ADVERTISEMENT

ಜಿಎಸ್‌ಟಿ: ಬಲಗೊಳ್ಳಬೇಕು ಬೆನ್ನೆಲುಬಿನಂತಿರುವ ಜಾಲತಾಣ

ವಿಶ್ವನಾಥ ಎಸ್.
Published 21 ಡಿಸೆಂಬರ್ 2019, 20:38 IST
Last Updated 21 ಡಿಸೆಂಬರ್ 2019, 20:38 IST
ಮನೋಹರ್
ಮನೋಹರ್   

ಬೆಂಗಳೂರು: ಜಿಎಸ್‌ಟಿ ತೆರಿಗೆ ಪದ್ಧತಿ ಸಂಪೂರ್ಣವಾಗಿ ಆನ್‌ಲೈನ್‌ ಮೇಲೆ ಅವಲಂಬಿತವಾಗಿದೆ. ಈಗಲೂ ಅದರ ಜಾಲತಾಣ ( ಜಿಎಸ್‌ಟಿಎನ್) ಬಲಪಡಿಸುವ ನಿಟ್ಟಿನಲ್ಲಿ ಹೆಚ್ಚಿನ ಕೆಲಸ ಆಗುತ್ತಿಲ್ಲ. ಪ್ರತಿ ಬಾರಿ ರಿಟರ್ನ್ಸ್ ಸಲ್ಲಿಸುವಾಗಲೂ ವರ್ತಕರು, ಉದ್ಯಮಿಗಳು ತಮ್ಮ ಅಸಮಾಧಾನ ದಾಖಲಿಸುತ್ತಿದ್ದಾರೆ. ಆದರೆ, ಜಿಎಸ್‌ಟಿಎನ್ ಅಧಿಕಾರಿಗಳು, ‘ಜಾಲತಾಣ ಸಶಕ್ತವಾಗಿದೆ. ಯಾವುದೇ ಸಮಸ್ಯೆ ಇಲ್ಲ. ತಿಂಗಳ ಗಡುವು ಮುಗಿಯುವ ಕೊನೇ ದಿನಗಳಲ್ಲಿ ರಿಟರ್ನ್ಸ್ ಸಲ್ಲಿಸುವುದರಿಂದ ಸಮಸ್ಯೆ ಆಗುತ್ತಿದೆ’ ಎನ್ನುತ್ತಿದ್ದಾರೆ.

ಜಾಲತಾಣವೇ ಜಿಎಸ್‌ಟಿಗೆ ಬೆನ್ನೆಲುಬು. ಇದು ಗಟ್ಟಿಯಾಗಿರದೇ ಇದ್ದರೆ ಸಕಾಲಕ್ಕೆ ರಿಟರ್ನ್ಸ್ ಸಲ್ಲಿಕೆ ಆಗುವುದಿಲ್ಲ. ಇದರಿಂದ ವಿಳಂಬ ಶುಲ್ಕ, ಅದಕ್ಕೆ ಬಡ್ಡಿ, ದಂಡ ಪಾವತಿಸಬೇಕಾಗುತ್ತದೆ. ಇನ್ನು ಈ ರೀತಿ ವಿಳಂಬ ಆದಷ್ಟೂ ಸರ್ಕಾರಕ್ಕೆ ಸರಿಯಾದ ಸಮಯಕ್ಕೆ ತೆರಿಗೆ ಸಂದಾಯ ಆಗುವುದಿಲ್ಲ. ಕರ್ನಾಟಕ ವಾಣಿಜ್ಯೋದ್ಯಮ‌ ಮಹಾಸಂಘದ (ಎಫ್‌ಕೆಸಿಸಿಐ) ಜಿಎಸ್‌ಟಿ ಸಮಿತಿಯ ಅಧ್ಯಕ್ಷ ಬಿ.ಟಿ. ಮನೋಹರ್ ಅವರು ಈ ತೆರಿಗೆ ಪದ್ಧತಿಯಲ್ಲಿನ ಸಮಸ್ಯೆಗಳ ಬಗ್ಗೆ ಇಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಜಾಲತಾಣದಲ್ಲಿ ಬೆಂಬಲ ಕಡಿಮೆ. ಪ್ರತಿ ತಿಂಗಳ 1 ರಿಂದ 10ರೊಳಗಾಗಿ ಪೂರೈಕೆಯ ಮಾಹಿತಿ ಅಪ್‌ಲೋಡ್ ಮಾಡಬೇಕು. ಹಾಗೆಯೇ 10 ರಿಂದ 20ರ ಒಳಗಾಗಿ ತಿಂಗಳ ರಿಟರ್ನ್ ಸಲ್ಲಿಸಬೇಕು. ಹೀಗೆ ಮಾಡುವಾಗ 18,19, 20ನೇ ತಾರೀಕಿನಂದು ದೇಶದಾದ್ಯಂತ ಸುಮಾರು 70 ರಿಂದ 80 ಸಾವಿರ ಜನ ‌ರಿಟರ್ನ್ಸ್ ಪೈಲ್ ಮಾಡುತ್ತಾರೆ. ಈ ಸಂದರ್ಭದಲ್ಲಿ ಸರ್ವರ್ ಬೆಂಬಲ‌ ಇಲ್ಲ. ಅತಿ ಹೆಚ್ಚು ತೊಂದರೆ ಆಗುತ್ತಿರುವುದೇ ಇಲ್ಲಿ. 20ನೇ ತಾರೀಕು ಫೈಲ್ ಮಾಡದೇ ಇದ್ದರೆ, ವಿಳಂಬ ಶುಲ್ಕ, ಬಡ್ಡಿ ಕಟ್ಟಬೇಕಾಗತ್ತದೆ.

