಸಿಲ್ಲ. ಅಶಾಂತಿ, ಹಿಂಸಾಚಾರ ಇನ್ನಷ್ಟು ಜಾಸ್ತಿಯಾಗಿದೆ. ಅರಾಜಕತೆ ಸೃಷ್ಟಿಯಾಗಿದೆ.
ಉದಾಹರಣೆಗಳನ್ನು ಉಲ್ಲೇಖಿಸುವುದಾದರೆ..
ಅಫ್ಗಾನಿಸ್ತಾನ: ಇಸ್ಲಾಂ ಮೂಲಭೂತವಾದವನ್ನು ಪ್ರತಿಪಾದಿಸುವ ತಾಲಿಬಾನ್ ಸಂಘಟನೆಯ ಹಿಡಿತದಲ್ಲಿದ್ದ ಅಫ್ಗಾನಿಸ್ತಾನದ ಮೇಲೆ 2001ರಲ್ಲಿ ಅಮೆರಿಕ ಬೆಂಬಲಿತ ನ್ಯಾಟೊ ಪಡೆಗಳು ರಾಜಧಾನಿ ಕಾಬೂಲ್‌ಗೆ ನುಗ್ಗಿ ನಿರಂತರ ಕಾರ್ಯಾಚರಣೆ ನಡೆಸಿ ತಾಲಿಬಾನ್ ಅನ್ನು ಅಧಿಕಾರದಿಂದ ಕೆಳಗಿಸಿದವು. ಹಮೀದ್ ಕರ್ಜೈ ನೇತೃತ್ವದಲ್ಲಿ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರ ಅಲ್ಲಿ ಅಸ್ತಿತ್ವಕ್ಕೆ ಬಂತು. ಆದರೆ, ಸರ್ಕಾರ ಎರಡು ದಶಕ ಬಾಳಲಿಲ್ಲ. ಅಲ್ಲೀಗ ಮತ್ತೆ ತಾಲಿಬಾನ್ ಅಧಿಕಾರ ಚುಕ್ಕಾಣಿ ಹಿಡಿದಿದೆ. ಜನರು, ವಿಶೇಷವಾಗಿ ಮಹಿಳೆಯರ ಸ್ವಾತಂತ್ರ್ಯಗಳನ್ನೆಲ್ಲ ಅದು ಕಸಿದುಕೊಳ್ಳುತ್ತಿದೆ.
ಇರಾಕ್: ಸದ್ದಾಂ ಹುಸೇನ್ ಅವರ ಸರ್ವಾಧಿಕಾರಿ ಆಡಳಿತವಿದ್ದ ಇರಾಕ್ ಮೇಲೆಯೂ ಅಮೆರಿಕ ನೇತೃತ್ವದ ನ್ಯಾಟೊ ಪಡೆಗಳು ಯುದ್ಧ ಸಾರಿದ್ದವು. ಸದ್ದಾಂ ಹುಸೇನ್ ಅವರನ್ನು ಬಂಧಿಸಿದ್ದವು. ಕೊನೆಗೆ ನ್ಯಾಯಾಲಯ ಅವರಿಗೆ ಮರಣದಂಡನೆ ವಿಧಿಸಿತ್ತು. ಅಲ್ಲಿ ಪ್ರಜಾಪ್ರಭುತ್ವ ಸರ್ಕಾರವನ್ನು ಸ್ಥಾಪಿಸುವ ಭರವಸೆಯನ್ನು ಅಮೆರಿಕ ನೀಡಿತ್ತು. ಆದರೆ, ನಾಗರಿಕ ಯುದ್ಧ, ರಾಜಕೀಯ ಅಸ್ಥಿರತೆಯಿಂದ ಇರಾಕ್ ತತ್ತರಿಸಿದೆ. ಐಎಸ್ ಉಗ್ರ ಸಂಘಟನೆಯೂ ಅಲ್ಲಿ ಸಕ್ರಿಯವಾಗಿದೆ.
ಲಿಬಿಯಾ: ಸರ್ವಾಧಿಕಾರಿ ಮುಅಮ್ಮರ್ ಗಡಾಫಿ ಆಡಳಿತವಿದ್ದ ಲಿಬಿಯಾವು ನಾಗರಿಕ ಯುದ್ಧದಿಂದ ಬಸವಳಿದಿತ್ತು. 2011ರಲ್ಲಿ ಅಮೆರಿಕ ಬೆಂಬಲಿತ ನ್ಯಾಟೊ ಪಡೆಗಳು ಲಿಬಿಯಾದಲ್ಲಿ ಸೇನಾ ಕಾರ್ಯಾಚರಣೆ ನಡೆಸಿ ಗಡಾಫಿ ಆಡಳಿತ ಪತನಗೊಳ್ಳುವಂತೆ ಮಾಡಿದ್ದವು. ಕಾರ್ಯಾಚರಣೆಯಲ್ಲಿ ಗಡಾಫಿ ಪ್ರಾಣ ಕಳೆದುಕೊಂಡಿದ್ದರು. ಲಿಬಿಯಾದಲ್ಲಿ ರಾಜಕೀಯ ಅಸ್ಥಿರತೆ ಈಗಲೂ ಮುಂದುವರಿದಿದೆ.
