
ನಂಜನಗೂಡಿನ ರಸಬಾಳೆ, ಇಂಡಿಯ ಕಾಗ್ಝಿ ಲಿಂಬೆ
ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಕಬಿನಿ ನದಿ ತೀರದ ಗ್ರಾಮಗಳಲ್ಲಿ ಬೆಳೆಯುವ ರಸಭರಿತ ‘ನಂಜನಗೂಡು ರಸಬಾಳೆ’ಯ ಸ್ವಾದಕ್ಕೆ ಮನಸೋತವರಿಲ್ಲ. ಹಾಗೆಯೇ ವಿಜಯಪುರದ ಇಂಡಿಯ ಕಾಗ್ಝಿ ಲಿಂಬೆಗೂ ವಿದೇಶಗಳಲ್ಲಿ ಭಾರಿ ಬೇಡಿಕೆ. ಇವುಗಳ ರಫ್ತು ಕಾರ್ಯವು ಇದೀಗ ಇನ್ನಷ್ಟು ಗರಿಗೆದರಿದೆ.
ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಕಬಿನಿ ನದಿ ತೀರದ ಗ್ರಾಮಗಳಲ್ಲಿ ಬೆಳೆಯುವ ರಸಭರಿತ ‘ನಂಜನಗೂಡು ರಸಬಾಳೆ’ಯ ಸ್ವಾದಕ್ಕೆ ಮನಸೋತವರಿಲ್ಲ. ವಿದೇಶಗಳಿಂದಲೂ ಬೇಡಿಕೆ ಬರುತ್ತಿದ್ದು, ಇದೇ ಮೊದಲ ಬಾರಿ ರಫ್ತು ಕಾರ್ಯ ನಡೆದಿದೆ.
ಎಲ್ಲೆಲ್ಲಿ ಬೆಳೆ: ನಂಜನಗೂಡು ತಾಲ್ಲೂಕಿನ ಹನುಮನಪುರ, ಸಿಂಧುವಳ್ಳಿ, ಮಾಡ್ರಳ್ಳಿ, ಹೆಮ್ಮರಗಾಲ, ಹಂಪಾಪುರ, ವೀರದೇವರಪುರ, ತಾಂಡವಪುರ, ಹಗಿನವಾಳು, ಹಳೇಪುರ, ಅಂಬಳೆ, ಕೊಗಲೂರು, ಕುರಹಟ್ಟಿ, ದೇವಿರಮ್ಮನಹಳ್ಳಿ, ಸಿದ್ದಯ್ಯನಹುಂಡಿ, ಹೆಡತಲೆ, ಹಳೇಪುರ, ಚಿನ್ನಂಬಳ್ಳಿ, ಅಂಬಳೆ, ದೇವರಸನಹಳ್ಳಿ ಹಾಗೂ ಕೋಡಿನರಸೀಪುರ ಗ್ರಾಮಗಳಲ್ಲಿ ‘ನಂಜನಗೂಡು ರಸಬಾಳೆ’ಯನ್ನು ರೈತರು ಬೆಳೆಯುತ್ತಿದ್ದಾರೆ.
ದೇವರಸನಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಬೆಳೆದ ಬಾಳೆ ಮಾತ್ರ ಸ್ವಾದ ಹೆಚ್ಚು. ಅದಕ್ಕೆ ಇಲ್ಲಿನ ಮಣ್ಣಿನ ಗುಣವೇ ಕಾರಣವಾಗಿದೆ. ದಕ್ಷಿಣ ಕರ್ನಾಟಕವಿಡೀ ಕೆಂಪು ಮಣ್ಣು ಪ್ರಧಾನವಾಗಿದ್ದು, ಕಪ್ಪು ಮಣ್ಣಿನ ಪ್ರದೇಶವು ಅಲ್ಲಲ್ಲಿ ದ್ವೀಪದಂತಿದೆ. ಈ ಬಾಳೆ ಕ್ಷೇತ್ರವು ಕಪ್ಪು ಮಣ್ಣೇ ಆಗಿದೆ. ಅರಸನಕೆರೆ ಸುತ್ತಮುತ್ತಲು ಬೆಳೆಯುತ್ತಿದ್ದ ರಸಬಾಳೆಗೆ ಪನಾಮ ರೋಗ ಬಂದ ಕಾರಣ ದಶಕದಿಂದೀಚೆಗೆ ಉತ್ಪಾದನೆ ಕಡಿಮೆಯಾಗಿತ್ತು. ಇದೀಗ ಮತ್ತೆ ಬೆಳೆ ಕ್ಷೇತ್ರ ವಿಸ್ತರಣೆಯಾಗುತ್ತಿದೆ.
