ADVERTISEMENT

Explainer | H1B ವೀಸಾಗೆ ಯಾಕಷ್ಟು ಬೇಡಿಕೆ..?; ಪಡೆಯುವ ಪ್ರಕ್ರಿಯೆ ಹೀಗಿದೆ...

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಸೆಪ್ಟೆಂಬರ್ 2025, 12:33 IST
Last Updated 23 ಸೆಪ್ಟೆಂಬರ್ 2025, 12:33 IST
   
ಎಚ್‌ ವರ್ಗದ ವೀಸಾಗಳಲ್ಲಿ ಎಚ್1ಬಿ ವೀಸಾ ಪ್ರಮುಖವಾದುದು. ವಿದೇಶಗಳ ನುರಿತ ತಂತ್ರಜ್ಞರು, ಶೈಕ್ಷಣಿಕ ವಲಯದ ವೃತ್ತಿಪರರು, ನಿರ್ದಿಷ್ಟ ಕ್ಷೇತ್ರವೊಂದರಲ್ಲಿ ವಿಶೇಷ ಪರಿಣಿತಿ ಇರುವವರಿಗೆ ಈ ವೀಸಾ ಸಿಗುತ್ತದೆ.

ದೇಶಕ್ಕೆ ಭೇಟಿ ನೀಡುವ ವಿದೇಶಿಗರಿಗೆ ಅಮೆರಿಕವು ಹತ್ತಾರು ರೀತಿಯ ವೀಸಾಗಳನ್ನು ಒದಗಿಸುತ್ತದೆ. ಯಾವ ಉದ್ದೇಶಕ್ಕೆ ಭೇಟಿ ನೀಡುತ್ತಾರೆ ಎಂಬುದರ ಮೇಲೆ ಯಾವ ವೀಸಾ ಎಂದು ನಿರ್ಧರಿಸಲಾಗುತ್ತದೆ. ತಾತ್ಕಾಲಿಕ ವೀಸಾ, ಕಾಯಂ ವೀಸಾ, ವಿದ್ಯಾರ್ಥಿ ವೀಸಾ ಮತ್ತು ವ್ಯಾಪಾರದ ಉದ್ದೇಶಕ್ಕೆ ವೀಸಾ ನೀಡಲಾಗುತ್ತದೆ. ಅಮೆರಿಕದಲ್ಲಿ ನಿಗದಿತ ಅವಧಿವರೆಗೆ ಉದ್ಯೋಗ ಮಾಡಲು ಬಯಸುವ ವಿದೇಶಿ ನೌಕರರಿಗೆ ತಾತ್ಕಾಲಿಕ ವೀಸಾ ನೀಡಲಾಗುತ್ತದೆ. ಉದ್ಯೋಗಿಯ ಸಂಗಾತಿ ಅಥವಾ ಅವಲಂಬಿತರಿಗೂ ವೀಸಾ ನೀಡಲಾಗುತ್ತದೆ. ಉದ್ಯೋಗಿಗಳ ಪರವಾಗಿ ಉದ್ಯೋಗದಾತ ಸಂಸ್ಥೆಯು ವೀಸಾಕ್ಕೆ ಅರ್ಜಿ ಸಲ್ಲಿಸುತ್ತದೆ. 

