
ಉದ್ಯಮಿ ಗೌತಮ್ ಅದಾನಿ ಮಾಲೀಕತ್ವದ ವಿವಿಧ ಕಂಪನಿಗಳಲ್ಲಿ ಸರ್ಕಾರಿ ಸ್ವಾಮ್ಯದ ಎಲ್‌ಐಸಿಯ ಹಣವನ್ನು ಹೂಡುವಂತೆ ಮಾಡುವ ಮೂಲಕ ಕೇಂದ್ರ ಸರ್ಕಾರವು ಕಷ್ಟಕಾಲದಲ್ಲಿ ಅವರಿಗೆ ನೆರವಾಗಿದೆ ಎಂದು ‘ದಿ ವಾಷಿಂಗ್ಟನ್ ಪೋಸ್ಟ್’ ವರದಿ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆಪ್ತಸ್ನೇಹಿತ ಅದಾನಿ ಅವರ ಸಾಲವು ಹೆಚ್ಚಾಗಿದ್ದು, ಅವರಿಗೆ ಜಾಗತಿಕ ಮಟ್ಟದಲ್ಲಿ ಸಾಲ ದೊರೆಯುತ್ತಿಲ್ಲ. ಅದಾನಿ ಸಮೂಹವು ಸಂಕಷ್ಟದಲ್ಲಿರುವಾಗಲೇ ಅದರ ವಿವಿಧ ಕಂಪನಿಗಳಲ್ಲಿ ₹33,000 ಸಾವಿರ ಕೋಟಿ ಮೊತ್ತವನ್ನು ಹೂಡಲು ಎಲ್‌ಐಸಿ ನಿರ್ಧರಿಸಿದೆ; ಕೇಂದ್ರದ ಹಣಕಾಸು ಇಲಾಖೆಯ ಅಧಿಕಾರಿಗಳ ಸಲಹೆಯಂತೆ ಈ ಹೂಡಿಕೆ ಮಾಡುತ್ತಿದೆ ಎಂದು ಅಮೆರಿಕದ ಪತ್ರಿಕೆಯ ತನಿಖಾ ವರದಿ ಉಲ್ಲೇಖಿಸಿದೆ. ಈ ಆರೋಪಗಳನ್ನು ಎಲ್‌ಐಸಿ ನಿರಾಕರಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಆಪ್ತಸ್ನೇಹಿತ ಉದ್ಯಮಿ ಗೌತಮ್ ಅದಾನಿ ಅವರ ಸಮೂಹದಲ್ಲಿ ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ಬೃಹತ್ ಮೊತ್ತವನ್ನು ಹೂಡಿಕೆ ಮಾಡಲು ತೀರ್ಮಾನಿಸಿದ್ದು, ಈ ನಿರ್ಧಾರದ ಹಿಂದೆ ಕೇಂದ್ರ ಸರ್ಕಾರದ ಪಾತ್ರ ಇದೆ ಎಂದು ‘ದಿ ವಾಷಿಂಗ್ಟನ್ ಪೋಸ್ಟ್’ ವರದಿ ಮಾಡಿದೆ. ಎಂಥ ಸಂದರ್ಭದಲ್ಲಿ ಎಲ್‌ಐಸಿ ಹೂಡಿಕೆ ಮಾಡಿದೆ ಎನ್ನುವುದನ್ನು ವರದಿ ವಿವರವಾಗಿ ಉಲ್ಲೇಖಿಸಿದೆ.