ಪ್ರೋತ್ಸಾಹ: ಈ ಭಾಗದಲ್ಲಿ ತೋಟಗಾರಿಕೆ ಇಲಾಖೆಯೂ ಬೆಳೆ ಕ್ಷೇತ್ರ ವಿಸ್ತರಣೆಗೆ ಅಗತ್ಯ ಪ‍್ರೋತ್ಸಾಹ ನೀಡಿದ್ದು, ಬಾಳೆ ಕ್ಷೇತ್ರ ಹೆಚ್ಚಾಗುತ್ತಿದೆ. ವಿಶಿಷ್ಟ ರುಚಿಯ ಕಾರಣದಿಂದಾಗಿ ಭೌಗೋಳಿಕ ಸೂಚ್ಯಂಕ (ಜಿಐ) ಪದಾರ್ಥಗಳ ಪಟ್ಟಿಯಲ್ಲಿರುವ ನಂಜನಗೂಡು ರಸಬಾಳೆ ತಳಿಯನ್ನು ಪ್ರಸ್ತುತ 211 ಎಕರೆ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ.
ವಿಸ್ತರಣೆ: ರಾಜ್ಯ ಸರ್ಕಾರದ ಪ್ರೋತ್ಸಾಹ, ರೈತರ ಆಸಕ್ತಿ ಹಾಗೂ ಗ್ರಾಹಕರಲ್ಲಿ ಕಂಡುಬರುತ್ತಿರುವ ಬೇಡಿಕೆ ಕಾರಣದಿಂದ ಬೆಳೆಯುವ ಕ್ಷೇತ್ರ ವಿಸ್ತರಣೆಯಾಗುತ್ತಿದೆ. 2023ರಲ್ಲಿ 75 ಎಕರೆ ಪ್ರದೇಶದಲ್ಲಿದ್ದ ಈ ಬೆಳೆ ಪ್ರಸ್ತುತ 211 ಎಕರೆಗೆ ವ್ಯಾಪಿಸಿದೆ. ಸುತ್ತೂರಿನ ಐಸಿಎಆರ್- ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರವು (ಕೆವಿಕೆ) ರಫ್ತು ಪ್ರಮಾಣ ಹೆಚ್ಚಿಸಲು ಶ್ರಮಿಸಿದೆ. ಹೀಗಾಗಿ ಮಾಲ್ದೀವ್ಸ್‌ಗೆ ರಫ್ತಾಗುತ್ತಿದೆ. 500 ಕೆ.ಜಿ. ನಂಜನಗೂಡು ರಸಬಾಳೆ ಜೊತೆಗೆ 35 ಕೆ.ಜಿ. ಮೈಸೂರು ವೀಳ್ಯದೆಲೆ ರಫ್ತು ಮಾಡಲಾಗಿದೆ.
‘ರಾಜ್ಯದಲ್ಲಿ ಒಟ್ಟಾರೆ 1.20 ಲಕ್ಷ ಎಕರೆ ಪ್ರದೇಶದಲ್ಲಿ ಬಾಳೆ ಬೆಳೆ ಬೆಳೆಯಲಾಗುತ್ತಿದೆ. ಇಷ್ಟು ಬೆಳೆಯುವ ಕ್ಷೇತ್ರಕ್ಕೆ ಹೋಲಿಸಿದರೆ ನಂಜನಗೂಡು ರಸಬಾಳೆ ಕ್ಷೇತ್ರ ಕಡಿಮೆಯೇ ಆಗಿದೆ. ಇದೀಗ ಜಾಗತಿಕ ಬೇಡಿಕೆ ಸೃಷ್ಟಿಯಾಗುತ್ತಿರುವುದರಿಂದ ರೈತರೂ ಬೆಳೆಯತ್ತ ಆಕರ್ಷಿತರಾಗುತ್ತಿದ್ದಾರೆ’ ಎನ್ನುತ್ತಾರೆ ಸುತ್ತೂರು ಜೆಎಸ್ಎಸ್ ಕವಿಕೆ ಮುಖ್ಯಸ್ಥ ಬಿ.ಎನ್. ಜ್ಞಾನೇಶ್.
