ADVERTISEMENT

ಒಳನೋಟ: ಕಾಡು ಕಾಯುವವರ ವ್ಯಥೆ

ಉಮೇಶ ಭಟ್ಟ ಪಿ.ಎಚ್.
Published 18 ಜನವರಿ 2026, 0:55 IST
Last Updated 18 ಜನವರಿ 2026, 0:55 IST
ಹುಲಿ ಸೆರೆ ಕಾರ್ಯಾಚರಣೆಯಲ್ಲಿ ತೊಡಗಿರುವ ಅರಣ್ಯ ಇಲಾಖೆ ಸಿಬ್ಬಂದಿ
ಹುಲಿ ಸೆರೆ ಕಾರ್ಯಾಚರಣೆಯಲ್ಲಿ ತೊಡಗಿರುವ ಅರಣ್ಯ ಇಲಾಖೆ ಸಿಬ್ಬಂದಿ   

ಬೆಂಗಳೂರು: ‘ಬೆಳಿಗ್ಗೆ 6ಕ್ಕೆ ಕಾಡಿಗೆ ಹೊರಟರೆ ವಾಪಸ್‌ ಬರೋದೇ ಸಂಜೆ. ಅರಣ್ಯದೊಳಗೆ ಗಸ್ತು ತಿರುಗಬೇಕು. ವನ್ಯಜೀವಿಗಳ ಭಯ ಬೇರೆ. ಹುಲಿ, ಆನೆ ದಾಳಿಗೆ ಹಲವರು ಜೀವ ಕೂಡ ಕಳೆದುಕೊಂಡಿದ್ದನ್ನೂ ನೋಡಿದ್ದೇವೆ. ಕಳ್ಳ ಬೇಳಗಾರರ ಜಾಡು ಪತ್ತೆ ಮಾಡಬೇಕು. ನಮಗೆ ಹೆಸರಿಗೆ ಮಾತ್ರ 8 ಗಂಟೆಯ ಕೆಲಸ. ಆದರೆ ದಿನದ 24 ಗಂಟೆಯೂ ದುಡಿಯಲೇಬೇಕು. ಯಾವ ಭದ್ರತೆಯೂ ನಮಗಿಲ್ಲ. ವನ್ಯಜೀವಿಗಳ ದಾಳಿಯ ಆತಂಕ ಬೇರೆ. ಸತತ 27 ವರ್ಷದಿಂದ ‌ಇಲಾಖೆಯಲ್ಲಿ ಕೆಲಸ ಮಾಡಿದರೂ ಸಿಗುವ ಸಂಬಳ ಮಾತ್ರ ₹16190. ಇದರಲ್ಲೇ ಮನೆ ನಡೆಸಬೇಕು. ನಾವು ಹೇಗೆ ಬದುಕಬೇಕು ಹೇಳಿ’.

ಹೀಗೆಂದು ಅರಣ್ಯ ಇಲಾಖೆ ಹೊರ ಗುತ್ತಿಗೆ ನೌಕರರ ಸ್ಥಿತಿಗತಿ ಬಿಡಿಸಿಡುತ್ತಾರೆ ಬಂಡೀಪುರದ ಹೆಡಿಯಾಲ ವನ್ಯಜೀವಿ ವಿಭಾಗದ ಅಣ್ಣಯ್ಯಸ್ವಾಮಿ. ಇವರ ಮಾತಿಗೆ ದನಿಗೂಡಿಸುತ್ತಾರೆ ಗುಂಡ್ರೆ ವಲಯ ಜೀಪ್‌ ಚಾಲಕ ನವೀನ್‌.

‘ಹತ್ತು ವರ್ಷದಿಂದ ಕೆಲಸ ಮಾಡುತ್ತಿದ್ದೇನೆ. ಇಲಾಖೆಯಿಂದ ಸಿಗುವ ನಿರ್ದಿಷ್ಟ ಸಂಬಳ ಎಷ್ಟು ಎಂಬುದೇ ಗೊತ್ತಾಗಿಲ್ಲ. ಸಂಬಳ ಪಡೆದಿದ್ದಕ್ಕೆ ಎಲ್ಲಿಯೂ ಒಂದೇ ಒಂದು ಸಹಿ ಇಲ್ಲ. ಗುತ್ತಿಗೆ ಪಡೆದ ಸಂಸ್ಥೆಗೆ ಇಲಾಖೆಯು ಎಷ್ಟು ಹಣ ಕೊಡುತ್ತೆ ಎಂಬುದೂ ನಮಗೆ ತಿಳಿಯುವುದಿಲ್ಲ. ಕೊಟ್ಟಷ್ಟು ಪಡೆದುಕೊಂಡು ಕೆಲಸ ಮಾಡುತ್ತಿದ್ದೇವೆ’ ಎಂದವರು ಬೆಳಗಾವಿ ನಗರ ವಲಯ ಸಿಬ್ಬಂದಿಯೊಬ್ಬರು.

ADVERTISEMENT

ಕರ್ನಾಟಕ ಅರಣ್ಯ ಇಲಾಖೆ ಹುಲಿ ಸಂರಕ್ಷಿತಧಾಮ, ವನ್ಯಜೀವಿ, ಪ್ರಾದೇಶಿಕ, ಸಾಮಾಜಿಕ ಅರಣ್ಯ ಸಹಿತ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವ ಹೊರ ಗುತ್ತಿಗೆ ನೌಕರರ ನೋವಿನ ಕಥೆಗಳು ಒಂದೊಂದು ಕಡೆ ಒಂದು ರೀತಿ ಇದೆ. ಆದರೆ ಸಂಕಷ್ಟ ಸ್ವರೂಪ ಮಾತ್ರ ಒಂದೇ ತರನಾದದ್ದು. ಸಂಬಳ ಕಡಿಮೆ, ಕೆಲವೆಡೆ ತಿಂಗಳ ಸಂಬಳ ಇನ್ನಾವುದೇ ತಿಂಗಳಲ್ಲಿ ಕೊಡಲಾಗುತ್ತದೆ. ಸೌಲಭ್ಯದ ಹೆಸರಿನ ಕಡಿತದ ಮಾಹಿತಿಯೇ ಇಲ್ಲ. ಕೊಟ್ಟಷ್ಟು ಸಂಬಳ ಪಡೆದು ಸುಮ್ಮನೇ ದುಡಿಯುವುದಷ್ಟೇ ಆಗಿದೆ ಎನ್ನುವ ಸ್ಥಿತಿಯಿದೆ. 20 ವರ್ಷಕ್ಕೂ ಹೆಚ್ಚು ಕಾಲ ದಿನಗೂಲಿ ಆಧಾರದಲ್ಲಿ ಕೆಲಸ ಮಾಡಿದ ಬಳಿಕ ಹೊರಗುತ್ತಿಗೆ ವ್ಯಾಪ್ತಿಗೆ ಬಂದಿರುವ ನೌಕರರು ಬೆಂಕಿಯಿಂದ ಬಾಣಲೆಗೆ ಬಿದ್ದ ಸನ್ನಿವೇಶ ಎದುರಿಸುತ್ತಿದ್ದಾರೆ. ಅರಣ್ಯ ಇಲಾಖೆಯೇ ಸಂಬಳ ನೀಡಿ ನಮ್ಮನ್ನು ನೋಡಿಕೊಳ್ಳುವ ಹಿಂದಿನ ಸ್ವರೂಪವೇ ಇದ್ದರೆ ಸಾಕೆಂದು ಕೋರುತ್ತಾರೆ.

