ADVERTISEMENT

ಸೀಬೆಯ ಸಿಪ್ಪೆ, ತಿರುಳು ತಿನ್ನಲು ಕಷ್ಟವೇ, ಘಮ್ಮೆನ್ನುವ ರಸಂ ಮಾಡಿ ಸವಿಯಿರಿ

ಪೃಥೆಮುನ್ನಿ
Published 11 ಫೆಬ್ರುವರಿ 2026, 15:27 IST
Last Updated 11 ಫೆಬ್ರುವರಿ 2026, 15:27 IST
<div class="paragraphs"><p>ಸೀಬೆಯ ಸಿಪ್ಪೆ</p></div>

ಸೀಬೆಯ ಸಿಪ್ಪೆ

   

ಸಣ್ಣ ಹಿತ್ತಲಿನಲ್ಲೂ, ಕೈ ತೋಟಗಳಲ್ಲೂ ಸರ್ವೇ ಸಾಮಾನ್ಯವಾಗಿರುವ ಪೇರಳೆ ಕಾಯಿ ಅಥವಾ ಸೀಬೆ ಕಾಯಿ ಸಾಮಾನ್ಯವಾಗಿ ಎಲ್ಲರ ಅಚ್ಚುಮೆಚ್ಚು. ಆದರೆ, ಪೇರಳೆಯನ್ನು ತೀರಾ ಹಣ್ಣಾಗಿ ಕಳಿತಮೇಲೆ ತಿನ್ನಲು ಎಲ್ಲರಿಗೂ ಇಷ್ಟವಾಗುವುದಿಲ್ಲ. ಜತೆ ಹಣ್ಣಾದ ಮೇಲೆ ಅದರಿಂದ ಹೊಮ್ಮುವ ಗಾಢ ವಾಸನೆಯೂ ಎಲ್ಲರಿಗೂ ಇಷ್ಟುವಾಗುವುದಿಲ್ಲ. ಹೀಗಾಗಿ ದೋರಗಾಯಿ ಇರುವಾಗಲೇ ತಿನ್ನಲು ಆಯ್ದುಕೊಳ್ಳುತ್ತೇವೆ.

ಸಮಸ್ಯೆ ಎಂದರೆ ಇಂಥ ದೋರಗಾಯಿ ಗಟ್ಟಿಯಾಗಿರುವುದರಿಂದ ಸಿಪ್ಪೆ ಸಹಿತವಾಗಿ ಕಚ್ಚಿ ತಿನ್ನಲು ಹೊರಟರೆ ದಂತದಲ್ಲಿ ಘಾಸಿಯಾಗುತ್ತದೆ. ಕೆಲವೊಮ್ಮೆ ವಸಡಿನಿಂದ ರಕ್ತವೂ ಬರಬಹುದು. ಅದರಲ್ಲೂ ಚಿಕ್ಕ ಮಕ್ಕಳು, ವೃದ್ಧರಿಗೆ ಸಿಪ್ಪೆ ಸಹಿತ ಇದನ್ನು ತಿನ್ನವುದು ಕಷ್ಟ. ಇನ್ನೊಂದು ಅದರ ಬೀಜದ ಭಾಗ. ಹಣ್ಣು ತಿಂದಾಗ ಅದರ ಬೀಜಗಳು ಹಲ್ಲುಗಳಲ್ಲಿ ಸಿಲುಕಿಕೊಂಡು ತೊಂದರೆ ಕೊಡುತ್ತದೆ.

ADVERTISEMENT

ಈ ಕಾರಣಕ್ಕೆ ಬಹುತೇಕರು ಒಂದೋ ಸೀಬೆಯಿಂದಲೇ ದೂರ ಇರುತ್ತಾರೆ. ಇಲ್ಲವೇ ಬೀಜವಿರುವ ತಿರುಳು ಹಾಗೂ ಸಿಪ್ಪೆಯನ್ನು ತೆಗೆದು ಮಧ್ಯದ ಮೃದುಭಾಗವನ್ನಷ್ಟೇ ತಿನ್ನುತ್ತಾರೆ. ಹೀಗೆ ತಿನ್ನುವುದರಿಂದ ಎಂಥಾ ಲಾಸ್‌ ಮಾಡಿಕೊಳ್ಳುತ್ತಿದ್ದೇವೆ ಎಂಬುದು ಗೊತ್ತಾದರೆ ಹೊಟ್ಟೆ ಉರಿದುಕೊಳ್ಳುತ್ತೀರ. ನಮಗೆಲ್ಲ ಗೊತ್ತಿರುವ ಹಾಗೆ ಕಿತ್ತಳೆ ಹಣ್ಣಿನಲ್ಲಿರುವುದಕ್ಕಿಂತಲೂ ಹೆಚ್ಚು ವಿಟಮಿನ್ ಸಿ ಸೀಬೆಯಲ್ಲಿ ಇದೆ. ಆಂಟಿ ಆಕ್ಸಿಡಂಟ್‌ನ ಭರಪೂರ ಮೂಲವಾದ ಪೇರಳೆಯ ಸಿಪ್ಪೆಯಲ್ಲೇ ಇವು ಹೆಚ್ಚಾಗಿ ಅಡಗಿ ಕುಳಿತಿರುವುದು.

