ADVERTISEMENT

ಸಂಕ್ರಾಂತಿ ಹಬ್ಬಕ್ಕೆ ತಯಾರಿಸಿ ಉತ್ತರ ಕರ್ನಾಟಕದ ವಿಶೇಷ ಖಾದ್ಯ ಶೇಂಗಾ ಹೋಳಿಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಜನವರಿ 2026, 11:31 IST
Last Updated 13 ಜನವರಿ 2026, 11:31 IST
<div class="paragraphs"><p>ಶೇಂಗಾ ಹೋಳಿಗೆ</p></div>

ಶೇಂಗಾ ಹೋಳಿಗೆ

   

ನಮ್ಮ ಹಬ್ಬಗಳು ಸಂಸ್ಕೃತಿ ಹಾಗೂ ಸಂಪ್ರದಾಯಗಳ ಅಡಿಪಾಯ. ಈ ವರ್ಷ ಜನವರಿ 15ರಂದು ಮಕರ ಸಂಕ್ರಾಂತಿಯನ್ನು ಆಚರಿಸಲಾಗುವುದು. ಭಿನ್ನ ಹೆಸರುಗಳಿಂದ ದೇಶದೆಲ್ಲೆಡೆ ಆಚರಿಸಲಾಗುವ ರೈತರ ಹಬ್ಬ ಸಂಕ್ರಾಂತಿಯನ್ನು ರಾಜ್ಯದ ಜನರು ಬಲು ಸಂಭ್ರಮದಿಂದ ಆಚರಣೆ ಮಾಡುತ್ತಾರೆ. ಗೃಹಿಣಿಯರಂತೂ ಮನೆಗಳಲ್ಲಿ ಸಂಕ್ರಾಂತಿಗೆ ವಿಶೇಷವಾದ ಖಾದ್ಯ, ಸಿಹಿ ತಿನಿಸುಗಳನ್ನು ಮಾಡಿ ಸಂಭ್ರಮಿಸುತ್ತಾರೆ.

ಅದರಲ್ಲೂ ಉತ್ತರ ಕರ್ನಾಟಕದ ಭಾಗಗಳಲ್ಲಿ ಸಂಕ್ರಾಂತಿ ಹಬ್ಬವನ್ನು ಜೋರಾಗಿ ಆಚರಣೆ ಮಾಡುತ್ತಾರೆ. ಮನೆಯಲ್ಲಿ ಎಲ್ಲಾ ಅಡುಗೆಯನ್ನು ತಯಾರಿಸಿ ಜಮೀನಿಗೆ ಹೋಗಿ ಒಟ್ಟಿಗೆ ಊಟ ಮಾಡುವ ಮೂಲಕ ಸಂಭ್ರಮವನ್ನು ದುಪ್ಪಟ್ಟು ಮಾಡುತ್ತಾರೆ. ಈ ಹಬ್ಬದಂದು ಬಲು ವಿಶೇಷವಾದ ಖಾದ್ಯ ಎಂದರೆ ಅದು ಶೇಂಗಾ ಹೋಳಿಗೆ. ಈ ಹೋಳಿಗೆ ಚಳಿಗಾಲದಲ್ಲಿ ದೇಹಕ್ಕೆ ಶಕ್ತಿ ನೀಡುತ್ತದೆ. ಶೇಂಗಾ ಹೋಳಿಗೆಯನ್ನು ಮನೆಯಲ್ಲೇ ಹೇಗೆ ತಯಾರಿಸುತ್ತಾರೆ ಎಂದು ತಿಳಿಯೋಣ.

ADVERTISEMENT

ಶೇಂಗಾ ಹೋಳಿಗೆ ಮಾಡಲು ಬೇಕಾಗಿರುವ ಸಾಮಾಗ್ರಿಗಳು

ಕಡಲೇಕಾಯಿ (ಶೇಂಗಾ), ಮೈದಾ ಹಿಟ್ಟು, ಬೆಲ್ಲ, ತುಪ್ಪ.

ಮಾಡುವ ವಿಧಾನ:

ಮೊದಲು ಕಡಲೇಕಾಯಿಯನ್ನು (ಶೇಂಗಾ) ಒಂದು ಬಾಣಲೆಯಲ್ಲಿ ಹುರಿದುಕೊಳ್ಳಿ. ಶೇಂಗಾ ತಣ್ಣಗಾದ ಬಳಿಕ ಎರಡು ಕೈಗಳ ಸಹಾಯದಿಂದ ಅದರ ಮೇಲಿನ ಸಿಪ್ಪೆಯನ್ನು ತೆಗೆಯಿರಿ. ನಂತರ ಸಿಪ್ಪೆ ತೆಗೆದಿಟ್ಟ ಶೇಂಗಾವನ್ನು ಮಿಕ್ಸಿ ಜಾರಿಗೆ ಹಾಕಿ ಸಣ್ಣಗೆ ರುಬ್ಬಿಕೊಳ್ಳಿ.

ಬಳಿಕ ಒಂದು ಪಾತ್ರೆಯಲ್ಲಿ ನೀರು ಹಾಕಿ ಅದಕ್ಕೆ ಪುಡಿ ಮಾಡಿಕೊಂಡ ಬೆಲ್ಲವನ್ನು ಸೇರಿಸಿ. ಬೆಲ್ಲ ನೀರಿನಲ್ಲಿ ಕರಗಿದ ಬಳಿಕ ಅದನ್ನು ಸಣ್ಣಗೆ ರುಬ್ಬಿಕೊಂಡ ಶೇಂಗಾದ ಜೊತೆಗೆ ಮಿಶ್ರಣ ಮಾಡಿ. ಚೆನ್ನಾಗಿ ನಾದಿಕೊಂಡು ಹೂರಣ ರೂಪಕ್ಕೆ ಉಂಡೆ ಮಾಡಿ. ನಂತರ ನಾದಿಕೊಂಡ ಮೈದಾ ಹಿಟ್ಟಿನ ಮಧ್ಯದಲ್ಲಿ ಚಿಕ್ಕ ಉಂಡೆ ಮಾಡಿಕೊಂಡ ಶೇಂಗಾ ಹೂರಣ ತುಂಬಿಸಿ. ಮುಚ್ಚಿ, ಚಪಾತಿ ರೀತಿಯಲ್ಲಿ ನಯವಾಗಿ ಲಟ್ಟಿಸಿ. ಬಳಿಕ ತವಾದ ಮೇಲೆ ಎಣ್ಣೆ ಅಥವಾ ತುಪ್ಪ ಹಾಕಿ ಎರಡೂ ಬದಿ ಗರಿಗರಿಯಾಗುವವರೆಗೆ ಬೇಯಿಸಿ. ನಂತರ ಒಂದು ತಟ್ಟೆಗೆ ಹೋಳಿಗೆ ಹಾಕಿ ಅದರ ಮೇಲೆ ತುಪ್ಪು ಹಾಕಿದರೆ, ಈಗ ಬಿಸಿಬಿಸಿಯಾದ ಶೇಂಗಾ ಹೋಳಿಗೆ ಸವಿಯಲು ಸಿದ್ಧ. ಇದು ಪುಟಾಣಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಇಷ್ಟವಾಗುವ ಖಾದ್ಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.