ಪಿಎಫ್‌, ಇಎಸ್ಐ ಸೌಲಭ್ಯ ಸಹಿತ ಹೊರಗುತ್ತಿಗೆ ತಮ್ಮ ಬದುಕಲ್ಲಿ ಬದಲಾವಣೆ ತರಬಹುದು ಎಂದು ತಿಳಿದಿದ್ದ ನೌಕರರಿಗೆ ತಾವು ಯಾವ ರೀತಿ ಮೋಸ ಹೋಗಿದ್ಗೇವೆ ಎನ್ನುವುದು ಅನಾವರಣಗೊಳ್ಳುತ್ತಿವೆ.

ಬಂಡೀಪುರದ ಹಡಿಯಾಳ ವಲಯದಲ್ಲಿ ಸಿಬ್ಬಂದಿ ಏಕಾಂಗಿಯಾಗಿ ದೊಣ್ಣೆ ಹಿಡಿದುಗಸ್ತು ಮಾಡುತ್ತಿರುವುದು. 

ಹೊರಗುತ್ತಿಗೆ ಬದಲಿಸುವಂತೆ ಕೋರಿದ್ದರೂ ಪೂರಕ ಸ್ಪಂದನೆ ಸಿಕ್ಕಿಲ್ಲ. ಜನವರಿಯಲ್ಲಿ ಬಂಡೀಪುರದಲ್ಲಿ ಹೋರಾಟ ನಡೆಸುತ್ತೇವೆ. ಮಾರ್ಚ್‌ ನಂತರ ಕೆಲಸ ನಿಲ್ಲಿಸಿ ಹೋರಾಡುತ್ತೇವೆ
ಎ.ಎಂ. ನಾಗರಾಜು, ಗೌರವ ಅಧ್ಯಕ್ಷರು, ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ವನ್ಯಜೀವಿ ಘಟಕಗಳ ದಿನಗೂಲಿ, ಹೊರಗುತ್ತಿಗೆ ನೌಕರರ ಸಂಘ. ಬೆಂಗಳೂರು.

ಬೇಡಿಕೆಗಳೇನು

  • ದಿನಗೂಲಿಯಲ್ಲೇ ಮುಂದುವರಿಸಿ 10 ವರ್ಷ ಮುಗಿಸಿದವರನ್ನು ಕ್ಷೇಮಾಭಿವೃದ್ದಿ ಅಧಿನಿಯಮಕ್ಕೆ ಒಳಪಡಿಸಬೇಕು.

  • ಏಜೆನ್ಸಿಗಳಿಗೆ ಬದಲಾಗಿ ಹಿಂದೆ ಇಲಾಖೆ ಮೂಲಕವೇ ವೇತನ ನೀಡಬೇಕು.

  • ಖಾಲಿ ಹುದ್ದೆಗಳನ್ನು ಕಾಲಕಾಲಕ್ಕೆ ಭರ್ತಿ ಮಾಡಬೇಕು.

  • ಚಾಲಕರಿಗೂ ಕಷ್ಟ ಪರಿಹಾರ ಭತ್ಯೆ ನೀಡಬೇಕು

  • ಕಚೇರಿ ಸಿಬ್ಬಂದಿಗಳನ್ನು ಅವರ ಶಿಕ್ಷಣಕ್ಕೆ ಅನುಗುಣವಾಗಿ ಕಾಯಂಗೊಳಿಸಬೇಕು.

  • ವನ್ಯಜೀವಿ ವಿಭಾಗದವರಿಗೆ ಹಿಂದೆ ಇದ್ದಂತೆ 30 ದಿನಗಳ ಮಾಸಿಕ ಸಂಬಳ, ಭತ್ಯೆ ನೀಡಬೇಕು

'ಯಾವುದೋ ಏಜೆನ್ಸಿ ಎಂಬ ಅಗೋಚರ ಸಂಸ್ಥೆಯಿಂದ ಸಂಬಳವೂ ಸರಿಯಾಗಿ ಸಿಗುತ್ತಿಲ್ಲ, ಇಲಾಖೆ ಅಧಿಕಾರಿಗಳನ್ನು ಕೇಳೋಣ ಎಂದರೆ ಕೆಲವರು ಏಜೆನ್ಸಿಯರೊಂದಿಗೆ ಕೈ ಜೋಡಿಸಿದ್ದಾರೆ. ಒಂದಷ್ಟು ಅಧಿಕಾರಿಗಳು ತಾವೇ ಏಜೆನ್ಸಿಯನ್ನು ಬೇರೆಯವರ ಹೆಸರಿನಲ್ಲಿ ನಡೆಸುತ್ತಿದ್ದಾರೆಯೇ ಎನ್ನುವ ಅನುಮಾನಗಳೂ ಇವೆ. ನ್ಯಾಯ ಕೊಡಬೇಕಾದವರೆ ಅನ್ಯಾಯದ ಹಾದಿಯಲ್ಲಿ ನಿಂತಿರುವಾಗ ನಾವು ಯಾರನ್ನು ಕೇಳೋದು. ಶೋಷಣೆ ಎನ್ನುವುದು ನಮ್ಮನ್ನು ಅತಂತ್ರ ಸ್ಥಿತಿಗೆ ತಳ್ಳುತ್ತಿದೆ’ ಎಂದು ನೌಕರರು ಬೇಸರಿಂದಲೇ ಹೇಳುತ್ತಾರೆ.

ನೌಕರರ ಕ್ಷೇಮ ನೋಡಿಕೊಳ್ಳಬೇಕಾದ ಇಲಾಖೆಯು ಬಾಯಿ ಮಾತಿನ ಅನುಕಂಪ ತೋರುತ್ತಿದೆ. ಹೆಚ್ಚು ಕಡೆ ಸ್ಥಳೀಯರಿಗೆ ಉದ್ಯೋಗ ನೀಡುವ ಬದಲು ಯಂತ್ರೋಪಕರಣಗಳ ಬಳಕೆಗೆ ಒತ್ತು ನೀಡಿರುವುದೂ ಪರೋಕ್ಷವಾಗಿ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಇದು ಕಾಡಿನ ಗಸ್ತಿನ ಮೇಲೆ ಕೆಟ್ಟ ಪರಿಣಾಮ ಬೀರಿ ಕಳ್ಳಬೇಟೆ ಹೆಚ್ಚಳ, ವನ್ಯಜೀವಿಗಳ ಅಕಾಲಿಕ ಸಾವು, ಕಾಡಿನ ಬೆಂಕಿಯಂತಹ ಅನಾಹುತಕ್ಕೂ ದಾರಿ ಮಾಡಿಕೊಡುತ್ತಿದೆ.

