ಮೂತ್ರಪಿಂಡ ಕಲ್ಲು ಕರಗಿಸುವ ಅಕ್ಕಿ ಗಾತ್ರದ ನ್ಯಾನೊ ಮತ್ತು ಹೃದಯ ಅಪಧಮನಿಯಲ್ಲಿ ಶೇಖರಗೊಂಡಿರುವ ಕೊಬ್ಬು ಕರಗಿಸುವ ನ್ಯಾನೊ ರೊಬೊದ ಕಾಲ್ಪನಿಕ ಚಿತ್ರ
ಎಐ ಚಿತ್ರ
ನವದೆಹಲಿಯ ಭಾರತ ಮಂಟಪದಲ್ಲಿ ಕೃತಕ ಬುದ್ಧಿಮತ್ತೆ ಕುರಿತ ಜಾಗತಿಕ ಇಂಪ್ಯಾಕ್ಟ್ ಶೃಂಗ ಕೊನೆಗೊಂಡಿದೆ. ಕೃತಕ ಬುದ್ಧಿಮತ್ತೆ ಕ್ಷೇತ್ರದ ದಿಗ್ಗಜರು ಭಾರತಕ್ಕೆ ಭೇಟಿ ನೀಡಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇದರ ಬೆನ್ನಲ್ಲೇ ವೈದ್ಯಕೀಯ ಕ್ಷೇತ್ರದಲ್ಲಿ ರೊಬೊಗಳ ಪರಿಣಾಮಕಾರಿ ಬೆಳವಣಿಗೆಯೂ ಇದೀಗ ಸುದ್ದಿಯಾಗಿದೆ.
ಜಾಗತಿಕವಾಗಿ ಪ್ರತಿ ವರ್ಷ ಹೃದಯಾಘಾತದಿಂದ 1.8 ಕೋಟಿ ಜನ ಮೃತಪಡುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ, ಹೃದಯದ ಅಪಧಮನಿಗಳಲ್ಲಿ ಪ್ಲೇಕ್ ಶೇಖರಣೆಯಾಗಿ ಅವುಗಳನ್ನು ಕಿರಿದಾಗಿಸುವಿಕೆ. ಹೃದಯ ಸಂಬಂಧಿ ಕಾಯಿಲೆಯ ಪ್ರಾಥಮಿಕ ಲಕ್ಷಣ ಇದು. ಜತೆಗೆ ಹೃದಯಕ್ಕೆ ರಕ್ತಪೂರೈಕೆ ಕಡಿಮೆಯಾಗಿ, ಇಸ್ಕೆಮಿಕ್ ಸ್ಟ್ರೋಕ್‌ಗೂ ಕಾರಣವಾಗಲಿದೆ. ಇದರ ನಿವಾರಣೆಗೆಂದು ಸಿಂಗಪುರದ ನ್ಯಾಷ್ಯನಲ್ ಯೂನಿವರ್ಸಿಟಿ ಆಫ್ ಸಿಂಗಪೂರ್‌ನ ಯಾಂಗ್ ಲೂ ಲಿನ್ ವೈದ್ಯಕೀಯ ಕಾಲೇಜು ಒರಿಗಾಮಿ ನ್ಯಾನೊ ರೊಬೊಗಳನ್ನು ಅಭಿವೃದ್ಧಿಪಡಿಸಿರುವುದಾಗಿ ಹೇಳಿರುವುದು ಸೈನ್ಸ್‌ಡೈಲಿ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ.
ಇದು ಅಪಧಮನಿಯಲ್ಲಿ ಶೇಖರವಾಗುವ ಕೊಬ್ಬಿನಂಶವನ್ನು ಕರಗಿಸಿ, ರಕ್ತಪರಿಚಲನೆಗೆ ಹಾದಿ ಸುಗಮಗೊಳಿಸುತ್ತದೆ ಎನ್ನುವುದು ಅಲ್ಲಿನ ತಜ್ಞರ ಮಾತು. ಪುಟ್ಟ ನ್ಯಾನೊ ರೊಬೊಗಳು ರಕ್ತನಾಳದ ಮೂಲಕ ಪ್ರವೇಶಿಸಿ, ಅಪಧಮನಿಯಲ್ಲಿ ಶೇಖರಗೊಂಡಿರುವ ಕೊಬ್ಬನ್ನು ತಿನ್ನುತ್ತವೆ. ಇದರಿಂದ ರಕ್ತ ಪರಿಚಲನೆ ಸರಾಗವಾಗುವುದರಿಂದ ಹೃದಯಾಘಾತದ ಪ್ರಮಾಣ ತಗ್ಗಿಸಲಿದೆ ಎಂಬುದು ಅವರ ವಾದ.
