ADVERTISEMENT

ಪ್ರಾಸ್ಟೇಟ್ ಕ್ಯಾನ್ಸರ್; ಭಯ ಬೇಡ, ಇರಲಿ ಎಚ್ಚರ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2025, 10:23 IST
Last Updated 15 ಡಿಸೆಂಬರ್ 2025, 10:23 IST
<div class="paragraphs"><p>ಗೆಟ್ಟಿ: ಚಿತ್ರ</p></div>
   

ಗೆಟ್ಟಿ: ಚಿತ್ರ

ವಿಶ್ವದಾದ್ಯಂತ 50 ವರ್ಷ ಮೇಲ್ಪಟ್ಟ ಪುರುಷರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಎಂಬುದು ಅತ್ಯಂತ ಸಾಮಾನ್ಯವಾದ ಕಾಯಿಲೆಯಾಗಿದೆ. ಆದರೂ ಈ ಕಾಯಿಲೆಯ ಕುರಿತು ತಪ್ಪು ಗ್ರಹಿಕೆ, ಅನಗತ್ಯ ಭಯ, ರೋಗ ನಿರ್ಣಯಕ್ಕೆ ವಿಳಂಬ ಹಾಗೂ ಸರಿಯಾದ ಚಿಕಿತ್ಸೆ ಪಡೆಯದಿರುವುದನ್ನು ಕಾಣಬಹುದು. 

ಪ್ರಾಸ್ಟೇಟ್ ಕ್ಯಾನ್ಸರ್ ವಯಸ್ಕ ಪುರುಷರ ಮೇಲಿನ ಪರಿಣಾಮ

ADVERTISEMENT

ಪ್ರಾಸ್ಟೇಟ್ ಕ್ಯಾನ್ಸರ್ ವಯಸ್ಸಾದವರಲ್ಲಿ ಹೆಚ್ಚಾಗಿ ಕಂಡು ಬರುತ್ತದೆಯಾದರೂ, ಇದು ವಯಸ್ಸಾದವರಿಗೆ ಮಾತ್ರ ಸೀಮಿತವಾಗಿಲ್ಲ. ಹೆಚ್ಚಿನ ಪ್ರಕರಣಗಳು 50 ವರ್ಷಕ್ಕಿಂತ ಮೇಲ್ಪಟ್ಟ ಪುರುಷರಲ್ಲಿ ಕಂಡುಬರುತ್ತವೆ. ಭಾರತದಲ್ಲಿ 40 ಅಥವಾ ಕೆಲವೊಮ್ಮೆ 30ರ ವಯಸ್ಸಿನಲ್ಲಿಯೂ ಈ ಕ್ಯಾನ್ಸರ್‌ ಕಾಣಿಸಿಕೊಂಡ ಉದಾಹರಣೆಗಳಿವೆ.  

ಬೊಜ್ಜು, ಜಡ ಜೀವನಶೈಲಿ ಮತ್ತು ಪಾಶ್ಚಾತ್ಯೀಕರಣದ ಆಹಾರ ಕ್ರಮದಂತಹ ಅನುವಂಶಿಕಗಳು ಈ ರೋಗಕ್ಕೆ ಕಾರಣಗಳಾಗಿವೆ. ಪ್ರಾಸ್ಟೇಟ್ ಅಥವಾ ಕ್ಯಾನ್ಸರ್‌ ಇರುವ ಕುಟುಂಬದ ಪುರುಷರು 40 ರಿಂದ 45 ವರ್ಷ ವಯಸ್ಸಿನಲ್ಲಿಯೇ ಇದರ ತಪಾಸಣೆ ಮಾಡಿಸಲು ವೈದ್ಯರು ಶಿಫಾರಸ್ಸು ಮಾಡುತ್ತಾರೆ. 

