
ಪ್ರಜಾವಾಣಿ ಚಿತ್ರ
ಅವಧಿಪೂರ್ವ ಋತುಮತಿಯಾಗುವುದಕ್ಕೆ ಹಾರ್ಮೋನುಗಳಲ್ಲಿನ ಬದಲವಾಣೆ ಕಾರಣ. ಇದನ್ನು ಆಯುರ್ವೇದದ ಮೂಲಕ ಹೇಗೆ ಎದುರಿಸಬೇಕು ಎಂಬುದನ್ನು ಅಪೋಲೊ ಆಯುರ್ವೇದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಹಾಗೂ ಸ್ತ್ರೀರೋಗ ವಿಭಾಗದ ಆಯುರ್ವೇದ ತಜ್ಞರಾದ ಡಾ. ಶ್ವೇತಾ ಎಸ್. ಸುವರ್ಣ ಅವರು ವಿವರಿಸಿದ್ದಾರೆ.
ಮಕ್ಕಳ ಬೆಳವಣಿಗೆಯ ವಿವಿಧ ಹಂತಗಳಲ್ಲಿ ಹರೆಯವೂ ಒಂದು. ಹರೆಯವು ಅವಧಿಗೂ ಮೊದಲೇ ಬಂದರೆ? ಅಂದರೆ, ಮನಸ್ಸು ಹಾಗೂ ದೇಹ ಅದಕ್ಕೆ ಸಿದ್ಧವಾಗುವ ಮೊದಲೇ ಬಂದರೆ ಅದು ಮಕ್ಕಳಲ್ಲಿ ದೈಹಿಕ ಬದಲಾವಣೆಯಷ್ಟೇ ಅಲ್ಲ, ಇತರೆ ಬದಲಾವಣೆಗಳಿಗೂ ಕಾರಣವಾಗಬಹುದು. ಇದು ಹೆಣ್ಣು ಮಕ್ಕಳಲ್ಲಿ ಗೊಂದಲ, ಸಂಕಟ, ಭಾವನಾತ್ಮಕ ಯಾತನೆಗಳಿಗೆ ದಾರಿ ಮಾಡಿಕೊಡಬಹುದು.
ಅವಧಿಗೂ ಮೊದಲೇ ಹರೆಯ ಬರುವುದಕ್ಕೆ ಹಲವು ಅಂಶಗಳು ಕಾರಣವಾಗಿರಬಹುದು. ಅವುಗಳಲ್ಲಿ ದೇಹದಲ್ಲಿನ ಬೊಜ್ಜು, ಹೆಚ್ಚಿನ ಕ್ಯಾಲರಿ ಇರುವ ಆಹಾರ ಸೇವನೆ, ಆಹಾರದಲ್ಲಿನ ಹಾರ್ಮೋನುಗಳು, ದೈಹಿಕ ಚಟುವಟಿಕೆಗಳ ಕೊರತೆ ಹಾಗೂ ಕೆಲವು ರಾಸಾಯನಿಕಗಳು ಕೂಡ ಇದಕ್ಕೆ ಕಾರಣ ಆಗಿರಬಹುದು ಎಂದು ಅಧ್ಯಯನ ಹೇಳುತ್ತದೆ.
ಇದನ್ನು ಆಯುರ್ವೇದವು ಹೇಗೆ ಗ್ರಹಿಸುತ್ತದೆ?
ಹರೆಯವು ಅವಧಿಗೆ ಮೊದಲೇ ಶುರುವಾಗುವುದನ್ನು ಆಯುರ್ವೇದವು ದೋಷಗಳ ಸಹಜ ಅಥವಾ ಸಮತೋಲನದಲ್ಲಿ ಆಗುವ ವ್ಯತ್ಯಾಸ ಎಂಬುದಾಗಿ ಗ್ರಹಿಸುತ್ತದೆ. ಒಂದು ಸಂಗತಿ ದೇಹವನ್ನು ಅವಧಿಗೂ ಮುನ್ನ ಪ್ರಚೋದಿಸುತ್ತಿರುವ ಕಾರಣಕ್ಕೆ, ದೇಹವು ತನ್ನ ಬೆಳವಣಿಗೆಯನ್ನು ಹೆಚ್ಚು ವೇಗವಾಗಿಸುವುದರಿಂದ ಈ ರೀತಿಯಾಗುತ್ತದೆ ಎಂದು ಆಯುರ್ವೇದಲ್ಲಿ ಹೇಳಲಾಗುತ್ತದೆ.
