ADVERTISEMENT

ಅಮಿತ್ ಶಾ, ಎನ್‌ಟಿಆರ್‌ ಭೇಟಿ: ತೆಲಂಗಾಣ ರಾಜಕೀಯದಲ್ಲಿ ತಲ್ಲಣ! ಏನಿದರ ಗುಟ್ಟು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಆಗಸ್ಟ್ 2022, 9:14 IST
Last Updated 22 ಆಗಸ್ಟ್ 2022, 9:14 IST
ಅಮಿತ್‌ ಶಾ, ಎನ್‌ಟಿಆರ್‌
ಅಮಿತ್‌ ಶಾ, ಎನ್‌ಟಿಆರ್‌   

ಹೈದರಾಬಾದ್: ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿ ನಾಯಕ ಅಮಿತ್ ಶಾ ಅವರನ್ನುಜೂನಿಯರ್ ಎನ್‌ಟಿಆರ್‌ ಭೇಟಿ ಮಾಡಿರುವುದು ತೆಲಂಗಾಣ ರಾಜಕೀಯ ಪಡಸಾಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.

ತೆಲಂಗಾಣ ರಾಜ್ಯದಲ್ಲಿ ನೆಲೆ ಕಂಡುಕೊಳ್ಳಲು ಬಿಜೆಪಿ ಪ್ರಯತ್ನ ಮಾಡುತ್ತಿದೆ. ಇದರ ಭಾಗವಾಗಿಯೇಸಿನಿಮಾ ಮತ್ತು ವಿವಿಧ ಕ್ಷೇತ್ರಗಳಲ್ಲಿನ ಗಣ್ಯರನ್ನು ಸೆಳೆಯಲು ಬಿಜೆಪಿ ಪಯತ್ನ ಮಾಡುತ್ತಿದೆ. ಈಗಾಗಲೇ ಖ್ಯಾತ ನಿರ್ದೇಶಕ ರಾಜಮೌಳಿ ಅವರತಂದೆ ವಿಜಯೇಂದ್ರ ಪ್ರಸಾದ್ ಅವರಿಗೆ ರಾಜ್ಯಸಭಾ ಸ್ಥಾನ ನೀಡಿರುವುದು ಇದೇ ಕಾರಣಕ್ಕೆ ಎಂದು ಹೇಳಲಾಗುತ್ತಿದೆ.

ಪಕ್ಷದ ಬಲವರ್ಧನೆ ಅಂಗವಾಗಿಯೇ ಎನ್‌ಟಿಆರ್‌ ಹಾಗೂ ಅಮಿತ್‌ ಶಾ ಭೇಟಿ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರಿಂದ ತೆಲಂಗಾಣರಾಜಕೀಯ ವಲಯದಲ್ಲಿ ತಲ್ಲಣ ಉಂಟಾಗಿದೆ. ಈ ರಾಜ್ಯದಲ್ಲಿ ಕಾಂಗ್ರೆಸ್‌ ಹಾಗೂ ತೆಲುಗು ದೇಶಂ ಪಕ್ಷಗಳು ಸಂಪೂರ್ಣವಾಗಿ ನೆಲ ಕಚ್ಚಿವೆ. ಅಲ್ಲಿ ಬಿಜೆಪಿ ಶಕ್ತಿ ವೃದ್ಧಿಯಾಗುತ್ತಿದೆ. ಇದರಿಂದ ಟಿಆರ್‌ಎಸ್‌ಗೆ ಆತಂಕಎದುರಾಗಿದೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ.