ಭಾರತದಲ್ಲಿ ಗಣಿಗಳು, ವಿಮಾನ ನಿಲ್ದಾಣಗಳು, ಬಂದರುಗಳು ಮತ್ತು ಹಸಿರು ಇಂಧನ ಯೋಜನೆಗಳನ್ನು ಒಳಗೊಂಡಂತೆ ಬೃಹತ್ ಸಾಮ್ರಾಜ್ಯದ ಒಡೆಯರಾಗಿರುವ ಗೌತಮ್ ಅದಾನಿ ಅವರ ಸಾಲವು ಹೆಚ್ಚಾಗುತ್ತಲೇ ಹೋಗಿದ್ದು, ಅವರು ಪಾವತಿ ಮಾಡಬೇಕಿದ್ದ ಬಿಲ್‌ಗಳ ಬಾಕಿ ಮೊತ್ತವು ಏರುತ್ತಿದೆ. ಭಾರತದ ಶ್ರೀಮಂತರ ಪೈಕಿ ಎರಡನೇ ಸ್ಥಾನದಲ್ಲಿರುವ ಗೌತಮ್ ಅದಾನಿ ಅವರು ₹7.90 ಲಕ್ಷ ಕೋಟಿ ಮೌಲ್ಯದ ಸಂಪತ್ತಿನ ಒಡೆಯರಾಗಿದ್ದಾರೆ. ಕಳೆದ ವರ್ಷ ಅವರ ವಿರುದ್ಧ ಅಮೆರಿಕದಲ್ಲಿ ಭ್ರಷ್ಟಾಚಾರ ಮತ್ತು ವಂಚನೆಯ ಆರೋಪಗಳು ಕೇಳಿಬಂದಿದ್ದವು. ಅಮೆರಿಕ ಮತ್ತು ಯುರೋಪಿನ ಬ್ಯಾಂಕ್‌ಗಳು ಅವರಿಗೆ ಸಾಲ ನೀಡಲು ಹಿಂದೇಟು ಹಾಕಿದ್ದವು ಎಂದು ವರದಿ ಹೇಳಿದೆ.
ವರದಿಯ ಪ್ರಕಾರ, ಅದಾನಿ ಅವರಿಗೆ ನೆರವಾಗುವ ದಿಸೆಯಲ್ಲಿ ಕೇಂದ್ರ ಸರ್ಕಾರವು ತನ್ನದೇ ಯೋಜನೆಯೊಂದನ್ನು ರೂಪಿಸಿತು. ಕೇಂದ್ರ ಸರ್ಕಾರದ ಅಧೀನದಲ್ಲಿರುವ, ದೇಶದ ಬಡವರು ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ಜೀವ ವಿಮೆ ಕಲ್ಪಿಸುವ ಎಲ್‌ಐಸಿಯಿಂದ ಸುಮಾರು ₹33 ಸಾವಿರ ಕೋಟಿ ಹೂಡಿಕೆ ಮಾಡುವ ಸಂಬಂಧ ಇದೇ ಮೇ ತಿಂಗಳಲ್ಲಿ ಅಧಿಕಾರಿಗಳು ಪ್ರಸ್ತಾವ ಸಿದ್ಧಪಡಿಸಿದರು.
ಅದೇ ಸಂದರ್ಭದಲ್ಲಿ, ಅದಾನಿ ಪೋರ್ಟ್ಸ್ ಕಂಪನಿಯು ಹಾಲಿ ಇರುವ ಸಾಲವನ್ನು ಮರುಹೊಂದಾಣಿಕೆ ಮಾಡಲು 58.5 ಕೋಟಿ ಡಾಲರ್ (₹5,137 ಕೋಟಿ) ಹೊಸ ಸಾಲವನ್ನು ಮಾಡಬೇಕಾದ ತುರ್ತಿಗೆ ಸಿಲುಕಿತ್ತು. ಆ ಇಡೀ ಮೊತ್ತವನ್ನು ಒಂದು ಮೂಲವೇ (ಎಲ್‌ಐಸಿ) ಒದಗಿಸಿದೆ ಎಂದು ಮೇ 30ರಂದು ಕಂಪನಿ ಘೋಷಿಸಿತ್ತು. ಇದು, ದೇಶದ ಪ್ರಮುಖ ಉದ್ಯಮಿಯಾದ ಮತ್ತು ಅತ್ಯುತ್ತಮ ರಾಜಕೀಯ ಸಂಪರ್ಕಗಳನ್ನು ಹೊಂದಿರುವ ಅದಾನಿ ಸಮೂಹಕ್ಕೆ ಜನರ ತೆರಿಗೆ ಹಣವನ್ನು ವರ್ಗಾಯಿಸುವ ದೊಡ್ಡ ಯೋಜನೆಯ ಸಣ್ಣ ಭಾಗ ಮಾತ್ರವಾಗಿತ್ತು. ಮೋದಿ ಸರ್ಕಾರದಲ್ಲಿ ಅದಾನಿ ಅವರು ಹೊಂದಿರುವ ಪ್ರಭಾವವನ್ನು ಇದು ತೋರಿಸುತ್ತದೆ ಎಂದು ವರದಿ ಹೇಳಿದೆ.
