ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣದ ಕೃಷಿ ಭೂಮಿಯನ್ನು ಕೈಗಾರಿಕಾ ಉದ್ದೇಶಕ್ಕೆ ಸ್ವಾಧೀನ ಪಡಿಸಿಕೊಳ್ಳುವ ಸರ್ಕಾರದ ನಿರ್ಧಾರ ವಿರೋಧಿಸಿ ಪ್ರತಿಭಟನೆ ನಡೆಸಿದ ರೈತರೊಬ್ಬರನ್ನು ಪೊಲೀಸರು ಹೊತ್ತೊಯ್ಯುತ್ತಿರುವುದು
(ಸಂಗ್ರಹ ಚಿತ್ರ)
ತುಮಕೂರು: ‘ನಮ್ಮಿಂದ ಜಮೀನು ಕಿತ್ತುಕೊಂಡ ಮೇಲೆ ಅದನ್ನು ಬಳಕೆ ಮಾಡಬೇಕಲ್ಲವೇ? ನಮಗೂ ಉಪಯೋಗವಿಲ್ಲ, ಅವರೂ ಏನೂ ಮಾಡುತ್ತಿಲ್ಲ. ಸುಮ್ಮನೆ ಇಟ್ಟುಕೊಂಡರೆ ಯಾರಿಗೆ ಏನು ಪ್ರಯೋಜನ?’...
‘ಹೊಟ್ಟೆ ತುಂಬುವಷ್ಟು ಅನ್ನವನ್ನು ತಟ್ಟೆಗೆ ಹಾಕಿಸಿಕೊಂಡು ಊಟ ಮಾಡಬೇಕು. ಹೊಟ್ಟೆ ಹಿಡಿಸದಿದ್ದರೂ, ತಟ್ಟೆಗೆ ಅನ್ನ ಬಡಿಸಿಕೊಳ್ಳುತ್ತಲೇ ಇದ್ದು, ಕೊನೆಗೆ ಉಣ್ಣಲಾಗದೆ ತಟ್ಟೆಯಲ್ಲೇ ಬಿಟ್ಟರೆ ಏನು ಮಾಡಬೇಕು?’...
‘ನಮ್ಮ ಮಕ್ಕಳು ಬೀದಿಗೆ ಬೀಳೋದು ಇಷ್ಟವಿಲ್ಲ. ಕೋಟಿ–ಕೋಟಿ ಪರಿಹಾರ ಸಿಗಬಹುದು. ಅದರಿಂದ ಏನು ಮಾಡುವುದು? ನಮಗೆ ಬದುಕೇ ಇಲ್ಲವಾಗುತ್ತದೆ. ಪಾಳು, ಬಂಜರು ಭೂಮಿ ಬಿಟ್ಟು, ಬಂಗಾರದಂತಹ ಫಲವತ್ತಾದ ಭೂಮಿ ಮೇಲೆ ಏಕೆ ಕಣ್ಣು? ಗದ್ದುಗೆ ಮೇಲೆ ಕೂತವರು ಹೊಟ್ಟೆಗೆ ಏನು ತಿನ್ನುತ್ತಾರೆ? ಕಣ್ಣು ಕಾಣುವುದಿಲ್ಲವೇ?
ಇವರಿಗೆ ಮನಸ್ಸಿಲ್ಲವೇ? ಕಲ್ಲು ಹೃದಯವೇ?’....
ಇದು ರಾಜ್ಯದ ಉದ್ದಗಲಕ್ಕೂ ಅನ್ನ ಕೊಡುವ ಭೂಮಿಯನ್ನು ಕಳೆದುಕೊಂಡ ಅನ್ನದಾತರ ಆಕ್ರೋಶದ ನುಡಿಗಳು. ಜೀವನಕ್ಕೆ ಆಧಾರವಾಗಿದ್ದ, ತಲೆತಲಾಂತರದಿಂದ ಬೇಸಾಯ ಮಾಡಿ ಜೀವನ ಸಾಗಿಸುತ್ತಿದ್ದ ಭೂಮಿಗೆ ಪರಿಹಾರದ ನೆಪದಲ್ಲಿ ಹಣಕೊಟ್ಟು ಕಿತ್ತುಕೊಳ್ಳುತ್ತಿರುವುದಕ್ಕೆ ರೈತರು ನಿಗಿನಿಗಿ ಕೆಂಡವಾಗಿದ್ದಾರೆ. ಭೂಮಿಯೊಳಗಿನ ಜ್ವಾಲಾಗ್ನಿ ಹೊರಬಂದು ಆರ್ಭಟಿಸುವಂತೆ ಕೃಷಿಕರ ಕೋಪ ಕಟ್ಟೆಯೊಡೆದಿದೆ.
ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಉದ್ಯಮಿಗಳಿಗೆ ಕೈಗಾರಿಕೆ ಆರಂಭಿಸಲು ಒಂದೆಡೆ ಸ್ಥಳಾವಕಾಶ ಕಲ್ಪಿಸುವ ಸಲುವಾಗಿ ರಾಜ್ಯದ ವಿವಿಧೆಡೆಗಳಲ್ಲಿ ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿಪಡಿಸುತ್ತಾ ಬಂದಿದೆ. ‘ಭೂ ಬ್ಯಾಂಕ್’ ಮಾದರಿಯಲ್ಲಿ ಕೆಲಸ ಮಾಡುತ್ತಿದೆ. ರೈತರಿಂದ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಅಭಿವೃದ್ಧಿಪಡಿಸಿ, ನಂತರ ಉದ್ಯಮ ಸ್ಥಾಪಿಸಲು ಮುಂದೆ ಬಂದವರಿಗೆ ಹಂಚಿಕೆ ಮಾಡುತ್ತಿದೆ. ಆದರೆ ಕೈಗಾರಿಕೆ ಉದ್ದೇಶಕ್ಕೆ ಸೀಮಿತವಾಗಿ, ಬೇಡಿಕೆಗೆ ಅನುಗುಣವಾಗಿ ಜಮೀನು ವಶಪಡಿಸಿಕೊಳ್ಳುವುದಕ್ಕೆ ರೈತರಿಂದ ವಿರೋಧ ವ್ಯಕ್ತವಾಗುತ್ತಿಲ್ಲ. ಅಗತ್ಯಕ್ಕಿಂತ ಹೆಚ್ಚು ಭೂ ಸ್ವಾಧೀನ, ಪಡೆದುಕೊಂಡ ಜಾಗವನ್ನು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡದಿರುವುದು, ಸಮರ್ಪಕವಾಗಿ ಪರಿಹಾರ ನೀಡದಿರುವುದು ಸಿಟ್ಟಿಗೆ ಕಾರಣವಾಗಿದೆ.