ಮೂತ್ರದಲ್ಲಿ ಮಾತ್ರ ಪ್ರಾಸ್ಟೇಟ್ ಕ್ಯಾನ್ಸರ್

ಆಗಾಗ್ಗೆ ಮೂತ್ರ ವಿಸರ್ಜನೆಯು ಮಾಡುವುದು. ರಾತ್ರಿಯಲ್ಲಿ ಹಲವಾರು ಬಾರಿ ಮೂತ್ರಕ್ಕೆ ಹೋಗುವುದು ಪ್ರಾಸ್ಟೇಟ್ ಕ್ಯಾನ್ಸರ್ ಲಕ್ಷಣಗಳು ಎಂಬ ತಪ್ಪು ಕಲ್ಪನೆ ಅನೇಕರಲ್ಲಿದೆ. ಆದರೆ, ಈ ಲಕ್ಷಣಗಳು ಹೆಚ್ಚಾಗಿ ಪ್ರಾಸ್ಟೇಟ್‌ ಗ್ರಂಥಿಯ ಹಿಗ್ಗುವಿಕೆಯಿಂದ ಉಂಟಾಗುತ್ತದೆ. ಇದು ವಯಸ್ಸಾದಂತೆ ಅತ್ಯಂತ ಸಾಮಾನ್ಯ. ಆರಂಭಿಕ ಹಂತಗಳಲ್ಲಿ, ಪ್ರಾಸ್ಟೇಟ್ ಕ್ಯಾನ್ಸರ್ ಸಾಮಾನ್ಯವಾಗಿ ಯಾವುದೇ ಲಕ್ಷಣಗಳನ್ನು ತೋರಿಸುವುದಿಲ್ಲ. ಅದಕ್ಕಾಗಿಯೇ ನೀವು ಆರೋಗ್ಯವಾಗಿದ್ದರೂ ಸಹ ನಿಯಮಿತ ತಪಾಸಣೆ ಅತ್ಯಗತ್ಯವಾಗಿದೆ.  ಪ್ರಾಸ್ಟೇಟ್ ಕ್ಯಾನ್ಸರ್‌ನ ಕೊನೆಯ ಹಂತಗಳಲ್ಲಿ ಮೂತ್ರದಲ್ಲಿ ರಕ್ತ, ಮೂಳೆ ನೋವು ಅಥವಾ ನಂಬಲಾಗದಷ್ಟು ತೂಕ ನಷ್ಟ ಲಕ್ಷಣ ಕಂಡುಬರುತ್ತವೆ. 

ಹೆಚ್ಚಿನ ಪಿಎಸ್‌ಎ ಮಟ್ಟ

ಅಧಿಕ ಮಟ್ಟದ ಪಿಎಸ್‌ಎ ಕ್ಯಾನ್ಸರ್‌ನ ಸೂಚಕಗಳಲ್ಲ, ಸೋಂಕು (ಪ್ರಾಸ್ಟೇಟ್ ಉರಿಯೂತ), ಮೂತ್ರ ಶೇಖರಣೆ, ಇತ್ತೀಚಿನ ಸ್ಖಲನ ಮತ್ತು ಭಾರೀ ವ್ಯಾಯಾಮದಂತಹ ಅನೇಕ ಕಾರಣಗಳಿಂದ ಪಿಎಸ್‌ಎ ಮಟ್ಟ ಅಧಿಕವಾಗಬಹುದು. ಮತ್ತೊಂದೆಡೆ, ಪ್ರಾಸ್ಟೇಟ್ ಕ್ಯಾನ್ಸರ್ ಇರುವ ಕೆಲವು ಪುರುಷರಲ್ಲಿ ಪಿಎಸ್‌ಎ ಸಾಮಾನ್ಯ ಮಟ್ಟದಲ್ಲಿರಬಹುದು. ಪಿಎಸ್‌ಎ ಒಂದು ತಪಾಸಣೆಯ ಪರೀಕ್ಷೆಯಾಗಿದೆ ಹೊರತು, ರೋಗನಿರ್ಣಯವಲ್ಲ.
ಪಿಎಸ್‌ಎ ಅಧಿಕವಾಗಿದ್ದಾಗ, ಕ್ಯಾನ್ಸರ್ ದೃಢೀಕರಣಕ್ಕಾಗಿ ಎಂಆರ್‌ಐ ಅಥವಾ ಪ್ರಾಸ್ಟೇಟ್ ಬಯಾಪ್ಸಿಯಂತಹ ಹೆಚ್ಚಿನ ಪರೀಕ್ಷೆ ಅಗತ್ಯವಿರುತ್ತದೆ.

ಪ್ರಾಸ್ಟೇಟ್ ಕ್ಯಾನ್ಸರ್ ನಿಧಾನವಾಗಿ ಹರಡುತ್ತದೆ ಮತ್ತು ತಕ್ಷಣದ ಚಿಕಿತ್ಸೆಯ ಅಗತ್ಯವಿಲ್ಲವೆ?

ಅನೇಕರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್‌ಗಳು ನಿಧಾನವಾಗಿ ಅಭಿವೃದ್ಧಿಗೊಂಡರೂ, ಕೆಲವು ಪ್ರಕರಣಗಳಲ್ಲಿ ಜೀವಕ್ಕೆ ಅಪಾಯಕಾರಿಯಾಗಬಹುದು. ಹೆಚ್ಚು ಅಪಾಯವಿಲ್ಲದ ಪ್ರಾಸ್ಟೇಟ್ ಕ್ಯಾನ್ಸರ್‌ಗಳನ್ನು ಸಾಮಾನ್ಯವಾಗಿ ಸಕ್ರಿಯ ತಪಾಸಣೆಯಿಂದ ಗುಣಪಡಿಸಬಹುದು ಎಂಬುದು ನಿಜ. ಆದರೆ ವಿಶೇಷವಾಗಿ ಕೊಮೊರ್ಬಿಡಿಟಿಗಳನ್ನು ಹೊಂದಿರುವ ವಯಸ್ಸಾದ ಪುರುಷರಲ್ಲಿ ಈ ಸಮಸ್ಯೆಗೆ ಚಿಕಿತ್ಸೆ ನೀಡದಿದ್ದರೆ, ಇದರ ಗೆಡ್ಡೆಗಳು ಮೂಳೆಗಳು ಮತ್ತು ದುಗ್ಧರಸ ಗ್ರಂಥಿಗಳಿಗೆ ಬೇಗನೆ ಹರಡಬಹುದು.

ಗ್ಲೀಸನ್ ಸ್ಕೋರ್, ಪಿಎಸ್ಎ ಮಟ್ಟ, ಎಂಆರ್‌ಐ ವರದಿಗಳು ಮತ್ತು ರೋಗನಿರ್ಣಯದ ಹಂತವನ್ನು ಆಧರಿಸಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ರೋಗವನ್ನು ಆರಂಭಿಕವಾಗಿ ಪತ್ತೆಹಚ್ಚುವಿಕೆಯಿಂದನ ಇಡಿದು, ರೊಬೊಟಿಕ್ ಶಸ್ತ್ರಚಿಕಿತ್ಸೆ, ರೇಡಿಯೊ ಥೆರಪಿಯವರೆಗೆ ಸೂಕ್ತವಾದ ಚಿಕಿತ್ಸೆಗಳು ಲಭ್ಯವಿವೆ. 

ಪ್ರಾಸ್ಟೇಟ್ ಕ್ಯಾನ್ಸರ್‌ಗೆ ಮಾಡುವ ಶಸ್ತ್ರಚಿಕಿತ್ಸೆ ಅಥವಾ ಬಯಾಪ್ಸಿ ರೋಗವನ್ನು ಅಭಿವೃದ್ಧಿಗೊಳಿಸುತ್ತದೆಯಾ?

ಆಧುನಿಕ ಪ್ರಾಸ್ಟೇಟ್ ಬಯಾಪ್ಸಿ, ಇಮೇಜಿಂಗ್ ಮೂಲಕ ಮಾರ್ಗದರ್ಶನ ನೀಡುವ ಸುರಕ್ಷಿತ ಮತ್ತು ನಿಖರವಾದ ವಿಧಾನವಾಗಿದೆ. ಟ್ರಾನ್ಸ್‌ಪೆರಿನಿಯಲ್ ಮಾರ್ಗ, ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ. ಕ್ಯಾನ್ಸರ್ ಕೋಶಗಳು ಹರಡುವಿಕೆಯನ್ನು ತಡೆಗಟ್ಟುತ್ತದೆ. ಅಂತೆಯೇ, ರೋಬೋಟಿಕ್ ಮತ್ತು ಲ್ಯಾಪರೊಸ್ಕೋಪಿಕ್ ಪ್ರಾಸ್ಟೇಟ್ ಶಸ್ತ್ರಚಿಕಿತ್ಸೆಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ. ಆದ್ದರಿಂದ ರೋಗವನ್ನು ಮೊದಲೇ ಪತ್ತೆ ಮಾಡಿದಾಗ ಕಾಯಿಲೆಯನ್ನು ಪೂರ್ಣವಾಗಿ ಗುಣಪಡಿಸುತ್ತವೆ.

ಪ್ರಾಸ್ಟೇಟ್ ಕ್ಯಾನ್ಸರ್ ಚಿಕಿತ್ಸೆ ನಂತರ ದುರ್ಬಲತೆ ಅಥವಾ ಮೂತ್ರ ಸೋರಿಕೆಗೆ ಕಾರಣವಾಗುತ್ತದೆಯೇ? 