ಎಲ್‌ಐಸಿಯ ಮತ್ತು ಕೇಂದ್ರ ಹಣಕಾಸು ಸಚಿವಾಲಯದ ಅಧೀನದಲ್ಲಿರುವ ಹಣಕಾಸು ಸೇವೆಗಳ ಇಲಾಖೆಯ (ಡಿಎಫ್‌ಎಸ್) ಆಂತರಿಕ ದಾಖಲೆಗಳ ಆಧಾರದಲ್ಲಿ, ಅವುಗಳಿಗೆ ಸಂಬಂಧಿಸಿದ ಮಾಜಿ ಮತ್ತು ಹಾಲಿ ಅಧಿಕಾರಿಗಳನ್ನು ಸಂದರ್ಶಿಸಿ ಹಾಗೂ ಅದಾನಿ ಸಮೂಹದ ಹಣಕಾಸಿನ ಬಗ್ಗೆ ಮಾಹಿತಿ ಇರುವ ಭಾರತದ ಮೂವರು ಬ್ಯಾಂಕ್ ಅಧಿಕಾರಿಗಳನ್ನು ಮಾತನಾಡಿಸಿ ವರದಿ ತಯಾರಿಸಿದ್ದಾಗಿ ‘ದಿ ವಾಷಿಂಗ್ಟನ್ ಪೋಸ್ಟ್’ ತಿಳಿಸಿದೆ.
ಡಿಎಫ್‌ಎಸ್‌ನ ಅಧಿಕಾರಿಗಳು, ಎಲ್‌ಐಸಿ ಮತ್ತು ಸರ್ಕಾರದ ಧನಸಹಾಯದಿಂದ ನಡೆಯುವ ನೀತಿ ಆಯೋಗದ ಜೊತೆಗೂಡಿ ಈ ಹೂಡಿಕೆ ಯೋಜನೆಯನ್ನು ರೂಪಿಸಿರುವುದು ದಾಖಲೆಗಳಿಂದ ತಿಳಿದುಬಂದಿದೆ. ಪ್ರಸ್ತಾವಕ್ಕೆ ಹಣಕಾಸು ಸಚಿವಾಲಯವು ಒಪ್ಪಿಗೆ ನೀಡಿದೆ ಎಂದು ಈ ವಿದ್ಯಮಾನದ ಬಗ್ಗೆ ಅರಿವಿರುವ ಇಬ್ಬರು ಅಧಿಕಾರಿಗಳು ತಿಳಿಸಿರುವುದಾಗಿ ವರದಿ ಹೇಳಿದೆ.
ಕಳೆದ 12 ತಿಂಗಳಲ್ಲಿ (ಜೂನ್ ಅಂತ್ಯದವರೆಗೆ) ಅದಾನಿ ಸಮೂಹದ ಒಟ್ಟಾರೆ ಸಾಲ ಪ್ರಮಾಣವು ಶೇ 20ರಷ್ಟು ಹೆಚ್ಚಾಗಿದೆ ಎನ್ನುವುದು ಕಂಪನಿಯ 2025–26ರ ಲೆಕ್ಕಪತ್ರಗಳಿಂದ ತಿಳಿಯುತ್ತದೆ. ಇಂಥ ಸ್ಥಿತಿಯಲ್ಲಿ, ‘ಅದಾನಿ ಸಮೂಹದಲ್ಲಿ ವಿಶ್ವಾಸ ಇಡುವುದು ಮತ್ತು ಇತರ ಹೂಡಿಕೆದಾರರನ್ನು ಉತ್ತೇಜಿಸುವುದು’ ಯೋಜನೆಯ ಮುಖ್ಯ ಉದ್ದೇಶವಾಗಿತ್ತು; ಅವರು ‘ದೂರದೃಷ್ಟಿ ಇರುವ ಉದ್ಯಮಿ, ಸವಾಲಿನ ಸಂದರ್ಭಗಳಲ್ಲಿ ಸಮರ್ಥವಾಗಿ ಎದುರಿಸಿ ಯಶಸ್ಸು ಕಂಡವರು’ ಎಂದು ಡಿಎಫ್‌ಎಸ್‌ನ ದಾಖಲೆಯಲ್ಲಿ ಉಲ್ಲೇಖಿಸಲಾಗಿದೆ.