ಎಚ್‌ ವರ್ಗದ ವೀಸಾಗಳಲ್ಲಿ ಎಚ್1ಬಿ ವೀಸಾ ಪ್ರಮುಖವಾದುದು. ವಿದೇಶಗಳ ನುರಿತ ತಂತ್ರಜ್ಞರು, ಶೈಕ್ಷಣಿಕ ವಲಯದ ವೃತ್ತಿಪರರು, ನಿರ್ದಿಷ್ಟ ಕ್ಷೇತ್ರವೊಂದರಲ್ಲಿ ವಿಶೇಷ ಪರಿಣಿತಿ ಇರುವವರಿಗೆ ಈ ವೀಸಾ ಸಿಗುತ್ತದೆ. ಉದ್ಯೋಗದ ಅನುಭವಕ್ಕೆ ತಕ್ಕಷ್ಟು ಅಥವಾ ಅದಕ್ಕೂ ಹೆಚ್ಚಿನ ದರ್ಜೆಯ ಕಾಲೇಜು ಪದವಿ ಪಡೆದಿರಬೇಕು. ಅಮೆರಿಕದ ಉದ್ಯೋಗದಾತ ಸಂಸ್ಥೆಯು ಉದ್ಯೋಗಿಯ ಪರವಾಗಿ ವೀಸಾಕ್ಕೆ ಅರ್ಜಿ ಸಲ್ಲಿಸುತ್ತದೆ. ನಿರ್ದಿಷ್ಟಪಡಿಸಿದ ಕೆಲಸವೊಂದನ್ನು ಮಾಡಬಲ್ಲ ಕೌಶಲದ ಉದ್ಯೋಗಿಗಳು ಅಮೆರಿಕದಲ್ಲಿ ಇಲ್ಲ ಎಂಬುದನ್ನು ಕಂಪನಿಯು ಸರ್ಕಾರಕ್ಕೆ ತಿಳಿಸಬೇಕು. ಎಚ್1ಬಿ ವೀಸಾ ಅವಧಿ 3 ವರ್ಷ. 

ಎಚ್‌1ಬಿ ವೀಸಾ ಪಡೆಯುವ ವಿಧಾನ

ಅಮೆರಿಕದಲ್ಲಿ ಉದ್ಯೋಗ ಮಾಡಬಯಸುವವರಿಗೆ ನೀಡಲಾಗುವ ಉದ್ಯೋಗದಾತರು ನೀಡುವ ಎಚ್‌1ಬಿ ವೀಸಾ ಪಡೆಯಲು ನೋಂದಣಿ, ಉದ್ಯೋಗದಾತರ ಪ್ರಾಯೋಜಕತ್ವ, ದಾಖಲೆಗಳು ಮತ್ತು ಕಾನ್ಸುಲರ್‌ ಪ್ರಕ್ರಿಯೆಗೆ ಒಳಪಡಬೇಕು. 

ADVERTISEMENT

ಬೇಕಿರುವ ಅರ್ಹತೆಗಳೇನು

ಪದವಿ ಅಥವಾ ಅದಕ್ಕೆ ಸಮನಾದ ಪದವಿ ಹೊಂದಿರಬೇಕು. ಅದಕ್ಕೆ ತಕ್ಕಂತೆ ವಿಶೇಷ ಪರಿಣಿತಿ ಹೊಂದಿದ ಉದ್ಯೋಗ ಇರಬೇಕು

ಅಮೆರಿಕದ ಕಂಪನಿಯಿಂದ ಉದ್ಯೋಗ ಅವಕಾಶ ಲಭಿಸಿರಬೇಕು. ಆ ಉದ್ಯೋಗವು ವಿಶೇಷ ಪರಿಣಿತಿ ಬೇಡುವ ಕೆಲಸವಾಗಿರಬೇಕು

ಉದ್ಯೋಗದಾತರು H1B ವೀಸಾವನ್ನು ಪ್ರಾಯೋಜಿಸಲು ಸಿದ್ಧರಿರಬೇಕು ಮತ್ತು ವಿದೇಶಿ ಕೆಲಸಗಾರರನ್ನು ನೇಮಿಸಿಕೊಳ್ಳುವುದರಿಂದ ಅಮೆರಿಕದ ಕಾರ್ಮಿಕರ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರುವುದಿಲ್ಲ ಎಂಬುದನ್ನು ತೋರಿಸಬೇಕು

ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೀಗಿದೆ...

