
ಡಿಜಿಟಲ್ ಅರೆಸ್ಟ್
ಐಸ್ಟಾಕ್ ಚಿತ್ರ
ಡಿಜಿಟಲ್ ಅರೆಸ್ಟ್ ಪ್ರಕರಣಗಳಿಗೆ ಸಂಬಂಧಿಸಿದಂತೆ ದೇಶದಾದ್ಯಂತ ಏಕರೂಪದ ತನಿಖೆ ನಡೆಸುವಂತೆ CBIಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಟೆಲಿಕಾಂ ಸೇವಾ ಪೂರೈಕೆದಾರರು ಒಬ್ಬ ವ್ಯಕ್ತಿ ಅಥವಾ ಒಂದು ಸಂಸ್ಥೆಗೆ ಹಲವು ಸಿಮ್‌ಗಳನ್ನು ನೀಡದಂತೆ ಕ್ರಮ ಕೈಗೊಳ್ಳಬೇಕು ಎಂದು ಟೆಲಿಕಾಂ ಸಚಿವಾಲಯಕ್ಕೆ ಹಾಗೂ ಸೈಬರ್ ವಂಚಕರು ಬಳಸುವ ಬ್ಯಾಂಕ್ ಖಾತೆಗಳನ್ನು ಪತ್ತೆಹಚ್ಚಲು ಹಾಗೂ ಸ್ಥಗಿತಗೊಳಿಸಲು ಕೃತಕ ಬುದ್ಧಿಮತ್ತೆ (ಎಐ) ಏಕೆ ಬಳಸುತ್ತಿಲ್ಲ’ ಎಂದು RBIಗೆ ಕೇಳಿದೆ.
7 ಮೇ 2025 ಬೆಳಿಗ್ಗೆ 11.30...
ಅದೇ ತಾನೆ ನನ್ನ ಅಂಕಣವನ್ನು ಬರೆದು ಮುಗಿಸಿ ಪ್ರೂಫ್ ಓದುತ್ತ ಕೂತಿದ್ದೆ. ಫೋನ್ ಬಂತು. ‘ನಾಗೇಶ್ ಹೆಗಡೆ, ನಿಮ್ಮ ಇನ್ನೊಂದು ನಂಬರಿನಿಂದ ಕಾನೂನು ಬಾಹಿರ ಚಟುವಟಿಕೆ ನಡೆಯುತ್ತಿವೆ, ನಿಮ್ಮನ್ನು ಎಚ್ಚರಿಸುತ್ತಿದ್ದೇವೆʼ ಎಂಬ ವಾರ್ನಿಂಗ್ ಬಂತು.
ಕೊಂಚ ದಿಗಿಲಾಯಿತು. ಪತ್ನಿ ರೇಖಾಳ ಫೋನ್ ಬಿಟ್ಟರೆ ನಮ್ಮ ಬಳಿ ಇನ್ಯಾವ ನಂಬರೂ ಇಲ್ಲ! ಅವಳದ್ದೇನಿದ್ದರೂ ರಿಸೀವಿಂಗ್ ಅಷ್ಟೆ. ತಾನಾಗಿ ಯಾರಿಗೂ ಕಾಲ್ ಮಾಡುವುದಿಲ್ಲ. ಇವಿಷ್ಟನ್ನು ಆ ವ್ಯಕ್ತಿಗೆ ವಿವರಿಸಿದೆ. ಆತ ಹೇಳಿದ: “ನೀವು ಏಪ್ರಿಲ್ 25ರಂದು ಮುಂಬೈ ಅಂತರರಾಷ್ಟ್ರೀಯ ಏರ್‌ಪೋರ್ಟ್‌ನಲ್ಲಿ ಹೊಸ ಸಿಮ್ ಖರೀದಿಸಿದ್ದೀರಿ ನಂಬರ್ 7738954652”. ಅರೆ! ನಾವು ಬೆಂಗಳೂರು ಬಿಟ್ಟು ಹೋಗಲೇ ಇಲ್ಲ. ‘ನೀವು ಯಾರು?ʼ ಎಂದು ಕೇಳಿದೆ.
‘ನಾನು ನ್ಯಾಶನಲ್ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್ ನಿಂದ ಮಾತಾಡುತ್ತಿದ್ದೇನೆ. ನಿಮ್ಮ ವಿವರಣೆ ಏನಿದ್ದರೂ ನನ್ನ ಮೇಲಧಿಕಾರಿಗೆ ಹೇಳಿ, ಕನೆಕ್ಟ್ ಮಾಡುತ್ತೇನೆʼ ಎಂದ.
