
ಐಸ್ಟಾಕ್ ಚಿತ್ರ
ನವದೆಹಲಿ: ನ್ಯೂಜಿಲೆಂಡ್ ಹಾಗೂ ಭಾರತದ ನಡುವೆ ಮುಕ್ತ ವ್ಯಾಪಾರ ಒಪ್ಪಂದ ಸಂಬಂಧ ಒಮ್ಮತ ಮೂಡಿದೆ. ಆ ಮೂಲಕ ದ್ವಿಪಕ್ಷೀಯ ವ್ಯಾಪಾರ ಹಾಗೂ ಹೂಡಿಕೆಗೆ ಸಂಬಂಧಿಸಿದಂತೆ ಇತರ ರಾಷ್ಟ್ರಗಳೊಂದಿಗೆ ಭಾರತವು ಸಹಿ ಹಾಕಿದ 18ನೇ ಒಡಂಬಡಿಕೆ ಇದಾಗಿದೆ.
ವಾಹನ, ಮದ್ಯ, ಜವಳಿ ಹಾಗೂ ಇತರ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಭಾರತವು ಇತ್ತೀಚೆಗೆ ಬ್ರಿಟನ್ ಜತೆ ಒಡಂಬಡಿಕೆಗೆ ಸಹಿ ಹಾಕಿತ್ತು. ಇದೀಗ ನ್ಯೂಜಿಲೆಂಡ್ ಜತೆ ಮುಕ್ತ ವ್ಯಾಪಾರಕ್ಕೆ ಮುಂದಾಗಿದೆ. ಮುಂದಿನ ಮೂರು ತಿಂಗಳಲ್ಲಿ ಈ ಒಡಂಬಡಿಕೆಗೆ ಅಂಕಿತ ಬೀಳಲಿದೆ. ಮುಂದಿನ ವರ್ಷದಿಂದ ಅನುಷ್ಠಾನಕ್ಕೂ ಬರಲಿದೆ. ಆ ಮೂಲಕ ಐರೋಪ್ಯದ ನಾಲ್ಕು ರಾಷ್ಟ್ರಗಳು, ಜಪಾನ್, ಕೊರಿಯಾ, ಒಮಾನ್ ಮತ್ತು ಆಸ್ಟ್ರೇಲಿಯಾ ಜತೆ ಭಾರತ ಮುಕ್ತ ವ್ಯಾಪಾರಕ್ಕೆ ಸಮ್ಮತಿಸಿ ಸಹಿ ಹಾಕಿದಂತಾಗಲಿದೆ.
ಎರಡು ಅಥವಾ ಅದಕ್ಕಿಂತ ಹೆಚ್ಚಿನ ರಾಷ್ಟ್ರಗಳ ನಡುವೆ ನಡೆಯುವ ಆರ್ಥಿಕ ಹೊಂದಾಣಿಕೆಯಾಗಿದ್ದು, ಇದರಲ್ಲಿ ಉಭಯ ರಾಷ್ಟ್ರಗಳ ನಡುವೆ ಆಮದು ಹಾಗೂ ರಫ್ತು ಆಗುವ ವಸ್ತುಗಳ ಮೇಲಿನ ಕಸ್ಟಮ್ ಸುಂಕವನ್ನು ಗಣನೀಯವಾಗಿ ತಗ್ಗಿಸುವುದು ಅಥವಾ ಕೊನೆಗೊಳಿಸುವುದಾಗಿದೆ. ಇದರಿಂದ ಪಾಲುದಾರ ರಾಷ್ಟ್ರಗಳಿಂದ ಮೌಲ್ಯಾಧಾರಿತ ಆಮದು ಹೆಚ್ಚಳ ಹಾಗೂ ನಿಯಮಗಳನ್ನು ಸರಳಗೊಳಿಸುವ ಹಾಗೂ ರಫ್ತು ಹಾಗೂ ಹೂಡಿಕೆಯನ್ನು ಉತ್ತೇಜಿಸುವ ಕ್ರಮ ಇದಾಗಿದೆ.
ಪಾಲುದಾರ ರಾಷ್ಟ್ರಗಳ ವಸ್ತುಗಳು ನಮ್ಮ ದೇಶದೊಳಗೆ ಶೂನ್ಯ ತೆರಿಗೆಯೊಂದಿಗೆ ಪ್ರವೇಶಿಸುತ್ತವೆ. ಇದರಿಂದ ರಫ್ತು ಮಾರುಕಟ್ಟೆಯಲ್ಲಿ ವೈವಿಧ್ಯತೆ ಮತ್ತು ವಿಸ್ತರಣೆಗೂ ಇದು ಸಹಕಾರಿಯಾಗಲಿದೆ. ಇಂಥ ಒಪ್ಪಂದಗಳು ವಿದೇಶಿ ಹೂಡಿಕೆಯನ್ನು ಆಕರ್ಷಿಸುವುದರ ಜತೆಗೆ ದೇಶೀಯ ತಯಾರಿಕಾ ವಲಯವನ್ನು ಇನ್ನಷ್ಟು ಉತ್ತೇಜಿಸುತ್ತದೆ. ಕಚ್ಚಾ ಪದಾರ್ಥಗಳು, ಮಧ್ಯಂತರ ಉತ್ಪನ್ನಗಳು ಹಾಗೂ ಬಂಡವಾಳ ಸರಕುಗಳಿಗೆ ಈ ಒಪ್ಪಂದ ರಹದಾರಿ ಕಲ್ಪಿಸಲಿದೆ.
