ADVERTISEMENT

ಗರ್ಭಕಂಠದ ಕ್ಯಾನ್ಸರ್‌ ತಡೆ ಸಪ್ತಾಹ: ಮುಂಚಿತ ತಪಾಸಣೆಯೇ ಮೊದಲ ಹೆಜ್ಜೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 5:07 IST
Last Updated 22 ಜನವರಿ 2026, 5:07 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಗೆಟ್ಟಿ ಚಿತ್ರ

ಭಾರತದಲ್ಲಿ ಮಹಿಳೆಯರು ಎದುರಿಸುತ್ತಿರುವ ಗಂಭೀರ ಆರೋಗ್ಯ ಸಮಸ್ಯೆಗಳಲ್ಲಿ ಗರ್ಭಕಂಠದ ಕ್ಯಾನ್ಸರ್‌ ಕೂಡ ಒಂದು. ಆದರೆ ಸರಿಯಾದ ಕ್ರಮ ಕೈಗೊಂಡರೆ ಈ ಮಾರಣಾಂತಿಕ ಕಾಯಿಲೆಯನ್ನು ಗೆಲ್ಲಬಹುದು ಎನ್ನುತ್ತಾರೆ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಯ ಡಾ. ರೋಹಿತ್ ರಘುನಾಥ್ ರಾನಡೆ.

ADVERTISEMENT

ಚಿಕ್ಕಮಕ್ಕಳಿಗೆ ಲಸಿಕೆ ಹಾಕಿಸುವುದು ಮತ್ತು ಪ್ರತಿಯೊಬ್ಬ ಮಹಿಳೆ ಪ್ರತಿ ಐದು ವರ್ಷಕ್ಕೊಮ್ಮೆಯಾದರೂ ತಪಾಸಣೆಗೆ ಒಳಗಾಗುವುದರಿಂದ ಗರ್ಭಕಂಠದ ಕ್ಯಾನ್ಸರ್‌ನಿಂದ ದೂರವಿರಬಹುದು. ಬಹುಮುಖ್ಯವಾಗಿ ಹ್ಯೂಮನ್ ಪ್ಯಾಪಿಲೋಮ ವೈರಸ್ (HPV)  ಬಗ್ಗೆ ಇರುವ ಅನುಮಾನವನ್ನು ನಿವಾರಿಸಬೇಕಿದೆ.

ಪ್ರತಿ ವರ್ಷ ಜನವರಿ 19 ರಿಂದ 25ರವರೆಗೆ 'ಗರ್ಭಕಂಠ ಕ್ಯಾನ್ಸರ್ ತಡೆಗಟ್ಟುವಿಕೆ ಸಪ್ತಾಹ'ಆಚರಿಸಲಾಗುತ್ತದೆ. ಈ ವರ್ಷದ ಕಾಯಿಲೆಯಿಂದ ಗುಣಮುಖರಾದವರು ತಮ್ಮ ಜೀವನದ ಪಯಣವನ್ನು ಹಂಚಿಕೊಂಡು ಸಮಾಜದಲ್ಲಿನ ಆತಂಕ ನಿವಾರಣೆ ಮಾಡುವತ್ತೆ ಹಜ್ಜೆ ಇಟ್ಟಿದ್ದಾರೆ ವೈದ್ಯರು.ಪ್ರಾಥಮಿಕ ತಡೆಗಟ್ಟುವಿಕೆ (ಲಸಿಕೆ), ದ್ವಿತೀಯ ಹಂತದ ತಡೆಗಟ್ಟುವಿಕೆ (ತಪಾಸಣೆ) ಮತ್ತು ಸಾರ್ವತ್ರಿಕ ಲಭ್ಯತೆ ಎಂಬ ಮೂರು ಅಂಶಗಳ ಕಡೆಗೆ ಗಮನ ಹರಿಸಲಾಗಿದೆ.