ಸಾವಧಾನದ ಹಾದಿ:
ಆಯುರ್ವೇದದಲ್ಲಿ ಸಮಸ್ಯೆಯ ಲಕ್ಷಣಗಳು ಕಂಡುಬಂದ ನಂತರ ಚಿಕಿತ್ಸೆ ಆರಂಭವಾಗುವುದಿಲ್ಲ. ಬದಲಾಗಿ ಆರೈಕೆಯು ಅರಿವಿನ ಮೂಲಕ ಆರಂಭವಾಗುತ್ತದೆ. ಮಗುವಿನ ಭೌತಿಕ ಹಾಗೂ ಭಾವನಾತ್ಮಕ ಚಹರೆಗಳನ್ನು ಸೂಕ್ಷ್ಮವಾಗಿ ಗಮನಿಸುವ ಮೂಲಕ ಅದರ ಸುತ್ತಲಿನ ಪರಿಸರವನ್ನು ಸಾವಧಾನವಾಗಿ ಮರುಹೊಂದಿಸಲಾಗುತ್ತದೆ. ಮಗುವು ಸಹಜ ಬೆಳವಣಿಗೆ ಹಾಗೂ ಸಹಜ ಲಯಕ್ಕೆ ಮರಳಲು ಪೂರಕವಾಗುವಂತೆ ಮಾಡಬಹುದು.
ಆಯುರ್ವೇದದಲ್ಲಿ ಸಮಸ್ಯೆಯನ್ನು ತಡೆಯುವ ಪ್ರಕ್ರಿಯೆಗೆ ‘ನಿಧಾನ ಪರಿವರ್ಜನ’ ಎಂದು ಕರೆಯಲಾಗುತ್ತದೆ. ಅಂದರೆ ಸಮಸ್ಯೆಗೆ ಕಾರಣವಾಗುವ ಅಂಶವನ್ನು ನಿವಾರಿಸುವುದು. ಇದು ಕಫ ಮತ್ತು ಪಿತ್ತವನ್ನು ಹೆಚ್ಚು ಮಾಡುವ ಅಭ್ಯಾಸಗಳಿಂದ ದೂರ ಇರುವುದನ್ನು ಒಳಗೊಂಡಿರುತ್ತದೆ.
ಸಕ್ಕರೆ ಹೆಚ್ಚಿರುವ ಬೇಕರಿ ತಿಂಡಿಗಳು, ಸಾಫ್ಟ್ ಡ್ರಿಂಕ್‌ಗಳು, ಕರಿದ ಹಾಗೂ ಸಂಸ್ಕರಿಸಿದ ಆಹಾರಗಳು, ಕ್ಷೀರ ಉತ್ಪನ್ನಗಳ ಅತಿಯಾದ ಸೇವನೆ, ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡದಿರುವುದು ಹಾಗೂ ಡಿಜಿಟಲ್ ಪರದೆಯ ವೀಕ್ಷಣೆಯಿಂದ ದೂರ ಇರುವುದನ್ನು ಒಳಗೊಂಡಿದೆ.