ಭವಿಷ್ಯದಲ್ಲಿ ವ್ಯಾಪಕವಾಗಿ ಬಳಕೆಯಾಗಲಿದೆ ಎಂದೆನ್ನುವ ನ್ಯಾನೊ ತಂತ್ರಜ್ಞಾನದ ಅಡಿಯಲ್ಲಿ ಅಭಿವೃದ್ಧಿಗೊಂಡಿರುವ ಈ ಚಿಕಿತ್ಸಾ ವಿಧಾನವು ಭರವಸೆ ಮೂಡಿಸಿದೆ. ಉದ್ದೇಶಿತ ನಿಖರ ಚಿಕಿತ್ಸೆಯ ಮೇಲೆ ಸದ್ಯ ಸಂಶೋಧನೆ ಇನ್ನಷ್ಟು ವಿಸ್ತಾರಗೊಂಡಿದೆ. ಜೀವಕೋಶಗಳ ಮೇಲೆಯೇ ಚಿಕಿತ್ಸೆಯ ನೇರ ಪ್ರಯೋಗ ನಡೆಸುವ ಪ್ರಕ್ರಿಯೆ ಮೇಲೂ ತಜ್ಞರು ಗಮನ ಹರಿಸಿದ್ದಾರೆ. ಪ್ರಯೋಗಗಳ ಮೂಲಕ ಡಿಎನ್‌ಎ ಒರಿಗಾಮಿ ರಚನೆಗಳನ್ನು ತಜ್ಞರು ಅನ್ವೇಷಿಸಿದ್ದಾರೆ. ಆದರೆ ಇವುಗಳು ಹೃದಯದ ಅಪಧಮನಿಗಳಲ್ಲಿನ ರಕ್ತದ ಹರಿವಿಗೆ ತಡೆಯೊಡ್ಡುವ ಜಿಡ್ಡನ್ನು ತೆರವುಗೊಳಿಸಲು ಯಂತ್ರಗಾಳಾಗಿ ದುಡಿಯುವ ಬದಲು, ಔಷಧವಾಗಿ ಕೆಲಸ ಮಾಡಲಿವೆ ಎಂಬುದು ಗಮನಾರ್ಹ.
ಈ ಕುರಿತು ಮಾಹಿತಿ ನೀಡಿರುವ ಸಂಶೋಧನಾ ತಂಡದ ಮುಖ್ಯಸ್ಥ ವಾಂಗ್ ಜಿಯಾಂಗ್ ವಿ, ‘ಈ ನ್ಯಾನೊಕಣಗಳು ಅಪಧಮನಿಗಳಲ್ಲಿ ಶೇಖರವಾಗಿರುವ ಜಿಡ್ಡನ್ನು ಪತ್ತೆ ಮಾಡುತ್ತದೆ. ಔಷಧವಾಗಿ ಅವುಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ. ತನ್ನ ಉದ್ದೇಶಿತ ಕಾರ್ಯವನ್ನು ಪೂರ್ಣಗೊಳಿಸಿ ಹೃದಯದ ರಕ್ತನಾಳಗಳನ್ನು ಶುಚಿಯಾಗಿಸುತ್ತವೆ. ಈ ಕಾರ್ಯಕ್ಕಾಗಿ ಇವುಗಳಲ್ಲಿ ನ್ಯಾನೊಸ್ಕೇಲ್ ಸಂಯೋಜಿತ ಪಾಲಿಮರ್‌ಗಳು ಮತ್ತು ಪಿಎಚ್ ಪ್ರತಿಕ್ರಿಯಾತ್ಮಕ ಕೊಂಡಿಗಳಿರುತ್ತವೆ. ಇವುಗಳು ಅಪಧಮನಿಯಲ್ಲಿ ಶೇಖರವಾದ ಕೊಬ್ಬಿನಂಶಗಳನ್ನು ಕರಗಿಸುವ ಕೆಲಸ ಮಾಡುತ್ತದೆ’ ಎಂದಿದ್ದಾರೆ.
‘ಹೃದಯ ಸಂಬಂಧಿ ಸಮಸ್ಯೆಗಳಿಗೆ ಲಭ್ಯವಿರುವ ಚಿಕಿತ್ಸೆಗಿಂತ ನ್ಯಾನೊಕಣಗಳ ಮೂಲಕ ಕಳುಹಿಸುವ ಚಿಕಿತ್ಸೆಯು ಸಾವಿರ ಪಟ್ಟು ಹೆಚ್ಚು. ಹೀಗಾಗಿ ಪರಿಣಾಮ ಹೆಚ್ಚು ಮತ್ತು ಅಡ್ಡ ಪರಿಣಾಮಗಳು ಕಡಿಮೆ’ ಎನ್ನುವುದು ಅವರ ಮಾತು.
ಶಸ್ತ್ರಚಿಕಿತ್ಸೆ ಬೇಡದ ಈ ಚಿಕಿತ್ಸೆಯ ಸಂಶೋಧನೆಯು ಪ್ರಯೋಗಾಲಯದಲ್ಲಿ ಯಶಸ್ಸು ನೀಡಿದೆ. ಆದರೆ ಕ್ಲಿನಿಕಲ್ ಟ್ರಯಲ್‌ಗಳು ಇನ್ನಷ್ಟೇ ಆಗಬೇಕಿದೆ.
