ADVERTISEMENT

ಒಳನೋಟ | ಕಾಣದ ಕೈ: ಕಾಡುವ ಡ್ರಗ್ಸ್‌

ಮೈಸೂರಿನಲ್ಲಿ ಪತ್ತೆಯಾದ ಡ್ರಗ್ಸ್‌ ಫ್ಯಾಕ್ಟರಿ: ಹಲವು ಜಿಲ್ಲೆಗಳಲ್ಲೂ ಜಾಲ

ಶಿವಪ್ರಸಾದ್ ರೈ
Published 21 ಫೆಬ್ರುವರಿ 2026, 22:30 IST
Last Updated 21 ಫೆಬ್ರುವರಿ 2026, 22:30 IST
ದೆಹಲಿಯ ಎನ್‌ಸಿಬಿ ತಂಡ ದಾಳಿ ನಡೆಸಿದ ಹೆಬ್ಬಾಳದ ಕೈಗಾರಿಕಾ ಪ್ರದೇಶದಲ್ಲಿರುವ ‘ಟುಕ್‌– ಟುಕ್‌ ಹೌಸ್‌ ಹೋಲ್ಡ್‌ ಕೆಮಿಕಲ್ಸ್‌ ಪ್ರೊಡಕ್ಷನ್‌ ಸಲ್ಯೂಷನ್‌ ಮ್ಯಾನಿಫ್ಯಾಕ್ಚರಿಂಗ್‌’ ಹೆಸರಿನ ಘಟಕ
ದೆಹಲಿಯ ಎನ್‌ಸಿಬಿ ತಂಡ ದಾಳಿ ನಡೆಸಿದ ಹೆಬ್ಬಾಳದ ಕೈಗಾರಿಕಾ ಪ್ರದೇಶದಲ್ಲಿರುವ ‘ಟುಕ್‌– ಟುಕ್‌ ಹೌಸ್‌ ಹೋಲ್ಡ್‌ ಕೆಮಿಕಲ್ಸ್‌ ಪ್ರೊಡಕ್ಷನ್‌ ಸಲ್ಯೂಷನ್‌ ಮ್ಯಾನಿಫ್ಯಾಕ್ಚರಿಂಗ್‌’ ಹೆಸರಿನ ಘಟಕ   

ಮೈಸೂರು; ‘ಹತ್ತು ವರ್ಷಗಳ ಹಿಂದೆ ಮೈಸೂರು ಜಿಲ್ಲೆಯ ಕಾಡಂಚಿನ ಪ್ರದೇಶದಲ್ಲಿ ಕೆಲವರು ಸಾಮಾನ್ಯ ಬೆಳೆಗಳ ಜೊತೆಗೆ ಗಾಂಜಾ ಬೆಳೆಯುತ್ತಿದ್ದರು. ನಗರ ಪ್ರದೇಶಕ್ಕೆ ಮಾರಲು ತಂದಾಗ ಸಿಕ್ಕಿಹಾಕಿಕೊಳ್ಳುತ್ತಿದ್ದರು. ಮಾದಕ ವಸ್ತು ವ್ಯವಹಾರ ಜಿಲ್ಲೆಯೊಳಗೆ ಇದ್ದ ಕಾರಣ ಮೂಲ ಪತ್ತೆಹಚ್ಚುವುದು ಸುಲಭವಾಗುತ್ತಿತ್ತು. ಆದರೆ ಈಚೆಗೆ ಸಿಂಥೆಟಿಕ್‌ ಡ್ರಗ್ಸ್‌ ಉತ್ಪಾದನಾ ಘಟಕ ನಗರ ಪ್ರದೇಶದಲ್ಲಿ ಪತ್ತೆಯಾಗುತ್ತಿರುವುದು ಆಘಾತಕಾರಿ, ಇದು ಯುವಜನರ ಮೇಲಷ್ಟೇ ಅಲ್ಲದೆ, ಜನ ಸಾಮಾನ್ಯರ ಜೀವನದ ಮೇಲೂ ಕೆಟ್ಟ ಪ್ರಭಾವ ಬೀರಲಿದೆ..’

ನಿವೃತ್ತ ಎಸ್‌ಪಿ ಶಂಕರೇಗೌಡರು ಏಕಕಾಲಕ್ಕೆ ನೆನಪು ಮತ್ತು ವಾಸ್ತವವನ್ನು ತೆರೆದಿಟ್ಟರು. 

ಮೈಸೂರು ನಗರದ ಹೊರವಲಯದಲ್ಲಿ ಎಂಡಿಎಂಎ ಉತ್ಪಾದನಾ ಘಟಕವನ್ನು ಹೊರರಾಜ್ಯದ ಪೊಲೀಸರು ಪತ್ತೆ ಮಾಡಿದ ಬಳಿಕ ಇಂತಹ ಹಲವು ಮಾತುಗಳು ಪೊಲೀಸ್ ಅಧಿಕಾರಿಗಳ ವಲಯದಲ್ಲಿ ಕೇಳಿಬರುತ್ತಿವೆ.

ADVERTISEMENT

ಈ ಭಾಗದಲ್ಲಿ ಹಿಂದೆ ಗಾಂಜಾ ಬಳಕೆ ಹೆಚ್ಚಿತ್ತು. ಕಾಡು ಪ್ರದೇಶ, ಗ್ರಾಮೀಣ ಭಾಗದಲ್ಲಿ ಬೆಳೆಗಳ ನಡುವೆ ಗಾಂಜಾ ಬೆಳೆಸುವವರು ಪತ್ತೆಯಾಗುತ್ತಿದ್ದರು. ಆದರೆ ಈಚೆಗೆ ಬೆಂಗಳೂರನ್ನು ಮಾರಾಟದ ಕೇಂದ್ರವಾಗಿಟ್ಟುಕೊಂಡು, ಮೈಸೂರಿನಲ್ಲಿ ಸಿಂಥೆಟಿಕ್‌ ಡ್ರಗ್ಸ್‌ ಉತ್ಪಾದನಾ ಪ್ರಯತ್ನ ನಡೆದಿರುವುದು, ಇತರೆ ಜಿಲ್ಲೆಗಳಿಗೂ ಡ್ರಗ್ಸ್‌ ಭೀತಿ ಹಬ್ಬುವಂತೆ ಮಾಡಿದೆ.

ಇದು ಸಹಜವಾಗಿ ಸ್ಥಳೀಯ ಪೊಲೀಸ್‌ ವ್ಯವಸ್ಥೆ, ಆಡಳಿತದ ಮೇಲೆ ಕಪ್ಪು ಚುಕ್ಕೆ ಮೂಡಿಸಿದ್ದು, ನಿಯಂತ್ರಣದ ಸತತ ಪ್ರಯತ್ನದ ಬಳಿಕವೂ ಡ್ರಗ್ಸ್‌ ಉತ್ಪಾದನಾ ಘಟಕ ಪತ್ತೆಯಂಥ ಘಟನೆಗಳು ಗೃಹ ಇಲಾಖೆಗೂ ತಲೆ ನೋವಾಗಿ ಪರಿಣಮಿಸಿವೆ. 