ಭಾವನಾತ್ಮಕ ಆರೋಗ್ಯ ಬಹಳ ಮುಖ್ಯವಾದದ್ದು. ಕಿರಿಯರು ಒತ್ತಡ ಅನುಭವಿಸುತ್ತಿದ್ದರೆ ಅದು ಹಾರ್ಮೋನಗಳ ಸಮತೋಲನದ ಮೇಲೆ ಪರಿಣಾಮ ಉಂಟುಮಾಡಬಹುದು. ಮಕ್ಕಳ ಭಾವನಾತ್ಮಕ ಒಳ ಜಗತ್ತನ್ನು ಅರ್ಥ ಮಾಡಿಕೊಳ್ಳುವುದು ಅವರ ಬಾಹ್ಯ ಚಟುವಟಿಕೆಗಳನ್ನು ನಿರ್ವಹಿಸುವುದರಷ್ಟೇ ಮುಖ್ಯವಾಗುತ್ತದೆ.
ಸೂರ್ಯನ ಬೆಳಕಿಗೆ ಮೈ ಒಡ್ಡುವುದು, ದೈಹಿಕ ಚಟುವಟಿಕೆ, ಸೈಕಲ್ ತುಳಿಯುವುದು ಹಾಗೂ ನೃತ್ಯದಂತಹ ಸೃಜನಶೀಲ ಕ್ರಿಯೆಗಳಲ್ಲಿ ತೊಡಗಿಕೊಳ್ಳುವುದು ಬೆಳವಣಿಗೆ ಹಾಗೂ ಭಾವನಾತ್ಮಕ ಗಟ್ಟಿತನಕ್ಕೆ ಸಹಾಯವಾಗುತ್ತದೆ.
ಋತುಮಾನಕ್ಕೆ ತಕ್ಕ ಹಾಗೂ ಸಾತ್ವಿಕ ಹಣ್ಣು, ತರಕಾರಿ, ಧಾನ್ಯ, ತುಪ್ಪ ಹಾಗೂ ಮಜ್ಜಿಗೆಯನ್ನು ಹೇರಳವಾಗಿರುವ ಆಹಾರ ಸೇವನೆ ಮಾಡಬೇಕು. ಧ್ಯಾನ, ಪ್ರಾಣಾಯಾಮ ಹಾಗೂ ಯೋಗ ಮನಸ್ಸನ್ನು ಸಮಾಧಾನದಿಂದ ಇರಿಸಿಕೊಳ್ಳುವುದಕ್ಕೆ ಹಾಗೂ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ನೆರವಾಗುತ್ತವೆ. ಇದು ಹಾರ್ಮೋನುಗಳ ಸಮತೋಲನಕ್ಕೆ ಕಾರಣವಾಗುತ್ತದೆ.
ಮಕ್ಕಳಿಗೆ ಪೂರಕವಾದ ಚಿಕಿತ್ಸೆ:
ಸಣ್ಣ ಪ್ರಮಾಣದಲ್ಲಿ ಜೀರ್ಣಾಂಗ ವ್ಯವಸ್ಥೆಯ ಶುದ್ಧೀಕರಣ (ಅನುಲೋಮನ ಅಥವಾ ವಿರೇಚನ)
ವಾತ ದೋಷವನ್ನು ಸರಿಪಡಿಸಲು ಮಾತ್ರ ವಸ್ತಿ (ಸಣ್ಣ ಪ್ರಮಾಣದ, ಆರೈಕೆಯ ಎನಿಮಾ)
ಪ್ರತಿಮಾರ್ಶ ನಾಸ್ಯ – ಸಮತೋಲನಕ್ಕಾಗಿ ಮೂಗಿಗೆ ಪ್ರತಿದಿನ ಎಣ್ಣೆ ಬಿಡುವುದು.
ಅಭ್ಯಂಗ (ತೈಲದಿಂದ ಮಸಾಜ್) ಮತ್ತು ಆರಾಮಕ್ಕಾಗಿ ಹಗುರ ಪ್ರಮಾಣದಲ್ಲಿ ಆವಿ ಸ್ನಾನ ಮಾಡುವುದು.
