
ಕಿಮ್ ಜು ಏ, ಕಿಮ್ ಜಾಂಗ್ ಉನ್ ಹಾಗೂ ಕಿಮ್ ಯೊ ಜಾಂಗ್
ಕಿಮ್ ಜಾಂಗ್ ಉನ್ ನಂತರ ಉತ್ತರ ಕೊರಿಯಾದ ಅಧಿಕಾರ ಯಾರಿಗೆ ಸಿಗಲಿದೆ ಎಂಬ ಪ್ರಶ್ನೆ ಮತ್ತೆ ಚರ್ಚೆಗೆ ಬಂದಿದೆ. ತಂಗಿ ಕಿಮ್ ಯೊ ಜಾಂಗ್ ಮತ್ತು ಮಗಳು ಕಿಮ್ ಜು ಏ ಹೆಸರುಗಳು ಮುಂಚೂಣಿಯಲ್ಲಿವೆ.
ಜಗತ್ತಿನ ಹಿರಿಯಣ್ಣ ಎಂದೆನಿಸಿಕೊಂಡಿರುವ ಅಮೆರಿಕಕ್ಕೆ ಸೆಡ್ಡು ಹೊಡೆಯುವ, ತನ್ನ ದೇಶದ ಜನರಿಗೆ ವಿಚಿತ್ರ ಕಟ್ಟಳೆಗಳನ್ನು ವಿಧಿಸುವ ವಿಲಕ್ಷಣ ನಾಯಕ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್. 42 ವರ್ಷದವರಾದ (ಅಧಿಕೃತವಾಗಿ ಬಹಿರಂಗಗೊಂಡಿಲ್ಲ) ಕಿಮ್ ನಂತರ ದೇಶದ ನಾಯಕ ಯಾರಾಗಲಿದ್ದಾರೆ ಎಂಬ ಚರ್ಚೆಯ ನಡುವೆಯೇ ಅಧಿಕಾರಕ್ಕಾಗಿ ಕುಟುಂಬದೊಳಗೆ ಭಿನ್ನಾಭಿಪ್ರಾಯಗಳು ಮೂಡಿವೆ ಎಂಬ ಸುದ್ದಿಯೂ ಈಗ ಮುನ್ನೆಲೆಗೆ ಬಂದಿದೆ.
ಪೂರ್ವ ಏಷ್ಯಾದ ರಾಷ್ಟ್ರವಾದ ಉತ್ತರ ಕೊರಿಯಾದ ಸರ್ವೋಚ್ಛ ನಾಯಕ ಕಿಮ್ ಜಾಂಗ್ ಉನ್ ನಂತರ ಅವರ ತಂಗಿ ಕಿಮ್ ಯೊ ಜಾಂಗ್ ಅವರು ಅಧಿಕಾರಕ್ಕೇರಲಿದ್ದಾರೆ ಎಂಬ ಚರ್ಚೆ ಕೆಲ ವರ್ಷಗಳ ಹಿಂದೆ ವ್ಯಾಪಕವಾಗಿತ್ತು. ಕಿಮ್ ಮೃತಪಟ್ಟಿದ್ದಾರೆ ಎಂಬ ವದಂತಿಯ ಜತೆಗೆ, ಎಲ್ಲಾ ಸರ್ಕಾರಿ ಕಾರ್ಯಕ್ರಮಗಳಲ್ಲಿ ತಂಗಿ ಕಾಣಿಸಿಕೊಂಡಿದ್ದು ಭವಿಷ್ಯದ ನಾಯಕಿ ಎಂಬಂತೆ ಬಿಂಬಿತವಾಗಿದ್ದವು.
ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರು ದ್ವಿಪಕ್ಷೀಯ ಮಾತುಕತೆಗೆ 2025ರಲ್ಲಿ ಚೀನಾಗೆ ಬಂದಾಗ, ಅವರ ಪಕ್ಕದಲ್ಲಿ ಠಾಕುಟೀಕಾಗಿ ನಿಂತಿದ್ದ ಯುವತಿ ಕುರಿತು ವ್ಯಾಪಕ ಚರ್ಚೆ ನಡೆದಿತ್ತು. ಅವರೇ ಕಿಮ್ ಅವರ ಪುತ್ರಿ ಕಿಮ್ ಜು ಏ. ಉತ್ತರ ಕೊರಿಯಾದ ಮುಂದಿನ ಸರ್ವಾಧಿಕಾರಿ ಹಾಗೂ ಕಿಮ್ ಜಾಂಗ್ ಉನ್ ಅವರ ಉತ್ತರಾಧಿಕಾರಿ ಎಂದು ದಕ್ಷಿಣ ಕೊರಿಯಾದ ಗುಪ್ತಚರ ಇಲಾಖೆ ಹೇಳಿದ ತಕ್ಷಣವೇ, ಅವರ ಹಿನ್ನೆಲೆ ಅರಿಯಲು ಜಗತ್ತಿನ ಪ್ರಮುಖ ರಾಷ್ಟ್ರಗಳು ಹಾಗೂ ಮಾಧ್ಯಮಗಳು ಬೆನ್ನು ಹತ್ತಿದವು.
ಕಿಮ್ ಹಾಗೂ ಅವರ ಪತ್ನಿ ರಿ ಸೊಲ್ ಜೂ ಅವರಿಗೆ ಮೂವರು ಮಕ್ಕಳು. ತಮ್ಮ ಕುಟುಂಬದ ಕುರಿತು ಅತಿಯಾದ ಗೋಪ್ಯತೆ ಕಾಪಾಡಿಕೊಂಡಿರುವ ಕಿಮ್, ತಮ್ಮ ವಿವಾಹವಾದ ಹಲವು ವರ್ಷಗಳವರೆಗೂ ಪತ್ನಿಯನ್ನು ಸಾರ್ವಜನಿಕ ಕಾರ್ಯಕ್ರಮಗಳಿಂದ ದೂರವೇ ಇಟ್ಟಿದ್ದರು. ಇವರಿಗಿರುವ ಮೂವರು ಮಕ್ಕಳಲ್ಲಿ ಜು ಏ ಅವರನ್ನು ಮಾತ್ರ ಬಹಿರಂಗವಾಗಿ ಕಿಮ್ ತೋರಿಸಿದ್ದಾರೆ. ಹೀಗಾಗಿ ಇವರೇ ಮುಂದಿನ ಉತ್ತರಾಧಿಕಾರಿ ಎಂದೂ ಮಾಧ್ಯಮಗಳು ವರದಿ ಮಾಡಿವೆ.
2022ರ ನವೆಂಬರ್‌ನಲ್ಲಿ ಮಗಳ ಕೈಹಿಡಿದು ಅತಿದೊಡ್ಡ ಖಂಡಾಂತರ ಕ್ಷಿಪಣಿ ಉಡಾವಣೆಯ ಪರಿಶೀಲನೆ ನಡೆಸಲು ಬಂದಿದ್ದ ಚಿತ್ರ ವ್ಯಾಪಕವಾಗಿ ಹರಿದಾಡಿತು. ಆವರೆಗೂ ತಮಗೊಬ್ಬಳು ಮಗಳಿರುವ ಮಾಹಿತಿಯನ್ನು ಕಿಮ್ ಹೊರಜಗತ್ತಿಗೆ ತಿಳಿಸಿರಲಿಲ್ಲ.
