ADVERTISEMENT

ಹಲಾಲ್ ಪ್ರಾಣಿಯ ಜೀವಕೋಶದಿಂದ ಸಿದ್ಧಪಡಿಸಲಾದ ಪ್ರಯೋಗಾಲಯದ ಮಾಂಸ ಸೇವನೆಗೆ ಅಸ್ತು

ಪಿಟಿಐ
Published 3 ಫೆಬ್ರುವರಿ 2024, 14:14 IST
Last Updated 3 ಫೆಬ್ರುವರಿ 2024, 14:14 IST
<div class="paragraphs"><p>ಸಾಂರ್ಭಿಕ ಚಿತ್ರ</p></div>

ಸಾಂರ್ಭಿಕ ಚಿತ್ರ

   

ರಾಯಿಟರ್ಸ್ ಚಿತ್ರ

ಸಿಂಗಪುರ: ಹಲಾಲ್‌ ಪ್ರಾಣಿಯ ಜೀವಕೋಶ ಪಡೆದು, ಪ್ರಯೋಗಾಲಯದಲ್ಲಿ ಸಿದ್ಧಪಡಿಸಲಾದ ಮಾಂಸ ಸೇವನೆಗೆ ಸಿಂಗಪುರದ ಮುಸ್ಲಿಮರಿಗೆ ಅಲ್ಲಿನ ಮುಫ್ತಿ ಅವಕಾಶ ಕಲ್ಪಿಸಿದ್ದಾರೆ.

ADVERTISEMENT

ಸಿಂಗಪುರದ ಮುಫ್ತಿ ಡಾ. ನಾಸಿರುದ್ದೀನ್ ಮೊಹಮ್ಮದ್ ನಾಸೀರ್ ಅವರು ಟುಡೆ ಪತ್ರಿಕೆಗೆ ಈ ಕುರಿತು ಮಾಹಿತಿ ನೀಡಿ, ‘ಆಧುನಿಕ ತಂತ್ರಜ್ಞಾನ ಮತ್ತು ಸಾಮಾಜಿಕ ಬದಲಾವಣೆಗೆ ತಕ್ಕಂತೆ ಫತ್ವಾ ಕುರಿತ ಸಂಶೋಧನೆಗಳು ಹೇಗೆ ವಿಕಸನಗೊಳ್ಳಬೇಕು ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ’ ಎಂದಿದ್ದಾರೆ.

ಮುಸ್ಲಿಂ ವ್ಯವಹಾರಗಳ ಉಸ್ತುವಾರಿ ಸಚಿವ ಮಾಸಗೋಸ್ ಝುಲ್ಕಿಫ್ಲಿ ಪ್ರತಿಕ್ರಿಯಿಸಿ, ‘ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಲಾದ ಮಾಂಸ ಕುರಿತು ಸಿಂಗಪುರದಲ್ಲಿರುವ ಇಸ್ಲಾಮಿಕ್ ಧಾರ್ಮಿಕ ಸಮಿತಿ (MUIS)ಯು 2022ರಿಂದ ಅಧ್ಯಯನ ನಡೆಸಿದೆ. ಆ ಮೂಲಕ ಇಡೀ ಜಗತ್ತಿನಲ್ಲಿ ಪ್ರಯೋಗಾಲಯದಲ್ಲಿ ಅಭಿವೃದ್ಧಿ ಹೊಂದಿದ ಮಾಂಸದ ಬಳಕೆಯಲ್ಲಿ ಮುಂಚೂಣಿಯಲ್ಲಿರುವ ಹಾಗೂ ಮುಸ್ಲಿಮರು ಹಲಾಲ್ ಆಗಿ ಸೇವಿಸಲು ಅರ್ಹತೆ ಪಡೆದ ಮೊದಲ ರಾಷ್ಟ್ರ’ ಎಂದಿದ್ದಾರೆ.