ಮೊದಲ ಹಂತ, ಎರಡನೇ ಹಂತ... ಹೀಗೆ ಹಲವು ಹಂತಗಳಲ್ಲಿ ಭೂ ಸ್ವಾಧೀನ ಮುಂದುವರಿಯುತ್ತಲೇ ಇರುತ್ತದೆ. ತುಮಕೂರು ಹೊರವಲಯದ ವಸಂತನರಸಾಪುರ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಎರಡೂವರೆ ದಶಕಗಳ ಹಿಂದೆಯೇ ಚಾಲನೆ ನೀಡಲಾಗಿದ್ದು, ದೇಶದಲ್ಲೇ ಅತಿ ದೊಡ್ಡ ಕೈಗಾರಿಕಾ ಪಾರ್ಕ್ ನಿರ್ಮಾಣದ ಗುರಿ ಹೊಂದಲಾಗಿದೆ. ಈಗಾಗಲೇ ಮೂರು ಹಂತದ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು (ಒಟ್ಟು 8,312 ಎಕರೆ), ನಾಲ್ಕನೇ ಹಂತದ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಐದನೇ ಹಂತದ ಭೂ ಸ್ವಾಧೀನಕ್ಕೆ ನೋಟಿಸ್ ಜಾರಿ ಮಾಡಲಾಗಿದೆ. ಒಟ್ಟು 12 ಸಾವಿರ ಎಕರೆ ಪ್ರದೇಶದಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.
ಮಂಗಳೂರು ತಾಲೂಕಿನ ಬಳ್ಕುಂಜೆಯ ಉದ್ದೇಶಿತ ಭೂಸ್ವಾಧೀನ ಪ್ರದೇಶ
ನಾಲ್ಕನೇ ಹಂತದ ಅಭಿವೃದ್ಧಿಗೆ ಕೆಐಎಡಿಬಿ ಕೈ ಹಾಕಿದ್ದರೂ ಮೊದಲ ಎರಡು ಹಂತದಲ್ಲಿ ಅಭಿವೃದ್ಧಿಪಡಿಸಿದ ಪ್ರದೇಶದಲ್ಲಿ ಕೈಗಾರಿಕೆಗಳು ನೆಲೆಯೂರಿಲ್ಲ. ಇನ್ನೂ ಅರ್ಧಕ್ಕೂ ಹೆಚ್ಚಿನ ಸಂಖ್ಯೆಯ ನಿವೇಶನಗಳು ಖಾಲಿ ಉಳಿದಿವೆ. ಜಪಾನ್ ಇಂಡಸ್ಟ್ರಿಯಲ್ ಟೌನ್‌ಶಿಪ್, ಮಷಿನ್ ಟೂಲ್ ಪಾರ್ಕ್ ಎಂದು ಪ್ರತ್ಯೇಕವಾಗಿ ವಿಂಗಡಿಸಿ ಅಭಿವೃದ್ಧಿ ಪಡಿಸಲಾಗಿದೆ. ಜಪಾನ್ ಟೌನ್‌ಶಿಪ್‌ನಲ್ಲಿ ಈವರೆಗೆ ಕೇವಲ ಒಂದು ಕೈಗಾರಿಕೆಯಷ್ಟೇ ಆರಂಭವಾಗಿದೆ. ದಶಕಗಳ ಹಿಂದೆಯೇ ತುಮಕೂರಿಗೆ ಹೊಂದಿಕೊಂಡಿರುವ ಅಂತರಸನಹಳ್ಳಿ, ಸತ್ಯಮಂಗಲ, ಹಿರೇಹಳ್ಳಿಯಲ್ಲಿ ಕೈಗಾರಿಕಾ ಪ್ರದೇಶ ನಿರ್ಮಾಣ ಮಾಡಿದ್ದು, ಈವರೆಗೆ ಅಲ್ಲೂ ಪೂರ್ಣ ಪ್ರಮಾಣದಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಿಲ್ಲ.
ವಸಂತನರಸಾಪುರ ಕೈಗಾರಿಕಾ ಪ್ರದೇಶವು ಬೆಂಗಳೂರು– ಪುಣೆ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಇದ್ದರೂ ಬೆರಳೆಣಿಕೆಯಷ್ಟು ದೊಡ್ಡ ಉದ್ಯಮಗಳು ಕಾಲಿಟ್ಟಿವೆ. ನೂರಾರು ಜನರಿಗೆ ಉದ್ಯೋಗ ನೀಡುವಂತಹ ಬೃಹತ್ ಕಾರ್ಖಾನೆಗಳು ಬಂದಿಲ್ಲ. ‘ಇತ್ತ ಜಮೀನು ಕಳೆದುಕೊಂಡಿದ್ದೇವೆ, ಅತ್ತ ಕಾರ್ಖಾನೆಗಳು ಬಂದು ಉದ್ಯೋಗವೂ ಸಿಗುತ್ತಿಲ್ಲ, ನಮ್ಮಿಂದ ವಶಪಡಿಸಿಕೊಂಡ ಭೂಮಿಯೂ ಬಳಕೆಯಾಗದೆ ಖಾಲಿ ಬಿದ್ದಿದೆ. ಬದುಕು ಬೀದಿಗೆ ಬಂದಿದೆ. ಬರಡು ಪ್ರದೇಶವನ್ನು ವಶಪಡಿಸಿಕೊಂಡರೆ ನಮಗೂ ಏನೂ ಅನಿಸುವುದಿಲ್ಲ. ತೆಂಗು, ಅಡಿಕೆ ಬೆಳೆಯುವ, ಫಲವತ್ತಾದ ಜಮೀನು ಕಿತ್ತುಕೊಂಡಾಗ ಕಣ್ಣಲ್ಲಿ ರಕ್ತ ಬರುತ್ತದೆ’ ಎನ್ನುತ್ತಾರೆ ರೈತರು.
