ADVERTISEMENT

ರಸಾಸ್ವಾದ | ಶಿವರಾತ್ರಿಗೆ ಸಿಹಿ ತಿನಿಸುಗಳು

ಕೆ.ವಿ.ರಾಜಲಕ್ಷ್ಮಿ
Published 22 ಫೆಬ್ರುವರಿ 2025, 0:30 IST
Last Updated 22 ಫೆಬ್ರುವರಿ 2025, 0:30 IST
<div class="paragraphs"><p>ಅವಲಕ್ಕಿ ಉಂಡೆ</p></div>

ಅವಲಕ್ಕಿ ಉಂಡೆ

   
ಶಿವರಾತ್ರಿ ಹಬ್ಬ ಸಮೀಪಿಸುತ್ತಿದೆ. ಶಿವನಿಗೆ ನೈವೇದ್ಯ ಅರ್ಪಿಸಲು ಸರಳವಾದ ಸಿಹಿ ತಿನಿಸುಗಳ ರೆಸಿಪಿಯನ್ನು ಕೆ.ವಿ.ರಾಜಲಕ್ಷ್ಮಿ ನೀಡಿದ್ದಾರೆ. ಜತೆಗೆ ಉಪವಾಸ ಇರುವವರಿಗೆ ಸಿರಿಧಾನ್ಯದ ಗಂಜಿಯೂ ಉತ್ತಮ ಆಯ್ಕೆಯಾಗಬಲ್ಲದು. ಒಮ್ಮೆ ಮಾಡಿ ನೋಡಿ.

ಅವಲಕ್ಕಿ ಉಂಡೆ

ಬೇಕಾಗುವ ಸಾಮಗ್ರಿ:

ADVERTISEMENT

ತೆಳು ಅವಲಕ್ಕಿ 1 ಕಪ್, ಗೋಡಂಬಿ 8, ದ್ರಾಕ್ಷಿ 10, ತೆಂಗಿನ ತುರಿ 2 ಚಮಚ, ಬೆಲ್ಲದಪುಡಿ 3/4 ಕಪ್, ಹಾಲು 1/4 ಕಪ್.

ಮಾಡುವ ವಿಧಾನ:

ಅವಲಕ್ಕಿ, ದ್ರಾಕ್ಷಿ, ಗೋಡಂಬಿಯನ್ನು ಮಿಕ್ಸಿಯಲ್ಲಿ ಪುಡಿ ಮಾಡಿಕೊಂಡು ನಂತರ ತೆಂಗಿನತುರಿ ಮತ್ತು ಬೆಲ್ಲದಪುಡಿ ಸೇರಿಸಿ ಮತ್ತೊಂದು ಸುತ್ತು ತಿರುಗಿಸಿ, ಮಿಕ್ಸಿಂಗ್ ಬೌಲ್‌ಗೆ ಹಾಕಿಕೊಳ್ಳಿ. ಮಿಶ್ರಣವನ್ನು ಮತ್ತೊಮ್ಮೆ ಕಲೆಸಿ, ಅಗತ್ಯ ಬಿದ್ದಷ್ಟು ಹಾಲು ಸೇರಿಸಿಕೊಂಡು, ಸಣ್ಣ ಸಣ್ಣ ಉಂಡೆಗಳನ್ನು ಕಟ್ಟಿ.


****

ಗೋಧಿ ತಂಬಿಟ್ಟು

ಗೋಧಿ ತಂಬಿಟ್ಟು

ಬೇಕಾಗುವ ಸಾಮಗ್ರಿ: 

ಗೋಧಿ ಹಿಟ್ಟು 1 ಕಪ್, ತೆಂಗಿನತುರಿ 2 ಚಮಚ, ಬೆಲ್ಲದ ಪುಡಿ 1 ಕಪ್, ಏಲಕ್ಕಿ ಪುಡಿ 1 ಚಮಚ, ತುಪ್ಪ 2 ಚಮಚ.

ಮಾಡುವ ವಿಧಾನ:

ಮೊದಲಿಗೆ ತುಪ್ಪದಲ್ಲಿ ಗೋಧಿಹಿಟ್ಟನ್ನು ಒಳ್ಳೆಯ ಪರಿಮಳ ಬರುವವರೆಗೆ ಹುರಿದುಕೊಳ್ಳಿ. ನಂತರ ಬಾಣಲೆಯಲ್ಲಿ ಬೆಲ್ಲದ ಪುಡಿಗೆ ಸ್ವಲ್ಪ ನೀರು ಸೇರಿಸಿ, ಸಣ್ಣ ಉರಿಯಲ್ಲಿಡಿ. ಬೆಲ್ಲ ಕರಗಿ ನೊರೆ ಬರುವಾಗ ಹುರಿದ ಗೋಧಿಹಿಟ್ಟು ಮತ್ತು ತೆಂಗಿನತುರಿಯನ್ನು ಸೇರಿಸಿ ಕೈಯಾಡುತ್ತಿರಿ. ಮಿಶ್ರಣ ಬೆಂದು ಹದವಾದಾಗ ಏಲಕ್ಕಿ ಪುಡಿ, ಸ್ವಲ್ಪ ತುಪ್ಪ ಸೇರಿಸಿ ಮಗುಚಿ, ಬೇರೆ ತಟ್ಟೆಗೆ ವರ್ಗಾಯಿಸಿ. ಬಿಸಿಯಿರುವಾಗಲೇ ಸಣ್ಣ ಸಣ್ಣ ಉಂಡೆಗಳನ್ನು ಕಟ್ಟಿ.