‘ಪ್ರಜಾವಾಣಿ’ ಅಂಕಣಕಾರ ನಾಗೇಶ ಹೆಗಡೆ ಅವರಿಗೆ ಆದ ಡಿಜಿಟಲ್ ಅರೆಸ್ಟ್ ಪ್ರಕರಣವನ್ನು ಎರಡು ಭಾಗಗಳಲ್ಲಿ ಸುದೀರ್ಘವಾಗಿ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
***
ಡಿಜಿಟಲ್ ಅರೆಸ್ಟ್‌ನಲ್ಲಿ ತಾವು ₹1.5 ಕೋಟಿ ಕಳೆದುಕೊಂಡ ಬಗ್ಗೆ ಹರಿಯಾಣದ ವೃದ್ಧ ದಂಪತಿಯೊಬ್ಬರು ಸುಪ್ರೀಂ ಕೋರ್ಟ್‌ಗೆ ಇತ್ತೀಚೆಗೆ ಪತ್ರ ಬರೆದಿದ್ದರು. ಸೆ.1ರಿಂದ ಸೆ.16ರವರೆಗೆ ದಂಪತಿಯನ್ನು ‘ಡಿಜಿಟಲ್ ಅರೆಸ್ಟ್’ನಲ್ಲಿ ಇರಿಸಲಾಗಿತ್ತು. ವಂಚಕರು ತಾವು ಸಿಬಿಐ ಮತ್ತು ನ್ಯಾಯಾಲಯದ ಅಧಿಕಾರಿಗಳು ಎಂದು ಹೇಳಿಕೊಂಡಿದ್ದರು. ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳ ನಕಲಿ ಸಹಿ ಇದ್ದ ಸುಳ್ಳು ಆದೇಶ ಪತ್ರವೊಂದನ್ನು ತೋರಿಸಿದ್ದ ವಂಚಕರು, ಹಣ ನೀಡದಿದ್ದರೆ ಬಂಧಿಸಲಾಗುವುದು ಎಂದು ಬೆದರಿಕೆ ಹಾಕಿದ್ದರು ಎಂದೂ ಈ ದಂಪತಿ ದೂರಿನಲ್ಲಿ ಹೇಳಿದ್ದರು.
ಈ ಸಂಬಂಧ ಸುಪ್ರೀಂ ಕೋರ್ಟ್ ಅ.17ರಂದು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ವಿಚಾರಣೆ ಆರಂಭಿಸಿತ್ತು ಮತ್ತು ಈ ಕುರಿತು ಪ್ರತಿಕ್ರಿಯಿಸುವಂತೆ ಕೇಂದ್ರ ಸರ್ಕಾರ ಹಾಗೂ ಸಿಬಿಐಗೆ ನೋಟಿಸ್ ನೀಡಿತ್ತು. ಅಲ್ಲಿಂದ ಡಿಜಿಟಲ್ ಅರೆಸ್ಟ್ ಕುರಿತ ತನಿಖಾ ಪ್ರಕ್ರಿಯೆ ಚುರುಕು ಪಡೆದಿದೆ.
ಹೌದು, ಭಾರತದಲ್ಲಿ ಸಕ್ರೀಯವಾಗಿರುವ ‘ಡಿಜಿಟಲ್ ಅರೆಸ್ಟ್’ ಎಂಬ ಕಾಲ್ಪನಿಕ ಮತ್ತು ವಂಚಕರೇ ಹುಟ್ಟುಹಾಕಿರುವ ಅಪರಾಧ ಕೃತ್ಯಕ್ಕೆ ಬಹಳಷ್ಟು ಜನರು ಹಣ ಕಳೆದುಕೊಂಡಿದ್ದಾರೆ. ಕೇವಲ ಹಣವಷ್ಟೇ ಅಲ್ಲ, ಅವಮಾನ ಹಾಗೂ ಖಿನ್ನತೆಯಿಂದಲೂ ಬಳಲುತ್ತಿರುವುದು ನವ ಆಧುನಿಕ ಡಿಜಿಟಲ್ ಯುಗದ ಪಿಡುಗಾಗಿದೆ.
ನಿವೃತ್ತಿಯಾಗಿ, ಸಂಧ್ಯಾಕಾಲಕ್ಕೆ ಹಣ ಕೂಡಿಟ್ಟು, ಅದರಲ್ಲೇ ಜೀವನ ನಡೆಸುತ್ತಿರುವವರನ್ನೇ ಗುರಿಯಾಗಿಸಿ ಹೊಸ ಬಗೆಯ ತಂತ್ರಜ್ಞಾನ ಆಧಾರಿತ ಈ ಕೃತ್ಯದಲ್ಲಿ ದೂರದಲ್ಲೆಲ್ಲೋ ಕುಳಿತ ಅಜ್ಞಾನ ವ್ಯಕ್ತಿಯೊಬ್ಬ ಸಮ್ಮೋಹನ, ಬೆದರಿಕೆ ಮತ್ತು ಆತಂಕ ಸೃಷ್ಟಿಸಿ ಹಣ ದೋಚುವ ದೊಡ್ಡ ಮಟ್ಟದ ವಂಚನೆ ಬ್ರಹ್ಮರಾಕ್ಷಸನ ರೂಪ ತಾಳಿದೆ.
