ADVERTISEMENT

ಈ ಸಲಹೆಗಳನ್ನು ಪಾಲಿಸಿದರೆ ಸಾಕು ನಿಮ್ಮ ಮಿದುಳು ಚುರುಕಾಗುತ್ತೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 7:25 IST
Last Updated 17 ಡಿಸೆಂಬರ್ 2025, 7:25 IST
<div class="paragraphs"><p>ಚಿತ್ರ: ಗೆಟ್ಟಿ</p></div>
   

ಚಿತ್ರ: ಗೆಟ್ಟಿ

ಮಿದುಳು ದೇಹದ ಅತ್ಯಂತ ಶಕ್ತಿಶಾಲಿ ಅಂಗಗಳಲ್ಲಿ ಒಂದು. ಇತರೆ ಅಂಗಗಳಂತೆ ಮಿದುಳಿಗೂ ನಿಯಮಿತ ವ್ಯಾಯಾಮ ಮತ್ತು ಆರೈಕೆಯ ಅವಶ್ಯಕತೆ ಇದೆ. ಸರಿಯಾದ ಅಭ್ಯಾಸಗಳ ಮೂಲಕ ನಮ್ಮ ಮಾನಸಿಕ ತೀಕ್ಷ್ಣತೆಯನ್ನು ಹೆಚ್ಚಿಸಬಹುದಾಗಿದೆ. ಈ ಅಭ್ಯಾಸಗಳಿಂದ ಸ್ಮರಣ ಶಕ್ತಿ ಮತ್ತು ಬೌದ್ಧಿಕ ಸಾಮರ್ಥ್ಯ ವೃದ್ಧಿಯಾಗುತ್ತದೆ.

ನಿತ್ಯ ಓದುವ ಅಭ್ಯಾಸ 

ಪುಸ್ತಕ ಓದುವುದು ಮಿದುಳಿಗೆ ಅತ್ಯುತ್ತಮ ವ್ಯಾಯಾಮವಾಗಿದೆ. ವಿವಿಧ ವಿಷಯಗಳ ಕುರಿತಾದ ಪುಸ್ತಕ, ಪತ್ರಿಕೆ ಮತ್ತು ಲೇಖನಗಳನ್ನು ಓದುವುದರಿಂದ ನಮ್ಮ ಶಬ್ದಕೋಶ ವಿಸ್ತರಿಸುತ್ತದೆ. ಅಲ್ಲದೇ ಚಿಂತನಾಶೀಲತೆ ಮತ್ತು ಕಲ್ಪನಾಶಕ್ತಿ ಹೆಚ್ಚಾಗುತ್ತದೆ.

ADVERTISEMENT

ಪ್ರತಿದಿನ ಕನಿಷ್ಠ 60 ನಿಮಿಷಗಳ ಕಾಲ ಓದುವ ಅಭ್ಯಾಸ ಮಾಡಿಕೊಳ್ಳುವುದು ಅತ್ಯಗತ್ಯ. ಓದುವಾಗ ಮಿದುಳಿನ ವಿವಿಧ ಭಾಗಗಳು ಸಕ್ರಿಯವಾಗುವುದರ ಜೊತೆಗೆ ನರಕೋಶಗಳ ನಡುವೆ ಹೊಸ ಸಂಪರ್ಕ ರೂಪುಗೊಳ್ಳುತ್ತವೆ.

ಧ್ಯಾನ ಮತ್ತು ಯೋಗ

ಧ್ಯಾನ ಮಾಡುವುದು ಮಿದುಳಿನ ಆರೋಗ್ಯಕ್ಕೆ ಮುಖ್ಯವಾಗಿವೆ. ಪ್ರತಿದಿನ 10 ರಿಂದ 15 ನಿಮಿಷಗಳ ಧ್ಯಾನ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಜೊತೆಗೆ ಒತ್ತಡವನ್ನು ಕಡಿಮೆ ಮಾಡಿ, ಮಾನಸಿಕ ಸ್ಪಷ್ಟತೆಯನ್ನು ತರುತ್ತದೆ. ಶಾಂತವಾದ ಸ್ಥಳದಲ್ಲಿ ಕುಳಿತು, ಕಣ್ಣು ಮುಚ್ಚಿ, ಉಸಿರಾಟದ ಮೇಲೆ ಗಮನವನ್ನು ಕೇಂದ್ರೀಕರಿಸುವ ಸರಳ ತಂತ್ರದಿಂದಲೇ ಪ್ರಾರಂಭಿಸಬಹುದು. ನಿಯಮಿತ ಧ್ಯಾನವು ಮಿದುಳಿನ ರಚನೆಯಲ್ಲಿ ಧನಾತ್ಮಕ ಬದಲಾವಣೆಗಳನ್ನು ತರುತ್ತದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ.