ಇಂತಹುದೇ ಕಾರಣಗಳನ್ನು ಮುಂದಿಟ್ಟುಕೊಂಡು ಭೂ ಸ್ವಾಧೀನವನ್ನು ವಿರೋಧಿಸಿ ರಾಜ್ಯದ ಹಲವೆಡೆ ರೈತರು ಹೋರಾಟಗಳನ್ನು ನಡೆಸುತ್ತಾ ಬಂದಿದ್ದಾರೆ.
ಭೂ ಸ್ವಾಧೀನ ವಿರೋಧಿಸಿ ದೇವನಹಳ್ಳಿ ತಾಲ್ಲೂಕು ಚನ್ನರಾಯಪಟ್ಟಣದಲ್ಲಿ ನಡೆಯುತ್ತಿರುವ ರೈತರ ಧರಣಿ 500 ದಿನಗಳನ್ನು ದಾಟಿದೆ. ಫಲವತ್ತಾದ ಭೂಮಿ ಕೊಡುವುದಿಲ್ಲ ಎಂದು ಹಟಕ್ಕೆ ಬಿದ್ದವರಂತೆ ಹೋರಾಟ ಮುನ್ನಡೆಸಿದ್ದಾರೆ. 1,777 ಎಕರೆ ಭೂ ಸ್ವಾಧೀನಕ್ಕೆ 2021ರಲ್ಲಿ ಅಧಿಸೂಚನೆ ಹೊರಡಿಸಲಾಗಿದೆ. ಈಗಾಗಲೇ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಮೊದಲನೇ ಹಂತದಲ್ಲಿ ಕೆಐಎಡಿಬಿಗೆ ಭೂಮಿ ಕೊಟ್ಟು, ಸಮರ್ಪಕವಾಗಿ ಪರಿಹಾರ ಸಿಗದ ಕಹಿ ನೆನಪು ಇನ್ನೂ ಮಾಸಿಲ್ಲ. ಈಗ ಇರುವ ಜಮೀನು ಕಳೆದುಕೊಂಡರೆ ಮುಂದೇನು ಗತಿ ಎಂಬ ಆತಂಕ ಕಾಡುತ್ತಿದೆ. ಇದೇ ಕಾರಣಕ್ಕೆ ಹೋರಾಟಕ್ಕೆ ಮುಂದಡಿ ಇಟ್ಟಿದ್ದಾರೆ.
ರೈತರು ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದರೂ ಪೊಲೀಸ್ ಬಲ ಬಳಸಿಕೊಂಡು ಹೋರಾಟ ಹತ್ತಿಕ್ಕಲು ಸರ್ಕಾರ ಪ್ರಯತ್ನ ನಡೆಸುತ್ತಲೇ ಇದೆ. ಧರಣಿ ಸ್ಥಳದಲ್ಲಿ ಮಲಗಿದ್ದವರ ಮೇಲೆ ರಾತ್ರೋರಾತ್ರಿ ಪೊಲೀಸರು ನುಗ್ಗಿ ಮನಸ್ಸಿಗೆ ಬಂದಂತೆ ಥಳಿಸಿದ್ದಾರೆ. ಬೂಟು ಕಾಲಿನಿಂದ ಒದ್ದು, ಬಂದೂಕಿನ ಹಿಂಬದಿಯಿಂದ ತಿವಿದು, ಹಿಂಸಿಸಿ ಕ್ರೂರವಾಗಿ ನಡೆದುಕೊಂಡಿದ್ದಾರೆ. ನಡುರಾತ್ರಿ ನಡೆದ ಹಠಾತ್ ದಾಳಿಗೆ ರೈತರು ನಲುಗಿ ಹೋಗಿದ್ದಾರೆ. ಹಲವರ ಮೇಲೆ ಮೊಕದ್ದಮೆ ದಾಖಲಿಸಿ ಕೋರ್ಟ್‌ಗೆ ಅಲೆಯುವಂತೆ ಮಾಡಿದ್ದಾರೆ. ಹೋರಾಟ ನಿಲ್ಲಿಸುವಂತೆ ಇನ್ನಿಲ್ಲದ ಕಿರುಕುಳ ನೀಡಲಾಗುತ್ತಿದೆ ಎಂದು ಪೊಲೀಸ್ ದೌರ್ಜನ್ಯದಲ್ಲಿ ಕಣ್ಣಿಗೆ ಗಾಯವಾಗಿದ್ದ ಪೋಲನಹಳ್ಳಿ ಯುವ ರೈತ ಪ್ರಮೋದ್ ಹೇಳುತ್ತಾರೆ.
ಪೂರ್ವಿಕರ ಆಸ್ತಿ ಜೋಪಾನ ಮಾಡುತ್ತಿರುವ ವಯೋವೃದ್ಧ ನಲ್ಲಪನಹಳ್ಳಿ ನಂಜಣ್ಣ, ಈಗಷ್ಟೇ ಭೂಮಿ ದಕ್ಕಿಸಿಕೊಂಡಿರುವ ಪರಿಶಿಷ್ಟರ ಹೋರಾಟದ ಕತೆ ಬಿಚ್ಚಿಡುವ ಚನ್ನರಾಯಪಟ್ಟಣದ ಯುವ ರೈತ ಮೋಹನ್, ಹೋರಾಟ ನಡೆಸಲು ರಟ್ಟೆ ಬಲವಿದೆ ಎನ್ನುವ ರೈತ ಮಹಿಳೆ ಮಟಬಾರ್ಲು ಗ್ರಾಮದ ವೆಂಕಟಮ್ಮ ಅವರ ನುಡಿಯಲ್ಲಿ ಆಕ್ರೋಶವಿದೆ. ಭೂಮಿ ಕಳೆದುಕೊಳ್ಳುವ ಆತಂಕದ ನಡುವೆ ಅನ್ನದಾತರು ಎದೆಗುಂದಿಲ್ಲ ಎಂಬುದು ಅವರ ಮಾತುಗಳು ಧ್ವನಿಸುತ್ತವೆ. ರಾಜಕೀಯ ನೇತಾರರು, ನಟರು, ರೈತ ಸಂಘಟನೆಗಳ ಮುಖಂಡರು ಸ್ಥಳಕ್ಕೆ ಬಂದು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ ಆಳುವ ಪ್ರಭುಗಳ ಮನಸ್ಸು ಮಾತ್ರ ಮರುಗುತ್ತಿಲ್ಲ. ರೈತರ ಹೋರಾಟದ ಛಲ ತಗ್ಗಿಲ್ಲ.