ಚಿಕ್ಕಬಳ್ಳಾಪುರದ ಸಂಸದ ಡಾ.ಕೆ.ಸುಧಾಕರ್ ಅವರ ಪತ್ನಿ, ವೈದ್ಯೆ ಪ್ರೀತಿ ಅವರಿಗೆ ಸೈಬರ್ ವಂಚಕರು ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ಬೆದರಿಸಿ ₹14 ಲಕ್ಷ ದೋಚಿದ್ದರು. ಇನ್ಫೊಸಿಸ್‌ನ ಸುಧಾ ಮೂರ್ತಿ ಅವರನ್ನು ಡಿಜಿಟಲ್ ಅರೆಸ್ಟ್‌ಗೆ ಒಳಪಡಿಸುವ ಯತ್ನವೂ ನಡೆದಿತ್ತು. ಇದಷ್ಟೇ ಅಲ್ಲ, ಡಿಜಿಟಲ್ ಅರೆಸ್ಟ್ ಎಂಬುದು ಹಲವು ರೀತಿಯ ಸೈಬರ್ ಅಪರಾಧಗಳಲ್ಲೊಂದು. ಆದರೆ ಇದು ಸೃಷ್ಟಿಸಿರುವ ಆತಂಕವೂ ದೊಡ್ಡದು.
ಇವೆಲ್ಲವೂ ಕರ್ನಾಟಕದ್ದಾದರೆ, ಗುರುಗ್ರಾಮದ ಅಂಜಲಿ ಎಂಬುವವರನ್ನು ಸಿಬಿಐ ಅಧಿಕಾರಿ ಎಂದು ಹೇಳಿಕೊಂಡು ವಿಡಿಯೊ ಕರೆ ಮಾಡಿದ ವ್ಯಕ್ತಿ ₹5.85 ಕೋಟಿ ದೋಚಿದ್ದ. ಮುಂಬೈನ ನಿವೃತ್ತ ಬ್ಯಾಂಕ್ ಉದ್ಯೋಗಿಯೊಬ್ಬರು ಮೂರು ದಿನ ‘ಡಿಜಿಟಲ್ ಅರೆಸ್ಟ್’ಗೆ ಒಳಗಾಗಿ ₹50 ಲಕ್ಷ ಕಳೆದುಕೊಂಡಿದ್ದಾರೆ. ಮುಂಬೈನ ಉದ್ಯಮಿಯೊಬ್ಬರು ‘ವರ್ಚುವಲ್ ನ್ಯಾಯಾಲಯ’ ಹೆಸರಿನಲ್ಲಿ ₹58 ಕೋಟಿ ಕಳೆದುಕೊಂಡಿದ್ದಾರೆ. ಇಂದೋರ್‌ನ ವೈದ್ಯರೊಬ್ಬರು ಹೂಡಿಕೆಗೆ ಸಂಬಂಧಿಸಿದ ಪರಿಶೀಲನೆ ಸ್ಕ್ಯಾಮ್‌ನಲ್ಲಿ ₹3.5 ಕೋಟಿ ಕಳೆದುಕೊಂಡ ಪ್ರಕರಣಗಳು ಕೆಲವು ಮಾತ್ರ.
2022ರಿಂದ 2025ರ ಅವಧಿಯಲ್ಲಿ ಈ ವಂಚನೆಯ ವ್ಯಾಪ್ತಿ ₹2,580 ಕೋಟಿ ಎಂದರೆ ಇದರ ಆಳ ಮತ್ತು ಅಗಲವನ್ನು ಊಹಿಸಬಹುದು. ಇದರಲ್ಲಿ ಬೆಂಗಳೂರಿನಲ್ಲಿ ನಡೆದ ವಂಚನೆಯ ಪ್ರಮಾಣ ಶೇ 26ರಷ್ಟು, ಹೈದರಾಬಾದ್‌ನಲ್ಲಿ ಶೇ 20 ಹಾಗೂ ದೆಹಲಿ–ಎನ್‌ಸಿಆರ್‌ನಲ್ಲಿ ಶೇ 18ರಷ್ಟು ಪ್ರಕರಣಗಳು ದಾಖಲಾಗಿವೆ.