ಉದ್ಯೋಗ ಸ್ವರೂಪ ಬದಲು

ಅರಣ್ಯ ಇಲಾಖೆಯಲ್ಲಿ ದಿನಗೂಲಿ/ ಗುತ್ತಿಗೆ ಪದ್ದತಿ ಹೊಸದಲ್ಲ. ಆರೇಳು ದಶಕಗಳಿಂದಲೂ ಇದೆ. ಆದರೆ ಮೂರು ದಶಕದಿಂದ ಇದು ಸಮಸ್ಯೆಯ ರೂಪ ತಳೆದಿದೆ. 70–80ರ ದಶಕದಲ್ಲೂ ಇಲಾಖೆಯಲ್ಲಿ ವೀಕ್ಷಕರು, ಚಾಲಕರ ಹುದ್ದೆಗಳನ್ನು ದಿನಗೂಲಿ ಆಧಾರದಲ್ಲಿ ತುಂಬಿಕೊಂಡು ಇಲಾಖೆಯಿಂದ ತಿಂಗಳ ಅವಧಿಯೊಳಗೆ ವೇತನ ನೀಡಲಾಗುತ್ತಿತ್ತು. ಸೇವಾ ಅನುಭವದ ಮೇಲೆ ಕೆಲವರು ಕಾಯಂ ಆಗಿ ನಿವೃತ್ತರೂ ಆಗಿದ್ದಾರೆ.

1996ರಲ್ಲಿ ದಿನಗೂಲಿ ನೌಕರರ ಕಲ್ಯಾಣ ಕಾಯ್ದೆ ಅಡಿ ನೇಮಕ ಪ್ರಮಾಣ ಹೆಚ್ಚಳವಾಯಿತು. ಅರಣ್ಯ ಇಲಾಖೆಯಲ್ಲಿ ಎಂಆರ್‌(ಮಸ್ಟರ್‌ ರೋಲ್‌) ಹಾಗೂ ಪಿಸಿಪಿ (ಪೆಟ್ಟಿ ಕೇಸ್‌ ಪೇಮೆಂಟ್‌) ಎನ್ನುವ ಎರಡು ವಿಧದಲ್ಲಿ ನೇಮಕ ಮಾಡಿಕೊಂಡು ವೇತನವನ್ನು ದಿನಗೂಲಿಯಾಗಿ ನಿಗದಿ ಮಾಡಿ ಮಾಸಿಕವಾಗಿ ಇಲಾಖೆಯಿಂದಲೇ ನೀಡಲಾಗುತ್ತಿತ್ತು. ಇಲಾಖೆಯಿಂದ ಸಂಬಳ ಸಿಗುತ್ತಿದ್ದುದರಿಂದ ಪಿಎಫ್‌, ಇಎಸ್‌ಐ ಸೌಲಭ್ಯ ಜತೆಗೆ ಏಜೆನ್ಸಿ ಗೋಜಲು ಇರಲಿಲ್ಲ.

‌2006ರಲ್ಲಿ ಸುಪ್ರೀಂಕೋರ್ಟ್‌ ನೀಡಿದ ತೀರ್ಪಿನ ಬಳಿಕ ದಿನಗೂಲಿ ನೌಕರರ ಸುರಕ್ಷತೆಗೆ ಪ್ರತ್ಯೇಕ ಕಾಯ್ದೆಯನ್ನು ರೂಪಿಸಲಾಯಿತು. ಕರ್ನಾಟಕದಲ್ಲಿ 2008ರಲ್ಲಿ ಸಚಿವ ಸಂಪುಟ ಉಪಸಮಿತಿ ರಚಿಸಿ ವರದಿ ಪಡೆದು ದಿನಗೂಲಿ ನೌಕರರ ಕ್ಷೇಮಾಭಿವೃದ್ದಿ ಕಾಯ್ದೆ 2012 ಅನ್ನು ಜಾರಿಗೊಳಿಸಲಾಯಿತು. ಇದರಡಿ 10 ವರ್ಷ ಮೇಲ್ಪಟ್ಟು ಕೆಲಸ ಮಾಡಿದ ಅರಣ್ಯ ಇಲಾಖೆ 4500 ನೌಕರರಿಗೆ ಕಾಯಂ ಅಲ್ಲದೇ ಇದ್ದರೂ ಹೆಚ್ಚಿನ ವೇತನ, ಎಚ್ಆರ್‌ಎ, ಡಿಎ ಸಹಿತ ಕೆಲವು ಸೌಲಭ್ಯಗಳನ್ನು ನೀಡಲಾಯಿತು. ಅವರಲ್ಲಿ ಶೇ 90ರಷ್ಟು ಮಂದಿ ಈಗ ನಿವೃತ್ತರಾಗಿದ್ದಾರೆ.

2017ರ ಜುಲೈನಲ್ಲಿ ಸರ್ಕಾರ ದಿನಗೂಲಿ ನೌಕರರನ್ನು ಹಂಗಾಮಿ ನೌಕರರನ್ನಾಗಿ ಬದಲಾಯಿಸಿತು. ಪಿಎಫ್‌, ಇಎಸ್ಐ ಸೌಲಭ್ಯದ ಜತೆಯಲ್ಲಿ ಹೆಚ್ಚು ವೇತನ ಸಿಗಲಿದೆ ಎಂದು ತಿಳಿಸಿದ್ದರಿಂದ ಅದಕ್ಕೆ ನೌಕರರು ಒಪ್ಪಿಕೊಂಡರು. ಆನಂತರ ಸಮಸ್ಯೆ ಬಿಗಡಾಯಿಸಿದೆ.

ಏಜೆನ್ಸಿಗಳ ವೃತ್ತಾಂತ

2017ಕ್ಕಿಂತಲೂ ಮುಂಚೆ ದಿನಗೂಲಿ ನೌಕರರಿಗೆ ಅರಣ್ಯ ಇಲಾಖೆಯಿಂದ ವಿವಿಧ ಶೀರ್ಷಿಕೆಗಳಿಂದ ವೇತನ ನೀಡಲಾಗುತ್ತಿತ್ತು. ಹೊರಗುತ್ತಿಗೆಗೆ ಬದಲಾದಾಗ ಇವುಗಳ ಹೊಣೆಯನ್ನು ಏಜೆನ್ಸಿಗಳಿಗೆ ವಹಿಸಲಾಯಿತು. ಟೆಂಡರ್‌ ಪಡೆದ ಏಜೆನ್ಸಿಗಳು ಆಯಾ ವಿಭಾಗಗಳಿಗೆ ನೌಕರರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡವು. ಇಲಾಖೆಯಿಂದ ಏಜೆನ್ಸಿಗೆ ವಾರ್ಷಿಕ ಮೊತ್ತ ಬಿಡುಗಡೆ ಮಾಡಿದರೆ, ನೌಕರರಿಗೆ ಏಜೆನ್ಸಿಗಳು ವೇತನ ನೀಡುತ್ತಿವೆ.

ಕರ್ನಾಟಕದಲ್ಲಿ ನೂರಕ್ಕೂ ಹೆಚ್ಚು ಏಜೆನ್ಸಿಗಳಿವೆ. ಕೆಲವು ಏಜೆನ್ಸಿಗಳು ಸರಿಯಾಗಿ ನಿರ್ವಹಣೆ ಮಾಡದೇ ಇರುವುದರಿಂದ ನೌಕರರಿಗೆ ವೇತನ, ಸೌಲಭ್ಯ ನಿಗದಿತವಾಗಿ ಸಿಗುತ್ತಿಲ್ಲ. ಕೆಲವನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಈ ಕಾರಣದಿಂದಲೇ ಒಬ್ಬರೇ ಬೇರೆ ಬೇರೆ ಹೆಸರಲ್ಲಿ ಏಜೆನ್ಸಿ ರೂಪಿಸಿಕೊಂಡಿದ್ದಾರೆ ಎನ್ನುವ ಆರೋಪವಿದೆ.

ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ 122 ಹೊರಗುತ್ತಿಗೆ ಸಿಬ್ಬಂದಿ ಇದ್ದು, ನವೆಂಬರ್ ವೇತನ ಬಿಡುಗಡೆಯಾಗಿರಲಿಲ್ಲ. ಹಿಂದೆ, ಸೆಪ್ಟೆಂಬರ್ 2024ರಿಂದ ಮಾರ್ಚ್‌ 2025ರವರೆಗೆ ವೇತನ ನೀಡದ ಕಾರಣಕ್ಕೆ ಮೈಸೂರಿನ ಆರ್‌ಸಿ ಬಿಸಿನೆಸ್ ಸಲ್ಯೂಷನ್ ಕಂಪನಿಯನ್ನು 2 ವರ್ಷಗಳ ಅವಧಿಗೆ ಕಪ್ಪುಪಟ್ಟಿಗೆ ಸೇರಿಸಲಾಗಿತ್ತು. ಪ್ರಸ್ತುತ ಬಿಡಿಎನ್‌ ಎಂಟರ್‌ಪ್ರೈಸಸ್‌ ಸಂಸ್ಥೆಗೆ ವೇತನ ಪಾವತಿ ಗುತ್ತಿಗೆ ನೀಡಲಾಗಿದೆ.

ಆದರೆ ಆರ್‌ಸಿ ಬಿಸಿನೆಸ್‌ ಸಲ್ಯೂಷನ್ ಕಂಪೆನಿ ಮುಖ್ಯಸ್ಥ ಚರಣ್ ಕುಮಾರ್ ಅವರು ಸರ್ಕಾರದಿಂದಲೇ ಸರಿಯಾಗಿ ಅನುದಾನ ಬಿಡುಗಡೆ ಆಗದಿರುವುದೇ ವೇತನ ಸಮಸ್ಯೆ ಮೂಲ ಎಂದು ಮತ್ತೊಂದು ಮುಖ ತೆರೆದಿಡುತ್ತಾರೆ.

‘ಹೊರಗುತ್ತಿಗೆ ಸಿಬ್ಬಂದಿಗೆ ಪ್ರತಿ ತಿಂಗಳು ವೇತನ, ಇಎಸ್‌ಐ, ಪಿಎಫ್‌ ಪಾವತಿ ಮಾಡಲು ನಿಗದಿತ ಸಮಯಕ್ಕೆ ಅರಣ್ಯ ಇಲಾಖೆಯಿಂದ ಅನುದಾನ ಬಿಡುಗಡೆಯಾಗುತ್ತಿರಲಿಲ್ಲ. ವರ್ಷಕ್ಕೊಮ್ಮೆ ಬಿಲ್‌ ಪಾವತಿ ಮಾಡುತ್ತಿದ್ದರಿಂದ ಇಎಸ್‌ಐ, ಪಿಎಫ್‌ ವಂತಿಗೆ ಪಾವತಿಸಲು ವಿಳಂಬ ಆಗುತ್ತಿತ್ತು. ಈಚೆಗೆ ಪಿಎಫ್‌, ಇಎಸ್‌ಐ ವಂತಿಗೆಯನ್ನು ಪಾವತಿಸದ ಬಗ್ಗೆ ಕಾರಣ ಕೇಳಿ ನೀಡಿದ್ದ ನೋಟಿಸ್‌ಗೆ ಉತ್ತರ ನೀಡಿ ಹೆಚ್ಚುವರಿ ದಂಡದೊಂದಿಗೆ ಇಎಸ್‌ಐ, ಪಿಎಫ್‌ ವಂತಿಗೆ ಪಾವತಿಸಿರುವ ಇಸಿಆರ್ ದಾಖಲೆಗಳನ್ನು ಸಲ್ಲಿಕೆ ಮಾಡಿದ್ದೇವೆ. ಪೂರ್ವಾಪರ ವಿಚಾರಿಸದೇ ಕಠಿಣ ಕ್ರಮ ತೆಗೆದುಕೊಂಡಿರುವುದು ಸರಿಯಲ್ಲ’ ಎಂದು ಹೇಳುತ್ತಾರೆ.

ಇದೇ ರೀತಿ ನಾಗರಹೊಳೆಯಲ್ಲಿ ಗುತ್ತಿಗೆ ಪಡೆದಿದ್ದ ನವೀನ್‌ ಬೋಪಣ್ಣ ಎಂಬುವವರಿಗೆ ಅರಣ್ಯ ಇಲಾಖೆ ದಂಡವನ್ನೂ ವಿಧಿಸಿತ್ತು. ಕೆಲವು ಏಜೆನ್ಸಿಗಳು ತಪ್ಪು ಎಸಗಿದ್ದರೂ ಪ್ರಭಾವ ಬಳಸಿ ಕ್ರಮದಿಂದ ತಪ್ಪಿಸಿಕೊಂಡಿವೆ ಎನ್ನುವ ಆರೋಪ ಬಹಳಷ್ಟಿದೆ.

ಆನೆ ಕಾರ್ಯಪಡೆಯಲ್ಲಿ 36 ಜನರಿದ್ದರೂ, 46 ಜನರಿದ್ದರೆಂದು ಬಿಲ್‌ ಮಾಡಿರುವ ವಿಚಾರ ಹಾಸನದಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರ ನಡೆಸಿ ಸಭೆಯಲ್ಲಿ ಬೆಳಕಿಗೆ ಬಂದಿತ್ತು.

‘ಇಎಸ್‌ಐ ಹಾಗೂ ಪಿಎಫ್‌ ಕೊಡಲಾಗುವುದು ಎಂದು ಆದೇಶ ಪತ್ರದಲ್ಲಿ ತಿಳಿಸಿದ್ದಾರೆ. ಆದರೆ, ಪ್ರಮಾಣ ಎಷ್ಟು, ಎಷ್ಟು ಪಿ.ಎಫ್‌ ಉಳಿಯುತ್ತಿದೆ ಎಂಬುದರ ದಾಖಲೆಗಳೇ ಇಲ್ಲ. ಜತೆಗೆ ಕೊಡುವ ಸಂಬಳಕ್ಕೆ ಶೇ 18ರಷ್ಟು ಜಿಎಸ್‌ಟಿ ವಿಧಿಸುತ್ತಾರೆ. ಜಿಎಸ್‌ಟಿ ಹೊರೆಯನ್ನು ಹೊರಗುತ್ತಿಗೆ ಏಜೆನ್ಸಿಗೆ ಹಾಕಬೇಕೇ ಹೊರತು ನೌಕರರಿಗೆ ಅಲ್ಲ. ಶೇ 1ರಷ್ಟು ಸರ್ವಿಸ್‌ ಚಾರ್ಜ್‌ ನಮ್ಮ ಹಣದಲ್ಲೇ ಕೊಡುತ್ತಾರೆ’ ಎಂಬುದು ನೌಕರರ ವಾದ.

ಸಾಮಾಜಿಕ, ಪ್ರಾದೇಶಿಕ ಅರಣ್ಯಗಳಲ್ಲಿ ತುಂಡು ಗುತ್ತಿಗೆ ಹೆಸರಿನಲ್ಲಿ ಹೆಚ್ಚು ಕೆಲಸಗಾರರನ್ನು ಸೃಷ್ಟಿಸಿ ಇನ್ನಾರೋ ಸಂಬಳ ಪಡೆಯುತ್ತಿರುವ ಆರೋಪಗಳೂ ಇವೆ.