ಭಾನುವಾರ ಹೈದರಾಬಾದ್‌ಗೆ ಅಮಿತ್‌ ಶಾ ಭೇಟಿ ನೀಡಿದ್ದಾರೆ. ಇದೇ ವೇಳೆ ಎನ್‌ಟಿಆರ್‌ ಅವರು ಅಮಿತ್‌ ಶಾ ಅವರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಆದರೆ ಚರ್ಚೆ ಮಾಡಿದ ವಿಷಯಗಳು ಯಾವುವು ಎಂಬುದು ಬಹಿರಂಗವಾಗಿಲ್ಲ. ಇಬ್ಬರು ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸಿದ ಫೋಟೊಗಳನ್ನು ಅಮಿತ್‌ ಶಾ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಆರ್‌ಆರ್‌ಆರ್‌ ಸಿನಿಮಾದಲ್ಲಿಎನ್‌ಟಿಆರ್‌ ಅಭಿನಯವನ್ನು ಅಮಿತ್‌ ಶಾ ಮೆಚ್ಚಿಕೊಂಡಿದ್ದಾರೆ ಈ ಹಿನ್ನೆಲೆಯಲ್ಲಿ ಎನ್‌ಟಿಆರ್‌ ಭೇಟಿ ನಡೆದಿರಬಹುದು ಎಂದು ಕೆಲವರು ಹೇಳಿದ್ದಾರೆ. ಇದು ಆರ್‌ಆರ್‌ಆರ್‌ ಸಿನಿಮಾಗಾಗಿ ಮಾಡಿದ ಭೇಟಿಯಲ್ಲ ಇದು ಪಕ್ಕಾ ರಾಜಕೀಯ ಭೇಟಿ ಎಂದು ಮತ್ತೆ ಕೆಲವರು ಹೇಳುತ್ತಿದ್ದಾರೆ. ಒಂದು ವೇಳೆ ಆರ್‌ಆರ್‌ಆರ್‌ ಚಿತ್ರಕ್ಕಾಗಿಯೇ ಭೇಟಿ ಮಾಡಿದ್ದರೆ ರಾಮ್‌ ಚರಣ್‌ ಅವರನ್ನು ಆಹ್ವಾನಿಸುತ್ತಿದ್ದರು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ತೆಲಂಗಾಣದಲ್ಲಿ ರಾಜಕೀಯ ಮೈಲೇಜ್‌ ಪಡೆದುಕೊಳ್ಳಲು ಬಿಜೆಪಿ ಪ್ರಯತ್ನಸುತ್ತಿದ್ದು, ಎನ್‌ಟಿಆರ್‌ ಅವರನ್ನು ಸೆಳೆಯಲುಯತ್ನಿಸಿರುವುದು ನಿಜ ಎಂದು ತೆಲಂಗಾಣ ಬಿಜೆಪಿ ಮುಖಂಡರು ಒಪ್ಪಿಕೊಂಡಿದ್ದಾರೆ.

ಆದಾಗ್ಯೂ, ಎನ್‌ಟಿಆರ್‌ ಅವರು ಅಮಿತ್ ಶಾ ಅವರ ಜೊತೆಗಿನ ಭೇಟಿಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ನಾನು ರಾಜಕೀಯದಲ್ಲಿ ಆಸಕ್ತಿ ಹೊಂದಿಲ್ಲ ಎಂದು ಅವರು ಹೇಳಿದ್ದಾರೆ. ವಾಸ್ತವವಾಗಿ, ಎನ್‌ಟಿಆರ್‌ ಅವರು ತಮ್ಮ ಅಜ್ಜ ಸ್ಥಾಪನೆ ಮಾಡಿರುವ ತೆಲುಗು ದೇಶಂ (ಟಿಡಿಪಿ)ಪಕ್ಷದ ಕಡೆಒಲವು ಹೊಂದಿದ್ದಾರೆ. ಆದರೆ ಪಕ್ಷದಲ್ಲಿ ಪರಿಸ್ಥಿತಿ ಸರಿ ಇಲ್ಲದಿರುವುದರಿಂದ ಅವರು ರಾಜಕೀಯದಿಂದ ದೂರ ಉಳಿದಿದ್ದಾರೆ ಎಂದು ಅವರ ಆಪ್ತರು ಹೇಳಿಕೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಟಿಡಿಪಿ ಪಕ್ಷದ ಒಂದು ಬಣ, ಎನ್‌ಟಿಆರ್‌ ಅವರನ್ನು ಪಕ್ಷದ ಉತ್ತರಾಧಿಕಾರಿ ಮಾಡಬೇಕು ಎಂದು ಒತ್ತಾಯ ಮಾಡುತ್ತಿದೆ. ಆದರೆ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಇದಕ್ಕೆ ಒಪ್ಪುತ್ತಿಲ್ಲ ಎನ್ನಲಾಗಿದೆ. ಅವರು ತಮ್ಮ ಮಗ ನಾರಾ ಲೋಕೇಶ್ ಅವರನ್ನು ಉತ್ತರಾಧಿಕಾರಿ ಮಾಡಲು ಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಈ ಕಾರಣಕ್ಕಾಗಿಯೇ ಎನ್‌ಟಿಆರ್‌ ಟಿಡಿಪಿ ಪಕ್ಷದಿಂದ ದೂರ ಉಳಿಯಬೇಕಾಗಿದೆ.