ಎಚ್‌ಪಿವಿ ಬಗ್ಗೆ ತಿಳಿಯೋಣ

ಗರ್ಭಕಂಠ ಕ್ಯಾನ್ಸರ್ ಹ್ಯೂಮನ್ ಪ್ಯಾಪಿಲೋಮ ವೈರಸ್‌ನಿಂದ ಉಂಟಾಗುತ್ತದೆ. ಎಚ್‌ಪಿವಿಯ 150ಕ್ಕೂ ಹೆಚ್ಚು ತಳಿಗಳಲ್ಲಿ, ಅಧಿಕ-ಅಪಾಯಕಾರಿ ಗುಂಪಿಗೆ ಸೇರಿದ ಎಚ್‌ಪಿವಿ 16 ಮತ್ತು 18 ಎಂಬ ತಳಿಗಳು ಜಾಗತಿಕವಾಗಿ ಶೇ 70ರಷ್ಟು ಪ್ರಕರಣಗಳಿಗೆ ಕಾರಣವಾಗಿವೆ. ಈ ವೈರಸ್‌ಗಳು ಗರ್ಭಕಂಠದ ಜೀವಕೋಶಗಳನ್ನು ಪ್ರವೇಶಿಸಿ, ಹಲವು ವರ್ಷಗಳ ಅವಧಿಯಲ್ಲಿ ಅವುಗಳ ಡಿಎನ್‌ಎ ಅನ್ನು ಮರು ರೂಪಿಸುತ್ತವೆ. ಇದು ಜೀವಕೋಶಗಳು ಅನಿಯಂತ್ರಿತವಾಗಿ ಬೆಳೆಯುವಂತೆ ಮಾಡುತ್ತದೆ ಮತ್ತು ಕ್ಯಾನ್ಸರ್ ಪೂರ್ವ ಹಂತದ (ಅಸಹಜ ಜೀವಕೋಶಗಳು) ಗಡ್ಡೆಗಳನ್ನು ರೂಪಿಸುತ್ತವೆ.

ವೈರಸ್ ಹೊರತುಪಡಿಸಿ, ಇತರ ಅಂಶಗಳು ಕೂಡ ಈ ಪ್ರಕ್ರಿಯೆಯನ್ನು ವೇಗಗೊಳಿಸಬಹುದು. ತಂಬಾಕಿನ ಮೂಲಕ ಒಳಗೆಳೆದುಕೊಳ್ಳುವ ರಾಸಾಯನಿಕಗಳು ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತವೆ. ಇದರಿಂದ ದೇಹವು ಎಚ್‌ಪಿವಿ ವೈರಸ್ ಅನ್ನು ಹೊರಹಾಕಲು ಸಾಧ್ಯವಾಗುವುದಿಲ್ಲ. ಇದು ನೇರವಾಗಿ ಗರ್ಭಕಂಠದ ಡಿಎನ್‌ಎಗೆ ಹಾನಿ ಮಾಡಬಹುದು. ಇದರ ಜೊತೆಗೆ ಹೆಚ್‌ಐವಿಯಂತಹ ಸಮಸ್ಯೆಗಳು ರೋಗನಿರೋಧಕ ಶಕ್ತಿಯನ್ನು ಕುಂಠಿತಗೊಳಿಸಬಹುದು. ಇದರಿಂದ ದೇಹವು ಎಚ್‌ಪಿವಿ ಸೋಂಕನ್ನು ಸ್ವಾಭಾವಿಕವಾಗಿ ಗುಣಪಡಿಸಿಕೊಳ್ಳುವುದು ಕಷ್ಟವಾಗುತ್ತದೆ ಮತ್ತು ಅದು ಕ್ಯಾನ್ಸರ್ ಆಗಿ ಪರಿವರ್ತನೆಗೊಳ್ಳುತ್ತದೆ.