ಮುಕ್ತ ವ್ಯಾಪಾರಕ್ಕೆ ಸಂಬಂಧಿಸಿದಂತೆ ಭಾರತವು ಈವರೆಗೂ ಶ್ರೀಲಂಕಾ, ಭೂತಾನ್, ಥಾಯ್ಲೆಂಡ್, ಸಿಂಗಪುರ, ಮಲೇಷ್ಯಾ, ಕೊರಿಯಾ, ಜಪಾನ್, ಆಸ್ಟ್ರೇಲಿಯಾ, ಸಂಯುಕ್ತ ಅರಬ್ ಸಂಸ್ಥಾನ, ಮಾರಿಷಸ್ ಮತ್ತು ಆಗ್ನೇಯ ಏಷ್ಯಾದ ಆಸಿಯನ್‌ನ 10 ರಾಷ್ಟ್ರಗಳು ಮತ್ತು ಐರೋಪ್ಯ ರಾಷ್ಟ್ರಗಳಲ್ಲಿ ಐಸ್‌ಲೆಂಡ್, ಲಿಕ್ಟನ್‌ಸ್ಟೈನ್, ನಾರ್ವೆ ಮತ್ತು ಸ್ವಿಟರ್ಜಲೆಂಡ್ ಜತೆಗೂ ಭಾರತ ಒಡಂಬಡಿಕೆ ಮಾಡಿಕೊಂಡಿದೆ.
ಅಮೆರಿಕ, ಐರೋಪ್ಯ ಒಕ್ಕೂಟ, ಚಿಲಿ, ಪೆರು ಮತ್ತು ಇಸ್ರೇಲ್ ಜತೆಗೂ ಮುಕ್ತ ವ್ಯಾಪಾರಕ್ಕೆ ಸಂಬಂಧಿಸಿದಂತೆ ಭಾರತ ಮಾತುಕತೆ ಹಂತದಲ್ಲಿದೆ.
ಕಾರ್ಮಿಕರನ್ನು ಹೆಚ್ಚು ಬೇಡುವ ಭಾರತದ ಉತ್ಪನ್ನಗಳಾದ ಜವಳಿ, ಪ್ಲಾಸ್ಟಿಕ್ ವಸ್ತುಗಳು, ಚರ್ಮೋದ್ಯಮ ಹಾಗೂ ಎಂಜಿನಿಯರಿಂಗ್ ಸರಕುಗಳು ಇನ್ನು ಮುಂದೆ ನ್ಯೂಜಿಲೆಂಡ್ ಅನ್ನು ಸುಂಕವಿಲ್ಲದೆ ಪ್ರವೇಶಿಸಲಿವೆ.
ಮುಂದಿನ 15 ವರ್ಷಗಳ ಅವಧಿಗೆ ಸುಮಾರು 20 ಶತಕೋಟಿ ಅಮೆರಿಕನ್ ಡಾಲರ್‌ನಷ್ಟು ನೇರ ಬಂಡವಾಳ ಹೂಡಿಕೆಗೆ ನ್ಯೂಜಿಲೆಂಡ್ ಸಿದ್ಧ ಎಂದು ಹೇಳಿದೆ.
ಮಾಹಿತಿ ತಂತ್ರಜ್ಞಾನ, ಐಟಿ ಪೂರಕ ಉದ್ಯಮ, ಶಿಕ್ಷಣ, ಹಣಕಾಸು ಕ್ಷೇತ್ರ, ಪ್ರವಾಸೋದ್ಯಮ, ನಿರ್ಮಾಣ ಹಾಗೂ ಇತರ ವ್ಯವಹಾರಿಕ ಕ್ಷೇತ್ರಗಳಲ್ಲಿ ಹೂಡಿಕೆಗೆ ಭಾರತವೂ ಸಜ್ಜಾಗಿದೆ.
ಭಾರತದ ಕುಶಲಕರ್ಮಿಗಳಿಗೆ ತಾತ್ಕಾಲಿಕ ವೀಸಾ ಪಡೆಯಲು ಉಭಯ ರಾಷ್ಟ್ರಗಳ ನಡುವಿನ ಈ ಒಡಂಬಡಿಕೆಯು ಹೊಸ ಹಾದಿಯನ್ನು ಸೃಷ್ಟಿಸಿದೆ. ಈ ಕೋಟಾದಡಿ 5 ಸಾವಿರ ವೀಸಾವನ್ನು ಮೂರು ವರ್ಷಗಳ ಅವಧಿಗೆ ನೀಡಲು ನ್ಯೂಜೆಲೆಂಡ್ ಬದ್ಧವಾಗಿರುವುದಾಗಿ ತಿಳಿಸಿದೆ ಎಂದು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.