ಸುಳ್ಳು ಮತ್ತು ದಾರಿ ತಪ್ಪಿಸುವ ಮಾಹಿತಿ ನೀಡಿ ಅಮೆರಿಕದ ಹೂಡಿಕೆದಾರರನ್ನು ಸೆಳೆಯಲು ಅದಾನಿ ಪ್ರಯತ್ನಿಸಿದ್ದಾರೆ ಎಂದು ಅಲ್ಲಿನ ನ್ಯಾಯಾಂಗ ಇಲಾಖೆ ಕಳೆದ ವರ್ಷ ಆರೋಪಿಸಿತ್ತು. ಅದೇ ದಿನ, ಅಮೆರಿಕ ಷೇರುಪೇಟೆ ಮತ್ತು ವಿನಿಮಯ ಆಯೋಗವು (ಎಸ್‌ಇಸಿ) ಅದಾನಿ ಅವರು ಷೇರುಪೇಟೆಯ ನಿಮಯಗಳನ್ನು ಉಲ್ಲಂಘಿಸಿದ್ದಾರೆ ಎಂದು ಪ್ರಕರಣ ದಾಖಲಿಸಿತ್ತು. ಅದಾನಿ ಸಮೂಹವು ಷೇರು ಮೌಲ್ಯವನ್ನು ಕೃತಕವಾಗಿ ಬದಲಾಯಿಸಿದೆ ಮತ್ತು ಹಣಕಾಸು ಅವ್ಯವಹಾರ ನಡೆಸಿದೆ ಎಂದು 2023ರ ಜನವರಿಯಲ್ಲಿ ಹಿಂಡೆನ್‌ಬರ್ಗ್ ಸಂಸ್ಥೆಯು ಆರೋಪಿಸಿತ್ತು.
ಎಲ್‌ಐಸಿಯು ಈ ಹಿಂದೆಯೇ ಅದಾನಿ ಒಡೆತನದ ಕಂಪನಿಗಳಲ್ಲಿ ಷೇರುಗಳನ್ನು ಖರೀದಿಸಿತ್ತು. ಅದಾನಿ ಸಮೂಹದ ವಿರುದ್ಧ ಇಷ್ಟೆಲ್ಲ ಆರೋಪಗಳು ಕೇಳಿಬಂದ ನಂತರವೂ ಅವರ ವಿವಿಧ ಕಂಪನಿಗಳಲ್ಲಿ 340 ಕೋಟಿ ಡಾಲರ್ (₹30 ಸಾವಿರ ಕೋಟಿ) ಮೊತ್ತವನ್ನು ಕಾರ್ಪೊರೇಟ್ ಬಾಂಡ್‌ಗಳ ರೂಪದಲ್ಲಿ ಮತ್ತು 50.7 ಕೋಟಿ ಡಾಲರ್ (₹4,500 ಕೋಟಿ) ಅನ್ನು ಹೆಚ್ಚುವರಿಯಾಗಿ ಹೂಡಿಕೆ ಮಾಡಲು ಹಣಕಾಸು ಸಚಿವಾಲಯದ ಅಧಿಕಾರಿಗಳು ಎಲ್‌ಐಸಿಗೆ ಸಲಹೆ ನೀಡಿದ್ದಾರೆ. ಆದರೆ, ಅದಾನಿ ಪೋರ್ಟ್ಸ್‌ನಲ್ಲಿ ಹೂಡಿಕೆ ಮಾಡಿ ನಾಲ್ಕು ತಿಂಗಳಾಗಿದ್ದು, ಈ ಅವಧಿಯಲ್ಲಿ ಎಷ್ಟು ಹೂಡಿಕೆ ಮಾಡಿದ್ದಾರೆ ಎನ್ನುವ ವಿವರಗಳು ಲಭ್ಯವಿಲ್ಲ ಎಂದು ವರದಿ ಉಲ್ಲೇಖಿಸಿದೆ.
