ADVERTISEMENT

Children Skin Care: ಮಕ್ಕಳ ಮೃದು ಚರ್ಮಕ್ಕಿರಲಿ ಅಕ್ಕರೆಯ ಆರೈಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಜನವರಿ 2026, 12:12 IST
Last Updated 30 ಜನವರಿ 2026, 12:12 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ವಿಜ್ಞಾನವೂ ಹೇಳುವಂತೆ ಚರ್ಮವು ದೇಹದ ಅತಿ ದೊಡ್ಡ ಸಂವೇದನಾಂಗ. ಬಿಸಿ–ತಂಪು ತಿಳಿಯುವುದು, ನೋವು ಅಥವಾ ಉರಿ ಅರಿಯುವುದು ಚರ್ಮದ ಮೂಲಕವೇ. ಇದೇ ಕಾರಣಕ್ಕೆ ಚರ್ಮವನ್ನು ‘ದೇಹದ ಮೊದಲ ರಕ್ಷಣಾ ಪದರ’ ಎಂದು ಕರೆಯಲಾಗುತ್ತದೆ. ಮಕ್ಕಳ ಚರ್ಮ ಸೂಕ್ಷ್ಮವಾಗಿರುವ ಕಾರಣ ಆರೈಕೆ ಅಗತ್ಯವಾಗಿರುತ್ತದೆ. ಈ ಬಗ್ಗೆ ಆಯುರ್ವೇದ ತಜ್ಞರು ನೀಡಿರುವ ಮಾಹಿತಿ ಇಲ್ಲಿದೆ.

ಹೊರಗಿನ ಬ್ಯಾಕ್ಟೀರಿಯಾ, ಧೂಳು, ತಾಪಮಾನದ ಬದಲಾವಣೆಗಳಿಂದ ದೇಹವನ್ನು ಕಾಪಾಡುವ ಪ್ರಮುಖ ಕೆಲಸ ಚರ್ಮದ್ದೇ. ನಮ್ಮ ದೇಹದ ಹೊರಭಾಗದಲ್ಲಿ ಕಾಣಿಸುವ ಚರ್ಮವನ್ನು ಆಯುರ್ವೇದದಲ್ಲಿ ‘ತ್ವಕ್’ ಎಂದು ಕರೆಯುತ್ತಾರೆ. ಚರ್ಮವು ಕೇವಲ ಹೊರಗಿನ ಆವರಣವಲ್ಲ. ಇದು ನಮ್ಮ ದೇಹದ ಆರೋಗ್ಯದ ಕನ್ನಡಿ. ಮಕ್ಕಳಲ್ಲಿ ವಿಶೇಷವಾಗಿ ಚರ್ಮ ತುಂಬಾ ಮೃದುವಾಗಿರುತ್ತದೆ, ನಾಜೂಕಾಗಿರುತ್ತದೆ. ಅದಕ್ಕಾಗಿ ಮಕ್ಕಳ ಚರ್ಮವನ್ನು ಹೆಚ್ಚು ಜಾಗ್ರತೆಯಿಂದ ನೋಡಿಕೊಳ್ಳಬೇಕಾಗುತ್ತದೆ.

