ADVERTISEMENT

ಬಾಗಿಲು ಮುಚ್ಚಿದ ಶುದ್ಧ ನೀರಿನ ಘಟಕಗಳು

ಬೀದರ್ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿತ

​ಪ್ರಜಾವಾಣಿ ವಾರ್ತೆ
Published 29 ಜೂನ್ 2019, 20:01 IST
Last Updated 29 ಜೂನ್ 2019, 20:01 IST
ಔರಾದ್ ತಾಲ್ಲೂಕಿನ ಸಂತಪುರದಲ್ಲಿ ಒಂದು ವರ್ಷದ ಹಿಂದೆ ಅಳವಡಿಸಲಾದ ನೀರು ಶುದ್ಧೀಕರಣ ಘಟಕ ಇವತ್ತಿಗೂ ಆರಂಭವಾಗಿಲ್ಲ
ಔರಾದ್ ತಾಲ್ಲೂಕಿನ ಸಂತಪುರದಲ್ಲಿ ಒಂದು ವರ್ಷದ ಹಿಂದೆ ಅಳವಡಿಸಲಾದ ನೀರು ಶುದ್ಧೀಕರಣ ಘಟಕ ಇವತ್ತಿಗೂ ಆರಂಭವಾಗಿಲ್ಲ   

ಬೀದರ್: ಜಿಲ್ಲೆಯಲ್ಲಿನ ನದಿ, ಕೆರೆ ಕಟ್ಟೆಗಳಲ್ಲಿನ ನೀರು ಬಹುತೇಕ ಖಾಲಿಯಾಗಿದೆ. ನದಿ ಹಾಗೂ ದೊಡ್ಡ ಹಳ್ಳಗಳಿಗೆ ನಿರ್ಮಿಸಿರುವ ಒಂದು ಬ್ಯಾರೇಜ್‌ನಲ್ಲೂ ಹನಿ ನೀರಿಲ್ಲ. ಅಂತರ್ಜಲ ಮಟ್ಟ 600 ಅಡಿ ಆಳಕ್ಕೆ ಕುಸಿದಿದೆ. ಕೊಳವೆಬಾವಿಗಳು ಒಂದೊಂದಾಗಿ ಬತ್ತಲು ಆರಂಭಿಸಿವೆ. ಅಂತರ್ಜಲ ಕೊರತೆಯಿಂದಾಗಿ ಅನೇಕ ಶುದ್ಧ ಕುಡಿಯುವ ನೀರಿನ ಘಟಕಗಳು ಬಾಗಿಲು ಮುಚ್ಚಿವೆ.

ಮಾಂಜರಾ ನದಿಗೆ ಅಡ್ಡಲಾಗಿ ಜೀರ್ಗ್ಯಾಳ, ಮಾಣಿಕೇಶ್ವರ, ಚಂದಾ ಪುರ, ಹಾಲಹಳ್ಳಿ ಹಾಗೂ ಕೌಠಾ ಸಮೀಪ ನಿರ್ಮಿಸಿರುವ ಐದೂ ಬ್ಯಾರೇಜುಗಳಲ್ಲಿ ನೀರಿಲ್ಲ. ಐದು ವರ್ಷಗಳಿಂದ ಜಿಲ್ಲೆಯ 217 ಗ್ರಾಮಗಳಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಆದರೆ, ರಾಜ್ಯ ಸರ್ಕಾರ ಒಂದು ಗ್ರಾಮಕ್ಕೂ ಶಾಶ್ವತ ಪರಿಹಾರ ದೊರಕಿಸಿಕೊಟ್ಟಿಲ್ಲ.

ಜಿಲ್ಲೆಯ 600 ಹಳ್ಳಿಗಳ ಪೈಕಿ 217 ಗ್ರಾಮಗಳಲ್ಲಿ ಜಲಮೂಲ ಬತ್ತಿವೆ. ಗ್ರಾಮಗಳಲ್ಲಿರುವ ಶುದ್ಧ ನೀರಿನ ಘಟಕಗಳಿಗೆ ಕೊಳವೆಬಾವಿಗಳಿಂದ ನೀರು ಬಿಟ್ಟು ಬಿಟ್ಟು ಬರುತ್ತಿರುವ ಕಾರಣ ಕೆಲ ಘಟಕಗಳು ಬಂದ್‌ ಆಗಿವೆ. ಜಿಲ್ಲಾ ಆಡಳಿತವು 131 ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡುತ್ತಿದ್ದು, ಇದಕ್ಕಾಗಿಯೇ ₹ 1.09 ಕೋಟಿ ಖರ್ಚು ಮಾಡಿದೆ.