ಅದಾನಿ ಸಮೂಹ ಎದುರಿಸುತ್ತಿರುವ ವಿವಿಧ ಬಿಕ್ಕಟ್ಟುಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೂಡಿಕೆಯನ್ನು ಆಕರ್ಷಿಸುವ ಅದರ ಸಾಮರ್ಥ್ಯವನ್ನು ಕುಂದುವಂತೆ ಮಾಡಿವೆ. ಅಮೆರಿಕದಲ್ಲಿ ನಡೆಯುತ್ತಿರುವ ತನಿಖೆಯಿಂದಾಗಿ ಅಮೆರಿಕ ಮತ್ತು ಪಶ್ಚಿಮ ರಾಷ್ಟ್ರಗಳ ಪ್ರಮುಖ ಬ್ಯಾಂಕುಗಳು ಸಮೂಹದಲ್ಲಿ ಹೂಡಿಕೆ ಮಾಡುವುದರಿಂದ ಆಗುವ ಅಪಾಯದ ಬಗ್ಗೆ ಆತಂಕ ಹೊಂದಿವೆ ಎಂದು ಈ ಬಗ್ಗೆ ಮಾಹಿತಿ ಹೊಂದಿರುವ ಮೂವರು ಬ್ಯಾಂಕ್ ಅಧಿಕಾರಿಗಳು ಹೇಳಿದ್ದಾರೆ ಮತ್ತು ರಾಯಿಟರ್ಸ್‌ನ ವರದಿಯೊಂದು ಹೇಳಿದೆ ಎಂದು ‘ವಾಷಿಂಗ್ಟನ್ ಪೋಸ್ಟ್’ ತಿಳಿಸಿದೆ.
ಅಮೆರಿಕದ ನ್ಯಾಯಾಂಗ ಇಲಾಖೆ ನಡೆಸುತ್ತಿರುವ ತನಿಖೆಗಿಂತಲೂ ಅಮೆರಿಕದ ಷೇರುಪೇಟೆ ಮತ್ತು ವಿನಿಮಯ ಆಯೋಗ (ಎಸ್‌ಇಸಿ) ನಡೆಸುತ್ತಿರುವ ತನಿಖೆ ಹೆಚ್ಚು ಕಳವಳಕಾರಿಯಾದುದು. ಒಂದು ವೇಳೆ ಆರೋಪ ಸಾಬೀತಾದಾರೆ ಅಮೆರಿಕದ ಡಾಲರ್ ಮಾರುಕಟ್ಟೆಯಲ್ಲಿ ಹೂಡಿಕೆ ಆಕರ್ಷಿಸಲು ಅದಾನಿ ಸಮೂಹಕ್ಕೆ ಸಾಧ್ಯವಾಗಲಾರದು. ಹೀಗಾದರೆ, ಅದು ಸಮೂಹದ ಹಣಕಾಸು ಭವಿಷ್ಯದ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂಬ ಬ್ಯಾಂಕ್ ಅಧಿಕಾರಿಯೊಬ್ಬರ ಹೇಳಿಕೆಯನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪ್ರಸ್ತಾವಿತ ಹೂಡಿಕೆಯಲ್ಲಿರುವ ಅಪಾಯಗಳ ಬಗ್ಗೆಯೂ ಹಣಕಾಸು ಸೇವೆಗಳ ಇಲಾಖೆಯ ದಾಖಲೆಯಲ್ಲಿ ಪ್ರಸ್ತಾಪಿಸಲಾಗಿದೆ. ‘ಅದಾನಿ ಕಂಪನಿಗಳ ಷೇರುಗಳು ಆಗಾಗ ವಿವಾದಕ್ಕೆ ಗುರಿಯಾಗುತ್ತಿದ್ದು, ಅಲ್ಪ ಅವಧಿಯಲ್ಲಿ ಷೇರುಗಳ ಬೆಲೆಯಲ್ಲಿ ಏರಿಳಿತ ಕಂಡುಬರುತ್ತಿರುತ್ತದೆ’ ಎಂದು ದಾಖಲೆಯೊಂದರಲ್ಲಿ ಹೇಳಲಾಗಿದೆ. 