ರಾಮನಗರ ಜಿಲ್ಲೆ ಬಿಡದಿ, ಹಾರೋಹಳ್ಳಿ ಕೈಗಾರಿಕಾ ಪ್ರದೇಶವು 5,170 ಎಕರೆಯಷ್ಟು ವಿಸ್ತಾರವಾಗಿದೆ. ಬಿಡದಿಯಲ್ಲಿ 417 ಕೈಗಾರಿಕಾ ನಿವೇಶನಗಳನ್ನು ಹಂಚಿದ್ದು, 204ರಲ್ಲಿ ಮಾತ್ರ ಕೈಗಾರಿಕೆಗಳು ಆರಂಭವಾಗಿವೆ. ಹಾರೋಹಳ್ಳಿಯಲ್ಲಿ ಇನ್ನೂ 715 ನಿವೇಶನಗಳು ಖಾಲಿ ಉಳಿದಿವೆ. ಉದ್ಯಮಿಗಳು ನಿವೇಶನ ಖರೀದಿಗೆ ತೋರಿಸುವ ಉತ್ಸಾಹವನ್ನು ಉದ್ಯಮ ಆರಂಭಕ್ಕೆ ತೋರುತ್ತಿಲ್ಲ ಎನ್ನುವುದು ನಿವೇಶನಗಳ ಹಂಚಿಕೆ ಮತ್ತು ಉದ್ಯಮಗಳು ಆರಂಭವಾದ ಅಂಕಿಅಂಶಗಳೇ ಸಾರಿಹೇಳುತ್ತಿವೆ.
ದೊಡ್ಡಬಳ್ಳಾಪುರ ತಾಲ್ಲೂಕಿನ ಕಸಬಾ, ಬೆಳವಂಗಲ ಹೋಬಳಿ, ನೆಲಮಂಗಲ ತಾಲ್ಲೂಕಿನ ಕೊಡಿಗೆಹಳ್ಳಿ ಸುತ್ತಮುತ್ತ ತರಕಾರಿ, ದ್ರಾಕ್ಷಿ, ಹೂವು, ಬಾಳೆ, ರೇಷ್ಮೆ, ಮಾವು ಬೆಳೆಯುತ್ತಿದ್ದ ಭೂಮಿಯನ್ನು ರೈತರು ಕಳೆದುಕೊಂಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲ್ಲೂಕಿನ ಕೊಂಡರೆಡ್ಡಿಪಲ್ಲಿ, ಹೊಸಹುಡ್ಯ ಗ್ರಾಮಗಳ ಬಳಿ ಜಮೀನು ವಶಕ್ಕೆ ಅಧಿಸೂಚನೆ ಹೊರಡಿಸಿದ್ದು, 684 ಎಕರೆ ಗುರುತಿಸಲಾಗಿದೆ.
ಕೋಲಾರ ಜಿಲ್ಲೆಯ ನರಸಾಪುರ, ವೇಮಗಲ್, ಮಾಲೂರಿನಲ್ಲಿ 3,450 ಎಕರೆ ಅಭಿವೃದ್ಧಿ ಪಡಿಸಲಾಗಿದೆ. ಇದರಲ್ಲಿ ಶೇ 50ರಷ್ಟು ಪ್ರದೇಶದಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಿಲ್ಲ. ಹೊಸದಾಗಿ 5,966 ಎಕರೆ ಭೂಸ್ವಾಧೀನ ಪ್ರಕ್ರಿಯೆ ಜಾರಿಯಲ್ಲಿದೆ. ಈಗಾಗಲೇ 1,972 ಎಕರೆ ಪ್ರದೇಶವನ್ನು 539 ಘಟಕಗಳಿಗೆ ಮಂಜೂರು ಮಾಡಲಾಗಿದೆ. ಕೆಜಿಎಫ್ ತಾಲ್ಲೂಕಿನ ಬಿಇಎಂಎಲ್ ಪ್ರದೇಶದಲ್ಲಿ 668 ಎಕರೆಯನ್ನು ಕೆಐಎಡಿಬಿಗೆ ಕೊಡಲಾಗಿದೆ. ಮುಳುಬಾಗಿಲು ತಾಲ್ಲೂಕು ದೇವರಾಯನಸಮುದ್ರದಲ್ಲಿ 700 ಎಕರೆ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಶ್ರೀನಿವಾಸಪುರ ತಾಲ್ಲೂಕಿನ ಯದರೂರು ಗ್ರಾಮದಲ್ಲಿ 1,273 ಎಕರೆ, ಆನೇಕಲ್ ತಾಲ್ಲೂಕಿನ ಹಂದೇನಹಳ್ಳಿ, ಮೇಡಹಳ್ಳಿ ಗ್ರಾಮಗಳ 700 ಎಕರೆ ಭೂ ಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದು, ಜಮೀನು ನೀಡಲು ರೈತರು ನಿರಾಕರಿಸುತ್ತಿದ್ದಾರೆ.