****

ರಾಗಿ ಸಿಹಿಬಿಲ್ಲೆ

ರಾಗಿ ಸಿಹಿಬಿಲ್ಲೆ

ಬೇಕಾಗುವ ಸಾಮಗ್ರಿ:

ರಾಗಿ ಹುರಿಹಿಟ್ಟು 1 ಕಪ್, ಒಣಕೊಬ್ಬರಿಪುಡಿ 1 ಚಮಚ, ಬಾದಾಮಿ ತುರಿ 2 ಚಮಚ, ಬೆಲ್ಲದ ಪುಡಿ 3/4 ಕಪ್,

ಮಾಡುವ ವಿಧಾನ:

ಹುರಿಹಿಟ್ಟು, ಕೊಬ್ಬರಿಪುಡಿ ಮತ್ತು ಬೆಲ್ಲವನ್ನು ಸೇರಿಸಿ ಸ್ವಲ್ಪ ಸ್ವಲ್ಪವೇ ನೀರು ಹಾಕಿಕೊಂಡು ಗಟ್ಟಿಯಾಗಿ ಕಲೆಸಿಕೊಂಡು ಒಂದು ತಟ್ಟೆಯ ಮೇಲೆ ಸಮವಾಗಿ ಲಟ್ಟಿಸಿ ಬಾದಾಮಿ ತುರಿಯನ್ನು ಹರಡಿ. ನಂತರ ಬೇಕಾದ ಆಕಾರಕ್ಕೆ ಚಿಕ್ಕ ಚಿಕ್ಕ ಬಿಲ್ಲೆಗಳನ್ನಾಗಿ ಕತ್ತರಿಸಿ.

****

ಸಿರಿಧಾನ್ಯ ಗಂಜಿ

ಒತ್ತಡದ ಬದುಕಿನಲ್ಲಿ ನಮ್ಮ ಆಹಾರ ಪದ್ಧತಿಯೂ ಬದಲಾಗಿದೆ. ನಮ್ಮ ಆಹಾರದಲ್ಲಿ ಆರೋಗ್ಯಕ್ಕಿಂತ, ನಾಲಿಗೆಯನ್ನು ತೃಪ್ತಿ ಪಡಿಸುವ ರುಚಿಯೇ ಹೆಚ್ಚಿರುತ್ತದೆ. ನಿತ್ಯದ ಊಟದಲ್ಲಿ ಸಿರಿಧಾನ್ಯಗಳನ್ನು ಬಳಸುವುದು ಉತ್ತಮ ಎಂದು ನಮಗೂ ಗೊತ್ತಿದ್ದರೂ ಎಲ್ಲ ಧಾನ್ಯವನ್ನು ಬಳಸಿ ತಯಾರಾಗುವ ಪದಾರ್ಥ ಯಾವುದು? ದಿನೇ ದಿನೇ ಮಾಡಲು ಕಷ್ಟವಲ್ಲವೇ? ಎಂಬ ಪ್ರಶ್ನೆಗಳು ಮೂಡುತ್ತವೆ. ಇದಕ್ಕೆಲ್ಲ ಉತ್ತರ ನೀಡುತ್ತದೆ ಸಿರಿಧಾನ್ಯ ಗಂಜಿ ಪುಡಿ. ಈ ಪುಡಿಯನ್ನು ಒಮ್ಮೆ ತಯಾರಿಸಿ ಇಟ್ಟುಕೊಂಡರೆ ಸಾಕು, ನಿತ್ಯ ಗಂಜಿ ಮಾಡಿಕೊಂಡು ಕುಡಿಯಬಹುದು.

ಬೇಕಾಗುವ ಸಾಮಗ್ರಿಗಳು:

ರಾಗಿ (ಅರ್ಧ ಕೆ.ಜಿ), ಹೆಸರು ಕಾಳು, ಮಡಿಕೆ ಕಾಳು, ಹುರುಳಿ ಕಾಳು, ಅಲಸಂದೆ ಕಾಳು, ಕಡಲೆಕಾಳು, ಬಟಾಣಿ ಕಾಳು, ಉದ್ದಿನ ಕಾಳು, ಗೋಧಿ, ಜೋಳ, ಅಕ್ಕಿ, ಬಾರ್ಲಿ, ನವಣೆ, ಸಾಮೆ, ಉದಲು, ಅರ್ಕ್‌, ಕೋರ್ಲ್‌, ಸೋಯಾಕಾಳು (200 ಗ್ರಾಂ), ಮೆಂತ್ಯೆ ಕಾಳು (50 ಗ್ರಾಂ), ಜೀರಿಗೆ (50 ಗ್ರಾಂ).