1. ಕಂಪನಿಯು ಉದ್ಯೋಗ ನೀಡುವುದು ಮತ್ತದರ ತಯಾರಿ: ಅಮೆರಿಕ ಮೂಲದ ಕಂಪನಿ ಮಾತ್ರ ಎಚ್‌1ಬಿ ವೀಸಾ ಪ್ರಾಯೋಜಿಸಬಹುದು.  ಆದರೆ ಅರ್ಜಿದಾರರು ಸ್ವಯಂ ಪ್ರಾಯೋಜಕರಾಗಲು ಸಾಧ್ಯವಿಲ್ಲ. ಕನಿಷ್ಠ ಪದವಿಯೊಂದಿಗೆ ವಿಶೇಷ ಪರಿಣಿತಿ ಬೇಡುವ ಕೌಶಲವನ್ನು ಅಭ್ಯರ್ಥಿ ಹೊಂದಿರಬೇಕು

2. ಕಾರ್ಮಿಕ ಸ್ಥಿತಿ ಅರ್ಜಿ (LCA): ಉದ್ಯೋಗದಾತ ಕಂಪನಿಗಳು ಅಮೆರಿಕದ ಕಾರ್ಮಿಕ ಇಲಾಖೆಯಿಂದ ಪ್ರಮಾಣೀಕೃತ LCA ಅನ್ನು ಪಡೆಯುತ್ತದೆ. ಇದು ಉದ್ಯೋಗಿಗೆ ನ್ಯಾಯಯುತ ವೇತನ ಮತ್ತು ಕೆಲಸದ ಪರಿಸ್ಥಿತಿಗಳನ್ನು ದೃಢೀಕರಿಸುತ್ತದೆ.

3. ಎಲೆಕ್ಟ್ರಾನಿಕ್ ನೋಂದಣಿ ಮತ್ತು ಲಾಟರಿ: ಉದ್ಯೋಗ ನೀಡುವ ಕಂಪನಿಯು USCIS ಖಾತೆಯನ್ನು ರಚಿಸಬೇಕು. ಪ್ರತಿ ವರ್ಷ ಮಾರ್ಚ್‌ನಲ್ಲಿ ಪ್ರತಿ ಎಚ್‌1ಬಿ ವೀಸಾ ಹೊಂದಿರುವ ಅಭ್ಯರ್ಥಿಯ ನೋಂದಣಿಗೆ 10 ಅಮೆರಿಕನ್ ಡಾಲರ್‌ (₹880) ಶುಲ್ಕ ಭರಿಸಿ ಅರ್ಜಿ ಸಲ್ಲಿಸಬೇಕು. ಒಂದೊಮ್ಮೆ ಮಿತಿಗಿಂತಲೂ ಹೆಚ್ಚಿನ ಅರ್ಜಿಗಳು ಸಲ್ಲಿಕೆಯಾದರೆ USCIS ಲಾಟರಿ ಮೂಲಕ ವೀಸಾ ಹಂಚಿಕೆ ಮಾಡುತ್ತದೆ.

4. ಅರ್ಜಿ ಸಲ್ಲಿಕೆ ಅರ್ಜಿ (ಫಾರ್ಮ್‌ I-129): ಆಯ್ಕೆಯಾದ ಅಭ್ಯರ್ಥಿಗಳ ಉದ್ಯೋಗದಾತರು ಪ್ರಮಾಣೀಕೃತ LCA, ಶೈಕ್ಷಣಿಕ ದಾಖಲೆಗಳು, ಉದ್ಯೋಗದ ವಿವರಗಳು ಮತ್ತು ಸಂಬಂಧಿತ ಶುಲ್ಕಗಳನ್ನು ಒಳಗೊಂಡು ಫಾರ್ಮ್ I-129 ಅನ್ನು ಸಲ್ಲಿಸುತ್ತಾರೆ.
ಶುಲ್ಕಗಳು ಮೂಲ ಫೈಲಿಂಗ್ ಶುಲ್ಕವನ್ನು ಒಳಗೊಂಡಿರಬಹುದು. 2025ರಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಎಚ್‌1ಬಿ ವೀಸಾ ಶುಲ್ಕವನ್ನು ₹8.8 ಕೋಟಿಗೆ ಹೆಚ್ಚಿಸಿದ್ದಾರೆ. ಇದು 2027ರಿಂದ ಜಾರಿಗೆ ಬರಲಿದೆ.