ಮೈಸೂರು ಹಾಗೂ ಆ ಭಾಗದ ಜಿಲ್ಲೆಗಳಲ್ಲೂ ಕೆಐಎಡಿಬಿ ಅಭಿವೃದ್ಧಿಪಡಿಸಿದ ಪ್ರದೇಶದಲ್ಲಿ ಸಾಕಷ್ಟು ಜಾಗ ಇನ್ನೂ ಖಾಲಿ ಉಳಿದಿದೆ. ಮೈಸೂರು ಜಿಲ್ಲೆಯಲ್ಲಿ 16 ಕೈಗಾರಿಕಾ ಪ್ರದೇಶಗಳಿದ್ದು, 6,516 ಎಕರೆ ಭೂಮಿ ವಶಪಡಿಸಿಕೊಳ್ಳಲಾಗಿದೆ. ಈವರೆಗೆ 2,180 ಕೈಗಾರಿಕೆಗಳಿಗೆ 4,141 ಎಕರೆ ಭೂಮಿ ಹಂಚಿಕೆ ಮಾಡಿದ್ದು, ಅದರಲ್ಲಿ 1,409 ಘಟಕಗಳಷ್ಟೇ ಆರಂಭವಾಗಿವೆ. 771 ಕೈಗಾರಿಕೆಗಳು ಉತ್ಪಾದನೆಯನ್ನೇ ಆರಂಭಿಸಿಲ್ಲ. ಕೆಲವೆಡೆ ದಶಕಗಳಿಂದ ಜಮೀನು ಖಾಲಿ ಬಿದ್ದಿದ್ದು, ಆಶಯ ಈಡೇರಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ 8 ಕೈಗಾರಿಕಾ ಪ್ರದೇಶಗಳಿದ್ದು, 1,513 ಎಕರೆ ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ 806 ಎಕರೆಯಷ್ಟೇ ಹಂಚಿಕೆಯಾಗಿದೆ. ಹಾಸನ ಜಿಲ್ಲೆಯ ಕೈಗಾರಿಕಾ ಪ್ರದೇಶದಲ್ಲಿ ಭೂಮಿ ಖರೀದಿಸಿದ ಬಹುತೇಕರು ಪಾಳು ಬಿಟ್ಟಿದ್ದಾರೆ. ಈ ಭೂಮಿ ಹಿಂಪಡೆಯುವ ಕಾರ್ಯವೂ ನಡೆದಿಲ್ಲ. ಅಧಿಕಾರಿಗಳು ನೋಟಿಸ್ ನೀಡಿದರೂ ಪ್ರಯೋಜನವಾಗಿಲ್ಲ. ಶೇ 60ರಷ್ಟು ಭೂಮಿಯಲ್ಲಿ ಇನ್ನೂ ಕೈಗಾರಿಕೆ ಪ್ರಾರಂಭಿಸಿಲ್ಲ. ಮಂಗಳೂರಿನ ಎಂಆರ್‌ಪಿಎಲ್ ನಾಲ್ಕನೇ ಹಂತದ ವಿಸ್ತರಣೆಗೆ ಕುತ್ತೆತ್ತೂರು, ಪೆರ್ಮುದೆ, ತೆಂಕ ಎಕ್ಕಾರು, ಮೂಳೂರು, ಕಂದಾವರ ಬಳಿ 990 ಎಕರೆ ಭೂ ಸ್ವಾಧೀನ ಪಡಿಸಿಕೊಳ್ಳಲಾಗಿದೆ. 703 ಎಕರೆಗೆ ಇನ್ನೂ ಪರಿಹಾರ ನೀಡಿಲ್ಲ.
ಕಲ್ಯಾಣ ಕರ್ನಾಟಕ ಭಾಗದಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಬಳ್ಳಾರಿ ಜಿಲ್ಲೆಯಲ್ಲಿ ಕೆಐಎಡಿಬಿ ವಶಕ್ಕೆ ಪಡೆದ 16,731 ಎಕರೆ ಪೈಕಿ 12,300 ಎಕರೆಗೂ ಅಧಿಕ ಜಾಗ ದಶಕ ಕಳೆದರೂ ಬಳಕೆಯೇ ಆಗಿಲ್ಲ. ಅದರಲ್ಲಿ 1,872 ಎಕರೆಗೆ ಪರಿಹಾರ ನೀಡಿಲ್ಲ. ಕುಡುತಿನಿ, ಹರಗಿನಡೋಣಿ, ಜಾನೇಕುಂಟೆ, ವೇಣಿವೀರಪುರ, ಕೊಳಗಲ್ಲು, ಯಾರಂಗಳಿಗಿ, ಸಿದ್ದಮ್ಮನಹಳ್ಳಿ ಗ್ರಾಮಗಳಲ್ಲಿ ಎನ್‌ಎಂಡಿಸಿ, ಆರ್ಸೆಲರ್ ಮಿತ್ತಲ್, ಬ್ರಹ್ಮಿಣಿ, ಉತ್ತಮ್ ಗಾಲ್ವ ಸೇರಿದಂತೆ ವಿವಿಧ ಕಂಪನಿಗಳಿಗಾಗಿ 12,500 ಎಕರೆ ಭೂ ಸ್ವಾಧೀನ ಮಾಡಲಾಗಿದೆ. ಸಂಡೂರು ಉಪಚುನಾವಣೆ ಸಮಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರಿಹಾರದ ಭರವಸೆ ನೀಡಿದ್ದರೂ ಈವರೆಗೂ ಈಡೇರಿಲ್ಲ.
ಸಾವಿರಾರು ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ಕೈಗಾರಿಕಾ ಉದ್ದೇಶಕ್ಕೆ ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿರುವ ಸರ್ಕಾರದ ನಿರ್ಧಾರ ವಿರೋಧಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣದಲ್ಲಿ 500ಕ್ಕೂ ಹೆಚ್ಚು ದಿನದಿಂದ ಪ್ರತಿಭಟನೆ ನಡೆಸುತ್ತಿರುವ ರೈತರು
ಕುಡುತಿನಿಯಲ್ಲಿ ಅಭಿವೃದ್ಧಿಪಡಿಸಿರುವ 600 ಎಕರೆಯಲ್ಲಿ ಒಂದೂ ನಿವೇಶನ ಹಂಚಿಕೆ ಮಾಡಿಲ್ಲ. ಮತ್ತೊಂದೆಡೆ ವಶಕ್ಕೆ ಪಡೆದ ಭೂಮಿಯಲ್ಲಿ ಕೈಗಾರಿಕೆಗಳು ಆರಂಭವಾಗಿಲ್ಲ. ರೈತರು ಉಳುಮೆ ಮಾಡಲೂ ಆಗಿಲ್ಲ. ಹೀಗಾಗಿ ಸಾವಿರಾರು ಎಕರೆ ಭೂಮಿ ಬರಡಾಗಿ ಬಿದ್ದಿದೆ. ಉದ್ಯೋಗ ಸೃಷ್ಟಿ ಗಗನ ಕುಸುಮವಾಗಿದೆ. ಈ ಮಧ್ಯೆ ಕೆಲ ಕಂಪನಿಗಳು ಜಮೀನು ಮಾರಾಟ ಮಾಡಿಕೊಂಡಿವೆ.
ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿ ಸಾವಿರಾರು ಎಕರೆ ಭೂಮಿ ವಶಪಡಿಸಿಕೊಳ್ಳಲಾಗಿದೆ. ನಿವೇಶನ ಪಡೆದವರು ಕೈಗಾರಿಕೆ ಆರಂಭಿಸಿಲ್ಲ. ಉದ್ದೇಶ ಈಡೇರಿಲ್ಲ. ಧಾರವಾಡ ಸುತ್ತಮುತ್ತ 4,625 ಎಕರೆ ಪೈಕಿ 1,974 ಎಕರೆ ಜಾಗವನ್ನು 847 ಘಟಕಗಳಿಗೆ ಹಂಚಿಕೆ ಮಾಡಿದೆ. ಉಳಿದ ಪ್ರದೇಶ ಖಾಲಿ ಉಳಿದಿದೆ. ಹುಬ್ಬಳ್ಳಿ ಸುತ್ತಮುತ್ತ ಅಭಿವೃದ್ಧಿಪಡಿಸಿರುವ ಪ್ರದೇಶ ಬಹುತೇಕ ಬಳಕೆಯಾಗಿದೆ.
ಪಾಳುಬಿದ್ದ 2 ಸಾವಿರ ಎಕರೆ: ಉತ್ತರ ಕನ್ನಡ ಜಿಲ್ಲೆಯಲ್ಲಿ 1980 ಮತ್ತು 1990ರಲ್ಲಿ ವಶಕ್ಕೆ ಪಡೆದ 2 ಸಾವಿರ ಎಕರೆಯಷ್ಟು ಪ್ರದೇಶ ಇಂದಿಗೂ ಬಳಕೆಯಾಗದೆ ಪಾಳು ಬಿದ್ದಿದೆ. ಕುಮಟಾ ತಾಲ್ಲೂಕಿನ ಮಾದನಗೇರಿ ಸಮೀಪ ಉಷ್ಣ ವಿದ್ಯುತ್ ಉತ್ಪಾದನೆ ಯೋಜನೆಗೆ ವಿರೋಧ ವ್ಯಕ್ತವಾಗಿದ್ದರಿಂದ ಭೂಮಿ ಬಳಕೆಯಾಗಿಲ್ಲ. ಬಳಿಕ ಬಂದರು ನಿರ್ಮಾಣಕ್ಕೆ ಪ್ರಯತ್ನಿಸಿದರೂ ಕಾರ್ಯಗತಗೊಂಡಿಲ್ಲ.
ಮೂರು ವರ್ಷ ಸಮಯ:
ಜಾಗ ಪಡೆದುಕೊಂಡ ಮೂರು ವರ್ಷಗಳಲ್ಲಿ ಕೈಗಾರಿಕೆ ಆರಂಭಿಸಬೇಕು. ಅದು ಸಾಧ್ಯವಾಗದಿದ್ದರೆ ಇನ್ನೂ ಎರಡು ವರ್ಷ ಹೆಚ್ಚುವರಿ ಸಮಯ ಪಡೆದುಕೊಳ್ಳಬಹುದು. ಐದು ವರ್ಷಗಳ ನಂತರವೂ ಕೈಗಾರಿಕೆ ಪ್ರಾರಂಭಿಸದಿದ್ದರೆ ನೋಟಿಸ್ ಕೊಟ್ಟು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಎನ್ನುತ್ತಾರೆ ಕೆಐಎಡಿಬಿ ಅಭಿವೃದ್ಧಿ ವಿಭಾಗದ ಅಧಿಕಾರಿ ಲಕ್ಷ್ಮಿಶ್.
ಆದರೆ ಈ ರೀತಿಯ ಕಾನೂನು ಕ್ರಮವನ್ನು ಕೆಐಎಡಿಬಿಯು ಜರುಗಿಸಿದ ಉದಾಹರಣೆಗಳು ಕಡಿಮೆ ಎನ್ನುವ ಆರೋಪ ಸಾರ್ವತ್ರಿಕವಾಗಿದೆ. ನಿಗದಿತ ಅವಧಿಯಲ್ಲಿ ಕೈಗಾರಿಕೆ ಆರಂಭಿಸದಿದ್ದರೆ ನಿವೇಶನಗಳನ್ನು ವಾಪಸ್ ಪಡೆಯುವ ಕ್ರಮವನ್ನು ಸಂಸ್ಥೆ ಆರಂಭಿಸಿದರೆ ರಿಯಲ್ ಎಸ್ಟೇಟ್ ಸಂಸ್ಥೆ ಎನ್ನುವ ಆರೋಪಕ್ಕೆ ಉತ್ತರ ನೀಡಿದಂತಾಗುತ್ತದೆ.
‘ರಿಯಲ್ ಎಸ್ಟೇಟ್ ದಂಧೆ’
ಕೆಐಎಡಿಬಿಯು ರೈತರ ಜಮೀನನ್ನು ಕೈಗಾರಿಕಾ ಉದ್ದೇಶಕ್ಕೆ ವಶಪಡಿಸಿಕೊಂಡು, ಅಭಿವೃದ್ಧಿಪಡಿಸಿ ರಿಯಲ್ ಎಸ್ಟೇಟ್ ದಂಧೆ ನಡೆಸುತ್ತಿದೆ. ಸಾಕಷ್ಟು ಬೇಡಿಕೆ ಇರುವ ಬೆಂಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳು ಮತ್ತು ಮೈಸೂರು ಭಾಗದಲ್ಲಿ ಉದ್ಯಮ ಆರಂಭಿಸಲು ನಿವೇಶನ ಕೋರಿ ಅರ್ಜಿ ಸಲ್ಲಿಸಿದರೆ ಭೂಮಿಯೇ ಸಿಗುವುದಿಲ್ಲ ಎಂಬ ಆರೋಪ ಸಾಮಾನ್ಯವಾಗಿದೆ.