ಮಕ್ಕಳ ಚರ್ಮದ ಆರೈಕೆಗೆ ಸಲಹೆಗಳು

ಚರ್ಮವು ತಾಯಿಯ ಗರ್ಭದಲ್ಲೇ ರೂಪುಗೊಳ್ಳುತ್ತದೆ. ತಾಯಿಯ ಆಹಾರ, ಆರೋಗ್ಯ ಮತ್ತು ಮನಸ್ಸಿನ ಸ್ಥಿತಿಯೂ ಮಗುವಿನ ಚರ್ಮದ ಮೇಲೆ ಪ್ರಭಾವ ಬೀರುತ್ತದೆ. ಮಗು ಹುಟ್ಟಿದ ನಂತರವೂ, ಅದಕ್ಕೆ ತಿನ್ನಿಸುವ ಆಹಾರ, ಕುಡಿಯುವ ನೀರು, ಹವಾಮಾನ ಮತ್ತು ದಿನಚರಿಯ ಮೇಲೆ ಚರ್ಮದ ಆರೋಗ್ಯ ನಿಂತಿರುತ್ತದೆ. ನಾವು ತಿನ್ನುವ ಆಹಾರ ಸರಿಯಾಗಿ ಜೀರ್ಣವಾದಾಗ ದೇಹಕ್ಕೆ ಶುದ್ಧ ಪೋಷಕಾಂಶಗಳು ಸಿಗುತ್ತವೆ. ಈ ಪೋಷಕಾಂಶಗಳೇ ಚರ್ಮಕ್ಕೆ ಬಲ, ಹೊಳಪು ನೀಡುತ್ತವೆ. ಅದರಿಂದ ಚರ್ಮ ಮೃದುವಾಗಿ, ಕಾಂತಿಯುತವಾಗಿ ಕಾಣಿಸುತ್ತದೆ. ಆದರೆ ಆಹಾರ ಸರಿಯಾಗಿ ಜೀರ್ಣವಾಗದಿದ್ದರೆ, ಒಳಗಡೆ ಕಲುಷಿತತೆ ಹೆಚ್ಚಾಗಿ, ಅದರ ಮೊದಲ ಲಕ್ಷಣಗಳು ಚರ್ಮದಲ್ಲೇ ಕಾಣಿಸುತ್ತವೆ. ಒಣ ಅಥವಾ ಒರಟುತನ, ಚರ್ಮ ಕಪ್ಪಾಗುವುದು, ಕಳೆಗುಂದಿದ ಚರ್ಮ ಇವೆಲ್ಲವೂ ದೇಹದ ಒಳಗಿನ ಅಸಮತೋಲನದ ಸೂಚನೆಗಳಾಗಿವೆ.

ADVERTISEMENT

ಮಕ್ಕಳ ಚರ್ಮದ ಮೇಲೆ ಹೊರಗಿನ ಕಾರಣಗಳು ಬಹಳ ಪ್ರಭಾವ ಬೀರುತ್ತವೆ.

ತಣ್ಣನೆಯ ನೀರಿನಲ್ಲಿ ಸ್ನಾನ ಮಾಡಿಸುವುದು, ಹೆಚ್ಚು ಸಾಬೂನು ಬಳಸುವುದು, ರಾಸಾಯನಿಕ ಮಿಶ್ರಿತ ಕ್ರೀಮ್‌ಗಳನ್ನು ಹಚ್ಚುವುದು, ಬಿಸಿಲಿನಲ್ಲಿ ಹೆಚ್ಚು ಸಮಯ ಆಟವಾಡುವುದು – ಇವೆಲ್ಲವೂ ಚರ್ಮವನ್ನು ಹಾನಿಗೊಳಿಸಬಹುದು. ಹಾಗೆಯೇ ಸರಿಯಾದ ನಿದ್ದೆ ಇಲ್ಲದಿರುವುದು, ಹೆಚ್ಚು ಫಾಸ್ಟ್ ಫುಡ್ ತಿನ್ನುವುದು, ನೀರು ಕಡಿಮೆ ಕುಡಿಯುವುದೂ ಚರ್ಮದ ಆರೋಗ್ಯವನ್ನು ಕೆಡಿಸುತ್ತದೆ.

ಋತುಗಳು ಬದಲಾವಣೆಯೂ ಮಕ್ಕಳ ಚರ್ಮದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಬೇಸಿಗೆಯಲ್ಲಿ ಚರ್ಮದಲ್ಲಿ ಹೆಚ್ಚು ಬೆವರು, ದದ್ದುಗಳು, ಕೆಮಪು ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಚಳಿಗಾಲದಲ್ಲಿ ಚರ್ಮ ಒಣಗುವುದು, ಬಿರುಕು ಬೀಳುವುದು, ತುಟಿಗಳು ಒಣಗುವುದು ಸಾಮಾನ್ಯ. ಮಳೆಗಾಲದಲ್ಲಿ ಚರ್ಮದ ಸೋಂಕುಗಳು, ತುರಿಕೆ ಹೆಚ್ಚಾಗಬಹುದು. ಆದ್ದರಿಂದ ಪ್ರತಿಯೊಂದು ಋತುವಿನಲ್ಲಿ ಮಕ್ಕಳ ಚರ್ಮದ ಆರೈಕೆ ಮುಖ್ಯವಾಗಿರುತ್ತದೆ.