ವೇತನ ತಾರತಮ್ಯದ ಸ್ವರೂಪ: ಹೊಸದಾಗಿ ಬಂದವರು, ಹತ್ತು ವರ್ಷಗಳ ಹಿಂದೆ ಸೇರಿದ್ದರೂ ಒಂದೇ ರೀತಿಯ ಸಂಬಳವಿದೆ. ಈ ತಾರತಮ್ಯ ನಿವಾರಿಸಬೇಕು. ಕೆಲಸದ ಹೊರೆ, ಸೇವಾ ಹಿರಿತನ ಮತ್ತು ಮೌಲ್ಯ ಆಧರಿಸಿ ಸಂಬಳ ನೀಡಬೇಕು ಎಂಬ ನಿಯಮವನ್ನು ಪಾಲಿಸುತ್ತಿಲ್ಲ. ಸರ್ಕಾರಿ ಸಿಬ್ಬಂದಿ ಸರಿಯಾಗಿ 5ಗಂಟೆಗೆ ಕಚೇರಿಯಿಂದ ತೆರಳುತ್ತಾರೆ. ಹೊರ ಗುತ್ತಿಗೆ ನೌಕರರು ಸಂಜೆ 6.30ರಿಂದ 7 ಗಂಟೆಯವರೆಗೂ ಕಚೇರಿಯಲ್ಲೇ ಕೆಲಸ ಮಾಡಬೇಕಾಗುತ್ತದೆ’ ಎಂಬುದು ಹೊರ ಗುತ್ತಿಗೆ ನೌಕರರ ದೂರು.

‘ಇದೀಗ ಹೊಸತಾಗಿ ಹೊರಗುತ್ತಿಗೆ ನೌಕರರಿಗೆ ₹6 ಸಾವಿರ ಕಡಿತ ಮಾಡಿ ₹12 ಸಾವಿರ ಮಾತ್ರ ಕೊಡ್ತಾರೆ. ಸರಿಯಾಗಿ ವೇತನ ನೀಡುವಂತೆ ಮೇಲಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಸ್ಥಳೀಯ ಶಾಸಕರಿಗೂ ಮನವರಿಕೆ ಮಾಡಿದ್ದೇವೆ. ಆದರೂ, ಸಂಬಳ ಕಡಿತ ನಿಂತಿಲ್ಲ’ ಎಂದರು ಯಾದಗಿರಿ ಜಿಲ್ಲೆಯ ಹಂಗಾಮಿ ನೌಕರರೊಬ್ಬರು.

ವನ್ಯಜೀವಿ ವಿಭಾಗದಲ್ಲಿ ಭಿನ್ನ ವನ್ಯಜೀವಿ ವಿಭಾಗಗಳಲ್ಲಿ ನೌಕರರಾಗಿ ಸೇರಿಕೊಂಡವರು ಒಂದು ರೀತಿ ದಶಾವತಾರಿಗಳೇ. ವನ್ಯಜೀವಿ ರಕ್ಷಣೆ, ಕಳ್ಳಬೇಟೆ ತಡೆ ಶಿಬಿರಗಳ ಗಸ್ತು, ಟವರ್ ವೀಕ್ಷಣೆ ಗೋಪುರ, ಆನೆ, ಹುಲಿ, ಚಿರತೆ ಕಾರ್ಯಾಚರಣೆ, ಸೋಲಾರ್ ಬೇಲಿ ನಿರ್ವಹಣೆ, ಸಫಾರಿ ವಾಹನಗಳು, ಅಧಿಕಾರಿಗಳ ವಾಹನ ಚಾಲಕರು, ಅತಿಥಿ ಗೃಹ ಮೇಟಿಗಳು, ಕಚೇರಿ ನಿರ್ವಹಣೆ. ಎಲ್ಲವೂ ತಿಳಿದಿರಬೇಕು. ಇಲ್ಲಿ ಕೆಲಸಕ್ಕೆ ಹೊತ್ತು ಗೊತ್ತು ಇಲ್ಲ. ಕೆಲಸ ಇದ್ದ ತತ್‌ಕ್ಷಣ ಹೊರಡಲು ಸದಾ ಸಿದ್ದರಿರಬೇಕು. ರಜೆ ಸಿಕ್ಕರೆ ಮನೆ. ಇಲ್ಲದೇ ಇದ್ದರೆ ಎಲ್ಲಾ ದಿನಗಳ ರಜೆಯನ್ನು ಒಟ್ಟಿಗೆ ಸೇರಿಸಿಕೊಂಡು ತಿಂಗಳಿಗೆ ನಾಲ್ಕು ದಿನ ವೈಯಕ್ತಿಕವಾಗಿ ಬಳಸಿಕೊಳ್ಳುತ್ತಾರೆ ಬಹುತೇಕ ಸಿಬ್ಬಂದಿ. ನಡುವೆ ಹುಷಾರು ತಪ್ಪಿ ಕೆಲಸಕ್ಕೆ ಹೋಗದೇ ಇದ್ದರೆ ಸಂಬಳ ಕಡಿತವೂ ಆಗುತ್ತದೆ. ಗಸ್ತು ಹೋಗುವವರಿಗೆ ಶಸ್ತ್ರಾಸ್ತ್ರಗಳು ಸುಸಜ್ಜಿತವಾಗಿಲ್ಲ. ಇದರಿಂದ ಕೆಲವೊಬ್ಬರಿಗೆ ಲಾಠಿ ರೂಪದ ಕೋಲೇ ಅಸ್ತ್ರ ಆಗುತ್ತದೆ.

ಮಲೆ ಮಹದೇಶ್ವರ ವನ್ಯಜೀವಿ ವಿಭಾಗ ವ್ಯಾಪ್ತಿಯ 7 ವನ್ಯಜೀವಿ ವಲಯಗಳಲ್ಲಿ 120ಕ್ಕೂ ಹೆಚ್ಚು ಮಂದಿ ಹೊರಗುತ್ತಿಗೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಹಿಂದೆ ಇದೇ ವಿಭಾಗದಲ್ಲಿ ಹೊರಗುತ್ತಿಗೆ ನೌಕರರಿಗೆ ನಾಲ್ಕು ತಿಂಗಳ ವೇತನ ಪಾವತಿಯಾಗಿರಲಿಲ್ಲ. ಪರಿಣಾಮ ಹೊರಗುತ್ತಿಗೆ ನೌಕರರು ಮುಷ್ಕರಕ್ಕೆ ತೆರಳಿದ್ದಾಗ ಕಿಡಿಗೇಡಿಗಳು ವಿಷ ಹಾಕಿ ಐದು ಹುಲಿಗಳನ್ನು ಕೊಂದಿದ್ದು ಭಾರೀ ಸದ್ದು ಮಾಡಿತ್ತು. ತಿಂಗಳುಗಟ್ಟಲೆ ಸಂಬಳ ನೀಡಿಲ್ಲದಿರುವುದು ಸ್ಥಳೀಯ ಆರ್‌ಎಫ್‌ಒಗಳಿಂದ ಆರಂಭಿಸಿ ಅರಣ್ಯ ಸಂರಕ್ಷಣಾಧಿಕಾರಿಗೂ ಗೊತ್ತಿದ್ದರೂ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ.