‌ಈ ರೀತಿ ತಪ್ಪು ಕಲ್ಪನೆ ಹಲವರಲ್ಲಿದೆ. ನರ್ವ್‌-ಸ್ಪೇರಿಂಗ್ ರೋಬೋಟಿಕ್ ಶಸ್ತ್ರಚಿಕಿತ್ಸೆ, ನಿಖರ ರೇಡಿಯೊಥೆರಪಿ ಮತ್ತು ಉದ್ದೇಶಿತ ಹಾರ್ಮೋನ್ ಚಿಕಿತ್ಸೆಯಲ್ಲಿನ ಪ್ರಗತಿಗಳು ಈ ತೊಡಕುಗಳ ಅಪಾಯವನ್ನು ಬಹಳವಾಗಿ ಕಡಿಮೆ ಮಾಡಿವೆ. ನಿಮಿರುವಿಕೆಯ ಮತ್ತು ಮೂತ್ರ ಸೋರಿಕೆ ಸಾಮಾನ್ಯವಾಗಿದ್ದರೂ ತಾತ್ಕಾಲಿಕವಾಗಿರುತ್ತವೆ. ಇದು ಔಷಧಿ ಅಥವಾ ಬೆಂಬಲಿತ ಚಿಕಿತ್ಸೆಗಳೊಂದಿಗೆ ಕೆಲವೇ ತಿಂಗಳುಗಳಲ್ಲಿ ಗುಣಮುಖವಾಗುತ್ತವೆ. 

ಚಿಕಿತ್ಸೆ ಪಡೆದ ನಂತರವೂ ಪ್ರಾಸ್ಟೇಟ್ ಕ್ಯಾನ್ಸರ್‌ ಮರುಕಳಿಸುತ್ತದೆಯಾ?

ಪರಿಣಾಮಕಾರಿ ಚಿಕಿತ್ಸೆಯ ನಂತರ ಅನೇಕ ಪುರುಷರು ದೀರ್ಘ, ಕ್ಯಾನ್ಸರ್ ಮುಕ್ತ ಜೀವನವನ್ನು ನಡೆಸುತ್ತಿದ್ದಾರೆ. ಆರಂಭಿಕ ಪತ್ತೆ ಮತ್ತು ಸೂಕ್ತ ಚಿಕಿತ್ಸೆಯೊಂದಿಗೆ ಪ್ರಾಸ್ಟೇಟ್ ಕ್ಯಾನ್ಸರ್ ಇರುವವರು ಬೇರೆಲ್ಲಾ ಕ್ಯಾನ್ಸರ್‌ಗಳಿಗಿಂತ ಹೆಚ್ಚು ಬದುಕುಳಿಯುವಿಕೆಯ ಪ್ರಮಾಣವನ್ನು ಹೊಂದಿದೆ. ಶೇ 95ರಷ್ಟು ಪ್ರಾಸ್ಟೇಟ್‌ ಕ್ಯಾನ್ಸರ್‌ ರೋಗಿಗಳು ಬದುಕುಳಿಯುತ್ತಾರೆ. ಪಿಎಸ್ಎ ಪರೀಕ್ಷೆ ಮತ್ತು ಇಮೇಜಿಂಗ್‌ನೊಂದಿಗೆ ನಿಯಮಿತವಾದ ತಪಾಸಣೆ ಪ್ರಾಸ್ಟೇಟ್ ಕ್ಯಾನ್ಸರ್‌ ಅನ್ನು ಸರಿಯಾಗಿ ಪತ್ತೆಚ್ಚುತ್ತದೆ ಮತ್ತು ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಲಾಗುತ್ತದೆ. 

ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು, ನಿಯಮಿತವಾಗಿ ವ್ಯಾಯಾಮ ಮಾಡುವುದು ಮತ್ತು ಹಣ್ಣು, ತರಕಾರಿ ಮತ್ತು ಒಮೆಗಾ-3 ಕೊಬ್ಬಿನಿಂದ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದು ಪ್ರಾಸ್ಟೇಟ್‌ ಕ್ಯಾನ್ಸರ್‌ ಮರುಕಳಿಸುವಿಕೆಯ ಅಪಾಯವನ್ನು ಕಡಿಮೆ ಮಾಡುತ್ತದೆ.

50ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಪುರುಷರು ಹಾಗೂ ಕುಟುಂಬದಲ್ಲಿ ಕ್ಯಾನ್ಸರ್‌ ಇತಿಹಾಸ ಹೊಂದಿರುವವರು ಪ್ರಾಸ್ಟೇಟ್ ಆರೋಗ್ಯದ ಬಗ್ಗೆ ಮೂತ್ರಶಾಸ್ತ್ರಜ್ಞರೊಂದಿಗೆ ಸಲಹೆ ಮತ್ತು ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.

ಲೇಖಕರು: ಡಾ. ಚಂದನ್ ಎಂ. ಎನ್, ಮೂತ್ರಶಾಸ್ತ್ರಜ್ಞ, ಅಪೋಲೋ ಆಸ್ಪತ್ರೆ, ಶೇಷಾದ್ರಿಪುರಂ, ಬೆಂಗಳೂರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.