ಕೊಪ್ಪಳ ತಾಲ್ಲೂಕಿನ ಯಲಮಗೇರಿ ಗ್ರಾಮದ ರೈತ ಪಾಲಾಕ್ಷಗೌಡ ಮೇಟಿ ಅವರ ಹೊಲದಲ್ಲಿ ಕೇಸರ್ ತಳಿಯ ಮಾವು ಹೂ ಬಿಟ್ಟಿರುವುದು
ಪ್ರಜಾವಾಣಿ ಚಿತ್ರಗಳು/ಭರತ್ ಕಂದಕೂರು
ಕೊಪ್ಪಳ: ಹಣ್ಣಿನ ಬೆಳೆಗಳಿಂದ ಹೆಚ್ಚು ಲಾಭ ಸಿಗುತ್ತದೆ ಎಂಬುದನ್ನು ಅರಿತು ಕುಷ್ಟಗಿ ತಾಲ್ಲೂಕಿನ ಜೂಲಕಟ್ಟಿ ಗ್ರಾಮದ ಗ್ಯಾನಪ್ಪ ಗುಂಡಗಿ ಹಾಗೂ ಅವರ 11 ಜನ ಮಕ್ಕಳು ಮೂರ್ನಾಲ್ಕು ವರ್ಷಗಳ ಹಿಂದೆ ತಮ್ಮ ಒಟ್ಟು 30 ಎಕರೆ ತೋಟದ ಪೈಕಿ ಆರು ಎಕರೆಯಲ್ಲಿ ನಾಲ್ಕು ಸಾವಿರ ದಾಳಿಂಬೆ ಸಸಿಗಳನ್ನು ನಾಟಿ ಮಾಡಿ ₹20 ಲಕ್ಷ ಖರ್ಚು ಮಾಡಿದರು. 14 ತಿಂಗಳಲ್ಲಿ ಮೊದಲ ಫಸಲು ಬಂದಾಗ ಮಾಡಿದ ಖರ್ಚು ಕಳೆದು ₹22 ಲಕ್ಷ ಲಾಭ ಕೈಸೇರಿತು. ಇದಾದ ನಂತರದ ಋತುವಿಗೆ ಎರಡನೇ ಫಸಲಿಗೆ ಬಂಪರ್ ಬೆಲೆಯೂ ಲಭಿಸಿ ಬರೋಬ್ಬರಿ ₹1.06 ಕೋಟಿ ಲಾಭ ಬಂತು! ಮೂರನೇ ಋತುವಿನ ಫಸಲಿನಲ್ಲಿಯೂ ದೊಡ್ಡಮಟ್ಟದಲ್ಲಿ ಹಣ ಜೇಬಿಗಿಳಿಯಿತು. ಅವರೀಗ ನಾಲ್ಕನೇ ಫಸಲಿನ ನಿರೀಕ್ಷೆಯಲ್ಲಿದ್ದಾರೆ...
ಮೊದಲು ಶೇಂಗಾ ಬೆಳೆದು ಸಂಕಷ್ಟ ಎದುರಿಸಿ ಸಾಲ ಮಾಡುವ ಸ್ಥಿತಿಗೆ ತಲುಪಿದ್ದ ಗ್ಯಾನಪ್ಪ ಗುಂಡಗಿ ಅವರ ಕುಟುಂಬ ಈಗ ಆರ್ಥಿಕವಾಗಿ ಗಟ್ಟಿಯಾಗಿದೆ.
‘ನಮ್ಮ ತಂದೆಗೆ ಏಳು ಜನ ಪುತ್ರರು, ನಾಲ್ಕು ಜನ ಪುತ್ರಿಯರಿದ್ದಾರೆ. ಸೊಸೆಯಂದಿರು, ಮಕ್ಕಳು, ಮೊಮ್ಮಕ್ಕಳು ಸೇರಿ ಮನೆಯಲ್ಲಿ 70 ಜನರಿದ್ದೇವೆ. ದಾಳಿಂಬೆ ಬೆಳೆಗೆ ಉತ್ತಮ ಮಾರುಕಟ್ಟೆ ಲಭಿಸಿದ್ದರಿಂದ ಭರಪೂರ ಆದಾಯ ಗಳಿಸಲು ಸಾಧ್ಯವಾಯಿತು. ಇದು ನಮ್ಮ ಕುಟುಂಬದವರನ್ನು ವಿದ್ಯಾವಂತರನ್ನಾಗಿಸಿದೆ. ನನ್ನ ತಂದೆಗೆ 19 ಜನ ಮೊಮ್ಮಕ್ಕಳಿದ್ದು ಅದರಲ್ಲಿ ಒಬ್ಬ ಪಿಎಸ್‌ಐ ಸೇರಿ ಆರು ಜನ ಸರ್ಕಾರಿ ನೌಕರಿ ಪಡೆದುಕೊಂಡಿದ್ದಾರೆ’ ಎಂದು ಗ್ಯಾನಪ್ಪ ಗುಂಡಗಿ ಅವರ ಆರನೇ ಮಗ ದ್ಯಾಮಣ್ಣ ಗುಂಡಗಿ ಹೇಳಿದರು.