5. USCIS ವಿಮರ್ಶೆ: USCIS ನೋಟಿಸ್ ಜಾರಿಗೊಳಿಸಿ ಅರ್ಜಿಯನ್ನು ಪ್ರಕ್ರಿಯೆಗೊಳಿಸುತ್ತದೆ; ಪ್ರೀಮಿಯಂ ಅರ್ಜಿಗಳ ಪ್ರಕ್ರಿಯೆ ತ್ವರಿತವಾಗಿರುತ್ತದೆ

6. ಕಾನ್ಸುಲರ್ ಪ್ರಕ್ರಿಯೆ (US ಹೊರಗೆ ಇದ್ದವರಿಗೆ): ಅಮೆರಿಕದಿಂದ ಹೊರಗಿರುವ ಅರ್ಜಿದಾರರು ಆಯಾ ದೇಶದಲ್ಲಿರುವ ಅಮೆರಿಕನ್ ರಾಯಭಾರ ಕಚೇರಿಯಲ್ಲಿ ಸಂದರ್ಶನ ನಿಗದಿಪಡಿಸಬೇಕು. ಇದಕ್ಕಾಗಿ ಅರ್ಜಿ ನಮೂನೆ DS-160ರಲ್ಲಿ ಅರ್ಜಿ ಸಲ್ಲಿಸಬೇಕು. ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕು. ಜತೆಗೆ ಬೆರಳಚ್ಚನ್ನು ಒದಗಿಸಬೇಕು. 

ಇದಕ್ಕೆ ಅಗತ್ಯ ದಾಖಲೆಗಳು: I-797 ಅನುಮೋದನೆ ಪಡೆದ ನೋಟಿಸ್, ಉದ್ಯೋಗ ಪತ್ರ, ಪದವಿ ಹಾಗೂ ಇತರ ಸಂಬಂಧಿತ ಪ್ರಮಾಣಪತ್ರಗಳ ಮೂಲ ಪ್ರತಿ, ಪಾಸ್‌ಪೋರ್ಟ್, ಭಾವಚಿತ್ರ, DS-160 ದೃಢೀಕರಣ.

7. ಅಮೆರಿಕ ಪ್ರವೇಶ ಮತ್ತು ಉದ್ಯೋಗ ಪ್ರಾರಂಭ: ವೀಸಾ ಮಂಜೂರಾದ ನಂತರ, ಉದ್ಯೋಗ ಆರಂಭಕ್ಕೂ 10 ದಿನಗಳ ಮೊದಲು ಅಮೆರಿಕಕ್ಕೆ ಪ್ರಯಾಣ ಆರಂಭಿಸಬಹುದು. ಕಂಪನಿ ನಿಗದಿಪಡಿಸಿದ ದಿನಾಂಕದಿಂದ ಕೆಲಸ ಪ್ರಾರಂಭಿಸಬಹುದು. 

ಅಗತ್ಯವಿರುವ ಪ್ರಮುಖ ದಾಖಲೆಗಳು: ಪಾಸ್‌ಪೋರ್ಟ್, ಕಂಪನಿ ನೀಡಿದ ಉದ್ಯೋಗ ಪತ್ರ, ಶೈಕ್ಷಣಿಕ ಅರ್ಹತೆಯ ಪ್ರಮಾಣಪತ್ರಗಳು, LCA ಮತ್ತು ಪ್ರಮಾಣೀಕೃತ ಉದ್ಯೋಗ ಪತ್ರ, DS-160 ದೃಢೀಕರಣ ಪುಟ ಮತ್ತು ಕಾನ್ಸುಲರ್ ಸಂದರ್ಶನಕ್ಕಾಗಿ ಪಾವತಿಸಿದ ಶುಲ್ಕದ ರಶೀದಿ.

ಈ ಪ್ರಕ್ರಿಯೆಯು ಎಷ್ಟು ನಿಖರವಾಗಿದೆ ಎಂದರೆ, ಯಾವುದೇ ಹಂತ ತಪ್ಪಿದರೂ ವೀಸಾ ತಿರಸ್ಕೃತಗೊಳ್ಳಲು ಕಾರಣವಾಗಬಹುದು. 2025ರ ಎಚ್‌1ಬಿ ವೀಸಾ ಪ್ರಕ್ರಿಯೆಯು ಮಾರ್ಚ್‌ 7ಕ್ಕೆ ಆರಂಭಗೊಂಡು, ಮಾರ್ಚ್‌ 24ರಂದು ಲಾಟರಿ ಆಯ್ಕೆ ಮೂಲಕ ಪೂರ್ಣಗೊಂಡಿದೆ. ಯಶಸ್ವಿ ಅರ್ಜಿದಾರರು 90 ದಿನಗಳ ಒಳಗಾಗಿ ತಮ್ಮ ಎಚ್‌1ಬಿ ಅರ್ಜಿ ಸಲ್ಲಿಸಬಹುದಾಗಿತ್ತು. ಇಡೀ ಪ್ರಕ್ರಿಯೆಯು ಜೂನ್ 30ರಂದು ಕೊನೆಗೊಂಡಿತು.