ಬನ್ನಿಮಂಟಪದ ವರ್ತುಲ ರಸ್ತೆಯ ಉನ್ನತಿ ನಗರದ ಗ್ಯಾರೇಜ್‌ನಲ್ಲಿ ತಂಡವೊಂದು ಗುಪ್ತವಾಗಿ ನಡೆಸುತ್ತಿದ್ದ ಎಂಡಿಎಂಎ ಘಟಕಕ್ಕೆ ಮಹಾರಾಷ್ಟ್ರ ಪೊಲೀಸರು ದಾಳಿ ನಡೆಸಿ 10 ಕೆ.ಜಿ ಎಂಡಿಎಂಎ ಮತ್ತು ದ್ರವರೂಪದಲ್ಲಿ ಸಂಸ್ಕರಣೆಯಾಗುತ್ತಿದ್ದ 50 ಕೆ.ಜಿಯಷ್ಟು ಎಂಡಿಎಂಎ ಮಾದಕ ವಸ್ತುವನ್ನು ವಶಕ್ಕೆ ಪಡೆದಿದ್ದರು. 

ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ‘ಟುಕ್‌– ಟುಕ್‌ ಹೌಸ್‌ ಹೋಲ್ಡ್‌ ಕೆಮಿಕಲ್ಸ್‌ ಪ್ರೊಡಕ್ಷನ್‌ ಸಲ್ಯೂಷನ್‌ ಮ್ಯಾನಿಫ್ಯಾಕ್ಚರಿಂಗ್‌’ ಹೆಸರಿನ ಘಟಕದ ಮೇಲೆ ದೆಹಲಿಯ ಎನ್‌ಸಿಬಿ ತಂಡ ದಾಳಿ ನಡೆಸಿದಾಗ ಡ್ರಗ್ಸ್‌ ಉತ್ಪಾದಿಸುವ ಸುಸಜ್ಜಿತ ಪ್ರಯೋಗಾಲಯ ಪತ್ತೆಯಾಗಿದ್ದು, ಗಣಪತ್‌ ಲಾಲ್‌ ಎಂಬಾತ ಫಿನಾಯಿಲ್‌ ತಯಾರಿಕಾ ಘಟಕ ಸ್ಥಾಪಿಸಲು ಕಟ್ಟಡ ಬಾಡಿಗೆ ಪಡೆದಿದ್ದ ಆತನ ಸಂಬಂಧಿ ಮನೋಹರ್‌ ಬಿಷ್ಣೋಯಿ ಸೂರತ್‌ನಲ್ಲಿ ಡ್ರಗ್ಸ್‌ ಮಾರಾಟ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಎಂದು ತಂಡವು ತಿಳಿಸಿದೆ.

ಇದರ ಬೆನ್ನಲ್ಲೇ, ಮೈಸೂರು ಜಿಲ್ಲಾ ಪೊಲೀಸರು ಯಾಂದಳ್ಳಿಯಲ್ಲಿರುವ ಗಣಪತ್‌ಲಾಲ್‌ ಬಾಡಿಗೆಗೆ ಪ‍ಡೆದಿರುವ ಮನೆಗೆ ದಾಳಿ ನಡೆಸಿದ್ದು, ಅಲ್ಲಿ ಸಂಶಯಾಸ್ಪದ ರಾಸಾಯನಿಕ ದ್ರವ್ಯ ಪತ್ತೆಯಾಗಿದ್ದವು. ಈ ಮೂರು ಪ್ರಕರಣಗಳಲ್ಲೂ ಹೊರರಾಜ್ಯದವರೇ ಆರೋಪಿಗಳಾಗಿದ್ದು, ಮೈಸೂರಿನಲ್ಲಿ ಡ್ರಗ್ಸ್‌ ಉತ್ಪಾದಿಸಿ ಹೊರರಾಜ್ಯದ ಮಾರುಕಟ್ಟೆಗೆ ಪೂರೈಸುವ ಕೆಲಸ ಮಾಡುತ್ತಿದ್ದರು. ಎಲ್ಲಾ ಪ್ರಕರಣಗಳನ್ನು ಪತ್ತೆ ಮಾಡಿದ್ದು ಹೊರ ರಾಜ್ಯದ ಪೊಲೀಸರು ಎನ್ನುವುದು ಗಮನಾರ್ಹ. ಇದು ಸ್ಥಳೀಯ ಪೊಲೀಸರ ಮೇಲೆ ಕಪ್ಪುಚುಕ್ಕೆ ಮೂಡಿಸಿದೆ.

‘ಡ್ರಗ್ಸ್‌ ಮಾರಾಟ ಮಾಡಲು ಆರೋಪಿಗಳಿಗೆ ರಾಜ್ಯದ ರಾಜಧಾನಿ ಬೆಂಗಳೂರೇ ಗುರಿಯಾಗಿದ್ದು, ಡ್ರಗ್ಸ್‌ ತಯಾರಿಸಲು ಮೈಸೂರೇ ಪ್ರಶಸ್ತ ಸ್ಥಳವೆಂದು ಕಂಡುಕೊಂಡು, ಯಾವ ತಪಾಸಣೆಯೂ ನಡೆಯದ ಮೈಸೂರು–ಬೆಂಗಳೂರು ಹೆದ್ದಾರಿಯೇ ಡ್ರಗ್ಸ್‌ ಸಾಗಿಸಲು ಅವರಿಗೆ ಸುಲಭ ಮಾರ್ಗವಾಗಿತ್ತು’ ಎಂಬುದು ತನಿಖೆಯ ವೇಳೆ ಗೊತ್ತಾಗಿತ್ತು. ಹೀಗಾಗಿ ಹೆಚ್ಚು ತಪಾಸಣೆ ನಡೆಯದ ಕೈಗಾರಿಕಾ ಪ್ರದೇಶವನ್ನು ಆಯ್ಕೆ ಮಾಡಿಕೊಂಡಿದ್ದರು.

‘ಈ ಎಲ್ಲಾ ಘಟಕಗಳು ನಗರದ ಕೇಂದ್ರ ಭಾಗದಿಂದ ಸರಾಸರಿ 15 ಕಿ.ಮೀ ದೂರದಲ್ಲಿದೆ. ಅಲ್ಲಿಂದ ವರ್ತುಲ ರಸ್ತೆಯ ಮೂಲಕ ಬೆಂಗಳೂರು ಸಂಪರ್ಕಿಸಲು ಅನುಕೂಲವಾಗುವಂತೆ ಘಟಕ ಸ್ಥಾಪಿಸಿಕೊಂಡಿದ್ದಾರೆ. ಜನವಸತಿಯು ಕಡಿಮೆ ಇರುವುದರಿಂದ ಜನರಿಗೂ ಸಂಶಯ ಬರುವುದಿಲ್ಲ. ವ್ಯವಹಾರ ಹೊರರಾಜ್ಯದಲ್ಲಿರುವುದರಿಂದ ಸ್ಥಳೀಯ ಪೊಲೀಸರಿಗೂ ಮಾಹಿತಿ ದೊರಕುತ್ತಿರಲಿಲ್ಲ’ ಎಂಬುದು ಪೊಲೀಸರ ಅಭಿಪ್ರಾಯ.