ADVERTISEMENT

ಒಂದು ಸಲಕ್ಕೆ 1.50 ಲಕ್ಷ ರಿಟರ್ನ್ಸ್ ಸಲ್ಲಿಸಬಹುದು. ಹೆಚ್ಚಾದರೆ ಸರತಿಯಲ್ಲಿದ್ದೀರಿ ಎನ್ನುವ ಸಂದೇಶ ಬರುತ್ತದೆ. ಜಾಲತಾಣ ಸರಿಯಾಗಿ ಇದೆ ಎಂದಾದರೆ ರಿಟರ್ನ್ಸ್ ಸಲ್ಲಿಕೆ ಅವಧಿಯನ್ನು ಏಕೆ ವಿಸ್ತರಿಸುತ್ತಿದ್ದರು? ಕೊನೆ ದಿನ ಸಮಸ್ಯೆ ಆಗುತ್ತಿದೆ ಎನ್ನುವುದನ್ನು ಒಪ್ಪಲು ಸಿದ್ಧವಿಲ್ಲ. ಜಾಲತಾಣ ಬಲಪಡಿಸಲು ಗಮನ ನೀಡಬೇಕು. ಗಡುವು ನೀಡಿ, ಇದೇ ದಿನ ರಿಟರ್ನ್ಸ್ ಸಲ್ಲಿಸಿ ಎಂದು ಆದೇಶ ನೀಡುವುದು ಸರಿ ಇಲ್ಲ. ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ಪಡೆಯಲು, ಸರಕನ್ನು ಯಾರು ಮಾರಾಟ ಮಾಡಿರುತ್ತಾರೋ ಅವರು ಕಡ್ಡಾಯವಾಗಿ ರಿಟರ್ನ್ಸ್ ಫೈಲ್ ಮಾಡಿರಬೇಕು. ಇಲ್ಲದೇ ಇದ್ದರೆ ಖರೀದಿದಾರರಿಗೆ ಐಟಿಸಿ ಸಿಗುವುದಿಲ್ಲ. ಫಾರಂ 3ಬಿನಲ್ಲಿ ಏನೆಲ್ಲಾ ಖರೀದಿಸಿದ್ದೀನಿ ಅದಕ್ಕೆ ಎಷ್ಟು ತೆರಿಗೆ ಕಟ್ಟಿದ್ದೀನಿ, ಏನು ಮಾರಾಟ ಮಾಡಿದ್ದೀನಿ, ಅದರಿಂದ ಎಷ್ಟು ತೆರಿಗೆ ಸಂಗ್ರಹಿಸಿದ್ದೀನಿ ಎನ್ನುವ ಮಾಹಿತಿ ತುಂಬಬೇಕು. ದಿನಾಂಕ 1 ರಿಂದ 10ರ ಒಳಗಾಗಿ ಬಿ2ಬಿನಲ್ಲಿ ಖರೀದಿ ಮತ್ತು ಮಾರಾಟದ ಮಾಹಿತಿಗಳು ಹೊಂದಾಣಿಕೆ ಆಗಬೇಕು. ಹಾಗೆ ಆಗದೇ ಇದ್ದರೆ ಐಟಿಸಿ ಸಿಗುವುದಿಲ್ಲ. ಇನ್‌ವಾಯ್ಸ್ ಸಲ್ಲಿಕೆಯಲ್ಲಿ ಉದ್ದೇಶಪೂರ್ವಕವಾಗಿ ತಪ್ಪು ಮಾಡುವುದರಿಂದ ಅಥವಾ ತಿಳಿಯದೇ ತಪ್ಪಾಗುವುದರಿಂದ ನಿರ್ದಿಷ್ಟ ತಿಂಗಳಿಗೆ ಐಟಿಸಿ ಸಿಗುತ್ತಿಲ್ಲ.

’ಈ ಸಮಸ್ಯೆ ತಪ್ಪಿಸಲು ಹೊಸದಾಗಿ ಬರುತ್ತಿರುವ ರಿಟರ್ನ್ಸ್‌ನಲ್ಲಿ ಅನುಬಂಧ 1 ಮತ್ತು 2 ಕೊಟ್ಟಿದಾರೆ. ಯಾರು ಪೂರೈಕೆ ಮಾಡುತ್ತಾರೋ ಅವರು 1ರಲ್ಲಿ ಮಾಹಿತಿ ನೀಡಬೇಕು. ಇದರಿಂದ ಪೂರ್ಣಪ್ರಮಾಣದಲ್ಲಿ ಸಮಸ್ಯೆ ಬಗೆಹರಿಯಲಿದೆ ಎಂದು ಹೇಳಲು ಬರುವುದಿಲ್ಲ. ಅದರ ಬಗ್ಗೆ ಪ್ರತಿಕ್ರಿಯೆ, ಸಲಹೆ ನೀಡಲು ಅವಕಾಶ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.