ಸರ್ಕಾರಿ ದಾಖಲೆಗಳ ಪ್ರಕಾರ 2022ರಲ್ಲಿ 39,925 ಪ್ರಕರಣಗಳು ದಾಖಲಾಗಿದ್ದರೆ, 2024ರಲ್ಲಿ ಇದು 1.23 ಲಕ್ಷಕ್ಕೆ ಏರಿಕೆಯಾಗಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ ವರದಿಯಲ್ಲಿ ಹೇಳಲಾಗಿದೆ.. ವೃದ್ಧರೇ ಹೆಚ್ಚಾಗಿ ತುತ್ತಾಗುತ್ತಿರುವ ಈ ಹಗರಣದ ವ್ಯಾಪ್ತಿಯನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ. ಎಲ್ಲಾ ರಾಜ್ಯಗಳು ತಮ್ಮಲ್ಲಿರುವ ಡಿಜಿಟಲ್ ಅರೆಸ್ಟ್ ಪ್ರಕರಣಗಳನ್ನು ಸಿಬಿಐಗೆ ಹಸ್ತಾಂತರಿಸುವಂತೆ ನಿರ್ದೇಶನ ನೀಡಿದೆ. ಈ ಪೀಡೆಯನ್ನು ಬೇರು ಸಹಿತ ಕಿತ್ತುಹಾಕಲು ಅಗತ್ಯವಿರುವ ಸಾಧನ, ಮಾನವ ಸಂಪನ್ಮೂಲ, ತಂತ್ರಜ್ಞರ ನೆರವು ಏನು ಬೇಕಾದರೂ ಕೇಳಿ, ಕೊಡಿಸಲು ಸಿದ್ಧ ಎಂದಿರುವುದನ್ನು ಗಮನಿಸಿದರೂ ಈ ಅಪರಾಧ ಎಷ್ಟು ಆಳಕ್ಕಿಳಿದಿದೆ ಎಂಬುದನ್ನು ಊಹಿಸಬಹುದು.
ಹಾಗೆಂದು ಅಧಿಕಾರಿಗಳೇನು ಕೈಕಟ್ಟಿ ಕುಳಿತಿಲ್ಲ. ವಾಟ್ಸ್‌ಆ್ಯಪ್ ಮತ್ತು ಸ್ಕೈಪ್ ತಂತ್ರಾಂಶ ಬಳಸಿ ಕೃತ್ಯ ಎಸಗಿದವರನ್ನು ಅಥವಾ ಕೃತ್ಯಕ್ಕೆ ಬಳಸಿದ್ದಾರೆ ಎನ್ನಲಾದ ಲಕ್ಷಾಂತರ ಸಿಮ್ ಕಾರ್ಡ್‌ಗಳು, ಸಾವಿರಾರು ಐಎಂಇಐ ಸಂಖ್ಯೆಗಳನ್ನು ರದ್ದುಪಡಿಸಿದ್ದಾರೆ. ಹೀಗಿದ್ದರೂ ಡಿಜಿಟಲ್ ಅರೆಸ್ಟ್ ಅಲ್ಲಲ್ಲಿ ವರದಿಯಾಗುತ್ತಲೇ ಇದೆ. ಭಾರತದಾಚೆ ಕುಳಿತು, ಇಲ್ಲಿನವರನ್ನೇ ಬಂಧಿಸುವ ದೊಡ್ಡ ಜಾಲವೇ ಬೆಳೆದು ನಿಂತಿರುವುದು ಪೊಲೀಸ್, ಸಿಬಿಐ, ಸರ್ಕಾರ ಹಾಗೂ ಸುಪ್ರೀಂ ಕೋರ್ಟ್ ಅನ್ನೇ ನಿದ್ದೆಗೆಡಿಸಿದೆ.