ಅಸಲಿಗೆ ಈ ವಿಚಾರಗಳೆಲ್ಲವೂ ಹೌದು. ಆದರೆ ಬೆಳೆಯುತ್ತಿರುವ ಮೈಸೂರು ನಗರಕ್ಕೆ ಪ್ರಥಮ ಬಾರಿ ಈ ರೀತಿಯ ಕಳಂಕ ಬಂದಿರುವುದರಲ್ಲಿ ಪೊಲೀಸರ ನಿರ್ಲಕ್ಷ್ಯವೂ ಇದೆ. ಘಟಕ ಪತ್ತೆಯಾದ ಬಳಿಕದ ಪೊಲೀಸರ ಗೊಂದಲಕಾರಿ ಹೇಳಿಕೆಗಳು ಮೈಸೂರಿನ ಜನರನ್ನು ಆತಂಕಕ್ಕೂ ದೂಡಿವೆ.

ಉನ್ನತಿ ನಗರದ ಘಟಕಕ್ಕೆ ದಾಳಿ ನಡೆಸಿದ ಮುಂಬೈ ಪೊಲೀಸರು ₹ 390 ಕೋಟಿ ಮೌಲ್ಯದ ಎಂಡಿಎಂಎ ಡ್ರಗ್ಸ್ ತಯಾರಿಕಾ ಘಟಕವನ್ನು ಪತ್ತೆ ಹಚ್ಚಲಾಗಿದೆ ಎಂದು ಹೇಳಿಕೆ ನೀಡಿದ್ದರು. ಆದರೆ ಮೈಸೂರು ನಗರ ಪೊಲೀಸ್‌ ಆಯುಕ್ತರು ಇದನ್ನು ಅಲ್ಲಗಳೆದಿದ್ದು, ದ್ರವ ರೂಪದ ವಸ್ತುಗಳಷ್ಟೇ ಸಿಕ್ಕಿತ್ತು ಎಂದಿದ್ದರು. ಈಚೆಗೆ ಎನ್‌ಸಿಬಿ ದಾಳಿ ನಡೆಸಿ, ಪ್ರಯೋಗಾಲಯ ಪತ್ತೆ ಹಚ್ಚಲಾಗಿದೆ ಎಂದು ಪತ್ರಿಕಾ ಪ್ರಕಟಣೆ ಹೊರಡಿಸಿತ್ತು. ಪೊಲೀಸ್‌ ಆಯುಕ್ತರು ಅದನ್ನೂ ನಿರಾಕರಿಸಿದ್ದು, ಗೃಹಸಚಿವರೂ ಅದೇ ನಿಲುವನ್ನು ಪುನರುಚ್ಚರಿಸಿದ್ದಾರೆ.

ಪ್ರಯೋಗಾಲಯವು ಪತ್ತೆಯಾಗಿಲ್ಲ ಎನ್ನುವುದೇ ನಿಜವಾದರೆ, ಅದನ್ನು ನಿರೂಪಿಸಿ, ಜನರಲ್ಲಿ ಮೂಡಿರುವ ಆತಂಕ ನಿವಾರಿಸುವ ಪ್ರಯತ್ನ ನಡೆಯಬೇಕಿತ್ತು. ಆದರೆ ಅದಾಗಿಲ್ಲ. ಮುಂಬೈ ಪೊಲೀಸರ ದಾಳಿಯ ನಂತರ ಮಾದಕ ವಸ್ತು ಮಾರಾಟ ಹಾಗೂ ಸೇವನೆ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ ಕೈಗಾರಿಕೆಗಳಲ್ಲಿ ಪೂರ್ಣ ಪ್ರಮಾಣದ ಪರಿಶೀಲನೆ ನಡೆದಿರಲಿಲ್ಲ. ಎನ್‌ಸಿಬಿ ತಂಡದ ದಾಳಿಯ ಬಳಿಕ ಶ್ವಾನ ದಳದೊಂದಿಗೆ ಪರಿಶೀಲನೆ ನಡೆಸಲಾಗುತ್ತಿದೆ. ಸಿಸಿಬಿಯ ಅಧಿಕಾರಿ, ಸಿಬ್ಬಂದಿಗಳ ಅಮಾನತು ಮಾಡಲಾಗಿದೆ. ಈ ಎಲ್ಲಾ ಬೆಳವಣಿಗೆಗಳು ಪೊಲೀಸರ ಕಾರ್ಯಚಟುವಟಿಕೆಗಳ ಮೇಲೆ ಸಾರ್ವಜನಿಕರು ಸಂಶಯ ಪಡುವಂತೆ ಮಾಡುತ್ತಿದೆ.

‘ಎನ್‌ಸಿಬಿಯು ಪ್ರಕಟಣೆ ನೀಡುವ ಮೊದಲೇ, ನಗರ ಪೊಲೀಸ್‌ ಆಯುಕ್ತರು ಹೇಳಿಕೆ ನೀಡಿರುವುದು ಸಂಶಯಕ್ಕೆ ಕಾರಣವಾಗಿದೆ. ಪೊಲೀಸರೇ ಇಂತಹ ಪ್ರಕರಣಕ್ಕೆ ಬೆಂಬಲ ನೀಡಿ, ಸತ್ಯ ಮರೆಮಾಚುತ್ತಿದ್ದಾರೆಯೇ ಎಂಬ ಅನುಮಾನ ಮೂಡುತ್ತಿದೆ’ ಎಂದು ಮೈಸೂರು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಸ್ಥಳೀಯ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಹೇಳಿಕೆಯನ್ನೂ ಇದೇ ಹಿನ್ನೆಲೆಯಲ್ಲಿ ನೋಡಬೇಕಾಗಿದೆ. 

ವಿದ್ಯಾರ್ಥಿಗಳೇ ಗುರಿ: ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಮಾದಕ ವ್ಯಸನದ ಬೇರು ಹಬ್ಬಿದೆ. ಗಾಂಜಾ, ಸಿಂಥೆಟಿಕ್‌ ಡ್ರಗ್ಸ್‌ಗಳನ್ನು ಮಾರುವವರು ಕಾಲೇಜು ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡಿದ್ದಾರೆ. 

‘ವೈದ್ಯಕೀಯ, ಅರೆ ವೈದ್ಯಕೀಯ ಮತ್ತು ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಶ್ರೀಮಂತ ವಿದ್ಯಾರ್ಥಿಗಳಲ್ಲಷ್ಟೇ ಕಾಣಸಿಗುತ್ತಿದ್ದ ಎಂಡಿಎಂಎ ಮುಂತಾದ ಸಿಂಥೆಟಿಕ್‌ ಡ್ರಗ್ಸ್‌ಗಳು ಪದವಿ ವಿದ್ಯಾರ್ಥಿಗಳಿಗೂ ಯಥೇಚ್ಛವಾಗಿ ಸಿಗುತ್ತಿವೆ. ಜಾಗೃತಿ ಮೂಡಿಸುವ ಪ್ರಯತ್ನವೂ ಯಶಸ್ಸು ನೀಡಿಲ್ಲ’ ಎಂದು ಪೊಲೀಸ್‌ ಮೂಲಗಳು ತಿಳಿಸುತ್ತವೆ.

ಶಿಕ್ಷಣ ಕಾಶಿ ಎಂದು ಹೆಸರಾಗಿದ್ದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು, ಈಚಿನ ವರ್ಷಗಳಲ್ಲಿ ಡ್ರಗ್ಸ್‌ ಹಾವಳಿಯ ಕಾರಣಕ್ಕೂ ಕುಖ್ಯಾತಿಯನ್ನೂ ಪಡೆಯುತ್ತಿವೆ. ಇಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿ ಮಾದಕ ಪದಾರ್ಥಗಳ ಹಾವಳಿ ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ. 2025ರಲ್ಲಿ ಒಟ್ಟು 5,632 ವಿದ್ಯಾರ್ಥಿಗಳನ್ನು ತಪಾಸಣೆಗೆ ಒಳಪಡಿಸಲಾಗಿದ್ದು ಅವರಲ್ಲಿ 20 ವಿದ್ಯಾರ್ಥಿಗಳು ಮಾದಕ ಪದಾರ್ಥ ಸೇವಿಸಿದ್ದುದು ಪತ್ತೆಯಾಗಿತ್ತು.