‘ರಾಜಕಾರಣಿಗಳು, ಕೆಐಎಡಿಬಿ ಅಧಿಕಾರಿಗಳು ಬೇನಾಮಿ ಹೆಸರಿನಲ್ಲಿ ಜಾಗ ಪಡೆದುಕೊಳ್ಳುತ್ತಾರೆ. ರಾಜಕಾರಣಿಗಳ ಹಿಂಬಾಲಕರು, ಬಲಾಢ್ಯರು, ಹಣವಂತರು, ರಿಯಲ್ ಎಸ್ಟೇಟ್ ಕುಳಗಳಿಗೆ ನಿವೇಶನ ಸುಲಭವಾಗಿ ಸಿಗುತ್ತದೆ. ಹಿಂದೆ ನಿವೇಶನ ಪಡೆದುಕೊಂಡ ನಂತರ 99 ವರ್ಷಗಳ ವರೆಗೆ (ಗುತ್ತಿಗೆ– ಮಾರಾಟ) ಮಾರಾಟ ಮಾಡುವಂತಿರಲಿಲ್ಲ. ಈಗ ಇದನ್ನು 10 ವರ್ಷಗಳಿಗೆ ಇಳಿಸಿದ್ದು, ಗುತ್ತಿಗೆ ಅವಧಿ ಮುಗಿದ ತಕ್ಷಣ ಕೆಐಎಡಿಬಿಯಿಂದ ಶುದ್ಧ ಕ್ರಯಪತ್ರ ಮಾಡಿಸಿಕೊಂಡು, ನಂತರ ದುಬಾರಿ ಬೆಲೆಗೆ ಮಾರಾಟ ಮಾಡುವ ದಂಧೆ ನಡೆದಿದೆ’ ಎಂದು ಉದ್ಯಮಿಯೊಬ್ಬರು ಹೇಳುತ್ತಾರೆ.
ಜಾಗ ಪಡೆದುಕೊಂಡ ಮೇಲೆ ಕೈಗಾರಿಕೆ ಆರಂಭಿಸಲೇ ಬೇಕು ಎಂಬ ನಿಯಮ ಪಾಲಿಸುವ ನಾಟಕವೂ ನಡೆಯುತ್ತದೆ. ನಿವೇಶನದಲ್ಲಿ ಕಾಟಾಚಾರಕ್ಕೆ ಅಲ್ಪ ಬಂಡವಾಳ ತೊಡಗಿಸಿ, ಸಣ್ಣ ಉದ್ಯಮ ಆರಂಭಿಸುತ್ತಾರೆ. 10 ವರ್ಷ ನೆಪಮಾತ್ರಕ್ಕೆ ನಡೆಸುತ್ತಾರೆ. ಜಾಗದ ನೋಂದಣಿ ಪ್ರಕ್ರಿಯೆ ಮುಗಿದ ತಕ್ಷಣ ನಷ್ಟ ತೋರಿಸಿ ಘಟಕ ಮುಚ್ಚುತ್ತಾರೆ. ನಂತರ ಮಾರಾಟ ಮಾಡಿಕೊಳ್ಳುತ್ತಾರೆ ಎಂದು ತುಮಕೂರು ತಾಲ್ಲೂಕು ನೆಲಹಾಳ್ ಗ್ರಾಮದ ಸಿದ್ಧಲಿಂಗಯ್ಯ ತಿಳಿಸಿದರು.
ಮೂಲ ಸೌಕರ್ಯ:
ಭೂಮಿಯನ್ನು ವಶಪಡಿಸಿಕೊಂಡು ಅಭಿವೃದ್ಧಿ ಪಡಿಸಿದರೂ ಸಮರ್ಪಕವಾಗಿ ಮೂಲಭೂತ ಸೌಕರ್ಯ ಕಲ್ಪಿಸುವುದಿಲ್ಲ. ರಸ್ತೆ, ವಿದ್ಯುತ್ ಸಂಪರ್ಕ ಬಿಟ್ಟರೆ ಬಹುತೇಕ ಕಡೆಗಳಲ್ಲಿ ನೀರು, ಒಳಚರಂಡಿ ಇತರೆ ಸೌಲಭ್ಯ ಇರುವುದಿಲ್ಲ. ದೇಶದ ಬೃಹತ್ ಕೈಗಾರಿಕಾ ಪ್ರದೇಶ ನಿರ್ಮಾಣ ಮಾಡಲು ಹೊರಟಿರುವ ತುಮಕೂರಿನ ವಸಂತನರಸಾಪುರಕ್ಕೆ ಈವರೆಗೂ ನೀರಿನ ಮೂಲವೇ ಇಲ್ಲವಾಗಿದೆ.
ಬೆಳಗಾವಿಯಲ್ಲಿ ಭೂಮಿಯೇ ಸಿಗುತ್ತಿಲ್ಲ
ಒಂದು ಕಡೆ ವಶಪಡಿಸಿಕೊಂಡ ಭೂಮಿ ಬಳಕೆಯಾಗದೆ ಖಾಲಿ ಇದ್ದರೆ, ಮತ್ತೊಂದೆಡೆ ಬೆಳಗಾವಿ ಜಿಲ್ಲೆಯಲ್ಲಿ ಭೂಮಿಯೇ ಸಿಗದಾಗಿದೆ. ಕೈಗಾರಿಕೆಗಳ ಸ್ಥಾಪನೆಗೆ 14 ಸಾವಿರ ಎಕರೆಯಷ್ಟು ಜಾಗ ಅಗತ್ಯವಿದೆ. ದಶಕದಿಂದ ಭೂಮಿಗಾಗಿ ಹುಡುಕಾಟ ನಡೆಸಿದ್ದರೂ ಸೂಕ್ತ ಸ್ಥಳ ಸಿಗುತ್ತಿಲ್ಲ.