ಕೊಪ್ಪಳ ತಾಲ್ಲೂಕಿನ ಅಳವಂಡಿ ಸಮೀಪದ ಮೈನಹಳ್ಳಿ ಗ್ರಾಮದ ಈಶಪ್ಪ ಹಳ್ಳಿ ಎರಡು ವರ್ಷಗಳಿಂದ ತೈವಾನ್ ಪಿಂಕ್ ತಳಿಯ ಪೇರಲ ಬೆಳೆಯುತ್ತಿದ್ದು ವಾರ್ಷಿಕವಾಗಿ ಆರೇಳು ಲಕ್ಷ ಲಾಭ ಪಡೆಯುತ್ತಿದ್ದಾರೆ. ‘ಅತಿಯಾದ ರಾಸಾಯನಿಕ ಬಳಕೆಯಿಂದ ಸತ್ವ ಕಳೆದುಕೊಂಡಿದ್ದ ಭೂಮಿಗೆ ಹೊಲದಲ್ಲಿಯೇ ಕೊಟ್ಟಿಗೆ ಗೊಬ್ಬರ, ಸೆಗಣಿ, ಕುರಿಹಿಕ್ಕಿ, ಜೀವಾಮೃತ ತಯಾರಿಸಿ ಅದನ್ನೇ ಬಳಕೆ ಮಾಡಿದ್ದರಿಂದ ಖರ್ಚು ಕಡಿಮೆಯಾಗಿ ಆರ್ಥಿಕ ಸ್ಥಿತಿ ಬದಲಾಗಿದೆ. ತೋಟಗಾರಿಕಾ ಕೃಷಿ ಆಯ್ಕೆ ಮಾಡಿಕೊಂಡಿದ್ದು ಬದುಕು ನೀಡಿದೆ’ ಎನ್ನುತ್ತಾರೆ ಈಶಪ್ಪ ಹಳ್ಳಿ.
ಕೊಪ್ಪಳ ತಾಲ್ಲೂಕಿನ ಕಲ್ಲತಾವರಗೇರಾ ಗ್ರಾಮದ 33 ವರ್ಷದ ಅಂಬರೀಶ್ ತಟ್ಟಿ ಎನ್ನುವ ಯುವರೈತ ತಮ್ಮ ನಾಲ್ಕೂವರೆ ಎಕರೆ ತೋಟದಲ್ಲಿ ಮಾವಿನ ಹಣ್ಣುಗಳ ತಳಿ ಬೇನಿಷಾ ಬೆಳೆದಿದ್ದಾರೆ. ಕೊಪ್ಪಳ ತಾಲ್ಲೂಕು ವ್ಯಾಪ್ತಿಯ ರೈತರಿಗೆ ಮೆಕ್ಕೆಜೋಳ, ಕಡಲೆ, ಶೇಂಗಾ ಸಾಂಪ್ರದಾಯಿಕ ಬೆಳೆಯಾಗಿದೆ. ಅಂಬರೀಶ್ ಕೂಡ ಇದೇ ಸಾಂಪ್ರದಾಯಿಕ ಬೆಳೆಯ ಬೆನ್ನಿಗೆ ಬಿದ್ದು ವಾರ್ಷಿಕ ₹30 ಸಾವಿರದಿಂದ ₹40 ಸಾವಿರ ಮಾತ್ರ ಲಾಭ ಗಳಿಸುತ್ತಿದ್ದರು. ಇದಕ್ಕೆ ವಿದಾಯ ಹೇಳಿ ಏಳು ವರ್ಷಗಳ ಹಿಂದೆ ನೆಟ್ಟ ಮಾವಿನ ಸಸಿಗಳು ಈಗ ಪ್ರತಿವರ್ಷವೂ ‘ಅಕ್ಷಯ ಪಾತ್ರೆ’ಯಂತೆ ಫಸಲು ನೀಡುತ್ತಿವೆ. ವಾರ್ಷಿಕ ಆದಾಯ ಗಳಿಕೆ ಪ್ರಮಾಣ ₹5 ಲಕ್ಷದಿಂದ ₹6 ಲಕ್ಷಕ್ಕೆ ಏರಿಕೆಯಾಗಿದೆ. ಇದರಿಂದ ಪ್ರೇರಣೆಗೊಂಡು ದೇಶ ಹಾಗೂ ವಿದೇಶಗಳಲ್ಲಿ ಖ್ಯಾತಿ ಪಡೆಯುತ್ತಿರುವ ‘ಕೇಸರ್’ ಮಾವನ್ನೂ ಈಗ ಬೆಳೆಯಲು ಆರಂಭಿಸಿದ್ದಾರೆ.
ಕೊಪ್ಪಳ ತಾಲ್ಲೂಕಿನ ಇರಕಲ್ಲಗಡ ಹೋಬಳಿ ಸಮೀಪದ ಯಲಮಗೇರಿ ಎಂಬ ಗ್ರಾಮದಲ್ಲಿ ಯುವರೈತ ಪಾಲಾಕ್ಷಗೌಡ ಮೇಟಿ ಆರೇಳು ವರ್ಷಗಳಿಂದ ನಿರಂತರವಾಗಿ ಪಪ್ಪಾಯ ಬೆಳೆದು ಪ್ರತಿ ಋತುವಿಗೂ ₹20 ಲಕ್ಷ ವಹಿವಾಟು ನಡೆಸುತ್ತಿದ್ದಾರೆ. ನಾಲ್ಕು ವರ್ಷಗಳ ಹಿಂದೆ ನಾಟಿ ಮಾಡಿದ್ದ ಕೇಸರ್ ಮಾವು ಮೊದಲ ವರ್ಷ ಹೇರಳವಾಗಿ ಹೂ ಬಿಟ್ಟಿವೆ. ಮೊದಲ ಫಸಲು ಇದೇ ವರ್ಷದ ಏಪ್ರಿಲ್ ಅಂತ್ಯದಲ್ಲಿ ಬರಲಿದ್ದು ಈಗಾಗಲೇ ಎಜೆಂಟರು ಬಂದು ತೋಟ ಗುತ್ತಿಗೆ ಪಡೆದಿದ್ದಾರೆ. ಹಣ್ಣುಗಳ ಕಣ್ಗಾವಲಿಗೆ ಹೊಲದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದಾರೆ.