‘ಬೆಳಗಾವಿ, ಹಾವೇರಿ, ವಿಜಯನಗರ, ಉತ್ತರ ಕನ್ನಡ ಜಿಲ್ಲೆಗಳಲ್ಲೂ ಕಾಲೇಜು ವಿದ್ಯಾರ್ಥಿಗಳು ಗಾಂಜಾ ಸೇವನೆ ಮಾಡುತ್ತಾರೆ’ ಎಂಬ ಮಾತು ಸಾರ್ವಜನಿಕವಾಗಿ ಕೇಳಿ ಬರುತ್ತಿದೆ. ಮೈಸೂರಿನಲ್ಲಿ ಹೊರ ಜಿಲ್ಲೆ, ರಾಜ್ಯದಿಂದ ಬಂದ ವಿದ್ಯಾರ್ಥಿಗಳು ಮಾದಕ ವ್ಯಸನಕ್ಕೆ ಒಳಗಾಗಿದ್ದು, ಪಿ.ಜಿ (ಪೇಯಿಂಗ್‌ ಗೆಸ್ಟ್‌), ಹಾಸ್ಟೆಲ್‌ ಪಾರ್ಟಿಗಳಲ್ಲಿ ಬಳಕೆಯಲ್ಲಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಪೊಲೀಸರು ಪರಿಶೀಲಿಸಿದಾಗ ಡ್ರಗ್ಸ್‌ ಪತ್ತೆಯಾಗಿಲ್ಲ.

‘ವಿದ್ಯಾರ್ಥಿಗಳು ಡ್ರಗ್ಸ್‌ ಸೇವನೆಯಿಂದ ಮಾನಸಿಕ ಕಾಯಿಲೆಗೆ ಒಳಗಾಗುತ್ತಿದ್ದಾರೆ. ಖಿನ್ನತೆ ಹೆಚ್ಚುತ್ತಿದೆ. ಹಣ ಇರುವವರೆಗೆ ಡ್ರಗ್ಸ್‌ ಕೊಂಡುಕೊಳ್ಳುತ್ತಾರೆ, ನಂತರ ಹಣಕ್ಕಾಗಿ ಅಪರಾಧ ಕೃತ್ಯಗಳಲ್ಲಿ ಭಾಗವಹಿಸುವ ಪ್ರಕರಣ ಹೆಚ್ಚಾಗಿ ಕಂಡು ಬರುತ್ತದೆ. ಬಾಲಾಪರಾಧಿ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆಯಡಿ ವಾರಕ್ಕೆ ಒಂದು ಪ್ರಕರಣ ಇರುತ್ತಿತ್ತು. ಆದರೆ ಈಚೆಗೆ ದಿನಕ್ಕೆ 3– 4 ಪ್ರಕರಣ ಬರುತ್ತಿವೆ’ ಎಂದು ಮೈಸೂರು ವೈದ್ಯಕೀಯ ವಿದ್ಯಾಲಯದ ಮನೋವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಬಿ.ಎನ್‌.ರವೀಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಡ್ರಗ್ಸ್‌ ಸೇವಿಸಿ ಅಪರಾಧ ಕೃತ್ಯಗಳಲ್ಲಿ ಭಾಗವಹಿಸಿದ ಅನೇಕ ಘಟನೆಗಳು ರಾಜ್ಯದಲ್ಲಿ ವರದಿಯಾಗಿವೆ. ಮೈಸೂರಿನ ವಸ್ತುಪ್ರದರ್ಶನ ಮೈದಾನದ ಬಳಿ ಬಲೂನ್‌ ಮಾರಲು ಬಂದಿದ್ದ ಬಾಲಕಿಯನ್ನು ಅಪಹರಣ ಮಾಡಿ ಅತ್ಯಾಚಾರ ಮಾಡಿ, ಕೊಂದಿದ್ದ ಆರೋಪಿ ಮಾದಕ ವ್ಯಸನಿಯಾಗಿದ್ದ, ಕೊಲೆ ಪ್ರಕರಣದ ಆರೋಪಿಗಳು ಡ್ರಗ್ಸ್‌ ಸೇವಿಸುವ ಬೆಳವಣಿಗೆಗಳನ್ನು ಪೊಲೀಸರು ಗಮನಿಸಿದ್ದಾರೆ. ಹೀಗಾಗಿ ಮಾದಕ ವ್ಯಸನವು ಪರೋಕ್ಷವಾಗಿ ಕಾನೂನು ಮತ್ತು ಸುವ್ಯವಸ್ಥೆಗೂ ತೊಂದರೆ ನೀಡುತ್ತಿದೆ. 

ಪ್ರವಾಸಿ ತಾಣಗಳಲ್ಲೇ ಹೆಚ್ಚು: 

ಡ್ರಗ್‌ ಪೆಡ್ಲರ್‌ಗಳು ಪ್ರವಾಸೋದ್ಯಮ ಹೆಚ್ಚಿರುವ ಜಿಲ್ಲೆಗಳನ್ನೂ ಗುರಿಯಾಗಿಸಿರುವುದು ಕೆಲವು ಪ್ರಕರಣಗಳಿಂದ ತಿಳಿದು ಬರುತ್ತದೆ. ಐಷಾರಾಮಿ ರೆಸಾರ್ಟ್‌, ಕಾಲೇಜು ಕ್ಯಾಂಪಸ್‌ಗಳು, ಡಾಬಾಗಳು, ಪಬ್‌ಗಳಲ್ಲಿ ಡ್ರಗ್ಸ್‌ ಬಳಕೆಯಾಗಿದೆ.

ಮೈಸೂರು ತಾಲ್ಲೂಕಿನ ಮೀನಾಕ್ಷಿಪುರದ ಕೆಆರ್‌ಎಸ್ ಹಿನ್ನೀರಿನಲ್ಲಿ ನಡೆದ ರೇವ್ ಪಾರ್ಟಿ ಪ್ರಕರಣದಲ್ಲಿ ಯಥೇಚ್ಚವಾಗಿ ಡ್ರಗ್ಸ್‌ ಬಳಕೆಯಾಗಿತ್ತು. ಅಲ್ಲಿ ವಶಕ್ಕೆ ಪಡೆದ 64 ಮಂದಿಯಲ್ಲಿ ಬಹುತೇಕರು ಹೊರ ಜಿಲ್ಲೆ, ರಾಜ್ಯಗಳ ಪ್ರವಾಸಿಗರಾಗಿದ್ದರು. ಮೈಸೂರು, ಕೊಡಗಿನಲ್ಲೂ ಪ್ರವಾಸಿಗರಿಗಾಗಿ ಗಾಂಜಾ, ಡ್ರಗ್ಸ್‌ ಪೂರೈಸಲಾಗುತ್ತಿದೆ ಎನ್ನಲಾಗಿದೆ. 

ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡ ಬೆಳಗಾವಿಯಲ್ಲಿ ಡ್ರಗ್ಸ್ ಸೇವನೆ ಹಾಗೂ ಸರಬರಾಜು ನಿರಂತರವಾಗಿದೆ. ಈ ಎರಡೂ ರಾಜ್ಯಗಳು ಪ್ರವಾಸೋದ್ಯಮಕ್ಕೆ ಹೆಸರಾಗಿವೆ. ದೇಶದ ಬೇರೆ ಬೇರೆ ಭಾಗಗಳಿಂದ ಪ್ರವಾಸಿಗರ ನೆಪದಲ್ಲಿ ಬರುವ ಕೆಲವರು ಈ ಡ್ರಗ್ಸ್‌ ದಂಧೆ ನಡೆಸಿದ್ದಾರೆ. ಗೋವಾ ರಾಜ್ಯದಿಂದ ವ್ಯಾಪಕ ಪ್ರಮಾಣದಲ್ಲಿ ಕಾರವಾರ, ಗೋಕರ್ಣ, ದಾಂಡೇಲಿ ಭಾಗಕ್ಕೆ ಗಾಂಜಾ ಪೂರೈಕೆ ಆಗುತ್ತಿದೆ.

‘ಚರಸ್‌, ಕೊಕೇನ್‌, ಅಫೀಮ್‌ನಂಥ ಮಾದಕ ವಸ್ತುಗಳು ಗೋವಾಗೆ ರವಾನೆಯಾಗುತ್ತವೆ. ಗೋವಾದ ಬೀಚ್‌ಗಳಿಗೆ ಬರುವ ಪ್ರವಾಸಿಗರೇ ಗ್ರಾಹಕರು. ಹೀಗೆ ಅಂತರ ರಾಜ್ಯಗಳಿಗೆ ಸರಬರಾಜು ಮಾಡುವವರೇ ಬೆಳಗಾವಿಯಲ್ಲಿಯೂ ಏಜೆಂಟರ ಮೂಲಕ ವ್ಯಾಪಾರ ಮಾಡುತ್ತಾರೆ.  ಹೀಗಾಗಿ, ಅದನ್ನು ಪತ್ತೆ ಮಾಡುವುದು ಸವಾಲಾಗಿದೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಸಾಣಾಪುರ, ಆನೆಗೊಂದಿ, ಕೊಪ್ಪಳ ತಾಲ್ಲೂಕಿನ ಬಸಾಪುರ ಭಾಗದಲ್ಲಿ ನೂರಾರು ಐಷಾರಾಮಿ ರೆಸಾರ್ಟ್‌ಗಳಿದ್ದು, ಅಲ್ಲಿ ದೇಶದ ವಿವಿಧ ಸಿನಿಮಾ ತಾರೆಯರು ಬಂದು ಬಿಡಾರ ಹೂಡುತ್ತಾರೆ. ಅವರು ವ್ಯಾಪಕ ಗಾಂಜಾ ಬಳಕೆ ಮಾಡುತ್ತಾರೆ’ ಎನ್ನುವ ಆರೋಪಗಳಿವೆ.

ಇದಕ್ಕೆ ಪುಷ್ಟಿ ನೀಡುವಂತೆ ಕಳೆದ ವರ್ಷದ ಮೇನಲ್ಲಿ ಗಂಗಾವತಿ ಬಳಿ ಹೈಡ್ರೊ ಗಾಂಜಾ ಸಾಗಣೆಗೆ ಸಂಬಂಧಿಸಿ ಎಂಟು ಜನರನ್ನು ಕೊಪ್ಪಳ ಜಿಲ್ಲೆಯ ಪೊಲೀಸರು ಬಂಧಿಸಿದ್ದರು. ಅದನ್ನು ಥಾಯ್ಲೆಂಡ್‌ನಿಂದ ತರಿಸಿ ಹೈದರಾಬಾದ್‌ ಮಾರ್ಗದ ಮೂಲಕ ಗಂಗಾವತಿಗೆ ಸಾಗಿಸುತ್ತಿದ್ದ ಮಾಹಿತಿ ಬಹಿರಂಗಗೊಂಡಿತ್ತು.

ಮಂಗಳೂರಿನ ಸಿಸಿಬಿ ಪೊಲೀಸರು 2025ರ ಮಾರ್ಚ್‌ ತಿಂಗಳಲ್ಲಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿನಗರದಲ್ಲಿ ಜಿಲ್ಲೆಯ ಪೆಡ್ಲರ್‌ಗಳಿಗೆ ಎಂಡಿಎಂಎ ಸಹಿತಿ ವಿವಿಧ ಸಿಂಥೆಟಿಕ್ ಡ್ರಗ್‌ ಪೂರೈಸುತ್ತಿದ್ದ ದಕ್ಷಿಣ ಆಫ್ರಿಕಾದ ಬಾಂಬಾ ಫಾಂಟಾ ಅಲಿಯಾಸ್‌ ಅಡ್ನೋಯಿಸ್‌ ಜಾಬುಲಿಲೆ (31 ) ಹಾಗೂ ಅಬಿಗೇಲ್‌ ಅಡ್ನೋಯಿಸ್‌ ಅಲಿಯಾಸ್‌ ಒಲಿಜೊ ಇಯಾನ್ಸ್‌ (30) ಎಂಬ ಇಬ್ಬರು ಮಹಿಳೆಯರನ್ನು ಬಂಧಿಸಿ, ₹75 ಕೋಟಿ ಮೌಲ್ಯದ 37.878 ಕೆ.ಜಿ ಎಂಡಿಎಂಎ ವಶಪಡಿಸಿಕೊಂಡಿದ್ದರು. 

ಬೆಂಗಳೂರಿನ ಕೆ.ಆರ್‌ ಪುರ ಪೊಲೀಸರು ಕೊಕೆನ್‌ ಪೂರೈಸುತ್ತಿದ್ದ ನೈಜೀರಿಯಾದ ನದುದಿ ಎಂಬ ವಿದೇಶಿ ಪೆಡ್ಲರ್‌ನ್ನು ಬಂಧಿಸಿದ್ದರು. ಈ ರೀತಿಯ ಪ್ರಕರಣಗಳು ಮಾದಕ ವಸ್ತು ಮಾರಾಟಕ್ಕೆ ವಿದೇಶಿ ಜಾಲಗಳ ಸಂಪರ್ಕವಿರುವುದನ್ನು ಸ್ಪಷ್ಟಪಡಿಸಿವೆ. ಹೀಗಾಗಿ ವಿದ್ಯಾಭ್ಯಾಸ, ಉದ್ಯೋಗಕ್ಕೆ ಬರುವ ವಿದೇಶಿಗರ ಮೇಲೆ ಗಮನಹರಿಸುವ ಅನಿವಾರ್ಯತೆಯೂ ಇದೆ.