ಇದೇ ರೀತಿ ಕೆನಡಾದ ಯೂನಿವರ್ಸಿಟಿ ಆಫ್ ವಾಟರ್‌ಲೂ ತಜ್ಞರು ಮೂತ್ರಪಿಂಡ ಕಲ್ಲು ಕರಗಿಸಲು ಶಸ್ತ್ರಚಿಕಿತ್ಸೆ ರಹಿತ ಪರಹಾರ ಮಾರ್ಗವನ್ನು ಸಂಶೋಧನೆ ಮಾಡಿರುವುದು ಸುದ್ದಿಯಾಗಿದೆ. ಇಲ್ಲಿಯೂ ರೊಬೊಗಳದ್ದೇ ಕರಾಮತ್ತಾದರೂ, ಅದರ ಗಾತ್ರ ಅಕ್ಕಿಯಷ್ಟು ಎನ್ನುವುದು ಹುಬ್ಬೇರಿಸುವ ಸಂಗತಿ.
ಮ್ಯಾಗ್ನೆಟಿಕ್ ಮೈಕ್ರೊರೊಬೊಗಳಾದ ಇವುಗಳ ತಯಾರಿಕೆಯಲ್ಲಿ ಸುಧಾರಿತ ಆರೋಗ್ಯ ರಕ್ಷಣಾ ಪದಾರ್ಥಗಳನ್ನು ಬಳಸಲಾಗಿದೆ. ಅಂದರೆ, ಈ ರೊಬೊಗಳು ಮೃದುವಾಗಿ ಮತ್ತು ಹೇಗೆ ಬೇಕೋ ಹಾಗೆ ಬಾಗುಂತ ಪುಟ್ಟ ಅಕ್ಕಿ ಗಾತ್ರವನ್ನು ಹೋಲುತ್ತವೆ. ಮೂತ್ರನಾಳದ ಮೂಲಕ ಇವುಗಳನ್ನು ದೇಹದೊಳಗೆ ತೂರಿಸಿ ತಮ್ಮ ಕಾರ್ಯವನ್ನು ಸಾಧಿಸಬಹುದಾಗಿದೆ ಎಂದು ಅಲ್ಲಿನ ತಜ್ಞರು ತಿಳಿಸಿದ್ದಾರೆ.
ದೇಹದೊಳಗೆ ಪ್ರವೇಶಿಸುವ ಈ ರೊಬೊಗಳನ್ನು ಆಯಸ್ಕಾಂತೀಯ ವಲಯದ ಮೂಲಕ ನಿಯಂತ್ರಿಸಲಾಗುತ್ತದೆ. ಚಿಕಿತ್ಸೆ ನೀಡುವ ವೈದ್ಯರು ಇವುಗಳನ್ನು ನಿಯಂತ್ರಿಸುವ ಮೂಲಕ ನಿಖರ ಚಿಕಿತ್ಸೆ ಸಾಧ್ಯ. ಈ ಮೈಕ್ರೊರೊಬೊಗಳು ಯೂರಿಕ್ ಆ್ಯಸಿಡ್ ಅನ್ನು ರಾಸಾಯನಿಕ ಪ್ರಕ್ರಿಯೆ ಮೂಲಕ ಕರಗಿಸುವ ಸಾಮರ್ಥ್ಯ ಹೊಂದಿರುತ್ತವೆ. ದೇಹದೊಳಗೆ ಕೆಲಸ ಆರಂಭಿಸುವ ರೊಬೊಗಳು ಐದು ದಿನಗಳಲ್ಲಿ ಮೂತ್ರಪಿಂಡ ಕಲ್ಲನ್ನು ಶೇ 30ರಷ್ಟು ಕರಗಿಸಬಲ್ಲವು ಎನ್ನುವುದು ಅಧ್ಯಯನದಿಂದ ಕಂಡುಕೊಂಡಿರುವುದಾಗಿ ಸಂಶೋಧಕರು ಹೇಳಿದ್ದಾರೆ.
ಕ್ಲಿನಿಕಲ್ ಟ್ರಯಲ್‌ನಲ್ಲೂ ಇದು ಯಶಸ್ವಿಯಾದಲ್ಲಿ ಇದೊಂದು ನೋವು ರಹಿತ ಚಿಕಿತ್ಸೆಯಾಗಲಿದೆ. ಕಡಿಮೆ ಅವಧಿಯಲ್ಲಿ ಗುಣಮುಖರಾಗಲು ಸಾಧ್ಯ. ಶಸ್ತ್ರಚಿಕಿತ್ಸೆಯ ಸಾಧ್ಯತೆ ಅಥವಾ ಶಾಕ್ ವೇವ್ ಚಿಕಿತ್ಸೆಯ ಅಗತ್ಯವೂ ತಗ್ಗಲಿದೆ ಎನ್ನುವುದು ಅವರ ವಿಶ್ವಾಸ.
ಈ ಎರಡು ರೊಬೊಗಳ ಹೊಸ ಸಾಧ್ಯತೆಗಳು ಶಸ್ತ್ರಚಿಕಿತ್ಸೆ ರಹಿತ ಹೊಸ ಸಾಧ್ಯತೆಗಳತ್ತ ಜಗತ್ತಿನ ಗಮನ ಹರಿಸುವಂತೆ ಮಾಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.