ಎಚ್‌1ಬಿ ವೀಸಾ ಶುಲ್ಕವೆಷ್ಟು?

ನೋಂದಣಿ ಶುಲ್ಕ (ಕಂಪನಿ ಪಾವತಿಸಬೇಕು): ಪ್ರತಿ ನೋಂದಣಿಗೆ 215 ಅಮೆರಿಕನ್ ಡಾಲರ್ (₹19 ಸಾವಿರ) ಪಾವತಿಸಬೇಕು. 

ಮೂಲ ಶುಲ್ಕ I-129: ₹40 ಸಾವಿರ

ವಂಚನೆ ಪತ್ತೆ ಮತ್ತು ತಡೆ: ₹44 ಸಾವಿರ

ACWIA (ತರಬೇತಿ): ₹66 ಸಾವಿರ (25ಕ್ಕಿಂತ ಕಡಿಮೆ ಉದ್ಯೋಗಿಗಳಿದ್ದರೆ) ಅಥವಾ ₹1.33 ಲಕ್ಷ (25ಕ್ಕಿಂತ ಹೆಚ್ಚಿನ ಉದ್ಯೋಗಿಗಳಿದ್ದರೆ)

ಆಶ್ರಯ ಕಾರ್ಯಕ್ರಮ ಶುಲ್ಕ: ₹53 ಸಾವಿರ

ಪ್ರೀಮಿಯಂ ಪ್ರಕ್ರಿಯೆ (ಐಚ್ಛಿಕ): ₹2.52 ಲಕ್ಷ

ವೀಸಾ ಅರ್ಜಿ ಅಥವಾ ಎಂಆರ್‌ವಿ ಶುಲ್ಕ (ಕಾನ್ಸುಲೇಟ್): ₹18 ಸಾವಿರ (ಫಲಾನುಭವಿ ಪಾವತಿಸಬೇಕು)

ಎಚ್‌1ಬಿ ವೀಸಾ ಜತೆ ಇರುವ ಮತ್ತಿತರ ವೀಸಾಗಳು

ಎಚ್–2ಎ ಮತ್ತು ಎಚ್–2ಬಿ

ನಿರ್ದಿಷ್ಟ ಋತುವೊಂದರಲ್ಲಿ ಕೆಲಸದ ಒತ್ತಡ ಹೆಚ್ಚಿದ ಸಂದರ್ಭದಲ್ಲಿ ಈ ಎರಡು ರೀತಿಯ ತಾತ್ಕಾಲಿಕ ವೀಸಾಗಳನ್ನು ನೀಡಲಾಗುತ್ತದೆ. ಕೃಷಿ ಸಂಬಂಧಿತ ಕೆಲಸಗಳಿಗೆ ಎಚ್–2ಎ ಮತ್ತು ಕೃಷಿಯೇತರ ಕೆಲಸದ ಸಂದರ್ಭಗಳಲ್ಲಿ ಎಚ್–2ಬಿ ನೀಡಲಾಗುತ್ತದೆ. ಬಹುತೇಕ ಒಂದು ವರ್ಷದ ಒಳಗೆ ಇವುಗಳ ಅವಧಿ ಮುಗಿಯುತ್ತದೆ.

