ADVERTISEMENT

‘ಶುದ್ಧ’ ನೀರು ಸದ್ದಷ್ಟೇ ಜೋರು:  ಶಾಸಕರು, ಸಚಿವರು ಏನಂತಾರೆ?

​ಪ್ರಜಾವಾಣಿ ವಾರ್ತೆ
Published 29 ಜೂನ್ 2019, 20:00 IST
Last Updated 29 ಜೂನ್ 2019, 20:00 IST
   

ಶುದ್ಧ ಕುಡಿಯುವ ನೀರಿನ ಘಟಕ ಯೋಜನೆಯು ಸಂಪೂರ್ಣ ವಿಫಲಗೊಂಡಿದೆ. 18 ಸಾವಿರ ಘಟಕ ಗಳನ್ನು ಸ್ಥಾಪಿಸಲಾಗಿದೆ. ಯೋಜನೆಯಿಂದ ಗುತ್ತಿಗೆದಾರರಿಗೆ ಪ್ರಯೋಜನವಾಯಿತು. ವ್ಯಾಪಕ ಭ್ರಷ್ಟಾಚಾರ ನಡೆದಿರುವ ಕಾರಣ ವಿಧಾನಪರಿಷತ್‌ನಲ್ಲಿ ಸರ್ಕಾರದ ಗಮನ ಸೆಳೆಯಲು ಧರಣಿ ನಡೆಸಿದ್ದೆವು.

ಸದನ ಸಮಿತಿ ರಚಿಸುವಂತೆಯೂ ಒತ್ತಾಯಿಸಿದೆವು. ಆದರೆ ಸರ್ಕಾರ ಎಲ್ಲವನ್ನು ಸರಿಪಡಿಸುವುದಾಗಿ ಹೇಳಿ ಏನೂ ಮಾಡಿಲ್ಲ. ಹೊರ ರಾಜ್ಯದ ಗುತ್ತಿಗೆದಾರರ ಮೂಲಕ ಘಟಕಗಳ ಅಳವಡಿಕೆ ಅಲ್ಲದೆ, ನಿರ್ವಹಣೆಯನ್ನೂ ಮಾಡಿಸಲಾಗುತ್ತಿದೆ. ₹2 ಕ್ಕೆ 20 ಲೀಟರ್‌ ನೀರನ್ನು ಕೊಡಬೇಕು. ಶೇ 80 ರಷ್ಟು ಘಟಕಗಳು ಕೆಟ್ಟಿವೆ. ಇದೊಂದು ದಂಧೆಯಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ಆಗಬೇಕು.

ಕೋಟ ಶ್ರೀನಿವಾಸ ಪೂಜಾರಿ, ವಿರೋಧ ಪಕ್ಷದ ನಾಯಕ,ವಿಧಾನಪರಿಷತ್ತು

ADVERTISEMENT

***

ಜನರಿಗೆ ಕಡಿಮೆ ದರದಲ್ಲಿ ಶುದ್ಧ ಕುಡಿಯುವ ನೀರು ಪೂರೈಸಬೇಕು ಎನ್ನುವ ಸರ್ಕಾರದ ಯೋಜನೆ ಯಶಸ್ವಿಯಾಗಿದೆ. ಗದಗ ಜಿಲ್ಲೆಯಲ್ಲಿ ಸ್ಥಾಪಿಸಲಾಗಿರುವ ನೀರು ಶುದ್ಧೀಕರಣ ಘಟಕಗಳಲ್ಲಿ ಶೇ 85ರಷ್ಟು ಸದ್ಯ ಕಾರ್ಯನಿರ್ವಹಿಸುತ್ತಿವೆ. ವಿದ್ಯುತ್‌ ಸಮಸ್ಯೆ, ದುರಸ್ತಿ ಮತ್ತಿತರ ಕಾರಣಗಳಿಗೆ ಶೇ 15ರಷ್ಟು ಘಟಕಗಳು ಸ್ಥಗಿತಗೊಂಡಿರಬಹುದು.

ಆದರೆ, ಈ ಘಟಕಗಳ ಮುಂದೆ ನಿತ್ಯ ಕಾಣಿಸುವ ಜನರ ಉದ್ದನೆಯ ಸಾಲೇ ಶುದ್ಧ ಕುಡಿಯುವ ನೀರಿಗೆ ಬೇಡಿಕೆ ಎಷ್ಟಿದೆ ಎನ್ನುವುದಕ್ಕೆ ಸಾಕ್ಷಿ. ಘಟಕಗಳ ನಿರ್ವಹಣೆಗಾಗಿ ಹೊಸ ವ್ಯವಸ್ಥೆ ತರುವ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಆದರೆ, ನೀರಿನ ದರ ಹೆಚ್ಚಿಸಬಾರದು. ಬಡವರಿಗೆ 10 ಪೈಸೆಗೆ ಒಂದು ಲೀಟರ್‌ನಂತೆ ನೀರು ಪೂರೈಸುವುದನ್ನು ಮುಂದುವರಿಸಬೇಕು’

ಎಚ್‌.ಕೆ. ಪಾಟೀಲ, ಕಾಂಗ್ರೆಸ್‌ ಶಾಸಕ

***

ವಿವಿಧ ಕಾರಣಗಳಿಂದಾಗಿ 899 ಘಟಕಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿವೆ. ಆರಂಭಿ ಸಲು ಕ್ರಮ ಕೈಗೊಳ್ಳಲಾಗಿದೆ. ವಿದ್ಯುತ್, ಕಚ್ಚಾ ನೀರಿನ ಅಭಾವದಿಂದಾಗಿ ಆಗಾಗ ಸಮಸ್ಯೆ ಆಗುತ್ತದೆ. ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರನ್ನು ಪ್ರತಿ ಲೀಟರ್‌ಗೆ 10 ಪೈಸೆ ದರದಲ್ಲಿ ಒದಗಿಸಲಾಗುತ್ತಿದ್ದು, ಘಟಕಗಳ ಸಮರ್ಪಕ ನಿರ್ವಹಣೆ ಸಲುವಾಗಿ ದರ ಹೆಚ್ಚಳ ಮಾಡಲಾಗುತ್ತಿದೆ.

ವಿದ್ಯುತ್, ನೀರಿನ ಗುಣಮಟ್ಟ ಪರೀಕ್ಷೆ, ಕಾರ್ಯಾಚರಣೆ, ನಿರ್ವಹಣೆ, ಪರಿಕರ, ಮಾನವ ಸಂಪನ್ಮೂಲ ಬಳಕೆಯ ಆಧಾರದ ಮೇಲೆ ದರ ಪರಿಷ್ಕರಣೆ ಮಾಡಲಾಗಿದೆ. ಘಟಕ ಆರಂಭಿಸಿದ ಮೊದಲ 2 ವರ್ಷದ ವರೆಗೆ ಲೀಟರ್‌ಗೆ 25 ಪೈಸೆ, 3ರಿಂದ 4 ವರ್ಷ 30 ಪೈಸೆ, 5 ವರ್ಷ ಮೇಲ್ಪಟ್ಟು 35 ಪೈಸೆಗೆ ಹೆಚ್ಚಳ ಮಾಡಲಾಗಿದೆ.

ಕೃಷ್ಣ ಬೈರೇಗೌಡ, ಗ್ರಾಮೀಣಾಭಿವೃದ್ಧಿ ಸಚಿವ

ಇವನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.