ಹೊಸ ಕೌಶಲ್ಯಗಳನ್ನು ಕಲಿಯುವುದು

ಹೊಸದನ್ನು ಕಲಿಯುವುದು ಮಿದುಳನ್ನು ಸಕ್ರಿಯವಾಗಿರಿಸುವ ಅತ್ಯುತ್ತಮ ಮಾರ್ಗವಾಗಿದೆ. ಹೊಸ ಭಾಷೆಯನ್ನು ಕಲಿಯುವುದು, ಸಂಗೀತ ವಾದ್ಯವನ್ನು ನುಡಿಸುವುದು, ಚಿತ್ರಕಲೆ, ನೃತ್ಯ ಅಥವಾ ಯಾವುದೇ ಹೊಸ ಹವ್ಯಾಸವನ್ನು ಪ್ರಾರಂಭಿಸುವುದರಿಂದ ಮಿದುಳಿನಲ್ಲಿ ಹೊಸ ನರಮಾರ್ಗಗಳನ್ನು ರಚಿಸುತ್ತದೆ. ಇದು ಮಿದುಳಿನ ಪ್ಲಾಸ್ಟಿಸಿಟಿಯನ್ನು ಹೆಚ್ಚಿಸುವುದರೊಂದಿಗೆ ಮಾನಸಿಕ ಕುಸಿತವನ್ನು ತಡೆಯಲು ಸಹಾಯ ಮಾಡುತ್ತದೆ.

ದೈಹಿಕ ವ್ಯಾಯಾಮ

ದೈಹಿಕ ಚಟುವಟಿಕೆಯು ಮಿದುಳಿಗೆ ಆಮ್ಲಜನಕ ಮತ್ತು ಪೋಷಕಾಂಶಗಳ ಹರಿವನ್ನು ಹೆಚ್ಚಿಸುತ್ತದೆ. ಪ್ರತಿದಿನ 30 ನಿಮಿಷಗಳ ಸರಳ ನಡಿಗೆ, ಯೋಗ, ಈಜು ಅಥವಾ ಯಾವುದೇ ರೀತಿಯ ವ್ಯಾಯಾಮವು ಮಿದುಳಿನ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ. ವ್ಯಾಯಾಮವು ಹೊಸ ನರಕೋಶಗಳ ಬೆಳೆವಣಿಗೆಗೆ ಸಹಾಯ ಮಾಡುತ್ತದೆ. 

ಆರೋಗ್ಯಕರ ಆಹಾರ ಮತ್ತು ನಿದ್ದೆ

ಮಿದುಳಿನ ಆರೋಗ್ಯಕ್ಕೆ ಸರಿಯಾದ ಪೋಷಣೆ ಅತ್ಯಗತ್ಯ. ಹಣ್ಣು, ತರಕಾರಿ, ಒಣಹಣ್ಣು, ಮೀನು ಮತ್ತು ಧಾನ್ಯಗಳನ್ನು ಸೇವಿಸುವುದರಿಂದ ಮಿದುಳಿಗೆ ಅಗತ್ಯವಾದ ಪೋಷಕಾಂಶಗಳು ಸಿಗುತ್ತವೆ. ವಿಶೇಷವಾಗಿ ಒಮೆಗಾ-3 ಕೊಬ್ಬಿನಾಮ್ಲ, ವಿಟಮಿನ್ ಬಿ ಮತ್ತು ಉತ್ಕರ್ಷಣ ನಿರೋಧಕಗಳು ಮಿದುಳಿನ ಕಾರ್ಯಕ್ಷಮತೆಗೆ ಅತ್ಯಗತ್ಯವಾಗಿವೆ. ದಿನಕ್ಕೆ 7 ರಿಂದ 8 ಗಂಟೆಗಳ ಗುಣಮಟ್ಟದ ನಿದ್ದೆ ಮಾಡುವುದರಿಂದ ಮಿದುಳು ಮಾಹಿತಿಯನ್ನು ಸಂಗ್ರಹಿಸಲು ಮತ್ತು ತನ್ನನ್ನು ತಾನು ದುರಸ್ತಿ ಮಾಡಿಕೊಳ್ಳಲು ಅವಕಾಶ ಸಿಗುತ್ತದೆ.

ಸಾಮಾಜಿಕ ಸಂವಾದ

ಇತರರೊಂದಿಗೆ ಸಂವಾದ ನಡೆಸುವುದು ಮಿದುಳಿನ ಆರೋಗ್ಯಕ್ಕೆ ಅತ್ಯಗತ್ಯ. ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಸಮಯ ಕಳೆಯುವುದು, ಚರ್ಚೆಗಳಲ್ಲಿ ತೊಡಗುವುದು ಮತ್ತು ಸಮುದಾಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಮಾನಸಿಕ ಚುರುಕುತನವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. 

ಈ ಅಭ್ಯಾಸಗಳನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ನಾವು ಮಿದುಳನ್ನು ಚುರುಕು ಮತ್ತು ಆರೋಗ್ಯಕರವಾಗಿಡಬಹುದಾಗಿದೆ.

ಲೇಖಕರು: ಡಾ. ಲೋಕೇಶ್ ಬಿ, ಕನ್ಸಲ್ಟಂಟ್, ನ್ಯೂರಾಲಜಿ, ಅಸ್ಟರ್ CMI ಆಸ್ಪತ್ರೆಗೆ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.