ಎಚ್–3

ವೈದ್ಯಕೀಯ ಶಿಕ್ಷಣ ಹೊರತುಪಡಿಸಿ, ಬೇರಾವುದೇ ವಿಶೇಷ ಶಿಕ್ಷಣ, ತರಬೇತಿ ಪಡೆಯುವ ಉದ್ದೇಶಕ್ಕೆ ಈ ರೀತಿಯ ವೀಸಾ ನೀಡಲಾಗುತ್ತದೆ. ಈ ವೀಸಾದಡಿ ತರಬೇತಿ ಪಡೆಯುವವರಿಗೆ, ಅಮೆರಿಕದಲ್ಲಿ ಉದ್ಯೋಗ ಮಾಡಲು ಅವಕಾಶ ಇರುವುದಿಲ್ಲ. 

ಎಚ್–4

ಎಚ್–1 ಬಿ ಹಾಗೂ ಎಚ್–2ಎ ವೀಸಾ ಪಡೆದಿರುವ ಉದ್ಯೋಗಿಗಳ ಸಂಗಾತಿ, ಪೋಷಕರು ಅಥವಾ ಅವರ 21 ವರ್ಷದೊಳಗಿನ ಮಕ್ಕಳಿಗೆ ಅಮೆರಿಕದಲ್ಲಿ ವಾಸಿಸಲು ಎಚ್–4 ವೀಸಾ ನೀಡಲಾಗುತ್ತದೆ. 

ಐ ವೀಸಾ

ಇದೊಂದು ಮಾಧ್ಯಮ ವೀಸಾ. ವಿದೇಶಗಳಲ್ಲಿ ಮುದ್ರಣ ಮಾಧ್ಯಮ, ರೇಡಿಯೊ, ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುವ ವರದಿಗಾರರು, ಸಂಪಾದಕರು ಅಥವಾ ಸಿನಿಮಾ ತಂಡದ ಸಿಬ್ಬಂದಿಗೆ ಈ ವೀಸಾ ಮೀಸಲಾಗಿದೆ. ಈ ವೀಸಾಗೆ ಇಂತಿಷ್ಟೇ ಅವಧಿ ಎಂದು ನಿಗದಿಯಿಲ್ಲ. 

ಎಲ್–1ಎ ಮತ್ತು ಎಲ್‌–1 ಬಿ

ಕೆಲಸ ಮಾಡುವ ಕಂಪನಿಯೊಳಗೆ ತಾತ್ಕಾಲಿಕವಾಗಿ ವರ್ಗಾವಣೆ ಆಗುವ ಉದ್ಯೋಗಿಗೆ ಇವುಗಳನ್ನು ನೀಡಲಾಗುತ್ತದೆ. ಕಾರ್ಯನಿರ್ವಹಣಾ ಅಥವಾ ನಿರ್ವಹಣಾ ಶ್ರೇಣಿಯ ಉದ್ಯೋಗಿಗಳಿಗೆ ಎಲ್–1ಎ ವೀಸಾವನ್ನು 3 ವರ್ಷಗಳ ಅವಧಿಗೂ, ವಿಶೇಷ ಪರಿಣಿತಿಯ ಶ್ರೇಣಿಯ ಉದ್ಯೋಗಿಗೆ ಎಲ್‌–1 ಬಿ ವೀಸಾವನ್ನು ಒಂದು ವರ್ಷದ ಅವಧಿಗೂ ನೀಡಲಾಗುತ್ತದೆ.

ಒ–ವೀಸಾ

ಅಸಾಧಾರಣ ಸಾಮರ್ಥ್ಯದ ಮತ್ತು ಅಸಾಧಾರಣ ಸಾಧನೆ ಮಾಡಿರುವ ಜನರಿಗೆ ಒ–ವೀಸಾ ಸಿಗುತ್ತದೆ. ಇಂತಹ ವ್ಯಕ್ತಿಗಳ ಜೊತೆ ಪ್ರಯಾಣಿಸುವ ಕುಟುಂಬದವರಿಗೂ ವೀಸಾ ಸಿಗುತ್ತದೆ.

ಪಿ–ವೀಸಾ

ಕಾರ್ಯಕ್ರಮ ಆಧರಿತ ವೀಸಾ ಇದಾಗಿದ್ದು, ಅಥ್ಲೆಟಿಕ್ಸ್, ಪ್ರದರ್ಶನ, ವಿವಿಧ ಕಲೆಗಳಲ್ಲಿ ಅನುಪಮ ಸಾಧನೆ ಮಾಡಿರುವ ವ್ಯಕ್ತಿಗಳಿಗೆ ಇದು ಮೀಸಲು. 