‘ರಸಬಾಳೆಯ ಗಾತ್ರ ಸಣ್ಣದು. ಬೆರಳಿನ ಗಾತ್ರವಿದ್ದರೂ ಸ್ವಾದಭರಿತವಾದ ಈ ಬಾಳೆ ತುಂಬಾ ಸುವಾಸನೆ. ಸಿಪ್ಪೆಯೂ ಕೂಡ ತೆಳುವಾಗಿರುತ್ತದೆ. ಒಂದು ಗೊನೆಯಲ್ಲಿ 20ರಿಂದ 22 ಬಾಳೆ ಇರುತ್ತವೆ’ ಎನ್ನುತ್ತಾರೆ ಅವರು.
‘ರಫ್ತು ಮಾಡಲು ಬೇಕಾದ ಪ್ಯಾಕಿಂಗ್, ಪ್ರೊಸೆಸಿಂಗ್ ಜ್ಞಾನವನ್ನು ರೈತರಿಗೆ ನೀಡಲಾಗುತ್ತಿದೆ. ಕೃಷಿ ವಿಜ್ಞಾನ ಕೇಂದ್ರದ ಮೂಲಕ ಅಗತ್ಯ ತರಬೇತಿ ನೀಡಲಾಗುತ್ತಿದೆ. ಸಾವಯವ ವಿಧಾನದಲ್ಲಿ ಬೆಳೆಯುವುದರಿಂದ ಉತ್ತಮ ಬೆಲೆ ಸಿಗುತ್ತದೆ. ದೊಡ್ಡ ಕಂಟೇನರ್ ಮೂಲಕ ಸಮುದ್ರಮಾರ್ಗದಲ್ಲಿ ಅರಬ್ ದೇಶಗಳು, ಶ್ರೀಲಂಕಾ ರವಾನಿಸಲು ರೈತರು ಉದ್ದೇಶಿಸಿದ್ದಾರೆ’ ಎಂದು ಹೇಳಿದರು.
ಭಾರತ ಸರ್ಕಾರದಿಂದ ‘ಭೌಗೋಳಿಕ ಮಾನ್ಯತೆ’ (ಜಿಯೋಗ್ರಫಿಕಲ್ ಟ್ಯಾಗ್) ಲಭಿಸಿದ ಬಳಿಕ ಜಿಲ್ಲೆಯ ಸುಪ್ರಸಿದ್ಧ ಇಂಡಿ ‘ಕಾಗ್ಝಿ’ (KAGZI) ಲಿಂಬೆ ವಿದೇಶಗಳಿಗೆ ರಫ್ತಾಗುತ್ತಿದ್ದು, ಈ ಕುರಿತು ಭಾನುವಾರದ ತಮ್ಮ ‘ಮನದ ಮಾತು’ ಆಕಾಶವಾಣಿ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ರಾಜ್ಯದಿಂದ ನೆರೆಯ ಬಾಂಗ್ಲಾದೇಶ, ನೇಪಾಳ, ದುಬೈ, ಅಬುದಾಬಿ, ಕುವೈತ್, ಶ್ರೀಲಂಕಾ, ಪಾಕಿಸ್ತಾನ, ಮಾಲ್ಡೀವ್ಸ್ ಸೇರಿದಂತೆ ಸುಮಾರು 25 ದೇಶಗಳಿಗೆ ಉತ್ಕೃಷ್ಟ ಗುಣಮಟ್ಟದ ಲಿಂಬೆಯನ್ನು ರಫ್ತು ಮಾಡಲಾಗುತ್ತಿದೆ.
ಇಂಡಿ ತಾಲ್ಲೂಕಿನ ಕೊಳೂರಗಿ ಗ್ರಾಮದ ಯುವ ರೈತ ಚಂದ್ರಕಾಂತ ಮೇಡೆಗಾರ ಅವರು ಅಫೇಡಾ ಸಂಸ್ಥೆಯ ಮಾರ್ಗದರ್ಶನದಲ್ಲಿ ಇಂಡಿ ಲಿಂಬೆಯನ್ನು ಕಳೆದ ವರ್ಷ ಯುಎಇ ಸೇರಿದಂತೆ ಐರೋಪ್ಯ ರಾಷ್ಟ್ರಗಳಿಗೆ ರಫ್ತು ಮಾಡಿದ್ದಾರೆ.
