
ಚಿತ್ರ: ಗೆಟ್ಟಿ
ಅಡುಗೆಯಲ್ಲಿ ಉಪ್ಪಿನ ಪಾತ್ರ ಬಹಳ ದೊಡ್ಡದು. ಉಪ್ಪಿಲ್ಲದ ಅಡುಗೆ ಸೇವಿಸಲು ಸಾಧ್ಯವಿಲ್ಲ. ಆದರೆ, ಅಡುಗೆ ಮಾಡುವಾಗ ಉಪ್ಪನ್ನು ಯಾವಾಗ ಸೇರಿಸುತ್ತೀರಿ ಎಂಬುದು ಬಹಳ ಮುಖ್ಯ. ಹಾಗಾದರೆ ಯಾವ ಅಡುಗೆಗೆ ಯಾವ ಸಮಯದಲ್ಲಿ ಉಪ್ಪನ್ನು ಸೇರಿಸಬೇಕು ಎಂಬುದರ ಕುರಿತು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ನೀವು ತರಕಾರಿಗಳನ್ನು ಫ್ರೈ ಮಾಡುತ್ತಿದ್ದರೆ ಕೊನೆಯವರೆಗೂ ಉಪ್ಪನ್ನು ಸೇರಿಸಬೇಡಿ. ಏಕೆಂದರೆ ಉಪ್ಪು ತರಕಾರಿಗಳಲ್ಲಿರುವ ನೀರಿನಾಂಶವನ್ನು ಹೊರಹಾಕುತ್ತದೆ. ಇದರಿಂದ ಫ್ರೈ ಮಾಡುವಾಗ ತರಕಾರಿಗಳು ನೀರು ಬಿಟ್ಟುಕೊಳ್ಳುತ್ತವೆ.
ಮುಖ್ಯವಾಗಿ ಅಣಬೆ, ಎಲೆಕೋಸು ಅಥವಾ ಹೂಕೋಸು ಮುಂತಾದ ತರಕಾರಿಗಳನ್ನು ಫ್ರೈ ಮಾಡುವಾಗ ಉಪ್ಪನ್ನು ಬಳಸಲೇಬೇಡಿ. ಈ ತರಕಾರಿಗಳಲ್ಲಿ ಹೆಚ್ಚಿನ ನೀರಿನಾಂಶ ಇರುತ್ತದೆ. ಬಾಣಲೆಗೆ ಈರುಳ್ಳಿ ಸೇರಿಸುವಾಗ ಒಂದು ಚಿಟಿಕೆ ಉಪ್ಪನ್ನು ಸೇರಿಸಬಹುದು. ಕರಿಬೇವು ನಂತರ ಮಸಾಲೆ ಪದಾರ್ಥಗಳನ್ನು ಸೇರಿಸುವುದು ಉತ್ತಮ.
ಮಾಂಸದ ಅಡುಗೆ ಮಾಡುವಾಗ, ಆರಂಭದಲ್ಲಿಯೇ ಉಪ್ಪನ್ನು ಸೇರಿಸುವುದು ಉತ್ತಮ. ಇದರಿಂದ ಮಾಂಸದಲ್ಲಿನ ವಾಸನೆ ಕಡಿಮೆ ಮಾಡುವುದರ ಜೊತೆಗೆ ನೀರಿನಾಂಶವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದು ಆಹಾರವನ್ನು ಮೃದುವಾಗಿಸುತ್ತದೆ.
ಹುರುಳಿ ಅಥವಾ ದ್ವಿದಳ ಧಾನ್ಯಗಳಿಗೆ ಕುದಿಯುತ್ತಿರುವ ಹಂತದಲ್ಲಿ ಉಪ್ಪು ಹಾಕುವುದರಿಂದ ಸರಿಯಾದ ಪ್ರಮಾಣದಲ್ಲಿ ಬೇಯುತ್ತವೆ. ನೀವು ಪ್ರೆಶರ್ ಕುಕ್ಕರ್ ಬಳಸುತ್ತಿದ್ದರೆ ದ್ವಿದಳ ಧಾನ್ಯಗಳು ಚೆನ್ನಾಗಿ ಬೇಯಿಸಿದ ನಂತರ ಉಪ್ಪು ಸೇರಿಸಬಹುದು.
ಸಾಂಬಾರ್ ಅಥವಾ ಹುಳಿ ಮಾಡುವಾಗ ಬೇಳೆ ಕಾಳುಗಳನ್ನು ಬೇಯಿಸಿದ ಬಳಿಕ ಉಪ್ಪು ಸೇರಿಸುವುದು ಉತ್ತಮ.
ಮೀನು ಸಿಗಡಿಯಂತಹ ಸಮುದ್ರದ ಪದಾರ್ಥಗಳನ್ನು ಮಾಡುವಾಗ, ಬೇಯಿಸುವ ಮೊದಲು ಉಪ್ಪನ್ನು ಸೇರಿಸಿ ಬೇಯಿಸಿ. ಇದರಿಂದ ಉಪ್ಪು ಸರಿಯಾಗಿ ಮಿಶ್ರಣವಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.