ಕಿಮ್‌ಗೆ ಪುತ್ರ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಈ ಮೂವರಲ್ಲಿ ಜು ಏ ಅವರು ರಾಷ್ಟ್ರೀಯ ರಜಾದಿನದ ಆಚರಣೆಯ ವಿಡಿಯೊ ತುಣುಕಿನಲ್ಲಿ ಕಾಣಿಸಿಕೊಂಡಿದ್ದರು ಎಂದು ನಂಬಲಾಗಿದೆ. ಅಮೆರಿಕದ ನಿವೃತ್ತ ಬಾಸ್ಕೆಟ್‌ಬಾಲ್ ತಾರೆ ಡೆನ್ನಿಸ್ ರಾಡ್‌ಮನ್ ಎಂಬುವವರು 2013ರಲ್ಲಿ ಹೇಳಿಕೆಯೊಂದನ್ನು ನೀಡಿ, ಕಿಮ್‌ಗೆ ಜು ಏ ಎಂಬ ಮಗಳು ಇದ್ದಾಳೆ ಎಂದಿದ್ದರು. ಆ ವರ್ಷ ಉತ್ತರ ಕೊರಿಯಾ ಪ್ರವಾಸದ ನಂತರ, ದಿ ಗಾರ್ಡಿಯನ್ ಪತ್ರಿಕೆ ಜೊತೆ ಮಾತನಾಡಿದ್ದ ರಾಡ್‌ಮನ್, ಕಿಮ್ ಮತ್ತು ಅವರ ಕುಟುಂಬದವರ ಜೊತೆ ಸಮಯ ಕಳೆದಿರುವೆ. ಅವರ ಮಗುವನ್ನು ನೋಡಿದ್ದೇನೆ ಎಂದು ಹೇಳಿದ್ದರು.
ಜು ಏ ಅವರು ಈಗ ವಿದ್ಯಾಭ್ಯಾಸ, ತರಬೇತಿಗಳನ್ನು ಪೂರ್ಣಗೊಳಿಸಿ ನಾಯಕತ್ವ ವಹಿಸಿಕೊಳ್ಳಲು ಸಜ್ಜಾಗಿರಬಹುದು ಎಂಬ ಮಾತುಗಳೂ ಕೇಳಿಬಂದಿವೆ. ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಜು ಏ ಅವರು ಹೆಚ್ಚಾಗಿ ಪಾಲ್ಗೊಳ್ಳುತ್ತಿರುವುದು ಇದಕ್ಕೆ ಇನ್ನಷ್ಟು ಪುಷ್ಟಿ ನೀಡಿದೆ. ಆದರೆ, ಈ ಮಾಹಿತಿಯೇ ನಿಜವಾಗಿದ್ದಾದರೆ, ಸರ್ವಾಧಿಕಾರಿ ಮನೆಯೊಳಗೆ ಮಹಾ ಕಾಳಗ ಏರ್ಪಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಪುತ್ರಿ ಕಿಮ್ ಜು ಏ ಜತೆ ಕಿಮ್ ಜಾಂಗ್ ಉನ್
ಕಿಮ್ ಕುಟುಂಬವು 1948ರಿಂದ ಉತ್ತರ ಕೊರಿಯಾದ ಅಧಿಕಾರದ ಚುಕ್ಕಾಣಿ ಹಿಡಿದಿದೆ. ತಮ್ಮದು ಅತ್ಯಂತ ಪವಿತ್ರ ರಕ್ತ ಹೊಂದಿರುವ ವಂಶವಾಗಿದ್ದು, ನಾವಷ್ಟೇ ದೇಶವನ್ನು ಮುನ್ನಡೆಸುವವರು ಎಂದು ಹೇಳಿಕೊಂಡು ಈ ಕುಟುಂಬ ಈವರೆಗೂ ಅಧಿಕಾರದಲ್ಲಿ ಮುಂದುವರಿದಿದೆ ಎಂದು ತಜ್ಞರು ಹೇಳುತ್ತಾರೆ.
ಹೀಗೆ ಅಧಿಕಾರಕ್ಕೆ ಬಂದವರು ತಮ್ಮ ವಿಲಕ್ಷಣ ಆದೇಶಗಳ ಮೂಲಕ ದೇಶದ ಜನರನ್ನು ಸದಾ ಗೊಂದಲ, ಆತಂಕದಲ್ಲಿಡುವ ಕೆಲಸ ಮಾಡುತ್ತಿದ್ದಾರೆ ಎಂಬ ವರದಿಗಳೂ ಪ್ರಕಟಗೊಂಡಿವೆ.