ಇನ್ನು ಸೀಬೆಯ ತಿರುಳಿನಲ್ಲಿ ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡುವ ಲೈಕೋಪೀನ್ ಎನ್ನುವ ಕ್ಯಾರಟಿನಾಯ್ಡ್ ಸಂಯುಕ್ತ ಇದೆ. ಇದು ಕ್ಯಾನ್ಸರ್ ಸಮಸ್ಯೆಯನ್ನು ನಿರ್ಮೂಲನ ಮಾಡದಿದ್ದರೂ ಕ್ಯಾನ್ಸರ್ ಹುಣ್ಣು ಮತ್ತಷ್ಟು ಹರಡುವುದನ್ನು ತಡೆಯುತ್ತದೆ. ಫೈಬರ್ ಅಂಶವಂತೂ ತಿರುಳು ಸಿಪ್ಪೆಯಲ್ಲೇ ಹೆಚ್ಚಿರುವುದು ಎಂಬುದನ್ನು ಮತ್ತೆ ಹೇಳಬೇಕಿಲ್ಲ ತಾನೆ? ಮಲಬದ್ಧತೆಯಿಂದ ರಕ್ಷಣೆ ಪಡೆಯಲು ಅತ್ಯುತ್ತಮ ಜೀರ್ಣಕ್ರಿಯೆಗೆ ಸಹಕಾರಿ. ಮಾತ್ರವಲ್ಲ, ರಕ್ತದಲ್ಲಿನ ಸಕ್ಕರೆ ಅಂಶಗಳನ್ನು ನಿಯಂತ್ರಿಸಲು ನೆರವಾಗುತ್ತವೆ. ರಕ್ತದೊತ್ತಡವನ್ನು ನಿಭಾಯಿಸಲು ಮತ್ತು ಹೃದಯದ ಕಾರ್ಯವನ್ನು ಸುಧಾರಿಸಲು ನೆರವಾಗಲಿದೆ.

ಅದರ ಹೊರತಾಗಿಯೂ ಸೀಬೆಯ ಸಿಪ್ಪೆಯಲ್ಲಿ ಹೇರಳ ಪೊಟ್ಯಾಶಿಯಂ, ಜಿಂಕ್ ಮತ್ತು ವಿಟಮಿನ್ ಸಿ ಸಿಗುತ್ತವೆ. ಚರ್ಮದ ಕಾಂತಿ, ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ ಇದು ಸಹಕರಿಸುತ್ತದೆ. ಸ್ವತಂತ್ರ ಕಣಗಳ ವಿರುದ್ಧ ಹೋರಾಡಿ ಮುಪ್ಪನ್ನು ನಿಧಾನಗೊಳಿಸುತ್ತದೆ.
ಇಷ್ಟೆಲ್ಲ ಗೊತ್ತಾದ ಮೇಲೆ ಸಿಪ್ಪೆ ಮತ್ತು ಬೀಜಗಳನ್ನೊಳಗೊಂಡ ತಿರುಳನ್ನು ಬಿಸಾಡಲೂ ಮನಸಾಗದು, ಆದರೆ ತಿನ್ನಲು ಕಷ್ಟ ಏನು ಮಾಡುವುದು ಎನ್ನುವ ಸಂಕಟ ನಿಮ್ಮದಲ್ಲವೇ? ಇಲ್ಲಿದೆ ಸಿಪ್ಪೆ–ತಿರುಳುಗಳನ್ನು ಬಳಸಿ ಮಾಡುವ ಹೊಸ ರೆಸಿಪಿ–ಸೀಬೆ ಸಿಪ್ಪೆಯ ರಸಂ!