ಜಾರಿ ನಿರ್ದೇಶನಾಲಯ, ಎಕ್ಸೈಸ್, ಸಿಬಿಐ, ಆರ್‌ಬಿಐ, ಪೊಲೀಸ್ ಹೀಗೆ ಸರ್ಕಾರದ ವಿವಿಧ ತನಿಖಾ ಸಂಸ್ಥೆಯ ಹೆಸರು, ಸಮವಸ್ತ್ರ, ನಕಲಿ ಆದೇಶ, ಮೊಹರು ಬಳಸಿಕೊಂಡು ವಿಡಿಯೊ ಕರೆ ಮಾಡುವ ವಂಚಕರು, ಗಂಭೀರ ಸ್ವರೂಪದ ಅಪರಾಧ ಕೃತ್ಯದ ನೆಪವೊಡ್ಡಿ ಬೆದರಿಕೆಯೊಡ್ಡುತ್ತಾರೆ. ಕ್ಯಾಮೆರಾದಿಂದ ಅಲ್ಲಾಡದಂತೆ ನೋಡಿಕೊಳ್ಳುವ ಇವರು, ಹಣ ವರ್ಗಾವಣೆ ಮಾಡುವಂತೆ ಸೂಚಿಸುತ್ತಾರೆ. ಇದಕ್ಕಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಾರೆ. ಅದು ನ್ಯಾಯಾಲಯದ ಆದೇಶವೂ ಆಗಬಹುದು, ಸಿಬಿಐ ಅಥವಾ ಜಾರಿ ನಿರ್ದೇಶನಾಲಯದ ಬಂಧನ ವಾರೆಂಟ್ ಕೂಡಾ ಅಗಿರಬಹುದು. ಹೀಗೆ ಹಂತ ಹಂತವಾಗಿ ಹಣ ವರ್ಗಾಯಿಸಿಕೊಳ್ಳುತ್ತಾರೆ. ಇದಕ್ಕಾಗಿ ಡೀಪ್‌ಫೇಕ್ ವಿಡಿಯೊ, ಧ್ವನಿ ಬದಲಿಸುವ ತಂತ್ರಜ್ಞಾನ ಬಳಕೆ ಮಾಡುತ್ತಾರೆ. ಇಂಥ ವಂಚನೆಗಳು ಕರ್ನಾಟಕ ಮತ್ತು ಬಿಹಾರದಲ್ಲಿ ಅತಿ ಹೆಚ್ಚು ದಾಖಲಾಗಿವೆ.
ಅಕ್ರಮ ಹಣ ವರ್ಗಾವಣೆ, ಮಾದಕ ದ್ರವ್ಯ ಕಳ್ಳಸಾಗಣೆ… ಹೀಗೆ ಹಲವು ಗಂಭೀರ ಸ್ವರೂಪದ ಆರೋಪಗಳನ್ನು ಮಾಡಿ ಮಾನಸಿಕವಾಗಿ ಕುಗ್ಗಿಸುವುದು ಮತ್ತು ಅದಕ್ಕಾಗಿ ವೃದ್ಧರನ್ನೇ ಗುರಿಯಾಗಿಸುವುದು ಈ ವಂಚಕರ ಸಂಚು. ಆದರೆ ಹಣ ಇರುವವರ ಮತ್ತು ವಯಸ್ಸಾದವರ ದಾಖಲೆ ಇವರ ಕೈಗೆ ಹೇಗೆ ಸೇರಿತು ಎಂಬುದರ ಜತೆಗೆ, ಡಿಜಿಟಲ್ ದಾಖಲೆಗಳ ಸುರಕ್ಷತೆಯ ಪ್ರಶ್ನೆಯೂ ಮೂಡಿದೆ.
ಆನ್‌ಲೈನ್‌ನಲ್ಲೇ ಜಾಮೀನು ನೀಡುವ ಅಥವಾ ತನಿಖಾ ಶುಲ್ಕ ಭರಿಸುವಂತೆ ಪರದೆ ಆಚೆ ಇರುವ ವ್ಯಕ್ತಿ ಬೆದರಿಸುತ್ತಾನೆ. ಇಲ್ಲಿಂದ ತಪ್ಪಿಸಿಕೊಂಡರೆ ಸಾಕು ಎಂಬಂತೆ ವಂಚನೆಗೊಳಗಾದವರು ಹಣ ನೀಡುತ್ತಲೇ ಇರುತ್ತಾರೆ. ಇದಕ್ಕೆ ಹಣ ಕಳೆದುಕೊಂಡವರೆಷ್ಟೋ... ಹೃದಯಾಘಾತಕ್ಕೆ ಒಳಗಾದವರೂ ಹಲವರಿದ್ದಾರೆ.
ಈ ಕುರಿತು ಜಾಗೃತಿ ಕಾರ್ಯಾಗಾರಗಳು, ಸುದ್ದಿಗಳು ವಿವಿಧ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದರೂ, ವಂಚಕರ ಜಾಲಕ್ಕೆ ಬಲಿಯಾಗುವವರ ಸಂಖ್ಯೆಯೂ ಬೆಳೆಯುತ್ತಲೇ ಇದೆ.
ಭಾರತದಲ್ಲಿರುವ ಹೊಸ ಕಾನೂನು ಚೌಕಟ್ಟಾದ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ಅಡಿಯಲ್ಲಿ ‘ಡಿಜಿಟಲ್ ಅರೆಸ್ಟ್’ ಎಂಬುದನ್ನು ವಂಚನೆ, ಸೈಬರ್ ಬೆದರಿಕೆ ಹಾಗೂ ಆರ್ಥಿಕ ಸುಲಿಗೆಯ ಅಪರಾಧ ಎಂದೆನ್ನಲಾಗಿದೆ.