ಸಿರಿಧಾನ್ಯ ಗಂಜಿ

ಪುಡಿ ಮಾಡುವ ವಿಧಾನ:

ಹೆಸರು, ಮಡಿಕೆ, ಹುರುಳಿ, ಅಲಸಂದೆ, ಕಡಲೆ, ಬಟಾಣಿ ಕಾಳುಗಳನ್ನು ನೀರಿನಲ್ಲಿ ಪ್ರತ್ಯೇಕವಾಗಿ ತೊಳೆದುಕೊಂಡು ನೆನೆ ಹಾಕಬೇಕು. ಕಾಳುಗಳು ನೀರಿನಲ್ಲಿ ನೆನೆದ ನಂತರ ಒಂದು ಒಣ ಬಟ್ಟೆಯಲ್ಲಿ ಕಟ್ಟಿ ಇಡಬೇಕು. ಕಾಳುಗಳು ಮೊಳಕೆಯೊಡೆದ ಮೇಲೆ ಎರಡು ದಿನಗಳವರೆಗೆ ನೆರಳಿನಲ್ಲಿ ಒಣಗಿಸಬೇಕು. ತರುವಾಯ ಬಿಸಿಲಿನಲ್ಲಿ ಎರಡು ದಿನ ಒಣಗಲು ಬಿಡಬೇಕು.

ನಂತರ ಅಕ್ಕಿ, ಬಾರ್ಲಿ, ನವಣೆ, ಸಾಮೆ, ಉದಲು, ಅರ್ಕ್, ಕೋರ್ಲ್, ಸೋಯಾಕಾಳು, ಮೆಂತ್ಯೆ, ಜೀರಿಗೆ ಕಾಳುಗಳನ್ನು ತೊಳೆದು ಒಣಗಿಸಿದ ನಂತರ ಪ್ರತ್ಯೇಕವಾಗಿ ಎಲ್ಲಾ ಕಾಳುಗಳನ್ನು ಹುರಿಯಬೇಕು.

ಹುರಿದ ಕಾಳುಗಳನ್ನು ಸ್ವಲ್ಪ ಆರಲು ಬಿಡಬೇಕು. ನಂತರ ಹಿಟ್ಟಿನ ಗಿರಣಿಯಲ್ಲಿ ನುಣ್ಣಗೆ ಹಿಟ್ಟು ಮಾಡಿಸಬೇಕು. ಈ ಪುಡಿಯನ್ನು ಒಂದು ಡಬ್ಬಿಯಲ್ಲಿ ಶೇಖರಣೆ ಮಾಡಬೇಕು. ಇದು ಒಂದು ವರ್ಷ ಸಂಗ್ರಹ ಯೋಗ್ಯ.

ಗಂಜಿ ಮಾಡುವ ವಿಧಾನ:

ಒಂದು ಪಾತ್ರೆಯಲ್ಲಿ ಒಂದು ಗ್ಲಾಸ್‌ ನೀರು ಹಾಕಿ ಸ್ವಲ್ಪ ಉಪ್ಪು ಅಥವಾ ಬೆಲ್ಲ ಹಾಕಿ ಕುದಿಯಲು ಇಡಬೇಕು. ನೀರು ಚೆನ್ನಾಗಿ ಕುದಿಯುವವರೆಗೆ ಒಂದು ಲೋಟ ನೀರಿಗೆ ಒಂದು ಚಮಚ ಗಂಜಿ ಪುಡಿಯನ್ನು ಬೆರೆಸಿ ಗಂಟಾಗದಂತೆ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನಂತರ ಅದನ್ನು ಕುದಿಯುತ್ತಿರುವ ನೀರಿನಲ್ಲಿ ಹಾಕಿ ಗಂಟುಗಳಾಗದಂತೆ ಚೆನ್ನಾಗಿ ಚಮಚದಿಂದ ತಿರುಗಿಸಿ. ಒಂದು ಕುದಿಯ ನಂತರ ಪಾತ್ರೆಯನ್ನು ಒಲೆಯ ಮೇಲಿಂದ ಕೆಳಗಿಳಿಸಿ, ಉಪ್ಪಿನ ಗಂಜಿಗೆ ಆರಿದ ನಂತರ ಎರಡು ಲೋಟ ಮಜ್ಜಿಗೆ ಸೇರಿಸಿ ಸವಿಯಬಹುದು. ಬೆಲ್ಲದ ಗಂಜಿಗೆ ಹಾಲು ಬೆರೆಸಿ ಕುಡಿಯಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.