ಅದಕ್ಕೊಂದು ಉದಾಹರಣೆ, ತಮ್ಮ ತಂದೆ ಕಿಮ್ ಜಾಂಗ್ ಇಲ್ ಅವರ 10ನೇ ಪುಣ್ಯತಿಥಿಯ ಆಚರಣೆಯಲ್ಲಿ 11 ದಿನಗಳ ಕಾಲ ದೇಶದ ಜನರು ಸಂಭ್ರಮಿಸುವಂತಿಲ್ಲ ಎಂಬ ಆದೇಶವೂ ಒಳಗೊಂಡಿದೆ.
2021ರ ಡಿಸೆಂಬರ್‌ನಲ್ಲಿ ಇಂಥದೊಂದು ಆದೇಶವನ್ನು ಕಿಮ್ ಹೊರಡಿಸಿದ್ದರು. ಜನರು ನಗುವಂತಿಲ್ಲ, ಮದ್ಯಪಾನ ಮಾಡುವಂತಿಲ್ಲ. ಆರಾಮವಾಗಿರುವಂತಿಲ್ಲ ಅಥವಾ ಶಾಪಿಂಗ್ ಮಾಡುವಂತಿಲ್ಲ. ಅಷ್ಟು ಮಾತ್ರವಲ್ಲ, ಹಾಡು ಹೇಳುವಂತಿಲ್ಲ, ಪಾರ್ಟಿ ಆಯೋಜಿಸುವಂತಿಲ್ಲ... ಹೀಗೆ ‘ಇಲ್ಲ’ಗಳ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ.
ಕಿಮ್ ಅವರ ಈ ಆದೇಶವನ್ನು ಉಲ್ಲಂಘಿಸಿದವರು ‘ಸೈದ್ಧಾಂತಿಕ ಅಪರಾಧಿಗಳು’ ಎಂಬ ಹಣೆಪಟ್ಟಿ ಹೊತ್ತುಕೊಳ್ಳಲಿದ್ದಾರೆ ಎಂದೂ ಆದೇಶದಲ್ಲಿ ಹೇಳಲಾಗಿತ್ತು. ಜನರ ವರ್ತನೆಯನ್ನು ಗಮನಿಸಲು ಪೊಲೀಸರಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿತ್ತು.
ದಕ್ಷಿಣ ಕೊರಿಯಾದ ಗುಪ್ತಚರ ಇಲಾಖೆಯ ಅಧಿಕಾರಿಯಾಗಿ ನಿವೃತ್ತರಾಗಿರುವ ರಾಹ್ ಜಾಂಗ್ ಯಿಲ್ ಅವರ ಪ್ರಕಾರ, ಉತ್ತರ ಕೊರಿಯಾದ ಪರಮೋಚ್ಚ ನಾಯಕರ ಕುರ್ಚಿಯಲ್ಲಿ ಕೂರಲು 38 ವರ್ಷದ ಕಿಮ್ ಅವರ ಸೋದರಿ ಈಗಾಗಲೇ ಸ್ಪರ್ಧೆಯಲ್ಲಿದ್ದಾರೆ. ಅಷ್ಟು ಮಾತ್ರವಲ್ಲ, ಉತ್ತರ ಕೊರಿಯಾದಲ್ಲಿ ಅವರು ಹೆಚ್ಚು ಪ್ರಭಾವಿಯಾಗಿರುವುದರಿಂದಲೂ ಅಲ್ಲಿನ ನಾಗರಿಕರು ಇದನ್ನೇ ನಂಬಿದ್ದಾರೆ ಎಂದು ಟೆಲಿಗ್ರಾಫ್ ವರದಿ ಮಾಡಿದೆ.
ಹೀಗಿದ್ದರೂ ಜು ಏ ಸದ್ಯ ಸುದ್ದಿಯಲ್ಲಿದ್ದಾರೆ. 2022ರಲ್ಲಿ ಕ್ಷಿಪಣಿ ಪರೀಕ್ಷೆಯಲ್ಲಿ ಪ್ರತ್ಯಕ್ಷರಾದ ಜು ಏ ಅವರ ಚಿತ್ರ, ಮರುವರ್ಷವೇ ಅಂಚೆ ಚೀಟಿಯಲ್ಲಿ ಮುದ್ರಣಗೊಂಡಿತು. ‘ಕಿಮ್ ಅವರು ತಮ್ಮ ಮಗಳನ್ನು ಅತಿಯಾಗಿ ಗೌರವಿಸುತ್ತಾರೆ’ ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದರು.