ಇವು ಕೆಲವು ಉದಾಹರಣೆಗಳಷ್ಟೇ. ಸಣ್ಣ ಮತ್ತು ಮಧ್ಯಮ ವರ್ಗದ ರೈತರು ಕೂಡ ಈಗ ಕೊಪ್ಪಳ ಜಿಲ್ಲೆಯಲ್ಲಿ ತೋಟಗಾರಿಕಾ ಬೆಳೆಗಳ ಬೆನ್ನು ಹತ್ತಿದ್ದಾರೆ. ಕಡಿಮೆ ವರ್ಷಗಳಲ್ಲಿ ಗುಣಮಟ್ಟದ ಫಸಲು ಲಭಿಸುವುದು, ನಿರ್ವಹಣೆ ಸುಲಭ, ತೋಟಗಾರಿಕಾ ಇಲಾಖೆಯ ಯೋಜನೆಗಳನ್ನು ರೈತರಿಗೆ ತಲುಪಿಸುವಲ್ಲಿ ಅಧಿಕಾರಿಗಳ ನಿರಂತರ ಪ್ರಯತ್ನ, ಜಿಲ್ಲೆಯ ಬಿರುಬಿಸಿಲು, ಬಹುತೇಕ ಕೆಂಪು ಮಣ್ಣಿನ ಭೂಮಿ ಈ ಎಲ್ಲ ಅಂಶಗಳು ರೈತರು ತೋಟಗಾರಿಕಾ ಕ್ಷೇತ್ರದತ್ತ ಒಲವು ತೋರಲು ಕಾರಣವಾಗಿವೆ. ಮುಖ್ಯವಾಗಿ ಮೂಲತಃ ಕೃಷಿಕರೇ ಆಗಿರುವ ಕೊಪ್ಪಳ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಸಿ. ಉಕ್ಕುಂದ ಹಾಗೂ ಅವರ ತಂಡದವರು ಮಾರುಕಟ್ಟೆ ಕಲ್ಪಿಸಿಕೊಡುತ್ತಿರುವುದು ರೈತರಿಗೆ ವರದಾನವಾಗಿದೆ.
‘ಬೆಳೆಗಳಿಗೆ ಇಲಾಖೆಯಿಂದಲೇ ಮಾರುಕಟ್ಟೆ ಸೌಲಭ್ಯ ಒದಗಿಸಲಾಗುತ್ತಿದೆ. ವ್ಯಾಪಾರಿಗಳು ಜೊತೆ ಒಪ್ಪಂದ, ವ್ಯವಹಾರ ಸಂಬಂಧಿತ ಸಂಪನ್ಮೂಲ ವ್ಯಕ್ತಿಗಳಿಂದ ರೈತರಿಗೆ ತರಬೇತಿ, ಋತುವಾರು ನಡೆಯುವ ಹಣ್ಣುಗಳು ಮೇಳ, ಸಸ್ಯ ಸಂತೆ ಕಾರ್ಯಕ್ರಮಗಳಿಂದ ರೈತರು, ವ್ಯಾಪಾರಿಗಳು ಮತ್ತು ರಫ್ತುದಾರರ ನಡುವೆ ನೇರ ಸಂಹವನ ಸಾಧ್ಯವಾಗುತ್ತಿದೆ. ಸಸಿ ನೀಡಿದವರೇ ಫಸಲು ಬಂದ ಬಳಿಕ ರೈತರಿಂದ ಪಡೆಯುವ ‘ಮರಳಿ ಖರೀದಿ’ ವ್ಯವಸ್ಥೆ ಮಾಡಲಾಗಿದೆ. ಈ ಎಲ್ಲ ಪ್ರಯತ್ನಗಳಿಂದ ವಾರ್ಷಿಕವಾಗಿ ₹450 ಕೋಟಿಯಿಂದ₹500 ಕೋಟಿ ತೋಟಗಾರಿಕಾ ಬೆಳೆಗಳ ವಹಿವಾಟು ನಡೆಸಲಾಗುತ್ತಿದೆ’ ಎನ್ನುತ್ತಾರೆ ಕೃಷ್ಣ ಸಿ. ಉಕ್ಕುಂದ.
ಐದು ವರ್ಷಗಳ ಹಿಂದೆ ಜಿಲ್ಲೆಯಲ್ಲಿ 22 ಸಾವಿರ ಹೆಕ್ಟೇರ್ ಮಾತ್ರ ತೋಟಗಾರಿಕಾ ಪ್ರದೇಶವಿತ್ತು. ಈಗ 55 ಸಾವಿರ ಹೆಕ್ಟೇರ್‌ಗೆ ಏರಿಕೆಯಾಗಿದೆ. ಇಲಾಖೆಯು ತನ್ನ ಕಚೇರಿ ಆವರಣದಲ್ಲಿ ಕಿಸಾನ್ ಕೇರ್ ಸೆಂಟರ್ ಆರಂಭಿಸಿದ್ದು, ಇದು ರಾಜ್ಯದ ಮಾದರಿ ಕೇಂದ್ರವಾಗಿದೆ. ಈ ಕೇಂದ್ರದಲ್ಲಿ ಕೃಷಿ ಪರಿಕರಕಗಳ ಮಾರಾಟ, ರೈತರಿಗೆ ಸಲಹೆ ನೀಡಲಾಗುತ್ತದೆ. ರೈತರೇ ನೇರವಾಗಿ ಇಲಾಖೆ ಯೋಜನೆಗಳ ಮಾಹಿತಿ ಪಡೆದುಕೊಳ್ಳಬಹುದು. ಬ್ಯಾಂಕ್ ಸೌಲಭ್ಯಗಳು, ರೈತ ಸಂಸ್ಥೆಗಳ ಮಾಹಿತಿ, ರೈತರೊಂದಿಗೆ ಆಪ್ತ ಸಮಾಲೋಚನೆ, ಮರು ಖರೀದಿ ಒಪ್ಪಂದ, ಬೆಳೆಗಳ ಮೌಲ್ಯವರ್ಧನೆಗೆ ಕ್ರಮ, ಸ್ಥಳೀಯ ಮಾರುಕಟ್ಟೆ ಹಾಗೂ ರಫ್ತು ಮಾರುಕಟ್ಟೆ, ತಂತ್ರಜ್ಞಾನ ಆಧರಿತ ತೋಟಗಾರಿಕೆ ಮತ್ತು ಸಾವಯವ ದೃಢೀಕರಣ ಪತ್ರಗಳ ಮಾಹಿತಿ ಇವೆಲ್ಲವೂಗಳ ಮಾಹಿತಿ ಕೇಂದ್ರದಲ್ಲಿ ಸಿಗುತ್ತದೆ. ಈ ಅಂಶಗಳು ಕೂಡ ಜಿಲ್ಲೆಯಲ್ಲಿ ತೋಟಗಾರಿಕಾ ಕ್ಷೇತ್ರ ಹೆಚ್ಚಿಸಲು ಕಾರಣವಾಗಿವೆ ಎನ್ನುತ್ತಾರೆ ಅಧಿಕಾರಿಗಳು.