ಆರ್–ವೀಸಾ

ಧಾರ್ಮಿಕ ಪಂಗಡವೊಂದಕ್ಕೆ ಸೇರಿರುವ ಹಾಗೂ ಧಾರ್ಮಿಕ ಕೆಲಸಕ್ಕಾಗಿ ಅಮೆರಿಕಕ್ಕೆ ಭೇಟಿ ನೀಡುವ ವ್ಯಕ್ತಿಗೆ ಆರ್–ವೀಸಾ ನೀಡಲಾಗುತ್ತದೆ. 

ವಿದ್ಯಾರ್ಥಿ ವೀಸಾ

ಅಮೆರಿಕದ ಶೈಕ್ಷಣಿಕ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡಲು ಇಚ್ಚಿಸುವ ಹಾಗೂ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದ ಅಡಿ ದೇಶಕ್ಕೆ ಬರಲು ಇಚ್ಛಿಸುವ ವಿದ್ಯಾರ್ಥಿಗಳಿಗೆ ವೀಸಾ ನೀಡಲಾಗುತ್ತದೆ. ಇದರಡಿ, ಎಫ್-1 ವೀಸಾ ಪಡೆಯುವ ವಿದ್ಯಾರ್ಥಿಯು, ಒಂದು ವರ್ಷದ ಬಳಿಕ ತನ್ನ ವಿದ್ಯಾಭ್ಯಾಸದ ಜತೆಗೆ ಉದ್ಯೋಗವನ್ನೂ ಮಾಡಬಹುದು. ವಿದ್ಯಾರ್ಥಿಯ ಕುಟುಂಬದವರಿಗೆ ಎಫ್–2 ವೀಸಾ ಸಿಗುತ್ತದೆ. ಶಿಕ್ಷಣಕ್ಕೆ ಸಂಬಂಧಿಸಿದಂತೆ ಎಂ–ವೀಸಾ, ಜೆ–ವೀಸಾ ವ್ಯವಸ್ಥೆಗಳೂ ಇವೆ.

ವ್ಯವಹಾರ ವೀಸಾ

ತಾತ್ಕಾಲಿಕವಾಗಿ, ವ್ಯವಹಾರವೊಂದರ ಸಲುವಾಗಿ ಅಮೆರಿಕಕ್ಕೆ ಭೇಟಿ ನೀಡುವ ಉದ್ಯಮಿಗಳಿಗೆ ಬಿ–1 ಹೆಸರಿನ ವೀಸಾ ಇದೆ. ಬಿ–1 ವೀಸಾದಾರರ ಕುಟುಂಬದವರಿಗೆ ಅವರ ಜೊತೆ ಪ್ರಯಾಣಿಸಲು ಅವಕಾಶವಿಲ್ಲ. 

ಗ್ರೀನ್ ಕಾರ್ಡ್

ಪರಿಣಿತ ಉದ್ಯೋಗಿಗಳು ಹಾಗೂ ಅವರ ಕುಟುಂಬ ಸದಸ್ಯರಿಗೆ ಅಮೆರಿಕದಲ್ಲಿ ಕಾಯಂ ಆಗಿ ನೆಲೆಸಲು ‘ಗ್ರೀನ್ ಕಾರ್ಡ್’ ನೀಡಲಾಗುತ್ತದೆ. ಉದ್ಯೋಗ ಆಧಾರಿತ 1.40 ಲಕ್ಷ ಗ್ರೀನ್‌ ಕಾರ್ಡ್‌ಗಳನ್ನು ಅಮೆರಿಕ ಪ್ರತಿ ವರ್ಷ ನೀಡುತ್ತದೆ. ಅಮೆರಿಕದಲ್ಲಿ ಈಗಾಗಲೇ ಉದ್ಯೋಗದಲ್ಲಿರುವ ನೌಕರರು ಇದಕ್ಕೆ ಅರ್ಜಿ ಸಲ್ಲಿಸಲು ಅರ್ಹರು. 