ರಕ್ಷಣೆಯ ಮೊದಲ ಹೆಜ್ಜೆ: ಲಸಿಕೆ

ಗರ್ಭಕಂಠದ ಕ್ಯಾನ್ಸರ್‌ ತಡೆಗೆ ಪರಿಣಾಮಕಾರಿ ಮಾರ್ಗವೆಂದರೆ, ವೈರಸ್ ದೇಹವನ್ನು ಪ್ರವೇಶಿಸದಂತೆ ಮೊದಲೇ ತಡೆಯುವುದು. ಈ ವರ್ಷ ಆರಂಭಿಕ ಹಂತದ ಚಿಕಿತ್ಸೆಯಲ್ಲಿ ‘ಒಂದು ಡೋಸ್ ಕ್ರಾಂತಿ’ ಎಂಬ ಪರಿಕಲ್ಪನೆ ಜಾರಿಗೆ ತರಲಾಗಿದೆ. 9 ರಿಂದ 14 ವರ್ಷದೊಳಗಿನ ಮಕ್ಕಳಿಗೆ, ಎಚ್‌ಪಿವಿ ಲಸಿಕೆಯ ಒಂದು ಡೋಸ್ ನೀಡಿದರೂ ಅದು ಸಾಂಪ್ರದಾಯಿಕ ಎರಡು ಡೋಸ್‌ಗಳ ಸರಣಿಯಷ್ಟೇ ಉತ್ತಮ ರಕ್ಷಣೆಯನ್ನು ನೀಡುತ್ತದೆ.

ಲಸಿಕೆ ವೈರಸ್‌ಗೆ ಆಶ್ರಯ ನೀಡುವ ಮತ್ತು ಹರಡುವ ವಾಹಕಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ. ಮಕ್ಕಳು ಮೊದಲ ಬಾರಿಗೆ ಈ ವೈರಸ್‌ಗೆ ಒಡ್ಡಿಕೊಳ್ಳುವ ಮೊದಲೇ ಅವರಿಗೆ ರಕ್ಷಣೆ ನೀಡುವ ಮೂಲಕ ದಶಕಗಳ ನಂತರ ಬರಬಹುದಾದ ಕ್ಯಾನ್ಸರ್‌ನಿಂದ ಕಾಪಾಡಬಹುದು.

ಭಾರತವು ಗರ್ಭಕಂಠ ಕ್ಯಾನ್ಸರ್ ತಡೆಗಟ್ಟುವಿಕೆಗಾಗಿ ತನ್ನದೇ ಆದ ಸ್ವದೇಶಿ ಲಸಿಕೆಯನ್ನು ಅಭಿವೃದ್ಧಿಪಡಿಸುವ ಮೂಲಕ ಮಹಿಳಾ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದೆ. ಈ ಸ್ವದೇಶಿ ಎಚ್‌ಪಿವಿ ಲಸಿಕೆಯು ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿದೆ. ಅಲ್ಲದೇ ಕೈಗೆಟುಕುವ ದರದಲ್ಲಿ ಲಭ್ಯವಿದೆ.

ಪ್ರಾಥಮಿಕ ಎಚ್‌ಪಿವಿ ತಪಾಸಣೆ

ಆರಂಭಿಕ ಲಸಿಕೆ ಪಡೆಯುವ ವಯಸ್ಸು ಮೀರಿದವರು ತಪಾಸಣೆ ಮಾಡಿಸಿಕೊಳ್ಳಬೇಕು.ಸ್ಮಿಯರ್ ಟೆಸ್ಟ್ ಮೂಲಕ ಸೂಕ್ಷ್ಮದರ್ಶಕದ ಅಡಿಯಲ್ಲಿ ಜೀವಕೋಶಗಳನ್ನು ಪರೀಕ್ಷಿಸುವ ಬದಲಾಗಿ (ಸೈಟೋಲಜಿ), ನೇರವಾಗಿ ವೈರಸ್‌ ಪತ್ತೆಹಚ್ಚಲಾಗುತ್ತದೆ.