ರೈತರು ಹಣ್ಣುಗಳನ್ನು ಬೆಳೆದರೂ ಕೋವಿಡ್ ಸಮಯದಲ್ಲಿ ಮಾರುಕಟ್ಟೆ ಸಿಗದೇ ಪರದಾಡುವಂತಾಗಿತ್ತು. ಆಗ ತೋಟಗಾರಿಕಾ ಇಲಾಖೆ ಹಣ್ಣುಗಳನ್ನು ಬೆಳೆದ ರೈತರನ್ನು ಒಂದೇ ವೇದಿಕೆಗೆ ತಂದಿತು. ವಾಟ್ಸ್‌ಆ್ಯಪ್ ಮೂಲಕ ಯಾವ ಹಣ್ಣುಗಳಿಗೆ ಎಲ್ಲಿ ಹೆಚ್ಚು ಬೇಡಿಕೆಯಿದೆ ಎನ್ನುವ ಮಾಹಿತಿ ವಿನಿಮಯವಾಯಿತು. ಇದರಿಂದ ಎಲ್ಲ ರೈತರಿಗೂ ಅನುಕೂಲವಾಯಿತು. ಕೋವಿಡ್ ಸಂಕಷ್ಟದ ಕಾಲದಲ್ಲಿ ಹೀಗೆ ಆರಂಭವಾದ ‘ಮಾರುಕಟ್ಟೆ ಗ್ರೂಪ್’ ವರದಾನವಾಗಿದೆ.
ಜಿಲ್ಲೆಯಲ್ಲಿ ಒಟ್ಟು 4.10 ಲಕ್ಷ ಹೆಕ್ಟೇರ್ ಕೃಷಿ ಭೂಮಿಯಿದೆ. ತುಂಗಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಗಂಗಾವತಿ, ಕನಕಗಿರಿ, ಕಾರಟಗಿ ಭಾಗದಲ್ಲಿ ಹೆಚ್ಚು ಭತ್ತ ಬೆಳೆಯುತ್ತಿದ್ದಾರೆ. ಒಟ್ಟು 65 ಸಾವಿರ ಹೆಕ್ಟೇರ್ ಭತ್ತದ ಕೃಷಿಯಿದೆ. ಹೀಗಾಗಿ ಗಂಗಾವತಿಯು ರಾಜ್ಯದ ಭತ್ತದ ಕಣಜವೆಂದು ಖ್ಯಾತಿ ಪಡೆದಿದೆ. ನಿರಂತರವಾಗಿ ಭತ್ತ ಬೆಳೆಯುತ್ತಿರುವ ಪರಿಣಾಮ ಮಣ್ಣಿನ ಫಲವತ್ತತೆ ನಾಶವಾಗಿ ಸವಕಳಿ, ವಿಪರೀತ ರಾಸಾಯನಿಕ ಗೊಬ್ಬರ ಬಳಕೆ, ಅತಿಯಾಗಿ ನೀರು ಹೊಲದಲ್ಲಿ ನಿಲ್ಲಿಸುತ್ತಿರುವುದರಿಂದ ಭತ್ತ ಬೆಳೆಯುವ ರೈತನ ಬದುಕು ಸಂಕಷ್ಟಕ್ಕೆ ಸಿಲುಕಿದೆ.
ಭತ್ತದ ಕೃಷಿ ಆರಂಭಿಸಿದ ಹೊಸತರಲ್ಲಿ ಪ್ರತಿ ಎಕರೆಗೆ 35ರಿಂದ 40 ಕ್ವಿಂಟಲ್ ಭತ್ತ ಬೆಳೆಯುತ್ತಿದ್ದ ರೈತನಿಗೆ ಈಗ 15ರಿಂದ 20 ಕ್ವಿಂಟಲ್ ಬಂದರೆ ಅದೇ ಹೆಚ್ಚು ಎನ್ನುವಂತಾಗಿದೆ. ಭತ್ತದಿಂದ ಆಗುತ್ತಿರುವ ನಷ್ಟ ಮತ್ತು ತೋಟಗಾರಿಕೆಯಿಂದ ಸಿಗುತ್ತಿರುವ ಸುಲಭ ಮಾರುಕಟ್ಟೆ ಸೌಲಭ್ಯದಿಂದಾಗಿ ಜಿಲ್ಲೆಯಲ್ಲಿ ತೋಟಗಾರಿಕಾ ಕ್ಷೇತ್ರದತ್ತ ಒಲವು ಹೆಚ್ಚಾಗುತ್ತಿದೆ. ಸತ್ವ ಕಳೆದುಕೊಂಡ ಭೂಮಿಯಲ್ಲಿ ತಾಳೆ ಹಾಗೂ ಬಾಳೆ ಬೆಳೆದು ಕಳೆದು ಹೋದ ಭೂಮಿಯ ಸತ್ವ ಮರಳಿ ಗಳಿಸುವ ಪ್ರಯತ್ನ ನಡೆಯುತ್ತಿದೆ.