ಕಳ್ಳಬೇಟೆ ತಡೆ ಶಿಬಿರದ ಸ್ಥಿತಿಗತಿ

ಕರ್ನಾಟಕದ ಹುಲಿ ಸಂರಕ್ಷಿತ ಪ್ರದೇಶ, ವನ್ಯಜೀವಿ ವಿಭಾಗಗಳಲ್ಲಿ ಕಳ್ಳಬೇಟೆ ತಡೆ ಶಿಬಿರಗಳ ಮಾಹಿತಿ ಕಲೆ ಹಾಕುತ್ತಾ ಹೋದರೆ ಒಂದೊಂದು ಶಿಬಿರದಲ್ಲಿ ವಿಭಿನ್ನ ಸಮಸ್ಯೆ ಲೋಕವೇ ತೆರೆದುಕೊಳ್ಳುತ್ತದೆ.

ಬಂಡೀಪುರ, ನಾಗರಹೊಳೆ, ಬಿಆರ್‌ಟಿ ಹುಲಿಧಾಮ ವ್ಯಾಪ್ತಿಯಲ್ಲೂ ಸಿಬ್ಬಂದಿ ಕೊರತೆಯಿದ್ದು, ಇರುವವರಿಗೆ ಹೊರೆ ಹಂಚಲಾಗಿದೆ. ಕಳ್ಳಬೇಟೆ ಶಿಬಿರಗಳಲ್ಲಿ ನಾಲ್ವರು ಹಂಗಾಮಿ ಹಾಗೂ ಒಬ್ಬ ಕಾಯಂ ನೌಕರ ಇರಬೇಕು ಎಂಬ ನಿರ್ದೇಶನವಿದ್ದರೂ ಅದು ಪಾಲನೆಯಾಗುತ್ತಿಲ್ಲ.

ಕಾಳಿ ಹುಲಿ ಸಂರಕ್ಷಿತಾರಣ್ಯ, ಬೆಳಗಾವಿ ಜಿಲ್ಲೆಯ ಖಾನಾಪುರ, ಕಣಕುಂಬಿ ವಲಯ ಶಿಬಿರಗಳಲ್ಲಿ ಸಿಬ್ಬಂದಿ ಸಂಖ್ಯೆ ಕಡಿತಗೊಳಿಸಲಾಗಿದೆ. ಹಿಂದೆ ಕೆಲಸ ಮಾಡುತ್ತಿದ್ದ ನಾಲ್ಕು ಸಿಬ್ಬಂದಿ ಬದಲಾಗಿ ಇಬ್ಬರನ್ನೇಉಳಿಸಿಕೊಳ್ಳಲಾಗಿದೆ.

‘ಜನವಸತಿ ಸ್ಥಳದಿಂದ ಬಹುದೂರದಲ್ಲಿರುವ ಬೇಟೆತಡೆ ಶಿಬಿರಗಳಲ್ಲಿ ಇಬ್ಬರೇ ವಾಸವಿರುತ್ತೇವೆ. ರಕ್ಷಣೆಗೆ ಆಯುಧ ಇಲ್ಲ. ಹೆಚ್ಚಿನ ಜನರಿಲ್ಲದ ಕಾರಣ ವನ್ಯಜೀವಿ ದಾಳಿ ಆತಂಕವಿದೆ. ನಾಲ್ಕು ಮಂದಿ ಕೆಲಸವನ್ನು ಇಬ್ಬರೇ ಮಾಡಬೇಕಿರುವುದರಿಂದ ರಜೆಯೂ ಸಿಗದೇ ಒತ್ತಡ ಹೆಚ್ಚಿದೆ. ಯಾವುದೇ ಸೂಚನೆ ನೀಡದೆ ಈ ಹಿಂದೆ ಹಲವರನ್ನು ಕೆಲಸದಿಂದ ತೆಗೆಯಲಾಗಿದೆ. ಇದರಿಂದ ನಮಗೂ ಉದ್ಯೋಗದ ಅಭದ್ರತೆ ಕಾಡುತ್ತಿದೆ’ಎಂದು ಸಿಬ್ಬಂದಿ ದೂರಿದರು.

ನ್ಯಾಯಾಲಯ ತೀರ್ಪುಗಳ ಬಲ: ಹಂಗಾಮಿ ನೌಕರರ ವಿಚಾರದಲ್ಲಿ 2025ರ ಒಂದು ವರ್ಷದಲ್ಲೇ ನಾಲ್ಕು ಮಹತ್ವದ ಆದೇಶಗಳನ್ನು ಸುಪ್ರೀಂ ಕೋರ್ಟ್‌ ನೀಡಿದೆ. ಕರ್ನಾಟಕ ಹೈಕೋರ್ಟ್‌ನ ಬೆಂಗಳೂರು ಹಾಗೂ ಕಲಬುರಗಿ ಪೀಠದಲ್ಲೂ ಹಂಗಾಮಿ ನೌಕರರ ಪರವಾಗಿಯೇ ತೀರ್ಪುಗಳು ಬಂದಿವೆ.

‘ಹಂಗಾಮಿ ಎನ್ನುವುದನ್ನು ಬಿಟ್ಟರೆ ದೀರ್ಘಕಾಲ ದಿಂದ ಕಾಯಂ ನೌಕರರ ರೀತಿಯಲ್ಲಿಯೇ ಕೆಲಸ ಮಾಡುತ್ತಿರುವವರನ್ನು ಉಮಾದೇವಿ ಪ್ರಕರಣದ ನೆಪವೊಡ್ಡಿ ಕಾಯಂ ಮಾಡುವುದಿಲ್ಲ. ಅವರಿಗೆ ಸೂಕ್ತ ವೇತನ, ಸೌಲಭ್ಯ ನೀಡುವುದಿಲ್ಲ ಎಂದು ಹೇಳಲಾಗದು. ಉಮಾದೇವಿ ಪ್ರಕರಣದ ತಾತ್ವರ್ಯವನ್ನು ಆಡಳಿತ ದಲ್ಲಿರುವವರು ತಮಗೆ ಬೇಕಾದ ರೀತಿ ವ್ಯಾಖ್ಯಾನ ಮಾಡಿಕೊಳ್ಳುವುದು ಸಲ್ಲ. ಈ ನೌಕರರು ಕಾಯಂ ನೌಕರರಿಗೆ ಸಿಗುವ ಘನತೆ, ಭದ್ರತೆ ಮತ್ತು ಸರ್ಕಾರಿ ಸವಲತ್ತುಗಳಿಂದ ವಂಚಿತರಾಗಿದ್ದಾರೆ ಹೊರಗುತ್ತಿಗೆ ನೇಮಕ ಕ್ರಮಬದ್ದವಲ್ಲದೇ ಇರಬಹುದು. ಆದರೆ ಅದು ಕಾನೂನು ಬಾಹಿರವಲ್ಲ. ಹೀಗೆ ಕೆಲಸ ಮಾಡಿದವರು ಕಾಯಂ ಆಗಲು ಅರ್ಹರು’ ಎಂದು ಸುಪ್ರೀಂಕೋರ್ಟ್‌ ತನ್ನ ತೀರ್ಪುಗಳಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದೆ.