ಉತ್ತರ ಕೊರಿಯಾದ ಪರಿಸ್ಥಿತಿಯಲ್ಲಿ ‘ಗೌರವ’ ಎಂಬ ಪದಕ್ಕೆ ವಿಶಾಲ ಅರ್ಥವಿದೆ. ಕಿಮ್ ಜಾಂಗ್ ಉನ್ ಅವರ ತಂದೆ ಅಧಿಕಾರದಲ್ಲಿದ್ದಾಗ, ತಮ್ಮ ಮಗನ ಬಗ್ಗೆ ‘ಅಪಾರ ಗೌರವ’ ಎಂಬ ಪದ ವ್ಯಾಪಕವಾಗಿತ್ತು. ‘ತಮ್ಮ ಪುತ್ರನೊಬ್ಬ ಗೌರವಾನ್ವಿತ ಕಾಮ್ರೆಡ್’ ಎಂದೇ ಅವರು ಸಂಭೋದಿಸುತ್ತಿದ್ದರು. ಇದಾದ ನಂತರ ಕಿಮ್ ಅವರೇ ದೇಶದ ಸರ್ವಾಧಿಕಾರಿಯಾದರು.
ದಕ್ಷಿಣ ಕೊರಿಯಾದ ಗುಪ್ತಚರ ಮಾಹಿತಿಯ ಪ್ರಕಾರ, ಜು ಏ ಅವರು ಕುದುರೆ ಸವಾರಿ, ಈಜು ವಿದ್ಯೆ ಬಲ್ಲವರಾಗಿದ್ದಾರೆ. ವಿದ್ಯಾಭ್ಯಾಸಕ್ಕಾಗಿ ಇವರು ಶಾಲೆಗಳಿಗೆ ಹೋಗಿಲ್ಲ. ಬದಲಿಗೆ ರಾಜಧಾನಿ ಪ್ಯಾಂಗ್‌ಯಾಂಗ್‌ನಲ್ಲಿರುವ ತಮ್ಮ ಮನೆಯಲ್ಲೇ ಪೂರ್ಣಗೊಳಿಸಿದ್ದಾರೆ.
2022ರ ನಂತರ 2024ರಲ್ಲೂ ಅವರು ಹಲವು ರಾಷ್ಟ್ರೀಯ ಕಾರ್ಯಕ್ರಮಗಳು ಮತ್ತು ಸೇನಾ ಪರೇಡ್‌ಗಳಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದರು. ಜತೆಗೆ ಗೌರವ ವಂದನೆಯನ್ನೂ ಸ್ವೀಕರಿಸಿದ್ದರು. ಆದರೆ 2025ರ ಸೆಪ್ಟೆಂಬರ್‌ನಲ್ಲಿ ಜು ಏ ಅವರು ಮೊದಲ ಬಾರಿಗೆ ದೇಶದಿಂದ ಹೊರಗೆ (ಚೀನಾ) ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು.
ಮೊದಲು ತಂಗಿ ಹಾಗೂ ಇದೀಗ ಮಗಳನ್ನು ಪರಿಚಯಿಸುತ್ತಿರುವ ಕಿಮ್ ಜಾಂಗ್ ಉನ್ ಅವರ ಆಯ್ಕೆ ಯಾರು ಎಂಬ ಗೊಂದಲ ಮುಂದುವರಿದಿದೆ. ಆದರೆ, ಉತ್ತರ ಕೊರಿಯಾದ ಭವಿಷ್ಯದಲ್ಲಿ ಮಹಿಳೆಯರು ದೇಶದ ಪರಮೋಚ್ಚ ಸ್ಥಾನಕ್ಕೇರಲಿದ್ದಾರೆ ಎಂಬ ಸೂಚನೆಯನ್ನು ಕಿಮ್ ನೀಡುತ್ತಿದ್ದಾರೆಯೇ ಎಂಬ ಚರ್ಚೆಗಳೂ ನಡೆದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.