ಜಿಲ್ಲೆಯಲ್ಲಿ ರೈತರು ತೋಟಗಾರಿಕಾ ಬೆಳೆಗಳಲ್ಲಿ ಮಾವಿನ ವಿವಿಧ ತಳಿಗಳು, ದಾಳಿಂಬೆ, ಪಪ್ಪಾಯ, ಪೇರಲ, ದ್ರಾಕ್ಷಿ, ಸೀತಾಫಲ, ಬಾಳೆ, ಅಂಜೂರು, ಕಲ್ಲಂಗಡಿ, ಕರಬೂಜ ಬೆಳೆಯುತ್ತಿದ್ದಾರೆ. ಮಾವಿನ ಹಣ್ಣುಗಳಲ್ಲಿ ಕೇಸರ್, ಬೇನಿಷಾ, ಆಪೋಸ್ ಬೆಳೆಯುತ್ತಿದ್ದರೂ, ಕೇಸರ್ ಹಣ್ಣಿಗೆ ಬೇಡಿಕೆಯಿದೆ. ಪ್ರಕಾಶಮಾನವಾದ ಕಿತ್ತಳೆ ಬಣ್ಣದ ತಿರುಳಿಗೆ ಕೇಸರ್ ಎಂದೂ ಕರೆಯಲ್ಪಡುವ ‘ಗಿರ್ ಕೇಸರ್’ ಮಾವು ಗುಜರಾತ್‌ನಲ್ಲಿ ಖ್ಯಾತಿಯಾಗಿದ್ದು ಪ್ರತಿ ವರ್ಷ ಜೂನ್ ವೇಳೆಗೆ ಮಾರುಕಟ್ಟೆಗೆ ಬರುತ್ತದೆ. ಅದೇ ಬಣ್ಣ ಹಾಗೂ ರುಚಿ ಹೊಂದಿರುವ ಕೊಪ್ಪಳ ಕೇಸರ್ ಏಪ್ರಿಲ್ ಅಂತ್ಯದಲ್ಲಿ ಮಾರುಕಟ್ಟೆಗೆ ಬರುವುದರಿಂದ ಬೇಡಿಕೆಯೂ ಸಿಗುತ್ತದೆ.
ಜಿಲ್ಲೆಯಲ್ಲಿ ಬೆಳೆಯುವ ಎಲ್ಲಾ ಹಣ್ಣುಗಳ ಹಿಂದೆ ತೋಟಗಾರಿಕಾ ಇಲಾಖೆ ‘ಕೊಪ್ಪಳ’ ಎನ್ನುವ ಬ್ರ್ಯಾಂಡ್ ಸೃಷ್ಟಿಸಿದ್ದು, ‘ಕೊಪ್ಪಳ ಕೇಸರ್’ ಒಂದು ಋತುವಿನಲ್ಲಿ 25 ಸಾವಿರ ಟನ್, ಕೊಪ್ಪಳ ದಾಳಿಂಬೆ 35 ಸಾವಿರ ಟನ್ ಮತ್ತು ಪಪ್ಪಾಯ ಐದು ಸಾವಿರ ಮೆಟ್ರಿಕ್ ಟನ್ ಮುಂಬೈ, ದೆಹಲಿ, ಗುಜರಾತ್, ಉತ್ತರ ಪ್ರದೇಶದ ಜೊತೆಗೆ ದುಬೈ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಕತಾರ್ ರಾಷ್ಟ್ರಗಳಿಗೂ ಕಳುಹಿಸಲಾಗುತ್ತಿದೆ. ಸ್ಥಳೀಯ ದಲ್ಲಾಳಿಗಳು ನೇರವಾಗಿ ರೈತರ ಹೊಲಕ್ಕೆ ಬಂದು ಖರೀದಿಸಿ ಅದನ್ನು ಮುಂಬೈ, ಕೋಲ್ಕತ್ತ ಹಾಗೂ ದೆಹಲಿ ಮಾರುಕಟ್ಟೆ ಮೂಲಕ ವಿದೇಶಗಳಿಗೆ ರಫ್ತು ಮಾಡುತ್ತಿದ್ದಾರೆ. ದಾಳಿಂಬೆಯು ಶ್ರೀಲಂಕಾ ಮತ್ತು ದುಬೈಗೆ ರಫ್ತಾಗುತ್ತಿದೆ. ಗುಜರಾತ್ ‘ಗಿರ್ ಕೇಸರ್’ ಮಾದರಿಯಲ್ಲಿಯೇ ‘ಕೊಪ್ಪಳ ಕೇಸರ್’ ಮಾವಿನ ಹಣ್ಣಿನ ತಳಿಗೆ ಭೌಗೋಳಿಕ ಸೂಚಕ ಸ್ಥಾನಮಾನ (ಜಿಐ ಟ್ಯಾಗ್) ಪಡೆಯುವ ಪ್ರಯತ್ನಗಳು ನಡೆಯುತ್ತಿವೆ.
ಎರಡು ವರ್ಷಗಳ ಹಿಂದೆ ಕೊಪ್ಪಳದಲ್ಲಿ ನಡೆದಿದ್ದ ರಫ್ತುದಾರರ, ಖರೀದಿದಾರರ ಹಾಗೂ ಮಾರಾಟಗಾರರ ಸಮಾವೇಶದಿಂದ ನೇರವಾಗಿ ರೈತರು ಹಾಗೂ ರಫ್ತುದಾರರ ನಡುವೆ ವ್ಯವಹಾರ ಏರ್ಪಟ್ಟಿದೆ. ಹಣ್ಣುಗಳು ಕಾಯಿ ಕಟ್ಟುವಾಗಲೇ ದಲ್ಲಾಳಿಗಳು ತೋಟಕ್ಕೆ ಬಂದು ಗುತ್ತಿಗೆ ಪಡೆಯುತ್ತಿದ್ದಾರೆ. ಇದರಲ್ಲಿ ಕೆಲವರು ಸ್ಥಳೀಯ ಮಾರುಕಟ್ಟೆಗೆ ಮಾರಾಟ ಮಾಡಿದರೆ, ಇನ್ನೂ ಕೆಲವರು ರಾಜ್ಯ, ಹೊರರಾಜ್ಯ ಮತ್ತು ವಿದೇಶಗಳಿಗೆ ಕಳುಹಿಸುತ್ತಿದ್ದಾರೆ.