ಪುನರ್ವಸತಿಯ ಸಾಧ್ಯತೆ ಕಡಿಮೆ:

‘ಗಾಂಜಾ ಅಥವಾ ಸಿಂಥೆಟಿಕ್‌ ಡ್ರಗ್ಸ್‌ ವ್ಯಸನಕ್ಕೆ ಒಳಗಾದವರು, ಸ್ವಯಂ ಚಿಕಿತ್ಸೆ ಪಡೆಯಲು ಮುಂದೆ ಬರುತ್ತಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಅಪರಾಧ ಚಟುವಟಿಕೆಯಲ್ಲಿ ತೊಡಗಿಸಿಕೊಂಡಾಗ ಪೊಲೀಸರ ಮೂಲಕ ಅಥವಾ ಕುಟುಂಬದವರು ಪುನರ್ವಸತಿ ಕೇಂದ್ರ ಸಂಪರ್ಕಿಸುತ್ತಾರೆ. ಹೀಗಾಗಿ ಸರ್ಕಾರದ ಮಟ್ಟದಲ್ಲಿ ಸುಸಜ್ಜಿತ ಪುನರ್ವಸತಿ ಕೇಂದ್ರ ತೆರೆಯುವ ಅಗತ್ಯವಿದೆ’ ಎಂಬುದು ಸಾಮಾಜಿಕ ಕಾರ್ಯಕರ್ತರ ಆಗ್ರಹ.

‘ಪ್ರಸ್ತುತ 100 ಮಾದಕ ವ್ಯಸನಿಗಳಲ್ಲಿ ಒಬ್ಬರಷ್ಟೇ ಪುನರ್ವಸತಿ ಕೇಂದ್ರಕ್ಕೆ ಸೇರಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸಾ ಶಿಬಿರಗಳನ್ನು ನಡೆಸಿ, ಅವರನ್ನು ಪುನರ್ವಸತಿಗೆ ಒಳಪಡಿಸುವ ಅನಿವಾರ್ಯತೆ ಇದೆ’ ಎನ್ನುತ್ತಾರೆ ಅವರು.

ಡ್ರಗ್ಸ್‌ ಮಾರಾಟ ಮತ್ತು ಸೇವನೆ ತಡೆಯುವುದು ಕೇವಲ ಗೃಹ ಇಲಾಖೆಯ ಕೆಲಸವಾಗಿ ಉಳಿದಿಲ್ಲ. ಅದಕ್ಕೆ ಸಾಂಘಿಕ ಪ್ರಯತ್ನ ಅಗತ್ಯ. ಡ್ರಗ್ಸ್‌ ಪ್ರಕರಣಗಳು ಸಾಮಾಜಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಿವೆ. ಭವಿಷ್ಯದ ಕಣ್ಣುಗಳಾದ ಯುವ ಸಮೂಹವನ್ನು ದಿಕ್ಕು ತಪ್ಪಿಸುತ್ತಿವೆ. ಇದು ರಾಜ್ಯದ ಶಿಕ್ಷಣ ವ್ಯವಸ್ಥೆ, ಪ್ರವಾಸೋದ್ಯಮದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಿದೆ. ಹೀಗಾಗಿ ಪೊಲೀಸರು ಗೊಂದಲದ ಹೇಳಿಕೆ ನೀಡುವ ಬದಲು ಜನರಿಗೆ ಸ್ಪಷ್ಟವಾದ ಮಾಹಿತಿ ತಿಳಿಸಬೇಕು ಮತ್ತು ಡ್ರಗ್ಸ್ ಜಾಲವನ್ನು ಬುಡಸಮೇತವಾಗಿ ಕಿತ್ತುಹಾಕುವ ಕೆಲಸ ಮಾಡಬೇಕು.