ಬೆಂಗಳೂರು, ಮುಂಬೈ, ಹೈದರಾಬಾದ್, ನವದೆಹಲಿ ಸೇರಿದಂತೆ ಮತ್ತಿತರ ಪ್ರಮುಖ ನಗರಗಳಿಗೆ ಇಂಡಿ ನಿಂಬೆ ಹಣ್ಣು ಹೋಗುತ್ತಿತ್ತು. ಇದೀಗ ಐರೋಪ್ಯ ರಾಷ್ಟ್ರಗಳಿಗೂ ರಫ್ತಾಗುತ್ತಿರುವುದರಿಂದ ಲಿಂಬೆ ಬೆಳೆಗೆ ಮಹತ್ವ ಬಂದಿದೆ.
ಐರೋಪ್ಯ ರಾಷ್ಟ್ರಗಳಿಗೆ ರಫ್ತಾಗುತ್ತಿರುವುದರಿಂದ ಬೆಳೆಗಾರರಿಗೆ ಉತ್ತಮ ಬೆಲೆಯೂ ದೊರೆತಿದೆ. ಈ ಹಿಂದೆ ಪ್ರತಿವರ್ಷ ₹350 ರಿಂದ ₹500 ಕೋಟಿ ವರೆಗೆ ವಹಿವಾಟು ನಡೆಯುತ್ತಿದ್ದ ಇಂಡಿ ನಿಂಬೆ ಇಂದು ₹ 600 ರಿಂದ ₹ 800 ಕೋಟಿ ವಹಿವಾಟು ನಡೆಯುತ್ತಿದೆ ಎಂದು ನಿಂಬೆ ಅಭಿವೃದ್ಧಿ ಮಂಡಳಿ ತಿಳಿಸಿದೆ.
ನಿಂಬೆ ಹಣ್ಣಿನ ಜೊತೆಗೆ ಇದೀಗ ಇಂಡಿ ತಾಲ್ಲೂಕಿನಲ್ಲಿ ರೈತರು ಬೆಳೆಯುತ್ತಿರುವ ನಿಂಬೆ ಸಸಿಗಳಿಗೂ ಕೂಡಾ ಎಲ್ಲಿಲ್ಲದ ಬೇಡಿಕೆ ಬಂದಿದೆ. ಹೊರ ರಾಜ್ಯಗಳ ರೈತರು ಕೂಡ ಇಂಡಿ ನಿಂಬೆ ಸಸಿಗಳನ್ನು ಕೊಳ್ಳತೊಡಗಿದ್ದಾರೆ.
ವಿಜಯಪುರ ಜಿಲ್ಲೆ ರಾಜ್ಯದ ‘ಲಿಂಬೆ ತೋಟ’ ಎಂದೇ ಪ್ರಸಿದ್ಧವಾಗಿದೆ. ಜಿಲ್ಲೆಯು ರಾಜ್ಯದ ವಿಸ್ತೀರ್ಣದಲ್ಲಿ ಶೇ 58ರಷ್ಟು (12,220 ಹೆಕ್ಟೆರ್) ಲಿಂಬೆ ಬೆಳೆ ಪ್ರದೇಶ ಹೊಂದಿದೆ.
‘ಇಂಡಿ ಲಿಂಬೆಗೆ ಜಿಐ ಟ್ಯಾಗ್ ಲಭಿಸಿರುವುದು ಮತ್ತು ವಿದೇಶಕ್ಕೆ ರಫ್ತಾಗುತ್ತಿರುವ ಕುರಿತು ಪ್ರಧಾನಿ ಮೋದಿ ಅವರು ತಮ್ಮ ಮನದ ಮಾತು ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿರುವುದು ಜಿಲ್ಲೆಯ ಲಿಂಬೆ ಬೆಳೆಗಾರರಿಗೆ ಸ್ಫೂರ್ತಿ ನೀಡಿದಂತಾಗಿದೆ’ ಎಂದು ಬಿಜೆಪಿ ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ ಹಾಗೂ ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.