2023ರ ಹಿಂಡೆನ್‌ಬರ್ಗ್ ವರದಿಯ ನಂತರ ಎಲ್‌ಐಸಿಯು ₹46 ಸಾವಿರ ಕೋಟಿಯಷ್ಟು ಗಳಿಕೆಯನ್ನು ಕಳೆದುಕೊಂಡಿತ್ತು. 2023ರ ಫೆಬ್ರುವರಿಯಲ್ಲಿ ಅದಾನಿ ಕಂಪನಿಗಳಲ್ಲಿ ಎಲ್‌ಐಸಿಯ ಹೂಡಿಕೆಯು ₹25 ಸಾವಿರ ಕೋಟಿಗೆ ಕುಸಿದಿತ್ತು. 2024ರ ಮಾರ್ಚ್ ವೇಳೆಗೆ ಎಲ್‌ಐಸಿ ಹೂಡಿಕೆ ಮೌಲ್ಯ ₹57 ಸಾವಿರ ಕೋಟಿಗೆ ಏರಿದೆ. ಹಾಗಿದ್ದರೂ, ಆಗಿರುವ ನಷ್ಟ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿಲ್ಲ’ ಎಂದು ದಾಖಲೆಯಲ್ಲಿ ಹೇಳಿರುವುದನ್ನು ವರದಿ ಉಲ್ಲೇಖಿಸಿದೆ.
ಇಸ್ರೇಲ್‌ನ ಹೈಫಾ ಬಂದರಿನಲ್ಲಿ ಅದಾನಿ ಸಮೂಹ ದೊಡ್ಡ ಪಾಲು ಹೊಂದಿದೆ. ಯೆಮನ್‌ನ ಹುಥಿ ಬಂಡುಕೋರರು ಈ ಬಂದರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಬೆದರಿಕೆ ಹಾಕುತ್ತಿದ್ದು, ಹೂಡಿಕೆದಾರರು ಸಮೂಹದಲ್ಲಿ ಹಣ ಹೂಡುವುದಕ್ಕೆ ಯೋಚನೆ ಮಾಡುವಂತೆ ಮಾಡಿದೆ ಎಂದು ಅಧಿಕಾರಿಗಳು ದಾಖಲೆಯಲ್ಲಿ ಅಭಿಪ್ರಾಯಪಟ್ಟಿರುವುದನ್ನೂ ದಿ ವಾಷಿಂಗ್ಟನ್ ಪೋಸ್ಟ್ ವಿವರಿಸಿದೆ.
ರಾಜಕೀಯವಾಗಿ ಬರಬಹುದಾದ ವಿರೋಧವು ಇನ್ನೊಂದು ಪ್ರಮುಖ ಅಂಶ. ದೇಶದ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ಮತ್ತು ಸಿಪಿಎಂ, ಎಲ್‌ಐಸಿಯು ಅದಾನಿ ಸಮೂಹದಲ್ಲಿ ಬಂಡವಾಳ ಹೂಡುತ್ತಿರುವುದನ್ನು ಸಾರ್ವಜನಿಕರ ಹಣದ ದುರ್ಬಳಕೆ ಎಂದು ಕರೆದಿವೆ ಎಂದು ದಾಖಲೆಯಲ್ಲಿ ಅಧಿಕಾರಿಗಳು ಉಲ್ಲೇಖಿಸಿದ್ದಾರೆ ಎಂದೂ ವರದಿ ಹೇಳಿದೆ.