2025ರ ಆರಂಭದಲ್ಲಿ ಮೊದಲೆರೆಡು ತಿಂಗಳಲ್ಲೇ 17 ಸಾವಿರ ಡಿಜಿಟಲ್ ಅರೆಸ್ಟ್ ಪ್ರಕರಣಗಳು ನಡೆದಿರುವುದಕ್ಕೆ ಸುಪ್ರೀಂ ಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ಕುರಿತು ಕೇಂದ್ರ, ಸಿಬಿಐ ಮತ್ತು ರಾಜ್ಯಗಳಿಂದ ಮಾಹಿತಿ ಕೇಳಿದೆ.
ಇದೇ ಹೊತ್ತಿಗೆ ಕೇಂದ್ರ ಗೃಹ ಇಲಾಖೆಯು ಡಿಜಿಟಲ್ ಪೊಲೀಸ್ ಪೋರ್ಟಲ್ ಮೂಲಕ ಸೈಬರ್ ಅಪರಾಧಗಳ ಮೇಲೆ ನಿಗಾ ವಹಿಸಿದೆ. ಕೃತಕ ಬುದ್ಧಿಮತ್ತೆಯನ್ನೂ ಬಳಸಿ ಅಪಾಯವನ್ನು ಪತ್ತೆ ಮಾಡುವ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಹದ್ದಿನ ಕಣ್ಣಿಟ್ಟಿದೆ. ಹಲವು ಗುಪ್ತಚರ ಇಲಾಖೆಗಳ ನೆರವನ್ನೂ ಪಡೆದಿದೆ ಎಂದು ವರದಿಯಾಗಿದೆ.
ಹೀಗಿದ್ದರೂ, ವಂಚಕರು ನೆಲದಡಿಯಲ್ಲಿ ನುಸುಳಿ ಅಪರಾಧ ಕೃತ್ಯಗಳನ್ನು ನಡೆಸುತ್ತಿರುವುದು ಮತ್ತು ಡಿಜಿಟಲ್ ಅರೆಸ್ಟ್ ಈಗಲೂ ಮುಂದುವರಿಯುತ್ತಿರುವುದು ವರದಿಯಾಗುತ್ತಲೇ ಇದೆ. ದೇಶದ ಗಡಿಯಾಚೆ ಕುಳಿತು ನಡೆಸುತ್ತಿರುವ ಈ ಸೈಬರ್ ಅಪರಾಧವನ್ನು ಹತ್ತಿಕ್ಕುವುದು ದೇಶದ ತನಿಖಾ ದಳದ ಎದುರಿರುವ ಈಗಿರುವ ಅತಿ ದೊಡ್ಡ ಸವಾಲು.
ಡಿಜಿಟಲ್ ಜಗತ್ತಿನಲ್ಲಿ ನಾಗರಿಕರ ಸುರಕ್ಷತೆಗಾಗಿ ಆವಿಷ್ಕಾರಗೊಳಿಸಲಾದ ಮುಖ ಚಹರೆ ಪತ್ತೆ, ಅಪಾಯವನ್ನು ಮೊದಲೇ ಪತ್ತೆ ಮಾಡಿ ತಿಳಿಸುವ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ ಆಧಾರಿತ ಅಪರಾಧ ಟ್ರ್ಯಾಕಿಂಗ್ ಸೌಲಭ್ಯಗಳನ್ನೇ ವಂಚಕರು ಅನುಕರಿಸಿ ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿರುವುದೇ ವ್ಯವಸ್ಥೆಯ ವಿಡಂಬನೆಯಂತೆ ತೋರುತ್ತಿದೆ.
ಭಾರತದಲ್ಲಿ ಬಳಕೆಯಲ್ಲಿರುವ ನೆಟ್‌ವರ್ಕ್ ಟ್ರಾಫಿಕ್ ವಿಶ್ಲೇಷಣಾ ಯೋಜನೆಯಾದ NETRA ಎಂಬುದು ನೈಜ ಸಮಯದಲ್ಲಿ ಅಪಾಯವನ್ನು ಗುರುತಿಸಲು ಅಭಿವೃದ್ಧಿಪಡಿಸಲಾದ ಡಿಜಿಟಲ್ ವ್ಯವಸ್ಥೆಯಾಗಿದೆ. ಆದರೆ ಇಂಥದ್ದೊಂದು ಅಸ್ತ್ರ ಪೊಲೀಸ್ ವ್ಯವಸ್ಥೆಯಲ್ಲಿದೆ ಎಂಬುದರ ಮಾಹಿತಿ ಮತ್ತದರ ಪರಿಚಯವೇ ವಂಚಕರು ನೆಲದಡಿ ನುಸುಳುವಂತೆ ಮಾಡಿದೆ.