ADVERTISEMENT

ಜಿಲ್ಲಾ ಆಡಳಿತ 306 ಖಾಸಗಿ ಕೊಳವೆಬಾವಿ ಹಾಗೂ 13 ತೆರೆದ ಬಾವಿಗಳನ್ನು ವಶಕ್ಕೆ ತೆಗೆದು ಕೊಂಡು ಹಳ್ಳಿಗಳಿಗೆ ನೀರು ಪೂರೈಕೆ ಮಾಡುತ್ತಿದೆ. ಕೊಳವೆಬಾವಿಗಳ ಮಾಲೀಕರಿಗೆ ₹ 72.41 ಲಕ್ಷ ಬಾಡಿಗೆ ಪಾವತಿಸಿದೆ.

‘ಕೆಲವು ಗ್ರಾಮಗಳಲ್ಲಿ ಒಂದೂವರೆ ಕಿ.ಮೀ ಪೈಪ್‌ಲೈನ್‌ ಅಳವಡಿಸಿದರೆ ಸಾಕು ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು. ಆದರೆ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಈ ನಿಟ್ಟಿನಲ್ಲಿ ಮನಸ್ಸು ಮಾಡುತ್ತಿಲ್ಲ’ ಎಂದು ಸಾಮಾಜಿಕ ಕಾರ್ಯಕರ್ತ ಗುರುನಾಥ ವಡ್ಡೆ ಹೇಳುತ್ತಾರೆ.

ಗ್ರಾಮೀಣ ಜನತೆಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲೆಂದೇ ರಾಜ್ಯ ಸರ್ಕಾರ ಬೀದರ್‌ ಜಿಲ್ಲೆಗೆ 434 ಘಟಕಗಳನ್ನು ಮಂಜೂರು ಮಾಡಿದೆ. ಅದರಲ್ಲಿ 301 ಘಟಕಗಳು ಸ್ಥಾಪನೆಯಾಗಿವೆ. 133 ಘಟಕಗಳು ನಿರ್ಮಾಣದ ಹಂತದಲ್ಲಿವೆ. ಸ್ಥಾಪನೆಯಾದ ಘಟಕಗಳ ಪೈಕಿ ಕೊಳವೆಬಾವಿ ಬತ್ತಿರುವ ಕಾರಣ 59 ಘಟಕಗಳು ಬಂದ್ ಆಗಿವೆ.

ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧೀನದಲ್ಲಿರುವ ಶುದ್ಧ ನೀರಿನ ಘಟಕಗಳಲ್ಲಿ ಸ್ಮಾರ್ಟ್‌ ಕಾರ್ಡ್ ಮೂಲಕ ನೀರು ಪಡೆಯುವ ವ್ಯವಸ್ಥೆ ಇದೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಅಧೀನದಲ್ಲಿರುವ ಘಟಕಗಳು ವಾಟರ್‌ಮನ್‌ ಮೂಲಕ ನೀರು ಕೊಡುತ್ತಿವೆ. ಔರಾದ್ ತಾಲ್ಲೂಕಿನ ಗಡಿ ಗ್ರಾಮಗಳ ಜನ ₹100 ರಿಚಾರ್ಜ್ ಮಾಡಿಸಿ ಸ್ಮಾರ್ಟ್‌ ಕಾರ್ಡ್‌ ಮೂಲಕ ನೀರು ಒಯ್ಯುತ್ತಿದ್ದಾರೆ. ₹2 ಗೆ 20 ಲೀಟರ್‌ ನೀರು ಒದಗಿಸಲಾಗುತ್ತಿದೆ. ಇದರಿಂದ ಗ್ರಾಮಸ್ಥರಿಗೆ ಅನುಕೂಲವೂ ಆಗಿದೆ.

ಶುದ್ಧ ನೀರಿನ ಘಟಕಗಳಿಗೆ ಬೇಡಿಕೆ ಇದ್ದರೂ ಕೆಲ ಗ್ರಾಮಗಳಲ್ಲಿ ನಿರ್ವಹಣೆಯ ಕೊರತೆ ಹಾಗೂ ತಾಂತ್ರಿಕ ಕಾರಣಗಳಿಂದಾಗಿ ಶುದ್ಧ ನೀರಿನ ಘಟಕಗಳು ಬಂದ್‌ ಆಗಿವೆ.

‘ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಆಳಕ್ಕೆ ಕುಸಿದಿದೆ. ಶುದ್ಧ ನೀರಿನ ಘಟಕಗಳಲ್ಲಿ ಶೇ ₹ 50ರಷ್ಟು ನೀರು ಪೋಲಾಗುವ ಕಾರಣ ಕೆಲವು ಗ್ರಾಮಗಳಲ್ಲಿನ ಘಟಕಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಮಳೆ ಶುರುವಾದ ತಕ್ಷಣ ಘಟಕಗಳನ್ನು ಮತ್ತೆ ಆರಂಭ ಮಾಡಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಮಹಾಂತೇಶ ಬೀಳಗಿ ಹೇಳುತ್ತಾರೆ.

ಇವನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.