‘ಎಲ್ಐಸಿ ಹೂಡಿಕೆಯ ಹಿಂದೆ ಸರ್ಕಾರದ ನಿರ್ದೇಶನವಿದೆ ಎಂಬ ಆರೋಪವನ್ನು ನಾವು ಸ್ಪಷ್ಟವಾಗಿ ನಿರಾಕರಿಸುತ್ತಿದ್ದೇವೆ’ ಎಂದು ಅದಾನಿ ಸಮೂಹವು ಆರೋಪಗಳಿಗೆ ಪ್ರತಿಕ್ರಿಯಿಸಿದೆ.
‘ಎಲ್‌ಐಸಿಯು ಹಲವು ಕಾರ್ಪೊರೇಟ್ ಸಮೂಹಗಳಲ್ಲಿ ಹೂಡಿಕೆ ಮಾಡುತ್ತಿದೆ. ಅದಾನಿ ಸಮೂಹಕ್ಕೆ ವಿಶೇಷ ಒತ್ತು ನೀಡಲಾಗುತ್ತಿದೆ ಎಂಬುದು ದಾರಿತಪ್ಪಿಸುವಂತಹದ್ದು. ನಮ್ಮ ಕಂಪನಿಗಳಲ್ಲಿ ಮಾಡಿದ ಹೂಡಿಕೆಯಿಂದ ಎಲ್‌ಐಸಿ ಹೆಚ್ಚು ಹಣವನ್ನು ಗಳಿಸಿದೆ. ರಾಜಕೀಯ ನೆರವಿನ ಪ್ರತಿಪಾದನೆಗಳು ಆಧಾರರಹಿತವಾದವು. ಮೋದಿ ಅವರು ಪ್ರಧಾನಿಯಾಗುವುದಕ್ಕೂ ಮೊದಲೇ ಕಂಪನಿ ಅಭಿವೃದ್ಧಿ ಕಂಡಿದೆ’ ಎಂದು ಸಮೂಹ ಹೇಳಿರುವುದನ್ನು ವರದಿ ಉಲ್ಲೇಖಿಸಿದೆ.
‘2024ರ ನವೆಂಬರ್‌ನಿಂದ ನಮ್ಮ ಕಂಪನಿಗಳು ಜಾಗತಿಕ ಮತ್ತು ದೇಶೀಯ ಸಾಲಪತ್ರ ಮಾರುಕಟ್ಟೆಗಳಿಂದ ₹61 ಸಾವಿರ ಕೋಟಿ ಸಂಗ್ರಹಿಸಿವೆ. ಸಮೂಹವು ಆರ್ಥಿಕವಾಗಿ ಸದೃಢವಾಗಿದೆ. ಸಮೂಹದ ಆರ್ಥಿಕ ಸ್ಥಿತಿಗತಿ ಕುರಿತಂತೆ ಇರುವ ಅಭಿಪ್ರಾಯಗಳು ಸುಳ್ಳು ಮತ್ತು ದಾರಿ ತಪ್ಪಿಸುವಂತಹವು’ ಎಂದು ಅದಾನಿ ಸಮೂಹ ಹೇಳಿರುವುದಾಗಿಯೂ ಪತ್ರಿಕೆ ತಿಳಿಸಿದೆ.
ಹಲವು ಬಾರಿ ಕೇಳಿದ ನಂತರವೂ ಎಲ್‌ಐಸಿ, ಹಣಕಾಸು ಸೇವೆಗಳ ಇಲಾಖೆ (ಡಿಎಫ್‌ಎಸ್), ಪ್ರಧಾನಿ ಕಚೇರಿ ಪ್ರತಿಕ್ರಿಯೆ ನೀಡಲಿಲ್ಲ ಎಂದು ವಾಷಿಂಗ್ಟನ್ ಪೋಸ್ಟ್ ಹೇಳಿದೆ.