  • ಐದು ವರ್ಷಗಳ ನಿಯಮ: 25 ರಿಂದ 65 ವರ್ಷ ವಯಸ್ಸಿನ ಸರಾಸರಿ ಅಪಾಯದ ಸಾಧ್ಯತೆ ಇರುವ ವ್ಯಕ್ತಿಗಳಲ್ಲಿ ಎಚ್‌ಪಿವಿ ಪರೀಕ್ಷೆಯ ವರದಿ ನೆಗೆಟಿವ್ ಬಂದರೆ, ನೀವು ಕೇವಲ ಐದು ವರ್ಷಗಳಿಗೊಮ್ಮೆ ತಪಾಸಣೆ ಮಾಡಿಸಿಕೊಂಡರೆ ಸಾಕು. ಎಚ್‌ಪಿವಿ ವೈರಸ್ ಕ್ಯಾನ್ಸರ್ ಆಗಿ ಬದಲಾಗಲು ಒಂದು ದಶಕ ಅಥವಾ ಅದಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ ಮತ್ತು ಎಚ್‌ಪಿವಿ ಪರೀಕ್ಷೆಯು ಹಳೆಯ 'ಪ್ಯಾಪ್ ಸ್ಮಿಯರ್' ಪರೀಕ್ಷೆಗಿಂತ ಹೆಚ್ಚು ನಿಖರವಾಗಿರುವುದರಿಂದ ಐದು ವರ್ಷಕ್ಕೊಮ್ಮೆ ತಪಾಸಣೆ ಮಾಡಿಸಿಕೊಳ್ಳುವುದು ಸುರಕ್ಷಿತ ಕ್ರಮವಾಗಿದೆ.

  • ಸ್ವಯಂ ಸಂಗ್ರಹಣಾ ಕಿಟ್‌ಗಳು: 2026ರ ಅತ್ಯಂತ ದೊಡ್ಡ ಪ್ರಗತಿಯೆಂದರೆ ಎಫ್‌ಡಿಎ ಅನುಮೋದಿತ ‘ಸ್ವಯಂ-ಮಾದರಿ ಸಂಗ್ರಹಣಾ’ ಕಿಟ್‌ಗಳು ವ್ಯಾಪಕವಾಗಿ ಲಭ್ಯವಿರುವುದು. ಮಹಿಳೆಯರು ಕಿಟ್‌ನಲ್ಲಿರುವ ಸರಳವಾದ ‘ಸ್ವಾಬ್’ ಅನ್ನು ಬಳಸಿ ತಮ್ಮ ಮನೆಯಲ್ಲೇ ಅಥವಾ ಕ್ಲಿನಿಕ್‌ನ ಖಾಸಗಿ ಶೌಚಾಲಯದಲ್ಲಿ ಸ್ವತಃ ಮಾದರಿಯನ್ನು ಸಂಗ್ರಹಿಸಬಹುದು. ಈ ಕ್ರಮದಿಂದ ಆರಂಭಿಕ ತಪಾಸಣೆ ಹಂತದಲ್ಲಿ ವೈದ್ಯರಿಂದ ಮಾಡಿಸಿಕೊಳ್ಳಬೇಕಾದ 'ಸ್ಪೆಕ್ಯುಲಮ್' ಪರೀಕ್ಷೆಯ ಅನಿವಾರ್ಯತೆಯನ್ನು ದೂರ ಮಾಡುತ್ತದೆ.

  • ದೇಹದ ಮಾತನ್ನು ಕೇಳಿ: ಆರಂಭಿಕ ಹಂತದಲ್ಲಿ ಗರ್ಭಕಂಠ ಕ್ಯಾನ್ಸರ್ ಸಾಮಾನ್ಯವಾಗಿ ಯಾವುದೇ ಲಕ್ಷಣಗಳನ್ನು ತೋರಿಸುವುದಿಲ್ಲ. ಈ ಹಂತವನ್ನು 'ಮೌನ ಹಂತ' (ಸೈಲೆಂಟ್ ಸ್ಟೇಜ್) ಎನ್ನಲಾಗುತ್ತದೆ. ಹಾಗಾಗಿ ನೀವು ಎಷ್ಟೇ ಆರೋಗ್ಯವಂತರಾಗಿ ಕಂಡರೂ ನಿಯಮಿತ ತಪಾಸಣೆಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು. ಆದರೆ, ದಿನ ಕಳೆದಂತೆ ಜೀವಕೋಶಗಳ ಬದಲಾವಣೆ ತೀವ್ರಗೊಂಡಂತೆ ದೇಹವು ಕೆಲವು ಸೂಚನೆಗಳನ್ನು ನೀಡಲು ಪ್ರಾರಂಭಿಸುತ್ತದೆ.