ನ್ಯಾಯಾಲಯದ ತೀರ್ಪು ಇದ್ದರೂ ವಿವಿಧ ಇಲಾಖೆಗಳಲ್ಲಿ ಜೇನುಗೂಡಿನಂತಿರುವ ಈ ಸಮಸ್ಯೆಗೆ ಕೈ ಹಾಕಲು ಸರ್ಕಾರ ಮನಸು ಮಾಡುತ್ತಿಲ್ಲ. ಕಾಲಮಿತಿಯೊಳಗೆ ಹಂಗಾಮಿ ನೌಕರರ ಬದುಕಿಗೆ ಭದ್ರತೆ ನೀಡಿ ಎನ್ನುವ ಸೂಚನೆ ಕಾರಣದಿಂದ ರಾಜ್ಯ ಸರ್ಕಾರವು ಬೆಳಗಾವಿಯಲ್ಲಿ ನಡೆದ ಚಳಿಗಾಲದ

ಅಧಿವೇಶನದಲ್ಲಿ ಸರ್ಕಾರಿ ಸಂಸ್ಥೆಗಳಲ್ಲಿ ಖಾಸಗಿ ಹೊರಗುತ್ತಿಗೆ ನಿಷೇಧ ಮಸೂದೆ 2025 ಮಂಡಿಸುವುದಾಗಿ ಘೋಷಣೆ ಮಾಡಿತ್ತು.

ಅಧಿವೇಶನದಲ್ಲಿ ಮಸೂದೆ ಮಂಡನೆಯಾಗದೇ ಇರುವುದರಿಂದ ಅರಣ್ಯ ಇಲಾಖೆ ನೌಕರರ ಹೊರಗುತ್ತಿಗೆ ಸಮಸ್ಯೆ ಸದ್ಯಕ್ಕೆ ಮುಗಿಯುವ ಲಕ್ಷಣಗಳಿಲ್ಲ. ಕಷ್ಟದ ಬದುಕಿಗೆ ಕೊನೆಯೇ ಇಲ್ಲ.

ವೇತನ ಹೇಗಿದೆ

ನೌಕರರಿಗೆ ಪ್ರತಿದಿನ ₹698 ವೇತನವನ್ನು ಹಂಗಾಮಿ ನೌಕರರಿಗೆ ನೀಡಲಾಗುತ್ತದೆ. ವೇತನದಲ್ಲಿ ಪಿಎಫ್‌ ಮೊತ್ತ ₹2350, ಇಎಸ್ಐಗೆ ₹130 ಕಡಿತ ಮಾಡಲಾಗುತ್ತಿದೆ. ಉಳಿದ ಮೊತ್ತ ₹15500 ರಿಂದ ₹16500 ವರೆಗೂ ಅವರ ಅನುಭವದ ಆಧಾರದ ಮೇಲೆ ಸಿಗಲಿದೆ. ನೌಕರರಿಗೆ 26 ದಿನದ ವೇತನ ಸಿಗುತ್ತಿದೆ. ವನ್ಯಜೀವಿ ವಿಭಾಗದವರಿಗೆ ಕಷ್ಟಪರಿಹಾರ ಭತ್ಯೆ ₹2000 ನೀಡುವುದರಿಂದ ಅದು ಹೆಚ್ಚುವರಿಯಾಗಿ ಲಭಿಸಲಿದೆ.

ವೈಯಕ್ತಿಕ ಚೆಕ್‌ ಕೊಟ್ಟ ಆರ್‌ಎಫ್‌ಒ !

ಶ್ರೀರಂಗಪಟ್ಟಣದಲ್ಲಿ 2 ವರ್ಷದ ಹಿಂದೆ ವಲಯ ಅರಣ್ಯಾಧಿಕಾರಿಯೊಬ್ಬರು ಹೊರಗುತ್ತಿಗೆ ನೌಕರರಿಗೆ ವೈಯಕ್ತಿಕ ಚೆಕ್‌ನಿಂದ ಸಂಬಳ ನೀಡಿದ್ದರು. ಏಜೆನ್ಸಿ ಗುತ್ತಿಗೆ ಪಡೆದಿದ್ದರೂ ವಲಯ ಅರಣ್ಯಾಧಿಕಾರಿ ಚೆಕ್‌ ಹೇಗೆ ನೀಡಿದರು ಎನ್ನುವ ಕುರಿತು ತನಿಖೆಯಾಗಬೇಕು ಎಂದು ಹೊರಗುತ್ತಿಗೆ ನೌಕರರ ಸಂಘದವರು ಲೋಕಾಯುಕ್ತಕ್ಕೂ ದೂರು ನೀಡಿದ್ದರು. ಕ್ರಮಕ್ಕೆ ಕೋರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೂ ಮನವಿ ಸಲ್ಲಿಸಿದ್ದರು. ಯಾವುದೇ ಕ್ರಮವನ್ನು ಕೈಗೊಳ್ಳದೇ ಅರ್ಜಿ ಹಾಗೆಯೇ ಇದೆ ಎಂದು ನೌಕರರು ಆರೋಪಿಸುತ್ತಾರೆ.

ಲೋಕಾಯುಕ್ತ ಸ್ವಯಂ ಪ್ರೇರಿತ ಪ್ರಕರಣ

ಅರಣ್ಯ ಇಲಾಖೆ ನೌಕರರಿಗೆ ಏಜೆನ್ಸಿ ಮೂಲಕ ನೀಡುತ್ತಿರುವ ಸಂಬಳ, ಸೌಲಭ್ಯಗಳ ವಿಚಾರವಾಗಿ ಇರುವ ದೂರಿನ ವಿಚಾರಣೆಗೆ ಲೋಕಾಯುಕ್ತ ತನಿಖೆ ಚುರುಕುಗೊಳಿಸಿದೆ. 2019ರಲ್ಲಿ ದೂರು ದಾಖಲಿಸಿಕೊಂಡರೂ ಕ್ರಮ ಆಗಿರಲಿಲ್ಲ. ಅದೇ ಪ್ರಕರಣಕ್ಕೆ ಮರು ಜೀವ ನೀಡಲಾಗಿದೆ.

ಪಿಎಫ್‌ ಮೊತ್ತವನ್ನು ಕಡಿತ ಮಾಡಿದರೂ ನೌಕರರ ಖಾತೆಗೆ ಹಾಕದೇ ಇರುವುದು, ನಿಗದಿತ ವೇತನ ನೀಡದಿರುವ ದೂರುಗಳು ಬಂದಿರುವುರದಿಂದ ವಿಚಾರಣೆ ಆರಂಭಿಸಲಾಗಿದೆ. ಅರಣ್ಯ ಇಲಾಖೆ ವಿವಿಧ ವಿಭಾಗಗಳಿಂದ 2017ರಿಂದ ಏಜೆನ್ಸಿ ಮೂಲಕ ನೀಡಿರುವ ವೇತನ, ಸೌಲಭ್ಯದ ವಿವರವನ್ನು ಸಂಗ್ರಹ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಕೆಲವೆಡೆ ಸಮಸ್ಯೆ ಕಡಿಮೆ