‘ಡಿಜಿಟಲ್ ಅರೆಸ್ಟ್‌ಗೆ ಒಳಗಾದ ಯಾವುದೇ ವ್ಯಕ್ತಿಯು, ‘ನೀವು ಎಐ ಕಣ್ಗಾವಲಿನಲ್ಲಿದ್ದೀರಿ’ ಅಥವಾ ‘ಲೈವ್ ಮಾನಿಟರ್‌ನಲ್ಲಿದ್ದೀರಿ’ ಎಂದು ಕೇಳಿದರೆ ಸಾಕು, ಮುಂದೇನು ಮಾಡಬೇಕೆಂಬುದೇ ಅರ್ಥವಾಗುವುದಿಲ್ಲ. ನಿಜಕ್ಕೂ ಅಷ್ಟು ಗಂಟೆಗಳಲ್ಲಿ ಪ್ರತಿ ಅರ್ಧ ಗಂಟೆಗೊಮ್ಮೆಯಷ್ಟೇ ಮೇಲೇಳಲು ಅವಕಾಶ ನೀಡುತ್ತಾರೆ. ಅದೊಂದು ಹೇಳಲಾಗದ ಯಾತನೆ’ ಎಂಬುದು ಇಂಥ ವಂಚನೆಗೆ ಒಳಗಾದ ಧಾರವಾಡದ ಹೆಸರು ಬಹಿರಂಗಪಡಿಸಲು ಒಪ್ಪದ ಹಿರಿಯರೊಬ್ಬರ ಅನುಭವದ ಮಾತು.
ಡಿಜಿಟಲ್ ಅರೆಸ್ಟ್‌ಗೆ ಒಳಗಾದ ವ್ಯಕ್ತಿಯು ತಾನು ಸೆರೆಮನೆಯಲ್ಲಿದ್ದ ಅನುಭವವನ್ನು ಹೊಂದುವ ಮೂಲಕ ಮಾನಸಿಕ ಆಘಾತಕ್ಕೆ ಒಳಗಾಗುವುದು ಇದರಿಂದ ಸೃಷ್ಟಿಯಾಗಿರುವ ಮತ್ತೊಂದು ಸಮಸ್ಯೆ. ಹಣಕಾಸಿನ ನಷ್ಟದ ಹೊರತಾಗಿಯೂ, ಅವಮಾನ ಮತ್ತು ಮಾನಸಿಕ ಖಿನ್ನತೆಗೆ ಇವರನ್ನು ಅತೀವವಾಗಿ ನೂಕುತ್ತಿದೆ. ಇಷ್ಟು ಮಾತ್ರವಲ್ಲ, ತಮ್ಮ ಬಳಿ ಇರುವ ಸಾಧನವೇ ನಮ್ಮನ್ನು ಇದಕ್ಕೆ ನೂಕಿದೆ ಎಂಬ ಶಾಶ್ವತ ಚಿಂತೆಗೂ ಇವರು ಒಳಗಾಗುತ್ತಾರೆ. ದೀರ್ಘ ಕಾಲದವರೆಗೆ ಡಿಜಿಟಲ್ ಅರೆಸ್ಟ್‌ಗೆ ಒಳಗಾದರೆ ಅವರು ಆ ಬಂಧನದ ಮನಸ್ಥಿತಿಯಿಂದ ಆಚೆ ಬರುವುದೇ ಕಷ್ಟವಾಗಬಹುದು ಎಂದೂ ಮನೋವಿಜ್ಞಾನಿಗಳು ಎಚ್ಚರಿಸಿದ್ದಾರೆ.
ಸೈಬರ್ ಅಪರಾಧ ಪ್ರಕರಣಗಳ ಕುರಿತು ಹೆಚ್ಚಿನ ಮಟ್ಟದಲ್ಲಿ ಜಾಗೃತಿ ಮೂಡಿಸಿದ್ದರಿಂದ ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ವಂಚಿಸುತ್ತಿದ್ದ ಪ್ರಕರಣಗಳು ಕೊಂಚ ತಗ್ಗಿದ್ದವು. ಕಳೆದ ಆರು ತಿಂಗಳಿಂದ ಮತ್ತೆ ಅದೇ ರೀತಿಯ ವಂಚನೆ ಪ್ರಕರಣಗಳು ಹೆಚ್ಚು ವರದಿ ಆಗುತ್ತಿವೆ. ‘ಡಿಜಿಟಿಲ್ ಅರೆಸ್ಟ್’ ಎಂಬುದು ಇಲ್ಲ. ಈ ರೀತಿಯ ವಂಚಿಸಲು ಪ್ರಯತ್ನಿಸಿದರೆ ರಾಷ್ಟ್ರೀಯ ಸೈಬರ್ ಸಹಾಯವಾಣಿ 1930 ಅಥವಾ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಬಹುದು.–ಸಿ.ವಂಶಿಕೃಷ್ಣ, ಹೆಚ್ಚುವರಿ ಪೊಲೀಸ್ ಕಮಿಷನರ್ (ಪಶ್ಚಿಮ ವಿಭಾಗ)
‘ಭಯಪಡಬೇಡಿ, ಪಾವತಿಸುವ ಮುನ್ನ ಪರಿಶೀಲಿಸಿ’ ಎಂಬ ಘೋಷವಾಕ್ಯದೊಂದಿಗೆ ಬ್ಯಾಂಕ್ ಹಾಗೂ ಇನ್ನಿತರ ಹಣಕಾಸು ಸಂಸ್ಥೆಗಳು ಜನಜಾಗೃತಿ ಮೂಡಿಸುತ್ತಿವೆ.