2024ರ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಗೆ ‘ಫೌಂಡ್ರಿ ಕ್ಲಸ್ಟರ್’ ಘೋಷಣೆ ಮಾಡಿದ್ದು, ಈ ಯೋಜನೆಗೂ ಭೂಮಿ ಸಿಕ್ಕಿಲ್ಲ. ಸಾಕಷ್ಟು ಕಡೆಗಳಲ್ಲಿ ನೀರಾವರಿ, ಕೃಷಿ ಭೂಮಿ ಇದ್ದು, ಕೈಗಾರಿಕೆ ಸ್ಥಾಪನೆಗೆ ಜಾಗ ಗುರುತಿಸುವುದು ಕಷ್ಟಕರವಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಕೆಐಎಡಿಬಿ ಜನತೆಯ ಹಿತ ಕಾಯುವ ಸಂಸ್ಥೆಯಾಗಿ ಉಳಿದಿಲ್ಲ. ಭೂ ಮಾಫಿಯಾಗಳ ದಲ್ಲಾಳಿ ಸಂಸ್ಥೆಯಾಗಿ ಮಾರ್ಪಟ್ಟಿದೆ. ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಹೆಸರಿನಲ್ಲಿ ಬೇಕಾಬಿಟ್ಟಿ ಭೂ ಸ್ವಾಧೀನ ನಡೆಸುತ್ತಿದೆಟಿ.ಯಶವಂತ, ರಾಜ್ಯ ಪ್ರಧಾನ ಕಾರ್ಯದರ್ಶಿ, ಕೆಪಿಆರ್‌ಎಸ್
ಕೆಐಎಡಿಬಿಯು ವ್ಯವಹಾರಕ್ಕಾಗಿ ನಿಂತಿದೆ. ಕಡಿಮೆ ಬೆಲೆಗೆ ಕೊಂಡುಕೊಂಡು ಉದ್ಯಮಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದೆ. ಇದೊಂದು ರೀತಿಯ ರಿಯಲ್ ಎಸ್ಟೇಟ್ ದಂಧೆಯಾಗಿದೆಹೋಳಿಗೆ ಸಿದ್ದಪ್ಪ,ಬಳ್ಳಾರಿ ಜಿಲ್ಲೆ
ಕೆಐಎಡಿಬಿಯು ಕೈಗಾರಿಕೆಗಳ ಅಭಿವೃದ್ಧಿ ಹೆಸರಿನಲ್ಲಿ ರೈತರ ಜಮೀನು ಕಬಳಿಸಲು ಹುನ್ನಾರ ನಡೆಸಿರುವುದು ಸರಿಯಲ್ಲ. ಇದನ್ನು ರೈತರು ಹಾಗೂ ಭೂ ದೇವಿ ಮೇಲಿನ ಶೋಷಣೆ ಎನ್ನಬೇಕಾಗುತ್ತದೆಅ.ನ.ಯಲ್ಲಪ್ಪರೆಡ್ಡಿ, ಪರಿಸರವಾದಿ
ಯಾದಗಿರಿ ಜಿಲ್ಲೆ ಕಡೇಚೂರು– ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಜಮೀನು ಬಳಕೆಯಾಗುತ್ತಿಲ್ಲ. ಇರುವ ಉದ್ಯಮಗಳಲ್ಲಿ ಸ್ಥಳೀಯರಿಗೆ ಉದ್ಯೋಗವೂ ಸಿಕ್ಕಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಖಾನೆಗಳೂ ಬರುತ್ತಿಲ್ಲದಶರಥಮಂತ್ರಿ, ರೈತ, ಶೆಟ್ಟಿಹಳ್ಳಿ, ಯಾದಗಿರಿ ಜಿಲ್ಲೆ
ಬಲವಂತವಾಗಿ ಜಮೀನು ಕಿತ್ತುಕೊಳ್ಳಲು ಬಿಡುವುದಿಲ್ಲ. ಹೋರಾಟ ಮುಂದುವರಿಯಲಿದೆ. ನಮ್ಮ ಜಮೀನು ಉಳಿಸಿಕೊಳ್ಳುತ್ತೇವೆಪ್ರಮೋದ್, ಯುವ ರೈತ ಹೋರಾಟಗಾರ, ಚನ್ನರಾಯಪಟ್ಟಣ
ವಶಪಡಿಸಿಕೊಂಡು ಅಭಿವೃದ್ಧಿ ಪಡಿಸಿರುವ ಪ್ರದೇಶದಲ್ಲಿ ಕೈಗಾರಿಕೆಗಳು ಆರಂಭವಾಗುವಂತೆ ನೋಡಿಕೊಳ್ಳಬೇಕು. ಪೂರ್ಣ ಪ್ರಮಾಣದಲ್ಲಿ ಹಂಚಿಕೆಯಾಗಿ, ಉದ್ಯಮ ಆರಂಭವಾದ ನಂತರ ಹೊಸದಾಗಿ ಭೂ ಸ್ವಾಧೀನ ಮಾಡಬೇಕು.ಸತೀಶ್ ಮಲ್ಲಣ್ಣ, ಭೂ ಸಂತ್ರಸ್ತ, ತುಮಕೂರು
ತುಮಕೂರು ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಮೂರು ಹಂತದಲ್ಲಿ ಅಭಿವೃದ್ಧಿಪಡಿಸಿರುವ ಜಾಗವನ್ನು ಈಗಾಗಲೇ ಹಂಚಿಕೆ ಮಾಡಲಾಗಿದೆ. ಯಾವುದೂ ಖಾಲಿ ಉಳಿದಿಲ್ಲ. ಮುಂದಿನ ದಿನಗಳಲ್ಲಿ ಕೈಗಾರಿಕೆಗಳು ಆರಂಭವಾಗಲಿವೆಲಕ್ಷ್ಮಿಶ್, ಕೆಐಎಡಿಬಿ ಅಭಿವೃದ್ಧಿ ವಿಭಾಗದ ಅಧಿಕಾರಿ.
ಪೂರಕ ಮಾಹಿತಿ: ಆಯಾ ಬ್ಯೂರೊ ಹಾಗೂ ಜಿಲ್ಲಾ ವರದಿಗಾರರಿಂದ
ಪರಿಕಲ್ಪನೆ: ಯತೀಶ್ ಕುಮಾರ್.ಜಿ.ಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.