ವಿದೇಶಗಳಲ್ಲಿ ಬೆಳೆಯುವ ದುಬಾರಿ ಬೆಲೆಯ ಸಸಿಗಳನ್ನು ಪ್ರತಿವರ್ಷವೂ ಸಸ್ಯಸಂತೆಯಲ್ಲಿ ತರಿಸಲಾಗುತ್ತದೆ. ಅವುಗಳ ಆಕರ್ಷಣೆಗೆ ಒಳಗಾಗಿ ರೈತರು ಕೃಷಿಯಲ್ಲಿ ಹೊಸ ಪ್ರಯೋಗ ಮಾಡಿ ವಿದೇಶಿ ತಳಿಗಳನ್ನೂ ಬೆಳೆಯುತ್ತಿದ್ದಾರೆ.
ದುಬಾರಿ ಬೆಲೆಯ ಮಾವಿನ ಹಣ್ಣುಗಳಲ್ಲಿ ಒಂದಾದ ಜಪಾನ್ ಮೂಲದ ‘ಮೀಯಾ ಜಾಕಿ’ ತಳಿ 2023ರ ಮಾವು ಮೇಳದಲ್ಲಿ ಮೊದಲ ಬಾರಿಗೆ ಪ್ರದರ್ಶನಕ್ಕೆ ಇರಿಸಲಾಗಿತ್ತು. ಆರಂಭದಲ್ಲಿ ಈ ತಳಿಯ ಒಂದು ಸಸಿಗೆ ₹5 ಸಾವಿರವಿತ್ತು. ಈಗ ಜಿಲ್ಲೆಯಲ್ಲಿಯೇ ರೈತರು ಹತ್ತು ಹೆಕ್ಟೇರ್ ಪ್ರದೇಶದಲ್ಲಿ ಮೀಯಾ ಜಾಕಿ ಬೆಳೆದಿದ್ದು, ಸಸಿಗಳ ದರ ₹1,000ಕ್ಕೆ ಇಳಿದಿದೆ.
ಜಿಲ್ಲೆಯ ತೋಟಗಾರಿಕಾ ಬೆಳೆಗಾರರಿಗೆ ಸಿಗುತ್ತಿರುವ ಉತ್ತೇಜನದಿಂದಾಗಿ ಸಣ್ಣ ರೈತರೂ ತಮ್ಮ ಕಿರಿದಾದ ಜಾಗದಲ್ಲಿ ತರಕಾರಿ, ಹೂ, ಹಣ್ಣುಗಳನ್ನು ಬೆಳೆಯುತ್ತಿದ್ದಾರೆ. ತೋಟಗಾರಿಕಾ ಹಬ್ ಆಗಿ ಬೆಳೆಯುತ್ತಿರುವ ಕೊಪ್ಪಳ ಜಿಲ್ಲೆಯಲ್ಲಿ ತೋಟಗಾರಿಕಾ ಹೈ ಟೆಕ್ನಾಲಜಿ ಪಾರ್ಕ್ ನಿರ್ಮಾಣ ಮಾಡುವುದಾಗಿ 2020–21ರಲ್ಲಿ ಬಜೆಟ್‌ನಲ್ಲಿ ಸರ್ಕಾರ ಘೋಷಿಸಿತ್ತು. ಇದಕ್ಕೆ ಡಿಪಿಆರ್ ಸಿದ್ಧವಾಗಿದ್ದು, ಅನುಷ್ಠಾನವಾದರೆ ತೋಟಗಾರಿಕಾ ಪ್ರದೇಶ ಮತ್ತಷ್ಟು ವಿಸ್ತಾರವಾಗುತ್ತದೆ. ಉತ್ತರ ಕರ್ನಾಟಕದ ಜಿಲ್ಲೆಗಳ ತೋಟಗಾರಿಕಾ ಬೆಳೆಗಳಿಗೆ ಕೊಪ್ಪಳ ಜಿಲ್ಲೆಯಲ್ಲಿ ಸ್ಥಳೀಯವಾಗಿ ಮತ್ತಷ್ಟು ಮಾರುಕಟ್ಟೆ ಲಭಿಸುತ್ತದೆ. ಸಂಸ್ಕರಣೆ, ಮೌಲ್ಯವರ್ಧನೆಗಳ ಅವಕಾಶಗಳು ಕೂಡ ಹೆಚ್ಚಾಗುತ್ತವೆ.