ಇನ್ನು ಎನ್‌ಟಿಆರ್‌ ಅವರು ರಾಜಕೀಯ ಸೇರಲು ಬಯಸಿದರೆ,ಟಿಡಿಪಿ ಸೇರುತ್ತಾರೆ ವಿನಾ ಬೇರೆ ಯಾವುದೇ ಪಕ್ಷವನ್ನು ಸೇರುವುದಿಲ್ಲ. ಅವರು ತಮ್ಮ ತಾತಾ ಕಟ್ಟಿದ ಪಕ್ಷವನ್ನು ಆನುವಂಶಿಕವಾಗಿ ಪಡೆಯಲು ಎದುರು ನೋಡುತ್ತಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ.

ಬಿಜೆಪಿ ಮೂಲಗಳ ಪ್ರಕಾರ ಎನ್‌ಟಿಆರ್‌ ಅವರನ್ನು ಪಕ್ಷಕ್ಕೆ ಕರೆತುವ ಉದ್ದೇಶವನ್ನು ಅಮಿತ್ ಶಾ ಹೊಂದಿದ್ದಾರೆ. ಈ ಪ್ರಕ್ರಿಯೆ ಸಾಧ್ಯವಾಗದಿದ್ದಾಗ ಅವರಿಂದ ಪಕ್ಷವನ್ನು ಬೆಂಬಲಿಸುವಂತೆ ಮಾಡುವ ಯೋಜನೆ ಭೇಟಿಯ ಉದ್ದೇಶ ಎನ್ನಲಾಗಿದೆ. ಒಂದು ವೇಳೆ ಎನ್‌ಟಿಆರ್‌ ಪಕ್ಷವನ್ನು ಬೆಂಬಲಿಸಿದರೆಮುಂದಿನ ಚುನಾವಣೆಯಲ್ಲಿ ತೆಲಂಗಾಣದಲ್ಲಿ ಮುಖ್ಯಮಂತ್ರಿ ಕೆಸಿಆರ್ ನೇತೃತ್ವದ ತೆಲಂಗಾಣ ರಾಷ್ಟ್ರೀಯ ಕಾಂಗ್ರೆಸ್‌ (ಟಿಆರ್‌ಎಸ್‌) ಪಕ್ಷಕ್ಕೆಕಠಿಣ ಸ್ಪರ್ಧೆ ನೀಡಬಹುದು ಎಂಬುದು ಬಿಜೆಪಿ ನಾಯಕರ ಲೆಕ್ಕಾಚಾರ.

ಹೈದರಾಬಾದ್ ಮತ್ತು ಆ ಭಾಗದಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿಜೆಪಿ ಉತ್ತಮ ಹಿಡಿತವನ್ನು ಹೊಂದಿದೆ. ಉಳಿದ ಭಾಗಗಳಲ್ಲಿ ಮತದಾರರು ಬಿಜೆಪಿಗೆ ಬೆಂಬಲ ನೀಡಿದರೆ ಹೆಚ್ಚಿನ ಶೇಕಡವಾರು ಮತಗಳನ್ನು ಪಡೆಯುಬಹುದು ಎಂದು ಬಿಜೆಪಿ ನಿರೀಕ್ಷಿಸಿದೆ. ಎನ್‌ಟಿಆರ್‌ ಅವರ ಬೆಂಬಲವು ಇದಕ್ಕೆ ಸಹಾಯ ಮಾಡುತ್ತದೆ ಎಂದು ಬಿಜೆಪಿ ನಾಯಕರು ಭಾವಿಸಿದ್ದಾರೆ.

ಇದರ ಭಾಗವಾಗಿಯೇ ಅಮಿತ್ ಶಾ, ಎನ್‌ಟಿಆರ್‌ ಭೇಟಿ ನಡೆದಿದೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಈ ಭೇಟಿ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಇವರ ಭೇಟಿಯ ಗುಟ್ಟನ್ನು ಮುಂದಿನ ದಿನಗಳಲ್ಲಿ ತಿಳಿಯಬಹುದು ಎಂದು ಬಿಜೆಪಿ ಮುಖಂಡರೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಎನ್‌ಟಿಆರ್‌, ಅಮಿತ್‌ ಶಾ ಭೇಟಿ ರಾಜಕೀಯದಲ್ಲಿ ಮಹತ್ವ ಪಡೆದುಕೊಂಡಿದ್ದು, ಇದಕ್ಕೆ ರೆಕ್ಕೆಪುಕ್ಕಗಳನ್ನು ಕಟ್ಟಿಸಾಮಾಜಿಕ ಮಾಧ್ಯಮಗಳಲ್ಲೂ ಚರ್ಚೆ ಮಾಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.