ವೆನೆಜುವೆಲಾ: ತನ್ನ ವಿರುದ್ಧ ತೊಡೆತಟ್ಟಿ ನಿಂತಿದ್ದ ವೆನೆಜುವೆಲಾದ ಮೇಲೆ ಈ ವರ್ಷಾರಂಭದಲ್ಲಿ ದಿಢೀರ್ ಸೇನಾ ಕಾರ್ಯಾಚರಣೆ ನಡೆಸಿ ರಾತ್ರೋರಾತ್ರಿ ಅಲ್ಲಿನ ಅಧ್ಯಕ್ಷ ನಿಕೋಲಸ್ ಮಡೂರೊ ಅವರನ್ನು ಸೆರೆ ಹಿಡಿದು ಕರೆದುಕೊಂಡು ಬಂದು, ಅಮೆರಿಕ ಜೈಲಿನಲ್ಲಿಟ್ಟಿದೆ. ವೆನೆಜುವೆಲಾ ಅಮೆರಿಕಕ್ಕೆ ಮಾದಕ ವಸ್ತು ಕಳ್ಳಸಾಗಣೆ ಮಾಡುತ್ತಿದೆ ಎಂದು ಹೇಳಿದ್ದ ಟ್ರಂಪ್, ಅಲ್ಲಿಯೂ ಬಲವಂತವಾಗಿ ಸರ್ಕಾರ ಬದಲಿಸಲು ಯತ್ನಿಸಿದ್ದರು. ಆದರೆ, ಹೊಸ ಅಧ್ಯಕ್ಷೆ ಅಮೆರಿಕದ ಷರತ್ತುಗಳಿಗೆ ಒಪ್ಪಿಕೊಂಡಿರುವುದರಿಂದ ಟ್ರಂಪ್ ಸದ್ಯ ತಣ್ಣಗಾಗಿದ್ದಾರೆ.
ಬಡತನ, ಅಸಮಾನತೆ, ನಿರುದ್ಯೋಗ
ಇರಾನ್‌ನಲ್ಲಿ 1979ರಲ್ಲಿ ಇಸ್ಲಾಂ ಕ್ರಾಂತಿ ನಡೆದು, ‘ಧರ್ಮಾಧಾರಿತ ಆಳ್ವಿಕೆ’ (ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್) ಸ್ಥಾಪನೆಯಾಗಿತ್ತು. ರಾಜಪ್ರಭುತ್ವ ಕೊನೆಗೊಂಡು, ಖಮೇನಿ ಮನೆತನದ ಧರ್ಮಗುರುಗಳು ಪರಮೋಚ್ಚ ಪದವಿ ಅಲಂಕರಿಸತೊಡಗಿದರು. ಅಂದಿನಿಂದ ಇಸ್ಲಾಮಿಕ್ ಧಾರ್ಮಿಕ ನಿಯಮಗಳು ಕಟ್ಟುನಿಟ್ಟಾಗಿ ಜಾರಿಯಾದವು. ಮಹಿಳೆಯರು ಹಿಜಾಬ್ ಧರಿಸುವುದು ಕಡ್ಡಾಯವಾಯಿತು. ಆಗಿನಿಂದಲೂ ಹಲವು ಬಾರಿ ಧರ್ಮಾಧಾರಿತ ಆಡಳಿತದ ವಿರುದ್ಧ ಪ್ರತಿಭಟನೆಗಳು ನಡೆದಿವೆ. 2022ರಲ್ಲಿ ಹಿಜಾಬ್ ಧರಿಸದ ಕಾರಣಕ್ಕೆ ಪೊಲೀಸರು ವಶಕ್ಕೆ ಪಡೆದಿದ್ದ ಯುವತಿ ಸಾವಿಗೀಡಾಗಿದ್ದರು. ಅದರ ವಿರುದ್ಧ ದೇಶದಾದ್ಯಂತ ಭಾರಿ ಪ್ರತಿಭಟನೆಗಳು ನಡೆದಿದ್ದವು.
ದೇಶದ ಶೇ 30ಕ್ಕೂ ಹೆಚ್ಚು ಜನ ಬಡತನದ ರೇಖೆಗಿಂತ ಕೆಳಗಿದ್ದು, ಊಟ, ವಸತಿಯಂಥ ಮೂಲಭೂತ ಅಗತ್ಯಗಳಿಗೂ ಪರದಾಡುತ್ತಿದ್ದಾರೆ. ಈ ಸಂಖ್ಯೆ ಇನ್ನೂ ಹೆಚ್ಚಾಗಿರುವ ಸಾಧ್ಯತೆ ಇದೆ, ನಿರುದ್ಯೋಗ ತೀವ್ರವಾಗಿದೆ ಎಂದು ಅಧ್ಯಯನ ವರದಿಯೊಂದು ಉಲ್ಲೇಖಿಸಿದೆ. ‘ಇರಾನ್ ಹ್ಯೂಮನ್ ರೈಟ್ಸ್ ವಾಚ್’ ಪ್ರಕಾರ, ದೇಶದಲ್ಲಿ ಭಾರಿ ಪ್ರಮಾಣದ ಅಸಮಾನತೆ ಇದ್ದು, ಶ್ರೀಮಂತರ ಮತ್ತು ಬಡವರ ನಡುವಿನ ಅಂತರ ಹೆಚ್ಚಾಗಿದೆ. ಹೆಚ್ಚಿದ ಹಣದುಬ್ಬರ, ಆಹಾರದ ಭದ್ರತೆ ಇಲ್ಲದಿರುವುದು, ಭ್ರಷ್ಟಾಚಾರ, ದುರಾಡಳಿತ ವ್ಯಾಪಕವಾಗಿದೆ ಎಂದು ಹೇಳಿದೆ.
ಆಧಾರ: ರಾಯಿಟರ್ಸ್, ಬಿಬಿಸಿ, ಅಮೆರಿಕ ಕಾಂಗ್ರೆಸ್ ವೆಬ್‌ಸೈಟ್, ಸಿಎಸ್‌ಎಸ್.ಸಿಯುಎ.ಎಜು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.