ಬೇಸಿಗೆಯಲ್ಲಿ ಮಕ್ಕಳಿಗೆ ತಂಪಾದ, ಪೌಷ್ಠಿಕಾಂಶ ಆಹಾರ ನೀಡುವುದು ಉತ್ತಮ. ಮಜ್ಜಿಗೆ, ಎಳನೀರು, ರಾಗಿ ಗಂಜಿ, ಹಣ್ಣು, ತರಕಾರಿಗಳು ಹೆಚ್ಚು ಉಪಯುಕ್ತ. ಚಳಿಗಾಲದಲ್ಲಿ ತುಪ್ಪ ಮಿಶ್ರಿತ ಆಹಾರ ನೀಡಬೇಕು. ಎಳ್ಳೆಣ್ಣೆ ಅಥವಾ ತೆಂಗಿನ ಎಣ್ಣೆಯ ಮಾಲೀಶು ಚರ್ಮಕ್ಕೆ ಒಳ್ಳೆಯದು. ಒದ್ದೆಯಾದ ಬಟ್ಟೆಗಳನ್ನು ತಕ್ಷಣ ಬದಲಾಯಿಸುವುದು ಸೇರಿದಂತೆ ಮಳೆಗಾಲದಲ್ಲಿ ಸ್ವಚ್ಛತೆಗೆ ಹೆಚ್ಚು ಗಮನ ಕೊಡಬೇಕು.

ಮಕ್ಕಳ ಚರ್ಮದ ಆರೈಕೆಯಲ್ಲಿ ದಿನನಿತ್ಯ ಸ್ವಚ್ಛ ನೀರಿನಲ್ಲಿ ಸ್ನಾನ, ವಯಸ್ಸಿಗೆ ತಕ್ಕಂತೆ ಎಣ್ಣೆ ಮಸಾಜ್, ವಯಸ್ಸಿಗೆ ಅನುಸಾರವಾಗಿ ನೀರು ಕುಡಿಸುವುದನ್ನು ಮರೆಯಬಾರದು.

ಮಕ್ಕಳ ಚರ್ಮಕ್ಕೆ ಏನೇ ಸಮಸ್ಯೆ ಬಂದರೂ, ಕೇವಲ ಹೊರಗಿನಿಂದ ಮದ್ದು ಹಚ್ಚುವುದಕ್ಕಿಂತ, ಆಹಾರ ಮತ್ತು ಜೀವನಶೈಲಿಯನ್ನೂ ಸರಿಪಡಿಸಿಕೊಳ್ಳಬೇಕು.

ಚರ್ಮದ ಆರೈಕೆ/ ಸಂರಕ್ಷಣೆಗೆ ಲೇಪ

ಚರ್ಮದ ಮೇಲೆ ಔಷಧೀಯ ದ್ರವ್ಯಗಳನ್ನು ಮಿಶ್ರಣ ಮಾಡಿ ಹಚ್ಚುವುದನ್ನು ಆಯುರ್ವೇದದಲ್ಲಿ ‘ಲೇಪ’ ಎಂದು ಕರೆಯುತ್ತಾರೆ. ಲೇಪವನ್ನು ಕೇವಲ ಸೌಂದರ್ಯಕ್ಕಾಗಿ ಅಲ್ಲ, ಚರ್ಮಕ್ಕೆ ತಂಪು ನೀಡಲು, ಉರಿ ಕಡಿಮೆ ಮಾಡಲು, ಒಣತನ ತಗ್ಗಿಸಲು ಮತ್ತು ಚರ್ಮವನ್ನು ಆರೋಗ್ಯವಾಗಿಡಲು ಬಳಸಲಾಗುತ್ತದೆ. 