‘ಸಾಂಪ್ರದಾಯಿಕ ಕೃಷಿ, ಪ್ರಾಣಿ ಸಾಕಾಣಿಕೆ ಮತ್ತು ಮತ್ಸ್ಯ ಸಾಕಾಣಿಕೆಯಂತೆಯೇ ಈ ಆಹಾರವೂ ಹೆಚ್ಚು ಸುಸ್ಥಿರವಾಗಿದೆ. ಹೀಗಾಗಿ ಪ್ರಾಯೋಗಿಕವಾಗಿ ಪರಿಸರ ಸಂರಕ್ಷಣೆ ಮತ್ತು ಸುಸ್ಥಿರತೆಗೆ ತನ್ನದೇ ಆದ ಕೊಡುಗೆಯನ್ನು ಇದು ನೀಡಲಿದೆ’ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

‘ಸಿಂಗಪುರದಲ್ಲಿ 2020ರಲ್ಲೇ ಪ್ರಯೋಗಾಲಯದಲ್ಲಿ ಸಿದ್ಧಪಡಿಸಲಾದ ಮಾಂಸದ ಮಾರಾಟಕ್ಕೆ ಅನುಮತಿ ದೊರೆತಿತ್ತು. ಆದರೆ ಮುಸ್ಲಿಮರು ಇದನ್ನು ಆಹಾರವಾಗಿ ಸೇವಿಸಲು ಒಪ್ಪುತ್ತಾರೆಯೇ ಎಂಬುದರ ಕುರಿತು ಪ್ರಶ್ನೆ ಮೂಡಿತ್ತು. ಇದೀಗ ಆ ಸಂದೇಹವೂ ನಿವಾರಣೆಯಾಗಿದೆ’ ಎಂದಿದ್ದಾರೆ.

ನಾಸಿರುದ್ದೀನ್ ಅವರು ಮಾಹಿತಿ ನೀಡಿ, ‘ಜೈವಿಕ ರಿಯಾಕ್ಟರ್‌ಗಳಲ್ಲಿ ಈ ಮಾಂಸ ಸಿದ್ಧಗೊಳ್ಳುತ್ತದೆ. ಮೂಲತಃ ಇವು ಪ್ರಾಣಿಯ ಜೀವಕೋಶಗಳೇ ಆಗಿರುತ್ತವೆ. ಆದರೆ ನೋಡಲು ಸಹಜವಾಗಿಯೇ ಇದ್ದರೂ, ಮೂಲಭೂತವಾಗಿ ಹೇಗೆ ಭಿನ್ನವಾಗಿರುವುದನ್ನು ಸ್ವೀಕರಿಸಬಹುದು ಎಂಬುದರ ಕುರಿತು ಚರ್ಚೆ ನಡೆದಿತ್ತು. ಆದರೆ ಈ ಮಾಂಸವೂ ಹಲಾಲ್ ಪ್ರಾಣಿಯ ಅಥವಾ ಇಸ್ಲಾಮ್‌ನಲ್ಲಿ ಅನುಮತಿಸಲಾದ ಪ್ರಾಣಿಯ ಜೀವಕೋಶ ಪಡೆದು ಅಭಿವೃದ್ಧಿಪಡಿಸಲಾದ ಪ್ರಯೋಗಾಲಯದ ಮಾಂಸವಾಗಿರಲಿದೆ. ಜತೆಗೆ ಹಲಾಲ್ ಅಲ್ಲದ ಬೇರೆ ಯಾವುದೇ ಅಂಶ ಇದರಲ್ಲಿ ಇಲ್ಲ’ ಎಂದು ತಿಳಿಸಿದರು.

ಸಿಂಗಪೂರದ ಉಪ ಪ್ರಧಾನಿ ಹೆಂಗ್ ಸ್ವೀ ಕೀಟ್‌ ಕೂಡಾ ಈ ಕುರಿತು ಹರ್ಷ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.