ಬೇಕಾಗುವ ಸಾಮಾಗ್ರಿ: ಒಂದು ಹಣ್ಣಿನಿಂದ ತೆಗೆದ ಸೀಬೆಯ ಸಿಪ್ಪೆ ಹಾಗೂ ತಿರುಳು. ಒಂದು ಹಿಡಿ ಹಸಿ ತೆಂಗಿನಕಾಯಿಯ ತುರಿ. ಒಂದಿಂಚು ಹಸಿಶುಂಠಿ. ರುಚಿಗೆ ತಕ್ಕಷ್ಟು ಉಪ್ಪು, ನೆಲ್ಲಿ ಗಾತ್ರದ ಬೆಲ್ಲ. ಒಂದು ಟೀ ಸ್ಪೂನ್‌ ಜೀರಿಗೆ, ಅರ್ಧ ಚಮಚ ಸಾಸಿವೆ, ಅರ್ಧ ಹಿಡಿ ದನಿಯಾ, ನಾಲ್ಕೆಂಟು ಕಾಳು ಮೆಣಸು. ಇಂಗು, ಅರಿಶಿಣ ಪುಡಿ ಸೇರಿದಂತೆ ಒಗ್ಗರಣೆ ಸಾಮಗ್ರಿ. ಒಂದು ಸ್ಪೂನ್‌ ತುಪ್ಪ. ಘಮ್ಮೆನ್ನಲು ಕರಿಬೇವು, ಕೊತ್ತಂಬರಿ ಸೊಪ್ಪು.

ಮಾಡುವ ವಿಧಾನ: ಜೀರಿಗೆ, ಸಾಸಿವೆ, ಕಾಳು ಮೆಣಸು, ದನಿಯಾವನ್ನು ಒಂದು ಚಿಕ್ಕ ಬಾಣಲೆಯಲ್ಲಿ ಹಾಕಿ ಘಮ್ಮೆನ್ನುವವರೆಗೆ ಹುರಿದುಕೊಳ್ಳಿ. ಕೆಳಗಿಳಿಸಿ ತಣ್ಣಗಾಗಲು ಬಿಡಿ. ನಂತರ ಕಾಯಿ ತುರಿ, ಉಪ್ಪು, ಬೆಲ್ಲ, ಸೀಬೆಯ ತಿರುಳು–ಸಿಪ್ಪೆ, ಹಸಿ ಶುಂಠಿ ಮತ್ತು ಹುರಿದಿಟ್ಟುಕೊಂಡ ಎಲ್ಲವನ್ನು ಒಟ್ಟಿಗೇ ಹಾಕಿ, ಅಗತ್ಯಕ್ಕೆ ತಕ್ಕಷ್ಟು ನೀರು ಸೇರಿಸಿ ನುಣ್ಣಗೆ ಮಿಕ್ಸಿ ಮಾಡಿಕೊಳ್ಳಿ. ಅದನ್ನು ಪಾತ್ರೆಗೆ ಹಾಕಿ, ಎರಡು ಕಪ್‌ ನೀರು ಸೇರಿಸಿ, ಅರಿಶಿನ ಪುಡಿಯನ್ನೂ ಹಾಕಿ ಚೆನ್ನಾಗಿ ಕಲಕಿ ಉರಿಯ ಮೇಲೆ ಇಡಿ. ಮಿಕ್ಸಿಗೆ ಮೆತ್ತಿಕೊಂಡ ಚಟ್ನಿಯಂಥದ್ದನ್ನೂ ತುಸು ನೀರು ಹಾಕಿ ಕೈಯ್ಯಾಡಿಸಿ ಪಾತ್ರೆಗೆ ಹಾಕಲು ಮರೆಯಬೇಡಿ. ಇನ್ನೇನು ಕದಿಯಲು ಆರಂಭಿಸುತ್ತದೆ ಎನ್ನುವಾಗ ಕರಿಬೇವಿನ ಎಲೆಗಳನ್ನು ಹಾಕಿ. ಚೆನ್ನಾಗಿ ಕುದಿ ಮರಳುವಾಗ ಇಳಿಸಿ, ಕತ್ತರಿಸಿದ ಕೊತ್ತುಂಬರಿ ಸೊಪ್ಪು, ಜತೆಗೆ ತುಪ್ಪದಲ್ಲಿ ಇಂಗಿನ ಒಗ್ಗರಣೆ ಹಾಕಿದರೆ ವಿಭಿನ್ನ ಪರಿಮಳಯುಕ್ತ ರುಚಿಕಟ್ಟಾದ ರಸಂ ಸಿದ್ಧ.

ನೀರು ಕಡಿಮೆ ಹಾಕಿಕೊಂಡರೆ ಅನ್ನದೊಂದಿಗೂ ಸವಿಯಬಹುದು. ನೀರು ಜಾಸಿ ಹಾಕೊಕೊಂಡಿದ್ದರೆ ಬಿಸಿ ಬಿಸಿ ಕುಡಿಯಲೂಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.