ಮಕ್ಕಳಿಗೆ ಔಷಧ ನೀಡುವುದಕ್ಕಿಂತಲೂ, ಲೇಪದ ಮೂಲಕ ಚರ್ಮದ ಮೂಲಕವೇ ಆರೈಕೆ ಮಾಡುವುದು ಸುರಕ್ಷಿತ ಮತ್ತು ಸುಲಭವಾಗಿದೆ.

ಲೇಪವನ್ನು ತಾಜಾ ತಯಾರಿಸಬೇಕು. ಹಳೆಯದನ್ನು ಮರುಬಳಕೆ ಮಾಡಬಾರದು. ಚರ್ಮವನ್ನು ಸ್ವಚ್ಛವಾಗಿ ತೊಳೆದ ನಂತರ ಮಾತ್ರ ಲೇಪ ಹಚ್ಚಬೇಕು. ಲೇಪ ಸಂಪೂರ್ಣ ಒಣಗುವವರೆಗೆ ಬಿಡದೇ, ಸ್ವಲ್ಪ ಒಣಗಿದ ನಂತರ ನೀರಿನಿಂದ ತೊಳೆಯುವುದು ಉತ್ತಮ.

ಚಂದನ, ಮಂಜಿಷ್ಠ, ಜ್ಯೇಷ್ಠ ಮಧು ಅಥವಾ ಕಚೋರ ಪುಡಿಗಳಿಗೆ ಅಗತ್ಯಕ್ಕೆ ತಕ್ಕಂತೆ ನೀರು, ಹಾಲು ಅಥವಾ ಎಣ್ಣೆ ಸೇರಿಸಿ ಮೃದು ಮಿಶ್ರಣ ಮಾಡಿಕೊಳ್ಳುವ ವಿಧಾನವನ್ನು ಲೇಪ ಎಂದು ಕರೆಯುತ್ತಾರೆ. ನೀರು ಅಥವಾ ಹಾಲಿನಲ್ಲಿ ಬೆರೆಸಿದ ಲೇಪವೇ ಮಕ್ಕಳಿಗೆ ಸೂಕ್ತ. 

ಋತುವಿನ ಪ್ರಕಾರ ಲೇಪದ ಉಪಯೋಗ

  • ಬೇಸಿಗೆಯಲ್ಲಿ ಮಕ್ಕಳಲ್ಲಿ ಹೆಚ್ಚು ಬೆವರು, ಚರ್ಮದ ಮೇಲೆ ಉರಿ, ಕೆಂಪು ಗುಳ್ಳೆಗಳು ಮತ್ತು ಸುಡುವ ಭಾವ ಕಾಣಿಸಿಕೊಳ್ಳುತ್ತದೆ. ಈ ಸಮಯದಲ್ಲಿ ತಂಪು ನೀಡುವ ಲೇಪಗಳು ಬಹಳ ಉಪಯುಕ್ತ.

  • ಚಂದನ ಪುಡಿ ಅಥವಾ ಚಂದನ–ಜ್ಯೇಷ್ಠ ಮಧು ಲೇಪವನ್ನು ನೀರು ಅಥವಾ ಹಾಲಿನಲ್ಲಿ ಬೆರೆಸಿ ಹಚ್ಚಿದರೆ ಚರ್ಮ ತಂಪಾಗಿರಲು ಸಹಕರಿಸುತ್ತದೆ. 

  • ಮಂಜಿಷ್ಠ ಸೇರಿಸಿದರೆ ಚರ್ಮದ ಬಣ್ಣ ತಿಳಿಯಾಗಲು ಸಹಾಯ ಮಾಡುತ್ತದೆ. ಈ ಲೇಪವನ್ನು ಮುಖ, ಕೈ, ಕಾಲು ಅಥವಾ ಬೆವರು ಗುಳ್ಳೆಗಳು ಇರುವ ಜಾಗಗಳಲ್ಲಿ ಬಳಸಬಹುದು.