ಕೊಪ್ಪಳ ಜಿಲ್ಲೆಯಲ್ಲಿ ಐದು ವರ್ಷಗಳಲ್ಲಿ 33 ಸಾವಿರ ಹೆಕ್ಟೇರ್ ತೋಟಗಾರಿಕಾ ಪ್ರದೇಶ ಹೆಚ್ಚಾಗಿದೆ. ಮುಂದಿನ ಐದು ವರ್ಷಗಳಲ್ಲಿ ಪ್ರತಿವರ್ಷವೂ 10 ಸಾವಿರ ಹೆಕ್ಟೇರ್ ಹೆಚ್ಚಿಸುವ ಗುರಿ ಹೊಂದಲಾಗಿದೆ.ಕೃಷ್ಣ ಸಿ. ಉಕ್ಕುಂದ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೊಪ್ಪಳ
ಪಪ್ಪಾಯ ಹಾಗೂ ಮಾವು ಬೆಳೆಯಲು ಆರಂಭಿಸಿದ ಬಳಿಕ ನೌಕರನಂತೆ ಪ್ರತಿ ತಿಂಗಳೂ ಹಣ ಗಳಿಸಲು ಸಾಧ್ಯವಾಗುತ್ತಿದೆ. ತೋಟಗಾರಿಕೆಯಿಂದ ರೈತನೂ ಉದ್ಯಮಿಯಾಗುತ್ತಿದ್ದಾನೆ.ಪಾಲಾಕ್ಷಗೌಡ ಮೇಟಿ ರೈತ
ಕೊಪ್ಪಳ ಜಿಲ್ಲೆಯಲ್ಲಿರುವ ಬಹುತೇಕ ಕೆಂಪು ಮಣ್ಣು ಬಿಸಿಲಿನ ವಾತಾವರಣ ತೋಟಗಾರಿಕಾ ಬೆಳೆಗಳಿಗೆ ಹೇಳಿಮಾಡಿಸಿದಂತಿದೆ. ಇಂಥ ವಾತಾವರಣದಲ್ಲಿ ಮಾವಿನ ಹಣ್ಣುಗಳ ರುಚಿಯೂ ಹೆಚ್ಚುಅಂಬರೀಶ್ ತಟ್ಟಿ ರೈತ
ದಾಳಿಂಬೆ ಬೆಳೆದು ಕೋಟ್ಯಂತರ ರೂಪಾಯಿ ಲಾಭ ಗಳಿಸಿದ್ದೇನೆ. ಖರ್ಚು ಕೂಡ ಸಾಕಷ್ಟಿದೆ. ವೈಜ್ಞಾನಿಕವಾಗಿ ಕೃಷಿ ಮಾಡಿದರೆ ಹೂಡಿಕೆ ಮಾಡುವ ಖರ್ಚಿಗೆ ನಷ್ಟವಾಗುವುದಿಲ್ಲ.ದ್ಯಾಮಣ್ಣ ಗುಂಡಗಿ ದಾಳಿಂಬೆ ಬೆಳೆದ ಕುಷ್ಟಗಿ ರೈತ
ಕುಷ್ಟಗಿ ತಾಲ್ಲೂಕಿನ ನಿಡಶೇಷಿ ಗ್ರಾಮದ ಬಳಿ ತೋಟಗಾರಿಕಾ ಇಲಾಖೆಗೆ ಸೇರಿದ 70 ಎಕರೆ ಫಲವತ್ತತೆಯಿಲ್ಲದೆ ಜವಳಾಗಿತ್ತು. ಇಂಥ ಭೂಮಿಯಲ್ಲಿ ಯಾವ ಕೃಷಿ ಮಾಡಲು ಸಾಧ್ಯವಿಲ್ಲ ಎಂದು ಮಣ್ಣು ಪರೀಕ್ಷೆ ಪ್ರಯೋಗಾಲಯ ವರದಿ ನೀಡಿತ್ತು. ಆದರೂ ಕೊಪ್ಪಳ ಜಿಲ್ಲೆಯ ತೋಟಗಾರಿಕಾ ಇಲಾಖೆ ಅಧಿಕಾರಿಗಳು ಸಮಗ್ರ ಕೃಷಿ ವ್ಯವಸ್ಥೆ ರೂಪಿಸಿ ಇಸ್ರೇಲಿ ಮಾದರಿಯಲ್ಲಿ ಎರೆಹುಳು, ಎರೆಜಲ ಹಾಕಿಸಿ ಸಿಮೆಂಟ್‌ನ ರಿಂಗ್‌ಗಳಲ್ಲಿ ಮಣ್ಣು ತುಂಬಿಸಿ ಕೃಷಿ ಮಾಡಿಸಿದರು. ಅಲ್ಲಿ ಪೇರಲ, ದಾಳಿಂಬೆ, ಲಿಂಬೆ ಯಥೇಚ್ಛವಾಗಿ ಬೆಳೆದಿದ್ದು, ಇಸ್ರೇಲಿ ಮಾದರಿ ಕೃಷಿಗೆ ಈ ಕ್ಷೇತ್ರ ಹೆಸರಾಗಿದೆ. ಪಾಲಿಹೌಸ್ ಮತ್ತು ಕಡಿಮೆ ಖರ್ಚಿನಲ್ಲಿ ಪಾಲಿ ಟೆನಲ್ ನೆರಳಿನಲ್ಲಿಯೂ ವೀಳ್ಯೆದೆಲೆ ಬೆಳೆಯಲಾಗುತ್ತಿದೆ.
ವಿದೇಶಗಳಲ್ಲಿ ಬೆಳೆಯುವ ದುಬಾರಿ ಬೆಲೆಯ ಸಸಿಗಳನ್ನು ಪ್ರತಿವರ್ಷವೂ ಸಸ್ಯಸಂತೆಯಲ್ಲಿ ತರಿಸಲಾಗುತ್ತದೆ. ಅವುಗಳ ಆಕರ್ಷಣೆಗೆ ಒಳಗಾಗಿ ರೈತರು ಕೃಷಿಯಲ್ಲಿ ಹೊಸ ಪ್ರಯೋಗ ಮಾಡಿ ವಿದೇಶಿ ತಳಿಗಳನ್ನೂ ಬೆಳೆಯುತ್ತಿದ್ದಾರೆ.