ವೃತ್ತಿ ಆಧರಿತ ಇನ್ನಷ್ಟು ವೀಸಾಗಳನ್ನು ಅಮೆರಿಕ ನೀಡುತ್ತದೆ. ವಾಣಿಜ್ಯ ವೃತ್ತಿಪರರು, ಶೈಕ್ಷಣಿಕ ಹಾಗೂ ಸಂಶೋಧನೆ, ವಿಜ್ಞಾನ, ಕಲೆಯಲ್ಲಿ ಅಪಾರ ಪರಿಣಿತಿ ಪಡೆದಿರುವವರಿಗೆ ಮೊದಲ ಪ್ರಾಶಸ್ತ್ಯದ ಇಬಿ–1 ವೀಸಾ ನೀಡಲಾಗುತ್ತದೆ. ಕನಿಷ್ಠ 10 ವರ್ಷಗಳ ಅನುಭವ ಇರುವ ವೃತ್ತಿಪರರಿಗೆ ಎರಡನೇ ಪ್ರಾಶಸ್ತ್ಯದ ಇಬಿ–2 ವೀಸಾ ಇದೆ. ಅಮೆರಿಕದ ಕಂಪನಿಯೊಂದಕ್ಕೆ ತಾತ್ಕಾಲಿಕವಾಗಿ ಅಗತ್ಯವಿರುವ ಕಾರ್ಮಿಕರ ನೇಮಕಕ್ಕೆ ಇಬಿ–3 ವೀಸಾ ಮೀಸಲಾಗಿದೆ. ಹಾಗೆಯೇ ಉದ್ಯೋಗ ಅಧರಿತವಾದ ಇಬಿ–4 ಮತ್ತು ಇಬಿ–5 ಎಂಬ ವೀಸಾಗಳನ್ನೂ ಅಮೆರಿಕ ಪರಿಚಯಿಸಿದೆ. 

ತಂತ್ರಜ್ಞಾನ ಕಂಪನಿಗಳೇ ಮುಂದು

ಅಮೆರಿಕ ನೀಡುವ ಉದ್ಯೋಗ ಆಧರಿತ, ಪ್ರತಿಷ್ಠಿತ ಎಚ್‌–1ಬಿ ವೀಸಾ ಪಡೆಯುವಲ್ಲಿ ತಂತ್ರಜ್ಞಾನ ಕಂಪನಿಗಳೇ ಮುಂಚೂಣಿಯಲ್ಲಿವೆ. ಅಮೆಜಾನ್, ಇನ್ಫೊಸಿಸ್ ಹಾಗೂ ಟಿಸಿಎಸ್ ಕಂಪನಿಗಳು ಅತಿಹೆಚ್ಚು ವೀಸಾ ಪಡೆದ ಮೊದಲ ಮೂರು ಸ್ಥಾನದಲ್ಲಿವೆ. 2022ರಲ್ಲಿ ಅಮೆಜಾನ್‌ ಕಂಪನಿಯು 6,396 ಎಚ್‌–1ಬಿ ವೀಸಾಗೆ ಅರ್ಜಿ ಹಾಕಿತ್ತು. ಇನ್ಫೊಸಿಸ್ 3,151 ಉದ್ಯೋಗಿಗಳಿಗೆ ಈ ವೀಸಾ ಕೊಡಿಸುವಲ್ಲಿ ಯಶಸ್ವಿಯಾಗಿತ್ತು. ಟಿಸಿಎಸ್ ಕಂಪನಿಯು 2,725 ವೀಸಾ ಪಡೆದಿತ್ತು. ಕಾಗ್ನಿಜೆಂಟ್, ಗೂಗಲ್, ಮೆಟಾ, ಎಚ್‌ಸಿಎಲ್ ಹಾಗೂ ಐಬಿಎಂ ನಂತರದ ಸ್ಥಾನಗಳಲ್ಲಿವೆ. ಅಮೆರಿಕವು ಪ್ರತೀ ವರ್ಷ 65 ಸಾವಿರ ಎಚ್‌–1ಬಿ ವೀಸಾ ನೀಡುತ್ತದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.