ವಂಚಕರು ತೋರಿಸುವ ನಕಲಿ ಸರ್ಕಾರಿ ಆದೇಶಗಳನ್ನು ನಂಬುವ ಮೊದಲು, ಸರ್ಕಾರಿ ಪೋರ್ಟಲ್‌ಗಳ ಮೂಲಕವೇ ಅಧಿಕಾರಿಗಳ ಆದೇಶವನ್ನು ಪರಿಶೀಲಿಸಬೇಕು.
‘ಡಿಜಿಟಲ್ ಬಂಧನ’ ಎಂಬ ಪರಿಕಲ್ಪನೆಯೇ ಪೊಲೀಸ್ ವ್ಯವಸ್ಥೆಯಲ್ಲಿ ಇಲ್ಲ ಎಂಬುದನ್ನು ಅಧಿಕಾರಿಗಳು ಪದೇಪದೇ ಹೇಳುತ್ತಲೇ ಬಂದಿದ್ದಾರೆ. ಅದನ್ನು ಜನರು ಅರ್ಥ ಮಾಡಿಕೊಳ್ಳಬೇಕು.
ಅಪರಿಚಿತ ವಿಡಿಯೊ ಕರೆಗಳನ್ನು ನಿರಾಕರಿಸುವುದು ಮತ್ತು ಸ್ವೀಕರಿಸದೇ ಇರುವುದು ಲೇಸು
ಬಲವಂತದಲ್ಲಿ ಅಥವಾ ಒತ್ತಡದಲ್ಲಿ ಹಣ ವರ್ಗಾವಣೆಯನ್ನು ತಪ್ಪಿಸಬೇಕು
cybercrime.gov.in ಅಂತರ್ಜಾಲ ತಾಣದಲ್ಲಿ ದೂರು ದಾಖಲಿಸುವ ಮೂಲಕವೂ ಇಂಥ ಕೃತ್ಯಗಳನ್ನು ತಡೆಗಟ್ಟಲು ಸಾಧ್ಯ.
‘ಡಿಜಿಟಲ್ ಬಂಧನ’ ಎಂಬುದು ತಂತ್ರಜ್ಞಾನ, ಮನೋವಿಜ್ಞಾನ ಮತ್ತು ಕಾನೂನು ವ್ಯಾಪ್ತಿಗೆ ಒಳಪಟ್ಟ ಅಪರಾಧ ಕೃತ್ಯ. ಇಲ್ಲಿ ಗ್ರಹಿಕೆಯನ್ನೇ ವಾಸ್ತವವೆಂದು ನಂಬಿಸುವ ವಂಚಕರು ಅದನ್ನೇ ಅಸ್ತ್ರವನ್ನಾಗಿ ಪ್ರಯೋಗಿಸುತ್ತಿದ್ದಾರೆ. ಇದಕ್ಕೆ ನಾಗರಿಕರಲ್ಲಿ ಡಿಜಿಟಲ್ ಜಾಗೃತಿ ಮೂಡಿಸುವುದರ ಜತೆಗೆ, ಪೊಲೀಸ್ ವ್ಯವಸ್ಥೆಯನ್ನೇ ಸ್ಮಾರ್ಟ್ ಮಾಡುವುದು ಅತ್ಯಗತ್ಯ ಎಂಬುದು ತಜ್ಞರ ಅಭಿಪ್ರಾಯ. ಡಿಜಿಟಲ್ ಅರೆಸ್ಟ್ ಎಂಬ ವಿಷಯದಲ್ಲಿ ಸದ್ಯ ನಡೆಯುತ್ತಿರುವುದು ಅಜ್ಞಾತ ಸ್ಥಳದಲ್ಲಿ ಅಡಗಿರುವ ವಂಚಕರು ಮತ್ತು ದೇಶದ ಪೊಲೀಸ್ ವ್ಯವಸ್ಥೆ ನಡುವಿನ ಯುದ್ಧ. ಇದನ್ನು ಎದುರಿಸುವ ಪ್ರಮುಖ ಅಸ್ತ್ರವೇ ಜಾಗೃತಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.