ದುಬಾರಿ ಬೆಲೆಯ ಮಾವಿನ ಹಣ್ಣುಗಳಲ್ಲಿ ಒಂದಾದ ಜಪಾನ್ ಮೂಲದ ‘ಮೀಯಾ ಜಾಕಿ’ ತಳಿ 2023ರ ಮಾವು ಮೇಳದಲ್ಲಿ ಮೊದಲ ಬಾರಿಗೆ ಪ್ರದರ್ಶನಕ್ಕೆ ಇರಿಸಲಾಗಿತ್ತು. ಆರಂಭದಲ್ಲಿ ಈ ತಳಿಯ ಒಂದು ಸಸಿಗೆ ₹5 ಸಾವಿರವಿತ್ತು. ಈಗ ಜಿಲ್ಲೆಯಲ್ಲಿಯೇ ರೈತರು ಹತ್ತು ಹೆಕ್ಟೇರ್ ಪ್ರದೇಶದಲ್ಲಿ ಮೀಯಾ ಜಾಕಿ ಬೆಳೆದಿದ್ದು, ಸಸಿಗಳ ದರ ₹1,000ಕ್ಕೆ ಇಳಿದಿದೆ.
ಜಿಲ್ಲೆಯ ತೋಟಗಾರಿಕಾ ಬೆಳೆಗಾರರಿಗೆ ಸಿಗುತ್ತಿರುವ ಉತ್ತೇಜನದಿಂದಾಗಿ ಸಣ್ಣ ರೈತರೂ ತಮ್ಮ ಕಿರಿದಾದ ಜಾಗದಲ್ಲಿ ತರಕಾರಿ, ಹೂ, ಹಣ್ಣುಗಳನ್ನು ಬೆಳೆಯುತ್ತಿದ್ದಾರೆ. ತೋಟಗಾರಿಕಾ ಹಬ್ ಆಗಿ ಬೆಳೆಯುತ್ತಿರುವ ಕೊಪ್ಪಳ ಜಿಲ್ಲೆಯಲ್ಲಿ ತೋಟಗಾರಿಕಾ ಹೈ ಟೆಕ್ನಾಲಜಿ ಪಾರ್ಕ್ ನಿರ್ಮಾಣ ಮಾಡುವುದಾಗಿ 2020–21ರಲ್ಲಿ ಬಜೆಟ್‌ನಲ್ಲಿ ಸರ್ಕಾರ ಘೋಷಿಸಿತ್ತು. ಇದಕ್ಕೆ ಡಿಪಿಆರ್ ಸಿದ್ಧವಾಗಿದ್ದು, ಅನುಷ್ಠಾನವಾದರೆ ತೋಟಗಾರಿಕಾ ಪ್ರದೇಶ ಮತ್ತಷ್ಟು ವಿಸ್ತಾರವಾಗುತ್ತದೆ. ಉತ್ತರ ಕರ್ನಾಟಕದ ಜಿಲ್ಲೆಗಳ ತೋಟಗಾರಿಕಾ ಬೆಳೆಗಳಿಗೆ ಕೊಪ್ಪಳ ಜಿಲ್ಲೆಯಲ್ಲಿ ಸ್ಥಳೀಯವಾಗಿ ಮತ್ತಷ್ಟು ಮಾರುಕಟ್ಟೆ ಲಭಿಸುತ್ತದೆ. ಸಂಸ್ಕರಣೆ, ಮೌಲ್ಯವರ್ಧನೆಗಳ ಅವಕಾಶಗಳು ಕೂಡ ಹೆಚ್ಚಾಗುತ್ತವೆ.
ಕೊಪ್ಪಳ ಜಿಲ್ಲೆಯಲ್ಲಿ ಒಂದು ವರ್ಷ ವಿಪರೀತ ಮಳೆಯಾದರೆ, ಇನ್ನು ಕೆಲವು ಬಾರಿ ಆಗುವುದೇ ಇಲ್ಲ. ಇಂಥ ವಾತಾವರಣದಲ್ಲಿ ರೈತರಿಗೆ ತೋಟಗಾರಿಕಾ ಬೆಳೆ ‘ಬರ ಸಹಿಷ್ಣುತೆ’ಯಾಗಿದೆ. ಸಣ್ಣ ರೈತರು ಗೋಡಂಬಿ, ಹುಣಸೆ, ದಾಳಿಂಬೆ, ಮಾವು ಹೀಗೆ ಅನೇಕ ಬೆಳೆಗಳನ್ನು ಒಂದರಿಂದ ಗರಿಷ್ಠ ಮೂರು ವರ್ಷದ ತನಕ ಪೋಷಿಸಿದರೆ ಮುಂದಿನ ಎರಡ್ಮೂರು ದಶಕಗಳ ಕಾಲ ಕಡಿಮೆ ನೀರಿನಲ್ಲಿಯೂ ಈ ಬೆಳೆಗಳು ರೈತರನ್ನು ಶ್ರೀಮಂತರನ್ನಾಗಿಸುತ್ತವೆ.
ಈ ತೋಟಗಾರಿಕಾ ಹಸಿರು ಕೃಷಿ ರೈತನಿಗೆ ಲಾಭ ಕೊಟ್ಟು ಹವಾಮಾನ ಬದಲಾವಣೆ ಸಮಸ್ಯೆಗಳಿಗೂ ಪರಿಹಾರ ಒದಗಿಸುತ್ತಿದೆ. ಸುಸ್ಥಿರ ತೋಟಗಾರಿಕೆಯಿಂದ ಇಂಗಾಲದ ಹೊರಸೂಸುವಿಕೆ ಕಡಿಮೆಯಾಗಿ ಮಣ್ಣು ಮತ್ತು ಸಸ್ಯಗಳಲ್ಲಿ ಇಂಗಾಲದ ಸಂಗ್ರಹ ಹೆಚ್ಚಿಸುತ್ತಿವೆ. ಇದು ಭವಿಷ್ಯದ ತಾಪಮಾನ ಏರಿಕೆ ಪ್ರಮಾಣವನ್ನು ಕಡಿಮೆ ಮಾಡಬಹುದು ಎನ್ನುತ್ತಾರೆ ತೋಟಗಾರಿಕಾ ಇಲಾಖೆ ಅಧಿಕಾರಿಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.