ಅದರ ಲಕ್ಷಣಗಳು ಹೀಗಿರುತ್ತವೆ

ಅಸಹಜ ರಕ್ತಸ್ರಾವ: ಋತುಚಕ್ರಕ್ಕೂ ಮುನ್ನ ಕಾಣಿಸಿಕೊಳ್ಳುವ ರಕ್ತ ಸ್ರಾಚ, ಋತುಬಂಧದ ನಂತರದ ರಕ್ತಸ್ರಾವ ಅಥವಾ ಲೈಂಗಿಕ ಸಂಪರ್ಕದ ನಂತರದ ರಕ್ತಸ್ರಾವವೂ ಗರ್ಭಕಂಠದ ಕ್ಯಾನ್ಸರ್‌ನ ಲಕ್ಷಣವಾಗಿದೆ.

ಪೆಲ್ವಿಕ್ ನೋವು: ಮುಟ್ಟಿನ ದಿನಗಳ ಹೊರತಾಗಿ, ಪೆಲ್ವಿಕ್ ಅಥವಾ ಬೆನ್ನಿನ ಕೆಳಭಾಗದಲ್ಲಿ ನಿರಂತರವಾಗಿ ನೋವು ಕಾಣಿಸಿಕೊಳ್ಳುವುದು.

ಯೋನಿ ಸ್ರಾವದಲ್ಲಿ ಬದಲಾವಣೆ: ನೀರಿನಂತಹ, ರಕ್ತ ಮಿಶ್ರಿತ ಅಥವಾ ದುರ್ವಾಸನೆಯಿಂದ ಕೂಡಿದ ಸ್ರಾವ.

ಜಾಗತಿಕ ಗುರಿ: 90-70-90

ವಿಶ್ವ ಆರೋಗ್ಯ ಸಂಸ್ಥೆಯು 2030ರ ವೇಳೆಗೆ ಸಾಧಿಸಬೇಕಾದ ಮಾರ್ಗಸೂಚಿಯನ್ನು ನೀಡಿದ್ದು, ಇದರಲ್ಲಿ ಶೇ 90ರಷ್ಟು ಬಾಲಕಿಯರಿಗೆ ಲಸಿಕೆ ನೀಡುವುದು ಹಾಗೂ ಶೇ 70ರಷ್ಟು ಮಹಿಳೆಯರಿಗೆ ಅವರ ಜೀವಿತಾವಧಿಯಲ್ಲಿ ಎರಡು ಬಾರಿ (35 ಮತ್ತು 45ನೇ ವಯಸ್ಸಿನಲ್ಲಿ) ತಪಾಸಣೆ ಮಾಡುವುದಾಗಿದೆ. ಕ್ಯಾನ್ಸರ್ ಪೂರ್ವ ಹಂತ ಅಥವಾ ಕ್ಯಾನ್ಸರ್ ಪತ್ತೆಯಾದ ಶೇ 90ರಷ್ಟು ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವುದು ಸೇರಿದೆ.

ಲೇಖಕರು: ಡಾ. ರೋಹಿತ್ ರಘುನಾಥ್ ರಾನಡೆ, ಸೀನಿಯರ್ ಕನ್ಸಲ್ಟೆಂಟ್, ಗೈನಕಾಲಜಿಕ್ ಆಂಕಾಲಜಿ, ನಾರಾಯಣ ಹೆಲ್ತ್ ಸಿಟಿ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.