ಪರಿಕಲ್ಪನೆ: ಜಿ.ಡಿ. ಯತೀಶ್‌ಕುಮಾರ್

ಪೂರಕ ಮಾಹಿತಿ: ಪ್ರವೀಣ್‌ ಕುಮಾರ್‌ ಪಿವಿ, ಸಂತೋಷ ಜಿಗಳಿಕೊಪ್ಪ, ಆದಿತ್ಯ. ಕೆ.ಎ

 ಮೈಸೂರಿನ ಸೂಕ್ಷ್ಮ ಪ್ರದೇಶಗಳಲ್ಲಿ ಮಾದಕ ವಸ್ತುವಿಗಾಗಿ ನಗರ ಪೊಲೀಸರ ಕಾರ್ಯಾಚರಣೆ 
 ಮೈಸೂರಿನ ಸೂಕ್ಷ್ಮ ಪ್ರದೇಶಗಳಲ್ಲಿ ಮಾದಕ ವಸ್ತುವಿಗಾಗಿ ನಗರ ಪೊಲೀಸರ ಕಾರ್ಯಾಚರಣೆ 
ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲ್ಲೂಕಿನ ಮಾಣಶಿವಣಗಿ ಗ್ರಾಮದಲ್ಲಿ ಬೆಳೆದಿದ್ದ ಗಾಂಜಾವನ್ನು ಇತ್ತೀಚೆಗೆ ಪೊಲೀಸರು ವಶಪಡಿಸಿಕೊಂಡಿದ್ದರು
ಡಾ.ಬಿ.ಎನ್‌.ರವೀಶ್‌
ಜೆ.ಬಿ.ರಂಗಸ್ವಾಮಿ
ಪರಶು
ಎಸ್.ಬಸವರಾಜು
ಸೀಮಾ ಲಾಟ್ಕರ್
ರಾಜ್ಯದಲ್ಲಿ ಡ್ರಗ್ಸ್ ನಿರ್ಮೂಲನೆ ಮಾಡಲು ಸರ್ಕಾರ ಪಣ ತೊಟ್ಟಿದೆ. ಮಾದಕ ವಸ್ತುಗಳ ಬಳಕೆಯಿಂದ ಆಗುವ ದುಷ್ಪರಿಣಾಮ ಹಾನಿ ಕುರಿತೂ ವಿದ್ಯಾರ್ಥಿಗಳಿಗೆ ಶಾಲಾ–ಕಾಲೇಜುಗಳಲ್ಲಿ ಅರಿವು ಮೂಡಿಸುವ ಕೆಲಸ ಇನ್ನೂ ಹೆಚ್ಚು ನಡೆಯಬೇಕು
ಜಿ.ಪರಮೇಶ್ವರ ಗೃಹ ಸಚಿವ
ರಾಜ್ಯದಲ್ಲಿ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ (ಎಎನ್‌ಟಿಎಫ್‌) ರಚಿಸಲಾಗಿದೆ. ಮಾದಕ ವಸ್ತುಗಳ ಮಾರಾಟಗಾರರು ಪೂರೈಕೆದಾರರ ಸಿಂಥೆಟಿಕ್ ಡ್ರಗ್ಸ್ ಉತ್ಪಾದಕರ ವಿರುದ್ಧ ಕಾರ್ಯಾಚರಣೆ ಚುರುಕು ಮಾಡಲಾಗಿದೆ
ಎಂ.ಎ.ಸಲೀಂ ರಾಜ್ಯ ಪೊಲೀಸ್ ಮಹಾನಿರ್ದೇಶಕ
ಬೇಗ ಕಿಕ್‌ ಸಿಗಬೇಕು ಎನ್ನುವ ಕಾರಣಕ್ಕೆ ಮಾದಕ ವ್ಯಸನಕ್ಕೆ ತುತ್ತಾಗಿರುವ ವಿದ್ಯಾರ್ಥಿಗಳು ಹೆಚ್ಚಾಗಿದ್ದಾರೆ. 13– 19 ವರ್ಷದೊಳಗಿನವರು ಇದಕ್ಕೆ ಬಲಿಯಾಗುತ್ತಿರುವುದು ಆತಂಕಕಾರಿ. ಸಮಾಜದಲ್ಲಿ ಕೆಲವು ಘಾತಕ ಶಕ್ತಿಗಳು ಯುವಜನರನ್ನು ಗುರಿಯಾಗಿಸಿ ಲಾಭ ಪಡೆಯುವ ದುಷ್ಕೃತ್ಯ ನಡೆಸುತ್ತಿವೆ. ಡ್ರಗ್ಸ್‌ ಸೇವನೆಯಿಂದ ಮಕ್ಕಳ ಒಟ್ಟಾರೆ ಬೆಳವಣಿಗೆ ಮೇಲೆ ಮಾರಕ ಪರಿಣಾಮಗಳಾಗುತ್ತಿವೆ. ಕುಟುಂಬಗಳೂ ಸಂಕಟದಲ್ಲಿವೆ.
ಡಾ.ಬಿ.ಎನ್‌.ರವೀಶ್‌ ಮೈಸೂರು ವೈದ್ಯಕೀಯ ವಿದ್ಯಾಲಯದ ಮನೋವಿಜ್ಞಾನ ವಿಭಾಗದ ಮುಖ್ಯಸ್ಥ
ಡ್ರಗ್‌ ಪೆಡ್ಲಿಂಗ್‌ ಹಿಂದಿನಿಂದಲೇ ಇತ್ತು. ಶ್ರೀಮಂತ ಮಕ್ಕಳು ಸಣ್ಣ ಪ್ರಮಾಣದಲ್ಲಿ ಬಳಸುತ್ತಿದ್ದರು. ಗಾಂಜಾ ಬಳಕೆ ಹೆಚ್ಚಿತ್ತು. ನಾರ್ಕೊಟಿಕ್‌ ಡ್ರಗ್ಸ್‌ ಉತ್ಪಾದನೆ ಮಾಡುವವರು ಪೊಲೀಸರಿಗೆ ಯಾವುದೇ ಲಿಂಕ್‌ ಸಿಗದಂತೆ ಗೌಪ್ಯವಾಗಿ ಕೆಲಸ ಮಾಡುವುದರಿಂದ ಪತ್ತೆ ಕಾರ್ಯ ಕಷ್ಟವಾಗುತ್ತಿರಬಹುದು. ಕಾರ್ಖಾನೆಗಳಿಗೆ ಅನುಮತಿ ನೀಡುವಾಗಲೇ ಎಚ್ಚರಿಕೆ ವಹಿಸುವುದು ಸೂಕ್ತ.
ಜೆ.ಬಿ.ರಂಗಸ್ವಾಮಿ ನಿವೃತ್ತ ಡಿವೈಎಸ್‌ಪಿ
ಎಲ್ಲಾ ಜಿಲ್ಲೆಗಳಲ್ಲಿ ಡ್ರಗ್ಸ್ ವ್ಯಸನಿಗಳ ಸುಸಜ್ಜಿತ ಪುನರ್ವಸತಿ ಕೇಂದ್ರ ತೆರೆಯಬೇಕು. ಕೆಲವೆಡೆ ವ್ಯಸನ ತಗ್ಗಿಸುವ ಪ್ರಯತ್ನವಷ್ಟೇ ಆಗುತ್ತಿದೆ. ಆದರೆ ಅದರಿಂದ ಬೇರ್ಪಡಿಸುವ ಕೆಲಸವಾಗಬೇಕಿದೆ. ಅದಕ್ಕಾಗಿ ತಜ್ಞ ಆಪ್ತಸಮಾಲೋಚಕರು ವಿಶಾಲವಾದ ಸ್ಥಳದ ಅವಶ್ಯಕತೆಯಿದೆ. ಹೀಗಾಗಿ ಟ್ರಸ್ಟ್‌ ಮೂಲಕ ನಡೆಸುವುದು ಕಷ್ಟಸಾಧ್ಯ. ಸರ್ಕಾರವೇ ಪ್ರಯತ್ನಿಸಬೇಕು
ಎಂ.ಎಲ್.ಪರಶುರಾಮ್ ಒಡನಾಡಿ ಸಂಸ್ಥೆಯ ನಿರ್ದೇಶಕ
ನಮ್ಮ ಪುನರ್ವಸತಿ ಕೇಂದ್ರಗಳಲ್ಲಿ 20 ಜನ ಮಾದಕ ವ್ಯಸನಿಗಳಿಗೆ ಚಿಕಿತ್ಸೆ ನೀಡುತ್ತಿದ್ದೇವೆ. 56 ಕಡೆ ಡ್ರಗ್ಸ್‌ ವ್ಯಸನಿಗಳ ಶಿಬಿರ ನಡೆಸಿ ಪ್ರಾರಂಭಿಕ ಹಂತದ ಚಿಕಿತ್ಸೆ ನೀಡಿದ್ದೇವೆ. ಸರ್ಕಾರವೂ ಈ ನಿಟ್ಟಿನಲ್ಲಿ ಯೋಚಿಸಬೇಕು. ಜಾಗೃತಿ ಮೂಡಿಸುವುದರಿಂದ ಪರಿಣಾಮ ಬೀರುವುದಿಲ್ಲ. ಪರ್ಯಾಯ ಕ್ರಮಗಳ ಬಗ್ಗೆ ಚಿಂತಿಸಬೇಕು.
ಎಸ್.ಬಸವರಾಜು ಸಂಸ್ಥಾಪಕರು ಬಸವಮಾರ್ಗ ವ್ಯಸನ ಮುಕ್ತ ಮತ್ತು ಪುನರ್ವಸತಿ ಕೇಂದ್ರ ಹೆಬ್ಬಾಳ ಮೈಸೂರು.
ನಗರದೊಳಗೆ ಮಾದಕ ವಸ್ತು ಬಾರದಂತೆ ತಡೆಯುವುದೇ ನಮ್ಮ ಗುರಿ. ಎರಡು ವಾರದಲ್ಲಿ 16 ಪೆಡ್ಲರ್‌ಗಳನ್ನು ಬಂಧಿಸಿದ್ದೇವೆ. ಡ್ರೋಣ್‌ ಕ್ಯಾಮೆರಾ ಮೂಲಕ ಸೂಕ್ಷ್ಮ ಪ್ರದೇಶಗಳ ಚಟುವಟಿಕೆಗಳನ್ನೂ ಗಮನಿಸಲಾಗುತ್ತಿದೆ.
ಸೀಮಾ ಲಾಟ್ಕರ್‌ ಮೈಸೂರು ನಗರ ಪೊಲೀಸ್‌ ಆಯುಕ್ತೆ

ಪೊಲೀಸರಿಂದ ಹಲವು ಪ್ರಯತ್ನ..

* ದಕ್ಷಿಣ ಕನ್ನಡ ಜಿಲ್ಲಾಡಳಿತವು ಪೊಲೀಸ್‌ ಇಲಾಖೆ ಮುಂದಾಳತ್ವದಲ್ಲಿ ಪ್ರತಿ ಶಿಕ್ಷಣ ಸಂಸ್ಥೆಯಲ್ಲೂ ಮಾದಕ ವ್ಯಸನ ತಡೆ ಸಮಿತಿಗಳನ್ನು ರಚಿಸಿದೆ. ವಿದ್ಯಾರ್ಥಿ ಮಾದಕ ಪದಾರ್ಥ ಸೇವನೆ ಚಟ ಹೊಂದಿರುವ ಸಣ್ಣ ಸುಳಿವು ಸಿಕ್ಕರೂ ಆತ/ಆಕೆಯ ರಕ್ತದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾ ಗುತ್ತಿದೆ. ಪೊಲೀಸರೂ ದಿಢೀರ್‌ ಭೇಟಿ ನೀಡಿ ರಕ್ತದ ಮಾದರಿ ಸಂಗ್ರಹಿಸುತ್ತಿದ್ದಾರೆ.