  • ಮಳೆಗಾಲದ ಸಮಯದಲ್ಲಿ ಚರ್ಮದ ಮೇಲೆ ತುರಿಕೆ, ಅಲರ್ಜಿಗಳು ಮತ್ತು ಸಣ್ಣ ಸೋಂಕುಗಳು ಹೆಚ್ಚಾಗಿರುತ್ತವೆ. ಈ ಕಾಲದಲ್ಲಿ ಲೇಪಗಳು ಚರ್ಮವನ್ನು ಒಣಗಿಸದೆ, ಅತಿಯಾದ ತೇವವನ್ನು ಕಡಿಮೆ ಮಾಡುವಂತಿರಬೇಕು.

  • ಕಚೋರ ಮತ್ತು ಮಂಜಿಷ್ಠವನ್ನು ಸ್ವಲ್ಪ ನೀರಿನಲ್ಲಿ ಬೆರೆಸಿ ಹಚ್ಚಿದರೆ ಚರ್ಮದ ದುರ್ಗಂಧ, ತುರಿಕೆ ಮತ್ತು ಸೋಂಕು ಕಡಿಮೆಯಾಗುತ್ತದೆ. 

  • ಚಳಿಗಾಲದಲ್ಲಿ ಮಕ್ಕಳ ಚರ್ಮ ಒಣಗುವುದು, ಬಿರುಕು ಬಿಡುವುದು, ತುಟಿಗಳು ಒಣಗುವುದು ಸಾಮಾನ್ಯ. ಹೀಗಾಗಿ ಪೋಷಣೆಯನ್ನು ನೀಡುವ ಲೇಪಗಳು ಅಗತ್ಯ.

  • ಶಾಲಿ ಅಕ್ಕಿಯನ್ನು ಬೇಯಿಸಿ ಹಾಲಿನಲ್ಲಿ ಮಿಶ್ರಣ ಮಾಡಿ ಲೇಪವನ್ನು ಹಚ್ಚಿದರೆ ಚರ್ಮ ಮೃದುವಾಗುತ್ತದೆ. ಜ್ಯೇಷ್ಠ ಮಧು ಸೇರಿಸಿದರೆ ತುರಿಕೆ ಮತ್ತು ಒಣಗುವಿಕೆಯನ್ನು ಕಡಿಮೆ ಮಾಡಲು ಸಹಕರಿಸುತ್ತದೆ. 

  • ಮಕ್ಕಳ ಚರ್ಮದ ಆರೋಗ್ಯವು ಕೇವಲ ಸೌಂದರ್ಯದ ವಿಷಯವಲ್ಲ. ಅದು ಮಗುವಿನ ಆರೋಗ್ಯದ ಭಾಗವೂ ಹೌದು. ಸರಿಯಾದ ಆಹಾರ, ಋತುವಿಗೆ ತಕ್ಕ ಜೀವನಶೈಲಿ ಮತ್ತು ಸ್ವಚ್ಛತೆ – ಇವನ್ನೆಲ್ಲ ಪಾಲಿಸಿದರೆ ಮಕ್ಕಳ ಚರ್ಮ ಸಹಜವಾಗಿಯೇ ಆರೋಗ್ಯದಿಂದ ಹೊಳೆಯುತ್ತದೆ ಎನ್ನುತ್ತಾರೆ ಮಕ್ಕಳ ಆರೋಗ್ಯ ವಿಭಾಗದ ಆಯುರ್ವೇದ ತಜ್ಞರು.

ಮಾಹಿತಿ: ಡಾ. ಪೂರ್ಣಿಮಾ ಎನ್, ಸಹ ಪ್ರಾಧ್ಯಾಪಕಿ, ಕೌಮಾರಭೃತ್ಯ ವಿಭಾಗ (ಆಯುರ್ವೇದ ಮಕ್ಕಳ ರೋಗ ತಜ್ಞರು) ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ, ಹೆಗ್ಗೇರಿ ಬಡಾವಣೆ ಹುಬ್ಬಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.