ಭದ್ರಾ ವನ್ಯಜೀವಿ ವಿಭಾಗದಲ್ಲಿ ಲಕ್ಕವಳ್ಳಿ ಮತ್ತು ಮುತ್ತೋಡಿ ಸೇರಿ ಎರಡು ಕಡೆ ಸಫಾರಿ ಇದೆ. ಅಲ್ಲಿ ಬರುವ ವರಮಾನದಿಂದ ಚಾಲಕರು ಮತ್ತು ಎಪಿಸಿ ಸಿಬ್ಬಂದಿಗೆ ವೇತನ ನೀಡಲಾಗುತ್ತಿದೆ. ಬಂಡೀಪುರದಲ್ಲೂ ಅರಣ್ಯ ಇಲಾಖೆಯ ಹುಲಿ ಸಂರಕ್ಷಣಾ ಫೌಂಡೇಷನ್‌ನಿಂದ ವೇತನ ನೀಡುವುದರಿಂದ ಇಲ್ಲಿ ಏಜೆನ್ಸಿಗಳ ಕಿರಿಕಿರಿ ಇಲ್ಲ. ಅಣಶಿ–ದಾಂಡೇಲಿ ಹುಲಿಧಾಮದಲ್ಲೂ ಇದೇ ರೀತಿ ಇದೆ. ಇದರಿಂದ ಅಷ್ಟಾಗಿ ವೇತನ ಸಮಸ್ಯೆ ಕಾಣಿಸುತ್ತಿಲ್ಲ.

‘ಹಿಂದೆ ಸಫಾರಿಯಿಂದ ಬರುತ್ತಿದ್ದ ಆದಾಯ ಬಳಕೆ ಮಾಡಿಕೊಳ್ಳಲಾಗುತ್ತಿತ್ತು. ಈಗ ಆದಾಯ ನಿಂತಿದ್ದರೂ ವೇತನ ಪಾವತಿಗೆ ಸಮಸ್ಯೆಯಾಗಿಲ್ಲ. ನೌಕರರ ಸಂಘ ಹಾಗೂ ಫೌಂಡೇಷನ್‌ ಮೂಲಕ ಸಕಾಲಕ್ಕೆ ವೇತನ ಪಾವತಿಸಲಾಗುತ್ತಿದೆ’ ಎಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ನಿರ್ದೇಶಕ ಪ್ರಭಾಕರನ್‌ ತಿಳಿಸಿದ್ದಾರೆ.

ಪೂರ್ಣ ಈಡೇರದ ಭರವಸೆ

ವನ್ಯಜೀವಿ ವಿಭಾಗದಲ್ಲಿ ಕೆಲಸ ಮಾಡುವ ನೌಕರರಿಗೆ ಮಾಸಿಕ ₹2000‌ ಕಷ್ಟ ಪರಿಹಾರ ಭತ್ಯೆ ನೀಡುವುದಾಗಿ ಅರಣ್ಯ ಸಚಿವ ಈಶ್ವರ ಖಂಡ್ರೆ ಘೋಷಿಸಿದ್ದರು. ಅದು ಸಮರ್ಪಕವಾಗಿ ಸಿಗುತ್ತಿಲ್ಲ. ಕೆಲವು ಕಡೆಗಳಲ್ಲಿ ಎಂಟು ತಿಂಗಳು ಬಂದರೆ ಇನ್ನು ಕೆಲವು ಕಡೆಗಳಲ್ಲಿ ದೊರೆಯುತ್ತಿಲ್ಲ.

ಸಿಎಂ ಕಾನೂನು ಸಲಹೆಗಾರ, ಶಾಸಕ ಎ.ಎಸ್‌.ಪೊನ್ನಣ್ಣ ಅವರ ಪ್ರಯತ್ನದಿಂದ ಸರ್ಕಾರದ ಹಂತದಲ್ಲಿ ಪ್ರಯತ್ನಗಳು ಆಗಿವೆ. ಆದರೆ ನಮ್ಮ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ
ಹರೀಶ್‌, ಉಪಾಧ್ಯಕ್ಷ ಹೊರಗುತ್ತಿಗೆ ನೌಕರರ ಸಂಘ ಮಡಿಕೇರಿ
ಮುಂಚೂಣಿ ಸಿಬ್ಬಂದಿ ವನ್ಯಜೀವಿ ಹಾಗೂ ಅರಣ್ಯ ಸಂಪತ್ತು ಸಂರಕ್ಷಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ದುರ್ಗಮ ಪರಿಸ್ಥಿತಿಯಲ್ಲೂ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ಸಕಾಲದಲ್ಲಿ ವೇತನ, ಪಿಎಫ್‌, ಇಎಸ್‌ಐ ಸೌಲಭ್ಯಗಳು ಸಿಗಬೇಕು.
ಗಿರಿಧರ ಕುಲಕರ್ಣಿ, ವನ್ಯಜೀವಿ ಸಂರಕ್ಷಣಾವಾದಿ
ಅರಣ್ಯ ಇಲಾಖೆಯ ಅರಣ್ಯ ರಕ್ಷಕ ಸಹಿತ 4 ಸಾವಿರ ಹುದ್ದೆ ಸೇರಿ 6 ಸಾವಿರ ಹುದ್ದೆ ಖಾಲಿ ಇವೆ. ಹೊರಗುತ್ತಿಗೆ ಆಧಾರದಲ್ಲಿ 3800 ನೌಕರರು ಕೆಲಸ ಮಾಡುತ್ತಿದ್ದಾರೆ. ವೇತನ, ಸೌಲಭ್ಯ ವಿಚಾರದಲ್ಲಿ ದೂರುಗಳಿದ್ದು, ನೋಟಿಸ್‌ ನೀಡಿ ಕ್ರಮ ವಹಿಸಲಾಗುತ್ತಿದೆ
ಕುಮಾರ ಪುಷ್ಕರ್‌, ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ( ಆಡಳಿತ, ಸಮನ್ವಯ)‌.
ಮುಂಚೂಣಿ ಹೊರಗುತ್ತಿಗೆ ಸಿಬ್ಬಂದಿಯ ಪಾತ್ರವೂ ಮಹತ್ವದ್ದಾಗಿದೆ. ಹೀಗಾಗಿ ಹೊರಗುತ್ತಿಗೆ ಸಿಬ್ಬಂದಿಗೂ ₹20 ಲಕ್ಷ ವಿಮೆ ಸೌಲಭ್ಯ ಕಲ್ಪಿಸಲು ಬ್ಯಾಂಕ್ ಆಫ್ ಬರೋಡಾದೊಂದಿಗೆ ತಿಳಿವಳಿಕೆ ಒಪ್ಪಂದ ಮಾಡಿಕೊಳ್ಳಲಾಗಿದೆ
ಈಶ್ವರ ಖಂಡ್ರೆ, ಅರಣ್ಯ ಸಚಿವ

‍ಪರಿಕಲ್ಪನೆ: ಯತೀಶ್‌ಕುಮಾರ್‌ ಜಿ.ಡಿ

ಪೂರಕ ಮಾಹಿತಿ: ಎಸ್‌.ಕೆ.ವಿಜಯಕುಮಾರ್‌(ಚಿಕ್ಕಮಗಳೂರು), ಗಣಪತಿ ಹೆಗಡೆ (ಕಾರವಾರ), ಬಾಲಚಂದ್ರ (ಚಾಮರಾಜನಗರ), ಶಿವಪ್ರಸಾದ್‌ ರೈ (ಮೈಸೂರು),ಬಷೀರಅಹ್ಮದ್‌ ನಗಾರಿ(ಕಲಬುರಗಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.