2023ರ ಹಿಂಡೆನ್‌ಬರ್ಗ್ ವರದಿಗೆ ಸಂಬಂಧಿಸಿದಂತೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ನಡೆಸುತ್ತಿರುವ ತನಿಖೆಯ ಬಗ್ಗೆ ಪ್ರಸ್ತಾಪಿಸಿರುವ ವರದಿಯು, ಎರಡು ಆರೋಪಗಳನ್ನು ಸೆಬಿ ಅಲ್ಲಗಳೆದಿದೆ. ಉಳಿದ ಆರೋಪಗಳ ಕುರಿತ ತನಿಖೆ ಬಾಕಿ ಇದೆ ಎಂದು ಮೂಲಗಳು ಮತ್ತು ರಾಯಿಟರ್ಸ್‌ನ ಕಳೆದ ತಿಂಗಳ ವರದಿಯನ್ನು ಉಲ್ಲೇಖಿಸಿದೆ. ಈ ಬಗ್ಗೆ ಕೇಳಿದ ಪ್ರಶ್ನೆಗೆ ಸೆಬಿ ಪ್ರತಿಕ್ರಿಯಿಸಿಲ್ಲ ಎಂದು ಪತ್ರಿಕೆ ಹೇಳಿದೆ.
ಅದಾನಿ ಸಮೂಹವು 1991ರಿಂದ ನಡೆದು ಬಂದ ಹಾದಿ ಮತ್ತು ಅದನ್ನು ಸುತ್ತುವರಿದಿರುವ ವಿವಾದಗಳಿಗೆ ಸಂಬಂಧಿಸಿದ ವಿವರಗಳನ್ನು ವರದಿ ಒಳಗೊಂಡಿದೆ.
ಸಮೂಹದ ಮುಖ್ಯಸ್ಥ ಗೌತಮ್ ಅದಾನಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಡುವಿನ ಒಡನಾಟದ ಬಗ್ಗೆಯೂ ಪ್ರಸ್ತಾಪಿಸಲಾಗಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಅವರು ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆಯಾದ ಬಳಿಕ ಪ್ರಚಾರಕ್ಕಾಗಿ ಅದಾನಿ ಅವರ ವಿಮಾನ ಬಳಸಿದ್ದನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಪ್ರಧಾನಿ ಅವರ ಆಧುನಿಕ ವೂ ಜಾಗತಿಕವಾಗಿ ಹೆಚ್ಚು ಸ್ಪರ್ಧಾತ್ಮಕವೂ ಆದ ಭಾರತದ ಪರಿಕಲ್ಪನೆಯಲ್ಲಿ ಅದಾನಿ ಸಮೂಹ ಕೇಂದ್ರ ಸ್ಥಾನ ಪಡೆಯಿತು ಎಂದೂ ಅದು ಹೇಳಿದೆ.
2023ರ ಜನವರಿಯಲ್ಲಿ ಅಮೆರಿಕದ ಶಾರ್ಟ್ ಸೆಲ್ಲಿಂಗ್, ಹೂಡಿಕೆ ಮತ್ತು ಸಂಶೋಧನಾ ಸಂಸ್ಥೆ ‘ಹಿಂಡೆನ್‌ಬರ್ಗ್ ರಿಸರ್ಚ್’ ಪ್ರಕಟಿಸಿದ್ದ ವರದಿಯ (ಈ ಸಂಸ್ಥೆ ಈಗ ಮುಚ್ಚಿದೆ) ವಿವಾದ ಮತ್ತು ಕಳೆದ ವರ್ಷದ ಅಮೆರಿಕದಲ್ಲಿ ಹೂಡಿಕೆ ಸಂಗ್ರಹಿಸುವುದಕ್ಕಾಗಿ ತಪ್ಪು ಮಾಹಿತಿ ನೀಡಿರುವುದು ಮತ್ತು ಭಾರತದ ಅಧಿಕಾರಿಗಳಿಗೆ ಲಂಚ ನೀಡಿರುವ ಆರೋಪದ ವಿವಾದಗಳ ಬಗ್ಗೆಯೂ ವಾಷಿಂಗ್ಟನ್ ಪೋಸ್ಟ್ ವಿಸ್ತೃತವಾಗಿ ವಿವರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.