* ಗೆಳೆಯರು ವ್ಯಸನಿಗಳಾಗಿದ್ದರೆ ಸ್ಕ್ಯಾನರ್‌ ಕೋಡ್‌ಗಳ ಮೂಲಕ ಮಾಹಿತಿ ನೀಡುವಂತೆ ದಕ್ಷಿಣ ಕನ್ನಡ ಪೊಲೀಸರು ವ್ಯವಸ್ಥೆ ಮಾಡಿದ್ದಾರೆ. ವ್ಯಸನ ಮುಕ್ತರಾದವರಿಂದಲೇ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

* ಉತ್ತರ ಕರ್ನಾಟಕ ಪೊಲೀಸರು ಪ್ರವಾಸಿ ತಾಣಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದಾರೆ.

* ಮೈಸೂರು ನಗರ ಪೊಲೀಸರು ‘ವಿಮುಕ್ತಿ’ ಹೆಸರಿನಲ್ಲಿ ಕಾರ್ಯಕ್ರಮ ರೂಪಿಸಿದ್ದು ಎಲ್ಲಾ ಶಾಲಾ– ಕಾಲೇಜುಗಳಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಪೊಲೀಸರಿಗೆ ಗುಪ್ತವಾಗಿ ಮಾಹಿತಿ ನೀಡಲು ವಾಟ್ಸ್‌ಆ್ಯಪ್‌ ಸಹಾಯವಾಣಿ ಆರಂಭಿಸಲಾಗಿದೆ.

* ಕಲಬುರಗಿ ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ‘ಡ್ರಗ್‌ ಸೆಲ್’ ಸ್ಥಾಪಿಸಲಾಗಿದೆ. ಮಾದಕ ವಸ್ತುಗಳ ಸಾಗಣೆ ಸೇವನೆ ವೇಳೆ ಸಿಕ್ಕಿ ಬೀಳುವವರ ಮೇಲೆ ನಿರಂತರ ನಿಗಾ ವಹಿಸಲು ‘ಸನ್ಮಿತ್ರ’ ವ್ಯವಸ್ಥೆ ರೂಪಿಸಲಾಗಿದೆ. ಆರೋಪಿಗೆ ಒಬ್ಬರಂತೆ ಪೊಲೀಸರನ್ನು ನಿಯೋಜಿಸಲಾಗಿದ್ದು ಅವರು ಆಗಾಗ ಆರೋಪಿಗಳ ಚಲನವಲನದ ಮೇಲೆ ಕಣ್ಣಿಡುತ್ತಿದ್ದಾರೆ. 

ಸಿಂಧನೂರಿನಲ್ಲಿ ಗಾಂಜಾ ಜಾತ್ರೆ!

ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಸೋಮಲಾಪುರ ಸಮೀಪದ ಧಾರ್ಮಿಕ ಕ್ಷೇತ್ರ ಅಂಬಾಮಠದ ಅಂಬಾದೇವಿ ಜಾತ್ರಾ ಮಹೋತ್ಸವ ಪ್ರತಿ ವರ್ಷ ಜನವರಿಯಲ್ಲಿ ನಡೆಯುತ್ತದೆ. ಇದು ಕೆಲವರ ಪಾಲಿಗೆ ‘ಗಾಂಜಾ ಜಾತ್ರೆ’ ಎಂದೇ ಕುಖ್ಯಾತಿ ಪಡೆದಿದೆ. ಜಿಲ್ಲಾಡಳಿತವು ಭಕ್ತರಿಗೆ ಎಷ್ಟೇ ಎಚ್ಚರಿಕೆ ತಿಳಿವಳಿಕೆ ನೀಡಿದರೂ ಗಾಂಜಾ ಸೇವನೆ ನಿಂತಿಲ್ಲ. ಕೆಲ ಭಕ್ತರೇ ಗಾಂಜಾ ತಂದು ಸಾಧುಗಳಿಗೆ ಕೊಟ್ಟು ಅವರನ್ನು ಖುಷಿಪಡಿಸುತ್ತಾರೆ. ಸಾಧುಗಳು ಬೆಟ್ಟದ ಇಳಿಜಾರಿನ ಕಲ್ಲುಬಂಡೆಗಳ ಮಧ್ಯೆ ಆಶ್ರಯ ಪಡೆದು ಗಾಂಜಾ ಸೇದಿ ವಿಭಿನ್ನ ಬಗೆಯಲ್ಲಿ ಸಂಭ್ರಮಿಸುವುದು ‘ಸಂಪ್ರದಾಯದ ಆಚರಣೆ’ ಹೆಸರಲ್ಲಿ ಮುಂದುವರಿದಿದೆ. ಜಾತ್ರೆಯಲ್ಲಿ ಮಾದಕ ವಸ್ತುಗಳ ಸಾಗಣೆ ಮಾರಾಟ ಹಾಗೂ ಸೇವನೆ ತಡೆಗೆ ಪೊಲೀಸರು ಚೆಕ್‌ಪೋಸ್ಟ್‌ ಸ್ಥಾಪಿಸುತ್ತಾರೆ. ಆದರೂ ‘ಗಾಂಜಾ ಘಾಟು’ ಮಾತ್ರ ಹರಡುತ್ತಲೇ ಇರುತ್ತದೆ. ಸಿಂಧನೂರು ತಾಲ್ಲೂಕಿನಲ್ಲಿ ಜನವರಿಯಲ್ಲೇ 37 ಗಾಂಜಾ ಪ್ರಕರಣಗಳು ದಾಖಲಾಗಿವೆ. ಲಿಂಗಸುಗೂರು ತಾಲ್ಲೂಕಿನಲ್ಲಿ ನಿರ್ದಿಷ್ಠ ಸಮುದಾಯವೊಂದು ಗುಡ್ಡಗಾಡು ಹಾಗೂ ಹೊಲಗಳಲ್ಲಿ ತೊಗರಿಬೆಳೆಗಳ ಮಧ್ಯೆ ಗಾಂಜಾ ಬೆಳೆದು ಸಾಗಾಣೆ ಮಾಡಿದ ಹಲವು ಪ್ರಕರಣಗಳು ಹಿಂದೆ ಬೆಳಕಿಗೆ ಬಂದಿದ್ದವು. ಜಿಲ್ಲೆಯಲ್ಲಿ ಗಾಂಜಾ ಪೂರ್ಣಪ್ರಮಾಣದಲ್ಲಿ ನಿಷೇಧ ಸಾಧ್ಯವಾಗಿಲ್ಲ.

ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಎನ್‌ಡಿಪಿಎಸ್‌ ಕಾಯ್ದೆ ಅಡಿಯಲ್ಲಿ ದಾಖಲಾದ ಪ್ರಕರಣಗಳು ವರ್ಷ;ದಾಖಲಾದ ಪ್ರಕರಣಗಳು;ಬಂಧಿತ ಪೆಡ್ಲರ್‌ಗಳು2023;6768;30692024;4168;24662025;5930;2598ಒಟ್ಟು;16866;8133

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.