ಒತ್ತಡ ಕಡಿಮೆ ಮಾಡಿಕೊಳ್ಳಲು ಹಾಗೂ ಆಳವಾದ ನಿದ್ರೆಗೆ ಜಾರಲು ಶಿರೋಧಾರ
ಸ್ನಾನಕ್ಕೂ ಮೊದಲು ಎಣ್ಣೆಯಿಂದ ಮೈಯನ್ನು ನೀವಿಸಿಕೊಳ್ಳುವುದು, ದಿನನಿತ್ಯ ಆಟವಾಡುವುದು, ಡಿಜಿಟಲ್ ಪರದೆಯ ವೀಕ್ಷಣೆಗೆ ಮಿತಿ ಹಾಕಿಕೊಳ್ಳುವುದು, ಸರಿಯಾಗಿ ನೀರು ಕುಡಿಯುವುದು, ನಿದ್ದೆ ಮಾಡುವುದರಲ್ಲಿ ಶಿಸ್ತನ್ನು ರೂಢಿಸಿಕೊಳ್ಳುವುದು ಮಕ್ಕಳ ದೇಹದಲ್ಲಿ ಸಮತೋಲನವನ್ನು ತಂದುಕೊಡುತ್ತವೆ. ಅಲ್ಲದೆ, ಮಕ್ಕಳಲ್ಲಿ ಸುರಕ್ಷತೆಯ ಭಾವನೆ ಮೂಡಿಸುತ್ತವೆ.
ಶಮನಕಾರಿ ಚಿಕಿತ್ಸೆ ಅಂದರೆ, ನಾವು ದೇಹಕ್ಕೆ ಏನನ್ನು ನೀಡುತ್ತಿದ್ದೇವೆ ಎಂಬುದಷ್ಟೇ ಅಲ್ಲ, ನಮ್ಮ ಮನಸ್ಸಿಗೆ ಏನನ್ನು ಕೊಟ್ಟೆವು ಎಂಬುದೂ ಮುಖ್ಯ ಎಂದು ಆಯುರ್ವೇದ ಹೇಳುತ್ತದೆ. ಎಲ್ಲ ಮಕ್ಕಳಿಗೂ ಔಷಧ ಹಾಗೂ ಚಿಕಿತ್ಸೆಯ ಅಗತ್ಯ ಇರುವುದಿಲ್ಲ. ಚಿಕಿತ್ಸೆಯು ಹಿತಮಿತವಾಗಿ ಮಗುವಿನ ವಯಸ್ಸಿಗೆ ತಕ್ಕಂತೆ ಇರಬೇಕು. ಅವಶ್ಯಕತೆ ಬಂದಾಗ ಎಲ್ಲ ಬಗೆಯ ಆರೈಕೆ ಇರಬೇಕು.
ವಯಸ್ಸಿಗೆ ಮೊದಲೇ ಹರೆಯ ಬಂದಾಗ, ದೇಹವು ಮಗುವಿಗಿಂತ ಹೆಚ್ಚು ವೇಗವಾಗಿ ಮುಂದಕ್ಕೆ ಸಾಗುತ್ತಿದೆ ಎಂಬಂತೆ ಕಾಣಿಸಬಹುದು. ಆದರೆ ನಾವು ಆ ದೇಹವನ್ನು ಬಹಳ ಸಾವಕಾಶವಾಗಿ ಹಿಂದಕ್ಕೆ ಕರೆತರಬಹುದು. ಆರೈಕೆಯ ಆಹಾರ, ಕೆಲವು ನಿತ್ಯದ ಚಟುವಟಿಕೆಗಳು, ಚಿಕಿತ್ಸೆಗಳು, ಮನಸ್ಸಿನ ಮಾತು ಕೇಳುವ ಪ್ರೀತಿಯ ಮೂಲಕ ಆಯುರ್ವೇದವು ಮಕ್ಕಳಿಗೆ ಬೆಂಬಲವಾಗಿ ನಿಲ್ಲಲು ಬೇಕಿರುವ ಸಹಾನುಭೂತಿಯ ಮಾರ್ಗವನ್ನು ತೋರಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.